ವೈಜ್ಞಾನಿಕ ಮನೋಭಾವ ದಿನ: ಸರಿ ನಂಬಿಕೆಗಳನ್ನು ಪಾಲಿಸಿ, ಹುಸಿ ನಂಬಿಕೆಗಳನ್ನು ಕೈಬಿಡುವುದು ಹೇಗೆ? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯಹುಟ್ಟು-ಸಾವು, ದೇವರು-ದೆವ್ವ, ಮಾಟ-ಮಂತ್ರ, ಶಕುನ-ಅಪಶಕುನ ಕಾಡುವ ಕಷ್ಟ-ನಷ್ಟ, ಸೋಲು ನೋವುಗಳ ಬಗ್ಗೆ ನಮ್ಮಲ್ಲಿ ನೂರಾರು ನಂಬಿಕೆಗಳಿವೆ. ವೇದ-ಉಪನಿಷತ್ತು, ಪುರಾಣಗಳಿಂದ ಹಿಡಿದು, ಪ್ರತಿಯೊಂದು ಸಮುದಾಯ-ಕುಟುಂಬಗಳವರೆಗೂ...
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಹುಟ್ಟು-ಸಾವು, ದೇವರು-ದೆವ್ವ, ಮಾಟ-ಮಂತ್ರ, ಶಕುನ-ಅಪಶಕುನ ಕಾಡುವ ಕಷ್ಟ-ನಷ್ಟ, ಸೋಲು ನೋವುಗಳ ಬಗ್ಗೆ ನಮ್ಮಲ್ಲಿ ನೂರಾರು ನಂಬಿಕೆಗಳಿವೆ. ವೇದ-ಉಪನಿಷತ್ತು, ಪುರಾಣಗಳಿಂದ ಹಿಡಿದು, ಪ್ರತಿಯೊಂದು ಸಮುದಾಯ-ಕುಟುಂಬಗಳವರೆಗೂ ಈ ನಂಬಿಕೆಗಳು ಉಳಿದುಕೊಂಡಿವೆ. ನಂಬಿಕೆಗಳಿಗೆ ಸಾಕ್ಷ್ಯಾಧಾರಗಳು ಬೇಡ. ಶಾಸ್ತ್ರಗಳಲ್ಲಿ ಹೇಳಲಾಗಿದೆ ಹಿರಿಯರು ಅನುಭವಿಗಳು ಹೇಳಿದ್ದಾರೆ. ಸುಮ್ಮನೆ ಅವುಗಳನ್ನು ನಂಬಬೇಕು ಎನ್ನಲಾಗುತ್ತದೆ.

ಈ ನಂಬಿಕೆಗಳು ಹೇಗೆ, ಯಾಕೆ, ಯಾವಾಗ ಶುರುವಾದದ್ದು ಅವುಗಳಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂದು ವಿಚಾರಿಸುವ ಗೋಜಿಗೆ ಬಹುತೇಕ ಜನ ಹೋಗುವುದಿಲ್ಲ. ಅಜ್ಜ ಮಾಡುತ್ತಿದ್ದ, ಅಪ್ಪ ಮಾಡುತ್ತಿದ್ದ. ನಾನು ಮಾಡುತ್ತೇನೆ. ನನ್ನ ಮಗ-ಮೊಮ್ಮಕ್ಕಳು ಮಾಡಲಿ ಎಂಬ ಧೋರಣೆ ಅವರದು. ಆಗಸ್ಟ್ 20 ರಂದು ರಾಷ್ಟ್ರೀಯ ವೈಜ್ಞಾನಿಕ ಮನೋಭಾವದ ದಿನ.

