ನಮಗೆ ಬೇಕೇ ಕೋ-ಆಪರೇಟಿವ್ ಬ್ಯಾಂಕ್? 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ನಮಗೆ ಬೇಕೇ ಕೋ-ಆಪರೇಟಿವ್ ಬ್ಯಾಂಕ್?
ನಮಗೆ ಬೇಕೇ ಕೋ-ಆಪರೇಟಿವ್ ಬ್ಯಾಂಕ್?

ಕೋ-ಆಪರೇಟಿವ್ ಸೊಸೈಟಿ, ಕೋ-ಆಪರೇಟಿವ್ ಬ್ಯಾಂಕ್ ಗಳು ಮುಖ್ಯವಾಹಿನಿಯಲ್ಲಿ ಸಹಾಯ ಸಿಗದ ಬಹಳಷ್ಟು ಜನರಿಗೆ ಆಸರೆಯಾಗಿದ್ದವು. ಅವುಗಳ ಉಗಮದ ಹಿಂದಿನ ಆಶಯವೂ ಕೂಡ ಅದೇ! ಎಲ್ಲರಿಂದ ಎಲ್ಲರಿಗಾಗಿ ಎನ್ನುವ ತತ್ವ ಇವುಗಳದ್ದು. ಅರ್ಥ, ಯಾವುದೇ ಇಂತಹ ಸಂಸ್ಥೆಯಲ್ಲಿ ಸದಸ್ಯರಾದರೆ ಮತ್ತು ಅಲ್ಲಿನ ಉದ್ದೇಶಕ್ಕೆ ಬದ್ಧವಾಗಿದ್ದರೆ ಅಂತಹ ಎಲ್ಲಾ ಸದಸ್ಯರ ಒಳಿತಿಗಾಗಿ ಶ್ರಮಿಸುವುದು ಮತ್ತು ಮೂಲ ಉದ್ದೇಶ 'ಲಾಭ'ಕ್ಕಾಗಿ ಅಲ್ಲದೆ ಸಮುದಾಯದ ಒಳಿತಿಗಾಗಿ ದುಡಿಯುವುದು ಈ ಸಂಸ್ಥೆಗಳ ಪ್ರಮುಖ ಲಕ್ಷಣ. 

ಇವತ್ತು ಆರ್ಥಿಕವಾಗಿ ಒಂದಷ್ಟು ಸವಾಲಿನ ದಿನಗಳನ್ನ ಭಾರತೀಯ ವಿತ್ತ ಜಗತ್ತು ಮತ್ತು ಜಗತ್ತಿನ ಇತರ ದೇಶಗಳು ಕೂಡ ಕಾಣುತ್ತಿವೆ. ಎಲ್ಲಕ್ಕೂ ಮುಖ್ಯವಾಗಿ ಹಣದ ಹರಿವು ಕಡಿಮೆಯಾಗಿದೆ. ಭಾರತದಲ್ಲಿ ಬಹುಮುಖ್ಯವಾಗಿ ಮುಖ್ಯವಾಹಿನಿ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ತಮ್ಮ ಸೇವೆಯನ್ನ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಲು ವಿಫಲವಾಗಿದ್ದಾಗ ಇಂತಹ ಸೊಸೈಟಿಗಳು ವರದಾನದಂತೆ ಕಾರ್ಯ ನಿರ್ವಹಿಸಿವೆ. ಅವುಗಳು ಅದರಲ್ಲಿ ಬಹಳಷ್ಟು ಯಶಸ್ವಿ ಕೂಡ ಆಗಿದ್ದವು. 

ಇತ್ತೀಚೆಗೆ ಮಹಾರಾಷ್ಟ್ರ ಮೂಲದ ಪಿಎಂಸಿ (ಪಂಜಾಬ್-ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್) ಕುಸಿತ ಮತ್ತು ಕರ್ನಾಟಕದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಕುಸಿತ ಕೋ-ಆಪರೇಟಿವ್ ಬ್ಯಾಂಕ್ ಗಳ ಮೇಲಿನ ನಂಬಿಕೆಯನ್ನ ಕಡಿಮೆ ಮಾಡಿವೆ. 

