ಪಿಂಪಲ್ಸ್: ಮೊಡವೆ ನಿವಾರಣೆಗೆ ವಿವಿಧ ಮನೆಮದ್ದು (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಹರೆಯದ ಹುಡುಗ/ಹುಡುಗಿಯರು ಕನ್ನಡಿಯ ಮುಂದೆ ಹೆಚ್ಚು ಹೊತ್ತು ಕಾಲಕಳೆಯುತ್ತಿದ್ದಾರೆಂದರೆ ಮುಖದಲ್ಲಿ ಅಲ್ಲೊಂದು, ಇಲ್ಲೊಂದು ಮೊಡವೆ ಆರಂಭವಾಗಿದೆ ಎಂದರ್ಥ.
ಪಿಂಪಲ್ಸ್, ಮೊಡವೆಗೆ ಮನೆ ಮದ್ದು
ಪಿಂಪಲ್ಸ್, ಮೊಡವೆಗೆ ಮನೆ ಮದ್ದು

ಹರೆಯದ ಹುಡುಗ/ಹುಡುಗಿಯರು ಕನ್ನಡಿಯ ಮುಂದೆ ಹೆಚ್ಚು ಹೊತ್ತು ಕಾಲಕಳೆಯುತ್ತಿದ್ದಾರೆಂದರೆ ಮುಖದಲ್ಲಿ ಅಲ್ಲೊಂದು, ಇಲ್ಲೊಂದು ಮೊಡವೆ ಆರಂಭವಾಗಿದೆ ಎಂದರ್ಥ. 

ಚಿಕ್ಕದೊಂದು ‘ಗುಳ್ಳೆ’ ಆದೆಂತಹ ಆತಂಕ ಮೂಡಿಸುತ್ತದೆಂದರೆ ಕಾಲೇಜಿಗೆ ಹೋಗಲು, ಶಾಲೆಗೆ ಹೋಗಲು, ಸಿನಿಮಾಗೆ ಹೋಗಲು ಮನಸ್ಸು ಅಸಹಕಾರ ಚಳುವಳಿ ಆರಂಭಿಸುತ್ತದೆ. ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೇನೋ, ಅದರಲ್ಲಿಯೂ ತನ್ನ ಮುಖದ ಅಂದ ಕೆಡಿಸಿದ ಮೊಡವೆಯನ್ನೇ ದೃಷ್ಟಿಸುತ್ತಿದ್ದಾರೇನೋ ಎಂಬ ಅನಿಸಿಕೆ ಶುರುವಾಗುತ್ತದೆ. 

ಮೊಡವೆ ಕಾಣಿಸಿಕೊಳ್ಳಲು ಕಾರಣಗಳೇನು?
ಹದಿಹರೆಯದಲ್ಲಿ ದೇಹದಲ್ಲಿ ರಸದೂತಗಳ ಸ್ರವಿಸುವಿಕೆಯಲ್ಲಿ ಆಗುವ ವ್ಯತ್ಯಾಸದಿಂದ ಮೊಡವೆಗಳು ಕಾಣಿಸಿಕೊಳ್ಳಬಹುದು. ಸ್ವಚ್ಛತೆಯ ಕಡೆಗೆ ಗಮನ ಕೊಡದಿರುವುದರಿಂದ, ‘ಎ’ ಜೀವಸತ್ವದ ಕೊರತೆಯಿಂದಲೂ ಕಂಡುಬರುತ್ತವೆ. ಋತುಸ್ರಾವದ ದಿನಗಳಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಅಧಿಕ. ಹರೆಯದಲ್ಲಿ ಮಾತ್ರವಲ್ಲ ಕೆಲವರಲ್ಲಿ 35 ವರ್ಷವೇಕೆ ಅಪರೂಪದಲ್ಲಿ 45ರ ಆಸುಪಾಸಿನ ವಯಸ್ಸಿನಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆನುವಂಶೀಯವಾಗಿಯೂ ಕಾಣಿಸಿಕೊಳ್ಳುತ್ತದೆ. ತಂದೆ, ತಾಯಿ ಇಬ್ಬರಿಗೂ ಅವರ ಹರೆಯದಲ್ಲಿ ಮೊಡವೆಯ ಅಧಿಕವಾಗಿದ್ದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹವಾಮಾನದಲ್ಲಿನ ಬದಲಾವಣೆ, ಮಾನಸಿಕ ಒತ್ತಡ, ಧೂಳು, ಬಿಸಿಲು, ಗಾಳಿಯಲ್ಲಿ ಮಾಲಿನ್ಯದ ವಾತಾವರಣದಲ್ಲಿ ತಿರುಗಾಟ ಇವುಗಳಿಂದ ಮೊಡವೆಗಳು ಹೆಚ್ಚಾಗುತ್ತವೆ. ಮುಖಕ್ಕೆ ಬಳಸುವ ಮೇಕಪ್‍ನಲ್ಲಿರುವ ರಾಸಾಯನಿಕ ಅಂಶಗಳಿಂದ, ಹಾರ್ಮೋನ್ ಮಾತ್ರೆಗಳು, ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದಲೂ ಹೆಚ್ಚಾಗಬಹುದು.

ಮೊಡವೆ ಮತ್ತು ತ್ವಚೆಯ ಆರೋಗ್ಯ
ಮೊಡವೆಗಳು ಬಂದರೂ ಅವುಗಳ ಕಲೆ ಉಳಿಯದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥಗಳ ಸೇವನೆ ಬೇಡ. ಮಲಬದ್ಧತೆಯ ತೊಂದರೆಯಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಬೇಕು. ದಿನಕ್ಕೆ ನಾಲ್ಕೈದು ಬಾರಿ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಮುಖದಲ್ಲಿ ಜಿಡ್ಡಿನಂಶವಿಲ್ಲದಂತೆ ನೋಡಿಕೊಳ್ಳಬೇಕು. ಮುಖ ಒರೆಸಿಕೊಳ್ಳಲು ಮೃದುವಾದ ಹತ್ತಿ ಬಟ್ಟೆಯನ್ನು ಇಟ್ಟುಕೊಳ್ಳಬೇಕು.

ಮೇಕಪ್ ಹಾಕಿಕೊಳ್ಳುವವರು ಮೊದಲು ಅದು ತಮ್ಮ ಚರ್ಮಕ್ಕೆ ಒಗ್ಗುವುದೋ ಇಲ್ಲವೋ ಪರೀಕ್ಷಿಸಿಕೊಂಡು ಹಾಕಿಕೊಳ್ಳಬೇಕು. ಮನೆಗೆ ಬಂದ ತಕ್ಷಣ ಅಥವಾ ಕೆಲಸದ ಅವಧಿ ಮುಗಿದ ಮೇಲೆ ಮೇಕಪ್ ತೆಗೆಯಬೇಕಾದುದು ಕೂಡ ಬಹುಮುಖ್ಯ. ದಿನಕ್ಕೆರಡು ಬಾರಿ ಮಾತ್ರ ಮುಖ ತೊಳೆಯಲು ಸಾಬೂನು ಬಳಸಿ. ಹೆಚ್ಚು ಕ್ಷಾರಯುಕ್ತ ಸಾಬೂನಿನ ಬಳಕೆ ಬೇಡ. ಮುಖ ತೊಳೆಯುವಾಗ ಸ್ವಲ್ಪ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಜಿಡ್ಡಿನ ಅಂಶ ಇರುವುದಿಲ್ಲ. ತುಂಬ ತೆಳುವಾದ ಮೇಕಪ್ ಹಾಕಿಕೊಳ್ಳುವುದು ಸೂಕ್ತ.