ಡಾಕ್ಟರ್ ದಾಭೋಲ್ಕರ್ ಹತ್ಯೆಯಾದ ದಿನವದು, ಮೌಢ್ಯ-ಅಂಧಶ್ರದ್ಧೆಯ ವಿರುದ್ಧ ಹೋರಾಟ ಮಾಡಿ ಮಡಿದ ಅವರ ನೆನಪಿಗಾಗಿ ಈ ಆಚರಣೆ. ಸುಳ್ಳು ಹುಸಿನಂಬಿಕೆಗಳಿಂದ ನಮಗಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಮಸ್ಯೆಯ ಪರಿಹಾರಕ್ಕೆ ಹುಸಿ ನಂಬಿಕೆಗಳಿಗೆ ಜೋತು ಬಿದ್ದರೆ, ಸಮಸ್ಯೆ ಪರಿಹಾರವಾಗುವುದಿರಲಿ ಮತ್ತಷ್ಟು ಸಮಸ್ಯೆ ಹುಟ್ಟಿಕೊಳ್ಳುತ್ತವೆ. ನಮ್ಮ ಹಣ-ಸಮಯ-ಶ್ರಮ ವ್ಯರ್ಥವಾಗುತ್ತವೆ. ವೈಜ್ಞಾನಿಕ ಮನೋಭಾವ ಎಂದರೆ, ಪ್ರಶ್ನಿಸಿ ವಿಶ್ಲೇಷಿಸಿ, ಸತ್ಯಾ ಸತ್ಯತೆಯನ್ನು ಪತ್ತೆಮಾಡವುದು. ಸತ್ಯ ನಂಬಿಕೆಯನ್ನು ಉಳಿಸಿಕೊಂಡು ಸುಳ್ಳು ನಂಬಿಕೆಗಳಿಗೆ ವಿದಾಯ ಹೇಳುವುದು ವೈಜ್ಞಾನಿಕ ಚಿಂತನೆಯಿಂದ ಸತ್ಯದರ್ಶನವಾಗುತ್ತದೆ, ವಾಸ್ತವಿಕ ಪ್ರಜ್ಞೆ ಮೂಡುತ್ತದೆ. ನಮ್ಮ ಶಕ್ತಿ- ಸಾಮರ್ಥ್ಯ ಸಂಪನ್ಮೂಲಗಳ ಸರಿ ಬಳಕೆಯಾಗುತ್ತದೆ. ಕೆಲವು ಹುಸಿ ನಂಬಿಕೆಗಳತ್ತ ಗಮನ ಹರಿಸೋಣ.

ಸುಳ್ಳು- ಹುಸಿನಂಬಿಕೆಸತ್ಯ= ವೈಜ್ಞಾನಿಕ ವಿವರಣೆ
ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ.ಗಂಡು-ಹೆಣ್ಣು ಸಮಬಲರು.
ವಿಧವೆ: ಅಪಶಕುನ, ಶುಭಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ.ಭಾಗವಹಿಸಿದರೆ, ಏನು ತೊಂದರೆ ಇಲ್ಲ, ವಿದುರನಿಗಿಲ್ಲದ ಅಪಶಕುನ, ವಿಧವೆಗೆ ಏಕೆ?
ಮುತ್ತೈದೆ ಸಾವು ಒಳ್ಳೆಯದು.ಹೆಂಡತಿ ಮೊದಲು ಸಾಯಬೇಕೆಂದು ಹೇಳುವುದು ಎಷ್ಟು ಸರಿ
ಕೆಲವು ಜಾತಿಗಳು ಮೇಲ್ವರ್ಗಕ್ಕೆ ಸೇರಿದರೆ ಕೆಲವು ಜಾತಿಗಳು ಕೆಳವರ್ಗಕ್ಕೆ ಸೇರುತ್ತವೆ.ಎಲ್ಲಾ ಮನುಷ್ಯರು ಒಂದೇ ಜಾತಿ ಎಲ್ಲರೂ ಸಮಾನರು.
ನಂಬಿಕೆವೈಜ್ಞಾನಿಕ ಕಾರಣ
ಅಕಾಲಿಕ ಸಾವಿಗೆ ಪೂರ್ವಜನ್ಮದ ಪಾಪ ಕರ್ಮ ಫಲ, ದೇವರ ಶಾಪ ,ಅಪಶಕುನ.ಸೋಂಕು ರೋಗ, ಹೃದ್ರೋಗ, ಕ್ಯಾನ್ಸರ್, ಕೊಲೆ/ಆತ್ಮಹತ್ಯೆ. ಅನೇಕ ನಿವಾರಣೆಯ ಕಾರಣಗಳಿವೆ.
