ಹಣಕಾಸು ವಂಚನೆಗೆ ಹಲವು ಮುಖ! (ಹಣಕ್ಲಾಸು)

ಹಣಕ್ಲಾಸು-280-ರಂಗಸ್ವಾಮಿ ಮೂಕನಹಳ್ಳಿ
ಆನ್ ಲೈನ್ ಬ್ಯಾಂಕಿಂಗ್ ವಂಚನೆ (ಸಾಂಕೇತಿಕ ಚಿತ್ರ)
ಆನ್ ಲೈನ್ ಬ್ಯಾಂಕಿಂಗ್ ವಂಚನೆ (ಸಾಂಕೇತಿಕ ಚಿತ್ರ)

ಜನರಿಗೆ ವಂಚನೆ ಮಾಡಿ ಹಣವನ್ನ ಗಳಿಸುವುದು ಇವತ್ತಿನ ಕೆಲಸವಲ್ಲ. ಇದಕ್ಕೂ ಬಹಳ ದೊಡ್ಡ ಇತಿಹಾಸವಿದೆ. ಜನರು ಈ ರೀತಿ ಮೋಸ ಹೋಗಲು ಬಹು ಮುಖ್ಯ ಕಾರಣ ಹೆಚ್ಚಿನ ಹಣವನ್ನ ಗಳಿಸುವ ಆಸೆ. 

ಹೆಚ್ಚು ಕಷ್ಟವಿಲ್ಲದೆ ಹಣವನ್ನ ದ್ವಿಗುಣ ಮಾಡಿಕೊಳ್ಳುವ ಜನರ ಮಾನಸಿಕತೆ ಮೋಸ ಮಾಡುವ ಜನರಿಗೆ ಬಂಡವಾಳ. ಇದನ್ನ ಚೆನ್ನಾಗಿ ತಿಳಿದುಕೊಂಡು ಕೈಲಾದ ಮಟ್ಟಿಗೆ ವಂಚನೆಯಲ್ಲಿ ತೊಡಗಿಕೊಂಡವರ ಸಂಖ್ಯೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. 

ಹಿಂದೆ ಮೋಸ ಮಾಡಲು ದೈಹಿಕವಾಗಿ ಇರಬೇಕಾಗಿತ್ತು. ಆದರೆ ಇಂದು ಅದರ ಅವಶ್ಯಕತೆಯೂ ಇಲ್ಲ. ಸಾವಿರಾರು ಮೈಲಿ ದೂರದಲ್ಲಿ ಕುಳಿತು ನಮ್ಮ ಖಾತೆಯನ್ನ ಗುಡಿಸಿ ಹೋಗಿ ಬಿಡುತ್ತಾರೆ. ಇಂತಹ ವಂಚನೆಯ ಪ್ರಕರಣಗಳ ಬಗ್ಗೆ ಹಿಂದೆ ಆಗೊಮ್ಮೆ, ಈಗೊಮ್ಮೆ ಮಾತುಕತೆಯಾಗುತ್ತಿತ್ತು. ಆದರೆ ಯಾವಾಗ ಆನ್ಲೈನ್ ಮೂಲಕ ವಂಚನೆ ಶುರುವಾಯಿತು ಆಗ ಇದರ ಬಗ್ಗೆ ಮಾತನಾಡುವುದು ಹೆಚ್ಚಾಯಿತು. ಏಕೆಂದರೆ ಹಿಂದೆ ಇಂತಹ ವಂಚನೆಯನ್ನ ಮಾಡಲು ಶ್ರಮ ವಹಿಸಬೇಕಿತ್ತು, ಹೀಗಾಗಿ ವಂಚನೆಯ ಪ್ರಕರಣಗಳು ಕಡಿಮೆಯಿದ್ದವು. ಅಲ್ಲದೆ ಸಿಕ್ಕಿ ಬಿದ್ದರೆ ಜನರು ಕೊಡುವ ಧರ್ಮದೇಟಿನ ಭಯ ಕೂಡ ಇರುತ್ತಿತ್ತು. ಇಂದು ಎಲ್ಲವೂ ಬೆರಳ ತುದಿಯಲ್ಲಿ ನಡೆದು ಹೋಗುತ್ತಿದೆ. ಹೀಗಾಗಿ ವಂಚನೆಯ ಪ್ರಕರಣಗಳು ಕೂಡ ಬಹಳ ಹೆಚ್ಚಾಗಿದೆ. ಇಂತಹ ವಂಚನೆಯ ಪ್ರಕರಣಗಳಲ್ಲಿ ಜನ ಸಾಮಾನ್ಯರು ಮಾತ್ರವಲ್ಲ ಪೊಲೀಸ್ ಅಧಿಕಾರಿಗಳು, ಸಮಾಜದ ಗಣ್ಯರು ಕೂಡ ತೊಂದರೆಗೆ ಸಿಲುಕಿದ್ದಾರೆ. ಜನರನ್ನ ವಂಚಿಸಿ ಹಣವನ್ನ ಲೂಟಿ ಮಾಡುವುದರಲ್ಲಿ ಬಹಳಷ್ಟು ವಿಧಾನಗಳಿವೆ, ಆನ್ಲೈನ್ ವಂಚನೆ ಅದರಲ್ಲಿ ಒಂದು. ಸಮಾಜದಲ್ಲಿ ಯಾವ ರೀತಿಯಲ್ಲಿ ಜನ ವಂಚಿಸಲು ಸಿದ್ಧರಿರುತ್ತಾರೆ ಎನ್ನುವುದನ್ನ ಒಂದಷ್ಟು ತಿಳಿದುಕೊಳ್ಳೋಣ.

  1. ಬಂಗಾರವನ್ನ ದ್ವಿಗುಣ ಮಾಡಿಕೊಡುವ ಬಾಬಾ/ಸಂತರು: ಇಂತಹ ಡೊಂಗಿ ಬಾಬಾಗಳ ಅಥವಾ ಸಂತರ ವೇಷ ಧರಿಸಿ ನಲವತ್ತು ಅಥವಾ ಐವತ್ತು ವರ್ಷದ ಹಿಂದೆ ಬಹಳಷ್ಟು ಜನರನ್ನ ವಂಚಿಸಲಾಗಿದೆ. ಅಂದಿನ ಜನಾಂಗ ಇಂತಹ ವಂಚನೆಗೆ ಸುಲಭವಾಗಿ ಸಿಲುಕಿದ್ದು ಇಂದಿಗೆ ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಯಾವುದಾದರೂ ದೇವರ ಹೆಸರು ಹೇಳಿ, ಒಂದೆರೆಡು ಮಂಡಲ ಪೂಜೆಯನ್ನ ಮಾಡುವುದರ ಮೂಲಕ ಬಂಗಾರವನ್ನ ದ್ವಿಗುಣಗೊಳಿಸಲು ಸಾಧ್ಯ ಎನ್ನುವುದನ್ನ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಮನೆಯಲ್ಲಿ ಪೂಜೆ ಮಾಡಿಸಿ ಮೊದಲು ಒಂದಿಬ್ಬರಿಗೆ ದೇವರ ಮುಂದೆ ಇಟ್ಟ ಹಾರ ಅಥವಾ ಬಳೆಯನ್ನ ದ್ವಿಗುಣಗೊಳಿಸಿ ಕೂಡ ಕೊಡುತ್ತಿದ್ದರು. ಇದರಿಂದ ಭಕ್ತನಲ್ಲಿ ಇನ್ನಷ್ಟು ನಂಬಿಕೆ ಜೊತೆಗೆ ಆಸೆ ಕೂಡ ಹೆಚ್ಚಾಗುತ್ತಿತ್ತು. ತನ್ನ ಮನೆಯಲ್ಲಿರುವ ಎಲ್ಲವನ್ನೂ ದೇವರ ಮುಂದಿಟ್ಟು ದುಪ್ಪಟ್ಟು ಮಾಡಿ ಎಂದವರು ಕೆಲವರು, ಅಕ್ಕಪಕ್ಕದ ಮನೆಯವರನ್ನ, ಬಂಧು ಮಿತ್ರರನ್ನ ಕೂಡ ಓಲೈಸಿ ಅವರ ಬಂಗಾರವನ್ನ ಕೂಡ ದೇವರ ಮುಂದೆ ಇರಿಸಿದವರು ಇನ್ನು ಹಲವರು! ಒಟ್ಟಿನಲ್ಲಿ ಭಾರಿ ಬಂಗಾರ ಸೇರಿದ ದಿನ ಪೂಜೆಯಾದ ರಾತ್ರಿ ಬಾಬಾ ಎಲ್ಲವನ್ನೂ ಲಪಟಾಯಿಸಿ ಮಾಯವಾಗಿ ಬಿಡುತ್ತಿದ್ದರು. ಇವತ್ತಿಗೂ ಇದು ಪೂರ್ಣ ಮರೆಯಾಗಿದೆ ಎನ್ನುವಂತಿಲ್ಲ. ತೀರಾ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಇಂದಿಗೂ ಇದು ಚಾಲ್ತಿಯಲ್ಲಿದೆ.
