ಅಮಿತ್ ಶಾ ಹೇಳಿಕೆ ತಂದ ಸಂಚಲನ! (ನೇರ ನೋಟ)

ಕೂಡ್ಲಿ ಗುರುರಾಜಅಮಿತ್ ಶಾ ಅವರು ಮೊನ್ನೆ ದಾವಣಗೆರೆಯಲ್ಲಿ ಮುಂದಿನ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದಾಗ ಪಕ್ಕದಲ್ಲೇ ಕುಳಿತಿದ್ದ ಬೊಮ್ಮಾಯಿ ಅವರಿಗೂ ಸ್ವತಃ ಅಚ್ಚರಿ.
ಮಾಜಿ ಸಿಎಂ ಯಡಿಯೂರಪ್ಪ, ಅಮಿತ್ ಶಾ ಬೊಮ್ಮಾಯಿ (ಸಂಗ್ರಹ ಚಿತ್ರ)
ಮಾಜಿ ಸಿಎಂ ಯಡಿಯೂರಪ್ಪ, ಅಮಿತ್ ಶಾ ಬೊಮ್ಮಾಯಿ (ಸಂಗ್ರಹ ಚಿತ್ರ)

ಇಂಥದ್ದೊಂದು ಹೇಳಿಕೆಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿರೀಕ್ಷಿಸಿರಲಿಲ್ಲ. ಕೇಂದ್ರ ಸರಕಾರದ ಪ್ರಭಾವಿ ಸಚಿವ, ಬಿಜೆಪಿಯ ಚಾಣಕ್ಯ ಎಂದೇ ಹೆಸರಾದ ಅಮಿತ್ ಶಾ ಅವರು ಮೊನ್ನೆ ದಾವಣಗೆರೆಯಲ್ಲಿ ಮುಂದಿನ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದಾಗ ಪಕ್ಕದಲ್ಲೇ ಕುಳಿತಿದ್ದ ಬೊಮ್ಮಾಯಿ ಅವರಿಗೂ ಸ್ವತಃ ಅಚ್ಚರಿ.

ಇದು ರಾಜ್ಯ ಬಿಜೆಪಿಗೆ ಅಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲೂ ಒಂದು ರೀತಿಯ ಸಂಚಲನ ತಂದ ವಿದ್ಯಮಾನ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷದ ಸಂಘಟನೆಗೆ ಪ್ರವಾಸ ಹೊರಡಲು ಸಿದ್ಧರಿರುವಾಗ ಹೊರಬಿದ್ದ ಅಮಿತ್ ಶಾ ಅವರ ಹೇಳಿಕೆಯನ್ನು ಯಡಿಯೂರಪ್ಪ ಅವರಾಗಲಿ ಅಥವಾ ಅವರ ಬೆಂಬಲಿಗರಾಗಲಿ ಅರಗಿಸಿಕೊಳ್ಳುವುದು ಕಷ್ಟ. ಸಂಘ ಪರಿವಾರ ಹಿನ್ನೆಲೆಯ ಬಿಜೆಪಿಯ ಕೆಲವು ಹಿರಿಯ ನಾಯಕರಿಗೂ ಇದು ತಳಮಳ ತಂದ ವಿದ್ಯಮಾನ. ಯಡಿಯೂರಪ್ಪ ಅವರಿಗೆ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಕಾಣಬೇಕೆಂಬ ಇಚ್ಛೆ. ಆದರೆ, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಇದು ಅಷ್ಟು ಸುಲಭದ ಮಾತಲ್ಲ. “ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿದ್ದಾರೆ.  ಹೀಗಾಗಿ ಮುಂದಿನ ಚುನಾವಣೆಗೆ ಅವರ ನಾಯಕತ್ವವನ್ನೇ ಬಿಂಬಿಸಬೇಕು” ಎಂಬ ವಿಜಯೇಂದ್ರ ಅವರ ಹೇಳಿಕೆ ಜಾಣ್ಮೆಯ ಪ್ರತಿಕ್ರಿಯೆ ಆಗಿದೆ. ಬಿಜೆಪಿಯ ಕೆಲವು ಹಿರಿಯ ನಾಯಕರಿಗೆ ಇನ್ನು ಬೊಮ್ಮಾಯಿ ಇನ್ನಿಂಗ್ಸ್ ಶುರುವಾದರೆ ರಾಜಕೀಯವಾಗಿ ತಮ್ಮ ಸ್ಥಾನಮಾನವೇನು? ಎಂಬ ಚಿಂತೆ.