ಸಾವು ದೇಹಕ್ಕೆ, ಆತ್ಮ ಅವಿನಾಶಿ.ಆತ್ಮ ಒಂದು ಕಲ್ಪನೆ, ಸಾವು ಎಲ್ಲದಕ್ಕೂ ಕೊನೆ. ಸಾವಿನ ನಂತರ ಏನೂ ಇಲ್ಲ .
ಆಕಾಲಿಕ/ ದುರಂತದ ಸಾವಿನಿಂದ ಆತ್ಮಕ್ಕೆ ಮುಕ್ತಿ ಇಲ್ಲ. ದೆವ್ವವಾಗುತ್ತದೆಕಲ್ಪನೆ, ದೆವ್ವದ ಅಸ್ತಿತ್ವಕ್ಕೆ ಸಾಕ್ಷ್ಯಾಧಾರಗಳಿಲ್ಲ. ಕೆಲವರು ದೆವ್ವ ಬಂದಂತೆ ಆಡುತ್ತಾರೆ, ಇದೊಂದು ಮನೋವಿಕೃತಿ/ ಸಮಸ್ಯೆ ಅಷ್ಟೇ.
ಅತಿ ಮಾನುಷ ಶಕ್ತಿಗಳಿವೆ. ಮಾಟ-ಮಂತ್ರಗಳಿಂದ ಕೆಡುಕು ಮಾಡಬಹುದು.ಕಲ್ಪನೆ ಮಾಟ ಮಂತ್ರ ದುಷ್ಟಶಕ್ತಿಗಳಿಲ್ಲ. ಅಮಾಯಕರನ್ನು ಮಂತ್ರವಾದಿಗಳು ನಂಬಿಸುತ್ತಾರೆ, ಅತಿಮಾನುಷ ಶಕ್ತಿಗಳಿಂದ ಅವುಗಳನ್ನು ವಶಪಡಿಸಿ ಕೊಳ್ಳುವವರಿದ್ದಾರೆ. ನಮಗೆ ಸೈನ್ಯವೇಕೆ? ಮದ್ದು-ಗುಂಡು ಏಕೆ ಬೇಕು.
ಮಗು ಹುಟುವ ಕ್ಷಣದ ಮೇಲೆ ಗ್ರಹಗತಿಗಳ ಲೆಕ್ಕಾಚಾರ ಮಾಡಿ ಜನ್ಮ ಕುಂಡಲಿ ಬರೆದು, ಆ ಮಗು ಏನಾಗುತ್ತಾನೆ/ಳೆ ಎಂದು ಹೇಳಬಹುದು.ಇಪ್ಪತ್ತು ವರ್ಷಗಳ ಕಾಲ ಆಹಾರ-ಆರೋಗ್ಯ-ಶಿಕ್ಷಣ-ಪ್ರೋತ್ಸಾಹಗಳಿಂದ ಮಗುವಿನ ಭವಿಷ್ಯ ನಿರ್ಧಾರವಾಗುತ್ತದೆ.
ದೇವರಿಗೆ/ ಪೂಜಾ ಸ್ಥಳಗಳಿಗೆ ಹೋಗಿ ಬೆಲೆಬಾಳುವ ಚಿನ್ನ/ಬೆಳ್ಳಿ /ಇತರ ವಸ್ತುಗಳನ್ನು ಅರ್ಪಿಸಿ ಪ್ರಾರ್ಥಿಸಿದರೆ, ಎಲ್ಲ ಕಷ್ಟಗಳು ಪರಿಹಾರವಾಗಿ, ಇಷ್ಟಾರ್ಥಗಳು ಸಿದ್ಧಿಸುತ್ತೆ.ಚುನಾವಣೆಯಲ್ಲಿ ಎಲ್ಲಾ ಸ್ಪರ್ಧಿಗಳು ದೇವಸ್ಥಾನಕ್ಕೆ/ಪೂಜಾಸ್ಥಳಕ್ಕೆ,ಹೋಗುತ್ತಾರೆ.ಪ್ರತಿದಿನ ಕೆಲವು ದೇವಸ್ಥಾನ ಚುರ್ಚುಗಳಿಗೆ ಸಾವಿರಾರು ಜನ ಹೋಗಿ ಪ್ರಾರ್ಥನೆ ಸಲ್ಲಿಸಿ,ಕಾಣಿಕೆ ಒಪ್ಪಿಸುತ್ತಾ.ರೆ ಅವರ ಕಷ್ಟಗಳು ಪರಿಹಾರವಾಗುವುದೇ? ಅವರೆಲ್ಲ ಶ್ರೀಮಂತರಾಗುತ್ತಾರಾ?
