ಏರುಗತಿಯಲ್ಲಿದೆ ಷೇರು ಮಾರುಕಟ್ಟೆ! ವಹಿಸಬೇಕಾಗಿದೆ ಹೆಚ್ಚು ಜಾಗ್ರತೆ!! (ಹಣಕ್ಲಾಸು)

ಹಣಕ್ಲಾಸು-274-ರಂಗಸ್ವಾಮಿ ಮೂಕನಹಳ್ಳಿ
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಮಾರುಕಟ್ಟೆ ಏರುಗತಿಯಲ್ಲಿದ್ದರೆ ಅದು ಧನಾತ್ಮಕ ಅಂಶ. ಮಾರುಕಟ್ಟೆ ಕುಸಿತ ಕಾಣುತ್ತಿದ್ದರೆ ಅದು ಋಣಾತ್ಮಕ ಅಂಶ. ಮಾರುಕಟ್ಟೆಯಲ್ಲಿ ಇಂದಿಗೆ ಬಹುತೇಕರು ಒಳ್ಳೆಯ ಫಸಲನ್ನ ತೆಗೆಯುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಇದೇನಿದು ಷೇರು ಪೇಟೆ ಏರುಗತಿಯಲ್ಲಿರುವಾಗ ನಾವೇಕೆ ಹೆಚ್ಚು ಜಾಗೃತರಾಗಿರಬೇಕು? ಎನ್ನುವ ಪ್ರಶ್ನೆ ಸಹಜವಾಗೇ ನಿಮ್ಮ ಮನಸಿನಲ್ಲಿ ಮೂಡಿರುತ್ತದೆ. ಹೌದು ಇದು ಸಹಜ. ಆದರೆ ಗಮನಿಸಿ ನೋಡಿ ಕುಸಿತದ ಸಮಯದಲ್ಲಿ ಎಲ್ಲರೂ ಅಳೆದು ತೂಗಿ ಹಣವನ್ನ ಹೂಡಿಕೆ ಮಾಡುತ್ತಾರೆ. ಅದೇ ಏರುಗತಿಯಲ್ಲಿ ಹೆಚ್ಚು ಚಿಂತಿಸುವುದಿಲ್ಲ, ಅವರು ಮಾರುಕಟ್ಟೆಯ ತೇಲುವಿಕೆ ಜೊತೆಗೆ ಹೊರಟು ಬಿಡುತ್ತಾರೆ. ಮೊದಲೇ ಹೇಳಿದಂತೆ ಮನಸ್ಸಿನಲ್ಲಿ ಇರುವ ಪಾಸಿಟಿವ್ ಸೆಂಟಿಮೆಂಟಿನ ಪ್ರಭಾವವದು.

ಈ ಹಿಂದೆ ಹಣಕ್ಲಾಸು ಅಂಕಣದಲ್ಲಿ ಐಪಿಒ ಗಳು ಈ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇಂತಹ ಐಪಿಒ ಗಳಲ್ಲಿ ಬಹಳಷ್ಟು ಮಾಹಿತಿಗಳು ಇರುವುದಿಲ್ಲ ಎನ್ನುವುದರ ಬಗ್ಗೆ ಕೂಡ ಬರೆಯಲಾಗಿತ್ತು. ಪ್ರಾಥಮಿಕ ಮಾರುಕಟ್ಟೆಯಲ್ಲಿ ಇರುವ ದೊಡ್ಡ ಕೊರತೆಯೆಂದರೆ ಮಾಹಿತಿಯನ್ನ ಕಲೆ ಹಾಕುವುದು. ಇದೆ ತಿಂಗಳು ಅಂದರೆ ಸೆಪ್ಟೆಂಬರ್ 2021 ರಂದು ಮಾರುಕಟ್ಟೆಗೆ 9 ಸಂಸ್ಥೆಗಳು ತಮ್ಮ ಐಪಿಒದೊಂದಿಗೆ ಮಾರ್ಕಟ್ಟೆಗೆ ಲಗ್ಗೆಯನ್ನ ಇಡಲಿವೆ. ಹೀಗೆ ಒಟ್ಟು 9 ಸಂಸ್ಥೆಗಳ ಮೂಲಕ ಮಾರುಕಟ್ಟೆಯಿಂದ ಹನ್ನೆರಡು ಸಾವಿರದ ಐನೂರು ಕೋಟಿ ರೂಪಾಯಿಯನ್ನ ತೆಗೆದುಕೊಳ್ಳುವ ಹವಣಿಕೆಯಲ್ಲಿವೆ. ರುಚಿ ಸೋಯಾ, ಆದಿತ್ಯ ಬಿರ್ಲಾ ಸನ್ ಲೈಫ್. ವಿಜಯ ಡೈಗೊನಿಸ್ಟಿಕ್, ಪೆನ್ನಾ ಸಿಮೆಂಟ್ ಹೀಗೆ ಇನ್ನು ಹಲವಾರು ಸಂಸ್ಥೆಗಳು ಪ್ರೈಮರಿ ಮಾರುಕಟ್ಟೆಗೆ ಬರಲಿವೆ.

