ಆಚಾರವಿಲ್ಲದ ನಾಲಗೆ... (ನೇರ ನೋಟ)

ಕೂಡ್ಲಿ ಗುರುರಾಜ ಕರ್ನಾಟಕ ರಾಜಕಾರಣ ಬಹುಶಃ ಯಾವತ್ತೂ ಈ ಮಟ್ಟಕ್ಕೆ ತಲುಪಿರಲಿಲ್ಲ. ಎದುರಾಳಿಗಳ ಬಗ್ಗೆ ಮಾತಾಡುವಾಗ ಭಾಷೆ ಬಳಕೆಯ ವಿಚಾರದಲ್ಲಿ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಇದಕ್ಕೆ ಆಚಾರವಿಲ್ಲದ ನಾಲಗೆ ಅಂತ ಕರೆಯುವುದು.
ಕರ್ನಾಟಕ ಉಪಚುನಾವಣೆ ಎದುರಿಸುತ್ತಿರುವ ಪಕ್ಷಗಳ ನಾಯಕರು (ಸಂಗ್ರಹ ಚಿತ್ರ)
ಕರ್ನಾಟಕ ಉಪಚುನಾವಣೆ ಎದುರಿಸುತ್ತಿರುವ ಪಕ್ಷಗಳ ನಾಯಕರು (ಸಂಗ್ರಹ ಚಿತ್ರ)

ಕರ್ನಾಟಕ ರಾಜಕಾರಣ ಬಹುಶಃ ಯಾವತ್ತೂ ಈ ಮಟ್ಟಕ್ಕೆ ತಲುಪಿರಲಿಲ್ಲ. ಎದುರಾಳಿಗಳ ಬಗ್ಗೆ ಮಾತಾಡುವಾಗ ಭಾಷೆ ಬಳಕೆಯ ವಿಚಾರದಲ್ಲಿ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಇದಕ್ಕೆ ಆಚಾರವಿಲ್ಲದ ನಾಲಗೆ ಅಂತ ಕರೆಯುವುದು. 

ಹಾನಗಲ್‌ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರದ ಅಖಾಡದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಳಸುತ್ತಿರುವ ಭಾಷೆಯನ್ನು ಗಮನಿಸಿದರೆ ರಾಜಕೀಯ ರಂಗ ಯಾವ ಮಟ್ಟಿಗೆ ಅಧೋಗತಿಗೆ ಇಳಿದಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಈ ವಿಚಾರದಲ್ಲಿ ಪಕ್ಷಭೇದವೇ ಇಲ್ಲ. ಅದು ರಾಷ್ಟ್ರೀಯ ಪಕ್ಷಗಳೇ ಆಗಿರಬಹುದು, ಪ್ರಾದೇಶಿಕ ಪಕ್ಷವೇ ಇರಬಹುದು. ಎಲ್ಲರೂ ತಕ್ಕಡಿಯಲ್ಲೇ ಸಮನಾಗಿ ತೂಗುವವರೇ.

ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಸೈದ್ಧಾಂತಿಕ ನೆಲೆಗಟ್ಟು, ಕಾರ್ಯಕ್ರಮಗಳ ಆಧಾರದ ಮೇಲೆ ಮತ ಯಾಚಿಸುವ ಬದಲು ಕೀಳು ಅಭಿರುಚಿಯ ಭಾಷೆ ಬಳಸಿ ಪರಸ್ಪರ ಚಾರಿತ್ರ್ಯವಧೆಗೆ ಇಳಿದಿದ್ದಾರೆ. ಡ್ರಗ್ಸ್‌ ಪೆಡ್ಲರ್‌, ದ್ವಿ ಪತ್ನಿತ್ವ, ಹುಚ್ಚ, ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಏಕವಚನದ ಬಳಕೆ  ಹೀಗೆ ನಿಂದನೆಗೆ ಇಳಿದಿದ್ದಾರೆ. ಘನತೆ, ಗಾಂಭೀರ್ಯ ಇರಬೇಕಾದ ಜಾಗದಲ್ಲಿ ದ್ವೇಷದ ಬೆಂಕಿಯನ್ನು ಉಗುಳುತ್ತಿದ್ದಾರೆ. ಇಂಥವರಿಗೆ ತಿಳಿ ಹೇಳಬೇಕಾದ ಆಯಾ ಪಕ್ಷಗಳ ರಾಜಕೀಯ ಮೇಧಾವಿಗಳು ಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಇಂತಹ ಮಾತುಗಳನ್ನು ಆಡಲು ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ.

