ನೀರವ್ ಮೋದಿ, ಮೆಹುಲ್ ಚೋಕ್ಸಿ, ಮಲ್ಯರ ಸಾಲ ಮನ್ನಾ ಆಗೋಯ್ತು ಎನ್ನುವ ಮುನ್ನಾ!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ನೀರವ್ ಮೋದಿ, ಮೆಹುಲ್ ಚೋಕ್ಸಿ, ಮಲ್ಯರ ಸಾಲ ಮನ್ನಾ ಆಗೋಯ್ತು ಎನ್ನುವ ಮುನ್ನಾ ...!
ನೀರವ್ ಮೋದಿ, ಮೆಹುಲ್ ಚೋಕ್ಸಿ, ಮಲ್ಯರ ಸಾಲ ಮನ್ನಾ ಆಗೋಯ್ತು ಎನ್ನುವ ಮುನ್ನಾ ...!
Updated on

ಸಾಮಾನ್ಯ ಮನುಷ್ಯನ ಪ್ರತಿ ವಹಿವಾಟನ್ನೂ ಗಮನಿಸುವ ಬ್ಯಾಂಕು, ಐಟಿ ಡಿಪಾರ್ಟ್ಮೆಂಟ್ ದೊಡ್ಡವರ ವಿಷಯದಲ್ಲಿ ಮಾತ್ರ ಜಾಣಮೌನಕ್ಕೆ ಶರಣಾಗುತ್ತೆ. ಆ ಮೂಲಕ ಪ್ರತಿ ಬಾರಿ, ಸಮಾಜದಲ್ಲಿ ಹಲವರು ಎಲ್ಲರಿಗಿಂತ ಹೆಚ್ಚಿನವರು ಎನ್ನುವ ಸಂದೇಶ ರಾಜಾರೋಷವಾಗಿ ರವಾನೆಯಾಗುತ್ತಲೇ ಇರುತ್ತದೆ. ಹೀಗಾಗಿ ಸರಕಾರ ಏನೇ ಮಾಡಿದರು ಜನ ಸಂಶಯದಿಂದ ನೋಡುವಂತಾಗಿದೆ. ಇವತ್ತಿನ ಹಣಕ್ಲಾಸು ಬರಹದಲ್ಲಿ ಮಲ್ಯ, ನೀರವ್, ಮೆಹುಲ್ ಚೋಕ್ಸಿ ಹೊರತಾಗಿ ಇರುವ ಸುಸ್ತಿದಾರರ ಲೆಕ್ಕ ಕೊಡುವ ಪ್ರಯತ್ನವಿದೆ. 

ಭಾರತ ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಸಾಲ ಉಳಿಸಿಕೊಂಡು, ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟ ಕಟ್ಟಿಕೊಂಡು, ದೇಶ ತೊರೆದು, ಇಂಗ್ಲೆಂಡ್ ನ ಲಂಡನ್ ನಗರದಲ್ಲಿ  ಅಡಗಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಈಗ ದೇಶದ ಜನರ ಮನ್ನಸ್ಸಿನಲ್ಲಿ ವಿಲನ್ ಆಗಿರುವುದು ಸುಳ್ಳಲ್ಲ. ಅಷ್ಟೇ ಅಲ್ಲದೇ ಮಲ್ಯ ದೇಶ ತೊರೆದಿರುವ ಮತ್ತು ಸಾಲದ ವಿಚಾರ ಎಲ್ಲಾ ಮಾಧ್ಯಮಗಳಲ್ಲಿ ಮತ್ತು ಸಂಸತ್ತಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ದೇಶದ ಬ್ಯಾಂಕ್ ಗಳಲ್ಲಿ ಮಲ್ಯ ಮಾತ್ರವೇ ಸಾಲ ಮಾಡಿ ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟಿಯಲ್ಲಿ ಇದ್ದಾರಾ? ಬೇರೆಯವರೂ ಇದ್ದು ಅವರನ್ನೇಕೆ ಸಾಲ ಮರುಪಾವತಿ ಮಾಡಿ ಎಂದು ಒತ್ತಡ ಹೇರುತ್ತಿಲ್ಲ? ಈ ರೀತಿಯ ಸುಸ್ತಿದಾರರ ಸಂಖ್ಯೆ ಎಷ್ಟು? ಇವರಿಂದ ಎಷ್ಟು ಸಾಲ ಮರುಪಾವತಿಯಾಗಬೇಕು? ಈ ಲೆಕ್ಕಗಳೆಲ್ಲ ಪಕ್ಕಾ ಗೊತ್ತಾಗಬೇಕಾದರೆ ಕ್ರೆಡಿಟ್ ಇನ್ಫಾರ್ಮೆಶನ್ ಬ್ಯೂರೋ (ಸಿಬಿಲ್) ಬಿಡುಗಡೆಗೊಳಿಸಿರುವ ದಾಖಲೆಗಳನ್ನು ಗಮನಿಸಬೇಕು.