  2. ಮುಂಗಡ ಹಣ ಕಟ್ಟಿ ವಸ್ತುಗಳನ್ನ ಅರ್ಧ ಬೆಲೆಗೆ ಪಡೆಯಿರಿ ಎನ್ನುವ ಸ್ಕೀಮ್ ಗಳು: ನಿಮಗೆಲ್ಲಾ ನೆನಪಿರಬಹುದು ಎಂದು ಭಾವಿಸುವೆ. ಇಪ್ಪತ್ತು/ಮೂವತ್ತು ವರ್ಷದ ಹಿಂದೆ ಊರಿನ ಮುಂದೆ ಒಂದು ದೊಡ್ಡ ಅಂಗಡಿಯನ್ನ ಬಾಡಿಗೆಗೆ ಪಡೆದು ಅಲ್ಲಿ ವಾಷಿಂಗ್ ಮಷೀನ್, ಟಿವಿ , ಕುಕ್ಕರ್ ಹೀಗೆ ಒಟ್ಟಿನಲ್ಲಿ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನ ದೊಡ್ಡ ಮಟ್ಟದಲ್ಲಿ ಶೇಖರಿಸಿ ಇಡುತ್ತಿದ್ದರು. ಟಿವಿ ಬೆಲೆ, ಅಥವಾ ವಾಷಿಂಗ್ ಮಷೀನ್ ಬೆಲೆ 100 ರೂಪಾಯಿ ಮಾರುಕಟ್ಟೆಯಲ್ಲಿ ಇದ್ದರೆ, ಇಂತಹ ಹೋಂ ಅಪ್ಲೈಎನ್ಸೆಸ್ ಅಂಗಡಿಗಳಲ್ಲಿ ಕೇವಲ 50 ಅಥವಾ 60 ರೂಪಾಯಿ ಕೊಟ್ಟರೆ ಸಾಕಿತ್ತು. ಮೂವತ್ತು ದಿನದ ನಂತರ ಹೇಳಿದ ಪದಾರ್ಥವನ್ನ ನೀಡುತ್ತಿದ್ದರು. ಇದು ಎಷ್ಟರ ಮಟ್ಟಿಗೆ ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೆಲವೊಮ್ಮೆ ಅಂಗಡಿ ನಡೆಸುವವರು ಎರಡು ಅಥವಾ ಮೂರು ವರ್ಷ ಸತತವಾಗಿ ಇಂತಹ ಕಾರ್ಯವನ್ನ ನಡೆಸುತ್ತಾ ಬರುತ್ತಿದ್ದರು. ಜನರಲ್ಲಿ ಸಾಕಷ್ಟು ವಿಶ್ವಾಸ ಬಂದ ನಂತರ ಅವರು ಹೆಚ್ಚಿನ ಹಣವನ್ನ ಮುಂಗಡವಾಗಿ ನೀಡಿದ ದಿನ ಮಾಯವಾಗಿ ಬಿಡುತ್ತಿದ್ದರು. ಅಂಗಡಿ ಹಾಗೆ ಇರುತ್ತಿತ್ತು. ಅಲ್ಲಿದ್ದ ಎಷ್ಟೋ ವಸ್ತುಗಳು ಇರುತ್ತಿದ್ದವು. ಅವರು ಕೆಲಸಕ್ಕೆ ತೆಗೆದುಕೊಂಡಿದ್ದ ಲೋಕಲ್ ಹುಡುಗರು ಕೂಡ ಏನೂ ಗೊತ್ತಿಲ್ಲದೇ ಮಾರನೇ ದಿನ ಕೆಲಸಕ್ಕೆ ಹಾಜರಾಗಿರುತ್ತಿದ್ದರು. ಇಂತಹ ಮೋಸದಾಟ ಕೂಡ ಬಹಳಷ್ಟು ವರ್ಷ ಅಭಾದಿತವಾಗಿ ಸಾಗಿತು. ಇಂದಿಗೆ ಇದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ.