ಪಿಎಂಸಿ ಬ್ಯಾಂಕ್ 36 ವರ್ಷ ಹಳೆಯದು. 137 ಶಾಖೆಗಳನ್ನ ಹೊಂದಿದೆ. ಕರ್ನಾಟಕದಲ್ಲೂ ಈ ಬ್ಯಾಂಕಿನ 15 ಶಾಖೆಗಳಿವೆ. ಹೆಸರಿಗೆ ಇದು ಮಹಾರಾಷ್ಟ್ರ ಮತ್ತು ಪಂಜಾಬ್ ಕೋ-ಆಪರೇಟಿವ್ ಬ್ಯಾಂಕ್, ಆದರೆ ಇದು 6 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾಗೆಯೇ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಕೂಡ 20 ವರ್ಷ ಹಳೆಯದು. 1,566 ಕೋಟಿ ರೂಪಾಯಿ ಠೇವಣಿ ಹೊಂದಿದೆ. ಇದರ ಅರ್ಥ ಕುಸಿದಿರುವುದು ಅತಿ ಸಣ್ಣ ಅಥವಾ ನಿನ್ನೆ ಮೊನ್ನೆ ಸ್ವಹಿತಾಸಕ್ತಿಗೆ ಹುಟ್ಟುಹಾಕಿದ ಸಂಸ್ಥೆಗಳಲ್ಲ. ಅವು ಸೊಸೈಟಿಗಳ ಆಶಯಕ್ಕೆ ತಕ್ಕಂತೆ ಸೃಷ್ಟಿಯಾದ ಸಂಸ್ಥೆಗಳು. 

ಕೋ-ಆಪರೇಟಿವ್ ಸೊಸೈಟಿಗಳು ಸಮಾಜಕ್ಕೆ ಬೇಕು ಅವುಗಳಿಂದ ಆಗಬಹುದಾದ ಮುಖ್ಯ ಲಾಭಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. 

