ಎಲಾನ್ ಮಸ್ಕ್ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಬಂದರೆ ಏನಾಗಬಹುದು?

ಹಣಕ್ಲಾಸು-276-ರಂಗಸ್ವಾಮಿ ಮೂಕನಹಳ್ಳಿ
ಭಾರತದ ಟೆಲಿಕಾಮ್ ಉದ್ಯಮ, ಎಲಾನ್ ಮಸ್ಕ್-ಮೋದಿ
ಭಾರತದ ಟೆಲಿಕಾಮ್ ಉದ್ಯಮ, ಎಲಾನ್ ಮಸ್ಕ್-ಮೋದಿ

ಭಾರತೀಯ ಟೆಲೆಕಾಂ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಈ ಬದಲಾವಣೆಗಳು ಅತಿ ವೇಗವಾಗಿ ಆಗುವ ಸಾಧ್ಯತೆಗಳೂ ಕೂಡ ಬಹಳವಾಗಿದೆ. ಈ ರೀತಿಯ ಮಾತುಗಳನ್ನ ಹೇಳಲು ಪ್ರಮುಖ ಕಾರಣ ಕೆಲವೇ ಕೆಲವು ದಿನಗಳ ಹಿಂದೆ ಟೆಲಿಕಾಮ್ ಮಿನಿಸ್ಟರ್ ಅಶ್ವಿನ್ ವೈಷ್ಣವ್ ಅವರು ನೀಡಿರುವ ಹೇಳಿಕೆ . ಜೊತೆಗೆ ಅದು ಕೇವಲ ಹೇಳಿಕೆ ಆಗಿರದೆ ಅದಕ್ಕೆ ಕ್ಯಾಬಿನೆಟ್ ನಿಂದ ಒಪ್ಪಿಗೆ ಕೂಡ ಸಿಕ್ಕಿದೆ.

ನಿಮಗೆಲ್ಲಾ ನೆನಪಿರಬಹುದು 90ರ ದಶಕದಲ್ಲಿ ಮನೆಗೆ ಬೇಕಾದ ದೂರವಾಣಿ ಅದು ಲ್ಯಾಂಡ್ಲೈನ್ ಪಡೆಯಲು ಹರಸಾಹಸ ಪಡಬೇಕಾಗಿತ್ತು. ತಿಂಗಳುಗಟ್ಟಲೆ ಕಾದರೂ ಲ್ಯಾಂಡ್ಲೈನ್ ಸಿಗುವುದು ಕಷ್ಟವಾಗುತ್ತಿತ್ತು. ಆ ನಂತರ ನಮ್ಮ ದೇಶದಲ್ಲಿ ಈ ಕಾರ್ಯ ಕ್ಷೇತ್ರದಲ್ಲಿ ಆದ ಅಭಿವೃದ್ದಿಯನ್ನ ಇಲ್ಲಿ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ ಏಕೆಂದರೆ ನಾವೆಲ್ಲರೂ ಅದರ ಫಲಾನುಭವಿಗಳು. ಇದು ಒಂದು ಹಂತದ ಅಭಿವೃದ್ಧಿ! ಭಾರತೀಯ ಟೆಲಿಕಾಮ್ ಈಗ ಇನ್ನೊಂದು ದೊಡ್ಡ ಮಟ್ಟದ ಬದಲಾವಣೆಗೆ ಸಾಕ್ಷಿಯಾಗಲಿದೆ.