ಅದೃಷ್ಟದ ಉಂಗುರ /ಬಳೆ /ದಾರ ಕಟ್ಟಿಕೊಂಡರೆ, ಲಾಭ /ಜಯ.ಹಾಗಾದರೆ,ಎಲ್ಲರಿಗೂ ಲಾಭ/ ಜಯ ಸಿಗುವುದಿಲ್ಲವೇಕೆ? ಸ್ವಪ್ರಯತ್ನದಿಂದ ಲಾಭ/ ಜಯ ಸಿಗುವ ಸಂಭವ ಇದೆ.
ಪವಾಡ ಮಾಡುವ ಗುರು ಬಾಬಗಳಿದ್ದಾರೆ.ಪವಾಡ ಮಾಡಲು ಸಾಧ್ಯವಿಲ್ಲ.
ನಾಗದೋಷ ನಿವಾರಿಸಿದರೆ, ಮಡದಿಗೆ ಮಕ್ಕಳಾಗುತ್ತೆ.ವೀರ್ಯಾಣು/ಅಂಡಾಣು ವಿನ ನ್ಯೂನತೆಯಿಂದ ಮಕ್ಕಳಾಗುವುದಿಲ್ಲ

ಇಂಥಹದ್ದೇ ನಂಬಿಕೆಗಳ ಪಟ್ಟಿ ಮಾಡಿ. ಪ್ರಶ್ನೆ ಕೇಳಿ. ವಿಶ್ಲೇಷಿಸಿ. ಸರಿ ನಂಬಿಕೆಗಳು ಇರಲಿ, ಹುಸಿ ನಂಬಿಕೆಗಳನ್ನು ಕೈಬಿಡಿ...

ಕೋವಿಡ್ ಕಲಿಸಿದ ಪಾಠಗಳು

ಕಳೆದ ಒಂದೂವರೆ ವರ್ಷದಿಂದ ಜಗತ್ತಿನಲ್ಲಿ ನಮ್ಮ ದೇಶದಲ್ಲಿ ನಡೆಸಿರುವ ಹಾವಳಿ ಆತಂಕಕಾರಿ. ಜನರ ಬದುಕು ಮೂರು ಬಟ್ಟೆಯಾಗಿದೆ. ಕೆಲಸವಿಲ್ಲ ಆದಾಯವಿಲ್ಲ. ಇಷ್ಟ ಬಂದಂತೆ ತಿರುಗಾಡುವಂತಿಲ್ಲ. ಮಕ್ಕಳಿಗೆ ಶಾಲೆ ಇಲ್ಲ, ಆಟವಿಲ್ಲ ಪಾಠವಿಲ್ಲ. ಕ್ವಾರಂಟೈನ್, ಲಾಕ್ಡೌನ್, ಸಾವು ನೋವಿನ ಸುನಾಮಿ ಎದ್ದಿದೆ. ಕೊರೋನ ಸೃಷ್ಟಿ ಮಾಡಿದವರಿಗೆ ಹಿಡಿ ಶಾಪ ಹಾಕುತ್ತಿದ್ದೇವೆ. ಈಗ ಮೂರನೇ ಅಲೆ ಏಳುವ ಭಯದಲ್ಲಿದ್ದೇವೆ. ಕೋವಿಡ್ ಶನಿ ಯಾವಾಗ ತೊಲಗುತ್ತಪ್ಪ, ಅದನ್ನು ಕೊಲ್ಲುವ ಔಷಧಿಯನ್ನು ವಿಜ್ಞಾನಿಗಳು ಬೇಗ ಕಂಡು ಹಿಡಿಯಲಪ್ಪ ಎಂದು ಹಾರೈಸುತ್ತಿದ್ದೇವೆ. ಕೋವಿಡ್ ನೊಂದಿಗೆ ಬದುಕಲು ಕಲಿಯಿರಿ ಎಂದು ತಜ್ಞರು ಹೇಳುತ್ತಿದ್ದಾರೆ. ಕೇಳಿದರೆ ಭಯವಾಗುತ್ತದೆ.

