ಖಿನ್ನತೆ (ಸಾಂಕೇತಿಕ ಚಿತ್ರ)
ಖಿನ್ನತೆ (ಸಾಂಕೇತಿಕ ಚಿತ್ರ)

ಖಿನ್ನತೆ: ದುರ್ಬಲತೆಯೇ, ಮಾನಸಿಕ ಅಸ್ಥಿರತೆಯೇ ಅಥವಾ ಖಾಯಿಲೆಯೇ? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಇತ್ತೀಚೆಗೆ ಮಂಗಳೂರಿನ ಬೈಕಂಪಾಡಿಯಲ್ಲಿ ದಂಪತಿಗಳಿಬ್ಬರು ಕೋವಿಡ್ ರೋಗ ಬಂತೆಂದು ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿಯಾಯಿತು.

ಇತ್ತೀಚೆಗೆ ಮಂಗಳೂರಿನ ಬೈಕಂಪಾಡಿಯಲ್ಲಿ ದಂಪತಿಗಳಿಬ್ಬರು ಕೋವಿಡ್ ರೋಗ ಬಂತೆಂದು ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿಯಾಯಿತು. ಹಾಗೆಯೇ ಖಿನ್ನತೆಯ ಕಾರಣಕ್ಕೆ ಈಗಾಗಲೇ ಹಲವಾರು ಜನರು ಪ್ರಾಣ ತೆತ್ತಿರುವುದು ನಮಗೆಲ್ಲ ತಿಳಿದಿದೆ. 

ಈ ದುರಂತ ಪ್ರಕರಣಗಳು ಖಿನ್ನತೆ ಮತ್ತು ಮಾನಸಿಕ ಆರೋಗ್ಯವನ್ನು ಮತ್ತೆ ಸಮಾಜದ ಮುನ್ನೆಲೆಗೆ ತಂದಿಟ್ಟಿದೆ. ಇದೇ ರೀತಿ ಖ್ಯಾತ ಹಿಂದಿ ನಟ ಸುಶಾಂತ್ ಸಿಂಗ್ ರಾಜಪೂತ್ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಸಾಕಷ್ಟು ಹಣ, ಹೆಸರು ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಸುಶಾಂತ್ 34ರ ವಯಸ್ಸಿನಲ್ಲಿ ಹೀಗೆ ದುರಂತ ಕಂಡಿದ್ದು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದ್ದು ಸುಳ್ಳಲ್ಲ. ಆದರೆ ಆತ ಖಿನ್ನನಾಗಿದ್ದ ಮತ್ತು ಕಳೆದ ಆರು ತಿಂಗಳುಗಳಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಜೀವನದ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ತಿಳಿಹೇಳುವ ಪಾತ್ರದಲ್ಲಿ ನಟಿಸಿದ್ದ ಸುಶಾಂತ್ ನಿಜ ಜೀವನದಲ್ಲಿ ಸ್ವತ: ಆತ್ಮಹತ್ಯೆ ಮಾಡಿಕೊಂಡಿದ್ದು ಮಾನಸಿಕ ಸಮಸ್ಯೆಗಳ ಸಂಕೀರ್ಣತೆಗೆ ಹಿಡಿದ ಸ್ಪಷ್ಟ ಕನ್ನಡಿಯಾಗಿರುವುದಂತೂ ಸತ್ಯ. 

ಖಿನ್ನತೆ ಎಂದರೇನು?
ಅಷ್ಟೇ ಅಲ್ಲ. ಕೆಲವೊಮ್ಮೆ ಜೀವನದಲ್ಲಿ ಬೇಸರವಾಗುವ/ ಕಹಿಯಾದ ಘಟನೆಗಳು ನಡೆದಾಗ ನಮಗೆ ದುಃಖವಾಗುವುದು ಸಹಜ. ಆದರೆ ಈ ಭಾವನೆ ತುಂಬಾ ದಿನಗಳವರೆಗೆ ಇದ್ದು (ಕನಿಷ್ಠ ಎರಡು ವಾರಗಳಿಗಿಂತ ಹೆಚ್ಚು) ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡರೆ ನಮ್ಮ ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು. ಹೀಗೆ ಭಾವನಾತ್ಮಕವಾಗಿ ಯಾವುದೇ ಆಶಯವೂ ಇಲ್ಲದೆ ಇರುವ ಮಾನಸಿಕ ಸ್ಥಿತಿಯನ್ನು ಖಿನ್ನತೆ ಎಂದು ಹೇಳಲಾಗುತ್ತದೆ. ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುತ್ತದೆ. ಖಿನ್ನತೆಯು ವೃತ್ತಿ, ಶಿಕ್ಷಣ, ಊಟ, ನಿದ್ರೆ,  ಭಾವನೆಗಳು,  ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.

