ಉಪವಾಸ ಒಳ್ಳೆಯದೇ? ಅದರಿಂದಾಗುವ ಪ್ರಯೋಜನಗಳು (ಕುಶಲವೇ ಕ್ಷೇಮವೇ)

ಡಾ|| ವಸುಂಧರಾ ಭೂಪತಿದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು.
ಉಪವಾಸ (ಸಾಂಕೇತಿಕ ಚಿತ್ರ)
ಉಪವಾಸ (ಸಾಂಕೇತಿಕ ಚಿತ್ರ)

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ
ಅವನೇನು ಭಂಡನಾಳುವನೆ?
-ಸರ್ವಜ್ಞ

    
ಸಾಮಾನ್ಯರ ದೃಷ್ಟಿಯಲ್ಲಿ ‘ಉಪವಾಸ’ ಎಂದರೆ ‘ಉಪಾಹಾರ’ ಸೇವನೆ. ಊಟದ ಬದಲು ಉಪಾಹಾರವನ್ನೇ ಎರಡು ಪಟ್ಟು ಸೇವಿಸಿರುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಎಲ್ಲ ಮತ ಬಾಂಧವರಲ್ಲಿ ‘ಉಪವಾಸ’ ಒಂದು ಧಾರ್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ತಿಥಿಗಳನ್ನಾಚರಿಸುವಾಗ ಸಂಪ್ರದಾಯವಾಗಿ ಉಪವಾಸ ರೂಢಿಯಲ್ಲಿದೆ.

ಗಾಂಧೀಜಿ ಮತ್ತು ಉಪವಾಸ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಉಪವಾಸವನ್ನು ಒಂದು ಅಸ್ತ್ರವನ್ನಾಗಿಸಿಕೊಂಡು ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸುವಲ್ಲಿ ಯಶಸ್ವಿಯಾದರು. ಪ್ರಕೃತಿ ಚಿಕಿತ್ಸೆಯಲ್ಲಿ ಬಲವಾದ ನಂಬಿಕೆಯಿರಿಸಿಕೊಂಡಿದ್ದ ಗಾಂಧೀಜಿಯವರು ತಮಗೆ ಕಾಯಿಲೆ ಬಂದಾಗ ಉಪವಾಸದ ಮೂಲಕ ಗುಣಪಡಿಸಿಕೊಳ್ಳುತ್ತಿದ್ದರು. ಆರೋಗ್ಯವಂತರಿಗೆ ಉಪವಾಸವು ಆರೋಗ್ಯ ರಕ್ಷಣೆಯ ಒಂದು ಪ್ರಮುಖ ಸೂತ್ರವಾಗಿದೆ.

ಗಾಂಧೀಜಿಯವರು ಉಪವಾಸದ ಬಗೆಗೆ ತಮ್ಮ ನಂಬಿಕೆ ಬಲಗೊಳಿಸಲು, ಅದರ ಸತ್ಯಾಸತ್ಯತೆ ಅರಿಯಲು ಒಂದು ಪ್ರಯೋಗ ನಡೆಸುತ್ತಾರೆ. ಗಾಂಧೀಜಿಯವರು ಚಿಕ್ಕವಯಸ್ಸಿನಲ್ಲಿ ಉಪವಾಸದ ರೂಢಿಯನ್ನು ಅವರ ತಾಯಿಯನ್ನು ಸಂತೋಷಪಡಿಸಲು ಮಾತ್ರ ಮಾಡುತ್ತಿದ್ದರು. ಬಹುಕಾಲದ ನಂತರ ಅವರು ತಮ್ಮ ಒಬ್ಬ ಸ್ನೇಹಿತರಿಂದ ಉಪವಾಸದ ಮಹತ್ವದ ಬಗೆಗೆ ಇನ್ನಷ್ಟು ಅರಿತುಕೊಂಡರು. ಅದನ್ನು ಅರಿತ ನಂತರ ತಮ್ಮ ಆರೋಗ್ಯ ರಕ್ಷಣೆಗೆ ತಮ್ಮ ಮೇಲೆ ಅದರ ಪ್ರಯೋಗ ಮಾಡಿಕೊಂಡು ಒಳ್ಳೆಯ ಪರಿಣಾಮಗಳನ್ನು ಕಂಡುಕೊಳ್ಳುತ್ತಾರೆ.

