'ಪೆಟಿಎಂ' ಎನ್ನುವ ಹಣ ಸುಡುವ ಮಷೀನ್ ಕಥೆ ಇಲ್ಲಿದೆ! (ಹಣಕ್ಲಾಸು)

ಹಣಕ್ಲಾಸು-285-ರಂಗಸ್ವಾಮಿ ಮೂಕನಹಳ್ಳಿ
ಪೇಟಿಎಂ ಆಪ್
ಪೇಟಿಎಂ ಆಪ್

ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಜನವರಿ 2021 ರಿಂದ ಸೆಪ್ಟೆಂಬರ್ 2021ರಲ್ಲಿ ಅಂದರೆ ಪ್ರಥಮ ಒಂಬತ್ತು ತಿಂಗಳಲ್ಲಿ ಮಾರುಕಟ್ಟೆಯಿಂದ ಐಪಿಓ ಮೂಲಕ 9.7 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಬಂಡವಾಳದ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದರೆ ಭಾರತೀಯ ಮಾರುಕಟ್ಟೆಯ ಸಾಮರ್ಥ್ಯ ನಿಮಗೆ ಅರಿವಾದೀತು. 

ಇದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಇನ್ನೊಂದು ಅಂಶವನ್ನ ಕೂಡ ಹೇಳಿಬಿಡುತ್ತೇನೆ, ಕಳೆದ 20 ವರ್ಷಗಳಲ್ಲಿ ಈ ಮಟ್ಟದ ಹಣವನ್ನ ಮಾರುಕಟ್ಟೆಯಲ್ಲಿ ತೆಗೆದಿರುವುದು ಇದೆ ಮೊದಲು!.

ಈ ವರ್ಷದ ಮೊದಲಿನಿಂದ ಒಬ್ಬರಲ್ಲ ಒಬ್ಬರು ಮಾರುಕಟ್ಟೆಯಲ್ಲಿ ಹಣವನ್ನ ಎತ್ತಿಕೊಳ್ಳುತ್ತಿದ್ದಾರೆ, ಆಶ್ಚರ್ಯ ಎನ್ನುವಂತೆ ಬಹುತೇಕ ಐಪಿಓ ಗಳು ಓವರ್ ಸಬ್ಸ್ಕ್ರೈಬ್ ಆಗಿದ್ದವು. ನಿರಾತಂಕವಾಗಿ ಮಾರುಕಟ್ಟೆಯಿಂದ ಹಣ ಎತ್ತುವ ಕಾರ್ಯ ಸಾಗುತ್ತಿತ್ತು. ಪೆಟಿಎಂ ಎನ್ನುವ ಫಿನ್ ಟೆಕ್ ದೈತ್ಯ ಸಂಸ್ಥೆ ಐಪಿಓ ಹೊರಡಿಸುವವರೆಗೆ ಎಲ್ಲವೂ ಸರಾಗವಾಗಿತ್ತು. ನಿಮಗೆ ತಿಳಿದಿರಲಿ 50 ರಿಂದ ನೂರು ಪ್ರತಿಶತ ಪ್ರೀಮಿಯಂ ಇಟ್ಟ ಐಪಿಓ ಗಳು ಕೂಡ 200 ರಿಂದ 300 ಪಟ್ಟು ಓವರ್ ಸಬ್ಸ್ಕ್ರೈಬ್ ಆಗುತ್ತಿದ್ದವು. ಪೆಟಿಎಂ ಕೇವಲ 1.89 ಪಟ್ಟು ಮಾತ್ರ ಹೆಚ್ಚಿನ ಬೇಡಿಕೆಯನ್ನ ಪಡೆದುಕೊಂಡಿತು. ಹೀಗಾಗಿ ಒಮ್ಮೆಲೇ 28 ಪ್ರತಿಶತ ಕುಸಿತವನ್ನ ಕೂಡ ಕಂಡಿತು.