ಖಿನ್ನತೆ ಒಂದು ಆರೋಗ್ಯ ಸಮಸ್ಯೆ
ನಿಜವಾಗಿ ಹೇಳಬೇಕೆಂದರೆ ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ. ಇದು ಡಯಾಬಿಟೀಸ್, ರಕ್ತದ ಒತ್ತಡ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಖಾಯಿಲೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. 

ಇತರ ಆರೋಗ್ಯ ಸಮಸ್ಯೆಗಳಂತೆಯೇ ಖಿನ್ನತೆಯೂ ಒಂದು ಸಮಸ್ಯೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗೋಪಾಯಗಳು ಇರುವಂತೆ ಇದಕ್ಕೂ ಪರಿಹಾರವಿದೆ. ಜಗತ್ತಿನಲ್ಲಿ ಮನುಷ್ಯನನ್ನು ಅತ್ಯಂತ ಹೆಚ್ಚು ನಿಷ್ಕ್ರಿಯಗೊಳಿಸುವ ಖಾಯಿಲೆಗಳಲ್ಲಿ ಖಿನ್ನತೆಯೂ ಕೂಡ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವವರು ಖಂಡಿತವಾಗಿ ಗುಣಮುಖರಾಗಿ ಸಹಜ ಜೀವನ ನಡೆಸಬಹುದು. ಖಿನ್ನತೆ ಎಂದರೆ ಬದುಕಿನ ಅಂತ್ಯವಲ್ಲ.

ಖಿನ್ನತೆಯ ಲಕ್ಷಣಗಳು

ಖಿನ್ನತೆಯ ಪ್ರಮುಖ ಲಕ್ಷಣಗಳಲ್ಲಿ ಹೆಚ್ಚು ದುಃಖ ಅಥವಾ ಬೇಸರ, ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಕಷ್ಟ ಪಡುವುದು, ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಸುಸ್ತು, ಇಷ್ಟ ಪಟ್ಟು ಮಾಡುವ ಕೆಲಸಗಳಲ್ಲಿ ನಿರಾಸಕ್ತಿ, ಆತ್ಮವಿಶ್ವಾಸ ಕಳೆದುಕೊಳ್ಳುವುದು, ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ, ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು, ಅಪರಾಧಿ ಭಾವನೆ, ತನ್ನಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಕೊರಗುವುದು, ನಿದ್ರೆ ಬಾರದಿರುವುದು ಸೇರಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಖಿನ್ನತೆಯ ಲಕ್ಷಣಗಳು ಬದಲಾಗುತ್ತವೆ. ಖಿನ್ನತೆ ಮಕ್ಕಳಲ್ಲಿ, ಹದಿಹರೆಯದವರಲ್ಲಿ, ವಯಸ್ಕ ಪುರುಷರು, ಮಹಿಳೆಯರು ಮತ್ತು ವೃದ್ಧರಲ್ಲಿ ಹೀಗೆ ಯಾರಲ್ಲಾದರೂ ಕಂಡುಬರಬಹುದು. ಖಿನ್ನತೆಯು ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುವಷ್ಟು ಗಂಭೀರವಾಗಿದೆ. ಜೀವನದಲ್ಲಿನ ಒತ್ತಡ,  ಅಹಿತಕರ ಘಟನೆಗಳು ಹೀಗೆ ಹಲವು ಕಾರಣಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು. ಕೆಲಸ,  ಕೌಟುಂಬಿಕ ಅಥವಾ ವೈವಾಹಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳು, ದೈಹಿಕ ಆರೋಗ್ಯ ಸಮಸ್ಯೆಗಳು, ಪರಿಪೂರ್ಣತೆಯ ಬಯಕೆ, ವ್ಯಕ್ತಿತ್ವದ ಚಿಂತೆ, ಮಾದಕ ವಸ್ತುಗಳ ಚಟ, ಶಾಲೆಕಾಲೇಜು ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಸ್ಪರ್ಧೆ ಇವೆಲ್ಲವೂ ಖಿನ್ನತೆಯನ್ನು ಉಂಟುಮಾಡುವ ಸಾಮಾನ್ಯ ವಿಷಯಗಳಾಗಿವೆ.