ಮಹಾಮಾರಿ ಎಂದು ಕರೆಸಿಕೊಂಡ ಕೋವಿಡ್ 19, ನಮಗೆ ಕಲಿಸಿರುವ ಪಾಠಗಳು ಹಲವಾರು, ಅವುಗಳ ಪೈಕಿ ಪ್ರಮುಖವಾದವು..

  1. ಸ್ವಚ್ಛತೆಯ ಪಾಠ: ಎಲ್ಲಿ ಕೊಳಕು ಇದೆಯೋ ಅಲ್ಲಿ ರೋಗಾಣುಗಳು ನೆಲೆಯೂರುತ್ತವೆ ವೃದ್ಧಿಸುತ್ತವೆ. ನಮ್ಮ ಕೈಕಾಲುಗಳು, ನಾವಿರುವ ಕೋಣೆ ಮನೆ ಮತ್ತು ಮನೆಯ ಸುತ್ತಮುತ್ತ ಸ್ವಚ್ಛತೆ ಇದ್ದರೆ ರೋಗಾಣುಗಳು ಇರುವುದಿಲ್ಲ.
  2. ಮನೆಯೇ ಮಂತ್ರಾಲಯ–ದೇವಮಂದಿರ: ಮನೆಯೊಳಗಿರಿ, ಸುರಕ್ಷಿತವಾಗಿರಿ. ಮನೆಯೂಟ ಮಾಡಿ. ಮನೆಯವರೊಂದಿಗೆ ಮಾತನಾಡಿ, ಆಟವಾಡಿ, ಮನೆಕೆಲಸಗಳನ್ನು ಜೊತೆಯಾಗಿ ಮಾಡಿ. ಒಳಾಂಗಣ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಕೌಟುಂಬಿಕ ಸಾಮರಸ್ಯ- ಜೀವನದ ಅಗತ್ಯವನ್ನು ನಾವು ಕಲಿತಿದ್ದೇವೆ. ಸದಭಿರುಚಿಯ ಚಟುವಟಿಕೆಗಳ ಅಗತ್ಯವನ್ನು ಮನಗಂಡಿದ್ದೇವೆ.
  3. ಕಡಿಮೆ ಆದಾಯದಲ್ಲಿ ಬದುಕುವುದು: ಕೋವಿಡ್ ನಿಂದಾಗಿ ನಮ್ಮ ಆದಾಯ ಕಡಿಮೆಯಾಯಿತು. ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಏರುಪೇರಾದುವು. ಕಡಿಮೆ ಆದಾಯದಲ್ಲಿ ಬದುಕಲು ಕಲಿತೆವು. ಆಹಾರ-ವಸ್ತ್ರ-ಒಡವೆಗಳು, ಇತರ ಭೋಗ ಭಾಗ್ಯಗಳ ಅಗತ್ಯವನ್ನು ತಗ್ಗಿಸಿಕೊಂಡೆವು. ಸರಳ ಜೀವನದ ಮಹತ್ವವನ್ನು ಅರಿತೆವು.
  4. ಕೊಡುವುದರಲ್ಲಿ ಆನಂದವಿದೆ ಎಂದು ತಿಳಿದೆವು: ಅನ್ನವಿಲ್ಲದವರಿಗೆ ಅನ್ನ ಕೊಟ್ಟೆವು, ಕಡುಬಡವರಿಗೆ ನೆರವನ್ನು ಕೊಟ್ಟು ಆನಂದ ಪಡುವುದನ್ನು ಕಲಿತು ಕೊಂಡೆವು. ದಾನ-ಧರ್ಮ-ಪರೋಪಕಾರವೇ ಸಂತೋಷದಾಯಕ ಎಂಬುದನ್ನು ತಿಳಿದುಕೊಂಡೆವು.