  3. ಅತಿ ಹೆಚ್ಚು ಬಡ್ಡಿ ದರದ ಪ್ರಲೋಭನೆ ನೀಡಿ ಡೆಪಾಸಿಟ್ ತೆಗೆದುಕೊಳ್ಳುವುದು: ಚಿಟ್ ಫಂಡ್ ಮೂಲಕ ಹಣವನ್ನ ವೃದ್ಧಿಸುವುದು, ವಿನಿವಿಂಕ್ ನಂತೆ ಹೆಚ್ಚು ಬಡ್ಡಿ ದರವನ್ನ ನೀಡುವುದಾಗಿ ಹೇಳುವುದು, ಜೊತೆಗೆ ಬಹಳಷ್ಟು ಗ್ರಾಹಕರಿಗೆ ವರ್ಷಾನುಗಟ್ಟಲೆ ಸಾಧ್ಯವಿಲ್ಲ ಎನ್ನುವಂತಹ ಬಡ್ಡಿಯನ್ನ ಪ್ರತಿ ತಿಂಗಳೂ ತಪ್ಪದೆ ಸರಿಯಾದ ಸಮಯಕ್ಕೆ ನೀಡುವುದು ಮಾಡುತ್ತಾರೆ. ಗ್ರಾಹಕ ವರ್ಷಾನುಗಟ್ಟಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಡ್ಡಿಗಿಂತ ದುಪ್ಪಟ್ಟು ಬಡ್ಡಿಯನ್ನ ಪಡೆದು ಖುಷಿಯಾಗಿರುತ್ತಾನೆ. ತನ್ನ ಯಶೋಗಾಥೆಯನ್ನ ತನ್ನ ಸುತ್ತುಮುತ್ತಲ ಎಲ್ಲರಿಗೂ ಹೇಳುತ್ತಾ ಹೋಗುತ್ತಾನೆ. ಅವರನ್ನೂ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾನೆ. ಕೊನೆಗೊಂದು ದಿನ ಎಲ್ಲವನ್ನೂ ಕಳೆದುಕೊಂಡು ಗೋಳಾಡುವುದು ಮಾತ್ರ ತಪ್ಪುವುದಿಲ್ಲ. ಈ ರೀತಿಯ ಫ್ರಾಡ್ ತೀರಾ ಇತ್ತೀಚಿನವರೆಗೆ ನಡೆದು ಬಂದಿದೆ. ವಿನಿವಿಂಕ್ ನಂತಹ ಸಂಸ್ಥೆಯಲ್ಲಿ ರಾಹು ದ್ರಾವಿಡ್ ರಂತಹ ಸಭ್ಯ ಜನರು ಕೂಡ ಹೂಡಿಕೆ ಮಾಡಿದ್ದರು ಎನ್ನುವುದು ಸೋಜಿಗ ತರಿಸುತ್ತದೆ. ದ್ರಾವಿಡ್ ಅವರು ಸರಿ ಸುಮಾರು 3 ಕೋಟಿ ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ.

ಆನ್ಲೈನ್ ವಂಚನೆಗಳು: ಮೇಲೆ ಹೇಳಿದ ಪ್ರಕಾರಗಳು ಹೆಳೆಯದಾದವು. ಇಂದಿನ ದಿನದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವುದು ಈ ಆನ್ಲೈನ್ ವಂಚನೆಗಳು. ಇದರಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ

  • ಏಟಿಎಂ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದು : ಇತರರ ಏಟಿಎಂ ಕಾರ್ಡ್ ಬಳಸಿಕೊಂಡು ಹಣವನ್ನ ಡ್ರಾ ಮಾಡುವುದು, ಖರೀದಿ ಮಾಡುವುದು ಇತ್ಯಾದಿ.