ಖಿನ್ನತೆ ಮನಸ್ಸಿಗೆ ಸಂಬಂಧಿಸಿದ್ದರಿಂದ ಜನರು ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಕೆಲವರಂತೂ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅಪಹಾಸ್ಯಕ್ಕೆ ಒಳಗಾಗಬಹುದು,  ದುರ್ಬಲ ಎಂದು ಇತರರು ಎಂದುಕೊಳ್ಳಬಹುದು ಎಂದು ಮುಚ್ಚಿಡುತ್ತಾರೆ. ಕೆಲವರಿಗೆ ಈ ಕಾಯಿಲೆಯ ಬಗ್ಗೆ ತಿಳುವಳಿಕೆ ಇಲ್ಲದೇ ಬಳಲುತ್ತಾರೆ ಮತ್ತು ಅವರೊಂದಿಗೆ ಅವರ ಕುಟುಂಬದವರೂ ಯಾತನೆ ಪಡುತ್ತಾರೆ. ಆದ್ದರಿಂದ ಖಿನ್ನತೆಯ ಲಕ್ಷಣಗಳಿರುವ ಜನರೊಂದಿಗೆ ಮುಕ್ತವಾಗಿ ಮಾತನಾಡಬೇಕು ಅಥವಾ ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ಸಾಮಾನ್ಯ ಖಿನ್ನತೆಗೆ ಆಪ್ತ ಸಮಾಲೋಚನೆ ಅಥವಾ ಇತರ ಥೆರಪಿಗಳು ಸಾಕಾಗುತ್ತವೆ. ತೀವ್ರವಾದ ಖಿನ್ನತೆಗೆ ಮಾತ್ರ ಥೆರಪಿಯೊಂದಿಗೆ ಔಷಧಗಳ ಅಗತ್ಯವಿರುತ್ತದೆ.

ಖಿನ್ನತೆಗೆ ಚಿಕಿತ್ಸೆ
ಖಿನ್ನತೆಯ ಚಿಕಿತ್ಸೆಯಲ್ಲಿ ಹಲವು ವಿಧಾನಗಳಿವೆ. ಖಿನ್ನತೆಯ ತೀವ್ರತೆ, ವ್ಯಕ್ತಿಯ ಆರೋಗ್ಯದ ಸ್ಥಿತಿ ಮತ್ತು ಚೇತರಿಸಿಕೊಳ್ಳಲು ಅವರಲ್ಲಿರುವ ಚೈತನ್ಯದ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯ ನಿರ್ಧಾರ ಮಾಡುತ್ತಾರೆ. ಖಿನ್ನತೆಯ ಚಿಕಿತ್ಸೆಯಲ್ಲಿ ವಿವಿಧ ಮನೋವೈಜ್ಞಾನಿಕ ಥೆರಪಿಗಳು ಪರಿಣಾಮಕಾರಿ. ಇದರಲ್ಲಿ ಸಕಾರಾತ್ಮಕ ಚಿಂತನೆಗಳು ಮತ್ತು ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ರಿಲಾಕ್ಸೇಶನ್ ವಿಧಾನಗಳನ್ನು ಕಲಿಸಲಾಗುತ್ತದೆ. ಅಲ್ಲದೇ ಖಿನ್ನತೆಗೊಳಗಾದವರ ಕುಟುಂಬದ ಸದಸ್ಯರಿಗೆ ಮನೋವೈಜ್ಞಾನಿಕ ಶಿಕ್ಷಣ ನೀಡುವುದರಿಂದ ಒತ್ತಡ, ಗೊಂದಲ ಮತ್ತು ಆತಂಕದ ಪರಿಸ್ಥಿತಿಗಳು ಕಡಿಮೆಯಾಗಿ ಸನ್ನಿವೇಶವನ್ನು ನಿಭಾಯಿಸಲು ಸಹಾಯಕವಾಗುತ್ತದೆ. ಆಗ ಮನೆಯವರು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಖಿನ್ನತೆ ಇರುವ ವ್ಯಕ್ತಿಯ ಜೊತೆ ಮಾತನಾಡಿ ಮತ್ತು ಸಹನೆಯಿಂದ ಅವರ ಮಾತನ್ನು ಕೇಳಿಸಿಕೊಳ್ಳಬೇಕು. ಮನಬಿಚ್ಚಿ ಭಾವನೆಗಳನ್ನು ಹಂಚಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬೇಕು. ಅವರಿಗೆ ಇಷ್ಟವಾದ ಚಟುವಟಿಕೆ ಮಾಡಲು ನೆರವು ನೀಡಬೇಕು. ಸದಾ ಕ್ರಿಯಾಶೀಲವಾಗಿರುವುದು ಖಿನ್ನತೆಗೆ ಅತ್ಯುತ್ತಮ ಪರಿಹಾರ.

