ಮಕ್ಕಳಲ್ಲಿ ನಕಾರಾತ್ಮಕ ನಡವಳಿಕೆಗಳನ್ನು ತಡೆಯುವುದು ಹೇಗೆ? ಪರಿಹಾರವೇನು? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯಇತ್ತೀಚಿನ ದಿನಗಳಲ್ಲಿ, ಹರೆಯದ ಮಕ್ಕಳಲ್ಲಿ ಅತಿಸ್ವಾತಂತ್ರ್ಯದ ಬೇಡಿಕೆ. ಹಠಮಾರಿತನ ಹೆಚ್ಚುತ್ತಿದೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಇತ್ತೀಚಿನ ದಿನಗಳಲ್ಲಿ, ಹರೆಯದ ಮಕ್ಕಳಲ್ಲಿ ಅತಿಸ್ವಾತಂತ್ರ್ಯದ ಬೇಡಿಕೆ. ಹಠಮಾರಿತನ ಹೆಚ್ಚುತ್ತಿದೆ. 

ತಂದೆತಾಯಿಗಳ, ಹಿರಿಯರ ಮಾತುಗಳನ್ನು ಕೇಳಿಸಿಕೊಳ್ಳಲು ಅವರು ತಯಾರಿರುವುದಿಲ್ಲ. ತಾವು ಹೇಳಿದಂತೆ ತಂದೆ-ತಾಯಿಗಳು ಕೇಳಬೇಕೆಂದು ಬಯಸುತ್ತಾರೆ. ಸಿಟ್ಟು-ಸೆಡವು ಹೆಚ್ಚಾಗಿದೆ ತಾವು ಕೇಳಿದ ಬಯಸಿದ ವಸ್ತುಗಳನ್ನು ಪರಿಕರಗಳನ್ನು ತಂದೆತಾಯಿಗಳು ಕೊಂಡುಕೊಳ್ಳಬೇಕೆಂದು ಒತ್ತಾಯ ಮಾಡುತ್ತಾರೆ. ದುಬಾರಿ ಮೊಬೈಲ್ ಬೇಕೆನ್ನುತ್ತಾರೆ. ದ್ವಿಚಕ್ರವಾಹನಕ್ಕಾಗಿ ಬೇಡಿಕೆ ಇಡುತ್ತಾರೆ. ಗಾಡಿ ಚಾಲನೆ ಮಾಡಲು ಕಾನೂನು ಅವಕಾಶ ಕೊಡುವುದಿಲ್ಲ ಎಂದು ಗೊತ್ತಿದ್ದರೂ ಗಾಡಿ ಓಡಿಸುತ್ತಾರೆ, ಅತಿ ವೇಗದಲ್ಲಿ ಚಲಾಯಿಸುತ್ತಾರೆ. ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ. ಧೂಮಪಾನ, ಮಾದಕವಸ್ತು ಸೇವನೆ, ಮದ್ಯಪಾನದಲ್ಲಿ ತೊಡಗುತ್ತಾರೆ. ಆರೋಗ್ಯಕರ ಹವ್ಯಾಸಗಳಿಗಿಂತ ಅನಾರೋಗ್ಯಕರ ಹವ್ಯಾಸಗಳಲ್ಲೇ ಹೆಚ್ಚು ಮಗ್ನರಾಗಿರುತ್ತಾರೆ.   
ತತ್ ಕ್ಷಣದ ಖುಷಿ ಮನರಂಜನೆಗೇ ಪ್ರಾಧಾನ್ಯ ಕೊಡುತ್ತಾರೆ. ಜೀವನದ ಗುರಿ ಉದ್ದೇಶಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ.

ಅದರಲ್ಲೂ ಕೋವಿಡ್-19 ಜಾಗತಿಕ ಜಾಡ್ಯ-ಕಂಡ ಮೇಲೆ ಮಕ್ಕಳ ನಡವಳಿಕೆಗಳಲ್ಲಿ ಅನೇಕ ನಕಾರಾತ್ಮಕ ಬದಲಾವಣೆಗಳಾಗಿವೆ.
 