ಗಮನಿಸಿ ನೋಡಿ, ಈ ಸಂಸ್ಥೆಗಳ ಷೇರನ್ನ ಕೊಳ್ಳಬಾರದು ಅಥವಾ ಕೊಳ್ಳಬಹುದು ಎನ್ನುವುದನ್ನ ಇಲ್ಲಿ ಹೇಳುತ್ತಿಲ್ಲ. ಇಂದಿನ ದಿನದಲ್ಲಿ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಾ ಹೋಗುತ್ತಿದೆ. ಸಾಮಾನ್ಯವಾಗೇ ಎಲ್ಲಾ ಹೂಡಿಕೆದಾರರಲ್ಲಿ ಹಣವನ್ನ ಹಾಕಿ ಹೆಚ್ಚಿನ ಹಣವನ್ನ ಬಾಚಿಕೊಳ್ಳುವ ಆತುರ ಕೂಡ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ ಹೆಚ್ಚಿನ ಜಾಗ್ರತೆ, ಪರಿಶೀಲನೆ ಅಗತ್ಯವಿರುತ್ತದೆ. ಇನ್ನೊಂದು ಅಂಶವನ್ನ ಕೂಡ ನೀವು ಗಮನಿಸಿ ನೋಡಿ ವರ್ಷದಲ್ಲಿ ಆಗುತ್ತಿದ್ದ ಬದಲಾವಣೆ ಕೇವಲ 19 ದಿನಗಳಲ್ಲಿ ಆಗಿದೆ. ಅಂದರೆ ಸಾಮಾನ್ಯವಾಗಿ ನಿಫ್ಟಿ ಒಂದು ಸಾವಿರ ಅಂಕ ಮೇಲೇರಲು ವರ್ಷ ಹಿಡಿಯುತಿತ್ತು. ಈ ಬಾರಿ ನಿಫ್ಟಿ 16 ಸಾವಿರದಿಂದ 17 ಸಾವಿರಕ್ಕೆ ಕೇವಲ 19 ದಿನದಲ್ಲಿ ಜಿಗಿತ ಕಂಡಿದೆ. ಅಲ್ಲದೆ ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಈ ಸಂಖ್ಯೆ 18500 ದಾಟುತ್ತದೆ ಎನ್ನುವ ಊಹಾಪೋಹ, ಲೆಕ್ಕಾಚಾರದ ಗುಸುಗುಸು ಕೂಡ ಆಗಲೇ ಎಲ್ಲಡೆ ಹಬ್ಬಿದೆ.