  5. ಬದುಕು ಅನಿಶ್ಚಿತ ಎಂಬ ಸತ್ಯದ ಅರಿವಾಯಿತು: ಕೋವಿಡ್ ನಿಂದ ವೃದ್ಧರಷ್ಟೇ ಅಲ್ಲ ಮಧ್ಯವಯಸ್ಕರು ಯುವಜನ ಸತ್ತಿದ್ದನ್ನು ಕಂಡೆವು. 1 ವಾರದ ಹಿಂದೆ ಅವರು ಸಾಯುತ್ತಾರೆಂದು ಯಾರು ಕನಸು ಮನಸ್ಸಿನಲ್ಲಿ ಯೋಚಿಸಿರಲಿಲ್ಲ. ಸಾವಿಗೆ ಶ್ರೀಮಂತರು, ಸೆಲೆಬ್ರಿಟಿಗಳು, ಜನಸಾಮಾನ್ಯರು, ಬಡವರೆಂಬ ಭೇದವಿಲ್ಲ ಎಂಬುದು ಅರಿವಿಗೆ ಬಂತು.
  6. ಸಾವಿನೊಡನೆ ಮುಖಾಮುಖಿ: ಹೇಳದೆ ಕೇಳದೆ ಥಟ್ ಎಂದು ಬರುವ ಸಾವಿನ ಆಘಾತವನ್ನು ನಿಭಾಯಿಸುವ ಕೌಶಲವನ್ನು ಕೋವಿಡ್ ನಮಗೆಲ್ಲರಿಗೆ ಕಲಿಸಿದೆ. ಕೋವಿಡ್ ಪಾಸಿಟಿವ್ ಬಂತು, ಐದನೇ ದಿನ ಉಸಿರಾಟದ ಸಮಸ್ಯೆ ಶುರುವಾಯಿತು ಎಂಟನೇ ದಿನ ಐಸಿಯುನಲ್ಲಿ ಅಪ್ಪನ ಪ್ರಾಣ ಹೋಯಿತು ಮುಖ ದರ್ಶನವು ಆಗಲಿಲ್ಲ. ಕಾರ್ಪೊರೇಷನ್ ಸಿಬ್ಬಂದಿಯೇ ಸಂಸ್ಕಾರ ಮಾಡಿದರು ತಿಥಿ ಕರ್ಮಾಂತರಗಳನ್ನು ಮನೆಯವರೇ ಮಾಡಿದೆವು. ಬಂಧುಮಿತ್ರರನ್ನು ಕರೆಯಲಿಲ್ಲ. ತಪ್ಪಿತಸ್ಥ ಭಾವನೆ ಕಾಡುತ್ತಿದೆ ಎಂದು ಹಲುಬುವಂತಾಯಿತು. ಅರ್ಚನಾ ದೂತರಿಗೆ ಕಿಂಚಿತ್ತು ಆದಾಯ ಇಲ್ಲ ಎನ್ನುವ ಸತ್ಯದ ಅರಿವಾಯಿತು. ಕುಟುಂಬದ ಸಂಪಾದಿಸುವ ಸದಸ್ಯ, ಆಧಾರಸ್ತಂಭ, ಮನೆಯೊಡತಿ, ಬೆಳೆದ ಮಗ/ ಮಗಳನ್ನು ಕಳೆದುಕೊಂಡ ಕುಟುಂಬಗಳು ಸಾವಿರಾರು. ಅನಿರೀಕ್ಷಿತ. ಅಕಾಲಿಕ ಸಾವನ್ನು ಒಪ್ಪಿಕೊಳ್ಳುವ, ನಿಭಾಯಿಸುವ ಕೌಶಲವನ್ನು ಎಲ್ಲಾ ಕುಟುಂಬಗಳು ಕಲಿತುಕೊಂಡಿದ್ದಾರೆ. ವ್ಯಕ್ತಿ/ವ್ಯಕ್ತಿಗಳ ಸಾವಿನಿಂದ ಉಂಟಾದ ನಿರ್ವಾತವನ್ನು ಭರಿಸುವುದನ್ನು ಕಲಿತುಕೊಂಡಿದ್ದಾರೆ. ಸಾವಿಗೆ ಅಂಜಿದರಾಗದು, ಅಳುಕಿದರಾಗದು ಬಪ್ಪುದು ತಪ್ಪದು ಎಂಬ ಪಾಠವನ್ನು ನಾವೆಲ್ಲ ಕಲಿತೆವು.