ಕಳೆದ ದಶಕದ ಅತ್ಯಂತ ಹೆಚ್ಚಿನ ಯಶಸ್ಸು ಕಂಡ ಫಿನ್ ಟೆಕ್ ಪೆಟಿಎಂ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಿಯಾದ ಸಮಯದಲ್ಲಿ, ಸರಿಯಾದ ದೇಶದಲ್ಲಿ ಇದಕ್ಕೆ ಚಾಲನೆ ದೊರೆತದ್ದು ಈ ಮಟ್ಟದ ಯಶಸ್ಸು ಗಳಿಸಲು ಪ್ರಮುಖ ಕಾರಣ. ಹೂಡಿಕೆದಾರರಿಗೆ ಇದರಲ್ಲಿ ಇರುವ ಅಗಾಧ ಸಾಧ್ಯತೆಗಳು ಕಂಡವು , ಹೀಗಾಗಿ ಅವರು ಹಿಂದೆ ಮುಂದೆ ನೋಡದೆ ಹಣವನ್ನ ಸುರಿಯಲು ಶುರು ಮಾಡಿದರು. ಎಲ್ಲಿಯವರೆಗೆ ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹೂಡುತ್ತಿದ್ದರು, ಆ ನಂತರ ಪ್ರೈವೆಟ್ ಈಕ್ವಿಟಿ ಫಂಡ್ಸ್ ಹಣವನ್ನ ಸುರಿಯುತ್ತಿದ್ದರು ಎಲ್ಲವೂ ಸರಿಯಾಗಿತ್ತು. ಗಮನಿಸಿ ಇವರಿಗೆ ಕಣ್ಣು ಲಾಭಕ್ಕಿಂತ ಸಂಸ್ಥೆಯ ವ್ಯಾಲ್ಯೂವೇಷನ್ ಮೇಲಿರುತ್ತದೆ. ಸಂಸ್ಥೆ ಕೋಟ್ಯಂತರ ರೂಪಾಯಿ ಹಣವನ್ನ ನಷ್ಟ ಮಾಡುತ್ತಿದ್ದರೂ ಅವರಿಗೆ ಏನೂ ಅನಿಸುವುದಿಲ್ಲ. ಅವರ ಗೇಮ್ ಪ್ಲಾನ್ ಬೇರೆಯಿರುತ್ತದೆ. ಸಂಸ್ಥೆಯ ಮೌಲ್ಯವನ್ನ ವೃದ್ಧಿಸಿ ನಂತರ ಅದನ್ನ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದು ಅಥವಾ ಹೊಸ ಮೌಲ್ಯಕ್ಕೆ ಹೊಸ ಹೂಡಿಕೆದಾರ ಬಂದಾಗ ತಮ್ಮ ಹಣವನ್ನ ತೆಗೆದುಕೊಳ್ಳುವುದು, ಹೀಗೆ ಅವರ ಆಟದ ನಿಯಮಗಳು ಬೇರೆ ಇರುತ್ತವೆ. ಈ ರೀತಿ ಹೊಸ ಹೊಡಿಕೆದಾರರನ್ನ ಎಷ್ಟು ಬಾರಿ ತರಲು ಸಾಧ್ಯ? ಯಾವಾಗ ಪೆಟಿಎಂ ಪಬ್ಲಿಕ್ ಈಕ್ವಿಟಿಗೆ ಹೋದರು ಅಲ್ಲಿಂದ ಸಮಸ್ಯೆ ಶುರುವಾಯಿತು. ಅಂದರೆ ಗಮನಿಸಿ, 'ವಿಸಿ'ಗಳು ಮತ್ತು ಪ್ರೈವೇಟ್ ಈಕ್ವಿಟಿ ಯವರು ಅತಿ ಸಣ್ಣ ವಿಷಯಗಳನ್ನ ನೋಡುವುದಿಲ್ಲ, ಖರ್ಚು ವೆಚ್ಚದ ಲೆಕ್ಕಾಚಾರ, ನಷ್ಟದ ಬಾಬತ್ತು ಆಡಿಟ್ ಮಾಡಿ ಅಯ್ಯೋ ಎಂದು ಕುಳಿತು ಕೊಳ್ಳುವ ಜಾಯಮಾನ ಅವರದಲ್ಲ, ಆದರೆ ಪಬ್ಲಿಕ್ ಫಂಡ್ ಎತ್ತಿದ ಮೇಲೆ ಅಲ್ಲಿಗೆ ಕಥೆ ಮುಗಿಯಿತು. ಸಣ್ಣ ಸಣ್ಣದಕ್ಕೂ ಆಡಿಟ್ ಅವಶ್ಯಕವಾಗುತ್ತದೆ. ನಷ್ಟಕ್ಕೆ ಉತ್ತರ ನೀಡಬೇಕಾಗುತ್ತದೆ. ಹೀಗೆ ಪ್ರತಿ ಹಂತದಲ್ಲೂ ಲೆಕ್ಕಾಚಾರ, ಮಾಡಿದಕ್ಕೆಲ್ಲಾ ಒಂದು ಉತ್ತರ ನೀಡಬೇಕಾಗುತ್ತದೆ.