ಇರಲಿ. ಅಮಿತ್ ಶಾ ಹೇಳಿಕೆಯನ್ನು ನಾನಾ ರೀತಿ ವ್ಯಾಖ್ಯಾನಿಸಬಹುದು. ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಸಮಾಜದ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅದೇ ಸಮಾಜದ ಬಸವರಾಜ ಬೊಮ್ಮಾಯಿ ಸಿಎಂ ಗಾದಿಯಲ್ಲಿ ಕುಳಿತಿದ್ದಾರೆ. ಬಿಜೆಪಿಯನ್ನು ಬೆಂಬಲಿಸುತ್ತಿರುವ  ಈ ಸಮುದಾಯವು ಯಡಿಯೂರಪ್ಪ ಅವರಂತೆ ಬೊಮ್ಮಾಯಿ ಅವರಿಗೂ ಬೆಂಬಲವಾಗಿ ನಿಲ್ಲಬೇಕೆಂಬ ನಿರೀಕ್ಷೆ ಹೊತ್ತು ಆ ಮತಗಳನ್ನು ಕ್ರೂಢೀಕರಿಸುವ ನಿಟ್ಟಿನಲ್ಲಿಯೂ ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಅಮಿತ್ ಶಾ ಹೇಳಿಕೆ ಹೊರಬಿದ್ದಿರಬಹುದು.

ಬಿಜೆಪಿಯ ಕೆಲವು ಹಿರಿಯ ನಾಯಕರಿಗೆ ಮುಖ್ಯಮಂತ್ರಿ ಗಾದಿಯಲ್ಲಿ ಬೊಮ್ಮಾಯಿ ಅವರನ್ನು ಕೂರಿಸಿರುವುದು ಒಂದು ಸ್ಟಾಪ್ ಗ್ಯಾಪ್ ಅರೆಂಜ್‌ಮೆಂಟ್ ಎಂಬ ಭಾವನೆ ಇದೆ. ಸಚಿವ ಸ್ಥಾನ ಸಿಗದವರು, ಖಾತೆಯ ಬಗ್ಗೆ ಕ್ಯಾತೆ ತೆಗೆಯುತ್ತಿರುವವರು ಅಸಮಾಧಾನಗೊಂಡಿದ್ದಾರೆ. ಅಂಥವರಿಗೆ ಸ್ಪಷ್ಟ ಸಂದೇಶ ರವಾನಿಸುವುದೂ ಅಮಿತ್ ಶಾ ಅವರ ಉದ್ದೇಶ ಇದ್ದಂತಿದೆ. ಒಂದಂತೂ ಸತ್ಯ. ಬೊಮ್ಮಾಯಿ ಹಿಂದೆ ಹೈಕಮಾಂಡ್ ಬಲವಾಗಿ ನಿಂತಿದೆ.

“ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ ಚುನಾವಣೆ” ಎಂಬ ಅಮಿತ್ ಶಾ ಹೇಳಿಕೆಗೆ ರಾಜ್ಯ ಬಿಜೆಪಿಯಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಅಸೆಂಬ್ಲಿ ಚುನಾವಣೆ ಇನ್ನೂ 20 ತಿಂಗಳು ಇರುವಾಗ ಇಷ್ಟು ಬೇಗ ನಾಯಕತ್ವ ನಿರ್ಧಾರವನ್ನು ಪ್ರಕಟಿಸಿದ್ದು ಪಕ್ಷಕ್ಕೆ ಅನುಕೂಲವೇ? ಅನಾನುಕೂಲವೇ? ಎಂಬ ಪ್ರಶ್ನೆ ಎತ್ತಿದೆ.

ಏಕೆಂದರೆ, ಬೊಮ್ಮಾಯಿ ಮೂಲತಃ ಸಂಘ ಪರಿವಾರದವರಲ್ಲ. ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದಾದರೆ ಮೂಲ ಬಿಜೆಪಿಯ ಹಿರಿಯ ನಾಯಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ? ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ ಬಹುಮತ ಪಡೆದರೆ ಆಗ ಮುಖ್ಯಮಂತ್ರಿ ಯಾರೆಂಬುದು ನಿರ್ಧರಿಸುವುದು ಹೆಚ್ಚು ಸೂಕ್ತವಾಗಿತ್ತಲ್ಲವೇ? ಯಡಿಯೂರಪ್ಪ ಅವರ ರೀತಿ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿಯ ಏಕೈಕ ಮಾಸ್ ಲೀಡರ್ ಆಗಿದ್ದರೆ ಆಗ ಅಮಿತ್ ಶಾ ಹೇಳಿಕೆ ಅಚ್ಚರಿ ಮೂಡಿಸುತ್ತಿರಲಿಲ್ಲ.

ಅಮಿತ್ ಶಾ ಅವರ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ಈಗಾಗಲೇ ತಮ್ಮ ಅಸಮಾಧಾನದ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತ್ ಶಾ ಯಾವ ಅಥದರ್ಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನಮ್ಮ ಒಲವಿದೆ ಎಂಬ ಈಶ್ವರಪ್ಪ ಹೇಳಿಕೆ ಮುಂದೆ ಯಾವ ತಿರುವುಗಳನ್ನು ಪಡೆಯುತ್ತದೆಯೋ ಕಾದು ನೋಡಬೇಕು. ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಅವರು ಅಮಿತ್ ಶಾ ಹೇಳಿಕೆಯನ್ನು ಬೆಂಬಲಿಸಿ ಮಾತಾಡಿದ್ದಾರೆ. ಬೊಮ್ಮಾಯಿ ಸಂಪುಟದಲ್ಲೇ ಮುಂದಿನ ಚುನಾವಣೆಗೆ ಅವರ ನಾಯಕತ್ವದ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿರುವುದನ್ನು ಇದು ಸಾರುತ್ತದೆ.

ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು, ಚುನಾವಣೆ ಇನ್ನೂ ದೂರವಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಮುಖ್ಯಮಂತ್ರಿಯಾದವರ ನಾಯಕತ್ವದಲ್ಲೇ ಚುನಾವಣೆ ಎದುರಿಸುವುದು ಸಹಜ. ಇದನ್ನು ಬೇರೆಯದಾಗಿ ಅರ್ಥೈಸಬೇಕಿಲ್ಲ. ಅಮಿತ್ ಶಾ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಜೋಶಿ ಹೇಳಿಕೆ ನಿರೀಕ್ಷಿತವಾದುದು.

ಬೊಮ್ಮಾಯಿ ಅವರ ಆಡಳಿತವನ್ನು ಬಿಜೆಪಿಯಲ್ಲಿರುವ ಹಿಂದುತ್ವದ ಬಲವಾದ ಪ್ರತಿಪಾದಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರ ಒತ್ತಾಯ,  ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಅವರ ಹೆಸರನ್ನು ತೆಗೆದುಹಾಕಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಬೇಕೆಂಬ ಸಂಸದ ಪ್ರತಾಪ ಸಿಂಹ ಅವರ ಆಗ್ರಹಕ್ಕೆ ಬೊಮ್ಮಾಯಿ ಇನ್ನೂ ಪ್ರತಿಕ್ರಿಯಿಸಿಲ್ಲ. ಜನತಾ ಪರಿವಾರದ ಹಿನ್ನೆಲೆಯ ಬೊಮ್ಮಾಯಿ ಪಕ್ಷದ ಇಂತಹ ಅಜೆಂಡಾಗಳಿಗೆ ಎಷ್ಟು ಮಹತ್ವ ನೀಡುತ್ತಾರೆ ಹಾಗೂ ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬುದು ಅವರ ನಾಯಕತ್ವದ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ, ಬೊಮ್ಮಾಯಿ ಕಟ್ಟಾ ಹಿಂದುತ್ವವಾದಿಯಾಗಲಿ ಅಥವಾ ನೆಹರೂ- ಇಂದಿರಾ ಗಾಂಧಿ ಮನೆತನವನ್ನು ಜಿದ್ದಿಗೆ ಬಿದ್ದವರಂತೆ ವಿರೋಧಿಸುವ ಮನಸ್ಥಿತಿಯವರಲ್ಲ.

ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ನೆರಳಿನಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕತ್ವಕ್ಕೂ ಹೊಸ ಇಮೇಜು ತಂದುಕೊಡುವ ಕಸರತ್ತು ನಡೆಸಿದ್ದಾರೆ. ನಿಜವಾದ ನಾಯಕತ್ವ ಗುಣಗಳಿಗೆ ಹೊಸರೂಪ ಕೊಡುವ ಹಾದಿಯಲ್ಲಿ ಸಾಗಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಕಳೆದ ಒಂದು ತಿಂಗಳ ಅವರ ಆಡಳಿತ ಸುಗಮವಾಗಿ ನಡೆದಿದೆ. ವೈಯಕ್ತಿಕವಾಗಿ ಅವರ ವರ್ಚಸ್ಸು ಹೆಚ್ಚಿದೆ. ಆದರೆ, ಸರಕಾರದ ವರ್ಚಸ್ಸು ಹೆಚ್ಚಿಸುವ ಕೆಲಸವೂ ಆಗಬೇಕಿದೆ. ಆ ನಿಟ್ಟಿನಲ್ಲಿ ಬೊಮ್ಮಾಯಿ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com