ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮಾಡಬಾರದ ತಪ್ಪುಗಳಿವು!

ಹಣಕ್ಲಾಸು-278-ರಂಗಸ್ವಾಮಿ ಮೂಕನಹಳ್ಳಿ
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ ಇರಬಹುದು ಅಥವಾ ಕ್ರಿಕೆಟ್ ಅಥವಾ ನೀವು ಇತರೆ ಯಾವುದೇ ವೃತ್ತಿಯಲ್ಲಿ ಬಹಳಷ್ಟು ಚೆನ್ನಾಗಿ ಪಲಿತಾಂಶವನ್ನ ಪಡೆಯುತ್ತಿದ್ದರೆ ಆಗ ಸಹಜವಾಗೇ ಒಂದಷ್ಟು ಅಸಡ್ಡೆ ಆವರಿಸುತ್ತದೆ. 

ಎಲ್ಲವು ಅಂದುಕೊಂಡಂತೆ ಆಗುತ್ತಿದ್ದರೆ, ಅಥವಾ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಆಗುವಾಗ ಇಂತಹ ಮನೋಭಾವ ಉಂಟಾಗುವುದು ಸಾಮಾನ್ಯ. ಇವತ್ತಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನಾನಿಷ್ಟು ಹಣ ಮಾಡಿದೆ ಎನ್ನುವ ಧನಾತ್ಮಕ ಕಥೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿಮಗೆಲ್ಲಾ ನೆನಪಿರಲಿ ಕಳೆದುಕೊಂಡ ಹಣದ ಬಗ್ಗೆ ಚಕಾರ ಎತ್ತದ ಜನರೆಲ್ಲಾ ಇಂದು ಸ್ವಲ್ಪ ಲಾಭ ಮಾಡಿದರೂ ಸಾಕು ಅದಕ್ಕೆ ಸುಣ್ಣ ಬಣ್ಣವನ್ನ ಕಟ್ಟಿ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ನಿಮಗೆ ಇನ್ನೊಂದು ಉದಾಹರೆಣೆ ಹೇಳುತ್ತೇನೆ, ನೂರು ಚಲನ ಚಿತ್ರದಲ್ಲಿ ಗೆಲ್ಲುವುದು ಮೂರು ಅಥವಾ ನಾಲ್ಕು ಮಾತ್ರ! ಆದರೂ 96 ಸೋಲುಗಳನ್ನ ಅದು ಮುಚ್ಚಿ ಹಾಕುತ್ತದೆ. ಮತ್ತೆ ಮತ್ತೆ ಹೊಸ ಹೂಡಿಕೆದಾರರನ್ನ ತನ್ನೆಡೆ ಸೆಳೆಯುತ್ತದೆ. ಷೇರು ಮಾರುಕಟ್ಟೆ ಕಥೆ ಕೂಡ ಸೇಮ್!

ಮೇಲಿನ ಸಾಲುಗಳಲ್ಲಿ ಋಣಾತ್ಮಕ ಧ್ವನಿ ಕೇಳಿ ಬಂದಿದ್ದರೆ ಕ್ಷಮೆ ಇರಲಿ. ಬರಹದ ಉದ್ದೇಶ ಷೇರು ಮಾರುಕಟ್ಟೆಯನ್ನ ಕೆಟ್ಟದಾಗಿ ಬಿಂಬಿಸುವುದಲ್ಲ. ಬದಲಿಗೆ ಅಕ್ಕಪಕ್ಕದವರು, ನಿಮ್ಮ ಗೆಳೆಯರು ಅಥವಾ ಇನ್ನ್ಯಾರೋ ಹೇಳಿದರು, ಲಾಭ ಮಾಡಿದರು ನಾನು ಮಾಡಬಹುದು ಎನ್ನುವ ಉದ್ದೇಶದಿಂದ ಷೇರು ಮಾರುಕಟ್ಟೆ ಪ್ರವೇಶಿಸಿ ಬೇಡಿ ಎನ್ನುವುದನ್ನ ತಿಳಿಸುವುದು. ಜೊತೆಗೆ ನೀವೀಗಾಗಲೇ ಮಾರುಕಟ್ಟೆಯಲ್ಲಿದ್ದರೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ಯಾವುವು ಎನ್ನುವುದನ್ನ ತಿಳಿಸುವುದು ಮತ್ತು ಅಂತಹ ಸಾಮಾನ್ಯ ತಪ್ಪುಗಳನ್ನ ಮಾಡದಿದ್ದರೆ ಇಂದಿನ ಬುಲ್ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಬಹುದು ಎನ್ನುವುದನ್ನ ತಿಳಿಸುವುದಾಗಿದೆ.