ಏನಿದು ಕಂಪನಿ ವ್ಯಾಲ್ಯೂವೇಷನ್? ಪೇಟಿಎಂ ಐಪಿಓ ಕುಸಿತಕ್ಕೆ ಕಾರಣಗಳೇನು? ಮುಂದೆ ಬರುವ ಹೊಸ ಐಪಿಓ ಗಳ ಕಥೆಯೇನು? ಇವುಗಳ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಏನಿದು ಕಂಪನಿ ವ್ಯಾಲ್ಯೂವೇಷನ್?

ಸಂಸ್ಥೆಯ ಮೌಲ್ಯ ಅಥವಾ ವ್ಯಾಲ್ಯೂವೇಷನ್ ಎಂದರೆ ನಿಗದಿತ ಸಂಸ್ಥೆ ಎಷ್ಟು ಬೆಲೆ ಬಾಳುತ್ತದೆ ಎನ್ನುವುದರ ಸರಳ ಲೆಕ್ಕಾಚಾರ. ಹಿಂದೆ ಸಂಸ್ಥೆಯ ಸ್ಥಿರಾಸ್ತಿ, ಲಾಭ ಮತ್ತು ಕ್ಯಾಶ್ ಫ್ಲೋ ಇತ್ಯಾದಿಗಳನ್ನ ಆಧರಿಸಿ ಮೌಲ್ಯಮಾಪನವನ್ನ ಮಾಡಲಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಥೆ ಮುಂಬರುವ ವರ್ಷಗಳಲ್ಲಿ ಅದೆಷ್ಟು ಹಣವನ್ನ ತಂದುಕೊಡಬಲ್ಲದು? ಮಾರುಕಟ್ಟೆಯಲ್ಲಿ ಅದೆಷ್ಟು ಹೆಚ್ಚು ಹೆಸರು ಮಾಡಿದೆ ಇತ್ಯಾದಿಗಳು ಮುಖ್ಯವಾಗುತ್ತಿದೆ. ಹೆಚ್ಚು ಹೆಚ್ಚು ದೊಡ್ಡ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿದೆಂತೆಲ್ಲ ಅವರು ತಮ್ಮ ಹಣ ವೃದ್ಧಿಯಾಗಲಿ ಎಂದು ಬಯಸುತ್ತಾರೆ. ಹೀಗಾಗಿ ಸಂಸ್ಥೆಯ ಮೌಲ್ಯ ಹೆಚ್ಚುತ್ತಲೇ ಇರಬೇಕು. ಸಂಸ್ಥೆ ನಷ್ಟದಲ್ಲಿದ್ದರೂ ಸರಿಯೇ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನ ಹೊಂದುವುದು ಮುಖ್ಯ ಎನಿಸಿಬಿಟ್ಟಿದೆ.

ಪೆಟಿಎಂ ಐಪಿಓ ಕುಸಿತಕ್ಕೆ ಕಾರಣಗಳೇನು?