ಮೊಡವೆಗಳನ್ನು ಚಿವುಟಿಕೊಳ್ಳಬಾರದು. ಸಾಮಾನ್ಯವಾಗಿ ಮೊಡವೆ ಒಂದು ವಾರದಲ್ಲಿ ತಾನಾಗಿಯೇ ಹೋಗುತ್ತದೆ. ಕೆಲವು ಬಾರಿ 4 ವಾರಗಳು ಬೇಕಾಗಬಹುದು. ಚಿವುಟಿಕೊಂಡಲ್ಲಿ ರಂಧ್ರವಾಗುವುದರಿಂದ ಸೋಂಕು ಬಹುಬೇಗ ಉಂಟಾಗಬಹುದು. ವೈಟ್‍ಹೆಡ್‍ಗಳಾಗಿದ್ದಲ್ಲಿ ಅದನ್ನು ಒತ್ತಿ, ಚಿವುಟಿ ಹೊರ ತೆಗೆದಲ್ಲಿ ಅಲ್ಲಿ ರಂಧ್ರವಾಗಿ ಮೊಡವೆ ಮೂಡಲು ಕಾರಣವಾಗಬಹುದು. ಮೊಡವೆ ತಾನಾಗಿಯೇ ಬಿರಿದಿದ್ದಲ್ಲಿ ಮಾತ್ರ ಅದನ್ನು ತೆಗೆದಲ್ಲಿ ಬೇಗ ವಾಸಿಯಾಗುತ್ತದೆ.

ಜಿಡ್ಡು ಹೆಚ್ಚು ತಿಂದರೆ ಮೊಡವೆ ಬರುತ್ತದೆಯೇ?
ಜಿಡ್ಡಿನ ಆಹಾರ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವವರಲ್ಲಿ ಮೊಡವೆಯು ಹೆಚ್ಚು ಉಂಟಾಗುತ್ತದೆ. ಕೊಬ್ಬು ದೇಹದಲ್ಲಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೆಚ್ಚಾದ ಕೊಬ್ಬು ತೈಲಗ್ರಂಥಿಗಳ ಮೂಲಕ ಹೊರಹೋಗುತ್ತದೆ. ಅದು ಹೊರಹೋಗುವಾಗ ರಂಧ್ರಗಳನ್ನು ಪ್ರಚೋದಿಸುವುದಲ್ಲದೇ ಮೊಡವೆಗಳಿಗೆ ಕಾರಣವಾಗುತ್ತದೆ. ಬೆಣ್ಣೆ, ಚೀಸ್, ಹಾಲು, ಆಲೂಚಿಪ್ಸ್, ತುಪ್ಪ, ಮಾಂಸಾಹಾರ ಮುಂತಾದವುಗಳಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ.

ಮೊಡವೆಗಳಿಂದ ಬಳಲುವವರು ಬಹಳ ಚಿಂತೆಗೊಳಗಾಗುತ್ತಾರೆ. ಮೊಡವೆಗಳ ಕಾರಣದಿಂದಾಗಲೇ ಕೆಲವರು ಮನೆಬಿಟ್ಟು ಹೊರಗೆ ಹೋಗುವುದಿಲ್ಲ. ನಾಲ್ಕು ಜನರಲ್ಲಿ ಮುಖಕೊಟ್ಟು ಮಾತನಾಡುವುದಿಲ್ಲ. ಆದರಿಂದಾಗಿ ಕೀಳರಿಮೆ ಅನುಭವಿಸುತ್ತಿರುತ್ತಾರೆ. ಮೊಡವೆಗಳು ವಾಸಿಯಾಗುತ್ತವೆ. ಆ ಬಗ್ಗೆ ಹೆಚ್ಚು ಚಿಂತಿಸುವ ಕಾರಣವಿಲ್ಲ. ಆದರೆ, ಬಿಸಿಲಿಗೆ ಹೆಚ್ಚು ತಿರುಗಾಡುವುದು ಬೇಡ. 