  • ನೆಫ್ಟ್ ದುರ್ಬಳಕೆ ಮಾಡಿಕೊಳ್ಳುವುದು ಅದಕ್ಕಾಗಿ ಒಟಿಪಿ ಕೇಳುವುದು: ಜನ ತಮ್ಮ ಒಟಿಪಿ ಯನ್ನ ಇತರರಿಗೆ ನೀಡುವಂತಿಲ್ಲ. ಈ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡುವ ಅಭಿಯಾನಗಳನ್ನ ಸರಕಾರ, ಬ್ಯಾಂಕು ಮತ್ತಿತರ ಸಂಸ್ಥೆಗಳು ಮಾಡುತ್ತಾ ಬಂದಿವೆ. ಹೀಗಿದ್ದೂ ಜನ ತಮ್ಮ ಒಟಿಪಿ ಯನ್ನ ಹಂಚಿಕೊಳ್ಳುವುದು ಅಚ್ಚರಿ ತರಿಸುತ್ತದೆ.
  • ಗ್ರಾಹಕರಿಗೆ ಅರಿವಿಲ್ಲದೆ ಅಕೌಂಟ್ ಹ್ಯಾಕ್ ಮಾಡುವುದು: ಇದರಲ್ಲಿ ಗ್ರಾಹಕರ ಪಾತ್ರ ಕಡಿಮೆ. ಹ್ಯಾಕರ್ ಗಳು ಗ್ರಾಹಕರ ಖಾತೆಯನ್ನ ಹ್ಯಾಕ್ ಮಾಡಿ, ಖಾತೆಯಲ್ಲಿರುವ ಹಣವನ್ನ ಲೂಟಿ ಮಾಡುವುದು ಕೂಡ ಸಾಧ್ಯವಿದೆ. ಗ್ರಾಹಕರ ಪಾಸ್ ವರ್ಡ್, ಆಧಾರ್ ಹೀಗೆ ಮೂಲಭೂತವಾಗಿ ಬೇಕಾಗುವ ಕೆಲವು ಮಾಹಿತಿಗಳನ್ನ ಅರಿವಿಲ್ಲದೆ ಸಂಗ್ರಹಿಸಿ ನಂತರ ತಮ್ಮ ನೈಪುಣ್ಯತೆಯನ್ನ ಬಳಸಿ ಹ್ಯಾಕ್ ಮಾಡುತ್ತಾರೆ.
  • ಮನೆ ಬಾಡಿಗೆಗೆ ಇದೆ, ಅಥವಾ ಕಾರು ಮಾರಾಟಕ್ಕೆ ಇದೆ ಎಂದಾಗ ಗ್ರಾಹಕರ ಸೋಗಿನಲ್ಲಿ ಬಂದು ವಂಚಿಸುತ್ತಾರೆ: ಹೌದು ತೀರಾ ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಗೆ ಇದರ ಅನುಭವಾಗಿದೆ. ಅವರು ತಮ್ಮ ಮನೆ ಖಾಲಿಯಿದೆ, ಬಾಡಿಗೆಗೆ ಕೊಡಲು ಸಿದ್ದ ಎನ್ನುವ ಜಾಹಿರಾತು ವೆಬ್ ಸೈಟ್ ಒಂದರಲ್ಲಿ ಹಾಕಿದ್ದರು. ಹಿಂದಿ ಮಾತನಾಡುವವರೊಬ್ಬರು ಮನೆ ಬೇಕಾಗಿದೆ ಎಂದು ತಕ್ಷಣ ಅಡ್ವಾನ್ಸ್ ಟ್ರಾನ್ಸ್ಫರ್ ಮಾಡುವುದಾಗಿ ಹೇಳಿ ಒಂದಷ್ಟು ಹಣವನ್ನ ಟ್ರಾನ್ಸ್ಫರ್ ಕೂಡ ಮಾಡಿ, ಆ ನಂತರ ಒಂದು ಕ್ಯೂಆರ್ ಕೋಡ್ ಕಳುಹಿಸಿ ಇದನ್ನ ಸ್ಕ್ಯಾನ್ ಮಾಡಿ ಉಳಿದರ್ಧ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂದಿದ್ದಾರೆ. ಅವರು ಮಾಡಲಿಲ್ಲ. ಒಂದು ವೇಳೆ ಸ್ಕ್ಯಾನ್ ಮಾಡಿದ್ದರೆ ಅವರ ಖಾತೆಯಲ್ಲಿದ್ದ ಕೊನೆಯ ಪೈಸೆ ವರೆಗೆ ಅವರು ಲೂಟಿ ಮಾಡಿ ಬಿಡುತ್ತಿದ್ದರು. ಇದೆ ಕಥೆ ಕಾರು ಮಾರಾಟಕ್ಕೂ ಅನ್ವಯ. ಹೀಗೆ ಆನ್ಲೈನ್ ವಂಚನೆಯಲ್ಲಿ ಹತ್ತಾರು ವಿಧಗಳಿವೆ, ಮೇಲೆ ಉಲ್ಲೇಖಿಸಿದ್ದು ಒಂದೆರಡು ಸ್ಯಾಂಪಲ್ ಅಷ್ಟೇ, ಹೀಗಾಗಿ ಯಾವಾಗ , ಯಾವ ರೀತಿಯಲ್ಲಿ ಗಾಳ ಹಾಕಿ ಕುಳಿತಿರುತ್ತಾರೆ ಹೇಳಲು ಬಾರದು. ನಮ್ಮ ಎಚ್ಚರದಲ್ಲಿ ನಾವಿರಬೇಕು.
  • ಕ್ರಿಪ್ಟೋ ಕರೆನ್ಸಿ ಎನ್ನುವ ಹುಚ್ಚಾಟ: ಇವತ್ತಿಗೆ ಬಹಳಷ್ಟು ಜನರಿಗೆ ಇಂದೊಂದು ಖಾಯಿಲೆ ಶುರುವಾಗಿ ಬಿಟ್ಟಿದೆ. ಕ್ರಿಪ್ಟೋದಲ್ಲಿ ಹಣವನ್ನ ಹೂಡದಿದ್ದರೆ ನಾವು ಮೇನ್ ಸ್ಟ್ರೀಮ್ ನಿಂದ ಬಹಳ ದೂರ ಉಳಿದ್ದಿದೇವೆ ಎನ್ನುವ ಭಾವನೆ ಬಹಳ ಜನರಲ್ಲಿ ಬಂದಿದೆ. ಗಮನಿಸಿ ಕ್ರಿಪ್ಟೋ ಕರೆನ್ಸಿ ಯಲ್ಲಿ ಹೂಡಿಕೆ ಮಾಡುವುದು ಇಂದಿನ ದಿನದಲ್ಲಿ ಯಾವುದೇ ಜೂಟಾಟಕ್ಕಿಂತ ಕಡಿಮೆಯಲ್ಲ. ಇವತ್ತಿರುವ ವೆಬ್ಸೈಟ್ ನಾಳೆ ಇಲ್ಲವಾಗಬಹುದು. ಇದರ ಜೊತೆಗೆ ಯಾವುದೇ ಪ್ರತಿಷ್ಠಿತ ಅಥವಾ ನಂಬಲರ್ಹ ಸಂಸ್ಥೆಯ ಹಿಡಿತದಲ್ಲಿ ಇರದ ಇವುಗಳ ಆಟದ ನಿಯಮ ಯಾವ ಗಳಿಗೆಯಲ್ಲೂ ಬದಲಾಗಬಹುದು. ಇದು ಕೂಡ ಜನರನ್ನ ವಂಚಿಸಲು ಇರುವ ಇನ್ನೊಂದು ಮೂಲವೆಂದು ಹೇಳಬಹುದು.

