ಹೈಕಮಾಂಡ್ ಗೆ ಉತ್ತರ ಸಿಗದ ಪ್ರದೇಶವಾಗಿರುವ ಯು.ಪಿ; ಸಂಘದ ಒತ್ತಡಕ್ಕೆ ಮಣಿದ ಮೋದಿ-ಶಾ! (ಅಂತಃಪುರದ ಸುದ್ದಿಗಳು)

- ಸ್ವಾತಿ ಚಂದ್ರಶೇಖರ್ದೇಶದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ 2022ರಲ್ಲಿ ಹೊಸ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮೋದಿ- ಅಮಿತ್ ಶಾ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮೋದಿ- ಅಮಿತ್ ಶಾ
Updated on

ದೇಶದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ 2022ರಲ್ಲಿ ಹೊಸ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ.

ಉತ್ತರ ಪ್ರದೇಶ ಗೆದ್ದರೆ ದೇಶ ಗೆದ್ದ ಹಾಗೆ ಅನ್ನುವುದು ಮುಂಚಿನ ವಾಡಿಕೆ. ಕಳೆದ 10 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಯಾರು ಗೆಲ್ಲುತ್ತಾರೋ ಅವರು ರಾಜಕೀಯವಾಗಿ ಉತ್ತರ ಭಾರತ ಗೆದ್ದ ಹಾಗೆ ಎನ್ನಬಹುದು. ಇನ್ನು ಈ ಬಾರಿ ನಡೆಯುವ ಚುನಾವಣೆಯ ಫಲಿತಾಂಶ ಬಿಜೆಪಿ ಪಾಲಿಗೆ, ಒನ್ ಟೈಂ ವಂಡರ್ ಆಗಬಾರದು ಎಂಬುದು ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ನಡೆದ ಚರ್ಚೆ.

ಕೋವಿಡ್ ನ್ನು ನಿಯಂತ್ರಿಸುವಲ್ಲಿ ಮತ್ತು ಅತಿ ಹೆಚ್ಚು ಸಾವು ನೋವುಗಳನ್ನು ಎದುರಿಸಿದ ರಾಜ್ಯಗಳಲ್ಲಿ ದೇಶದಲ್ಲೇ ಅಗ್ರ ಸ್ಥಾನ ಎಂಬ ಕುಖ್ಯಾತಿ ಉತ್ತರ ಪ್ರದೇಶಕ್ಕೆ ತಗುಲಿದೆ. ಎಲ್ಲೆಲ್ಲಿ ಬಿಜೆಪಿ ನೇತೃತ್ವದ ರಾಜ್ಯಗಳು ಕೋವಿಡ್ 2ನೇ ಅಲೆಯಲ್ಲಿ  ಸೋತಿತ್ತೋ ಅಲ್ಲೆಲ್ಲವೂ ಮುಖ್ಯಮಂತ್ರಿಗಳು ಬದಲಾದರು. ಆದರೆ ವಿಪರ್ಯಾಸ ಎಂದರೆ ಉತ್ತರ ಪ್ರದೇಶದಲ್ಲಿ ಅಂಕಿ-ಅಂಶಗಳೇ ಬದಲಾದವು!
 
ಕಳೆದ ವಾರ ಉತ್ತರ ಪ್ರದೇಶದಲ್ಲಿ ಚುನಾವಣೆ ರ್ಯಾಲಿ ಆರಂಭಿಸಿದ ಪ್ರಧಾನಿ, ಕೋವಿಡ್ ನಿಯಂತ್ರಣದಲ್ಲಿ ಯೋಗಿ ಯಶಸ್ವಿ ಆದರು ಎಂದು ಕೊಂಡಾಡಿದ್ದು ಸುಳ್ಳಲ್ಲ. ಯೋಗಿಯ ಕಾರ್ಯವೈಖರಿ ಪ್ರಧಾನಿಗೆ ಇಷ್ಟವಾಗದೆ ಇದ್ದರೂ, ಆರೆಸ್ಸೆಸ್ ಒತ್ತಡಕ್ಕೆ ಮೋದಿ ಮಣಿಯಲೇ ಬೇಕಿತ್ತು.

