ರಣೋತ್ಸಾಹದಲ್ಲಿ ರಾಜ್ಯ ರಾಜಕಾರಣ! (ನೇರ ನೋಟ)

ಕೂಡ್ಲಿ ಗುರುರಾಜಬೊಮ್ಮಾಯಿ ಅವರಿಗೆ ವೋಟು ಟ್ರಾನ್ಸ್‌ಫರ್ ಮಾಡುವ ಇಂತಹ ರಾಜಕೀಯ ಶಕ್ತಿ ಇನ್ನೂ ದಕ್ಕಿಲ್ಲ. ಆದರೆ, ಸಮೂಹ ನಾಯಕರಾಗಿ ಹೊರಹೊಮ್ಮುವ ಗುಣಲಕ್ಷಣಗಳು ಅವರಲ್ಲಿವೆ. ಆ ಅವಕಾಶವೂ ಅವರಿಗೆ ಇದೆ.
ಸಿಎಂ ಬೊಮ್ಮಾಯಿ-ಚುನಾವಣೆ ತಯಾರಿ (ಸಾಂಕೇತಿಕ ಚಿತ್ರ)
ಸಿಎಂ ಬೊಮ್ಮಾಯಿ-ಚುನಾವಣೆ ತಯಾರಿ (ಸಾಂಕೇತಿಕ ಚಿತ್ರ)

ರಾಜಕಾರಣ ನಿಂತ ನೀರಲ್ಲ ಅದು ಚಲನಶೀಲ. ಅದರಲ್ಲೂ ಚುನಾವಣೆ ಸಮೀಪಿಸಿತೆಂದರೆ ಇದರ ಸ್ಪೀಡು ಜಾಸ್ತಿ. ಅಂತಹ ಒಂದು ಕಾಲಘಟ್ಟದಲ್ಲಿ ಕರ್ನಾಟಕದ ರಾಜಕಾರಣ ಇವತ್ತಿದೆ.

ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ರಣೋತ್ಸಾಹ, ಪಕ್ಷಾಂತರಕ್ಕೆ ಸಿದ್ದವಾಗಿರುವ ಶಾಸಕರು, ಆಡಳಿತಾರೂಢ ಬಿಜೆಪಿಯ ಒಳಬೇಗುದಿ, ಇನ್ನು ಒಂದೂವರೆ ವರ್ಷದಲ್ಲಿ ಎದುರಾಗಲಿರುವ ಅಸೆಂಬ್ಲಿ ಚುನಾವಣೆ-ಇಂತಹ ರಾಜಕೀಯ ವಿದ್ಯಮಾನಗಳು ಕರ್ನಾಟಕದ ರಾಜಕಾರಣದಲ್ಲಿ ಇವತ್ತು ಹವಾ ಸೃಷ್ಟಿಸಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಎರಡು ತಿಂಗಳು ಉರುಳಿವೆ. ಅವರ ಅಧಿಕಾರದ ಹನಿಮೂನ್ ಅವಧಿಯೂ ಮುಗಿದಿದೆ. ವಿಧಾನಮಂಡಲದ ಒಂದು ಅಧಿವೇಶವನ್ನೂ ಮುಖ್ಯಮಂತ್ರಿಯಾಗಿ ಅವರು ಎದುರಿಸಿ ವಾಕ್‌ಚಾತುರ್ಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಅವರಿಗೆ ಉಪ ಚುನಾವಣೆಯ ಅಗ್ನಿ ಪರೀಕ್ಷೆ ಎದುರಾಗಿದೆ. ಅದರಲ್ಲೂ ಹಾನಗಲ್ ವಿಧಾನಸಭಾ ಕ್ಷೇತ್ರ ಅವರು ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವಿರುವ ಹಾವೇರಿ ಜಿಲ್ಲೆಯಲ್ಲೇ ಇದೆ. ಹೀಗಾಗಿ, ಅಸೆಂಬ್ಲಿ ಕ್ಷೇತ್ರವನ್ನು ಗೆಲ್ಲಬೇಕಿರುವುದು ಬೊಮ್ಮಾಯಿ ಅವರಿಗೂ ಪ್ರತಿಷ್ಠೆ. ಅಲ್ಲದೇ, ಕಳೆದ ಬಾರಿ ಅಲ್ಲಿ ಬಿಜೆಪಿಯ ಕಮಲವೇ ಅರಳಿರುವುದು. ಅಷ್ಟಕ್ಕೂ ಸಿ.ಎಂ.ಉದಾಸಿ ಇಲ್ಲಿ ರಾಜಕೀಯವಾಗಿ ಪ್ರಬಲರಾಗಿದ್ದರು. ಅವರ ಪುತ್ರ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಅವರೂ ರಾಜಕೀಯವಾಗಿ ಇಲ್ಲಿ ಶಕ್ತಿವಂತರು.

