(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ದೆವ್ವ-ಭೂತಗಳಿವೆಯೇ? ಅದೆಲ್ಲ ಬರಿ ಭ್ರಮೆಯೇ! (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ತಮ್ಮ ಆಸೆ ಬಯಕೆಗಳನ್ನು ಪೂರೈಸಿಕೊಳ್ಳದ ಅಥವಾ ಪೂರೈಸಿಕೊಳ್ಳಲಾಗದವರು, ತಮ್ಮ ಪ್ರೀತಿಪಾತ್ರರನ್ನು, ತಾವು ಗಳಿಸಿದ ಆಸ್ತಿ ಹಣ-ಬೆಲೆಬಾಳುವ ವಸ್ತುಗಳ ಮೇಲೆ ಮೋಹವಿರುವವರು ಸತ್ತ ಮೇಲೂ ದೆವ್ವಗಳಾಗಿ ಉಳಿಯುತ್ತಾರೆ. ಎಂಬ ನಂಬಿಕೆ ಬಹಳ ಜನಪ್ರಿಯ.
Published on

ನಮ್ಮ ವೇದ ಉಪನಿಷತ್ತುಗಳಲ್ಲಿ. ಮನುಷ್ಯನೊಳಗಿರುವ ಅನಂತ ಮತ್ತು ಅವಿನಾಶಿ ಚೇತನವನ್ನು ಆತ್ಮ ಎಂದು ಕರೆಯಲಾಗಿದೆ. ಆತ್ಮಕ್ಕೆ ದೇಹ ಮತ್ತು ಮನಸ್ಸು ಉಪಕರಣಗಳು.

ಜೀವಂತವಿದ್ದಾಗ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಸತ್ತ ಮೇಲೆ ದೇಹ ಮತ್ತು ಮನಸ್ಸು ಅಳಿಯುತ್ತವೆ. ಆತ್ಮ ದೇಹದಿಂದ ಹೊರ ಬರುತ್ತದೆ. ಆತ್ಮಗಳ ಲೋಕವನ್ನು ಸೇರುತ್ತದೆ. ಸಮಯ ನೋಡಿಕೊಂಡು ಪುನರ್ಜನ್ಮ ಪಡೆದು, ಹೊಸ ದೇಹ ಮತ್ತು ಮನಸ್ಸನ್ನು ಹೊಂದುತ್ತದೆ ಎಂದು ನಂಬಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹಲವು ಕಾರಣಗಳಿಂದ, ಆತ್ಮವು ಆತ್ಮಲೋಕವನ್ನು ಸೇರದೆ ಪುನರ್ಜನ್ಮವನ್ನು ಪಡೆಯದೆ, ತ್ರಿಶಂಕುವಿನಂತೆ ಪ್ರೇತವಾಗಿ ಉಳಿದುಕೊಳ್ಳುತ್ತದೆ. ಅಲೆಮಾರಿಯಾಗುತ್ತದೆ ಎನ್ನಲಾಗುತ್ತದೆ.

ದುರಂತ, ಅಸಹಜ ಸಾವು, ರೋಗ, ಆತ್ಮಹತ್ಯೆ, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ವ್ಯಕ್ತಿಗಳು ದೆವ್ವಗಳಗುತ್ತಾರೆ.

ತಮ್ಮ ಆಸೆ ಬಯಕೆಗಳನ್ನು ಪೂರೈಸಿಕೊಳ್ಳದ ಅಥವಾ ಪೂರೈಸಿಕೊಳ್ಳಲಾಗದವರು, ತಮ್ಮ ಪ್ರೀತಿಪಾತ್ರರನ್ನು, ತಾವು ಗಳಿಸಿದ ಆಸ್ತಿ ಹಣ-ಬೆಲೆಬಾಳುವ ವಸ್ತುಗಳ ಮೇಲೆ ಮೋಹವಿರುವವರು ಸತ್ತ ಮೇಲೂ ದೆವ್ವಗಳಾಗಿ ಉಳಿಯುತ್ತಾರೆ. ಎಂಬ ನಂಬಿಕೆ ಬಹಳ ಜನಪ್ರಿಯ. ಈ ಪ್ರೇತಾತ್ಮಗಳು, ತಮ್ಮ ದೇಹ ಸತ್ತ ಜಾಗದಲ್ಲಿ ವಾಸಿಸುತ್ತವೆ. 

ಆತ್ಮೀಯರು, ಪರಿಚಿತರು-ಅಪರಿಚಿತರ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ, ಅವುಗಳಿಗೆ ವಿಶೇಷ ಗುಣಗಳಿವೆಯಂತೆ. ಉದಾಹರಣೆಗೆ:

⦁ ಕಾಮರೂಪಿಗಳು: ಬೇಕಾದ ರೂಪವನ್ನು ಧರಿಸುತ್ತವೆ. ಒಮ್ಮೆ ಮನುಷ್ಯರಂತೆ, ಒಮ್ಮೆ ಪ್ರಾಣಿಗಳಂತೆ.ಒಮ್ಮೆ ಕರಾಳ ರೂಪ, ಮಗದೊಮ್ಮೆ ಸುಂದರ ರೂಪ ಧರಿಸುತ್ತವಂತೆ.
⦁ ನೆರಳಿನ ರೂಪದಲ್ಲಿ, ಗಾಳಿಯಂತೆ ಎಲ್ಲೆಡೆ ಸಂಚರಿಸ ಬಲ್ಲವು, ಗೋಡೆ ಬಾಗಿಲುಗಳು ಅವುಗಳ ಚಲನೆಯನ್ನು ತಡೆಯಲಾರವು.
⦁ ಅವುಗಳಿಗೆ ಅತಿಮಾನವ ಶಕ್ತಿ ಇರುತ್ತದೆ. ವಸ್ತುಗಳನ್ನು ಮಾಯ ಮಾಡಬಲ್ಲವು

 ಭಾರವಾದ ವಸ್ತುಗಳು ಹಾರಾಡುವಂತೆ ಮಾಡಬಲ್ಲವು, ಬೆಂಕಿ ಹಚ್ಚಬಲ್ಲವು, ವಸ್ತುಗಳನ್ನು ಪುಡಿ ಮಾಡಿ ನಾಶಮಾಡಬಲ್ಲವು. 
⦁ ಕೀಟಲೆ ಮಾಡಿ ಹೆದರಿಸಿ ಜನರನ್ನು ಗೋಳು ಹೊಯ್ದುಕೊಳ್ಳಬಲ್ಲವು.
⦁ ವ್ಯಕ್ತಿಯ ಮೈಮೇಲೆ ಬಂದು ತಮ್ಮ ಪ್ರವರವನ್ನು ಹೇಳಬಲ್ಲವು.
⦁ ದೆವ್ವ ಮೈಮೇಲೆ ಬಂದ ವ್ಯಕ್ತಿ, ಅತಿ ಮನುಷ್ಯ ಶಕ್ತಿಯನ್ನು ಪ್ರದರ್ಶಿಸ ಬಲ್ಲ. ಅತಿ ಭಾರದ ವಸ್ತುಗಳನ್ನು ಎತ್ತ ಬಲ್ಲ. ಹತ್ತಾರು ಜನರನ್ನು ಹೊಡೆದು ಗಾಯ ಗೊಳಿಸಬಲ್ಲ, ಸಾಯಿಸಬಲ್ಲ. ದೆವ್ವಗಳು ಯಾವುದೇ ವ್ಯಕ್ತಿ ರಕ್ತಕಾರಿ ಸಾಯುವಂತೆ ಮಾಡಬಲ್ಲವು.
⦁ ದೆವ್ವಗಳು ಅನೇಕ ಕಾಯಿಲೆಗಳನ್ನು ಉಂಟು ಮಾಡಬಲ್ಲವು, ಮಾನಸಿಕ ಕಾಯಿಲೆಗಳು, ಫಿಟ್ಸ್, ಲಕ್ವ, ಕಿವುಡುತನ, ಮೂಕತನ, ವಾಂತಿ-ಭೇದಿ, ರೋಗ ಇತ್ಯಾದಿ ಇತ್ಯಾದಿ.
⦁ ದೆವ್ವಗಳು ಪಾಳುಬಿದ್ದ ಕಟ್ಟಡಗಳು, ಸ್ಮಶಾನದಲ್ಲಿ ,ಹುಣಸೇಮರದಲ್ಲಿ, ಕೆರೆ ಬಾವಿಗಳ ಸುತ್ತಮುತ್ತ, ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದು ನಂಬಲಾಗುತ್ತದೆ.
⦁ ಇವೆಲ್ಲಾ ನಿಜವೇ?, ಎಷ್ಟು ನಿಜ?, ಎಷ್ಟು ಸುಳ್ಳು ಕಲ್ಪನೆಗಳು?
⦁ ಇವೆಲ್ಲ ಕಟ್ಟುಕಥೆಗಳು, ಅತಿರಂಜಿತ ಕಲ್ಪನೆಗಳು.