ದೇಶದಲ್ಲಿ ಹತ್ತಿರಹತ್ತಿರ 9 ಸಾವಿರ ಉದ್ದೇಶಪೂರ್ವಕ ಸುಸ್ತಿದಾರರಿದ್ದು, ಆ ಪೈಕಿ 2015-16 ನೇ ಸಾಲಿನಲ್ಲಿ 1,724 ಸುಸ್ತಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮಸೂದೆಯನ್ನು ತರುವ ಬಗ್ಗೆ ಸಂಸತ್ ಜಂಟಿ ಸಮಿತಿ ಪರಿಶೀಲನೆ ನಡೆಸುತ್ತಿದೆ. ಸಾಲ ವಸೂಲಾತಿ ನ್ಯಾಯಾಧಿಕರಣ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಸಂಸತ್ ಜಂಟಿ ಸದನ ಸಮಿತಿ ಪರಿಶೀಲಿಸುತ್ತಿರುವ ವಿಧೇಯಕದ ಮೂಲಕ ನ್ಯಾಯಾಧಿಕರಣ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಇನ್ನು ಸದ್ಯ ತೆರವಾಗಿರುವ ನ್ಯಾಯಾಧಿಕರಣಗಳ ಸ್ಥಾನವನ್ನು ತುಂಬಲು ಪ್ರಕ್ರಿಯೆಗಳು ನಡೆಯುತ್ತಿವೆ.

ಉದ್ದೇಶಪೂರ್ವಕ ಸುಸ್ತಿದಾರರ ವಿಷಯದಲ್ಲಿ ದೋಷಾರೋಪ ಪಟ್ಟಿ ಪ್ರಮಾಣ ಬಹಳ ಕಡಿಮೆ ಇದೆ. ಹಣಕಾಸು ಸಚಿವರು ನೀಡಿರುವ ಮಾಹಿತಿ ಪ್ರಕಾರ 2015-16-ನೇ ಸಾಲಿನಲ್ಲಿ ಕೇವಲ ಶೇ. 1.14 ರಷ್ಟು ಮಾತ್ರ ದೋಷಾರೋಪ ಮಾಡಲಾಗಿದೆ. 

ಉದ್ದೇಶಪೂರ್ವಕ ಸುಸ್ತಿದಾರರು ಎಂದರೆ ಯಾರು? 

ಈ ಉದ್ದೇಶಪೂರ್ವಕ ಸುಸ್ತಿದಾರರು ಸಾಲ ಮರುಪಾವತಿ ಮಾಡುವ ಸಾಮರ್ಥ್ಯವಿದ್ದರೂ ಮಾಡಿಲ್ಲದೆ ಬ್ಯಾಂಕಿಗೆ ಬಾಕಿ ಉಳಿಸಿಕೊಂಡವರು. ಮೊದಲೇ ಹೇಳಿದಂತೆ ಅಂತವರ ಸಂಖ್ಯೆ 9 ಸಾವಿರದ ಗಡಿಗೆ ಬಂದು ನಿಂತಿದೆ. ಗಮನಿಸಿ ದೇಶ ಬಿಟ್ಟು ಓಡಿ ಹೋಗದೆ ತಮ್ಮ ಸಾಲವನ್ನ ಒಪ್ಪಿಕೊಂಡು ಇಂದಲ್ಲ ನಾಳೆ ವಾಪಸ್ಸು ಕೊಡುತ್ತೇವೆ ಎಂದವರು ಇಂದು ಸುದ್ದಿಯೇ ಆಗಿಲ್ಲ. ದೇಶ ಬಿಟ್ಟು ಓಡಿ ಹೋದ ನೀರವ್ ಮೋದಿ ಮತ್ತು ಮಲ್ಯ ಇವತ್ತು ದೇಶದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತ ಅಂತಲ್ಲ ಜಗತ್ತಿನ ಯಾವ ದೇಶದಲ್ಲೂ ಫೈನಾನ್ಸಿಯಲ್ ಫ್ರಾಡ್ಸ್ ಅಂದರೆ ಹಣಕಾಸಿನ ಮೋಸಕ್ಕೆ ಹೆಚ್ಚಿನ ಮತ್ತು ಕಠಿಣ ಶಿಕ್ಷೆ ಇಲ್ಲದಿರುವುದು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷ ಇಂತಹ ಜನರಿಗೆ ಇಂತಹ ಕಾರ್ಯ ಮಾಡಲು ಪ್ರೇರಣೆ ನೀಡುತ್ತಿರುವುದು ಸುಳ್ಳಲ್ಲ. 