ಎಲ್ಲಕ್ಕೂ ಪ್ರಥಮವಾಗಿ ಸರಕಾರ ಮಾಡಿರುವ ಬದಲಾವಣೆಗಳೇನು ಎನ್ನುವುದನ್ನ ತಿಳಿದುಕೊಳ್ಳೋಣ , ಆ ನಂತರ ಅದು ಹೇಗೆ ಭಾರತೀಯ ಟೆಲಿಕಾಮ್ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಬಹುದು ಎನ್ನುವುದನ್ನ ಕೂಡ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

  1. ಎಲ್ಲಕ್ಕೂ ಮೊದಲು ಕೇಂದ್ರ ಸರ್ಕಾರ ಎಲ್ಲಾ ಟೆಲಿಕಾಮ್ ಸಂಸ್ಥೆಗಳಿಗೆ ಒಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದರ ಪ್ರಕಾರ ಈ ಸಂಸ್ಥೆಗಳು ನೀಡಬೇಕಾಗಿರುವ ಬಾಕಿಯ ಮೇಲೆ ನಾಲ್ಕು ವರ್ಷ ಮಾರಟೋರಿಯಂ ನೀಡಲಾಗಿದೆ. ಅಂದರೆ ಆಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ಮತ್ತು ಸ್ಪೆಕ್ಟ್ರಮ್ ಮೇಲಿನ ಬಾಕಿ ಹಣವನ್ನ ತಕ್ಷಣ ನೀಡಬೇಕಾದ ಅವಶ್ಯಕತೆಯಿಲ್ಲ. ಇಂತಹ ಬಾಕಿಯನ್ನ ಮುಂದಿನ ನಾಲ್ಕು ವರ್ಷಗಳ ಕಾಲ ಸರಕಾರ ಕೇಳುವುದಿಲ್ಲ. ಭಾರತೀಯ ಟೆಲಿಕಾಮ್ ಕ್ಷೇತದಲ್ಲಿ ಇರುವ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಲಾಭ ಮಾಡುವುದು ಕಷ್ಟ. ಹೀಗಾಗಿ ಇದು ಎಲ್ಲಾ ಸಂಸ್ಥೆಗಳಿಗೆ ಇದು ವರದಾನ.
  2. ಮೊದಲೇ ಹೇಳಿದಂತೆ ಭಾರತೀಯ ದೊರವಾಣಿ ಸಂಸ್ಥೆಗಳು ಕ್ಯಾಶ್ ಫ್ಲೋ ಸಮಸ್ಯೆಯಿಂದ ಬಳಲುತ್ತಿವೆ. ವ್ಯಾಪಾರ ನಡೆದರೂ ಹಣದ ಹರಿವು ಕಡಿಮೆ. ಈ ಸಮಸ್ಯೆಯನ್ನ ಬಗೆ ಹರಿಸಲು ಆಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ಎನ್ನುವ ಪದದ ಅರ್ಥವನ್ನ ಕೂಡ ಬದಲಾವಣೆ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಮ್ ಗೆ ಸಂಬಂಧಿಸದೆ ಇರುವ ಬಾಕಿಯನ್ನ ಬೇರ್ಪಡಿಸಿ ಅವುಗಳ ಮೇಲಿನ ಪೆನಾಲ್ಟಿಯನ್ನ ಕೂಡ ಕಡಿತಗೊಳಿಸಿದೆ.
  3. ಸ್ಪೆಕ್ಟ್ರಮ್ ಅಥವಾ ದೂರವಾಣಿ ಸೇವೆಯಲ್ಲಿ ಬಳಸುವ ವೇವ್ಗಳ ಮೇಲಿನ ಸ್ವಾಮ್ಯತ್ವವನ್ನ 20 ವರ್ಷದಿಂದ 30 ವರ್ಷಕ್ಕೆ ಏರಿಸಲಾಗಿದೆ. ಅಂದರೆ ಮುಂದಿನ ಹತ್ತು ವರ್ಷ ಹೆಚ್ಚಿನ ಬಳಕೆಯನ್ನ, ಹೆಚ್ಚಿನ ಹಣ ನೀಡದೆ ಮಾಡಿಕೊಳ್ಳಬಹುದಾಗಿದೆ.
  4. ಈ ಕ್ಷೇತ್ರದಲ್ಲಿ 100 ಪ್ರತಿಶತ ಎಫ್.ಡಿ.ಐ ಗೆ ಅನುಮತಿಯನ್ನ ನೀಡಲಾಗಿದೆ. ಅಂದರೆ ಪದಾರ್ಥಗಳ ಉತ್ಪನ್ನದಲ್ಲಿ (ಮ್ಯಾನುಫ್ಯಾಕ್ಚರಿಂಗ್) ಅಥವಾ ಮೂಲ ಸೌಕರ್ಯ (ಇನ್ಫಾಸ್ಟ್ರಕ್ಚರ್) ಯಾವುದರಲ್ಲಿ ಬೇಕಾದರೂ ವಿದೇಶಿಯರು ನೇರವಾಗಿ ಬಂಡವಾಳವನ್ನ ಹೂಡುವ ಅವಕಾಶವನ್ನ ನೀಡಲಾಗಿದೆ.
  5. ಗಮನಿಸಿ ಇದಕ್ಕೆ ಸರಕಾರದ ಅನುಮತಿ ಬೇಕಾಗಿಲ್ಲ, ಆರ್ ಬಿಐ ನ ಅನುಮತಿ ಬೇಕಾಗಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದು ಪೂರ್ಣ ಸತ್ಯವಲ್ಲ. 49 ಪ್ರತಿಶತ ಹೂಡಿಕೆಗೆ ಯಾವುದೇ ಅನುಮತಿ ಬೇಕಾಗಿಲ್ಲ ಅಂದರೆ ಅದು ಆಟೋಮ್ಯಾಟಿಕ್ ಸ್ಕೀಮ್ ಅಡಿಯಲ್ಲಿ ಪಾಸಾಗುತ್ತದೆ. ಉಳಿದ 51 ಪ್ರತಿಶತ ಹೂಡಿಕೆಗೆ ಎಲ್ಲಾ ರೀತಿಯ ಅನುಮತಿಗಳ ಅವಶ್ಯಕತೆಯಿದೆ.
  6. ಇಂತಹ ಒಂದು ಅವಕಾಶವನ್ನ ಚೀನಾ ಅಥವಾ ಪಾಕಿಸ್ತಾನ ಬಳಸಿಕೊಳ್ಳವ ಸಾಧ್ಯತೆಯಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ವಿಚಾರ. ಹೀಗಾಗಿ, ಚೀನಾ, ಪಾಕಿಸ್ತಾನ ಜೊತೆಗೆ ಇತರ ಯಾವುದೇ ಭಾರತೀಯ ವಿರೋಧಿ ಮನಸ್ಥಿತಿ ದೇಶಗಳ ಹೂಡಿಕೆಯ ಮೇಲೆ ನಿಗಾ ಇರಿಸಲಾಗಿದೆ.