  1. ಓವರ್ ವ್ಯಾಲ್ಯೂ ವೇಷನ್/ ಅಧಿಕ ಮೌಲ್ಯ ಮಾಪನ- ಪೆಟಿಎಂ ಇರಲಿ ಅಥವಾ ಬೇರಾವುದೇ ಸಂಸ್ಥೆ, ಸರಿಯಾದ ಬೆಲೆ ನಿಗದಿ ಪಡಿಸಬೇಕು. ಸಂಸ್ಥೆಯ ಷೇರಿನ ಬೆಲೆಯನ್ನ ಅತಿ ಹೆಚ್ಚು ಮಾಡುವುದರಿಂದ ಜನರ ಮನದಲ್ಲಿ ಇದಕ್ಕೆ ಇಷ್ಟು ಬೆಲೆಯಿದೆಯೇ ಎನ್ನುವ ಸಂಶಯ ಶುರುವಾಗುತ್ತದೆ. ಮೊದಲ ಸಾಲುಗಳಲ್ಲಿ ಹೇಳಿದಂತೆ 50 ರಿಂದ 100 ಪ್ರತಿಶತ ಪ್ರೀಮಿಯಂ ಇಟ್ಟ ಷೇರುಗಳು ಕೂಡ ಮಾರುಕಟ್ಟೆಯಲ್ಲಿ ಬಹಳ ಸುಲಭವಾಗಿ ಬಿಕರಿಯಾಗಿವೆ. ಸಾಮಾನ್ಯವಾಗಿ ಮಾರುಕಟ್ಟೆ ಗೂಳಿ ಓಟದಲ್ಲಿರುವಾಗ ಬಹಳಷ್ಟು ಸಂಸ್ಥೆಗಳು ಹೇಗಾದರೂ ಮಾಡಿ ಹೆಚ್ಚಿನ ಮೌಲ್ಯವನ್ನ (ವ್ಯಾಲ್ಯೂವೇಷನ್) ತೋರಿಸಿ ಹೆಚ್ಚಿನ ಬೆಲೆಗೆ ಷೇರನ್ನ ಮಾರಲು ಹವಣಿಸುತ್ತಾರೆ. ಇದು ಪ್ರಾಥಮಿಕ ಮಾರುಕಟ್ಟೆಯಾಗಿರುವುದರಿಂದ ಇದರ ನಿಖರತೆ ಬಹಳಷ್ಟು ಜನರಿಗೆ ಗೊತ್ತಾಗುವುದಿಲ್ಲ. ಪೆಟಿಎಂ ವಿಷಯದಲ್ಲಿ ಮುಂದುವರಿಯಲು ಅದಕ್ಕೆ ಬೇಕಾದ ಹಣವನ್ನ ಹೊಂಚಲು ಬೇರೆ ದಾರಿಯಿರಲಿಲ್ಲ, ಹೀಗಾಗಿ ತನ್ನ ಷೇರಿನ ಮೌಲ್ಯವನ್ನ ಅಳತೆ ಮೀರಿ ಹೆಚ್ಚಿಸಲಾಯಿತು. ಮಾರುಕಟ್ಟೆಯಿಂದ ಹಣವನ್ನ ತೆಗೆಯಬಹುದು ಎನ್ನುವ ಅವರ ಅನಿಸಿಕೆಗೆ ಪೆಟ್ಟು ಬಿದ್ದಿತು. ಜನ ಕೇವಲ ದೊಡ್ಡ ಹೆಸರನ್ನ ನೋಡಿ ಕೊಳ್ಳುವುದಿಲ್ಲ ಎನ್ನುವುದು ಕೂಡ ಒಂದಷ್ಟರ ಮಟ್ಟಿಗೆ ಸಾಬೀತಾಯ್ತು.