ದೇಶದ 42 ಬ್ಯಾಂಕ್ ಗಳ ನೂರಾರು ಶಾಖೆಗಳಲ್ಲಿ ಸಾಲಪಡೆದು ತೀರಿಸದೇ ಇರುವವರ ಸಂಖ್ಯೆ ಬರೋಬ್ಬರಿ 9,339! ಮತ್ತೊಂದು ಶಾಕಿಂಗ್ ಸುದ್ದಿ ಎಂದರೆ ಇವರ ಒಟ್ಟು ಸಾಲ (ಹೀಗೆ ಬಾಕಿ ಕೊಡದೆ ಉಳಿಸಿಕೊಂಡಿರುವ ಮೊತ್ತ) ಒಂದು ಲಕ್ಷ ಹನ್ನೆರಡು ಸಾವಿರ ಕೋಟಿ ರುಪಾಯಿ!!. 

ಉದ್ದೇಶಪೂರ್ವಕ ಸುಸ್ತಿದಾರರು ಉಳಿಸಿಕೊಂಡಿರುವ ಸಾಲದ ಮೊತ್ತ ಕಳೆದ 13 ವರ್ಷಗಳಲ್ಲಿ 11 ಪಟ್ಟು ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರ 2016-2017 ರ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ಮಿಸಲಿಟ್ಟ ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚಿದೆ. ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದೇ ಇದ್ದಾಗ, ಬ್ಯಾಂಕ್ ಗಳು ಇವರಿಗೆ ನೋಟಿಸ್ ನೀಡಿವೆ. ಆಗ ಸಾಲಗಾರರು ತಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಸಬೂಬು ಹೇಳಿ ಬ್ಯಾಂಕುಗಳನ್ನು ನಂಬಿಸುತ್ತಿದ್ದರು ಆದರೆ ಇವರೆಲ್ಲರು ಉದ್ದೇಶಪೂರ್ವಕವಾಗಿಯೇ ಸಾಲ ತೀರಿಸುತ್ತಿಲ್ಲ ಎಂದು ಗೊತ್ತಾದಾಗ ಎಲ್ಲರನ್ನೂ ಕಪ್ಪು ಪಟ್ಟಿಗೆ ಸೇರಿಸಿವೆ. ಆದರೇನು ಬ್ಯಾಂಕಿಗೆ ಬರಬೇಕಾಗಿದ್ದ ಬಾಕಿ ಬಂದಿಲ್ಲ. ಸಾಲ ಪಡೆದವರ ಐಷಾರಾಮಿ ಜೀವನ ನಿಂತಿಲ್ಲ!!. 

ವಿಜಯ್ ಮಲ್ಯ ಮತ್ತು ನೀರವ್ ಮೋದಿ ಹೊರತಾಗಿ ಕೆಲ ಸುಸ್ತಿದಾರರ ಪಟ್ಟಿ ಇಲ್ಲಿದೆ. ಇದನ್ನ ನೀಡುವ ಉದ್ದೇಶ ಕೇವಲ ಉದಾಹರಿಸುವುದಕ್ಕೆ ಸೀಮಿತ ಉಳಿದಂತೆ ಬಾಕಿ ಇರುವ ಹಣಕ್ಕೆ ಇಲ್ಲಿ ನಮೂದಿಸಿರುವ ಸಂಸ್ಥೆಗಳು ಪಡೆದಿರುವ ಹಣ ಹೊಂದಾವಣಿಕೆ ಆಗುತ್ತದೆ ಎಂದು ಅರ್ಥವಲ್ಲ. 