ಹೌದು ಇದೆಲ್ಲಾ ಸರಿ, ಮೇಲೆ ಹೇಳಿದ ಬದಲಾವಣೆಗಳಿಂದ ಆಗಲೇ ಈ ಕ್ಷೇತ್ರದಲ್ಲಿ ಇರುವ ಬೃಹತ್ ಸಂಸ್ಥೆಗಳಿಗೆ ಬಹಳಷ್ಟು ಉಸಿರಾಡಲು, ಹೊಸದಾಗಿ ಬೆಳೆಯಲು ಅವಕಾಶ ಸಿಕ್ಕಿತು, ಇದರಿಂದ ಈ ಕ್ಷೇತದಲ್ಲಿ ಮಹತ್ತರ ಬದಲಾವಣೆ ಆಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಈ ವೇಳೆಗೆ ನಿಮಗೆ ಬಂದಿರುತ್ತದೆ. ಗಮನಿಸಿ ನೋಡಿ 100 ಪ್ರತಿಶತ ವಿದೇಶಿ ಬಂಡವಾಳ ಹೂಡಿಕೆಗೆ ಈ ಕ್ಷೇತ್ರ ಇದೀಗ ಮುಕ್ತವಾಗಿದೆ. ಹೀಗಾಗಿ ಈ ಕ್ಷೇತದಲ್ಲಿ ಬಹಳಷ್ಟು ವಿದೇಶಿ ಬಂಡವಾಳ ಹರಿದು ಬರಲಿದೆ. ಹೊಸ ತಂತ್ರಜ್ಞಾನದ ಜೋತೆಗೆ ಲಕ್ಷಾಂತರ ಹೊಸ ಕೆಲಸಗಳ ಸೃಷ್ಟಿಯಾಗಲಿದೆ.

