ರಕ್ತ ವರ್ಗಾವಣೆ; ನಿಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿರಕ್ತದಲ್ಲಿ ಪ್ಲಾಸ್ಮಾ ಎಂಬ ಹಳದಿ ದ್ರವದಲ್ಲಿ ಮೂರು ವಿಧದ ಕಣಗಳು ತೇಲುತ್ತಿರುತ್ತವೆ. 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತ ಕಣಗಳು 3. ಪ್ಲೇಟ್‍ಲೆಟ್‍ಗಳು, ಇವುಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.
ರಕ್ತದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ (ಸಂಗ್ರಹ ಚಿತ್ರ)
ರಕ್ತದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ (ಸಂಗ್ರಹ ಚಿತ್ರ)
Updated on

ರಕ್ತ-ನಮ್ಮ ದೇಹದಲ್ಲಿ ಸಂಚರಿಸುವ ಕೆಂಪು ಬಣ್ಣದ ದ್ರವವೇ ರಕ್ತ. ವಯಸ್ಕ ವ್ಯಕ್ತಿಯಲ್ಲಿ ಸುಮಾರು 4 ರಿಂದ 5 ಲೀಟರ್ ರಕ್ತ ಸದಾ ಪರಿಭ್ರಮಿಸುತ್ತಿರುತ್ತದೆ. ಹೊಸ ರಕ್ತದ ಉತ್ಪಾದನೆ ಮತ್ತು ಹಳೆಯ ರಕ್ತದ ವಿಸರ್ಜನೆ ಇವುಗಳಿಂದ ರಕ್ತದ ಸಮಗ್ರ ಪ್ರಮಾಣ ಸಂರಕ್ಷಿತವಾಗುತ್ತದೆ. ರಕ್ತದಲ್ಲಿ ಪ್ಲಾಸ್ಮಾ ಎಂಬ ಹಳದಿ ದ್ರವದಲ್ಲಿ ಮೂರು ವಿಧದ ಕಣಗಳು ತೇಲುತ್ತಿರುತ್ತವೆ. 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತ ಕಣಗಳು 3. ಪ್ಲೇಟ್‍ಲೆಟ್‍ಗಳು, ಇವುಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.

ಕೆಂಪು ರಕ್ತ ಕಣಗಳು

ಇವು ವೃತ್ತಾಕಾರದ ತಟ್ಟೆಯಂತಿರುವ ಸೂಕ್ಷ್ಮ ಕಣಗಳು, ಒಂದು ಘನ ಮಿಲಿ ಲೀಟರ್ ರಕ್ತದಲ್ಲಿ ಸುಮಾರು 5 ಮಿಲಿಯನ್‍ಗಳಷ್ಟು ಕೆಂಪು ರಕ್ತ ಕಣಗಳಿರುತ್ತವೆ. ಆರೋಗ್ಯವಂತ ವ್ಯಕ್ತಿಯಲ್ಲಿ 4.5 ಮಿಲಿಯನ್ ಕೆಂಪು ರಕ್ತ ಕಣಗಳಿರುತ್ತವೆ. ಹಿಮೊಗ್ಲೊಬಿನ್‍ನಿಂದಾಗಿ ರಕ್ತ ಕಣಗಳ ಬಣ್ಣ ಕೆಂಪಾಗಿರುತ್ತದೆ. ಹಿಮೊಗ್ಲೊಬಿನ್‍ನಲ್ಲಿ ಪ್ರೊಟಿನ್ ಮತ್ತು ಕಬ್ಬಿಣದಂಶವಿರುತ್ತದೆ. ಹಿಮೊಗ್ಲೊಬಿನ್‍ಗೆ ಆಮ್ಲಜನಕ ಅತ್ಯವಶ್ಯಕ. ಶ್ವಾಸಕೋಶದ ಮೂಲಕ ರಕ್ತ ಹರಿಯುತ್ತಿರುವಾಗ ಅಲ್ಲಿರುವ ಗಾಳಿಯಲ್ಲಿರುವ ಆಮ್ಲಜನಕವನ್ನು ತೆಗೆದುಕೊಳ್ಳುತ್ತದೆ. ಜೀವಕೋಶಗಳ ಮೂಲಕ ರಕ್ತ ಹರಿಯುವಾಗ ಕೆಂಪು ರಕ್ತ ಕಣಗಳು ತಮ್ಮಲ್ಲಿರುವ ಆಮ್ಲಜನಕದ ಒಂದು ಭಾಗವನ್ನು ಅವುಗಳಿಗೆ ನೀಡುತ್ತದೆ. ಅದೇ ಸಮಯದಲ್ಲಿ ಜೀವಕೋಶಗಳಿಂದ ಬಿಡುಗಡೆಯಾದ ಇಂಗಾಲದ ಡೈಆಕ್ಸೈಡ್‍ನ್ನು ತೆಗೆದುಕೊಳ್ಳುತ್ತದೆ. ಒಂದು ರಕ್ತ ಕಣ ಸರಾಸರಿ 3 ರಿಂದ 4 ತಿಂಗಳವರೆಗೆ ಈ ಕಾರ್ಯ ಮಾಡುತ್ತದೆ. ಅನಂತರ ಯಕೃತ್ ಮತ್ತು ಪ್ಲೀಹಗಳು ಈ ಕೆಂಪು ರಕ್ತ ಕಣವನ್ನು ಒಡೆಯುತ್ತವೆ. ಇಲ್ಲಿ ಒಡೆದು ನಷ್ಟವಾಗಿ ಹೋದ ಕಣಗಳನ್ನು ಭರ್ತಿ ಮಾಡಲು ಮತ್ತೆ ಹೊಸ ಕಣಗಳು ಉತ್ಪತ್ತಿಯಾಗುತ್ತವೆ.