ಟಾಲ್‍ಸ್ಟಾಯ್ ಫಾರಂನಲ್ಲಿ ಸತ್ಯಾಗ್ರಹಿಗಳೊಂದಿಗೆ ಇರುವಾಗ ಶ್ರಾವಣ ಮಾಸ ಹಾಗೂ ರಂಜಾನ್ ಒಟ್ಟಿಗೆ ಬರುವುದನ್ನು ಗಮನಿಸಿದರು. ಸತ್ಯಾಗ್ರಹಿಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಹಾಗೂ ಪಾರ್ಸಿ ಯುವಕರು ಜೊತೆಯಲ್ಲಿ ಇರುತ್ತಾರೆ. ಕೆಲವು ಹಿಂದುಗಳು ಉಪವಾಸದ ಸಂದರ್ಭದಲ್ಲಿ ಹಣ್ಣು ಮತ್ತು ಹಾಲನ್ನು ಸೇವಿಸುತ್ತಿದ್ದರು. ಮುಸ್ಲಿಂ ಯುವಕರು ರಂಜಾನ್ ಉಪವಾಸದಲ್ಲಿ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಮತ್ತು ಸೂರ್ಯಸ್ತದ ನಂತರ ಆಹಾರ ಸೇವನೆ ಮಾಡುತ್ತಿದ್ದರು. ಸೂರ್ಯೋದಯದಿಂದ ಸೂರ್ಯಾಸ್ತದ ಮಧ್ಯದ ಅವಧಿಯಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಗಾಂಧೀಜಿಯವರು ಎಲ್ಲರೊಂದಿಗೆ ಸಮಾಲೋಚಿಸಿ ಒಂದು ಪ್ರಯೋಗ ಮಾಡಿದರು. ರಂಜಾನ್ ಉಪವಾಸ ಮಾಡುವ ಮುಸ್ಲಿಂ ಬಾಂಧವರಿಗೆ ರಾತ್ರಿಯ ಊಟಕ್ಕಾಗಿ ಸಸ್ಯಾಹಾರದ ಭೋಜನವನ್ನು ಹಿಂದು, ಕ್ರೈಸ್ತ, ಪಾರ್ಸಿ ಯುವಕರು ಬಹಳ ಸಂತೋಷದಿಂದ ಸಿದ್ಧಪಡಿಸಿ ಬಡಿಸುತ್ತಾರೆ. ಸ್ವತಃ ಗಾಂಧೀಜಿಯವರು ಕೂಡ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿದರು. ಕೇವಲ ನೀರನ್ನು ಮಾತ್ರ ಕುಡಿದರು.

ದೇಹ ಮತ್ತು ಮನಸ್ಸನ್ನು ನಿಗ್ರಹಿಸುವಂತಹ ಶಕ್ತಿ ಉಪವಾಸಕ್ಕಿದೆ ಎಂಬುದನ್ನು ಈ ಪ್ರಯೋಗದ ಮೂಲಕ ಎಲ್ಲರಿಗೂ ಮನದಟ್ಟು ಮಾಡಿಸಿದರು. ಅಲ್ಲದೇ ಉಪವಾಸದ ಸಂದರ್ಭದಲ್ಲಿ ಅವರೆಲ್ಲರಿಗೂ ಅವರವರ ಧರ್ಮಕ್ಕನುಗುಣವಾಗಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಅವಕಾಶ ಕಲ್ಪಿಸಿದರು. ಹೀಗೆ ಉಪವಾಸ ದೇಹ ಮತ್ತು ಮನಸ್ಸಿನ ನಿಗ್ರಹ ಮಾಡಿಕೊಳ್ಳಲು, ಕಲುಷಿತ ಅಂಶಗಳನ್ನು ತೊಡೆದುಹಾಕಿ ನಿರ್ಮಲಗೊಳಿಸುವಲ್ಲಿ ಒಂದು ಸಾಧನ ಎಂಬುದನ್ನು ತಾವು ಅರಿತುಕೊಂಡಿದ್ದಲ್ಲದೆ, ಇತರರಿಗೂ ಮನವರಿಕೆ ಮಾಡಿಕೊಟ್ಟರು.    