ಎಲಾನ್ ಮಸ್ಕ್ ಭಾರತದಲ್ಲಿ, ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಾರಾ?

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಈ ಬದಲಾವಣೆಗಳಿಗೆ ಕ್ಯಾಬಿನೆಟ್ ಅಸ್ತು ಸಿಕ್ಕ ತಕ್ಷಣ ಈ ವಿಷಯ ಸಂಚಲನ, ಸದ್ದು ಉಂಟು ಮಾಡಿದೆ. ಇದಕ್ಕೆ ಕಾರಣ ಒಂದು ಸಣ್ಣ ಟ್ವೀಟ್ ! ಒಬ್ಬ ಅಜ್ಞಾತ ವ್ಯಕ್ತಿ  ಎಲಾನ್ ಮಸ್ಕ್ ಕುರಿತು ' ನೀವು, ನಿಮ್ಮ ಸ್ಟಾರ್ ಲಿಂಕ್ ಸಂಸ್ಥೆಯನ್ನ ಭಾರತಕ್ಕೆ ತರುತ್ತೀರಾ? ಎನ್ನುವ ಪ್ರಶ್ನೆಯನ್ನ ಮಾಡಿದ್ದರು. ಅದಕ್ಕೆ ಎಲಾನ್ ಮಸ್ಕ್ 'ಅನುಮತಿ ಪಡೆಯಲು ಬೇಕಾದ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆಯುಕೊಳ್ಳುತ್ತಿದ್ದೇನೆ' ಎಂದು ಉತ್ತರಿಸಿದ್ದಾರೆ.  ಎಲಾನ್ ಮಸ್ಕ್ ಅವರ ಈ ಒಂದು ಸಾಲಿನ ಉತ್ತರ ಬಹಳಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.  ಸ್ಟಾರ್ ಲಿಂಕ್ ಎನ್ನುವುದು  ಸ್ಯಾಟಲೈಟ್ ಬಳಸಿಕೊಂಡು ಇಂಟರ್ನೆಟ್ ಸೇವೆಯನ್ನ ಒದಗಿಸುವ ಎಲಾನ್ ಮಸ್ಕ್ ಅವರ ಸಂಸ್ಥೆಯಾಗಿದೆ. ಇದರ ವಿಶೇಷತೆ ಎಂದರೆ ಸಿಗ್ನಲ್ ಕಾಟವಿಲ್ಲ, ಕಾಲ್ ಡ್ರಾಪ್ ಎನ್ನುವ ಮಾತಿಲ್ಲ. ಗುಡ್ಡಗಾಡು ಅಥವಾ ಯಾವುದೇ ಹಳ್ಳಿ ಪ್ರದೇಶದಲ್ಲಿ ಇದ್ದರೂ ಕೂಡ ಸಂವಹನ ಸಾಧ್ಯವಿದೆ. ಇದೇ ಸೌಲಭವನ್ನ ಅವರು ಭಾರತದಲ್ಲಿ ಆರಂಭಿಸಿದರೆ ಇತರೆ ಟೆಲಿಕಾಂ ಸಂಸ್ಥೆಗಳ ಭವಿಷ್ಯವೇನು? ಎನ್ನುವ ಮಾತುಗಳು ಆಗಲೇ ಶುರುವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಯೋ ಗೆ ಇದರಿಂದ ಭಾರಿ ಪೆಟ್ಟು ಬೀಳಲಿದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.