ಕೊನೆ ಮಾತು : ಮೇಲಿನ ಎಲ್ಲಾ ವಂಚನೆಯ ಪ್ರಕಾರಗಳನ್ನ ಗಮನಿಸಿ ನೋಡಿ, ಅಲ್ಲಿ ಪ್ರಮುಖವಾಗಿ ಕಾಣುವುದು ಒಂದು ವರ್ಗದ ಜನರಲ್ಲಿ ಹೆಚ್ಚು ಕಷ್ಟ ಪಡೆದ ಹಣವನ್ನ ವೃದ್ಧಿ ಮಾಡಿಕೊಳ್ಳುವ ಆಸೆ ಇರುವುದು ಕಾಣಿಸುತ್ತದೆ. ಕೆಲವೆಡೆ ಕಡಿಮೆ ಹಣಕ್ಕೆ ಹೆಚ್ಚಿನ ಬೆಲೆಯ ಪದಾರ್ಥ ಸಿಗುತ್ತದೆ ಎನ್ನುವ ಆಸೆ. ಒಟ್ಟಿನಲ್ಲಿ ಕಡಿಮೆ ಹಣಕ್ಕೆ ಹೆಚ್ಚು ಮೌಲ್ಯ ಸಿಗುತ್ತದೆ ಎನ್ನುವ ಆಸೆ ಈ ಎಲ್ಲಾ ವಂಚನೆಗೆ ಮೂಲ ಕಾರಣ. ಹೆಚ್ಚಿನ ಬಡ್ಡಿಯ ಆಸೆ, ಬೇಗ ಹಣ ದುಪ್ಪಟ್ಟು ಮಾಡಿಕೊಳ್ಳುವ ಆಸೆಗಳ ನಡುವೆ ಒಂದು ಸಣ್ಣ ವಿವೇಚನೆ ಮನುಷ್ಯ ಮರೆತು ಬಿಡುತ್ತಾನೆ. ಯಾರೇಕೆ ಇವರಿಗೆ ಹಣವನ್ನ ವೃದ್ಧಿಸಿ ಕೊಡುತ್ತಾರೆ? ಹಾಗೊಮ್ಮೆ ಅವರು ಹೇಳುವ ಪ್ರಕಾರ ಅಷ್ಟು ದೊಡ್ಡ ಮಟ್ಟದಲ್ಲಿ ದುಪ್ಪಟ್ಟು ಮಾಡಿಕೊಳ್ಳುವ ತಾಕತ್ತು ಅವರಿಗಿದ್ದರೆ ಅವರೇ ಅದನ್ನ ಮಾಡಿಕೊಳ್ಳಬಹುದಲ್ಲವೇ? ಅವರೇಕೆ ನಿಮಗೆ ಉಪಕಾರ ಮಾಡಲು ಬರುತ್ತಾರೆ? ಇಂತಹ ಸಾಮಾನ್ಯ ಪ್ರಶ್ನೆಗಳನ್ನ ಕೇಳಿಕೊಳ್ಳುವ ವಿವೇಚನೆಯನ್ನ ಮನುಷ್ಯ ಕಳೆದುಕೊಳ್ಳುತ್ತಾನೆ. ಆಗ ಇಂತಹ ವಂಚನೆಗಳು ಘಟಿಸುತ್ತವೆ.

ಎಲ್ಲಿಯವರೆಗೆ ನಾವು ಜಾಗೃತರಾಗುವುದಿಲ್ಲ, ಹಣಕಾಸು ಸಾಕ್ಷರತರಾಗುವುದಿಲ್ಲ, ಪ್ರಲೋಭನೆಗೆ ಒಳಗಾಗುವುದು ನಿಲ್ಲಿಸುವುದಿಲ್ಲ ಅಲ್ಲಿಯವರೆಗೆ ಇಂತಹ ವಂಚನೆಗಳು ತಪ್ಪುವುದಿಲ್ಲ. ತೀರಾ ಇತ್ತೀಚಿನ ಆನ್ಲೈನ್ ವಂಚನೆ ಪ್ರಕರಣಗಳು ಮಾತ್ರ ಇದಕ್ಕೆ ಅಪವಾದ. ಗ್ರಾಹಕ ತನ್ನದೇನೂ ತಪ್ಪಿಲ್ಲದೆಯೂ ಮೋಸಕ್ಕೆ ತುತ್ತಾಗಿದ್ದಾನೆ. ಇಂತಹ ಕೆಲವೇ ಕೆಲವು ಪ್ರಕರಣ ಹೊರತುಪಡಿಸಿ ಮಿಕ್ಕದು ಘಟಿಸುವುದು ಮಾತ್ರ ಲಾಲಸೆಯಿಂದ , ಹೀಗಾಗಿ ಸ್ವ ನಿಯಂತ್ರಣ ಬಹಳ ಮುಖ್ಯ. ಕೇವಲ ವ್ಯವಸ್ಥೆಯ ದೋಷಿಸಿ ಪ್ರಯೋಜನವಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com