ದುಃಖ ಭ್ರಮೆ

ನಿರೀಕ್ಷಿತವಾಗಿ, ಅಕಾಲಿಕವಾಗಿ ಆತ್ಮೀಯರೊಬ್ಬರನ್ನು ಕಳೆದುಕೊಂಡಾಗ, ಆ ವ್ಯಕ್ತಿಯ ಮನೆಯವರಿಗೆ ಮಾನಸಿಕ ಆಘಾತ ಉಂಟಾಗುತ್ತದೆ. ಅಸಹಜ ಸಾವು, ಕೊಲೆ, ಆತ್ಮಹತ್ಯೆ, ಅಪಘಾತ, ದುರಂತದಿಂದ ಆದ ಸಾವು ತೀವ್ರ ದುಃಖ ಭಾವೋದ್ವೇಗವನ್ನು ಮಾಡುತ್ತದೆ. ಭ್ರಮೆಗಳನ್ನು ಸೃಷ್ಟಿಸುತ್ತದೆ ಉದಾಹರಣೆಗೆ.

ಮಗುವನ್ನು ಕಳೆದುಕೊಂಡ ತಾಯಿಗೆ, ಮಗು ಸತ್ತಿಲ್ಲ, ಎಲ್ಲೋ ಹೋಗಿದೆ ಬರುತ್ತದೆ ಎನಿಸಲು ಪ್ರಾರಂಭವಾಗುತ್ತದೆ. ಮಗು ಅತ್ತಂತೆ, ಅಮ್ಮ ಹಸಿವು ತಿನ್ನಲು ಕೊಡು ಎಂದು ಕೇಳಿದಂತೆ,  ಅಂಗಳದಲ್ಲಿ ಆಟವಾಡುತ್ತಿರುವಂತೆ ಕಾಣುತ್ತದೆ.

ಪತಿಯನ್ನು ಕಳೆದುಕೊಂಡ ಹೆಂಡತಿಗೆ, ಗಂಡ ತನ್ನ ಹೆಸರನ್ನು ಕೂಗಿದಂತೆ, ಬಾಗಿಲು ತೆಗಿ ಬಂದಿದ್ದೇನೆ ಎಂದಂತೆ, ಹಾಲಿನಲ್ಲಿ ಕುಳಿತು ಪೇಪರ್ ಓದುತ್ತಾ ಕಾಫಿ ಕೊಡು ಎಂದು ಕೇಳಿದಂತೆ ಭಾಸವಾಗಬಹುದು, ಸತ್ತ ತಂದೆ,  ರೂಮಿನಲ್ಲಿ ಓಡಾಡಿದಂತೆ, ನನ್ನನ್ನು ವಾಕಿಂಗ್ ಕರೆದುಕೊಂಡು ಹೋಗಿ ಎಂದು ಕೇಳಿದಂತೆ, ಮಗ / ಮಗಳಿಗೆ ಕೇಳಿಸಬಹುದು, ಅಥವಾ ಕಣ್ಣಿಗೆ ಕಾಣಿಸಿಕೊಂಡು ಸಂಭಷಿಸಿದಂತೆ ಭ್ರಮೆಯಾಗುತ್ತದೆ.