  1. ವಿನ್ ಸಮ್ ಡೈಮಂಡ್ಸ್ ಮತ್ತು ಜ್ಯುವೆಲರಿ ಲಿಮಿಟೆಡ್ ನ ನಿರ್ದೇಶಕ ಜತಿನ್ ಮೆಹ್ತಾ, ಮುಂಬೈನ ಎಸ್ ಬಿ ಐ ಸೇರಿದಂತೆ ಒಟ್ಟು 7 ಬ್ಯಾಂಕುಗಳಲ್ಲಿ 3263 ಕೋಟಿ ರೂ. ಸಾಲ ಪಡೆದಿದ್ದಾರೆ.
  2. ಝೂಮ್ ಡೆವಲಪರ್ಸ್ ಪ್ರೆ.ಲಿ ನ ವಿಜಯ್ ಚೌಧರಿ ಮುಂಬೈನ ಎಸ್ ಬಿ ಐ ಸೇರಿದಂತೆ ಇತರ 9 ಬ್ಯಾಂಕುಗಳಲ್ಲಿ 1647 ಕೋಟಿ ರೂ. ಸಾಲ ಪಡೆದಿದ್ದಾರೆ.
  3. ಬೆಟಾ ನ್ಯಾಪ್ತಾಲ್ ಸಂಸ್ಥೆಯ ದೀಪಕ್ ಬವೆಜಾ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 951 ಕೋಟಿ ರೂ. ಸಾಲ ಪಡೆದಿದ್ದಾರೆ.
  4. ರಜಾ ಟೆಕ್ಸ್ ಟೈಲ್ಸ್ ಲಿ. ವಿ.ಕೆ ಶ್ರೀವಾತ್ಸವ್ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 694 ರೂ ಕೋಟಿ ಸಾಲ ಪಡೆದಿದ್ದಾರೆ.
  5. ರ್ಯಾಂಕ್ ಇಂಡಸ್ಟ್ರಿಸ್ ಲಿ. ಡಿ.ವಿ ರಮೇಶ್ ಮುಂಬೈನ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ 551 ಕೋಟಿ ರೂ. ಸಾಲ ಪಡೆದಿದ್ದಾರೆ.
  6. ಎಕ್ಸ್ ಎಲ್ ಎನರ್ಜಿ ಲಿ, ಪೆರುಮ್ ಥೋತಾತಿಲ್ ರವಿಂದ್ರನಾಥನ್ ವಿಷ್ಣು ದೇರಾಬಾದ್ ನ ಎಸ್ ಬಿ ಐ ನಲ್ಲಿ 413 ಕೋಟಿ ರೂ. ಸಾಲ ಪಡೆದಿದ್ದಾರೆ.
  7. ಡೆಕನ್ ಕ್ರೋನಿಕಲ್ ಹೊಲ್ಡಿಂಗ್ಸ್ ಲಿ. ಟಿ ವಂಕಟರಾಮ್ ರೆಡ್ಡಿ, ಹೈದರಾಬಾದ್ ನ ಆಕ್ಸಿಸ್ಸ್ ಬ್ಯಾಂಕ್ ನಲ್ಲಿ 409 ಕೋಟಿ ರೂ. ಸಾಲ ಪಡೆದಿದ್ದಾರೆ.
  8. ಎಲೆಕ್ಟ್ರೋಥೆರಮ್ (ಇಂಡಿಯಾ) ಲಿ, ಶ್ರೀಮುಖೇಶ್ ಭಂಡಾರಿ ಅಹಮದಾಬಾದ್ ನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 385 ಕೋಟಿ ರೂ. ಸಾಲ ಪಡೆದಿದ್ದಾರೆ.
  9. ಜೈಲಾಗ್ ಸಿಸ್ಟಮ್ ಲಿ, ಸುದರ್ಶನ್ ಚೆನೈನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 361 ಕೋಟಿ ಸಾಲ ಪಡೆದಿದ್ದಾರೆ.