  1. ಅವಿಧೇಯತನ: ತಂದೆತಾಯಿಗಳ ಮಾತನ್ನು ಅವರು ಕೇಳುವುದಿಲ್ಲ. ತಂದೆತಾಯಿಗಳ ಸಲಹೆ-ಸೂಚನೆಗಳನ್ನು ಪಾಲಿಸುವುದಿಲ್ಲ. ಏತಿ ಎಂದರೆ ಪ್ರೇತಿ ಎನ್ನುತ್ತಾರೆ. ಮಾಡಬೇಡ ಎಂದಿದನ್ನು ಮಾಡುತ್ತಾರೆ, ಮಾಡು ಎಂದದ್ದನ್ನು ಮಾಡುವುದಿಲ್ಲ.
  2. ಓದು-ಕಲಿಕೆಯಲ್ಲಿ ಆಸಕ್ತಿ ಇಲ್ಲ: ಆನ್ ಲೈನ್ ಕ್ಲಾಸುಗಳಲ್ಲಿ ಮಕ್ಕಳಿಗೆ ಆಸಕ್ತಿ ಇಲ್ಲ. ಅರ್ಥಮಾಡಿಕೊಳ್ಳುವುದು ಕಷ್ಟಕರವೂ ಹೌದು. ಹೀಗಾಗಿ ಓದು-ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ನಡೆಯದ ಪರೀಕ್ಷೆ ಅಥವಾ ನಾಮ್ಕಾವಾಸ್ತೆ ಪರೀಕ್ಷೆಯಿಂದಾಗಿ  ಅವರ ಸ್ಪರ್ಧಾತ್ಮಕ ಮನೋಭಾವವೂ ತಗ್ಗುತ್ತಿದೆ.
  3. ಮೊಬೈಲ್ ದುರ್ಬಳಕೆ/ಚಟ: ಆನ್ ಲೈನ್ ಕ್ಲಾಸ್ಸಿನಲ್ಲಿ ಭಾಗವಹಿಸಲು ಮಕ್ಕಳಿಗೆ ಸ್ಮಾರ್ಟ್ಫೋನ್ ಕೊಡುತ್ತೇವೆ. ಲ್ಯಾಪ್ಟಾಪ್ ನೀಡುತ್ತೇವೆ ಅವರು ಮೊಬೈಲಿನಲ್ಲಿ/ ಲ್ಯಾಪ್ಟಾಪಿನಲ್ಲಿ ಗೇಮ್ಸ್ ಆಡಲು, ಅಶ್ಲೀಲ್ಲ ಚಿತ್ರಗಳನ್ನು ನೋಡಲು, ಅನಾರೋಗ್ಯಕರ ಚಾಟ್ ನಲ್ಲಿ ಭಾಗಿಯಾಗಲು ಪ್ರಾರಂಭಿಸಿ, ಅದಕ್ಕೇ ಅವಲಂಬಿತರಾಗುತ್ತಾರೆ. ಕಂಟ್ರೋಲ್ ಮಾಡಲು ತಂದೆ-ತಾಯಿ ಪ್ರಯತ್ನಿಸಿದರೆ, ವಸ್ತು ನಾಶ ಮಾಡಲು ಪ್ರಯತ್ನಿಸುತ್ತಾರೆ, ಆತ್ಮಹತ್ಯೆಯ ಧಮ್ಕಿ ಹಾಕುತ್ತಾರೆ.
  4. ಭಯ- ಕೋಪ – ಬೇಸರ: ಇತ್ಯಾದಿ ನಕಾರಾತ್ಮಕ ಭಾವನೆಗಳು ಹೆಚ್ಚುತ್ತಿದೆ ಅನಗತ್ಯ ಹಾಗು ವಿಪರೀತ ಆತಂಕ, ಭಯದಿಂದಲೋ ಸಿಟ್ಟು-ಕೊಪಗಳಿಂದಲೋ ಬೇಸರ ದುಃಖಗಳಿಂದಲೋ ಬಳಲುತ್ತಾರೆ. ಇದರಿಂದಾಗಿ ಅವರ ಆಹಾರ ಸೇವನೆ ನಿದ್ರೆ- ದೈಹಿಕ ಸ್ವಚ್ಛತೆ ಹಾಗು ನಿತ್ಯ ಜೀವನದ ಚಟುವಟಿಕೆಗಳು ಏರು ಪೇರಾಗಿವೆ. ಸಮಯಕ್ಕೆ ಸರಿಯಾಗಿ ಅವರು ಯಾವುದನ್ನೂ ಮಾಡುವುದಿಲ್ಲ. ಅಶಿಸ್ತು ಸೋಮಾರಿತನ ಹೆಚ್ಚುತ್ತಿದೆ.
  5. ಬೊಜ್ಜುತನ: ಆಟವಿಲ್ಲ, ವ್ಯಾಯಾಮವಿಲ್ಲ. ಹೆಚ್ಚು ಜಂಕ್ ಫುಡ್ಸ್ ಸೇವನೆಯಿಂದ ಕೆಲವು ಮಕ್ಕಳ ತೂಕ ಹೆಚ್ಚುತ್ತಿದೆ. ಬೊಜ್ಜುತನ ಬೆಳೆಯುತ್ತಿದೆ.
  6. ಸುಳ್ಳು ಹೇಳುವುದು: ತಂದೆ-ತಾಯಿಯನ್ನು ಕೇಳದೆಯೇ ಹಣ ತೆಗೆದುಕೊಂಡು ಖರ್ಚುಮಾಡುವುದು, ಅತಿ ಸ್ವಾರ್ಥ, ಇತರ ಮಕ್ಕಳಿಗೆ ತೊಂದರೆ ಕೊಡುವುದು, ಇತ್ಯಾದಿ ನಡೆವಳಿಕೆ ಸಮಸ್ಯೆಗಳು ಹೆಚ್ಚುತ್ತಿವೆ.