ಷೇರು ಮಾರುಕಟ್ಟೆ ಕುಸಿತವಾದಾಗ ಎಲ್ಲರೂ ಒಂದಷ್ಟು ಎಚ್ಚರಿಕೆಯಿಂದ ನಡೆಯುತ್ತಾರೆ. ಅದೇ ಷೇರು ಮಾರುಕಟ್ಟೆ ಗೂಳಿ ಓಟದಲ್ಲಿದ್ದಾಗ ಎಲ್ಲರಲ್ಲೂ ಒಂದು ರೀತಿಯ ಕೇರ್ ಲೆಸ್ನೆಸ್ ಮನೆ ಮಾಡಿ ಬಿಡುತ್ತದೆ. ಆಗ ಸಹಜವಾಗಿ ಆಗುವ ತಪ್ಪುಗಳ ಪಟ್ಟಿಯನ್ನ ಮಾಡೋಣ. ಮತ್ತು ಈ ತಪ್ಪುಗಳನ್ನ ನಾವು ಮಾಡದಂತೆ ಎಚ್ಚರಿಕೆ ವಹಿಸೋಣ.

  1. NFO ಟ್ರ್ಯಾಪ್ ಗಳಿಗೆ ಬಲಿಯಾಗದಿರುವುದು: ಮ್ಯೂಚುಯಲ್ ಫಂಡ್ ಗಳು ಈ ರೀತಿಯ ಹೊಸ ಫಂಡ್ ಆಫರ್ ಗಳನ್ನ ಮಾರುಕಟ್ಟೆಯಲ್ಲಿ ಬಿಡುತ್ತಾರೆ. ಇವುಗಳಲ್ಲಿ ಹೆಸರು ಮಾತ್ರ ನ್ಯೂ ಅಷ್ಟೇ ಉಳಿದಂತೆ ಇದು ಬಹುಪಾಲು ಆಗಲೇ ಲಭ್ಯವಿರುವ ಫಂಡ್ ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಮಾರುಕಟ್ಟೆ ಚನ್ನಾಗಿ ಓಡುವಾಗ ಸಂಸ್ಥೆಗೆ ಹೆಚ್ಚಿನ ಫಂಡ್ ಶೇಖರಣೆ ಮಾಡುವ ಉದ್ದೇಶ ಮಾತ್ರ ಇಲ್ಲಿ ಪ್ರಮುಖವಾಗಿರುತ್ತದೆ. ಉಳಿದಂತೆ ಇದು ಹೂಡಿಕೆದಾರನಿಗೆ ಹೆಚ್ಚು ಲಾಭವೇನು ಮಾಡಿಕೊಡುವುದಿಲ್ಲ. ನೀವು ಮಾರುಕಟ್ಟೆಯಲ್ಲಿ ಇದ್ದವರಾದರೆ ಇಂತಹ ಟ್ರ್ಯಾಪ್ ಗಳ ಬಗ್ಗೆ ಗೊತ್ತಿರುತ್ತದೆ. ಉಳಿದಂತೆ ಕೆಲವೊಂದು ನಿಜವಾಗಿಯೂ ಹೊಸತನ ಹೊಂದಿದೆ ಎಂದು ಅನ್ನಿಸಿದರೆ ಆಗ ಅದರಲ್ಲಿ ಹೂಡಿಕೆ ಮಾಡಬಹುದು.