 1. ಇದೊಂದು ಸ್ವಯಂಪ್ರೇರಿತವಾಗಿ ಸ್ಥಾಪಿಸಿದ ಸಂಸ್ಥೆಯಾಗಿರುತ್ತದೆ. ಅಂದರೆ ಈ ಸಂಸ್ಥೆಯ ಸದಸ್ಯರು ಇದನ್ನ ಸ್ಥಾಪಿಸುತ್ತಾರೆ. ಎಲ್ಲಿಯವರೆಗೆ ಅವರು ಸಂಸ್ಥೆಯ ಮೂಲ ಉದ್ದೇಶಕ್ಕೆ ಬದ್ಧರಾಗಿರುತ್ತಾರೋ ಅಲ್ಲಿಯವರೆಗೆ ಅವರು ಅಲ್ಲಿ ಮುಂದುವರಿಯಬಹುದು. ಯಾವುದೇ ಕಾರಣವಿಲ್ಲದೆ ಕೂಡ ಬೇಡ ಅನ್ನಿಸಿದಾಗ ಸದಸ್ಯ ಇಲ್ಲಿಂದ ಹೊರ ನಡೆಯುವ ಸ್ವಾತಂತ್ರ್ಯಹೊಂದಿರುತ್ತಾರೆ. 
 2. ಕೆಲವೊಂದು ಸಣ್ಣ ಪುಟ್ಟ ಕಾಯಿದೆಗಳನ್ನ ಪಾಲಿಸಿ 10 ಜನರ ಪುಟ್ಟ ತಂಡ ಸೊಸೈಟಿಯನ್ನ ಸ್ಥಾಪಿಸುವ ಅವಕಾಶವಿದೆ. ಇತರ ಸಂಸ್ಥೆಗಳನ್ನ ಸ್ಥಾಪಿಸುವುದಕ್ಕಿಂತ ಸುಲಭವಾಗಿ ಇದನ್ನ ಸ್ಥಾಪಿಸಲು ಅವಕಾಶವಿದೆ . 
 3. ಈ ಸಂಸ್ಥೆಗಳು ಪ್ರಜಾಪ್ರಭುತ್ವದಂತೆ ಕೆಲಸ ಮಾಡುತ್ತವೆ. ಇವು ಹಣ ಅಥವಾ ಲಾಭವೇ ಮುಖ್ಯ ಎಂದು ಕೆಲಸ ಮಾಡುವುದಿಲ್ಲ. ಹೀಗಿದ್ದೂ ತನ್ನ ಕಾರ್ಯದಿಂದ ಲಾಭ ಬಂದರೆ ಅದನ್ನ ತನ್ನ ಎಲ್ಲಾ ಸದಸ್ಯರಿಗೂ ಸಮನಾಗಿ ಹಂಚುತ್ತದೆ. 
 4. ಇಲ್ಲಿನ ಸದಸ್ಯರ ಬಾಧ್ಯತೆ ಅವರು ಹೂಡಿದ ಹಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ ಈ ಸಂಸ್ಥೆಗಳು ಯಾವುದೇ ಸದಸ್ಯರ ಹೊರ ಹೋಗುವಿಕೆ ಅಥವಾ ಸಾವು ಅಥವಾ ಇನ್ನಿತರೇ ವಿಷಯಗಳಿಂದ ಕೊನೆಯಾಗುವುದಿಲ್ಲ. ಇವಕ್ಕೆ ಪರ್ಪೆಚ್ಯಯಲ್ ಎಕ್ಸಿಸ್ಟೆನ್ಸ್ (perpetual existence ಅಥವಾ ಶಾಶ್ವತ ಅಸ್ತಿತ್ವದ) ನ ಲಾಭವಿದೆ. 
 5. ಎಲ್ಲಕ್ಕೂ ಮುಖ್ಯವಾಗಿ ಮಧ್ಯವರ್ತಿಗಳ ಕಾಟ ಇಲ್ಲಿರುವುದಿಲ್ಲ. ಅದು ಹಣವನ್ನ ಪಡೆಯಲು ಅಥವಾ ತಾವು ತಯಾರಿಸಿದ ಉತ್ಪನ್ನಗಳ ಮಾರಾಟ ಹೀಗೆ ವಿಷಯ ಯಾವುದೇ ಇರಲಿ ಎಲ್ಲವೂ ಸದಸ್ಯರ ಮಧ್ಯೆ ನಡೆಯುತ್ತದೆ. ಹೀಗಾಗಿ ಮಧ್ಯವರ್ತಿಗಳಿಗೆ ಇಲ್ಲಿ ಜಾಗವಿಲ್ಲ. 
 6. ಕೃಷಿ ಕ್ಷೇತ್ರಕ್ಕೆ ಸಾಲ ಮತ್ತು ಇನ್ನಿತರೇ ಕೃಷಿ ಆಧಾರಿತ ವ್ಯವಸಾಯಗಳಿಗೆ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳು ನಿಭಾಯಿಸುತ್ತಿರುವ ಕಾರ್ಯವನ್ನ ಬೇರೆಯ ಹಣಕಾಸು ಸಂಸ್ಥೆಗಳು ತುಂಬುವುದು ಕಷ್ಟಸಾಧ್ಯ. 
 7. ಇದೊಂದು ಸ್ವಾವಲಂಬಿ ಸಂಸ್ಥೆ. ಬಂಡವಾಳಕ್ಕಾಗಿ ಇಲ್ಲಿ ಹೊರಗಿನ ಸಂಸ್ಥೆಯನ್ನ ಅವಲಂಬಿಸುವ ಅವಶ್ಯಕತೆ ಇಲ್ಲ. ಸರಕಾರದಿಂದ ಕೂಡ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಜೊತೆಗೆ ತೆರಿಗೆ ಕೂಡ ಕಡಿಮೆ ಇರುತ್ತದೆ.  
 8. ಸಮಾಜದಲ್ಲಿ ತಮ್ಮ ಇರುವಿಕೆಯನ್ನ ಗುರುತಿಸಿಕೊಳ್ಳಲು ಕೂಡ ಇದು ಸಹಾಯಕಾರಿ. ಇಂತಹ ಸಂಸ್ಥೆಗಳನ್ನ ತೆರೆಯಲು ಮತ್ತು ಸದಸ್ಯರಾಗಲು ಹೆಚ್ಚಿನ ವಿದ್ಯಾರ್ಹತೆಗಳು ಬೇಕಿಲ್ಲ. 