ವ್ಯಕ್ತಿಗತ ನಿಂದನೆ, ಚಾರಿತ್ರ್ಯವಧೆ, ಖಾಸಗಿ ಬದುಕಿನ ಬಗ್ಗೆ ಪ್ರಸ್ತಾಪ, ಆಧಾರವಿಲ್ಲದ ಆರೋಪ-ಪ್ರತ್ಯಾರೋಪಗಳು-ಇವು ಉಪ ಚುನಾವಣೆಯ ಪ್ರಚಾರದ ಸಾಮಗ್ರಿಗಳು ಎಂಬಂತಾಗಿವೆ. ಕುಸಿಯುತ್ತಿರುವ ರಾಜಕೀಯ ಮೌಲ್ಯಗಳನ್ನು ಇವು ಬಿಂಬಿಸಿವೆ. ಜನತಂತ್ರದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವವರ ಹಿನ್ನೆಲೆಯನ್ನೂ ಇದು ಅರ್ಥಮಾಡಿಸುತ್ತದೆ.

ಕರ್ನಾಟಕದ ರಾಜಕಾರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಮೊದಲಿನಿಂದಲೂ ಒಂದು ಗೌರವ ಇದೆ. ಆದರೆ, ಇತ್ತೀಚಿನ ವರ್ಷಗಳ ರಾಜಕೀಯ ಬೆಳವಣಿಗೆಗಳು ಇದಕ್ಕೆ ಘಾಸಿ ಉಂಟು ಮಾಡಿದೆ. ಕರ್ನಾಟಕದ ರಾಜಕೀಯದಲ್ಲಿ ಕಳೆದ 10-15 ವರ್ಷಗಳಿಂದ ಮೌಲ್ಯಗಳು ಶರವೇಗದಲ್ಲಿ ಕುಸಿಯುತ್ತಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇದರ ಮುಂದುವರಿದ ಭಾಗವೇ ಹಾನಗಲ್‌ ಹಾಗೂ ಸಿಂಧಗಿ ಉಪ ಚುನಾವಣೆಯ ಪ್ರಚಾರದಲ್ಲಿಭಾಷೆಯ ಬಳಕೆ.

ರಾಜಕಾರಣಿಗಳು, ಅಧಿಕಾರಸ್ಥರು ಬಳಸುವ ಭಾಷೆ, ವರ್ತನೆಯನ್ನು ಜನರು ಸದಾ ಗಮನಿಸುತ್ತಿರುತ್ತಾರೆ. ಇದರ ಪರಿಜ್ಞಾನವೇ ಇಲ್ಲದಂತೆ ಕೆಲವು ರಾಜಕೀಯ ನಾಯಕರು ಬಳಸುತ್ತಿರುವ ಭಾಷೆ ಆಯಾ ರಾಜಕೀಯ ಪಕ್ಷಗಳ ಬಗ್ಗೆಯಷ್ಟೇ ಅಲ್ಲ, ಇಡೀ ರಾಜಕಾರಣದ ಬಗ್ಗೆಯೇ ಜನರಿಗೆ ಅಸಹ್ಯ ಉಂಟಾಗುತ್ತದೆ ಎಂದು ಈ ನಾಯಕರು ಅರ್ಥಮಾಡಿಕೊಳ್ಳಬೇಕು.

ಹಾನಗಲ್‌ ಹಾಗೂ ಸಿಂಧಗಿ ಉಪ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆ.  ಹಾನಗಲ್‌ನಿಂದ ಕಾಂಗ್ರೆಸ್‌ ಸೋಲು ಆರಂಭವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ. ಹಾಗೇ ನೋಡಿದರೆ ಹಾನಗಲ್‌ ಹಾಗೂ ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ. ಸಿಂಧಗಿಯಲ್ಲಿ ಜೆಡಿಎಸ್‌ ಗೆದ್ದಿದ್ದರೆ, ಹಾನಗಲ್‌ ಬಿಜೆಪಿ ಪಾಲಾಗಿತ್ತು.

ಬಿಜೆಪಿಗೆ ಈ ಕ್ಷೇತ್ರ ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾನಗಲ್‌ನಲ್ಲಿ ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಸಿ.ಎಂ. ಉದಾಸಿ ಹಾಗೂ ಮನೋಹರ ತಹಸೀಲ್ದಾರ್‌ ಅವರ ಕುಟುಂಬದಿಂದ ಹೊರತಾಗಿ ಚುನಾವಣೆ ನಡೆಯುತ್ತಿದೆ. ಅನೇಕ ವರ್ಷಗಳಿಂದ ಇಲ್ಲಿ ಉದಾಸಿ ಹಾಗೂ ಕಾಂಗ್ರೆಸ್ಸಿನ ಮನೋಹರ ತಹಸೀಲ್ದಾರ್‌ ಅವರ ನಡುವೆಯೇ ಇದು ಜಿದ್ದಾಜಿದ್ದಿಯ ಕಣವಾಗಿತ್ತು.