ಒಂದೆಡೆ ಜಾಗತಿಕ ವಿತ್ತ ಜಗತ್ತು ಇನ್ನೂ ಕೋವಿಡ್ ಆಘಾತದಿಂದ ಚೇತರಿಸಿಕೊಂಡಿಲ್ಲ ಎನ್ನುವ ಮಾತುಗಳನ್ನ ಕೇಳುತ್ತಿದ್ದೇವೆ, ಇನ್ನೊಂದೆಡೆ ನಾಗಾಲೋಟದಲ್ಲಿ ಓಡುತ್ತಿರುವ ಷೇರು ಮಾರುಕಟ್ಟೆಯನ್ನ ತೋರಿಸಿ ಎಲ್ಲವೂ ಸರಿಯಾಗಿದೆ ಎನ್ನುವ ಕೂಗನ್ನ ಕೂಡ ಕೇಳುತ್ತಿದ್ದೇವೆ. ನಿಮಗೆಲ್ಲಾ ಒಂದು ವಿಷಯ ಗೊತ್ತಿರಲಿ ಷೇರು ಮಾರುಕಟ್ಟೆಯ ಏರಿಳಿತಗಳು ಏನೇ ಇರಲಿ ಅದು ನಮ್ಮ ಸಮಾಜದ ಅದರಲ್ಲೂ ವಿತ್ತ ಭದ್ರತೆಯ ಅಥವಾ ದೇಶದ ವಿತ್ತೀಯ ಆರೋಗ್ಯದ ಮಾಪಕವಲ್ಲ. ನಮ್ಮ ಷೇರು ಮಾರುಕಟ್ಟೆ ಇಷ್ಟೊಂದು ವೇಗವಾಗಿ ಸಂಪತ್ತು ಸೃಷ್ಟಿಸಿ ಕೊಡುತ್ತಿರುವ ಈ ಸಮಯದಲ್ಲಿ ಇದೇನಿದು ಎನ್ನುವ ಭಾವನೆ ನಿಮಗೆ ಬಂದಿರುತ್ತದೆ. ಅದೇಕೆ ಷೇರುಮಾರುಕಟ್ಟೆಯ ಗೂಳಿ ಓಟ ನಮ್ಮ ಸಮಾಜದ ಒಟ್ಟು ಆರ್ಥಿಕ ಸ್ಥಿರತೆಯ ಮಾಪಕವಲ್ಲ ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನ ನೀಡಬಹುದು. ಅವುಗಳಲ್ಲಿ ಪ್ರಮುಖವಾದವುಗಳನ್ನ ಹೀಗೆ ಪಟ್ಟಿ ಮಾಡಬಹುದು.

  1. ನೈಜ್ಯ ಭಾರತದ ಚಿತ್ರಣ ಸಿಗುವುದಿಲ್ಲ: ಷೇರು ಮಾರುಕಟ್ಟೆಯನ್ನ ಇಂದು ಆಕ್ರಮಿಸಿಕೊಂಡಿರುವ ವಲಯಗಳನ್ನ ಒಮ್ಮೆ ಗಮನಿಸಿ ನೋಡಿ! ಷೇರು ಮಾರುಕಟ್ಟೆಯ ಬಹಪಾಲು ಮೌಲ್ಯವಿರುವುದು ಟೆಲಿಕಾಂ ಮತ್ತು ಐಟಿ ಸಂಸ್ಥೆಗಳಲ್ಲಿ, ಇವೆರಡನ್ನ ತೆಗೆದರೆ ನಮ್ಮ ಮಾರುಕಟ್ಟೆ ಮುಕ್ಕಾಲು ಪಾಲು ಸಾಮಾನ್ಯವಾಗೇ ಇದೆ. ಭಾರತದ ನಿಜವಾದ ಮೌಲ್ಯವಿರುವುದು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಲ್ಲಿ, ಈ ವಲಯದಲ್ಲಿ ಅತಿ ಹೆಚ್ಚು ಉತ್ಪಾದನೆ ಮತ್ತು ಕೆಲಸ ಸೃಷಿಯಾಗುವುದು. ಆದರೆ ದುರ್ದೈವ ಈ ವಲಯ ಮಾರುಕಟ್ಟೆಯಲ್ಲಿ ಸರಿಯಾದ ಸ್ಥಾನವನ್ನ ಪಡೆದಿಲ್ಲ. ಅಂದರೆ ಗಮನಿಸಿ ನೋಡಿ, ಕೋವಿಡ್ ನಂತಹ ಸನ್ನಿವೇಶದಲ್ಲೂ ಟೆಲಿಕಾಂ ಮತ್ತು ಐಟಿ ಕ್ಷೇತ್ರಗಳು ಚೆನ್ನಾಗಿ ಕೆಲಸಮಾಡುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಗೂಳಿ ಓಟವಿದೆ. ಇನ್ನೊಂದು ಅಂಶ ಗಮನಿಸಿ ಮಾರುಕಟ್ಟೆಯ ಬಹುಮೌಲ್ಯ ಹೊಂದಿದ ಎರಡು ವಲಯಗಳು ದೌಡಾಯಿಸುತ್ತಿದ್ದು ಉಳಿದ ವಲಯಗಳು ಅಷ್ಟೇನೂ ಉತ್ತಮವಾಗಿರದಿದ್ದರೂ ಅದು ಸಾಮಾನ್ಯರ ಕಣ್ಣಿಗೆ ಬೀಳುವುದಿಲ್ಲ. ಹೀಗಾಗಿ ಹೆಚ್ಚು ಜಾಗೃತೆ ಅಗತ್ಯವಿದೆ.
  2. ಷೇರು ಮಾರುಕಟ್ಟೆ ನಡೆಯುವುದು ಲಾಭದ ಲೆಕ್ಕಾಚಾರದಲ್ಲಿ, ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಅಲ್ಲ: ಷೇರು ಮಾರುಕಟ್ಟೆ ಪ್ರವೇಶಿಸುವ ಜನರಿಗೆ ಅದರಲ್ಲೂ ಈ ರೀತಿಯ ಗೂಳಿ ಓಟದಲ್ಲಿ ಮಾರುಕಟ್ಟೆ ಪ್ರವೇಶಿಸುವರಿಗೆ ಇದು ಅರ್ಥವಾಗುವುದಿಲ್ಲ. ಅವರಷ್ಟೇ ಏಕೆ ಬಹುತೇಕ ಸುದ್ದಿ ಮಾಧ್ಯಮಗಳು ಕೂಡ ಷೇರು ಮಾರುಕಟ್ಟೆಯ ಏರಿಕೆಯನ್ನ ದೇಶದ ಅಭಿವೃದ್ದಿ ಎನ್ನುವಂತೆ ಹೋಲಿಕೆ ನೀಡಿ ಮಾತನಾಡುತ್ತಾರೆ. ಇದು ಶುದ್ಧ ಸುಳ್ಳು. ಮಾರುಕಟ್ಟೆ ನಿಂತಿರುವುದು ಹೂಡಿಕೆದಾರರ ಆಸೆಬುರುಕತನದ ಆಧಾರದ ಮೇಲೆ, ಲಾಭವಿಲ್ಲದ ಮರುಘಳಿಗೆ ಅಥವಾ ಮುಂದೆ ಏನೂ ಆಗಬಹುದು ಎನ್ನುವ ಸಣ್ಣ ಸೂಚನೆ ಸಿಕ್ಕರೂ ಸಾಕು, 19 ದಿನದಲ್ಲಿ ಸಾವಿರ ಏರಿಕೆ ಕಂಡಿದ್ದ ಸೂಚ್ಯಂಕ ನೆಲ ಕಚ್ಚಲು 19 ತಾಸು ಸಾಕು. ಅಭಿವೃದ್ಧಿ ಎನ್ನುವುದು ನಿಧಾನವಾಗಿ ಉನ್ನತಿಯ ಕಡೆಗೆ, ಇದ್ದ ಸ್ಥಿತಿಯಿಂದ ಮೇಲೆದ್ದು ಹೋಗುವ ಕ್ರಿಯೆ. ಅದು ಒಂದು ದಿನದಲ್ಲಿ ಅಥವಾ ತಿಂಗಳಲ್ಲಿ ಆಗುವುದಲ್ಲ. ಸಮಾಜ ನಿಂತಿರುವುದು ಅಭಿವೃದ್ಧಿಯ ಆಧಾರದ ಮೇಲೆ, ಆದರೆ ಷೇರು ಮಾರುಕಟ್ಟೆ ನಿಂತಿರುವುದು ಕೇವಲ ಲಾಭದ ಲೆಕ್ಕಾಚಾರಲ್ಲಿ. ಈ ಸೂಕ್ಷ್ಮವನ್ನ ಅರಿತುಕೊಳ್ಳುವುದು ಉತ್ತಮ.
