ಮೋದಿ ನಾಮಬಲವೊಂದೇ ಸಾಲದು! (ನೇರ ನೋಟ)

- ಕೂಡ್ಲಿ ಗುರುರಾಜಆ ಮಾತಿನಲ್ಲಿ ಬಹಳಷ್ಟು ನಿಗೂಢ ಅರ್ಥಗಳಿದ್ದವು. ವಾಸ್ತವಕ್ಕೆ ಬಹಳ ಹತ್ತಿರವಾದ ಒಳನೋಟವಿತ್ತು. ಜೊತೆಯಲ್ಲಿ ತಮ್ಮ ನಾಯಕತ್ವದ ಅಗತ್ಯವನ್ನು ಪರೋಕ್ಷವಾಗಿ ಅವರು ಒತ್ತಿ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)

ಆ ಮಾತಿನಲ್ಲಿ ಬಹಳಷ್ಟು ನಿಗೂಢ ಅರ್ಥಗಳಿದ್ದವು. ವಾಸ್ತವಕ್ಕೆ ಬಹಳ ಹತ್ತಿರವಾದ ಒಳನೋಟವಿತ್ತು. ಜೊತೆಯಲ್ಲಿ ತಮ್ಮ ನಾಯಕತ್ವದ ಅಗತ್ಯವನ್ನು ಪರೋಕ್ಷವಾಗಿ ಅವರು ಒತ್ತಿ ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಆಡಿರುವ ಮಾತು ರಾಜ್ಯ ರಾಜಕಾರಣವನ್ನು ಹತ್ತಿರದಿಂದ ನೋಡಿದವರಿಗೆ ಬಹಳ ಅರ್ಥಗರ್ಭಿತವಾಗಿತ್ತು. ಯಡಿಯೂರಪ್ಪ ಅವರ ಮಾತು ಹೆಚ್ಚು ಗಮನ ಸೆಳೆಯಿತು ಕೂಡ.

ಯಡಿಯೂರಪ್ಪ ಅವರ ಮಾತು ಹೀಗಿತ್ತು- "ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಸಿಕ್ಕಿರುವುದು ನಮ್ಮ ಸೌಭಾಗ್ಯ. ಇವತ್ತು ರಾಜ್ಯದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ನಾವು ಯಾವುದೋ ಭ್ರಮೆಯಲ್ಲಿ ಇರುವುದು ಬೇಡ. ನರೇಂದ್ರ ಮೋದಿ ಅವರ ಹೆಸರಿನಲ್ಲಿ ಲೋಕಸಭೆ ಚುನಾವಣೆ ಗೆಲ್ಲೋದು ಬಹಳ ಸುಲಭ. ಆದರೆ, ರಾಜ್ಯದಲ್ಲಿ ಕೇವಲ ನರೇಂದ್ರ ಮೋದಿ ಅವರ ಹೆಸರು ಹೇಳಿ ಚುನಾವಣೆ ಗೆಲ್ಲುತ್ತೇವೆ ಅಂದರೆ ಆಗೋದಿಲ್ಲ. ನಮ್ಮ ಕೆಲಸ ಕಾರ್ಯಗಳು, ಅಭಿವೃದ್ಧಿ ಕಾರ್ಯಗಳ ಮೂಲಕ ವಿಧಾನಸಭೆ ಚುನಾವಣೆ ಗೆಲ್ಲಬೇಕಿದೆ".

ಯಡಿಯೂರಪ್ಪ ಅವರ ಈ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಪಕ್ಷದ ನಾಯಕರು ಒಪ್ಪುತ್ತಾರೆ. ಯಡಿಯೂರಪ್ಪ ಅವರು ಈ ಮಾತು ಹೇಳುವಾಗ ಅವರೆಲ್ಲರೂ ಪಕ್ಕದಲ್ಲೇ ಕುಳಿತಿದ್ದರು.

ಭಿನ್ನ ಮಾನದಂಡಗಳು

ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಪರಿಗಣಿಸಲ್ಪಡುವ ವಿಚಾರಗಳು ಭಿನ್ನ. ಮತ ನೀಡುವಾಗ ಆಧಾರವಾಗಿಟ್ಟುಕೊಳ್ಳುವ ಮಾನದಂಡಗಳು ಬೇರೆ. ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆಯೇ ಸ್ಪರ್ಧೆಯ ತೀವ್ರತೆ ಹೆಚ್ಚು. ಇಂತಹ ತೀವ್ರತೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಮಬಲ ಒಂದೇ ಬಿಜೆಪಿಗೆ ಸಾಕಾಗುವುದಿಲ್ಲ. ರಾಜ್ಯ ಸರಕಾರದ ಆಡಳಿತವನ್ನು ಮತದಾರರು ಹೆಚ್ಚು ಒರೆಗಲ್ಲಿಗೆ ಹಚ್ಚುತ್ತಾರೆ. ರಾಜ್ಯದ ಬಿಜೆಪಿ ಆಳ್ವಿಕೆಯ ಸರಕಾರ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಅಗ್ನಿ ಪರೀಕ್ಷೆಯಲ್ಲಿ ಈ ಹಿಂದಿನ ಯಡಿಯೂರಪ್ಪ ಸರಕಾರ ಹಾಗೂ ಈಗಿನ ಬಸವರಾಜ ಬೊಮ್ಮಾಯಿ ಸರಕಾರ ಎರಡೂ ಪಾಸಾಗಬೇಕಾಗುತ್ತದೆ. ಇದು ಎಲ್ಲರಿಗಿಂತ ಹೆಚ್ಚಾಗಿ ಯಡಿಯೂರಪ್ಪ ಅವರೇ ಬಲ್ಲರು.