ಸ್ಟಾರ್ ಲಿಂಕ್ ಈಗಾಗಲೇ ವಿಶ್ವದಾದಂತ್ಯ ಸುಮಾರು ಲಕ್ಷ ಗ್ರಾಹಕರನ್ನ ಹೊಂದಿದೆ. ಆದರೆ ಸದ್ಯದ ಮಟ್ಟಿಗೆ ಇದು ವಿಧಿಸುತ್ತಿರುವ ಶುಲ್ಕ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಜನರಿಗೆ ಎಟುಕುವ ಸ್ಥಿತಿಯಲಿಲ್ಲ . ಇದರ ಸೇವೆ ಪಡೆಯಲು ಮೊದಲಿಗೆ 500 ಡಾಲರ್ ನೀಡಬೇಕಾಗುತ್ತದೆ. ಮತ್ತು ಮಾಸಿಕ 99 ಡಾಲರ್ ಹಣವನ್ನ ನೀಡಬೇಕಾಗುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಪ್ರಥಮವಾಗಿ 36ಸಾವಿರ ನಂತರ ಮಾಸಿಕ 7,400 ರೂಪಾಯಿ ನೀಡಬೇಕಾಗುತ್ತದೆ. ಇದು ನಮ್ಮ ಇಂದಿನ ಮಾರುಕಟ್ಟೆಯಲ್ಲಿ ಸಾಧ್ಯವಿಲ್ಲದ ಮಾತಾಗಿದೆ. ಹೀಗಾಗಿ ಜಿಯೋ ಕಥೆ ಮುಗಿದು ಹೋಯಿತು ಎನ್ನುವವರು ಸ್ವಲ್ಪ ತಾಳ್ಮೆ ವಹಿಸಬೇಕಾಗುತ್ತದೆ. ಭಾರತೀಯ ಮಾರುಕಟ್ಟೆಯನ್ನ ಗೆಲ್ಲಲು ಅಥವಾ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಲು 'ಪ್ರೈಸ್' ಅಥವಾ ಬೆಲೆ ಬಹಳ ಮುಖ್ಯ. ಬೆಲೆ ಕಡಿಮೆ ಇಲ್ಲದಿದ್ದರೆ ಈ ಮಾರುಕಟ್ಟೆಯಲ್ಲಿ ಗೆಲುವು ಸಾಧಿಸುವುದು ಕಷ್ಟ.

ನೂರು ಪ್ರತಿಶತ ವಿದೇಶಿ ಬಂಡವಾಳ ಹೂಡಿಕೆ ಈ ಕ್ಷೇತ್ರದಲ್ಲಿ ಎಷ್ಟು ಸರಿ?