ಉಪವಾಸ ಮತ್ತು ಜೀವಸಂಕುಲ

ಮನುಷ್ಯನು ಆಹಾರವಿಲ್ಲದೆ 8 ವಾರಗಳ ಕಾಲ ಬದುಕಿರಬಹುದು. ಇತರ ಜೀವ ಜಂತುಗಳ ಲೋಕದಲ್ಲೊಂದು ಸುತ್ತು ಹಾಕಿದಾಗ ಉಪವಾಸದ ಕುರಿತು ವಿಸ್ಮಯದ ಸಂಗತಿಗಳು ಗೋಚರಿಸುತ್ತವೆ. ಎಲ್ಲಾ ಪ್ರಾಣಿಗಳು ಅನಾರೋಗ್ಯವನ್ನು ಉಪವಾಸದಿಂದಲೇ ಸರಿಪಡಿಸಿಕೊಳ್ಳುತ್ತವೆ. ಬೆಕ್ಕು 20 ದಿನಗಳ ತನಕ ಉಪವಾಸ ಇರಲು ಸಾಧ್ಯವಾದರೆ, ನಾಯಿಯು 40 ದಿನಗಳವರೆಗೂ ಉಪವಾಸವಿರುತ್ತದೆ. ಮೊಲ ಮತ್ತು ಇಲಿಗಳು ಹೆಚ್ಚು ದಿನ ಉಪವಾಸ ಇರಲಾರವು. ಒಂಟೆಗಳು ದೀರ್ಘಕಾಲ ಉಪವಾಸ ಇರಬಲ್ಲವು. ಏಕೆಂದರೆ ಅವುಗಳ ದೇಹ ರಚನೆ ಮರುಭೂಮಿಯ ಪರಿಸರಕ್ಕೆ ಹೊಂದಿಕೊಂಡಂತೆ ರೂಪುಗೊಂಡಿದೆ. ನಮ್ಮ ಗಜರಾಜನ ವಿಷಯ ಸ್ವಲ್ಪ ಅಪರೂಪದ್ದು. ಆನೆಗಳು ಸಾಮಾನ್ಯವಾಗಿ 60 ವರ್ಷ ವಯಸ್ಸಾದ ನಂತರ ಹಸಿವಿನಿಂದಲೇ ಸಾಯುತ್ತವೆ. ಏಕೆಂದರೆ ಆನೆಗಳಲ್ಲಿ ವಯಸ್ಸಾದ ನಂತರ ದವಡೆ ಹಲ್ಲುಗಳು ಸವೆಯುವುದರಿಂದ ಆಹಾರ ಆಗಿಯಲು ಸಾಧ್ಯವಾಗದೆ ‘ಸಾವು’ ಅನಿವಾರ್ಯವಾಗಿ ಅವುಗಳನ್ನು ತಬ್ಬುತ್ತದೆ. ಇನ್ನು ಜಿರಲೆಗಳ ವಿಷಯ ನಮಗೆ ಗೊತ್ತೇ ಇದೆ.