  2. ಸಂಸ್ಥೆಯಲ್ಲಿ ಲಾಭದ ಕೊರತೆ ಮತ್ತು ಹಣಕಾಸಿನ ಹರಿವಿನಲ್ಲಿ ಕೊರತೆ- ಗಮನಿಸಿ ಪೆಟಿಎಂ ಗ್ರಾಹಕರನ್ನ ಸೆಳೆದುಕೊಳ್ಳುವ ಭರದಲ್ಲಿ ಇಲ್ಲ ಸಲ್ಲದ ಆಮಿಷಗಳನ್ನ ಗ್ರಾಹಕನಿಗೆ ಒಡ್ಡಿದೆ. ಕ್ಯಾಶ್ ಬ್ಯಾಕ್, ಸ್ಕ್ರಾಚ್ ಕಾರ್ಡ್ ಇತ್ಯಾದಿಗಳಲ್ಲಿ ಹಣವನ್ನ ವ್ಯಯಿಸುತ್ತಿದೆ. ಗಳಿಸುವುದಕ್ಕಿಂತ ಹೆಚ್ಚಿನ ಹಣವನ್ನ ವ್ಯಯಮಾಡುತ್ತಿದೆ. ಹೀಗಾಗಿ ಮುಂದಿನ ಬೆಳವಣಿಗೆಗೆ ಅಥವಾ ಸಂಸ್ಥೆಯನ್ನ ಮುಂದುವರೆಸಿ ಕೊಂಡುಹೋಗಲು ಹಣದ ಅವಶ್ಯಕತೆ ಹೆಚ್ಚಾಗುತ್ತದೆ. ಮೊದಲಿಗೆ ಹೂಡಿಕೆ ಮಾಡಿದ ಜನ ಹೇಗಾದರೂ ಸರಿಯೇ ಸಂಸ್ಥೆ ಜನರ ಕಣ್ಣಿಗೆ ಚನ್ನಾಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಇವೆಲ್ಲ ಹೇಗೆ ಇದ್ದರೂ ಒಂದು ಹಂತದಲ್ಲಿ ಅದು ಜನರ ಮುಂದೆ ಬರಲೇಬೇಕು. ಲಾಭವಿಲ್ಲದ, ಲಿಕ್ವಿಡಿಟಿ ಇಲ್ಲದ ಸಂಸ್ಥೆಯ ಷೇರಿನ ಬೆಲೆಯನ್ನ ಹೀಗಾಮುಗ್ಗಾ ಏರಿಸಿ ಪಬ್ಲಿಕ್ ಗೆ ಆಫರ್ ನೀಡಿದ್ದು ಕುಸಿತಕ್ಕೆ ಕಾರಣ.
  3. ಒಂದು ಉದ್ಯಮ ಯಶಸ್ಸು ಕಂಡರೆ ಅದಕ್ಕೆ ಸಾವಿರ ಜನ ಸ್ಪರ್ಧಿಗಳು- ಹೌದು ಪೆಟಿಎಂ ಇಂದಿಗೂ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನ ಕಾಯ್ದುಕೊಂಡಿದೆ, ಆದರೆ ಗಮನಿಸಿ ಇದಕ್ಕೆ ಪ್ರತಿಸ್ಪರ್ಧಿಯಾಗಿ ಒಂದಲ್ಲ ಹತ್ತಾರು ಸಂಸ್ಥೆಗಳು ಸಿದ್ಧವಾಗಿವೆ. ಯಾವಾಗ ಪೆಟಿಎಂ ಹಣಕಾಸು ಸ್ಥಿತಿ ಹೀಗೆ ಎನ್ನುವುದು ಜನರಿಗೆ ತಿಳಿದಿತ್ತು, ಹೋಗಲಿ ಎಂದರೆ ಮೌಲ್ಯಮಾಪನ ಕೂಡ ಜಾಸ್ತಿಯಾಗಿತ್ತು, ಇದರ ಜೊತೆಗೆ ಮಾರುಕಟ್ಟೆಯಲ್ಲಿ ಇರುವ ಪ್ರತಿಸ್ಪರ್ಧಿಗಳು ಪೆಟಿಎಂ ನ ಭವಿಷ್ಯವನ್ನ ಈ ಹಿಂದೆ ಕಂಡಷ್ಟು ಉಜ್ವಲವಾಗಿ ಜನ ಕಾಣಲು ಬಿಡಲಿಲ್ಲ. ಎಲ್ಲೂ ಒಂದೆಡೆ ಇವರಿಲ್ಲದೆ ಕೂಡ ಈ ಸ್ಪೇಸ್ ನಲ್ಲಿ ಇತರರೊಂದಿಗೆ ಕೂಡ ಹೂಡಿಕೆ ಮಾಡಿ ಹಣ ಗಳಿಸಬಹುದು ಎನ್ನುವ ನಂಬಿಕೆ ಗ್ರಾಹಕನಿಗೆ ಬಂದ ಕಾರಣ ಪೆಟಿಎಂ ಐಪಿಓ ಇನ್ನಿಲ್ಲದೆ ಸೋತಿದೆ.