  7. ರೋಗನಿರೋಧಕ ಶಕ್ತಿಯ ಅರಿವು: ಕೋವಿಡ್ ಬಂದ ನಂತರ ಎಲ್ಲರ ಬಾಯಲ್ಲಿ ಇಮ್ಯೂನಿಟಿ-ರೋಗನಿರೋಧಕಶಕ್ತಿ ಪದಗಳು ನಲಿಯುತ್ತಿವೆ! ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರೂ ತುದಿಗಾಲ ಮೇಲೆ ನಿಂತಿದ್ದಾರೆ. ಯಾವ ಆಹಾರ, ಯಾವ ವಸ್ತುವನ್ನು ಸೇವಿಸಿದರೆ ಇಮ್ಯೂನಿಟಿ ಹೆಚ್ಚುತ್ತದೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟಿವಿ ವಾಟ್ಸಾಪ್ ಗಳಲ್ಲಿ ಪುಕ್ಕಟ್ಟೆ ಸಲಹೆಗಳು ಸುಳಿದಾಡುತ್ತಿವೆ. ನಿಮ್ಮ ಇಮ್ಯೂನಿಟಿ ಹೆಚ್ಚಬೇಕೇ, ಈ ಔಷಧವನ್ನು ಸೇವಿಸಿ ಎಂದು ಅಲೋಪತಿ/ಆಯುರ್ವೇದ/ಹೋಮಿಯೋಪತಿ ಕಂಪನಿಗಳು ಜಾಹೀರಾತು ಕೊಡುತ್ತಿವೆ. ಯೋಗ-ಪ್ರಾಣಾಯಾಮ-ಧ್ಯಾನ ಮಾಡಿ ಎನ್ನುತ್ತಿದ್ದಾರೆ ಯೋಗ ಚಿಕಿತ್ಸಕರು. ಮಕ್ಕಳಿಂದ ಹಿಡಿದು ಮುದುಕರವರೆಗೂ ತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ! ಕೋವಿಡ್ ವಾಕ್ಸೀನ್ ಪಡೆಯಲು ಜನ ಕ್ಯೂ ನಿಲ್ಲುತ್ತಿದ್ದಾರೆ.
  8. ವೈದ್ಯ ಕ್ಷೇತ್ರದ ಇತಿ-ಮಿತಿ: ವೈದ್ಯರನ್ನು ನಾರಾಯಣ, ದೇವರು ಎಂದು ಕರೆದರು. ವೈದ್ಯರಿಗೆ ವೈದ್ಯವಿಜ್ಞಾನಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಚಿಕಿತ್ಸೆ ಮಾಡಲು ಪ್ರಯತ್ನ ನಡೆಯುತ್ತವೆ, ಫಲಿತಾಂಶ ವೈದ್ಯರ ಕೈಯಲ್ಲಿಲ್ಲ. ನಿರೀಕ್ಷೆಗೆ ಮೀರಿದ ಪಾಸಿಟಿವ್/ನೆಗೆಟಿವ್ ಫಲಿತಾಂಶ ಬರಬಹುದು, ಇದನ್ನು ಕೋವಿಡ್-19 ನಿರೂಪಿಸಿದೆ. ನಮಗೆ ವೈದ್ಯವಿಜ್ಞಾನದ ಮತ್ತು ವೈದ್ಯರ ಇತಿಮಿತಿಗಳು ಅರ್ಥವಾಗಿದೆ.

ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಕಲಿತ ಇಂಥಹದ್ದೇ ಇನ್ನಷ್ಟು ಪಾಠಗಳನ್ನು ಪಟ್ಟಿ ಮಾಡಿ, ಎಚ್ಚರಿಕೆ ವಹಿಸಬಹುದಲ್ಲವೇ...?

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com