  2. IPO ಎನ್ನುವ ಕುದುರೆಯ ಹಿಂದೆ ಓಡಿ ಮುಗ್ಗರಿಸುವುದು ಬೇಡ: ಮಾರುಕಟ್ಟೆ ಗೂಳಿ ಓಟದಲ್ಲಿರುವಾಗ ಬಹಳಷ್ಟು ಸಂಸ್ಥೆಗಳು ಹೇಗಾದರೂ ಮಾಡಿ ಹೆಚ್ಚಿನ ಮೌಲ್ಯವನ್ನ (ವ್ಯಾಲ್ಯೂವೇಷನ್) ತೋರಿಸಿ ಹೆಚ್ಚಿನ ಬೆಲೆಗೆ ಷೇರನ್ನ ಮಾರಲು ಹವಣಿಸುತ್ತಾರೆ. ಇದು ಪ್ರಾಥಮಿಕ ಮಾರುಕಟ್ಟೆಯಾಗಿರುವುದರಿಂದ ಇದರ ನಿಖರತೆ ಬಹಳಷ್ಟು ಜನರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಹೆಚ್ಚಿನ ಬೆಲೆಯುಳ್ಳ ಮಾರುಕಟ್ಟೆಯ ಹೈಪ್ ಗಳಿಗೆ ಮರುಳಾಗಿ ಇಂತಹ ಐಪಿಒ ಗಳ ಹಿಂದೆ ಓಡುವುದು ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ತಿಳುವಳಿಕೆಯಿಲ್ಲದೆ ಹೂಡಿಕೆಯನ್ನ ಮಾಡುವುದು ಕೇವಲ ತಪ್ಪು ಎನ್ನಿಸಿಕೊಳ್ಳುವುದಿಲ್ಲ ಅದು ಅಪರಾಧ.
  3. ಓಡುವ ಸಂಸ್ಥೆಯ ಮೇಲೆ ಹೂಡಿಕೆ ಮಾಡುವುದು: ಮಾರುಕಟ್ಟೆ ಉತ್ತಮವಾಗಿದ್ದಾಗ ಮಾಡುವ ಇನ್ನೊಂದು ಸಾಮಾನ್ಯ ತಪ್ಪು ಇದು. ಯಾವ ಸಂಸ್ಥೆ ಹಾಟ್ ಅಂದರೆ ಬಹಳ ಚನ್ನಾಗಿ ಓಡುತ್ತಿರುತ್ತದೆ ಅದರ ಮೇಲೆ ಹೂಡಿಕೆ ಮಾಡುವುದು. ಯಾವ ಸಂಸ್ಥೆಗಳಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆಯಾಗಿತ್ತು ಅಂತಹ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು. ಸಾಮಾನ್ಯವಾಗಿ ಇವುಗಳ ಬೆಲೆ ಬಹಳಷ್ಟು ಹೆಚ್ಚಾಗಿರುತ್ತದೆ. ಆದರೂ ಗೆದ್ದ ಸಂಸ್ಥೆಯ ಮೇಲೆ ಹೂಡಿಕೆ ಮಾಡಲು ಜನ ಮುಗಿ ಬೀಳುತ್ತಾರೆ. ಗಮನಿಸಿ ಕುದುರೆ ನಿಂತಾಗ ಅದನ್ನ ಹತ್ತುವುದು ಸುಲಭ ಮತ್ತು ಅದು ಬುದ್ದಿವಂತರ ಲಕ್ಷಣ. ಕುದುರೆ ಓಡುವಾಗ ಹತ್ತಲು ಹೋದರೆ ಬೀಳುವ ಸಾಧ್ಯತೆ ಹೆಚ್ಚು. ಇದರರ್ಥ ಷೇರಿನ ಬೆಲೆ ಬಹಳಷ್ಟು ಏರಿಕೆಯಾದಾಗ ಅದರ ಮೇಲೆ ಹೂಡಿಕೆ ಮಾಡುವುದು ಅಷ್ಟು ಜಾಣತನವಲ್ಲ ಎನ್ನುವುದಾಗಿದೆ.
