ನಿಂಗಮ್ಮ ತನ್ನ 4 ವರ್ಷದ ಮಗಳನ್ನು ಎತ್ತಿಕೊಂಡು ಬಂದವಳೇ “ಜಲ್ದಿ ನೋಡ್ರೀ, ನನ್ ಕೂಸು ಎಣ್ಣೆ ಕುಡ್ದುಬಿಟೈತಿ” ಎಂದಳು. “ಯಾವ ಎಣ್ಣೆ ನಿಂಗಮ್ಮ?” ನನ್ನ ತಲೆಯಲ್ಲಿ ಅವಳ ಗಂಡನ ತೀರ್ಥ (ಸಾರಾಯಿ) ಕುಡಿದಿದ್ದಾಳೆಯೇ ಎಂಬ ಅನುಮಾನ ಬಂತು.
ಒಳ್ಳೆಣ್ಣೆ, ಕೊಬ್ಬರಿ ಎಣ್ಣೆ. ಹರಳೆಣ್ಣೆ ಯಾವ ಎಣ್ಣೆಯನ್ನೋ ಕುಡಿದಿರಬಹುದು ಎಂದು ತರ್ಕಿಸುತ್ತಿದ್ದಾಗ ನಿಂಗಮ್ಮನೇ “ನೀವೇ ಕೆಮ್ಮಿನ ಎಣ್ಣೆ ಬರ್ದುಕೊಟ್ಟಿದ್ರಲ್ರೀ, ಯಜಮಾನಂಗ ಹೋದ ತಿಂಗ್ಳು. ಕೆಮ್ಮು ಬಂದಾಗ ತಂದಿದ್ವಿ” ಬಾಟಲಿಯನ್ನು ಹಿಡಿದು ಬಂದಿದ್ದಳು. ಅದು ತುಳಸಿಯಿಂದ ತಯಾರಿಸಿದ ಕೆಮ್ಮಿನ ಸಿರಪ್ ಆಗಿತ್ತು. ಮಗುವನ್ನು ಪರೀಕ್ಷಿಸಿ ನೋಡಿ ಅದೇನು ತೊಂದರೆ ಉಂಟು ಮಾಡುವುದಿಲ್ಲವೆಂದು ಹೇಳಿ ಕಳುಹಿಸಿ ಎಣ್ಣೆ ಎಂಬುದಕ್ಕೆ ‘ಔಷಧಿ’ಎಂಬ ಹೊಸ ಅರ್ಥವನ್ನು ನನ್ನ ನಿಘಂಟಿಗೆ ಸೇರಿಸಿಕೊಂಡೆ.
ಪಕ್ಕದ ಮನೆಯವರಿಗೆ ಕಣ್ಣು ಕೆಂಪಾಗಿದೆಯೆಂದು ಮದ್ರಾಸ್ ಐ ಆಗಿರಬಹುದೆಂದು ತರ್ಕಿಸಿ ರಜನಿ ಎಷ್ಟೋ ಕಾಲದಿಂದ ಮನೆಯಲ್ಲಿದ್ದ ಕಣ್ಣಿಗೆ ಹಾಕುವ ಮುಲಾಮನ್ನು ಕೊಟ್ಟಳು. ಅದು ಹಾಕಿದ ತಕ್ಷಣ ಉರಿ ಕಡಿಮೆಯಾಗುವ ಬದಲು ಕಣ್ಣು ಹೆಚ್ಚಾಗಿ ಊದಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ಆ ಮುಲಾಮು ಎಕ್ಸ್ ಪೈರಿ ಆಗಿ ಎಷ್ಟೋ ಕಾಲವಾಗಿತ್ತು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸೇನೋ ಒಳ್ಳೆಯದೇ ಆದರೆ ಅದರಿಂದ ಅವರಿಗೆ ತೊಂದರೆಯಾಗಬಾರದಲ್ಲ. ಅಲ್ಲದೇ ಔಷಧಿಗಳ ಬಳಕೆ ಕುರಿತು ಅರಿತಿರುವುದು ಬಹಳ ಮುಖ್ಯ. ಹೇಗೆಂದರೆ ಹಾಗೆ ಬಳಸಿದಲ್ಲಿ ಅನಾಹುತವಾಗುವುದೇ ಹೆಚ್ಚು.