ಬಿಳಿ ರಕ್ತ ಕಣಗಳು
ಬಿಳಿಯ ರಕ್ತ ಕಣಗಳು ಕೆಂಪು ರಕ್ತ ಕಣಗಳಿಗಿಂತ ಗಾತ್ರದಲ್ಲಿ ದೊಡ್ಡವು. ಇವುಗಳಿಗೆ ಬಣ್ಣವಿರುವುದಿಲ್ಲ. ನಿರ್ದಿಷ್ಟ ರೂಪವಿಲ್ಲ. ಅವುಗಳಷ್ಟು ಹೆಚ್ಚು ಸಂಖ್ಯೆಯಲ್ಲಿಲ್ಲ. ಬಿಳಿ ಮತ್ತು ಕೆಂಪು ಕಣಗಳ ಪ್ರಮಾಣ 1:500. ಒಂದು ಕ್ಯುಬಿಕ್ ಮಿ.ಲೀ. ರಕ್ತದಲ್ಲಿ 8 ರಿಂದ 10ಸಾವಿರ ಇರುತ್ತವೆ. ಇವು ಸೋಂಕಿನ ವಿರುದ್ಧ ಹೋರಾಡಬಲ್ಲ ಶರೀರದ ಮುಖ್ಯ ರಕ್ಷಣಾ ಪಡೆಗಳಾಗಿವೆ.

ಪ್ಲೇಟ್‍ಲೆಟ್‍ಗಳು
ಇವುಗಳ ಸಂಖ್ಯೆ ಕಡಿಮೆ. ಕೆಂಪು ರಕ್ತ ಕಣಕ್ಕಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಒಂದು ಕ್ಯುಬಿಕ್ ಮಿ.ಲೀ. ರಕ್ತದಲ್ಲಿ ಇವುಗಳ ಸಂಖ್ಯೆ 3 ರಿಂದ 4 ಲಕ್ಷ, ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಇವು ಅತ್ಯಗತ್ಯ.