ಕೋ-ಆಪರೇಟಿವ್ ಸೊಸೈಟಿ/ಬ್ಯಾಂಕುಗಳು ನಮ್ಮ ಸಮಾಜಕ್ಕೆ ನೀಡುತ್ತಿರುವ ಸಾಮಾಜಿಕ ಕೊಡುಗೆ ಬಹಳಷ್ಟು. ವಸ್ತು ಸ್ಥಿತಿ ಹೀಗಿದ್ದೂ ಒಂದೆರೆಡು ಕೋ-ಆಪರೇಟಿವ್ ಬ್ಯಾಂಕ್ಗಳು ಕುಸಿದರೆ ನಮ್ಮ ಸಮಾಜ ಪ್ಯಾನಿಕ್ ಸ್ಥಿತಿಗೆ ತಲುಪಿ ಬಿಡುತ್ತದೆ. ಜನ ತಾವು ಇಟ್ಟ ಹಣವನ್ನ ತೆಗೆಯಲು ಶುರು ಮಾಡುತ್ತಾರೆ. ಇಲ್ಲಿ ಪ್ರಮುಖವಾಗಿ ಕೆಲಸ ಮಾಡುವುದು ನಂಬಿಕೆ ಅದನ್ನ ಕಳೆದುಕೊಂಡರೆ ಹೇಗೆ? ಇರಲಿ... 

ಹತ್ತಾರು ವರ್ಷದಿಂದ ಕೆಲಸ ಮಾಡಿಕೊಂಡು ನೂರಾರು ಶಾಖೆ ಹೊಂದಿರುವ ಇಂತಹ ಸಂಸ್ಥೆಗಳು ಕುಸಿಯಲು ಕಾರಣವೇನು? 