ಮಣ್ಣಿನ ಹುಳು (ನೆಮೆಟೋಡ್) ಸಿನೋ ರಾಪ್‍ಟೈಟಿಸ್ ಎಲಿಗೆನ್ಸ್ ಎಂಬುದರ ಜೀವನ ವಿಸ್ಮಯಕಾರಿಯಾದದ್ದು. ಅದು ಗರಿಷ್ಠ ಮಟ್ಟದ ಅವಧಿಗೆ ಉಪವಾಸ ಇರುತ್ತದೆ. ದೀರ್ಘಕಾಲ ಆಹಾರ ದೊರೆಯದಿದ್ದಾಗ ಕೋಶಗಳು ಸಾಯುತ್ತವೆ. ಆದರೆ ಇವುಗಳಿಗೆ ಆಹಾರ ದೊರೆಯದಿದ್ದಾಗ ಸಾಮಾನ್ಯ ಜೀವ ಕೋಶಗಳು ತನ್ನದೇ ಆಕರ ಕೋಶದಲ್ಲಿ ಅಡಗಿ ಕುಳಿತಿರುತ್ತವೆ. ತಮಗೆ ಸೂಕ್ತ ಪರಿಸರ ದೊರಕಿದಾಗ ಹುಟ್ಟು ಪಡೆಯುತ್ತವೆ. ಇವುಗಳ ಜೀವನ ಚರಿತ್ರೆಯ ಸಂಶೋಧನೆಗೆ ಮತ್ತು ವಿಜ್ಞಾನಿಗಳಿಗೆ ನೊಬೆಲ್ ಬಹುಮಾನ ದೊರೆತಿರುವುದು ನಮಗೆ ತಿಳಿದಿರುವುದೇ ಆಗಿದೆ.

ನಮ್ಮ ದೇಹದ ಜೀರ್ಣಾಂಗಗಳಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿರುತ್ತದೆ ಮತ್ತು ಪುನಃ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ತಯಾರಿ ಮಾಡುವುದೇ ಉಪವಾಸದ ಉದ್ದೇಶ.

ಉಪವಾಸದ ಪ್ರಯೋಜನಗಳು

ನಮ್ಮ ಮೆದುಳಿನಲ್ಲಿರುವ ‘ಹೈಪೊಥೆಲಮಸ್’ ನ ಗ್ರಂಥಿಯ ಪಾತ್ರ ಬಹಳ ಮಹತ್ಪದ್ದು. ಇದು ಹಸಿವು, ನೀರಡಿಕೆಗಳ ಕುರಿತು ನಮಗೆ ಸಂದೇಶ ರವಾನಿಸುತ್ತಿರುತ್ತದೆ. ದೇಹದಲ್ಲಿ ಸಕ್ಕರೆಯ (ಗ್ಲುಕೊಸ್) ಮಟ್ಟ ಹಾಗೂ ಪಿ.ಎಚ್. ಮಟ್ಟದಲ್ಲಿ ವ್ಯತ್ಯಾಸವಾದಾಗ ಹಸಿವಿನ ಅನುಭವ ನಮಗಾಗುತ್ತದೆ. 15-20 ನಿಮಿಷಗಳು ಮಾತ್ರ ಹಸಿವಿನ ತೀವ್ರತೆಯ ಅನುಭವವಾಗುತ್ತದೆ. ಆಹಾರ ಸೇವಿಸಿದ ನಂತರ ‘ಸಾಕು’ ಎನ್ನುವ ಸಂದೇಶ ಬರುತ್ತದೆ. ನಂತರವೇ ನಾವು ನಿಲ್ಲಿಸುತ್ತೇವೆ. ನಾವು ಹಸಿವಿನ ತೀವ್ರತೆಯಲ್ಲಿರುವಾಗ ಆಹಾರ ಸೇವನೆ ಮಾಡದಿದ್ದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಇಂಧನವನ್ನಾಗಿ ಉಪಯೋಗಿಸಿಕೊಳ್ಳುತ್ತದೆ. ಆದ್ದರಿಂದ ಕೊಬ್ಬು ಹೆಚ್ಚಾಗಿರುವವರಿಗೆ ‘ಉಪವಾಸ’ ಕ್ರಮ ಒಳ್ಳೆಯದು.