ಉದಾಸಿ ಶಾಲೆಗೆ ಹೋಗಿ ಓದಿದ್ದು ಕಡಿಮೆಯಾದರೂ ವ್ಯವಹಾರಿಕ ಜ್ಞಾನ ಅವರಲ್ಲಿ ಅಪಾರವಾಗಿತ್ತು. ಅನೇಕ ಭಾಷೆಗಳನ್ನು ಅವರು ಮಾತಾಡುತ್ತಿದ್ದರು. ನಿರಂತರ ಅಧ್ಯಯನ ಅವರಲ್ಲಿತ್ತು.  ಚುನಾವಣೆಗಳಲ್ಲಿ ಜನರ ನಾಡಿಮಿಡಿತವನ್ನು ಮತದಾನದ ಮುನ್ನ ಅರ್ಥಮಾಡಿಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದರು. ಜನರ ಜೊತೆ ಸದಾ ಬೆರೆಯುವ ಗುಣ ಅವರದ್ದಾಗಿತ್ತು. ತೀಕ್ಷ್ಣ ಬುದ್ದಿಯವರಾಗಿದ್ದರು. ಜನತಾ ಪರಿವಾರದಲ್ಲಿದ್ದ ಉದಾಸಿ ಬಿಜೆಪಿ ಸೇರಿ ಆ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಉದಾಸಿ ಹಾಗೂ ಎಂ.ಸಿ.ಮನಗೂಳಿ ಅವರ ನಿಧನದಿಂದ ಕ್ರಮವಾಗಿ ಹಾನಗಲ್‌ ಹಾಗೂ ಸಿಂಧಗಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಅಂಥದ್ದರಲ್ಲಿ ಸಿಂಧಗಿಯಲ್ಲಿ ಆ ಪಕ್ಷ  ಕಳೆದ ಚುನಾವಣೆಯಲ್ಲಿ ಗೆಲ್ಲಲು ಕಾರಣ ಆ ಪಕ್ಷದ ಅಭ್ಯರ್ಥಿಯಾಗಿದ್ದ ಎಂ.ಸಿ.ಮನಗೂಳಿ ಹಾಗೂ ಅಲ್ಲಿ ನಡೆದಿದ್ದ ಅಭಿವೃದ್ಧಿ ಕಾರ್ಯಗಳು. ಹಾನಗಲ್‌ನಲ್ಲಿ ಜೆಡಿಎಸ್‌ ಯಾವತ್ತೂ ಗೆದ್ದಿಲ್ಲ. ಈಗ ಈ ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂಮರಿಗೆ ಜೆಡಿಎಸ್‌ ಟಿಕೆಟ್‌ ನೀಡಿರುವುದು ಬಿಜೆಪಿ ಅಥವಾ ಕಾಂಗ್ರೆಸ್‌ ಯಾರಿಗೆ ಲಾಭ ಎಂಬ ಪ್ರಶ್ನೆಯನ್ನು ಮುಂದೆ ಮಾಡಿದೆ.

ಹಾನಗಲ್‌ ಹಾಗೂ ಸಿಂಧಗಿ ಉಪ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಚುನಾವಣಾ ಕಣ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಬೊಮ್ಮಾಯಿ ತಮ್ಮ  ಪಕ್ಷದಲ್ಲಿ ನಾಯಕತ್ವವನ್ನು ಭದ್ರಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೂ ಬೊಮ್ಮಾಯಿ ಸರಕಾರಕ್ಕೇನೂ ಶಾಸಕರ ಸಂಖ್ಯಾ ಬಲದ ದೃಷ್ಟಿಯಿಂದ ಯಾವುದೇ ಅಪಾಯ ಇಲ್ಲ. ಬೊಮ್ಮಾಯಿ ಸರಕಾರಕ್ಕೆ ಬಹುಮತವಿದೆ. ಆದರೆ, ಇಲ್ಲಿ ಬಿಜೆಪಿ ಗೆಲುವು ಬೊಮ್ಮಾಯಿ ನಾಯಕತ್ವ ಹಾಗೂ ಅವರ ಸರಕಾರಕ್ಕೆ ರಾಜಕೀಯವಾಗಿ ಒಂದು ಬಲವನ್ನು ತಂದುಕೊಡುತ್ತದೆ.

ಹಾನಗಲ್‌ ಹಾಗೂ ಸಿಂಧಗಿ ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಗೆದ್ದಿಲ್ಲ. ಉಪ  ಚುನಾವಣೆಯಲ್ಲಿ ಗೆದ್ದರೆ ಆ ಪಕ್ಷಕ್ಕೆ ನೈತಿಕ ಸ್ಥೈರ್ಯ ತಂದುಕೊಡಲಿದೆ. ಆ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆ ಎದುರಿಸುವ ಉತ್ಸಾಹ ಮತ್ತಷ್ಟು ಗರಿಗೆದರಲಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com