ಇನ್ನು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತು ಯೋಗಿ ಆದಿತ್ಯನಾಥ್ ಮಧ್ಯೆ ಇರುವ ಹಣಾಹಣಿ ಹಲವು ಬಾರಿ ಬಹಿರಂಗವಾಗಿದೆ. ಆದರೆ ಇದೆಲ್ಲದರ ಮಧ್ಯೆ ಯೋಗಿಯ ಯೋಗ ಎಲ್ಲೂ ಕುಂಠಿತವಾಗಲಿಲ್ಲ.

ಯೋಗಿಯೇ ಮುಂದಿನ ಚುನಾವಣೆಯ ನೇತೃತ್ವ ವಹಿಸಲಿದ್ದಾರೆ ಎಂಬುದು ಮೋದಿ-ಶಾ ಸ್ಪಷ್ಟ ಪಡಿಸಿದ್ದಾರೆ. ಆದರೆ ಯೋಗಿಯೇ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಆಗುತ್ತಾರಾ? ಇದು ಸ್ಪಷ್ಟವಾಗುತ್ತಿಲ್ಲ. ಯುಪಿ ವಿಚಾರದಲ್ಲಿ ಆರ್ ಎಸ್ಎಸ್ ನೀರಿಗೆ ಎಳೆದರೆ, ಬಿಜೆಪಿ ಏರಿಗೆ ಎಳೆಯುತ್ತಿದೆ.

ಬಿಜೆಪಿಗಿಂತಲೂ ಕಾಂಗ್ರೆಸ್ ಯಾವುದರಲ್ಲಿ ಕಡಿಮೆ?

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಕೇಳಿ ಬಂದ ಹಾಗೆಯೇ ಕಾಂಗ್ರೆಸ್ ನಲ್ಲೂ ಕೇಳಿ ಬರುತ್ತಿದೆ. ಆದರೆ ಮುಖ್ಯಮಂತ್ರಿ ಯಾರು ಎಂದು ಸಿದ್ದು ಜೊತೆ ಜಾಟಾಪಟಿಯಲ್ಲಿ ಇರುವ ಡಿಕೆ ಶಿವಕುಮಾರ್ ಬದಲಾಗುತ್ತಾರೆ ಅಂದರೆ ಕೊಂಚ ಯೋಚಿಸಬೇಕು. ಆದರೆ ಅವರನ್ನು ಬದಲಾಯಿಸಲು ಕಾಂಗ್ರೆಸ್ ನ ಲಿಂಗಾಯತ ಪ್ರಭಾವಿ ನಾಯಕರ ದಂಡು ಸಜ್ಜಾಗಿದೆ. ವಾರಕ್ಕೆ ಮೂರು ದಿನ ಈ ಟೀಮ್ ದೆಹಲಿಯಲ್ಲಿ ಕ್ಯಾಂಪ್ ಮಾಡುತ್ತಿದೆ.

ಕಳೆದ ಒಂದೂವರೆ ವರ್ಷದಲ್ಲಿ ಸ್ವಂತ ವರ್ಚಸ್ಸು ಬಿಟ್ಟು ಪಕ್ಷ ಸಂಘಟನೆ ಬಗ್ಗೆ ಡಿ.ಕೆ ಶಿವಕುಮಾರ್ ಗಮನವೇ ಹರಿಸಿಲ್ಲ ಎಂಬುದು ಕಾರ್ಯಕರ್ತರ ಆರೋಪ. ಇದಕ್ಕೆ ತಕ್ಕೆಂತೆ ಡಿ.ಕೆ ಶಿವಕುಮಾರ್ ಹಾವ-ಭಾವ ಬದಲಾಗಬೇಕು ಎಂಬುದು ದಿಲ್ಲಿ ನಾಯಕರಲ್ಲೂ ಇರುವ ಅಭಿಪ್ರಾಯ. ಅಧ್ಯಕ್ಷರಾಗಿ ನೇಮಕ ಮಾಡಿದಾಗ ಇದ್ದ ಹುಮ್ಮಸ್ಸು ಈಗ ಕುಂಠಿತವಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಕೂಡ ತಮ್ಮ ರಾಜ್ಯ ಭೇಟಿಯ ನಂತರ ಅಭಿಪ್ರಾಯ ಪಟ್ಟರಂತೆ. ಕೇವಲ ಸೋಷಿಯಲ್ ಮೀಡಿಯಾದ ಅಭಿಪ್ರಾಯಗಳನ್ನಿಟ್ಟುಕೊಂಡು ಪಾರ್ಟಿ ನಡೆಸಲು ಆಗುವುದಿಲ್ಲ ಎಂಬುದು ದಿಲ್ಲಿ ನಾಯಕರೂ ಅರಿತಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಇರುವ ಸದ್ಯದ ಎರಡೂ ಬಣವು ಕೇವಲ ಟ್ವಿಟ್ಟರ್ ಫೇಸ್ಬುಕ್ ಗೆ ತಮ್ಮ ರಾಜಕೀಯವನ್ನು ಸೀಮಿತಗೊಳಿಸಿದಂತಿದೆ. 

ಇದರ ಲಾಭ ಪಡೆಯಲು ಹೊರಟಿರುವ ಎಂ.ಬಿ ಪಾಟೀಲ್ ಮಂದಿನ ಕೆಪಿಸಿಸಿ ಅಧ್ಯಕ್ಷರಾಗಲು ಸರ್ವ ಸನ್ನದ್ಧನಾಗಿದ್ದೇನೆ ಎಂದು ಓಡಾಡುತ್ತಿದ್ದಾರೆ. ಆದರೆ ನೇರ ಮಾತೆತ್ತಿದರೆ ಮೇಡಂ ಜೊತೆ ಮಾತಾಡುತ್ತೇನೆ ಎನ್ನುವ ಡಿ.ಕೆ ಶಿವಕುಮಾರ್ ಅವರನ್ನು ಸದ್ಯಕ್ಕೆ ಅಲುಗಾಡಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಅಷ್ಟೇ ಪ್ರಬಲವಾಗಿದೆ.

250 ರಲ್ಲಿ ಬಿಜೆಪಿ ಇದ್ದರೆ, 25ಕ್ಕೂ ಏರಲ್ಲ ಎಂಬ ಬಿಎಸ್ ಪಿ, ಶತಕವನ್ನೂ ನಿರೀಕ್ಷಿಸದ ಎಸ್ ಪಿ

2017ರಲ್ಲಿ 47 ಸ್ಥಾನಗಳಿಗೆ ನಿಂತ ಸಮಾಜವಾದಿ ಪಕ್ಷ ಮತ್ತು 17 ಕ್ಕೆ ಇಳಿದ ಬಹುಜನ ಸಮಾಜವಾದಿ ಪಕ್ಷ ಇನ್ನು ನಿದ್ರೆಯಿಂದ ಎದ್ದಂತೆ ಕಾಣುತ್ತಿಲ್ಲ, ಎರಡು ದಶಕಗಳಿಂದ ಉತ್ತರ ಪ್ರದೇಶವನ್ನು ಆಳಿದ ಈ ಎರಡು ಪಕ್ಷಗಳು ಸದ್ಯಕ್ಕೆ 2022 ರಲ್ಲಿ ಚುನಾವಣೆ ಇದೆ ಎಂಬ ಅರಿವೇ ಇಲ್ಲದ ಹಾಗೆ ವರ್ತಿಸುತ್ತಿದ್ದಾರೆ. ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚು ಪ್ರಭಾವಿಯಾಗಿ ಕೆಲಸ ಮಾಡಬೇಕಿರುವುದು ವಿರೋಧ ಪಕ್ಷಗಳು ಆದರೆ ಸದ್ಯಕ್ಕೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮನೆ ಹೊರಗೆ ಬಂದಿಲ್ಲ ಎಂದು ಕಾರ್ಯಕರ್ತರು ಲೇವಡಿ ಮಾಡುತ್ತಿದ್ದಾರೆ. ಹೀಗೆ ಮುಂದುವರೆದರೆ ಬಿಜೆಪಿಯಲ್ಲಿ ಎಷ್ಟೇ ಲೋಪವಿದ್ದರು ಪ್ರಬಲ ವಿರೋಧವಿಲ್ಲದೆ ಮತ್ತೆ ಬಿಜೆಪಿ ಉತ್ತರ ಪದೇಶದಲ್ಲಿ ಕಮಲ ಅರಳಿಸಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಪರ್ಯಾಯ ಕಾಣದ ಜನತೆ.