  4. ಹೆಚ್ಚು ದೊಡ್ಡದಾದಷ್ಟೂ, ಹೆಚ್ಚು ಸದ್ದು ಮಾಡಿದಷ್ಟು ಹೆಚ್ಚಿನ ತಪಾಸಣೆಗೆ ಗುರಿಯಾಗುವುದು ಸಹಜ- ನೀವು ಈ ವರ್ಷದ ಐಪಿಓಗಳನ್ನ ಗಮನಿಸಿ ನೋಡಿ, ಇದು ಸೋಲುತ್ತದೆ ಎಂದುಕೊಂಡ ಬಹಳಷ್ಟು ಐಪಿಓ ಗಳು ಕೂಡ ಸದ್ದುಗದ್ದಲವಿಲ್ಲದೆ ಸಾಕಷ್ಟು ಹಣವನ್ನ ಬಾಚಿಕೊಂಡು ಹೋದವು, ಇಂತಹ ಸಮಯದಲ್ಲಿ ಪೆಟಿಎಂ ಈ ಮಟ್ಟಿಗೆ ಸೋಲಬಹುದು ಎನ್ನುವುದನ್ನ ಸಾಮಾನ್ಯ ಹೂಡಿಕೆದಾರ ಗಮನಿಸಿರುವುದಿಲ್ಲ. ಆದರೆ ಹೆಚ್ಚು ಸದ್ದು ಮಾಡಿದಷ್ಟು ಬಹಳಷ್ಟು ಹೂಡಿಕೆದಾರರು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಕಲೆ ಹಾಕುತ್ತಾರೆ. ಅಲ್ಲದೆ ಪೆಟಿಎಂ ಕಥೆ ಎಲ್ಲರಿಗೂ ತಿಳಿದ ಕಥೆಯಾಗಿತ್ತು. ಹೀಗಾಗಿ ಕೂಡ ಜನ ಇದರಲ್ಲಿ ಹೊಸತನ್ನ ಕಾಣಲಿಲ್ಲ. ಸಂಸ್ಥೆ ಕೂಡ ಹೊಸ ಭರವಸೆ ನೀಡುವಲ್ಲಿ ವಿಫಲವಾಯ್ತು.
  5. ಅಡುಗೆ ಮಾಡುವವರು ಹೆಚ್ಚಾದಷ್ಟು ಅಡುಗೆ ಹಾಳು- ಐಪಿಓ ಮೌಲ್ಯಮಾಪನ ಮಾಡುವ ಜನರಿಗೂ, ವಿಸಿ ಗಳಿಗೂ, ಇತರ ಹೂಡಿಕೆದಾರರಿಗೂ ಜೊತೆಯಲ್ಲಿ ಕುಳಿತು ಮಾತನಾಡಿ ಒಂದು ನಿರ್ಧಾರಕ್ಕೆ ಬರುವ ವ್ಯವಧಾನವಿರಲಿಲ್ಲ ಎನ್ನುವುದು ಇಂದಿಗೆ ಗೋಚರವಾಗುತ್ತಿದೆ. ಎಲ್ಲರೂ ತಮ್ಮ ಸ್ಥರದಲ್ಲಿ ಕೆಲಸ ಮಾಡಿದ್ದಾರೆ, ಆದರೆ ಒಂದು ತಂಡವಾಗಿ ಮಾತನಾಡಿಕೊಂಡು ಕೆಲಸ ಮಾಡಿಲ್ಲ ಎನ್ನುವುದು ತಿಳಿಯುತ್ತಿದೆ. ಪೆಟಿಎಂ ಎನ್ನುವುದು ಹಣವನ್ನ ಸುಡುವ ಮಷೀನ್ ಎನ್ನುವ ಮಟ್ಟಕ್ಕೆ ಸಂಸ್ಥೆ ಹೆಸರು ಪಡೆದುಕೊಂಡಿದೆ. ಇಲ್ಲಿಯವರೆಗೆ ಮಾರುಕಟ್ಟೆಯಿಂದ ಎಷ್ಟು ಹಣವನ್ನ ಎತ್ತಿದೆ ಅದರಲ್ಲಿ 70 ಪ್ರತಿಶತ ಹಣವನ್ನ ಹಳೆ ನಷ್ಟವನ್ನ ತುಂಬಲು ಬಳಸಿದೆ ಎಂದರೆ ಇಲ್ಲಿನ ಆಡಳಿತ ಮಂಡಳಿಯಲ್ಲಿ ಯಾವ ಮಟ್ಟದ ಬದ್ಧತೆ ಇದ್ದೀತು ಎನ್ನುವುದು ತಿಳಿಯುತ್ತದೆ.