 1. ವಸ್ತು ಮತ್ತು ವಿಷಯ ಯಾವುದೇ ಇರಲಿ ಅದರಲ್ಲಿ ಲಾಭದ ಜೊತೆ ಜೊತೆಯಲ್ಲಿ ನಷ್ಟವೂ ಇದ್ದೇ ಇರುತ್ತದೆ. ಕೋ-ಆಪರೇಟಿವ್ ಬ್ಯಾಂಕ್ ಅಂತಲ್ಲ ಯಾವುದೇ ಬ್ಯಾಂಕ್ ಇರಲಿ ಸಾಲವನ್ನ ಕೊಟ್ಟ ಮೇಲೆ ವಸೂಲಿ ಮಾಡುವುದು ಅತ್ಯಂತ ಮುಖ್ಯವಾದ ಕೆಲಸ. ಹೀಗೆ ವಸೂಲಿ ಮಾಡಲಾಗದೆ ಉಳಿದ ಸಾಲವನ್ನ ಎನ್ ಪಿಎ ಅಥವಾ ಅನುತ್ಪಾದಕ ಆಸ್ತಿ ಎಂದು ಕರೆಯಲಾಗುತ್ತದೆ. ಬ್ಯಾಂಕಿನ ಕುಸಿತಕ್ಕೆ ಇದು ಅತ್ಯಂತ ಪ್ರಮುಖ ಕಾರಣ. 
 2. ಇನ್ನೊಂದು ಪ್ರಮುಖ ಕಾರಣ ಸರಿಯಾದ ದಾಖಲೆ ಇಲ್ಲದೆ ಪರಿಚಯದವರಿಗೆ ಅಥವಾ ಲಂಚದ ಆಸೆಗೆ ಹಣವನ್ನ ಸಾಲದ ರೂಪದಲ್ಲಿ ನೀಡುವುದು. ಇದನ್ನ ರಾಂಗ್ ಡುಯಿಂಗ್ ಅಥವಾ ಹಣದ ತಪ್ಪು ಬಳಕೆ ಎಂದು ಕರೆಯಲಾಗುತ್ತದೆ. ಅನುತ್ಪಾದಕ ಆಸ್ತಿ ತಯಾರಾಗಲು ಇದು ಕಾರಣ. 
 3. ಅನುತ್ಪಾದಕ ಆಸ್ತಿಯ ಮೊತ್ತ ಹೆಚ್ಚಾದಾಗ ಅದನ್ನ ಹೊರ ಜಗತ್ತಿಗೆ ಅಂದರೆ ತನ್ನ ವ್ಯವಹಾರ ಪತ್ರದಲ್ಲಿ ತಿಳಿಸಬೇಕು. ಕೆಲವೊಮ್ಮೆ ಮುಂದಿನ ವರ್ಷದವರೆಗೆ ಅದನ್ನ ಸರಿ ಮಾಡಿದರೆ ಆಯಿತು ಎಂದೂ ಅಥವಾ ಸುಮ್ಮನೆ ಸದಸ್ಯರು ಪ್ಯಾನಿಕ್ ಗೆ ಒಳಗಾಗುತ್ತಾರೆ ಎಂದೂ ಬ್ಯಾಂಕ್ ಆಡಳಿತ ಮಂಡಳಿ ತನ್ನ ಲೆಕ್ಕ ಪತ್ರವನ್ನ ತಿದ್ದಿ ತೋರಿಸುತ್ತವೆ. ಅಂದರೆ ನಿಜ ಪರಿಸ್ಥಿತಿಯನ್ನ ಮುಚ್ಚಿಡುವುದು ಕೂಡ ಸಮಸ್ಯೆಯ ಮೂಲ. 
 4. ಸದಸ್ಯರ ನಡುವೆ ಗುಂಪುಗಾರಿಕೆ, ಸ್ವಹಿತಕ್ಕಾಗಿ ಹಣ ಬಳಕೆ, ಅಧಿಕಾರಕ್ಕಾಗಿ ಕಚ್ಚಾಟ ಹೀಗೆ ಮನುಷ್ಯ ಸೇರಿದ ಕಡೆ ಆಗಬಹುದಾದ ಎಲ್ಲಾ ರೀತಿಯ ಲೋಭ, ಸ್ವಾರ್ಥ, ಹೊಟ್ಟೆ ಕಿಚ್ಚು ಇವುಗಳು ಸಂಸ್ಥೆಯ ಮೂಲ ಉದ್ದೇಶವನ್ನ ಕಬಳಿಸಿ ಬಿಡುತ್ತವೆ. ಸದಸ್ಯರ ಸಂಖ್ಯೆ ಜಾಸ್ತಿ ಆದಷ್ಟೂ ಅವರು ನಿತ್ಯ ಜೀವನದಲ್ಲಿ ಸಂಸ್ಥೆಯ ನಡುವಿನ ಒಡೆನಾಟ ಕಡಿಮೆ ಯಾಗಿರುತ್ತದೆ. ಹೀಗಾಗಿ ಸಂಸ್ಥೆ ಮುಳುಗುವ ಹಂತದವರೆಗೆ ಅವರಿಗೆ ಇದರ ಅರಿವಾಗುವುದೇ ಇಲ್ಲ. 
 5. ಸದಸ್ಯರ ಬಾಧ್ಯತೆ ಅವರು ಹೂಡಿರುವ ಬಂಡವಾಳದ ಮೊತ್ತಕ್ಕೆ ಮಾತ್ರ ಸೀಮಿತ. ಹೀಗಾಗಿ ಇಲ್ಲಿ ಆಗುವ ನಷ್ಟಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದು ಸುಲಭವಲ್ಲ. ಹೀಗಾಗಿ ಇಲ್ಲಿ ಅಕೌಂಟಬಿಲಿಟಿ ಅಥವಾ ಹೊಣೆಗಾರಿಕೆ ಕಡಿಮೆ. ಹೊಣೆಗಾರಿಕೆ ಕಡಿಮೆ ಇದ್ದಾಗ ಸದಸ್ಯರಲ್ಲಿ ಅದರಲ್ಲೂ ಆಡಳಿತ ಮಂಡಳಿಯಲ್ಲಿರುವ ಸದಸ್ಯರಲ್ಲಿ ಬದ್ಧತೆ ಕಡಿಮೆಯಾಗುತ್ತದೆ. ಬದ್ಧತೆ ಕಡಿಮೆಯಾದಾಗ ಕುಸಿತ ಶತಃಸಿದ್ಧ. 