ಬೃಹತ್ ಸುಸ್ತಿದಾರರ ಪೈಕಿ ಶೇಕಡಾ 32 ರಷ್ಟು ಬಾಕಿ ಸಾಲಗಳು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೇ ಇರುವಂಥದ್ದು. ಎಸ್ ಬಿ ಐ ಸೇರಿದಂತೆ 19 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.79ರಷ್ಟು ಸಾಲಬಾಕಿ ಇದೆ ಎಂದು ‘ಇಂಡಿಯಾ ಸ್ಪೆಂಡ್’ ವರದಿ ಮಾಡಿದೆ. 2002 ರಲ್ಲಿ ಸಾಲಬಾಕಿ 9,291 ಕೋಟಿ ರೂ ಆಗಿದ್ದರೆ 15 ವರ್ಷಗಳ ಹೊತ್ತಿಗೆ ಏರಿಕೆಯಾಗಿ 111,738 ಕೋಟಿ ರೂ ಗೆ ತಲುಪಿದೆ. ಅತಿ ಹೆಚ್ಚು ಬೃಹತ್ ಸುಸ್ತಿದಾರರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರವಾದರೆ ಕರ್ನಾಟಕ 6 ನೇ ಸ್ಥಾನದಲ್ಲಿದೆ.

ಈಗ ಇನ್ನೊಂದು ವಿಷಯ ಸುದ್ದಿ ಮಾಡುತ್ತಿದೆ. ಮೋದಿ ಸರಕಾರ ನೀರವ್ ಮೋದಿ, ಮೆಹುಲ್ ಚೋಕ್ಸಿ, ಮಲ್ಯ ಮುಂತಾದ 50 ಕ್ಕೂ ಹೆಚ್ಚು ವಿಲ್ ಫುಲ್ ಡಿಫಾಲ್ಟಾರ್ಸ್ ಗಳ ಒಟ್ಟು 6,8607 ಕೋಟಿ ರೂಪಾಯಿಯನ್ನ ಮನ್ನಾ ಮಾಡಿದೆ ಎನ್ನುವುದು ಆ ವಿಷಯ. ಬ್ಯಾಂಕಿಂಗ್ ಭಾಷೆಯಲ್ಲಿ ಇದನ್ನ ರೈಟ್ ಆಫ್ ಎನ್ನುತ್ತಾರೆ. ಅಂದರೆ ಬ್ಯಾಂಕಿನ ರಿಸರ್ವ್ ಅನ್ನು ಬಳಸಿಕೊಂಡು ಈ ಹಣವನ್ನ ಅದರ ಮುಂದೆ ಸರಿದೂಗಿಸುವ ಕ್ರಿಯೆ ಅಷ್ಟೇ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ಗಳಿಗೂ ತಮ್ಮ ಬ್ಯಾಲೆನ್ಸ್ ಶೀಟ್ ಸ್ವಚ್ಛ ಮಾಡಿಕೊಳ್ಳುವಂತೆ ತಾಕೀತು ಮಾಡಿದೆ. ಇದು ಸ್ವಚ್ಛ ಬ್ಯಾಲೆನ್ಸ್ ಶೀಟ್ ಅಭಿಯಾನದ ಮುಂದುವರಿಕೆ ಅಷ್ಟೇ.