  3. ಷೇರು ಮಾರುಕಟ್ಟೆಯ ಓಟದ ಲೆಕ್ಕಾಚಾರಲ್ಲಿ ಭವಿಷ್ಯದ ಪಾಲು ಹೆಚ್ಚು: ಇನ್ನೊಂದು ಬಹುಮುಖ್ಯವಾದ ಅಂಶವೆಂದರೆ ಷೇರು ಮಾರುಕಟ್ಟೆಯಲ್ಲಿ ಇಂದು ಗೂಳಿ ಓಟವಿರಬಹುದು ಆದರೆ ಅದು ಬಹಳ ಕಾಲ ಉಳಿದುಕೊಳ್ಳುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯನ್ನ ಯಾರೂ ಕೂಡ ನೀಡಲಾರರು. ಹೀಗೆ ಹೇಳಲು ಪ್ರಮುಖ ಕಾರಣ ಬಹಳ ಸರಳ, ಗಮನಿಸಿ ಯಾವುದೋ ಒಂದು ವಲಯದ, ಯಾವುದೋ ಒಂದು ದೊಡ್ಡ ಸಂಸ್ಥೆ, ಇನ್ನ್ಯಾವುದೋ ವಿದೇಶದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡರೆ ಸಾಕು! ಭವಿಷ್ಯದಲ್ಲಿ ಅವರು ಇಷ್ಟು ಕೆಲಸ ಮಾಡಬಹುದು, ಎಂದೆಲ್ಲಾ ಲೆಕ್ಕಾಚಾರ ಹಾಕಿ ಆ ಸಂಸ್ಥೆಯ ಮೌಲ್ಯವನ್ನ ಇನ್ನಿಲ್ಲದೆ ಏರಿಸಲಾಗುತ್ತದೆ. ಸಹಜವಾಗೇ ಮಾರುಕಟ್ಟೆಯಲ್ಲಿ ಕೂಡ ಇದರ ಮೌಲ್ಯದಲ್ಲಿ ಜಿಗಿತ ಕಾಣುತ್ತದೆ/ ನಾವು ಅಂದಾಜಿಸಿದ ಎಲ್ಲವೂ ಸರಿಯಾಗಿರಬೇಕೆಂದು ಏನೂ ಇಲ್ಲವಲ್ಲ. ಹೀಗಾಗಿ ಸಮಾಜ ನಿಂತಿರುವುದು ಗಟ್ಟಿ ನೆಲದ ಮೇಲೆ, ಇಂದು ನಾವೇನಿದ್ದೇವೆ ಅದರ ಆಧಾರದ ಮೇಲೆ, ಷೇರು ಮಾರುಕಟ್ಟೆ ನಿಂತಿರುವುದು ಭವಿಷ್ಯದಲ್ಲಿ ಹೀಗಾಗಬಹುದು ಎನ್ನುವ ಹತ್ತಾರು ಊಹೆಗಳ ಮೇಲೆ, ಕಲ್ಪಿತ ಸಂಖ್ಯೆ ಮತ್ತು ಮೌಲ್ಯಗಳ ಮೇಲೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಆಗುವ ಏರಿಳಿತವನ್ನ ಸಮಾಜದ ಏರಿಳಿತ ಎಂದು ಹೇಳುವುದು ಸರಿಯಲ್ಲ.