ನಾವು ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯಿಂದ ಆರಂಭವಾಗಿ ದೊಡ್ಡ ಕರುಳಿನವರೆಗೂ ನಿರಂತವಾಗಿ ಜೀರ್ಣ ಕ್ರಿಯೆ ನಡೆಯುತ್ತಿರುತ್ತದೆ. ಉಪವಾಸ ಆಚರಿಸುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ. ‘ಲಂಘನಂ ಪರಮೌಷಧಂ’ ಎಂದರೆ ಉಪವಾಸ ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಜ್ವರ, ಅಜೀರ್ಣವಾದಾಗ ಒಂದು ದಿನ ಉಪವಾಸ ಮಾಡಿದರೆ ದೇಹ ತನ್ನನ್ನು ತಾನು ರಿಪೇರಿ ಮಾಡಿಕೊಂಡು ಸರಿಪಡಿಸಿಕೊಳ್ಳುತ್ತದೆ. ದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು. ಆರೋಗ್ಯವಂತರು 15 ದಿನಗಳಿಗೊಮ್ಮೆ ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದು. ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ಶರೀರಕ್ಕೆ ದೃಢತೆ ಬರುತ್ತದೆ. ದೇಹದಲ್ಲಿನ ವಿಷಕಾರಿ ವಸ್ತುಗಳು ಹೊರಹೋಗುವುದಲ್ಲದೆ ಕೊಬ್ಬು ಕೂಡ ಕರಗುತ್ತದೆ. ವಾರಕ್ಕೊಂದು ಬಾರಿ ಅರ್ಧ ದಿನ ಉಪವಾಸ ಅಂದರೆ ಒಂದು ಹೊತ್ತಿನ ಉಪವಾಸ ಮಾಡುವುದು ಒಳ್ಳೆಯದು.

ಹೊಟ್ಟೆಯ ತೊಂದರೆಯಿಂದ ಬಳಲುವವರು, ಮೂತ್ರ ಪಿಂಡದ ರೋಗಿಗಳು, ಯಕೃತ್ತಿನ (ಲಿವರ್) ತೊಂದರೆ ಇರುವವರು, ಚರ್ಮರೋಗದಿಂದ ಬಳಲುವವರಿಗೆ ಉಪವಾಸ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ಆದರೆ ಸಕ್ಕರೆ ಕಾಯಿಲೆ, ಕ್ಷಯ ರೋಗಿಗಳು, ನರದೌರ್ಬಲ್ಯವಿರುವವರು, ಹೃದ್ರೋಗಿಗಳು, ಕಡಿಮೆ ರಕ್ತದ ಒತ್ತಡ ಇರುವವರು ಉಪವಾಸ ಮಾಡುವುದು ಬೇಡ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಿಲ್ಲದವರು ಹಣ್ಣಿನರಸ, ಎಳನೀರು, ಗಂಜಿಯಂತಹ ದ್ರವಗಳನ್ನು ಸೇವಿಸಬಹುದು.

ಉಪವಾಸ ಒಳ್ಳೆಯದೆಂದು ಅತಿಯಾಗಿ ಮಾಡಬಾರದು. ಅತಿಯಾದ ಉಪವಾಸ ಮಾಡುವುದರಿಂದ ಬಾಯಿ ವಾಸನೆ, ಮೈ ಕೈನೋವು, ಬಾಯಿ ರುಚಿ ಇಲ್ಲದಿರುವುದು, ಹೊಟ್ಟೆನೋವು, ಸುಸ್ತು, ತಲೆಸುತ್ತು ಉಂಟಾಗುತ್ತದೆ.

ಲಾಲ್‍ಬಹದ್ದೂರ್ ಶಾಸ್ತ್ರಿಯರವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಆಹಾರದ ಕೊರತೆ ಇದ್ದ ಸಂದರ್ಭದಲ್ಲಿ ಪ್ರಜೆಗಳೆಲ್ಲರೂ ವಾರಕ್ಕೊಮ್ಮೆ ಒಂದು ಹೊತ್ತಿನ ಉಪವಾಸ ಆಚರಿಸುವಂತೆ ಕರೆಕೊಟ್ಟಿದ್ದರು. ಹಲವಾರು ಹಿರಿಯ ನಾಗರಿಕರು ಇಂದಿಗೂ ವಾರಕ್ಕೊಮ್ಮೆ ಉಪವಾಸದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

ಡಾ|| ವಸುಂಧರಾ ಭೂಪತಿ
bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com