ಇದಕ್ಕೆ ಪರಿಹಾರವೇನು?

ಪಾಲಕರೇ ನಿಮ್ಮ ಮಕ್ಕಳಿಗಾಗಿ, ನೀವು ದಿನದ ಸ್ವಲ್ಪ ಸಮಯವನ್ನು ಮೀಸಲಾಗಿಡಿ. ನಿಮ್ಮ ಕೆಲಸ-ಸಂಪಾದನೆಯಲ್ಲೇ ಮುಳುಗಿ ಹೋಗಬೇಡಿ. ನೀವು ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದಷ್ಟೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಪರಸ್ಪರ ಗೌರವ ಹೆಚ್ಚುತ್ತದೆ.

ನಿಮ್ಮ ಮಕ್ಕಳೊಂದಿಗೆ ಆಡಿ ಮಾತನಾಡಿ, ಹಲವು ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ಅಡುಗೆ ಕೆಲಸ, ಮನೆ ಓರಣ ಮಾಡುವುದು, ಶಾಪಿಂಗ್ ನಲ್ಲಿ ಅವರನ್ನೂ ಭಾಗವಹಿಸುವಂತೆ ಮಾಡುವುದು ನಿಮ್ಮ ಕೈಯಲ್ಲಿದೆ. ಅವರ ಬೇಕು ಬೇಡಗಳನ್ನು ಕೇಳಿ. ಯಾವುದು ಅಗತ್ಯ, ಯಾವುದು ಅಗತ್ಯವಲ್ಲ ಎಂಬುದನ್ನು ಮನದಟ್ಟು ಮಾಡಿ. ವಿವೇಚನೆಯಿಂದ ಹಣವನ್ನು ಖರ್ಚುಮಾಡಿ, ಅವರಿಗೆ ಹೇಳಿಕೊಡಿ. ಆಡಂಬರ ಮೋಜಿಗೆ ಕಡಿವಾಣ ಹಾಕುವುದನ್ನು ಕಲಿಸಿ.

ಆನ್ ಲೈನ್ ಕ್ಲಾಸ್ ಮತ್ತಿತರ ಕಲಿಕಾ ಅವಧಿಯಲ್ಲಿ ನೀವು ಅವರ ಜೊತೆಗಿರಿ ವಿಷಯವನ್ನು ಅರ್ಥ ಮಾಡಿಸಿ. ಒಳಾಂಗಣ ಚಟುವಟಿಕೆಗಳನ್ನು ಎಲ್ಲ ಸೇರಿಕೊಂಡು ಮಾಡಿ. ಆರೋಗ್ಯಕರ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಮಕ್ಕಳು ಸಂಗೀತ, ಅಭಿನಯ, ಮಿಮಿಕ್ರಿ ಚಿತ್ರಕಲೆಯಲ್ಲಿ ಆಸಕ್ತಿ ತೋರಿಸುತ್ತಾರೆ. ಅದನ್ನು ಬಳಸಿಕೊಳ್ಳಿ. ಚಿಂತನೆ-ಮಂಥನ-ವಿವೇಚನೆ ಮಾಡಲು ಕಲಿಸಿ. ಪ್ರಶ್ನೆ ಕೇಳಲು ಪ್ರೋತ್ಸಾಹಿಸಿ. ಭಾವನೆಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಪ್ರೋತ್ಸಾಹಿಸಿ. ದಯೆ, ಅನುಕಂಪ ತೋರಿಸುವುದು, ಇತರರಿಗೆ ನೆರವಾಗುವುದು ಇರುವುದನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com