ಔಷಧಿಗಳ ಬಗ್ಗೆ ಇವು ತಿಳಿದಿರಲಿ
ನಕಲಿ ಔಷಧಿ: ಔಷಧಿ ಕ್ರಿಯಾ ವೇದಿಕೆಯ ವರದಿಯ ಪ್ರಕಾರ ಇಂದು ಮಾರುಕಟ್ಟೆಯಲ್ಲಿ ಮಾರಾಟವಾಗುವ ಔಷಧಿಗಳಲ್ಲಿ ಶೇಕಡ 25ರಷ್ಟು ನಕಲಿ, ಆದ್ದರಿಂದ ಔಷಧಿ ಕಂಪನಿಯ ಹೆಸರು, ಟ್ರೇಡ್ ಮಾರ್ಕ ಗಮನಿಸಿ, ಔಷಧಿಯ ಗುಣಮಟ್ಟದ ಬಗ್ಗೆ ನಿಮಗೆ ಅನುಮಾನ ಬಂದರೆ ಔಷಧ ನಿಯಂತ್ರಕರಿಗೆ ದೂರುಕೊಡಿ.
ಕಣ್ಣಿಗೆ ಹಾಕುವ ಔಷಧಿಗಳು: ಕಣ್ಣಿಗೆ ಹಾಕುವ ಔಷಧಿ (ಹನಿ)ಯನ್ನು ಒಬ್ಬರಿಗೆ ಉಪಯೋಗಿಸಿರುವುದನ್ನು ಇನ್ನೊಬ್ಬರಿಗೆ ಬಳಸಬಾರದು. ಕಣ್ಣಿಗೆ ಹನಿ ಮತ್ತು ಆಯಿಂಟ್‍ಮೆಂಟ್ ಎರಡೂ ಹಾಕಬೇಕೆಂದಾಗ ಮೊದಲು ಹನಿ ಹಾಕಿ ನಂತರ ಆಯಿಂಟ್‍ಮೆಂಟ್ ಹಾಕಿ. ಕೆಲವು ಹನಿಗಳು ಮತ್ತು ಆಯಿಂಟ್‍ಮೆಂಟ್ ಹಾಕಿದಾಗ ಕಣ್ಣು ಮಂಜಾಗಬಹುದು. ಆದ್ದರಿಂದ ಈ ರೀತಿ ಆದರೆ ಆ ಅವಧಿಯಲ್ಲಿ ವಾಹನ ಜಾಲನೆ ಮಾಡಬಾರದು ಯಾವುದೇ ಹನಿ, ಆಯಿಂಟ್‍ಮೆಂಟ್ ಹಾಕಿದ ಕೂಡಲೇ ಕಣ್ಣುರಿ, ಕಣ್ಣುಗಳಲ್ಲಿ ನೀರು ಬರತೊಡಗಿದರೆ, ಕೆರೆತ ಉಂಟಾದರೆ ತಕ್ಷಣ ವೈದ್ಯರನ್ನು ನೋಡಿ.
ಚರ್ಮದ ಮೇಲೆ ಲೇಪಿಸುವ ಔಷಧಿಗಳು: ಯಾವುದೇ ಬಗೆಯ ಕ್ರೀಂ, ಲೋಶನ್, ಆಯಿಂಟ್‍ಮೆಂಟ್ ಚರ್ಮದ ಮೇಲೆ ಮಾತ್ರ ಉಪಯೋಗಿಸಬೇಕು. ಇವು ಕಣ್ಣಿಗೆ, ಮೂಗಿಗೆ, ಬಾಯಿಗೆ ಸೋಂಕದಂತೆ ಎಚ್ಚರ ವಹಿಸಿ. ಇವುಗಳನ್ನು ಬಳಸುವ ಮೊದಲು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಚರ್ಮದ ಭಾಗವನ್ನು ತೊಳೆದು ಸ್ವಚ್ಛಗೊಳಿಸಿ. ಒರೆಸಿ ನಂತರ ಔಷಧಿ ಹಚ್ಚಬೇಕು. ಔಷಧ ಹಚ್ಚಿಕೊಂಡ ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ಔಷಧವನ್ನು ಚರ್ಮದ ಮೇಲೆ ತೆಳುವಾಗಿ ಸವರಬೇಕು. ದಪ್ಪವಾಗಿ ಹಾಕಬೇಡಿ.
ಗರ್ಭಿಣಿಯರು: ಆರಂಭದ ಮೂರು ತಿಂಗಳು ಗರ್ಭಿಣಿಯರು ಯಾವುದೇ ಔಷಧಿ ಸೇವಿಸಬಾರದು. ಮಗುವಿಗೆ ದೇಹದ ಮುಖ್ಯ ಅಂಗಾಂಗಗಳು ಮೂಡುವುದರಿಂದ ಔಷಧಿಗಳ ದುಷ್ಟರಿಣಾಮವುಂಟಾಗಿ ಅಂಗವಿಕಲತೆ ಉಂಟಾಗಬಹುದು. ಯಾವುದೇ ಔಷಧಿಯನ್ನಾಗಲೀ ವೈದ್ಯರ ಸಲಹೆಯಿಲ್ಲದೆ ಬಳಸಬಾರದು.