ಗಮನಿಸಿ ಸರಕಾರವೇನೋ ಚೀನಾ ಅಥವಾ ಪಾಕಿಸ್ತಾನ ಯಾವುದೇ ರೀತಿಯಲ್ಲಿ ಹೂಡಿಕೆ ಮಾಡುವುದಕ್ಕೆ ಬಿಡುವುದಿಲ್ಲ ಎನ್ನುವುದನ್ನ ಹೇಳಿದೆ. ಆದರೆ ಎಲಾನ್ ಮಸ್ಕ್ ಅವರ ಸಂಸ್ಥೆ ಸ್ಟಾರ್ ಲಿಂಕ್ ನಿಂದ ಯಾವುದೇ ತೊಂದರೆ ಆಗುವುದಿಲ್ಲ ಅಥವಾ ಚೀನಾ ಮತ್ತು ಪಾಕಿಸ್ತಾನ ಎರಡು ದೇಶ ಬಿಟ್ಟು ಬೇರೆ ದೇಶಗಳಿಂದ ನಮ್ಮ ಆಂತರಿಕ ಭದ್ರತೆಗೆ ತೊಂದರೆಯಾಗುವುದಿಲ್ಲ ಎಂದು ಹೇಗೆ ನಿಖರವಾಗಿ ಹೇಳುವುದು? ಟೆಲಿಕಾಂ ಒಂದು ಅತ್ಯಂತ ಸೂಕ್ಷ ಕ್ಷೇತ್ರವಾಗಿದೆ. ನಾವು ಆಡುವ ಮಾತುಗಳನ್ನ ನಮಗೆ ಗೊತ್ತಿಲ್ಲದಂತೆ ಕೇಳುವ ಮತ್ತು ಅದನ್ನ ರೆಕಾರ್ಡ್ ಮಾಡಿ ಇಟ್ಟುಕೊಳ್ಳುವ ಸೌಲಭ್ಯಗಳು ಅವರಿಗೆ ಇರುತ್ತದೆ. ಅಮೇರಿಕಾ ದೇಶವು ಯೂರೋಪಿಯನ್ ಯೂನಿಯನ್ ನ ಬಹುತೇಕ ನಾಯಕರ ಟೆಲಿಫೋನ್ ಕದ್ದಾಲಿಸಿದೆ ಎನ್ನುವ ಗುರುತರ ಆರೋಪವನ್ನ ಜರ್ಮನಿಯ ಚಾನ್ಸ್ಲರ್ ಏಂಜೆಲಾ ಮರ್ಕೆಲ್ ಅವರು ಕೊರೋನಗೆ ಮುಂಚೆಯೇ ಮಾಡಿದ್ದರು. ಅದು ಸತ್ಯ ಕೂಡ ಆಗಿತ್ತು. ಕೇವಲ ನಾಯಕರ ಮಾತುಗಳನ್ನ ಮಾತ್ರವಲ್ಲದೆ ಸ್ಪೇನ್, ಇಂಗ್ಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ದೇಶದ ಎಲ್ಲಾ ನಾಗರಿಕರ ಫೋನ್ ಕರೆಗಳು ಒಂದಲ್ಲ ಒಂದು ರೀತಿಯಲ್ಲಿ ಕದ್ದಾಲಿಸಲಾಗುತ್ತಿತ್ತು ಎನ್ನುವುದು ಇತ್ತೀಚಿಗೆ ತಿಳಿದು ಬಂದಿದೆ.

ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಮ್ಮ ದೇಶದ ಸಂಸ್ಥೆಗಳನ್ನ ಬಿಟ್ಟು ಬೇರೆ ಯಾವುದೇ ದೇಶದ ಸಂಸ್ಥೆಯನ್ನ ನಂಬುವಂತಿಲ್ಲ. ನಮ್ಮ ದೇಶದ ಸಂಸ್ಥೆಯಾದರೂ ಸಹ ಅದರ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ. ಡೇಟಾ ಅಥವಾ ಜನರ ಮಾಹಿತಿಯನ್ನ ಹಣದ ಆಸೆಗೆ ಬೇರೆ ದೇಶದವರಿಗೆ ಮಾರುವುದಿಲ್ಲ ಎನ್ನುವ ಯಾವ ಗ್ಯಾರಂಟಿ ಕೂಡ ಇರುವುದಿಲ್ಲ. ಸಂಸ್ಥೆಯ ಆಡಳಿತ ಮಂಡಳಿಯ ಕಣ್ಣು ತಪ್ಪಿಸಿ ಅಲ್ಲಿನ ಉನ್ನತ ಹುದ್ದೆಯಲ್ಲಿರುವ ಯಾವೊಬ್ಬ ವ್ಯಕ್ತಿ ಕೂಡ ಈ ಕೆಲಸವನ್ನ ಮಾಡಬಹುದು. ವಸ್ತು ಸ್ಥಿತಿ ಹೀಗಿರುವಾಗ, ಇಂತಹ ಸೂಕ್ಷ್ಮ ಕ್ಷೇತ್ರವನ್ನ ಪೂರ್ಣ ವಿದೇಶಿ ಬಂಡವಾಳಕ್ಕೆ ತೆರೆದು ಇಟ್ಟಿರುವುದು ಸರಿಯಾದ ನಿರ್ಧಾರವೇ? ಎನ್ನುವುದು ಸದ್ಯದ ಮಟ್ಟಿಗೆ ಪ್ರಶ್ನೆ.