ಕೊನೆ ಮಾತು: ಇಂತಹ ಸಂಸ್ಥೆಗಳನ್ನ ಸೋಶಿಯಲ್ ಎಂಟರ್ಪ್ರೈಸಿಂಗ್ ಎಂದು ಕರೆಯುತ್ತಾರೆ. ಲಾಭ ಮುಖ್ಯವಲ್ಲದ ಆದರೆ ಸಮುದಾಯದ/ಸದಸ್ಯರ ಮತ್ತು ಸಂಸ್ಥೆಯ ಉದ್ದೇಶಕ್ಕಾಗಿ ದುಡಿಯುವುದು ಇವುಗಳ ಮುಖ್ಯ ಲಕ್ಷಣ. ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿ ಹಣವಿಡುವುದು ತಪ್ಪಲ್ಲ. ಕೋ-ಆಪರೇಟಿವ್ ಬ್ಯಾಂಕುಗಳು ಆರ್ ಬಿ ಐ ಗೈಡ್ಲೈನ್ಸ್ ಪ್ರಕಾರ ಠೇವಣಿ ಮೇಲೆ ಬಡ್ಡಿ ಮತ್ತು ಸಾಲದ ಮೇಲೆ ಬಡ್ಡಿಗಳನ್ನ ನಿಗದಿ ಪಡಿಸಬೇಕು. ಅದನ್ನ ಬಿಟ್ಟು ಬೇಕಾಬಿಟ್ಟಿ ಬಡ್ಡಿಯನ್ನ ಕೊಡುತ್ತೇವೆ ಠೇವಣಿ ನೀಡಿ ಎನ್ನುವ ಬ್ಯಾಂಕ್ಗಳಿಂದ ದೂರವಿರಬೇಕು. ಕೋ ಆಪರೇಟಿವ್ ಬ್ಯಾಂಕ್ಗಳು ಕರೆಯುವ ವಾರ್ಷಿಕ ಸಭೆಗೆ ತಪ್ಪದೆ ಹಾಜರಾಗಬೇಕು. ಅದು ನಿಮ್ಮದೇ ಸಂಸ್ಥೆ, ನಿಮ್ಮದೇ ಹಣ. ಲೆಕ್ಕ ಪತ್ರವನ್ನ ಪರಿಶೀಲಿಸಬೇಕು. ಯಾರಿಗೆ ಸಾಲ ಕೊಟ್ಟಿದ್ದಾರೆ ಅದರ ವಸೂಲಾತಿ ಸ್ಥಿತಿಯೇನು? ಹೀಗೆ ಹಲವಾರು ಪ್ರಶ್ನೆಗಳನ್ನ ಕೇಳಬೇಕು. ಇದ್ಯಾವುದೂ ಮಾಡದೆ ಯಾವುದೋ ಒಂದು ಸಹಕಾರಿ ಬ್ಯಾಂಕು ಕುಸಿಯಿತು ಎನ್ನುವ ಕಾರಣ ಹೇಳಿ ನಿಮ್ಮ ಸಹಕಾರಿ ಬ್ಯಾಂಕಿನಿಂದ ಹಣ ಹೊರತೆಗೆಯುವುದು ತಪ್ಪು. 

ಗಮನಿಸಿ ಪಿಎಂಸಿ ಬ್ಯಾಂಕು ಆರ್ ಬಿ ಐ ವಿಧಿಸಿರುವ ಬಹತೇಕ ಬಡ್ಡಿ ದರಗಳನ್ನ ಪಾಲಿಸುತ್ತಿದೆ. ಇಲ್ಲಿನ ಎನ್ ಪಿ ಎ ಕೂಡ 4 ಪ್ರತಿಶತ. ಇದು ಹೆಚ್ಚೇನೂ ಅಲ್ಲ. ಆದರೆ ಅದನ್ನ ತಡೆದುಕೊಳ್ಳುವಷ್ಟು ದೊಡ್ಡ ಬ್ಯಾಂಕ್ ಇದಲ್ಲ. ಸಹಜವಾಗೇ ರಿಯಲ್ ಎಸ್ಟೇಟ್ ಗೆ ನೀಡಿರುವ ಹಣ ವಸೂಲಾಗದೆ ನಿಂತಿದೆ. ಕಾರಣವೇನೇ ಇರಲಿ ಕುಸಿತ ಕುಸಿತವೇ. ಹೆಚ್ಚಿನ ಬಡ್ಡಿಯ ಆಸೆಗೆ ಠೇವಣಿ ಇಡುವುದರ ಫಲವಿದು. ನಿಜವಾಗಿ ಸೊಸೈಟಿಯ ಉದ್ದೇಶಕ್ಕೆ ಬದ್ಧವಾಗಿದ್ದು ಅಲ್ಲಿನ ರೂಪು ರೇಷಗಳ ಅಡಿಯಲ್ಲಿ ಕೆಲಸ ಮಾಡಿದರೆ ಇದು ವರದಾನ. ಇಲ್ಲದಿದ್ದರೆ ಅದು ಶಾಪವಾಗಿ ಪರಿವರ್ತನೆಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಲ್ಲಿ ಖಾತೆ ತೆಗೆಯುವುದಕ್ಕೆ ಕೂಡ ಇದು ಅನ್ವಯ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com