  4. ಭಾರತೀಯ ಷೇರು ಮಾರುಕಟ್ಟೆ ಕೂಡ ಜಾಗತಿಕ ಮಾರುಕಟ್ಟೆಯ ಮೇಲೆ ಅವಲಂಬಿತ: ಗಮನಿಸಿ ನೋಡಿ, ಭಾರತದಲ್ಲಿ ಸಮಾಜ ಕುಸಿದಿರಬಹುದು ಆದರೂ ಷೇರು ಮಾರುಕಟ್ಟೆ ಗೂಳಿಯ ಓಟವನ್ನ ದಾಖಲಿಸುತ್ತಿದ್ದರೆ ಅದಕ್ಕೆ ಕಾರಣ ಇಂದಿಗೆ ಬಹುತೇಕ ಸಂಸ್ಥೆಗಳು ಇಂದಿಗೆ ಗ್ಲೋಬಲ್. ಅವುಗಳ ಪ್ರಸ್ತುತಿ ಎಲ್ಲೆಡೆಯೂ ಇರುವುದರಿಂದ, ದೂರದ ದೇಶದಲ್ಲಿ ಆದ ಒಳಿತಿನ ಪರಿಣಾಮ ಭಾರತದ ಈ ದೇಶದ ಷೇರಿನ ಮೌಲ್ಯದ ಮೇಲೂ ಖಂಡಿತ ಆಗುತ್ತದೆ. ಹೀಗಾಗಿ ಕುಸಿತವಾಗಲಿ ಅಥವಾ ಏರಿಕೆ ಎರಡಕ್ಕೂ ಭಾರತದ ಆಂತರಿಕ ಅಭಿವೃದ್ಧಿಗೂ ಹೆಚ್ಚಿನ ಸಂಬಂಧ ಇರುವುದಿಲ್ಲ. ಹಾಗೆಂದು ಇವೆರೆಡೂ ಪೂರ್ಣ ಬೇರೆ-ಬೇರೆ ಎನ್ನುವಂತೆ ಕೂಡ ಇಲ್ಲ. ಭಾರತದ ಆಂತರಿಕ ಹಣಕಾಸು ಸ್ಥಿತಿಗತಿ ಕೂಡ ತನ್ನದೇ ಆದ ದೇಣಿಗೆಯನ್ನ ನೀಡುತ್ತದೆ. ಹೆಚ್ಚಿನ ಅಂಶವನ್ನ ನಾವು ಪರಿಗಣನೆಗೆ ತೆಗೆದುಕೊಳ್ಳುವುದು ಒಳಿತು.
  5. ಗಟ್ಟಿಯ ಜೊತೆಗೆ ಟೊಳ್ಳು ಕೂಡ ಸಾಕಷ್ಟಿರುತ್ತದೆ: ಪ್ರೈಮರಿ ಮಾರುಕಟ್ಟೆಯಲ್ಲಿ ಮತ್ತು ಸೆಕೆಂಡರಿ ಮಾರುಕಟ್ಟೆಯಲ್ಲಿ ಇಂತಹ ಗೂಳಿ ಓಟದ ಸಮಯದಲ್ಲಿ ಒಂದು ಒಳ್ಳೆಯ ಷೇರಿನ ಜೊತೆಗೆ ಹತ್ತಾರು ಟೊಳ್ಳು ಷೇರುಗಳು ಕೂಡ ಇರುತ್ತದೆ. ಮಾರುಕಟ್ಟೆಯ ಮೌಲ್ಯದ ಆಧಾರದ ಮೇಲೆ ಸೂಚ್ಯಂಕವನ್ನ ನಿರ್ಧರಿಸುವುದರಿಂದ ಟೊಳ್ಳು ಮತ್ತು ಗಟ್ಟಿಗಳನ್ನ ಹೆಕ್ಕುವುದು ಕಷ್ಟವಾಗುತ್ತದೆ. ಅತ್ಯಂತ ಪ್ರಸಿದ್ಧವಾದ ಷೇರುಗಳ ವಿಷಯವನ್ನ ಬದಿಗಿರಿಸಿ ನೋಡಿದರೆ ಇದು ಸತ್ಯವೆನ್ನುವುದು