ಬಿಜೆಪಿ ಎರಡು ದಶಕದಲ್ಲಿ ಕಲಿತಿದ್ದು ಹೇಗೆ, ಕಾಂಗ್ರೆಸ್ ಆರು ದಶಕದಲ್ಲಿ ಸಾರಿದ್ದನ್ನು ಮರೆತಿದ್ದು ಹೇಗೆ...?

ಸದ್ಯಕ್ಕೆ ಕಾಂಗ್ರೆಸ್ ಉಸಿರಾಡುತ್ತಿರುವ ಬೆರಳಣಿಕೆಯಷ್ಟು ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು...

ಅದು ಎಂತಹ ಸಂದರ್ಭ!!- ರೈತರ ಮುಷ್ಕರದಿಂದ ಅಸ್ತಿತ್ವ ಕಳೆದು ಕೊಂಡ ಬಿಜೆಪಿ, ಇನ್ನು ಲ್ಯಾಂಡ್ ಆಗಲು ಸಿಗ್ನಲ್ ಸಿಗದೆ ಆಕಾಶದಲ್ಲೇ ಹಾರಡುತ್ತಿರುವ ಆಮ್ ಆದ್ಮಿ, ಬಿಜೆಪಿಯಿಂದ ಬೇರೆ ಆಗಿ ಸದ್ಯಕ್ಕೆ ತನ್ನ ಹಳೆಯ ಮಿತ್ರ ಮಂಡಳಿ ಜೊತೆ ಮೈತ್ರಿ ಮಾಡಿ ಆಕಾಶ ನೋಡುತ್ತಿರುವ ಶಿರೋಮಣಿ ಅಕಾಲಿ ದಳ. 

ಹಾಗೆ ನೋಡಿದರೆ ಇಡೀ ದೇಶದಲ್ಲಿ ಹೆಚ್ಚು ಯೋಚಿಸದೆ ಎಲ್ಲ ಬಾಲ್ ಗು ಫುಲ್ ಟಾಸ್ ಎತ್ತುವ ಸಾಧ್ಯತೆ ಕಾಂಗ್ರೆಸ್ ಗೆ ಇರುವ ರಾಜ್ಯವೆಂದರೆ ಅದು ಪಂಜಾಬ್. ಇಷ್ಟೆಲ್ಲ ಸಕಾರತ್ಮಕ ವಿಚಾರಗಳನ್ನು ಬದಿಗಿರಿಸಿ, ಸಿದ್ದು ಮತ್ತು ಕ್ಯಾಪ್ಟನ್ ಅಮರೇಂದರ್ ಸಿಂಗ್ ಜಗಳಕ್ಕೆ ತುಪ್ಪ ಸುರಿಯುತ್ತಿದೆ ಕಾಂಗ್ರೆಸ್ ಹೈ ಕಮಾಂಡ್. 

ಕಳೆದ 6 ತಿಂಗಳಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು, ಅದರಲ್ಲೂ ಎರಡು ಆರ್ಥಿಕವಾಗಿ ಭೌಗೋಳಿಕವಾಗಿ, ರಾಜಕೀಯವಾಗಿ ದೊಡ್ದ ರಾಜ್ಯವಾದ ಕರ್ನಾಟಕ, ಗುಜರಾತ್ ನ ಮುಖ್ಯಮಂತ್ರಿಗಳನ್ನು , ಜೊತೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಾವಣೆ ಮಾಡಿದೆ.

ಅಮಿತ್ ಶಾ ಆಪ್ತರಾದ ವಿಜಯ್ ರೂಪಾಣಿ, ಲಿಂಗಾಯತ ಸಮುದಾಯದ ಪ್ರಬಲರಾದ ಬಿಎಸ್ ವೈ ಈ ಇಬ್ಬರ ಬದಲಾವಣೆಯೂ ಪಕ್ಷಕ್ಕೆ ಸೂಜಿ ಮೊನೆಯಷ್ಟೂ ಹಾನಿ ಆಗದೆ ಇರೋ ಹಾಗೆ ನಡೆದಿದೆ. ಕಳೆದ ಆರು ದಶಕಗಳಿಂದ ಏರ್ಪೋರ್ಟ್ ನಲ್ಲಿ, ದೂರವಾಣಿಯಲ್ಲಿ, ಕಾರ್ ನಲ್ಲಿ, ಪತ್ರದಲ್ಲಿ ಮುಖ್ಯಮಂತ್ರಿ ಬದಲಿಸಿದ ಕಾಂಗ್ರೆಸ್ ಗೆ ಸಿಧು-ಅಮರೇಂದ್ರ ಸಿಂಗ್ ಜಗಳ ಬಿಡಿಸಲು ಆಗುತ್ತಿಲ್ಲ. ಇತ್ತ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುತ್ತಿರುವ ಪಂಜಾಬ್ ಉಸ್ತುವಾರಿ ಹರೀಶ್ ರಾವತ್, ಹೆಚ್ಚು ಕಸಿವಿಸಿ ಆದರೆ ಬಿಜೆಪಿಗೆ ಹಾರಲು ಸಿದ್ಧವಿರುವ ಕ್ಯಾಪ್ಟನ್. ಅಸಲಿಗೆ ಸಿಧು ಸಿಎಂ ಆಗುವ ಆಸೆಯಲ್ಲಿ ತನ್ನ ಸ್ವಂತ ಪಕ್ಷದ ಆಡಳಿತ ಮತ್ತು ಮುಖ್ಯಮಂತ್ರಿ ಮೇಲೆ ಬಹಿರಂಗ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂಗತಿ ಕಾಂಗ್ರೆಸ್ ಗೆ ತಿಳಿಯುತ್ತಿಲ್ಲ. ಇನ್ನು ಕಾಂಗ್ರೆಸ್ ಆಟಗಳನ್ನೇ ನೋಡುತ್ತಾ ತಮ್ಮ ಆಟದ ರೂಪ ರೇಷೆ ಸಿದ್ಧಪಡಿಸಿಕೊಂಡ ಬಿಜೆಪಿ ಈ ಪರ್ವದಲ್ಲಿ ಅಗ್ರ ಸ್ಥಾನ ಪಡೆದಿದೆ. ಹಾಗೆ ಎಲ್ಲೂ ಸುಳಿವು ನೀಡದೆ, ಒಮ್ಮೆಯೂ ಮಂತ್ರಿ ಆಗದ, ಮೊದಲ ಬಾರಿಗೆ ಶಾಸಕರಾದ ಭೂಪೇಂದ್ರ ಭಾಯ್ ಪಟೇಲ್ ಗೆ ಅಧಿಕಾರ ನೀಡಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಗುಜರಾತಿನಲ್ಲೂ ಪಂಜಾಬ್ ಹಾಗೆ ಒಂದು ಸಿನೆಮಾಗೆ ಸಿದ್ಧವಾಗಬೇಕಿದೆ ಎಂಬುದು ಬಿಜೆಪಿಯ ನಿರಾಶ್ರಿತರ ಅಭಿಪ್ರಾಯ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com