ಮೇಲಿನ ಕಾರಣಗಳು ಮೇಲ್ನೋಟಕ್ಕೆ ಕಾಣುವ ಮತ್ತು ದೊಡ್ಡ ಕಾರಣಗಳು. ಇವುಗಳನ್ನ ಮೀರಿ ಕೂಡ ಅತ್ಯಂತ ಸೂಕ್ಷ್ಮ ಕಾರಣಗಳು ಕೂಡ ತೆರೆಮರೆಯಲ್ಲಿ ಕೆಲಸ ಮಾಡಿರುತ್ತವೆ.

ಮುಂದೆ ಬರುವ ಹೊಸ ಐಪಿಓ ಗಳ ಕಥೆಯೇನು?

ಪೆಟಿಎಂ ನಷ್ಟು ದೊಡ್ಡದಲ್ಲದಿದ್ದರೂ ಸಾಕಷ್ಟು ಮಾರುಕಟ್ಟೆಯನ್ನ ಆಕ್ರಮಿಸಿರುವ ಮೊಬಿ ಕ್ವಿಕ್ ಎನ್ನುವ ಸಂಸ್ಥೆ ನವೆಂಬರ್ ಕೊನೆಯ ವೇಳೆಗೆ ತನ್ನ ಐಪಿಓ ಹೊತ್ತು ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಪೆಟಿಎಂ  ನ ಇನ್ನಿಲ್ಲದ ಕುಸಿತ ಕಂಡು, ಅನಿರ್ದಿಷ್ಟ ಕಾಲ ಅಂದರೆ ಕನಿಷ್ಠ ಆರು ತಿಂಗಳಿಂದ ವರ್ಷದ ವರೆಗೆ ಐಪಿಓ ತರುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ನಾಳೆ ಮಾರುಕಟ್ಟೆಗೆ ಹೊಸದಾಗಿ ಬರುವ ಎಲ್ಲರಿಗೂ ಗ್ರಾಹಕ ಅಥವಾ ಹೂಡಿಕೆದಾರ ಅವರು ಎಣಿಸಿದಷ್ಟು ಸುಲಭ ತುತ್ತಲ್ಲ ಎನ್ನುವುದನ್ನ ಖಂಡಿತ ಗಮನದಲ್ಲಿರಿಸಿ ಕೊಂಡಿರುತ್ತಾರೆ. ಮಾರ್ಚ್ 2022ರಲ್ಲಿ ಭಾರತೀಯ ವಿಮಾ ದೈತ್ಯ ಸಂಸ್ಥೆ ಎಲೈಸಿ ತನ್ನ ಐಪಿಓ ಹೊತ್ತು ಬರಲಿದೆ. ಪೆಟಿಎಂ ಗಾದ ಸ್ಥಿತಿ ಎಲೈಸಿ ಗೆ ಬರುವುದಿಲ್ಲ, ಆದರೆ ಎಷ್ಟೇ ದೊಡ್ಡ ಸಂಸ್ಥೆಯಾದರೂ ಎಚ್ಚರ ವಹಿಸಬೇಕಾಗುತ್ತದೆ. ಷೇರಿನ ಬೆಲೆ ನಿಗದಿ ಮಾಡುವುದು ಸುಲಭವಲ್ಲ. ಅಲ್ಲಿ ಹೆಚ್ಚಿನ ಕಸರತ್ತು ಮುಂದೆ ಎಲ್ಲರೂ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಕೊನೆಮಾತು: 2019 ರ ಲೆಕ್ಕಪತ್ರದ ಪ್ರಕಾರ ಒನ್ 97 ಪೇಟಿಎಂ ನ ಮಾತೃ ಸಂಸ್ಥೆಯ ಒಟ್ಟು ನಷ್ಟ  ನಾಲ್ಕು ಸಾವಿರ ಕೋಟಿ ರೂಪಾಯಿ! ಆ ನಂತರದ ನಷ್ಟದ ಲೆಕ್ಕಾಚಾರ ಬೇರೆ, 2021 ರಲ್ಲಿ 1700 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನುತ್ತದೆ ಲೆಕ್ಕಾಚಾರ. ಮೇಲಿನ ಕಥೆ ಪೆಟಿಎಂ ಗೆ ಸಂಬಂಧಿಸಿದ್ದು ಅದರಲ್ಲಿ ಸಂಶಯವಿಲ್ಲ. ಆದರೆ ಗಮನಿಸಿ ಇಂದು ಭಾರತದ ಬಹುತೇಕ ದೊಡ್ಡ ವ್ಯಾಪಾರದ ಕಥೆಯಿದು. ಮಾರುಕಟ್ಟೆಯ ಮೇಲಿನ ಹಿಡಿತ, ಗ್ರಾಹಕನ್ನ ಹಿಡಿದಿಡುವ ಸ್ಪರ್ಧಯೆಯಲ್ಲಿ ಯಾರೂ ಲಾಭ ಮಾಡುತ್ತಿಲ್ಲ ಎನ್ನುವುದು ಇಂದಿನ ವ್ಯಾಪಾರದ ಕಟು ಸತ್ಯ. ಇಂದಿನ ದಿನದಲ್ಲಿ ವ್ಯಾಪಾರವೆಂದರೆ ಅದು ಲಾಭ ಮಾಡುವುದಲ್ಲ, ಎಷ್ಟೇ ನಷ್ಟವಾದರೂ ಸರಿಯೇ ಮಾರುಕಟ್ಟೆಯಲ್ಲಿ ಕಚ್ಚಿ ನಿಲ್ಲಬೇಕು, ಪ್ರತಿಸ್ಪರ್ಧಿ ಬಿದ್ದ ನಂತರ ಮುಂದಿನ ದಿನಗಳಲ್ಲಿ ಲಾಭ ಮಾಡುವುದು ಎನ್ನುವ ಲೆಕ್ಕಾಚಾರ. ಆದರೆ ಈ ಆಟವನ್ನ ಶುರು ಮಾಡಿದವರು ಒಂದು ಗಮನಿಸವುದನ್ನ ಮರೆತರು, ಹಳೆ ಸ್ಪರ್ಧಿಗಳು ಮುಚ್ಚಿ ಹೋಗಬಹುದು, ಆದರೆ ಹೊಸ ಹುಮ್ಮಸ್ಸಿನಿಂದ, ಹೊಸ ಥೈಲಿ ಹಿಡಿದು ಹೊಸ ಆಟಗಾರ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇಲ್ಲ. ಹೂಡಿಕೆದಾರನಿಗೆ ದಕ್ಕಿದ ಈ ಸತ್ಯ, ಪೆಟಿಎಂ ಆಡಳಿತ ಮಂಡಳಿಗೆ ದಕ್ಕದೆ ಹೋಗಿದ್ದು ಈ ಎಲ್ಲಾ ಕುಸಿತಕ್ಕೆ ಕಾರಣ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com