ರಕ್ತದ್ರವ (ಪ್ಲಾಸ್ಮಾ)
ರಕ್ತದ ದ್ರವ ಭಾಗವಾಗಿರುವ ಇದರಲ್ಲಿ ರಕ್ತ ಕಣಗಳು ತೇಲುತ್ತಿರುತ್ತವೆ. ಇದರ ಬಣ್ಣ ತೆಳು ಹಳದಿ. ಪ್ಲಾಸ್ಮಾವು 90 ಭಾಗ ದ್ರವ ಮತ್ತು 10 ಭಾಗ ಘನ ವಸ್ತುಗಳನ್ನು ಒಳಗೊಂಡಿರುವುದರಿಂದ ರಕ್ತವು ರಭಸವಾಗಿ ಚಲಿಸಲು ಸಾಧ್ಯವಾಗುತ್ತವೆ. ರಕ್ತದ್ರವದಲ್ಲಿ ಪ್ರೊಟಿನ್‍ಗಳು ಮೂರು ಬಗೆಯಲ್ಲಿರುತ್ತವೆ. ಅಲ್ಬುಮಿನ್, ಗ್ಲಾಬುಲಿನ್ ಮತ್ತು ಫೈಬ್ರಿನೋಜೆನ್.

ರಕ್ತದ ಗುಂಪುಗಳು ಮತ್ತು ರಕ್ತ ವರ್ಗಾವಣೆ
ಎ, ಬಿ, ಎಬಿ, ಮತ್ತು ಓ ಎಂಬುದಾಗಿ 4 ಬಗೆಯ ರಕ್ತದ ಗುಂಪುಗಳಿವೆ. ರಕ್ತದ ಪೂರಣೆ ಬಳಕೆಗೆ ಬಂದ ಹೊಸದರಲ್ಲಿ ರೋಗಿಗೆ ಬೇರೆಯವರ ರಕ್ತ ಹೊಂದಿಕೊಳ್ಳದೇ ಸಾವು ಸಂಭವಿಸುತ್ತಿದ್ದುದು ಸಾಮಾನ್ಯವಾಗಿತ್ತು. ರಕ್ತ ಪಡೆದವಳ ‘ಸೀರಂ’ ಜೊತೆ ಕೊಟ್ಟವಳ ರಕ್ತ ಹೊಂದಿಕೆಯಾಗದಿದ್ದಾಗ ಆತನ ಕೆಂಪು ರಕ್ತ ಕಣಗಳು ಒಟ್ಟಿಗೆ ಸೇರಿ ಹೆಪ್ಪುಗಟ್ಟುತ್ತವೆ. ಈ ಪ್ರತಿಕ್ರಿಯೆಗಳನ್ನು ‘ಅಗ್ಲುಟಿನೇಷನ್’ ಎನ್ನಲಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿರುವ ‘ಅಗ್ಲುಟಿನೋಜೆನ್’ ಎಂಬ ವಸ್ತು ಇವೆರಡರ ಸಂಯೋಗವೇ ಈ ಪ್ರತಿಕ್ರಿಯೆಗೆ ಕಾರಣ, ರಕ್ತ ಸ್ವೀಕರಿಸುವವನ ಸೀರಂ ಜೊತೆಗೆ ದಾನಿಯ ಕೆಂಪು ರಕ್ತ ಕಣಗಳು ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಂಡರೆ ಸಾಕು. ಏಕೆಂದರೆ ರಕ್ತದ ಪೂರಣೆಯಲ್ಲಿ ದಾನಿಯ ಸೀರಂ ತೆಳುವಾಗುತ್ತಾದ್ದರಿಂದ ಸ್ವೀಕರಿಸುವವನ ಕೆಂಪು ಕಣಗಳು ಇದನ್ನು ಹೆಪ್ಪುಗಟ್ಟಿಸಲಾರವು.