ಮೊಡವೆಗಳಿಗೆ ಲೇಪನ

ಮೊಡವೆಗಳಿಗೆ ಲೇಪನ ಹಚ್ಚುವ ಮೊದಲು ನಿಮ್ಮ ಮುಖದ ಚರ್ಮ ಯಾವ ತರಹದ್ದು ಎಂಬುದನ್ನು ಅರಿತುಕೊಂಡಿರಬೇಕು. ಮನುಷ್ಯರಲ್ಲಿ ಮೂರು ವಿಧದ ಚರ್ಮಗಳಿವೆ. 1. ಎಣ್ಣೆಯ ಚರ್ಮ 2. ಒಣ ಚರ್ಮ 3. ಸಾಮಾನ್ಯ ಚರ್ಮ

ಎಣ್ಣೆಯ ಚರ್ಮದವರಿಗೆ ಲೇಪಗಳು
• ಲೋದ್ರ, ಧನಿಯಾ, ಬಜೆಯನ್ನು ಸಮಭಾಗ ತೆಗೆದುಕೊಂಡು ಪುಡಿ ಮಾಡಿ ಬಟ್ಟೆಯಲ್ಲಿ ಶೋಧಿಸಿ ನುಣ್ಣನೆಯ ಪುಡಿ ತಯಾರಿಸಿಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳಬೇಕು. ಅರ್ಧಗಂಟೆ ನಂತರ ತೊಳೆದುಕೊಳ್ಳಬೇಕು. ದಿನಕ್ಕೊಂದು ಬಾರಿ ಇದನ್ನು ಹಾಕಿಕೊಳ್ಳಬೇಖು. ಕರಿ ಮೆಣಸು ಮತ್ತು ಗೋರೋಚನವನ್ನು ನೀರಿನಲ್ಲಿ ಅರೆದು ಲೇಪಿಸಿಕೊಳ್ಳಬೇಕು.
• ಬಿಳಿಸಾಸುವೆ, ಬಜೆ, ಲೋಧ್ರ, ಸಮಭಾಗ ತೆಗೆದುಕೊಂಡು ನೀರಿನಲ್ಲಿ ಅರೆದು ಲೇಪಿಸಿಕೊಳ್ಳಬೇಕು.
• ನಾಗದಾಳಿ ಸೊಪ್ಪನ್ನು ಅರೆದು ಲೇಪಿಸಿ ಅರ್ಧ ಗಂಟೆಯ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು.
• ಸೀಬೆಗಿಡದ ಎಳೆಯ ಎಲೆಗಳನ್ನು ಅರಿಶಿನ ಸೇರಿಸಿ ಅರೆದು ಹಚ್ಚುವುದರಿಂದ ಮೊಡವೆ ಬೇಗ ಮಾಯವಾಗುತ್ತವೆ.
• ಹಿಂಗುವಿಗೆ ನಿಂಬೆರಸ ಅರೆದು ಲೇಪಿಸಬೇಕು. ಪುದೀನ ಸೊಪ್ಪನ್ನು ಅರಿಶಿನ ಬೆರೆಸಿ ಅರೆದು ಹಚ್ಚಬೇಕು ಮತ್ತು ಪುದೀನ ಸೊಪ್ಪನ್ನು ಬೇವು ಮತ್ತು ತುಳಸಿ ಎಲೆ ಬೆರೆಸಿ ಅರೆದು ಹಚ್ಚಿಕೊಂಡು ಅರ್ಧಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಒಣ ಚರ್ಮದವರಿಗೆ ಲೇಪಗಳು
• ಒಣ ಚರ್ಮದವರು ಮೊಡವೆಗಳಿಗೆ ದಂಟಿನ ಸೊಪ್ಪನ್ನು ಹಾಲಿನಲ್ಲಿ ಅರೆದು ಹಚ್ಚಿಕೊಳ್ಳಬೇಕು.
• ಲೋಧ್ರ, ಬಜೆಯನ್ನು ಹಾಲಿನಲ್ಲಿ ಅರೆದು ಹಚ್ಚಿಕೊಳ್ಳಬೇಕು. ಕಿರುಕಸಾಲೆ ಸೊಪ್ಪಿನ ರಸ, ಹಾಲಿನ ಕೆನೆ, ಗುಲಾಬಿ ಜಲ ಸೇರಿಸಿ ಅರೆದು ಹಚ್ಚಿಕೊಳ್ಳಬೇಕು.