ಕೊನೆಮಾತು: ಕೇಂದ್ರ ಸರಕಾರದಲ್ಲಿನ ಆಡಳಿತ ವರ್ಗದಲ್ಲಿ ಒಂದಷ್ಟು ನಿಖರತೆಗಳ ಕೊರತೆ ಎದ್ದು ಕಾಣುತ್ತಿದೆ. ಒಂದೆಡೆ ಆತ್ಮನಿರ್ಭರ ಭಾರತ ಎನ್ನುವ ಮಾತನ್ನ ಆಡುತ್ತಾ ಅದೇ ಸಮಯದಲ್ಲಿ ಪೂರ್ಣ ವಿದೇಶಿ ನೇರ ಬಡವಾಳಕ್ಕೆ ಟೆಲಿಕಾಂ ನಂತಹ ಅತ್ಯಂತ ಸೂಕ್ಷ್ಮ ಕ್ಷೇತ್ರವನ್ನ ಬಿಟ್ಟರುವುದು ಹುಬ್ಬೇರಿಸುವಂತೆ ಮಾಡಿದೆ. ಯಾವುದೇ ಕಾರ್ಯ ಕ್ಷೇತ್ರದಲ್ಲೂ ನೂರು ಪ್ರತಿಶತ ವಿದೇಶಿ ಬಂಡವಾಳ ಒಳ್ಳೆಯದಲ್ಲ. ಇದು ಇನ್ನೊಂದು ರೀತಿಯ ವಸಾಹತುಶಾಹಿ ಪದ್ಧತಿಯನ್ನ ಹುಟ್ಟುಹಾಕುತ್ತದೆ. ಇದು ನಮ್ಮ ದೇಶೀ ಜಿಯೋ ಟೆಲಿಕಾಂ ಗೆ ಹೊಡೆತ ನೀಡುತ್ತದೆ ಅಥವಾ ಇಲ್ಲ ಎನ್ನುವುದು ನಂತರದ ಪ್ರಶ್ನೆ, ವ್ಯಾಪಾರ, ವಹಿವಾಟು ಬಿಟ್ಟು ಕೇವಲ ಮತ್ತು ಕೇವಲ ದೇಶದ ಆಂತರಿಕ ಭದ್ರತೆಯ ವಿಷಯವನ್ನ ಗಮನದಲ್ಲಿರಿಸಿಕೊಂಡು ನೋಡಿದಾಗ ಇದು ಒಳ್ಳೆಯ ನಿರ್ಧಾರವಲ್ಲ ಎಂದು ನಿಖರವಾಗಿ ಹೇಳಬಹುದು. ಆದರೆ ಎಲಾನ್ ಮಸ್ಕ್ ಬರುತ್ತಾನೆ ಎನ್ನುವುದನ್ನೇ ಸಂಭ್ರಮಿಸುವ ಜನರಿರುವಾಗ, ಈ ನಿರ್ಧಾರ ತಪ್ಪು ಎನ್ನುವುದು ಅದೆಷ್ಟು ಜನರಿಗೆ ರುಚಿಸೀತು ಎನ್ನುವುದು ಕೂಡ ದೊಡ್ಡ ಪ್ರಶ್ನೆ. ನೂರು ಪ್ರತಿಶತ ವಿದೇಶಿ ಬಂಡವಾಳ ಪೂರ್ತಿ ಆಟೋಮ್ಯಾಟಿಕ್ ಚಾನಲ್ ಮೂಲಕ ಆಗುವುದಿಲ್ಲ, 51 ಪ್ರತಿಶತ ಬಂಡವಾಳಕ್ಕೆ ಕೇಂದ್ರ ಸರಕಾರದ ಮತ್ತು ಆರ್ಬಿಐ ಅನುಮತಿ ಬೇಕು ಎನ್ನುವುದು ಒಂದು ಸಣ್ಣ ಭರವಸೆ ನೀಡಿದೆ, ಉಳಿದಂತೆ ಇದು ಭಾರತಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೆ ಎನ್ನುವುದರ ವಿವೇಚನೆ ಬುದ್ಧಿವಂತ ಓದುಗರ ತೀರ್ಮಾನಕ್ಕೆ ಬಿಟ್ಟದ್ದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com