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬರುವುದು ಬಹುತೇಕ ಜನರ ಅನುಭವ. ಅಪಘಾತದಲ್ಲಿ ಸತ್ತ ವ್ಯಕ್ತಿ ನೋವಿನಿಂದ  ಚೀರಾಡಿದಂತೆ ನನ್ನನ್ನು ಕಾಪಾಡಿ ಎಂದು ಬೇಡಿ ಕೊಂಡಂತೆ ಇತರರಿಗೆ ಭಾಸವಾಗಬಹುದು , ಹೀಗಾಗಿ ಸತ್ತ ವ್ಯಕ್ತಿಗಳ ಆತ್ಮಗಳು ಕೆಲವಾರು ದಿವಸಗಳು ಮನೆಯವರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಮಾತಾಡಿದಂತೆ ಅನುಭವವಾಗುವುದನ್ನು ಸಾಕಷ್ಟು ಜನ ಹೇಳುತ್ತಾರೆ, ಇದೇ ದೆವ್ವದ ಕಲ್ಪನೆಗೆ ನಾಂದಿ ಹಾಡಿರುವ ವಿದ್ಯಮಾನ, “ನನಗೆ ಅನ್ಯಾಯ ಮಾಡಿದವರನ್ನೆಲ್ಲ, ನಾನು ಸುಮ್ಮನೆ ಬಿಡುವುದಿಲ್ಲ, ಸತ್ತರು ದೆವ್ವವಾಗಿ ಕಾಡುತ್ತೇನೆ,  ಶಿಕ್ಷೆ ಕೊಟ್ಟು ನರಳುವಂತೆ ಮಾಡುತ್ತೇನೆ” ಎಂದು ಜನ ಹೇಳುತ್ತಾರೆ!

ಮೈಮೇಲೆ ದೆವ್ವ ಬರುವ ಪ್ರಕರಣಗಳು ಪ್ರಪಂಚದಾದ್ಯಂತ, ನಮ್ಮ ನಿಮಾನ್ಸ್ ಸಂಸ್ಥೆಯ ಮುಖಾಂತರ ಮೈಮೇಲೆ ದೆವ್ವ - ಭೂತ ಬರುವ ಪ್ರಕರಣಗಳ ಅಧ್ಯಯನ ಮಾಡಲಾಗಿದೆ. ಶೇಕಡ 75ರಷ್ಟು ಪ್ರಕರಣಗಳಲ್ಲಿ ಸ್ತ್ರೀಯರ ಮೇಲೆಯೇ ದೆವ್ವಗಳ ಆವಾಹನೆಯಾಗುತ್ತದೆ . 15 ರಿಂದ 40 ವರ್ಷದೊಳಗಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ. ಒಂದು ಸಾಮಾನ್ಯ ಚಿತ್ರವೆಂದರೆ, ಸ್ತ್ರೀಯ ದೇಹ ತೂಗಾಡಲು ಶುರುವಾಗುತ್ತದೆ, ಆಕೆ ತಲೆಯನ್ನು ಕೆದರಿಕೊಳ್ಳುತ್ತಾಳೆ . ಮೈಮೇಲಿನ ಬಟ್ಟೆಗಳ ಬಗ್ಗೆ ಆಕೆಗೆ ಗಮನವಿರುವುದಿಲ್ಲ, ಹೂಂಕರಿಸುತ್ತಾಳೆ. ಜೋರಾಗಿ ಕಿರುಚುತ್ತಾಳೆ ಇಲ್ಲವೇ ನರಳುತ್ತಾಳೆ, ಅದನ್ನು ಕಂಡವರು ದೆವ್ವ ಬಂದಿದೆ ಎಂದು ಊಹಿಸಿ (ಹಿಂದಿನ ಅನುಭವದಿಂದ) ‘ಯಾರು ನೀನು, ಏಕೆ ಬಂದಿದ್ದೀಯಾ, ನಿನಗೆ ಏನು ಬೇಕು’?. ಅಂತ ಕೇಳುತ್ತಾರೆ. ಆಗ ಸ್ತ್ರೀ ಗಹಗಹಿಸಿ ನಕ್ಕು 'ನಾನು ಗೌರಿ ' ಎನ್ನುತ್ತಾಳೆ, ಯಾವ ಗೌರಿ ಎಂದು ಕೇಳುವಾಗ ಮೂರು ತಿಂಗಳ ಹಿಂದೆ ಬಾವಿಗೆ ಬಿದ್ದು ಸತ್ತ ಗೌರಿ ಎಂದು ದೆವ್ವ ಉತ್ತರ ಕೊಡುತ್ತದೆ. ಪದ್ಮಳ ಮೇಲೆ ಏಕೆ ಬಂದೆ?, ಏನು ಬೇಕು? ಅವಳನ್ನು ಕಾಡಿಸಬೇಡ ಹೊರಟುಹೋಗು ಎನ್ನುತ್ತಾರೆ, ಕಾಡಿಸುತ್ತಿರುವವರು ಪದ್ಮಳ ಲೋಫರ್ ಗಂಡ, ತಾಟಕ್ಕೆ ಅತ್ತೆ. ಎಲ್ಲಿ ಕರೆಯಿರಿ ಅವರನ್ನು ರಕ್ತಕಾರಿ ಸಾಯುವಂತೆ ಮಾಡುತ್ತೇನೆ, ನನ್ನ ಸ್ನೇಹಿತೆ ಪದ್ಮಳ ತಂಟೆಗೆ ಬಂದರೆ ಅವರಿಗೆ ಸಾವೇ ಗತಿ ಎಂದು ಹೋಂಕರಿಸುತ್ತಾಳೆ. ಗಂಡ ಅತ್ತೆಯನ್ನು ಕೆಟ್ಟ ಮಾತುಗಳಲ್ಲಿ ಬಯ್ಯುತ್ತಾಳೆ, ಗಂಡ ಮತ್ತು ಅತ್ತೆ ತನ್ನೆದುರಿಗೆ ಬಂದು ಕ್ಷಮಾಪಣೆ ಕೇಳಬೇಕು ಎಂದು ದೆವ್ವ ತಾಕೀತು ಮಾಡುತ್ತದೆ. ಭಯದಿಂದ ಗಂಡ ಅತ್ತೆ ಕ್ಷಮೆ ಕೇಳುತ್ತಾರೆ, ಆಗ ಪದ್ಮ ಸುಸ್ತಾಗಿ ನೆಲಕ್ಕೆ ಒರಗಿ ಮಲಗುತ್ತಾಳೆ, ಸ್ವಲ್ಪ ಹೊತ್ತಿನ ನಂತರ ಕಣ್ಣುಬಿಟ್ಟು ನನಗೇನಾಯಿತು ಎಂದು ಕೇಳುತ್ತಾಳೆ. ನಡೆದಿದ್ದು ಒಂದು ಆಕೆಯ ನೆನಪಿನಲ್ಲಿರುವುದಿಲ್ಲ, ಇದು ಪುನರಾವರ್ತನೆಯಾಗುತ್ತದೆ.