  4. ಆಯ್ದ ಕೆಲವೇ ಕೆಲವು ಪೋರ್ಟ್ಫೋಲಿಯೋ ಗಳಲ್ಲಿ ಹೂಡಿಕೆ ಮಾಡುವುದು: ಬಹಳಷ್ಟು ಜನ ಒಂದಷ್ಟು ಆಯ್ದ ಪೋರ್ಟ್ಫೋಲಿಯೋ ಬಿಟ್ಟು ಬೇರೆಡೆ ಹೂಡಿಕೆ ಮಾಡುವುದಿಲ್ಲ. ಅದರಲ್ಲೂ ಅವುಗಳ ಅವರು ಬಯಸಿದ ಫಲಿತಾಂಶ ನೀಡುತ್ತಿದ್ದರೆ ಮುಗಿದೇ ಹೋಯಿತು. ಆದರೆ ಹೊಸ ಇನ್ವೆಸ್ಟ್ಮೆಂಟ್ ಥಿಯರಿ ಹೇಳುವ ಪ್ರಕಾರ ಈಕ್ವಿಟಿ ಇನ್ವೆಸ್ಟ್ಮೆಂಟ್ ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಡೈವರ್ಸಿಟಿ ಬಹಳ ಮುಖ್ಯ. ಒಂದೇ ವಲಯದಲ್ಲಿ ಏಕಾಗ್ರತೆ ಬಹಳಷ್ಟು ಬಾರಿ ನಿರೀಕ್ಷಿತ ಫಲಿತವನ್ನ ನೀಡುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಒಂದು ಅಥವಾ ಕೆಲವೇ ಕೆಲವು ಆಯ್ದ ವಲಯದಲ್ಲಿ ಹೂಡಿಕೆ ಮಾಡುವುದರಿಂದ ತಾತ್ಕಾಲಿಕವಾಗಿ ಲಾಭವಾದಂತೆ ಅನ್ನಿಸಬಹುದು ಆದರೆ ಪೆಟ್ಟು ಬಿದ್ದರೆ ಎಚ್ಚೆತು ಕೊಳ್ಳಲಾಗದ ನಷ್ಟವನ್ನ ಕೂಡ ಉಂಟು ಮಾಡುತ್ತದೆ. ಹೀಗಾಗಿ ಇಲ್ಲಿಯೂ ಎಚ್ಚರ ವಹಿಸುವುದು ಉತ್ತಮ.
  5. ಫಂಡ್ಸ್ ನಿಂದ ನೇರ ಮಾರುಕಟ್ಟೆಗೆ ಧುಮುಕುವುದು: ಮೊದಲ ಸಾಲುಗಳಲ್ಲಿ ಹೇಳಿದಂತೆ ಗೆಲುವು, ಯಶಸ್ಸು ಎಂತವರಿಗೂ ವಿಶ್ವಾಸವನ್ನ ತಂದುಕೊಡುತ್ತದೆ. ಮಾರುಕಟ್ಟೆ ಜಿಗಿತದ ಸಮಯದಲ್ಲಿ ಹೀಗೆ ವಿಶ್ವಾಸದಿಂದ ಫಂಡ್ ಮ್ಯಾನೇಜರ್ ಗಳಿಗಿಂತ ನನಗೆ ಹೆಚ್ಚು ಗೊತ್ತು, ಅಥವಾ ಅವರಿನ್ನೇನು ಹೆಚ್ಚು ಮಾಡಿಯಾರು ಎನ್ನುವ ಭಾವನೆ ಬರುವುದು ಕೂಡ ಸಹಜ. ಹೀಗಾಗಿ ಬಹಳಷ್ಟು ಜನ ನೇರವಾಗಿ ಡಿಮ್ಯಾಟ್ ಆಕೌಂಟ್ ತೆರೆದು ಅವರೇ ಟ್ರೇಡ್ ಮಾಡಲು ಕೂಡ ಶುರು ಮಾಡುತ್ತಾರೆ. ಇದು ತಪ್ಪಲ್ಲ ಆದರೆ ಅಚಾನಕ್ಕಾಗಿ, ಆಳ ತಿಳಿಯದೆ ನೀರಿಗೆ ಧುಮುಕುವುದು ಸಾಧುವಲ್ಲ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಡಿಮ್ಯಾಟ್ ಆಕೌಂಟ್ ಗಳ ಸಂಖ್ಯೆ ಬಹಳ ಏರಿಕೆಯಾಗಿದೆ. ಹಾಗೆಯೇ ಫಂಡ್ ಮ್ಯಾನೇಜರ್ ಗಳಿಂದ ಹೊರ ಹೋದ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಳ ಕಂಡಿದೆ. ಇದರ ಆಧಾರದ ಮೇಲೆ ಈ ಮಾತುಗಳನ್ನ ಇಲ್ಲಿ ಹೇಳಲಾಗಿದೆ. ಹೀಗೆ ತಾವೇ ಬೇರೆಯವರ ಸಹಾಯದ ಅವಶ್ಯಕತೆಯಿಲ್ಲ ಇಲ್ಲ ಎಂದು ಹೋದವರಲ್ಲಿ ಯಶಸ್ಸು ಪಡೆಯುವವರ ಸಂಖ್ಯೆ ನಗಣ್ಯ.
  6. ಇಂಟ್ರಾ ಡೇ ಟ್ರೇಡಿಂಗ್ ಅಖಾಡಕ್ಕೆ ಇಳಿಯುವುದು: ಡೇ ಟ್ರೇಡಿಂಗ್ ಎಂದರೆ ಬೆಳಿಗ್ಗೆ ಅಥವಾ ಇಚ್ಛೆ ಬಂದಾಗ ಕೊಳ್ಳುವುದು ಮತ್ತು ಅದೇ ದಿನ ಮಾರುಕಟ್ಟೆ ಕ್ಲೋಸ್ ಆಗುವ ಮುನ್ನ ಮಾರಿ ಬಿಡುವುದು. ಈ ಬುಲ್ ಮಾರುಕಟ್ಟೆಯಲ್ಲಿ ನಿತ್ಯ ಎರಡು ಸಾವಿರ ಲಾಭ ಮಾಡಿದೆ, ಹೂಡಿಕೆ ಮಾಡಿದ್ದು ಕೇವಲ ಲಕ್ಷ ರೂಪಾಯಿ, ಕೆಲವೇ ಕೆಲವು ತಾಸುಗಳಲ್ಲಿ ಈ ಹಣವನ್ನ ಮಾಡಿದೆ ಎನ್ನುವ ಕಥೆಗಳ ಸಂಖ್ಯೆ ಲೆಕ್ಕಕ್ಕಿಲ್ಲ. ಇಂದಿನ ದಿನಗಳಲ್ಲಿ ಡಿಮ್ಯಾಟ್ ಆಕೌಂಟ್ ಸಂಖ್ಯೆ ಹೆಚ್ಚಾಗಲು ಇದು ಒಂದು ಪ್ರಮುಖ ಕಾರಣ. ಭಾರತದ ಮಟ್ಟಿಗಂತೂ ಇದು ಬಾಯಿಂದ ಬಾಯಿಗೆ ಹರಡಿ, ನಿತ್ಯ ಸಾವಿರ ಅಥವಾ ಎರಡು ಸಾವಿರ ಕೆಲವು ಗಂಟೆಗಳಲ್ಲಿ ಮಾಡಬಹುದು ಅದೂ ಮನೆಯಲ್ಲಿ ಆರಾಮಾಗಿ ಕುಳಿತು ಎನ್ನುವ ಸುಂದರ ಕನಸಾಗಿದೆ. ಮಾರುಕಟ್ಟೆಯ ಬಗ್ಗೆ ಜ್ಞಾನವಿಲ್ಲದ ಬಹಳಷ್ಟು ಜನ ಹೀಗೆ ಡೇ ಟ್ರೇಡಿಂಗ್ ಗೆ ಇಳಿಯುತ್ತಿರುವುದು ನಿಜಕ್ಕೂ ಒಳ್ಳೆಯದಲ್ಲ.