ಕಿವಿಗೆ ಹಾಕುವ ಔಷಧಿಗಳು: ಕಿವಿ ಸೂಕ್ಷ್ಮ ಅಂಗ. ಕೈಗೆ ಸಿಕ್ಕಿದ ಪೆನ್ನು, ಪಿನ್ನು, ಪೆನ್ಸಿಲ್, ಲೋಹದ ಕಡ್ಡಿಗಳನ್ನು ಹಾಕಿಕೊಂಡು ಕಿವಿ ತಮಟೆ ರಂಧ್ರ ಮಾಡಿಕೊಳ್ಳುತ್ತಾರೆ. ಕಿವಿನೋವು, ಕಿವಿ ಸೋರುವಿಕೆ, ಕಿವಿ ಕಡಿತ ಇರುವಾಗ ವೈದ್ಯರ ಸಲಹೆಯಿಲ್ಲದೆ ಏನನ್ನೂ ಕಿವಿಗೆ ಹಾಕಬೇಡಿ.
ಹರೆಯದ ಹುಡುಗಿಯರು: ತಮ್ಮ ಸ್ತನಗಳ ಬೆಳವಣಿಗೆ ಸಾಲದೆಂದು ರಸದೂತದ ಮಾತ್ರೆಗಳನ್ನು ಸೇವಿಸುತ್ತಾರೆ. ದೇಹದಲ್ಲಿ ಸ್ವಾಭಾವಿಕ ರಸದೂತ ಕಡಿಮೆ ಸ್ರವಿಸುತ್ತಿದ್ದಲ್ಲಿ ಮತ್ತು ವೈದ್ಯರ ಸಲಹೆಯ ಮೇರೆಗೆ ಉಪಯೋಗಿಸಬೇಕೇ ಹೊರತು ಹಾಗೆಯೇ ಸ್ವಯಂ ಮಾತ್ರೆ ಸೇವಿಸಬಾರದು.
ಇನ್‍ಸುಲಿನ್: ಇನ್‍ಸುಲಿನ್ ಚರ್ಮದ ಕೆಳಗೆ ಇಂಜಕ್ಷನ್ ಮೂಲಕ ನೀಡುವಂತಹುದು. ರೋಗಿಯ ಮನೆಯವರೇ ಕಲಿತು ಇಂಜಕ್ಷನ್ ಕೊಡಬಹುದು. ಸ್ವಚ್ಛತೆ ಬಗ್ಗೆ ವಿಶೇಷ ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ ಇಂಜಕ್ಷನ್ ಚುಚ್ಚುವ ಜಾಗದಲ್ಲಿ ಸೋಂಕುಂಟಾಗಿ ಕೀವಾಗಬಹುದು. ಇನ್‍ಸುಲಿನ್ ಇಂಜಕ್ಷನ್ ಅನ್ನು ಫ್ರಿಜ್‍ನಲ್ಲಿಡಬೇಕು ಆದರೆ ಫ್ರೀಜರ್‍ನಲ್ಲಿಡಬಾರದು. ಫ್ರೀಜರ್‍ನಲ್ಲಿ ಇಟ್ಟರೆ ಇಂಜಕ್ಷನ್ ದ್ರವ ಹೆಪ್ಪುಗಟ್ಟಿ ಐಸ್ ತರಹ ಆಗಿ ಅದನ್ನು ಬಿಸಾಡಬೇಕಾಗುವುದು. ಬಳಸಬಾರದು. ಇನ್‍ಸುಲಿನ ಕೊಡುವುದಕ್ಕೆ ವಿಶೇಷ ಆಗಿ, ಸೂಜಿ ಸಿಗುತ್ತದೆ. ಅದನ್ನೇ ಬಳಸಬೇಕು.