ಒರಿಜಿನಲ್ ಚಿಂತಕ
ಕರ್ನಾಟಕದ ಅಭಿವೃದ್ಧಿ ಬಗ್ಗೆ ಅತ್ಯಂತ ಸ್ಪಷ್ಟತೆ ಇರುವ, ಚಿಂತನೆ ಇರುವ, ದೂರದೃಷ್ಟಿ ಹೊಂದಿರುವ ಕೆಲವೇ ನಾಯಕರಲ್ಲಿ ಬೊಮ್ಮಾಯಿ ಅವರೂ ಪ್ರಮುಖರು. ಮೈದಾನದ ರಾಜಕಾರಣ, ಆಡಳಿತದ ಅನುಭವ, ಅಧ್ಯಯನ, ಕೇಳಿಸಿಕೊಳ್ಳುವ ಗುಣದಿಂದ ಅವರಲ್ಲಿ ಒರಿಜಿನಲ್ ಚಿಂತನೆಗಳು ಒಡಮೂಡಿವೆ. ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮೊನ್ನೆ ನಡೆದ ಕ್ಲಬ್ ಹೌಸ್ ಉದ್ಘಾಟನೆಯಲ್ಲಿ ಅವರು ನನ್ನ ಕಲ್ಪನೆಯ ಕರ್ನಾಟಕ ವಿಷಯ ಕುರಿತು ಆಡಿದ ಮಾತುಗಳೇ ಇದಕ್ಕೆ ಸಾಕ್ಷಿ.

ಕರಾವಳಿಯ ಬಂದರುಗಳನ್ನು ಅಭಿವೃದ್ಧಿಪಡಿಸಿದರೆ ಅದರಿಂದ ಹೇಗೆ ರಾಜ್ಯದ ಅರ್ಥ ವ್ಯವಸ್ಥೆ ಸುಧಾರಿಸುತ್ತದೆ ಎಂಬ ಮಾತು ಇದಕ್ಕೊಂದು ಉದಾಹರಣೆಯಾಯಿತು. ತಮ್ಮ ಚಿಂತನೆಗಳ ಅನುಷ್ಠಾನದಲ್ಲಿ ಬೊಮ್ಮಾಯಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕು. ಬೊಮ್ಮಾಯಿ ಮುಖ್ಯಮಂತ್ರಿ ಗಾದಿ ಏರುತ್ತಿದ್ದಂತೆ ರಾಜಕೀಯ ವಿಶ್ಲೇಷಕರ ಮಧ್ಯೆ ಒಂದು ಚರ್ಚೆ ನಡೆಯಿತು. ಬೊಮ್ಮಾಯಿ ಮಾಸ್ ಲೀಡರ್ ಅಲ್ಲ ಎಂಬ ವಿಷಯದ ಸುತ್ತಲೂ ಈ ಚರ್ಚೆ ಗಿರಕಿ ಹೊಡೆಯಿತು.

ನಿಜ, ಬೊಮ್ಮಾಯಿ ಮಾಸ್ ಲೀಡರ್ ಅಲ್ಲದಿರಬಹುದು, ಆದರೆ, ತಮ್ಮ ಎರಡು ತಿಂಗಳ ಆಡಳಿತದಲ್ಲಿ ನಡೆ-ನುಡಿಗಳಿಂದ ಜನರಿಗೆ ಹತ್ತಿರವಾಗುತ್ತಿದ್ದಾರೆ. ಬೊಮ್ಮಾಯಿ ಅವರ ಆಡಳಿತದ ಸುಧಾರಣೆ, ಅಭಿವೃದ್ಧಿ ಕಾರ್ಯ ತಳಮಟ್ಟಕ್ಕೆ ತಲುಪಿದರೆ ಅವರ ಸರಕಾರ ಹಾಗೂ ವೈಯಕ್ತಿಕವಾಗಿ ಅವರ ವರ್ಚಸ್ಸು ಹೆಚ್ಚಲಿದೆ.