ಸಾಮಾನ್ಯ ಚರ್ಮದವರಿಗೆ ಲೇಪಗಳು
• ಅಮೃತಬಳ್ಳಿಯ ಎಲೆ ಮತ್ತು ಹಣ್ಣುಗಳನ್ನು ಅಥವಾ ಕೇವಲ ಎಲೆಗಳನ್ನು ನುಣ್ಣಗೆ ಅರೆದು ರಾತ್ರಿ ಹೊತ್ತು ಹಚ್ಚಿಕೊಳ್ಳಬೇಕು. ಒಂದು ಗಂಟೆ ನಂತರ ಮುಖ ತೊಳೆಯಬೇಕು. ಕೆಲವೇಳೆ ಮುಖ ತೊಳೆಯದೇ ರಾತ್ರಿಯೆಲ್ಲ ಹಾಗೇ ಬಿಟ್ಟರೂ ಯಾವುದೇ ತೊಂದರೆಯಾಗುವುದಿಲ್ಲ.
• ಸಾಸುವೆ ಎಣ್ಣೆಯಿಂದ ಮುಖಕ್ಕೆ ರಾತ್ರಿ ಹೊತ್ತು ಮಸಾಜ್ ಮಾಡಿಕೊಳ್ಳಬೇಕು.
• ಅರಿಶಿನ, ಮರದರಿಶಿನ, ಮಂಜಿಷ್ಟವನ್ನು ಹಾಲು, ತುಪ್ಪ ಬೆರೆಸಿ ಅರೆದು ಹಚ್ಚಿಕೊಳ್ಳಬೇಕು.
• ಬೇವು, ಲೋಧ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟ ಪ್ರತಿಯೊಂದನ್ನು 10 ಗ್ರಾಂ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಇದನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಿಟ್ಟು ಮುಖ ತೊಳೆಯಬೇಕು.

ಮುಖಕಾಂತಿ ವೃದ್ಧಿಗೆ ಮನೆಮದ್ದು
ವಾರಕ್ಕೊಮ್ಮೆ ಮುಖಕ್ಕೆ ಕುಂಕುಮಾದಿ ತೈಲ ಇಲ್ಲವೇ ಹಾಲಿನ ಕೆನೆಯಿಂದಾಗಲೀ ಅಥವಾ ಲೋಳೆಸರದ ತಿರುಳನಿಂದ ಮುಖಕ್ಕೆ ಮಸಾಜ್ ಮಾಡಿಕೊಂಡು ಹಬೆ ತೆಗೆದುಕೊಳ್ಳಬೇಕು. ಹಬೆ ತೆಗೆದುಕೊಳ್ಳಲು ಆಲ, ಅತ್ತಿ, ಬಸರಿ, ಹೂವರಸಿ ಮರದ ತೊಗಟೆಗಳನ್ನು ಪುಡಿ ಮಾಡಿಟ್ಟುಕೊಂಡು. 50 ಗ್ರಾಂ ಪುಡಿಯನ್ನು ಒಂದು ಲೀಟರ್ ನೀರಿಗೆ ಹಾಕಿ ಕುದಿಸಬೇಕು. ಇದರಿಂದ ಬರುವ ಹಬೆ ಅಥವಾ ಬೇವು ಇಲ್ಲವೇ ಹೊಂಗೆ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಬರುವ ಹಬೆ ತೆಗೆದುಕೊಳ್ಳಬೇಕು. ಇದರಿಂದ ಮುಖ ಚೆನ್ನಾಗಿ ಬೆವರುತ್ತದೆ. ಬೆವರಿನ ಗ್ರಂಥಿಗಳು ತೆರೆದುಕೊಳ್ಳುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ.

ಡಾ. ವಸುಂಧರಾ ಭೂಪತಿ
ಇಮೇಲ್: bhupathivasundhara@gmail.com
ಫೋನ್ ನಂಬರ್: 9986840477

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com