ರಕ್ತದಲ್ಲಿ ಎ ಮತ್ತು ಬಿ ಎರಡು ಬಗೆಯ ಅಗ್ಲುಟಿನೊಜೆನ್‍ಗಳಿರುತ್ತವೆ. ವ್ಯಕ್ತಿ ತನ್ನ ಕೆಂಪು ರಕ್ತ ಕಣಗಳಲ್ಲಿ ‘ಎ’ ಅಗ್ಲಟಿನೊಜೆನ್ ಹೊಂದಿದ್ದರೆ ಆ ಗುಂಪಿಗೆ ಸೇರುತ್ತದೆ. ‘ಬಿ’ ಅಗ್ಲುಟಿನೊಜೆನ್ ಹೊಂದಿದ್ದರೆ ‘ಬಿ’ ಗುಂಪಿಗೆ ಸೇರುತ್ತದೆ. ‘ಎ’ ಮತ್ತು ‘ಬಿ’ ಎರಡೂ ಅಂಶಗಳನ್ನು ಹೊಂದಿದ್ದರೆ ‘ಎಬಿ’ ಗುಂಪಿಗೆ ಸೇರುತ್ತದೆ. ಈ ಎರಡರಲ್ಲಿ ಯಾವ ಅಂಶವೂ ಇಲ್ಲದಿದ್ದರೆ ‘ಓ’ ಗುಂಪಿಗೆ ಸೇರುತ್ತದೆ.

‘ಎ’ ಗುಂಪು ಅಥವಾ ‘ಎಬಿ’ ಗುಂಪಿನವರ ರಕ್ತವನ್ನು ‘ಬಿ’ ಗುಂಪಿನವರಿಗೆ ಕೊಟ್ಟಲ್ಲಿ ಅಥವಾ ‘ಬಿ’ ಮತ್ತು ‘ಎಬಿ’ ಗುಂಪಿನ ರಕ್ತವನ್ನು ‘ಎ’ ಗುಂಪಿನವರಿಗೆ ಕೊಟ್ಟಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದರ ಪರಿಣಾಮ ಗಂಭೀರ ಸ್ವರೂಪದ್ದಾಗಿರುತ್ತದೆ. ‘ಓ’ ಗುಂಪಿನ ರಕ್ತದಲ್ಲಿ ಹೆಪ್ಪುಗಟ್ಟಿಸುವ ಅಂಶಗಳಿಲ್ಲ. ಆದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ‘ಓ’ ಗುಂಪಿನ ರಕ್ತವನ್ನು ಯಾವ ಗುಂಪಿನವರಿಗಾದರೂ ಕೊಡಬಹುದು. ‘ಓ’ ಗುಂಪಿನ ವ್ಯಕ್ತಿಗಳು ಎಲ್ಲರಿಗೂ ದಾನಿಗಳಾಗಬಹುದು (Universal Donors). ಅದರಂತೆ ಎಬಿ ಗುಂಪಿನ ವ್ಯಕ್ತಿ ಯಾವ ಗುಂಪಿಗೆ ಸೇರಿದ ದಾನಿಗಳಿಂದಾದರೂ ರಕ್ತ ಪಡೆಯಬಹುದು. ಎಲ್ಲರಿಂದ ರಕ್ತ ಸ್ವೀಕರಿಸಬಹುದಾದ್ದರಿಂದ ‘Universal recipient.  ಏಕೆಂದರೆ ಇವನ ರಕ್ತದ ಸೀರಂನಲ್ಲಿ ಅಗ್ಲುಟಿನಿನ್ ಇರುವುದಿಲ್ಲ.

ರಕ್ತಪೂರಣೆಯ ಸಂದರ್ಭದಲ್ಲಿ ರೋಗಿಯ ಮತ್ತು ದಾನಿಯ ರಕ್ತದ ಗುಂಪು ತಿಳಿದು ಅವುಗಳನ್ನು ‘ಕ್ರಾಸ್‍ಮ್ಯಾಚ್’ ಮಾಡಿ ರಕ್ತದ ಬಿಂದುವನ್ನಿರಿಸಿ ನಾಲ್ಕು ಬಗೆಯ ರಕ್ತ ಗುಂಪುಗಳಿಗೆ ಸೇರಿದ ಸೀರಂ ಜೊತೆಗೆ ಬೆರೆಸಬೇಕು. ರಕ್ತದ ಪೂರಣೆಯ ಸಂದರ್ಭದಲ್ಲಿ ಅದೇ ಗುಂಪಿನ ರಕ್ತವನ್ನು ಬಳಸಬೇಕು.