ಕರ್ನಾಟಕದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮಾಸ್ ಲೀಡರ್. ಅವರ ಪ್ರಭಾವ, ವರ್ಚಸ್ಸಿನ ಆಧಾರದ ಮೇಲೆ ತಮ್ಮನ್ನು ಬೆಂಬಲಿಸುವ ಮತದಾರರ ವೋಟುಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಟ್ರಾನ್ಸ್‌ಫರ್ ಮಾಡುವ ಶಕ್ತಿ ಅವರಿಗೆ ಇದೆ. ಸಮೂಹ ನಾಯಕರಿಗೆ ಇಂತಹ ರಾಜಕೀಯ ಶಕ್ತಿ ಇರುತ್ತದೆ. ಬಿಜೆಪಿಯಲ್ಲಿ ಸ್ವಲ್ಪಮಟ್ಟಿಗೆ ಸಚಿವ ಬಿ.ಶ್ರೀರಾಮುಲು ಅವರಿಗೂ ಆ ಶಕ್ತಿ ಇದೆ.

ಮಾಸ್ ಲೀಡರ್ ಅಲ್ಲ, ಆದರೆ...

ಆದರೆ,  ಬಸವರಾಜ ಬೊಮ್ಮಾಯಿ ಅವರಿಗೆ ವೋಟು ಟ್ರಾನ್ಸ್‌ಫರ್ ಮಾಡುವ ಇಂತಹ ರಾಜಕೀಯ ಶಕ್ತಿ ಇನ್ನೂ ದಕ್ಕಿಲ್ಲ. ಆದರೆ, ಸಮೂಹ ನಾಯಕರಾಗಿ ಹೊರಹೊಮ್ಮುವ ಗುಣಲಕ್ಷಣಗಳು ಅವರಲ್ಲಿವೆ. ಆ ಅವಕಾಶವೂ ಅವರಿಗೆ ಇದೆ. ಬಿಜೆಪಿಯಲ್ಲಿ ಅಂತಹ ಶಕ್ತಿಯನ್ನು ಬೊಮ್ಮಾಯಿ ಬೆಳೆಸಿಕೊಳ್ಳಬೇಕೆಂಬುದೇ ಹೈಕಮಾಂಡ್ ನಿರೀಕ್ಷೆ. ಏಕೆಂದರೆ, ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಅದೇ ವೀರಶೈವ-ಲಿಂಗಾಯತ ಸಮಾಜದ ಮತ್ತೊಬ್ಬ ಸಮೂಹ ನಾಯಕ ಅಗತ್ಯವಾಗಿ, ತುರ್ತಾಗಿ ವರಿಷ್ಠರಿಗೆ ಬೇಕಿದೆ.

ಇನ್ನು ಕಾಂಗ್ರೆಸ್ ಪರಿಸ್ಥಿತಿ ದೇಶದಲ್ಲಿ ಹೋಲಿಸಿದಾಗ ಕರ್ನಾಟಕದಲ್ಲಿ ಸ್ವಲ್ಪ ಚೇತೋಹಾರಿಯಾಗಿದೆ. ಪ್ರಭಾವಿ ನಾಯಕರ ಮಧ್ಯೆ ಒಳಜಗಳವಿದ್ದರೂ ಪಕ್ಷದ ಮೇಲೆ ಇದರ ಪ್ರತಿಕೂಲ ಪರಿಣಾಮ ಬೀರುವ ಮಟ್ಟಿಗೆ ತಲುಪಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ಸ್ವಲ್ಪ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ರಾಷ್ಟ್ರಮಟ್ಟದಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಮತ್ತಿತರ ಹಿರಿಯ ನಾಯಕರು ತಿರುಗಿ ಬಿದ್ದಿರುವುದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಕಾರ್ಯಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ವರಿಷ್ಠರ ನಾಮಬಲಕ್ಕಿಂತ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಂತಹ ನಾಯಕರ ವರ್ಚಸ್ಸೇ ಹೆಚ್ಚು.