ಯಾವುದೇ ಒಂದು ಸಾಲ ಅಥವಾ ಸಾಲದ ಮೇಲಿನ ಕಂತು ಕಟ್ಟಬೇಕಾದ ನಿಗದಿತ ದಿನದಿಂದ 90 ದಿನ ಆದರು ಕಟ್ಟದೆ ಉಳಿಯುತ್ತದೋ ಅಂತಹ ಸಾಲವನ್ನ ‘ಅನುತ್ಪಾದಕ ಆಸ್ತಿ’ ಎಂದು ವರ್ಗಿಕರಿಸಿ ಅದನ್ನ ಬ್ಯಾಲೆನ್ಸ್ ಶೀಟ್ ನಲ್ಲಿ ತೂರಿಸಲಾಗುತ್ತದೆ. ಇದನ್ನ ಇಂಗ್ಲಿಷ್ ನಲ್ಲಿ ‘ನಾನ್ ಪರ್ಫಾರ್ಮಿಂಗ್ ಅಸೆಟ್’ ಎಂದು ಕರೆಯಲಾಗುತ್ತದೆ. ಘೋಷಿಸದೆ ಉಳಿದ ಕಾಳಧನದ ಸಹಾಯದಿಂದ ಇಂತಹ ಅನುತ್ಪಾದಕ ಸಾಲಗಳಿಗೆ ಪ್ರಾವಿಷನ್ ಮಾಡಬಹುದು ಮತ್ತು ಇಂತಹ ಸಾಲಗಳನ್ನ ಅನುತ್ಪಾದಕ ಆಸ್ತಿ ಎಂದು ಘೋಷಿಸಿದರು ಬ್ಯಾಂಕಿನ ಮೇಲಿನ ಗೌರವ, ನಂಬಿಕೆ ಹೋಗುವುದಿಲ್ಲ. ಏಕೆಂದರೆ ಆಕಸ್ಮಾತ್ ಸಾಲಗಾರ ಈ ಹಣ ಕೊಡದೆ ಹೋದರು ಬ್ಯಾಂಕು ಮುಳುಗುವುದಿಲ್ಲ. ಇದರ ಅರ್ಥ ಬ್ಯಾಂಕು ಅಥವಾ ಸರಕಾರ ಮಲ್ಯ ಅಥವಾ ಇನ್ನಿತರ ಯಾವುದೇ ಸುಸ್ತಿದಾರನ ಸಾಲ ಮನ್ನಾ ಮಾಡಿತು ಎಂದಲ್ಲ.

ಒಂದು ಸಣ್ಣ ಉದಾಹರಣೆ ಪೂರ್ಣ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಒಬ್ಬರಿಗೆ ಸಾವಿರ ರುಪಾಯಿ ಸಾಲ ಕೊಟ್ಟಿದ್ದೀರಿ ಅಂದುಕೊಳ್ಳಿ. ಆತ ಮುಂದಿನ ತಿಂಗಳು ಕೊಡುವುದಾಗಿ ಭರವಸೆ ಕೊಟ್ಟಿರುತ್ತಾನೆ. ತಿಂಗಳ ನಂತರ ಆ ಸಾಲಗಾರ ನಿಮಗೆ ಹಣ ಕೊಡಲಿಲ್ಲ. ನೀವು ನಿಮ್ಮ ಖರ್ಚಿಗೆ ಬೇರೆಲ್ಲೋ ಉಳಿಸಿದ ಹಣ ಹೊಂದಿಸಿಕೊಳ್ಳುತ್ತೀರಿ. ಅದರ ಅರ್ಥ ನೀವು ಸಾಲಗಾರನಿಗೆ ಹಣ ಕೊಡಬೇಡಿ ಎಂದು ಹೇಳಲಿಲ್ಲ. ಆದರೆ ನಿಮ್ಮ ಬಳಿ ಕಷ್ಟ ಕಾಲಕ್ಕೆ ಎಂದು ಇಟ್ಟು ಕೊಂಡಿದ್ದ ಹಣವನ್ನ ಬಳಸಿ ಹೇಗೂ ಮ್ಯಾನೇಜ್ ಮಾಡಿದ್ದೀರಿ ಅಷ್ಟೇ! ಆ ಸಾಲವನ್ನ ನೀವು ಆ ಸಾಲಗಾರ ಬದುಕಿರುವವರೆಗೆ ಹಿಂದೆ ಬಿದ್ದು ವಸೂಲಿ ಮಾಡುವ ಅವಕಾಶವಿದೆ.

ಅರ್ಥ ಇಷ್ಟೇ ಸಾಲವನ್ನ ಮನ್ನಾ ಮಾಡಿಲ್ಲ ಅದನ್ನ ಕೇವಲ ರಿಸರ್ವ್ ಹಣದ ಮುಂದೆ ತೆಗೆದುಹಾಕಿದ್ದಾರೆ. ಅಂದರೆ ಬ್ಯಾಲೆನ್ಸ್ ಶೀಟ್ ನಲ್ಲಿ ಒಂದು ಕಡೆ ರಿಸರ್ವ್ ಹಣ ಇಷ್ಟಿದೆ ಅಂತ ತೋರಿಸುವುದು, ಇನ್ನೊಂದೆಡೆ ವಸೂಲಾಗದ ಆಸ್ತಿ ಇಷ್ಟಿದೆ ಅಂತ ತೋರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಅದನ್ನ ಸೆಟ್ ಆಫ್ ಮಾಡಿ ತೋರಿಸಿದ್ದಾರೆ ಅಷ್ಟೇ. ಇದೊಂದು ಅಕೌಂಟಿಂಗ್ ರೀತಿ. ಸಾಲಗಾರರನ್ನ ನೀವು ಮುಕ್ತರು ಸಾಲ ಕಟ್ಟುವ ಹಾಗಿಲ್ಲ ಎಂದು ಹೇಳಿಲ್ಲ. ಬ್ಯಾಂಕ್ಗಳು ಮಾಡಿರುವುದು ಇದನ್ನೇ. ನೀರವ್ ಮೋದಿ, ಮೆಹುಲ್ ಚೋಕ್ಸಿ, ಮತ್ತಿತರ ಸುಸ್ತಿದಾರರನ್ನ ಸದಾ ಕಾಲ ಬೆನ್ನುಹತ್ತಿ ಸಾಲ ವಾಪಸ್ಸು ಪಡೆಯುವ ಅವಕಾಶ ಇದ್ದೇ ಇದೆ. 