ಆರ್ ಎಚ್ ಫ್ಯಾಕ್ಟರ್
ಆರ್ ಎಚ್ ಅಂಶಗಳು ವಂಶವಾಹಿನಿಗಳನ್ನು ಮತ್ತು ತಂದೆ-ತಾಯಿ ಯಾರೆಂದು ನಿರ್ಧರಿಸಲು ಮುರ್ಖಯವಾಗುತ್ತವೆ. ಆರ್ ಎಚ್ ಎಂಬುದು ರಿಸೆಸ್ (Rhesus) ಶಬ್ದದಿಂದ ಬಂದಿದೆ. ಪ್ರಪ್ರಥಮ ಬಾರಿಗೆ ರಿಸೆಸ್ ಎಂಬ ಮಂಗನಲ್ಲಿ ಈ ಅಂಶ ಇರುವುದನ್ನು ಗುರುತಿಸಲಾಯಿತು. ತಂದೆ ಆರ್ ಎಚ್ ಪಾಸಿಟಿವ್ ಆಗಿ, ತಾಯಿ ಆರ್ ಎಚ್ ನೆಗೆಟಿವ್ ಆಗಿದ್ದಲ್ಲಿ ಭ್ರೂಣ ಆರ್ ಎಚ್ ಪಾಸಿಟಿವ್ ಆಗಿರಬಹುದು. ಇಂತಹ ಮಗು ತಾಯಿಯಲ್ಲಿ ಆರ್ ಎಚ್ ಅಂಶದ ವಿರುದ್ದ ಆಂಟಿಬಾಡಿ ಉತ್ಪತ್ತಿಯಾಗಲು ಕಾರಣವಾಗುತ್ತದೆ. ತಾಯಿಯ ‘ಮಾಸು’ವಿನ ಮೂಲಕ ಈ ಆಂಟಿಬಾಡಿಗಳು ಭ್ರೂಣಕ್ಕೆ ವರ್ಗಾವಣೆಯಾಗಿ ಅದರ ಕೆಂಪು ರಕ್ತ ಕಣ ನಾಶಪಡಿಸಿ ಭ್ರೂಣಕ್ಕೆ ಮಾರಕವಾಗುತ್ತದೆ. ಆಕೆಗೆ ಯಾವುದೇ ಕಾರಣದಿಂದ ಮುಂದಿನ ಗರ್ಭಧಾರಣೆಯಲ್ಲಿ ರಕ್ತ ಕೊಡಬೇಕಾಗಿ.  ಬಂದಾಗ ಆರ್ ಎಚ್ ಪಾಸಿಟಿವ್ ರಕ್ತಕೊಟ್ಟಲ್ಲಿ ಆಕೆ ಮರಣವನ್ನಪ್ಪಬಹುದು. ಆದ್ದರಿಂದ ಆಕೆಗೆ ಆರ್ ಎಚ್ ನೆಗೆಟಿವ್ ರಕ್ತವನ್ನೇ ಕೊಡಬೇಕು.