ವಿಟಮಿನ್ ಮಾತ್ರೆಗಳು: ವಿಟಮಿನ್ ಕೊರತೆಯಿಂದ ಬಳಲುವವರು, ವಾಂತಿ, ಭೇದಿಯಾದಾಗ, ಕರುಳಿನ ಶಸ್ತ್ರಚಿಕಿತ್ಸೆಯಾದಾಗ ಆಹಾರ ಸೇವನೆ ಮಾಡಲಾಗುವುದಿಲ್ಲವಾದ್ದರಿಂದ, ಆಲ್ಕೋಹಾಲ್ ಮಿತಿ ಮೀರಿದ ಸೇವನೆಯಿಂದ ನಿರ್ದಿಷ್ಟ ವಿಟಮಿನ್ ಕೊರತೆಯುಂಟಾದಾಗ ಮಾತ್ರ ವಿಟಮಿನ್ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ವಿಟಮಿನ್ ಕೊರತೆ ಇಲ್ಲದಿರುವಾಗ ಮಾತ್ರೆ ಸೇವಿಸುವುದು ವ್ಯರ್ಥ. ಸುಮ್ಮನೆ ಹಣದ ಖರ್ಚು, ಅಲ್ಲದೇ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿಟಮಿನ್ ಇರುವುದು ಕೂಡ ಅಪಾಯಕಾರಿ ಆಗುತ್ತದೆ. ಸಾಮಾನ್ಯವಾಗಿ ನಾವು ಸೇವಿಸುವ ಆಹಾರಗಳಲ್ಲಿ ವಿಟಮಿನ್, ಖನಿಜಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಆದ್ದರಿಂದ ವಿಟಮಿನ್ ಮಾತ್ರೆಗಳ ಸೇವನೆ ಅನವಶ್ಯಕ. ಅಗತ್ಯಕ್ಕಿಂತ ಹೆಚ್ಚು ವಿಟಮಿನ್ ತೆಗೆದುಕೊಂಡಲ್ಲಿ ಮುಲಮೂತ್ರಗಳ ಮೂಲಕ ವಿಸರ್ಜನೆಯಾಗುತ್ತದೆ ಇಲ್ಲವೇ ದೇಹದೊಳಗೆ ಹೀರಲ್ಪಟ್ಟರೆ ಅನಾರೋಗ್ಯ ಉಂಟಾಗುತ್ತದೆ. ಆದ್ದರಿಂದ ಅವಶ್ಯಕತೆಯಿರುವಾಗ ಮಾತ್ರ ಮಾತ್ರೆ ಸೇವಿಸಬೇಕು. ಯಾವುದೇ ಕಾಯಿಲೆ ಇಲ್ಲದ, ಪ್ರತಿದಿನ ಸಮತೋಲನ ಆಹಾರ ಸೇವಿಸುವವರಿಗೆ ಯಾವುದೇ ಟಾನಿಕ್, ಮಾತ್ರೆಯ ಅವಶ್ಯಕತೆಯಿಲ್ಲ. ಪೋಷಕಾಂಶಗಳುಳ್ಳ ಆಹಾರ ಸೇವನೆ ಬಹಳ ಮುಖ್ಯ.
ಆಯುರ್ವೇದ ಔಷಧಿಗಳ ಬಳಕೆ:
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಪ್ರಕಾರ, ಮನುಷ್ಯರಿಗೆ ಬರುವ ಬಹುತೇಕ ರೋಗಗಳನ್ನು ನಿಭಾಯಿಸಲು 350 ಅವಶ್ಯಕ ಮದ್ದುಗಳು ಸಾಕು. ಆದರೆ ನಮ್ಮ ದೇಶದ ಮಾರುಕಟ್ಟೆಯಲ್ಲಿ ಸುಮಾರು 75,000 ಔಷಧಿಗಳು ಮಾರಾಟವಾಗುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಪಾಯಕಾರಿ ಎಂದು ನಿಷೇಧಿಸಲ್ಪಟ್ಟಿರುವ ಔಷಧಿಗಳೂ ಇಲ್ಲಿ ಅತ್ಯಂತ ಸುಲಭವಾಗಿ ದೊರೆಯುತ್ತವೆ.
ಔಷಧದ ದುರುಪಯೋಗದಿಂದ ಮತ್ತಷ್ಟು ನೋವು, ಹಣ, ಸಮಯ, ವ್ಯರ್ಥವಾಗುತ್ತದೆ. ಕಾಯಿಲೆ ನಿವಾರಣೆಗೆ ನೆರವಾಗಬೇಕಾದ ಔಷಧಿಗಳು ಮತ್ತೊಂದು ರೋಗ ಉಂಟುಮಾಡಬಹುದು. ಆದ್ದರಿಂದ ಯಾವುದೇ ಔಷಧಿ ಬಳಸುವಾಗ ಅದು ಹೇಗೆ ಕೆಲಸ ಮಾಡುತ್ತದೆ. ಸಾಧಕ ಬಾಧಕಗಳೇನು, ಯಾವ ರೀತಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂಬುದನ್ನು ತಿಳಿದಿರಬೇಕು.
ಡಾ|| ವಸುಂಧರಾ ಭೂಪತಿ
bhupathivasundhara@gmail.com
Advertisement