ಸ್ತ್ರೀಯರು ತಮ್ಮ ಕಷ್ಟ ಸಂಕಟ ನೋವನ್ನು ಈ ರೀತಿಯಲ್ಲಿ ಹೊರಹಾಕುತ್ತಾರೆ. ಅವರ ಸುಪ್ತ ಮನಸ್ಸು ದೆವ್ವ ಮೈಮೇಲೆ ಬರುವ ನಂಬಿಕೆಯನ್ನು ಈ ರೀತಿ ಬಳಸಿಕೊಳ್ಳುತ್ತದೆ, ಪ್ರತಿಭಟನೆ ಮಾಡಿ, ಸಹಾನುಭೂತಿ ಗಳಿಸುತ್ತಾರೆಂದು ಮನಶಾಸ್ತ್ರಜ್ಞರು/ ಸಮಾಜಶಾಸ್ತ್ರಜ್ಞರು ತೀರ್ಮಾನಿಸಿದ್ದಾರೆ.

ದೆವ್ವ /ಭೂತ /ಪೀಡೆ /ಪಿಶಾಚಿ /ಪ್ರೇತ ಇತ್ಯಾದಿ ಹೆಸರಿನಿಂದ ನಾವು ಕರೆಯುವ ಸಂಗತಿ ಸತ್ಯವಲ್ಲ. ನಮ್ಮ ಕಲ್ಪನೆ ಹಾಗು ಸಮಾಜದ ಕಲ್ಪನೆ, ಸತ್ತ ಮೇಲೆ ಏನು ಇಲ್ಲ ಬೂದಿ ಅಥವಾ ಮಣ್ಣು ಮಾತ್ರ. ದೆವ್ವ ಇದಾವೆ ಎಂದು ಸಿನಿಮಾ/ ಟಿವಿನಲ್ಲಿ ತೋರಿಸಿದಾಗ, ಅದು ನಿಜವೆಂದೇ ಜನ ನಂಬುತ್ತಾರೆ, ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಸ್ಮಶಾನದ ಬಳಿ, ನಿರ್ಜನ ಪ್ರದೇಶದಲ್ಲಿ ದೆವ್ವ ನೋಡಿದೆ ಎಂದು ಭ್ರಮೆಗೆ ಒಳಗಾಗಿ ಹಾಗೆ ಹೇಳುತ್ತಾರಷ್ಟೆ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com