ರಕ್ತದ್ರವ (ಪ್ಲಾಸ್ಮಾ) ಪೂರಣೆ
ರಕ್ತ ತಕ್ಷಣ ದೊರೆಯದಿದ್ದಲ್ಲಿ ರಕ್ತ ಕಣಗಳಿಗಿಂತ ರಕ್ತದ ಮೊತ್ತದ ಅಗತ್ಯವಿರುವಾಗ ರಕ್ತದ ಪ್ಲಾಸ್ಮಾವನ್ನೇ ಪೂರಣೆ (Transfusion) ಮಾಡುತ್ತಾರೆ. ತೀವ್ರ ಸುಟ್ಟಗಾಯಗಳಾದಾಗ, ಯುದ್ಧದಲ್ಲಿ ಆದ ಗಾಯಗಳಲ್ಲಿ, ಸರ್ಜಿಕಲ್ ಷಾಕ್ ಆದಾಗ ಪ್ಲಾಸ್ಮಾ ಬಳಕೆ ಉಪಯುಕ್ತ. ಸೆಂಟ್ರಿಫ್ಯೂಜ್ ಮಾಡಿದ ನಂತರ ಕೆಂಪು ರಕ್ತ ಕಣಗಳೆಲ್ಲ ತಳದಲ್ಲಿ ಉಳಿದು ಪ್ಲಾಸ್ಮಾ ಮೇಲ್ಭಾಗದಲ್ಲಿ ಬೇರೆಯಾಗಿ ನಿಲ್ಲುತ್ತದೆ. ಮುಖ್ಯವಾದ ಮತ್ತು ಅನುಕೂಲಕರ ಸಂಗತಿಯೆಂದರೆ ಪ್ಲಾಸ್ಮಾದಲ್ಲಿ ಕೆಂಪು ರಕ್ತ ಕಣಗಳು ಇಲ್ಲದಿರುವುದರಿಂದ ಇದನ್ನು ಗುಂಪು ನೋಡದೆಯೇ ಮ್ಯಾಚ್ ಮಾಡದೇ ರೋಗಿಯ ರಕ್ತಕ್ಕೆ ಪೂರಣೆ ಮಾಡಬಹುದು. ಪ್ಲಾಸ್ಮಾವನ್ನು ಒಣಗಿಸಬಹುದು. ಶೈತ್ಯೀಕರಿಸಬಹುದು. ಅಧಿಕ ಸಮಯ ಸಂರಕ್ಷಿಸಬಹುದು ಒಣಗಿದ ಪ್ಲಾಸ್ಮಾವನ್ನು ಸಂಸ್ಕರಿಸಿದ ನಿರ್ದಿಷ್ಟ ದ್ರವದಲ್ಲಿ ಕರಗಿಸಿ ತಕ್ಷಣವೇ ರೋಗಿಗೆ ಬಳಸಬಹುದು.

ರಕ್ತ ದಾನ
ರಕ್ತ ದಾನ ಮಾಡುವುದು ಜೀವದಾನ ಮಾಡಿದಂತೆ, ರಕ್ತ ಪೂರಣ ವ್ಯವಸ್ಥೆಯಿಲ್ಲದ ಕಾಲದಲ್ಲಿ ಎಷ್ಟೋ ರೋಗಿಗಳು ಸಾವನ್ನಪ್ಪುತ್ತಿದ್ದವು. ಶಸ್ತ್ರಕ್ರಿಯೆಯ ಸಂದರ್ಭದಲ್ಲಿ, ಅಪಘಾತದಿಂದಾಗಿ ತೀವ್ರ ರಕ್ತಸ್ತಾವ, ತೀವ್ರ ರಕ್ತಹೀನತೆ, ಹೆರಿಗೆಯ ಸಮಯದಲ್ಲಿ ರಕ್ತಸ್ರಾವ, ಕ್ಯಾನ್ಸರ್ ರೋಗಿಗಳಿಗೆ, ಹಿಮೊಫಿಲಿಯಾ, ಥೆಲಸಿಮಿಯಾ ಮುಂತಾದ ರಕ್ತಸಂಬಂಧಿ ರೋಗಗಳಿಂದ ಬಳಲುವ ಯಾರಿಗಾದರೂ ರಕ್ತದ ಅವಶ್ಯಕತೆ ಬೀಳಬಹುದು. ಮಾನವ ರಕ್ತಕ್ಕೆ ಪರ್ಯಾಯ ಬೇರಾವುದೂ ಇಲ್ಲ. ಇದನ್ನು ಕೃತಕ ರೀತಿಯಲ್ಲಿ ತಯಾರಿಸಲು ಸಾಧ್ಯವಿಲ್ಲ. ರಕ್ತವನ್ನು ತುಂಬಾ ದಿನಗಳ ಕಾಲ ಸಂಗ್ರಹಿಸಿಡಲಾಗುವುದಿಲ್ಲ. ರಕ್ತ ದಾನ ಮಾಡಲು 17 ವರ್ಷ ತುಂಬಿರಬೇಕು. 50 ಕೆ.ಜಿ. ತೂಕವಿರಬೇಕು. ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದಾಗಿದೆ. ರಕ್ತ ದಾನ ಸಮಯದಲ್ಲಿ ದಾನಿಯ ಆರೋಗ್ಯ ತಪಾಸಣೆ ಮಾಡುತ್ತಾರೆ. ರಕ್ತದ ಗ್ರೂಪ್, ಹಿಮೊಗ್ಲೋಬಿನ್ ಅಂಶ, ಹೆಪಟೈಟಿಸ್ ಬಿ, ಹೆಪಟೈಟಿಸ್ ಎ, ಸಿ. ಇ, ಮಲೇರಿಯಾ, ಎಚ್, ಐ.ವಿ ಮತ್ತು ಲೈಂಗಿಕ ರೋಗಗಳಿಂದ ಮುಕ್ತವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ದಾನಿಯಿಂದ ರಕ್ತ ಸಂಗ್ರಹಿಸಲು ಇಪ್ಪತ್ತು ನಿಮಿಷಗಳು ಸಾಕು.