  7. ಒಂದಷ್ಟು ಹಣ ಮಾಡಿಕೊಳ್ಳದೆ ಹೋಗುವುದು ಕೂಡ ತಪ್ಪು ನಡೆಯಾಗುತ್ತದೆ: ಗಮನಿಸಿ ಕೆಲವು ರಿಟೇಲ್ ಇನ್ವೆಸ್ಟರ್ಸ್ ಇಂತಹ ಬುಲ್ ಮಾರ್ಕೆಟ್ ನಲ್ಲಿ ಕೂಡ ತಮ್ಮ ಷೇರುಗಳನ್ನ ಮಾರದೆ ಹಾಗೆ ಇಟ್ಟು ಕೊಂಡು ಕೂರುತ್ತಾರೆ. ಇದು ಕೂಡ ತಪ್ಪು. ಒಂದಷ್ಟು ಪ್ರತಿಶತ ಮಾರಾಟ ಮಾಡಿ ತಾವು ಹೂಡಿಕೆ ಮಾಡಿದ್ದ ಮೂಲ ಹಣವನ್ನ ವಾಪಸ್ಸು ಪಡೆದು ಕೊಳ್ಳುವುದು ಜಾಣತನ. ಉದಾಹರಣೆಗೆ ನೀವು ಸಾವಿರ ಷೇರು ರಾಮ ಹೆಸರಿನ ಸಂಸ್ಥೆಯಲ್ಲಿ ಹತ್ತು ರುಪಾಯಿಗೆ ಕೊಂಡಿದ್ದರೆ ನೀವು 10 ಸಾವಿರ ರೂಪಾಯಿ ಹೂಡಿಕೆ ಮಾಡಿದಾಗಿಯಿತು. ಮಾರುಕಟ್ಟೆಯಲ್ಲಿ ಸದ್ಯಕ್ಕೆ ರಾಮ ಷೇರು 50 ರುಪಾಯಿಗೆ ಮಾರಾಟವಾಗುತ್ತಿದೆ ಎಂದುಕೊಳ್ಳಿ ಆಗ ನೀವು 5೦೦ ಷೇರು ಮಾರಿದರೂ ನಿಮ್ಮ ಮೂಲ ಬಂಡವಾಳದ ಜೊತೆಗೆ ಇನ್ನೊಂದು 15 ಸಾವಿರ ರೂಪಾಯಿ ಲಾಭ ಕೂಡ ಬರುತ್ತದೆ. ಜೊತೆಗೆ 5೦೦ ಷೇರು ಸಹ ಹೂಡಿಕೆಯ ರೂಪದಲ್ಲಿ ಇರುತ್ತದೆ. ಇದು ಜಾಣತನ. ನೀವು ಏನನ್ನೂ ಮಾರದೆ ಉಳಿಸಿಕೊಂಡರೆ, ಮತ್ತು ನಾಳೆ ಷೇರಿನ ಬೆಲೆ 20 ರುಪಾಯಿಗೆ ಕುಸಿದರೆ ಆಗ ನೀವು ಪರಿಸ್ಥಿತಿಯ ಲಾಭ ಪಡೆಯದೇ ಹೋದದ್ದಕ್ಕೆ ಪಶ್ಚಾತ್ತಾಪ ಪಡುತ್ತೀರಿ. ಹೀಗಾಗಿ ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಒಂದಷ್ಟು ಲಾಭವನ್ನ ಮಾಡಿಕೊಳ್ಳುವುದು ಒಳ್ಳೆಯದು.