ಕೊನೆಮಾತು: ಮನೆಯ ಮೇಲಿನ ಸಾಲದ ಒಂದೆರಡು ಕಂತು ಕಟ್ಟದಿದ್ದರೆ, ಕಾರಿನ ಮೇಲಿನ ಕಂತು ತಪ್ಪಿದರೆ ಮುಲಾಜಿಲ್ಲದೆ ಜಪ್ತಿಗೆ ಮುಂದಾಗುವ ಬ್ಯಾಂಕು ದೊಡ್ಡವರ ವಿಷಯದಲ್ಲಿ ಮಾತ್ರ ಕೋರ್ಟ್ ಆದೇಶಕ್ಕೆ ಕಾಯುತ್ತದೆ. ಸಮಾಜಕ್ಕೆ ಒಟ್ಟು ಸಂದೇಶ ಕೊಡುತ್ತಿರುವುದಾದರು ಏನು? ಕಳ್ಳತನ ಅಥವಾ ಮೋಸ ಮಾಡಿ ಆದರೆ ಸಣ್ಣ ಮಟ್ಟದಲ್ಲಿ ಮಾತ್ರ ಮಾಡಬೇಡಿ ಎಂದಲ್ಲವೇ? ಮಲ್ಯನನ್ನ ವಾಪಸ್ಸು ಕರೆತರಲು ಕಸರತ್ತು ನಡೆಯುತ್ತಿದೆ. ನಂತರ ಲಲಿತ್ ಮೋದಿ, ನೀರವ್ ಮೋದಿ... ಹೀಗೆ ಅನೇಕರ ಪಟ್ಟಿ ಬೆಳೆಯುತ್ತದೆ. ಅವರನ್ನ ಭಾರತಕ್ಕೆ ಕರೆತರುವಲ್ಲಿ ಸರಕಾರ ಸಫಲವಾಗಬಹುದು ಆದರೆ ಅವರಿಗೆ ನಿಜವಾಗಿಯೂ ಶಿಕ್ಷೆ ನೀಡುವಲ್ಲಿ ಸಫಲವಾಗುತ್ತದೆಯೇ? ಅವರ ಐಷಾರಾಮ ಕಸಿದು ಸಾಮಾನ್ಯ ಖೈದಿಯಂತೆ ಅವರನ್ನ ಜೈಲಿಗಟ್ಟುತ್ತದೆಯೇ? ಪ್ರಶ್ನೆಗಳು ಹಲವು ಉತ್ತರ ಮಾತ್ರ ನಿರೀಕ್ಷೆಯಲ್ಲಿದೆ. ಇಷ್ಟರ ಮಟ್ಟಿಗೆ ಎಲ್ಲರ ಭಾವನೆಗಳೂ ಒಂದು. ಆದರೆ ಕೇಂದ್ರ ಸರಕಾರದ ಅಣತಿ ಮೇರೆಗೆ ಇಂತಹ ಸುಸ್ತಿದಾರರ ಸಾಲ ಮನ್ನಾ ಮಾಡಿತು ಎನ್ನುವುದು ಶುದ್ಧ ಸುಳ್ಳು. ಊಹಾಪೋಹಗಳಿಗೆ ಜನ ಕಿವಿಗೊಡುವ ಅವಶ್ಯಕತೆಯಿಲ್ಲ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com