ರಕ್ತ ಭಂಡಾರ
ರಕ್ತ ಭಂಡಾರಗಳು ವಿಕ್ಟೋರಿಯಾ, ಸೇಂಟ್ ಮಾರ್ಥಾಸ್ ಮತ್ತು ನಿಮ್ಹಾನ್ಸ್‍ನಲ್ಲಿ ಆರಂಭವಾದವು. ಪ್ರಸ್ತುತ ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ರಕ್ತ ಭಂಡಾರಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಪ್ರಸ್ತುತ ಎಲ್ಲ ಪ್ರಮುಖ ಆಸ್ಪತ್ರೆಗಳಲ್ಲಿಯೂ ರಕ್ತ ಭಂಡಾರಗಳಿಗವೆ. ಖಾಸಗಿಯಾಗಿಯೂ ಇರುವುದಲ್ಲದೇ ಕೆಲವು ಸೇವಾ ಸಂಸ್ಥೆಗಳು ರಕ್ತ ಭಂಡಾರಗಳನ್ನು ನಡೆಸುತ್ತಿವೆ. ಹಿಂದಿ ಚಲನಚಿತ್ರ ನಟ ಅಮಿತಾಭ್ ಬಚ್ಚನ್ ಕೂಲಿ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಮಾರಣಾಂತಿಕ ಪೆಟ್ಟು ತಿಂದಾಗ ಆತನನ್ನು ಉಳಿಸಲು ಬೇಕಾದ ‘ಫೆರೆಸಿಸ್’ ವ್ಯವಸ್ಥೆ ಆಗ ಬೆಂಗಳೂರಿನಲ್ಲಿ ಇರಲಿಲ್ಲ. (‘ಫೆರೆಸಿಸ್’ ಎಂದರೆ ರಕ್ತದಲ್ಲಿರುವ ಕಣಗಳನ್ನು ಬೇರ್ಪಡಿಸಿ ಬೇರೆಬೇರೆ ಪ್ರತ್ಯೇಕಿಸಿ ನೀಡುವ ವ್ಯವಸ್ಥೆ). ಆಗ ಇಡೀ ದೇಶವೇ ಬೆಂಗಳೂರಿನ ಕಡೆಗೆ ಅನುಕಂಪದಿಂದ ದೃಷ್ಟಿ ನೆಟ್ಟಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲವೆ ಎಂದು ಆಶ್ಚರ್ಯಪಟ್ಟಿತ್ತು. ಈಗ ಪ್ರಸ್ತುತ ಫೆರೆಸಿಸ್ ಸೌಲಭ್ಯ ಅನೇಕ ಕಡೆ ದೊರೆಯುತ್ತದೆ. ಇವುಗಳಲ್ಲಿ ಟಿಟಿಕೆ ರೋಟರಿ ಹಾಗೂ ಎಂ.ಎಸ್. ರಾಮಯ್ಯ ಆಸ್ಪತ್ರೆಗಳು ಪ್ರಮುಖವಾದವುಗಳು.

ಡಾ. ವಸುಂಧರಾ ಭೂಪತಿ
bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com