  8. ಪೂರ್ಣ ಪ್ರಾಫಿಟ್ ಬುಕ್ ಮಾಡಿಕೊಂಡು ಮಾರುಕಟ್ಟೆಯಿಂದ ನಿರ್ಗಮಿಸುವುದು: ಇದು ಕೂಡ ತಪ್ಪು. ಕೆಲವು ಹೂಡಿಕೆದಾರರು ಇತ್ತೀಚಿನ ಏರಿಳಿತಗಳನ್ನ ತಡೆಯುಕೊಳ್ಳುವ ಸ್ಥಿತಿಯಲಿಲ್ಲ. ಮಾರುಕಟ್ಟೆಯಲ್ಲಿ ಈಗ ಸಿಕ್ಕಿರುವ ಲಾಭವನ್ನ ಪೂರ್ಣವಾಗಿ ಪಡೆದುಕೊಂಡು ನಿರ್ಗಮಿಸುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಭಾರತದ ಯಶಸ್ಸಿನ ಓಟ ಈಗಷ್ಟೆ ಶುರುವಾಗುತ್ತಿದೆ. ಪೂರ್ಣ ಪ್ರಮಾಣವಾಗಿ ಈಕ್ವಿಟಿ ಮಾರುಕಟ್ಟೆಯಿಂದ ಹೊರಹೋಗುವುದು ಕೂಡ ಒಳ್ಳೆಯ ನಿರ್ಧಾರವಲ್ಲ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆ ಇನ್ನಷ್ಟು ಬೆಳೆಯಲಿದೆ.

ಕೊನೆ ಮಾತು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಇರುವುದು, ಅಥವಾ ಕೆಲವೇ ಕೆಲವು ವಲಯದಲ್ಲಿ ಹೂಡಿಕೆ ಮಾಡುವುದು, ಪೂರ್ಣವಾಗಿ ಲಾಭವನ್ನ ಪಡೆದು ನಿರ್ಗಮಿಸುವುದು ಹೀಗೆ ಯಾವುದೇ ನಿರ್ಧಾರಗಳು ಏಕಮುಖವಾಗಿದ್ದರೆ ಅವುಗಳನ್ನ ತಪ್ಪು ಅಥವಾ ಬುದ್ದಿವಂತ ನಡೆ ಎನ್ನಲಾಗುವುದಿಲ್ಲ. ಇಲ್ಲೇನಿದ್ದರೂ ಮಿಡ್ ಪಾತ್ , ಮಧ್ಯಮಾರ್ಗ ಮಾತ್ರ ಒಂದಷ್ಟು ಯಶಸ್ಸನ್ನ ತಂದುಕೊಡುತ್ತದೆ. ಸೋಲು ಭಯ, ಅಸ್ಥಿರತೆ, ಅಪನಂಬಿಕೆ, ಹುಟ್ಟುಹಾಕುತ್ತದೆ. ಆಗೆಲ್ಲ ಮನುಷ್ಯ ಬಹಳಷ್ಟು ಜಾಗ್ರತೆಯನ್ನ ವಹಿಸುತ್ತಾನೆ. ಮತ್ತೆ ಕಷ್ಟದಿಂದ ಮರಳಿ ದಾರಿಗೆ ಬರುತ್ತಾನೆ. ಆದರೆ ಯಶಸ್ಸು ಅಥವಾ ಗೆಲುವು ಮನುಷ್ಯನಲ್ಲಿ ಅತಿ ವಿಶ್ವಾಸ, ಜಗತ್ತನ್ನ ಗೆಲ್ಲ ಬಲ್ಲೆ ಎನ್ನುವ ಹುಮ್ಮಸ್ಸು ಸೃಷ್ಟಿಸುತ್ತದೆ. ಇದು ಒಳ್ಳೆಯದು, ಆದರೆ ಹುಮ್ಮಸ್ಸಿನಲ್ಲಿ ತಪ್ಪುಗಳಾಗದಿರಲಿ, ಹುಮ್ಮಸ್ಸನ್ನ ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಸಾಗೋಣ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com