ತಿಳಿಯುತ್ತದೆ. ವಸ್ತುಸ್ಥಿತಿ ಹೀಗಿರುವಾಗ ನಾವು ಷೇರು ಪೇಟೆಯ ಗೆಲುವನ್ನ ಸಮಾಜದ , ಅಥವಾ ದೇಶದ ಗೆಲುವು ಎಂದು ಬಿಂಬಿಸಲು ಬಾರದು. ಅಳತೆಯನ್ನ ಮೀರಿ ಸಮಯಕ್ಕೆ ಸೆಡ್ಡು ಹೊಡೆದು ವೇಗವಾಗಿ ಮೇಲಕ್ಕೆ ಹೋದದ್ದು ಅಷ್ಟೇ ಅಥವಾ ಅದಕ್ಕಿಂತ ವೇಗವಾಗಿ ಕೆಳಗೆ ಬರಬಹುದು ಎನ್ನುವ ಜಾಗೃತೆಯಿರಬೇಕು

ಕೊನೆಮಾತು: ಷೇರು ಮಾರುಕಟ್ಟೆ ಎನ್ನುವುದು ಮುಖ್ಯವಾಗಿ ನಿಂತಿರುವುದು ಲಾಭ ಮತ್ತು ಹೂಡಿಕೆದಾರರ ಸೆಂಟಿಮೆಂಟಿನ ಮೇಲೆ. ಅಲ್ಲದೆ ಷೇರು ಮಾರುಕಟ್ಟೆಯನ್ನ 90 ಪ್ರತಿಶತ ಆವರಿಸಿಕೊಂಡಿರುವ ಸಂಸ್ಥೆಗಳು ದೇಶದ 90 ಪ್ರತಿಶತ ಪ್ರತಿನಿಧಿತ್ವವನ್ನ ಹೊಂದಿರುವುದಿಲ್ಲ. ಹೀಗಾಗಿ ಭಾರತ ಎಂದಲ್ಲ ದೇಶ ಯಾವುದೇ ಇರಲಿ, ಆ ದೇಶದ ಅಭಿವೃದ್ದಿಯನ್ನ ಅಥವಾ ಆರ್ಥಿಕ ಭದ್ರತೆ ಅಥವಾ ಏರುಗತಿಯನ್ನ ಷೇರುಮಾರುಕಟ್ಟೆಯೊಂದಿಗೆ ತಳಕು ಹಾಕಿ ಹೊಗಳುವಂತಿಲ್ಲ ಅಥವಾ ತೆಗಳುವಂತಿಲ್ಲ. ದೇಶದಲ್ಲಿ ಕಾಣುವ ಹಲವಾರು ಅಭಿವೃದ್ಧಿ ಮಾನದಂಡಗಳಲ್ಲಿ ಷೇರು ಮಾರುಕಟ್ಟೆಯೂ ಒಂದೇ ಹೊರತು ಅದೇ ಎಲ್ಲವೂ ಅಲ್ಲ.

ಹೀಗಾಗಿ ಹೆಚ್ಚು ಜಾಗ್ರತೆ, ಒಂದಷ್ಟು ಅಧ್ಯಯನ, ಸಾಮಾನ್ಯಜ್ಞಾನ ಜೊತೆಗಿಟ್ಟುಕೊಂಡು ನಡೆದರೆ ಓಟ ಯಾವುದಾದರೂ ಇರಲಿ ಗೆಲುವು ನಮ್ಮದಾಗಿರುತ್ತದೆ. ಇಲ್ಲವೇ ಹಣಬರಹವನ್ನ, ವಿಧಿಯನ್ನ, ಅದೃಷ್ಟವನ್ನ ಹಳಿಯುತ್ತಾ ಕೋರಬೇಕಾಗುತ್ತದೆ. ಹೀಗಾಗಿ ಸದಾ ಎಚ್ಚರವಾಗಿರುವುದು ಎಲ್ಲಾ ತರಹದಲ್ಲೂ ಒಳ್ಳೆಯದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com