ಜೆಡಿಎಸ್‌ಗೆ ವಿಶ್ವಾಸಾರ್ಹತೆಯೇ ಸವಾಲು,

ಜಾತ್ಯತೀತ ಜನತಾದಳ ಅಸೆಂಬ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಯಾರಿಯನ್ನು ಆರಂಭಿಸಿದೆ. ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿದೆ. ಬಿಡದಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಡೆದ ಜನತಾಪರ್ವ 1-0 ಹಾಗೂ ಮಿಷನ್ 123 ಕಾರ್ಯಾಗಾರ ಮುಖಂಡರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದರೂ ರಾಜ್ಯದಲ್ಲಿ ಆ ಪಕ್ಷದ ವಾಸ್ತವ ಪರಿಸ್ಥಿತಿ ಬೇರೆ ಇದೆ.

ಇದನ್ನು ಅರಿತಿರುವ ಜೆಡಿಎಸ್ ಪ್ರಾದೇಶಿಕ ಅಸ್ಮಿತೆಗೆ ಇದೇ ಮೊದಲ ಬಾರಿಗೆ ಹೆಚ್ಚು ಒತ್ತು ನೀಡಿ ಚುನಾವಣೆ ಎದುರಿಸಲು ಹೊರಟಿದೆ. ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಎಂಬ ಪಂಚರತ್ನಗಳ ಕಾರ್ಯಕ್ರಮ ಘೋಷಿಸಿದೆ. ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡುವುದಾಗಿ ಘೋಷಿಸಿ ಆರಂಭದಲ್ಲೇ ಸಿಂಧಗಿ ಉಪ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಸಿಂಧಗಿ ಹಾಗೂ ಹಾನಗಲ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್‌ಗೆ ತೊಡಕಾಗಬಹುದು.

ಜೆಡಿಎಸ್ ತನ್ನ ಸಂಭಾವ್ಯ ಅಭ್ಯರ್ಥಿಗಳು, ಮುಖಂಡರಿಗೆ ಕಾರ್ಯಾಗಾರ ನಡೆಸಿದ್ದು ಸ್ವಾಗತಾರ್ಹವಾದುದು. ರಾಜಕಾರಣದಲ್ಲಿ ಮುಖಂಡರು, ಕಾರ್ಯಕರ್ತರಿಗೆ ತರಬೇತಿ, ವಿಚಾರ ಸಂಕಿರಣ, ಅಧ್ಯಯನ ಶಿಬಿರಗಳು ಎಂಬುದೇ ಇಂದು ಇಲ್ಲವಾಗಿದೆ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಏರುವ ಮುಖಂಡರಿಗೆ ನಾಡು, ನುಡಿ, ವಿವಿಧ ವಿಷಯಗಳ ಬಗ್ಗೆ ಜ್ಞಾನ ಇರಬೇಕಾಗುತ್ತದೆ. ರಾಜಕೀಯ ವಿಜ್ಞಾನದ ಅರಿವಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಾಗಾರ ಒಂದು ಮಹತ್ವದ  ಹೆಜ್ಜೆ.

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ನೇರ ಸ್ಪರ್ಧೆ ಬೇಕಿದೆ. ಮುಂಬರುವ ವರ್ಷಗಳಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆಯೇ ರಾಜಕೀಯ ಧ್ರುವೀಕರಣ ನಡೆಯುವ ನಿರೀಕ್ಷೆ ಎರಡೂ ಪಕ್ಷಗಳ ನಾಯಕರಲ್ಲಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆದರೆ, ನಿರ್ಣಾಯಕ ಹಂತದಲ್ಲಿ ಜೆಡಿಎಸ್‌ನ ತಪ್ಪು ಹೆಜ್ಜೆಗಳು ಆ ಪಕ್ಷದ ಭವಿಷ್ಯಕ್ಕೆ ಸವಾಲು ಎಸೆದಿದೆ. ಇವತ್ತು ಜೆಡಿಎಸ್ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಅದು ವಿಶ್ವಾಸಾರ್ಹತೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com