ಖಿನ್ನತೆಗೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಅದೇ ಗಂಭೀರ ಆರೋಗ್ಯ ಸಮಸ್ಯೆಯಾಗಿ ಕಾಡಬಹುದು. ನಿಸ್ಸಾಯಕ ಮತ್ತು ನಿರಾಶೆಯ ಭಾವನೆ ಹೊಂದಿರುವುದು ಖಿನ್ನತೆಯ ಲಕ್ಷಣಗಳು ಮತ್ತು ಇದು ವಾಸ್ತವ ಪರಿಸ್ಥಿತಿಯಲ್ಲ ಎನ್ನುವುದನ್ನು ಗಮನಿಸಬೇಕು. ಖಿನ್ನತೆಯಿಂದ ಬಳಲುತ್ತಿರುವವರು ಇತ್ತೀಚೆಗೆ ಅತಿಯಾಗಿ ಮೊಬೈಲ್ ಫೋನು/ಇಂಟರ್ನೆಟ್ ಬಳಸುವುದು ಕೂಡ ಕಂಡುಬಂದಿದೆ.

ಖಿನ್ನತೆಯಿಂದ ಹೊರಬರುವುದು ಹೇಗೆ?
ಇಂದಿನ ದಿನಮಾನದಲ್ಲಿ ಖಿನ್ನತೆ ಸಾಮಾನ್ಯ, ಅಂದರೆ ಯಾರಿಗೆ ಬೇಕಾದರೂ ಬರಬಹುದು. ಆದ್ದರಿಂದ ಋಣಾತ್ಮಕ ಮನೋಭಾವವನ್ನು ಬಿಟ್ಟುಬೇಡಬೇಕು. ಅಪರಾಧಿ ಭಾವ, ಕೀಳರಿಮೆ ಮುಂತಾದ ನಕಾರಾತ್ಮಕ ಯೋಚನೆಗಳು ಯಾವಾಗ ಕಾಣಿಸಿಕೊಳ್ಳುತ್ತವೆ ಎಂದು ಗಮನಿಸಿ ಹುಷಾರಾಗಿರಬೇಕು. ಕ್ರಿಯಾಶೀಲರಾಗಿರುವುದು ಎಲ್ಲಕ್ಕಿಂತ ಮುಖ್ಯ. ದಿನನಿತ್ಯದ ನಮ್ಮ ಕೆಲಸಗಳು ಮತ್ತು ಚಟುವಟಿಕೆಗಳನ್ನು ಚೆನ್ನಾಗಿ ಮಾಡಿ ಮುಗಿಸಬೇಕು. ವಾಕಿಂಗ್, ಜಿಮ್ಗೆ ಹೋಗಿ ದೈಹಿಕವಾಗಿ ಸದೃಢವಾಗಿರಬೇಕು. ವ್ಯಾಯಾಮವು ದೇಹ ಮತ್ತು ಮನಸ್ಸಿನ ವಿಕಸನಕ್ಕೆ ನೆರವಾಗುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮತ್ತು ಭಯಗಳನ್ನು ಧೈರ್ಯದಿಂದ ಎದುರಿಸಬೇಕು. ಮನೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರಬೇಕು. ಉತ್ತಮ ಆಹಾರ ವಿಹಾರ, ವ್ಯಾಯಾಮ, ಸುಖಕರ ನಿದ್ರೆಗಳಿದ್ದರೆ ಯಾವ ಖಿನ್ನತೆಯು ನಮ್ಮನ್ನು ಬಾಧಿಸುವುದಿಲ್ಲ.

ಬದುಕು ನಿಂತ ನೀರಲ್ಲ. ಏರುಪೇರುಗಳು ಜೀವನದಲ್ಲಿ ಸಹಜ. ಎಷ್ಟೇ ನಿರಾಶರಾದರೂ ಮತ್ತೆ ಉತ್ತಮ ಭಾವನೆ ಹೊಂದಬಹುದು. ಖಿನ್ನತೆಗೆ ಕಾರಣ, ಅದರ ಲಕ್ಷಣಗಳು ಹಾಗೂ ಅದರ ವಿಧಗಳನ್ನು ತಿಳಿದುಕೊಂಡು ಮತ್ತು ಸಮಸ್ಯೆಯಿಂದ ಹೊರಬರಬಹುದು ಮತ್ತು ಖಂಡಿತಾ ಉತ್ತಮ ಜೀವನ ನಡೆಸಬಹುದು.

ಡಾ. ವಸುಂಧರಾ ಭೂಪತಿ
ಇಮೇಲ್: bhupathivasundhara@gmail.com

Related Stories

No stories found.

Advertisement

X
Kannada Prabha
www.kannadaprabha.com