ನೋಡಿ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು 104 ಸೀಟುಗಳನ್ನು. ಪಡೆದಿದ್ದು ಶೇಕಡಾವಾರು 36.2 ಮತಗಳು. ಅದೇ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಪಡೆದ ಸೀಟುಗಳ ಸಂಖ್ಯೆ 25. ಪಡೆದ ಮತಗಳು ಶೇಕಡಾ 51.38. ಈ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಬಿಜೆಪಿ ಸುಮಾರು 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.ಇದಕ್ಕೆ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಮಬಲ. ಆದರೆ, ನರೇಂದ್ರ ಮೋದಿ ಅವರ ನಾಮಬಲವೊಂದೇ ನಂಬಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಿಲ್ಲ.

ನಿಜ. ಅಸೆಂಬ್ಲಿ ಚುನಾವಣೆಯೇ ಬೇರೆ, ಲೋಕಸಭಾ ಎಲೆಕ್ಷನ್ನೇ ಬೇರೆ. ತಳಮಟ್ಟಕ್ಕೆ ಹೋದಷ್ಟು ಅಭ್ಯರ್ಥಿ ಮುಖ್ಯವಾಗುತ್ತಾರೆ. ರಾಜ್ಯ ಮಟ್ಟದಲ್ಲಿ ಆಯಾ ರಾಜ್ಯ ಸರಕಾರಗಳ ಕಾರ್ಯನಿರ್ವಹಣೆಯೂ ಒರೆಗಲ್ಲಿಗೆ ಹಚ್ಚಲ್ಪಡುತ್ತದೆ. ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಮಟ್ಟದ ನಾಯಕರ ನಾಮಬಲವೂ ಮುಖ್ಯ ಆಗುತ್ತದೆ.

ಪ್ರಬಲ ನಾಯಕರ ಅಗತ್ಯ

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಭೆಯೊಂದರಲ್ಲಿ ಆಡಿದ ಮಾತು ಇಲ್ಲಿ ನೆನಪಿಗೆ ಬರುತ್ತದೆ. ತಮಿಳುನಾಡು, ಕೇರಳದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿಲ್ಲದಿರುವುದಕ್ಕೆ ಕಾರಣ ಅಲ್ಲಿ ಯಡಿಯೂರಪ್ಪ ಅವರಂತಹ ನಾಯಕರು ಇಲ್ಲ ಎಂದಿದ್ದರು. ಇದು ನಿಜ. ಮಧ್ಯಪ್ರದೇಶದಲ್ಲಿ ಶಿವರಾಜ ಸಿಂಗ್ ಚೌಹಾಣ್, ರಾಜಸ್ತಾನದಲ್ಲಿ ವಸುಂಧರಾ ರಾಜೇ ಆಯಾ ರಾಜ್ಯಗಳಲ್ಲಿ ಪ್ರಬಲ ನಾಯಕರಾಗಿದ್ದಾರೆ. ಯಡಿಯೂರಪ್ಪ, ಶಿವರಾಜಸಿಂಗ್ ಚೌಹಾಣ್, ವಸುಂಧರಾ ರಾಜೇ, ಯೋಗಿ ಆದಿತ್ಯನಾಥ್ ಅವರಂತಹ ಪ್ರಭಾವಿ ನಾಯಕರು ಬಿಜೆಪಿಗೆ ಎಲ್ಲ ರಾಜ್ಯಗಳಲ್ಲೂ ಇಲ್ಲ. ಹೀಗಾಗಿ, ಲೋಕಸಭೆಯಲ್ಲಿ ಕೆಲವು ರಾಜ್ಯಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದರೂ ಆಯಾ ರಾಜ್ಯ ವಿಧಾನಸಭೆಗಳಲ್ಲಿ ಇದೇ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ.

ಲೋಕಸಭೆಗೆ 2019ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸ್ಥಾನ ಗೆದ್ದ ಬಿಜೆಪಿ ಅದೇ ಉತ್ಸಾಹದಲ್ಲಿ ಮುಂದುವರಿದರೂ ಇತ್ತೀಚೆಗೆ ಅಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಆಗಲಿಲ್ಲ. ಆದರೂ, ಇಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯ ಶಕ್ತಿ ಸಾಕಷ್ಟು ಹೆಚ್ಚಿದೆ ಎಂಬ ಮಾತು ಬೇರೆ. 

ಪಕ್ಷಾಂತರ ಪರ್ವ

ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಎದ್ದು ಕುಳಿತಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಹೋರಾಟ ನಡೆಸಿದೆ. ಯಡಿಯೂರಪ್ಪ ಅವರು ಪ್ರತಿಪಕ್ಷ ಕಾಂಗ್ರೆಸ್ ಎದ್ದು ಕುಳಿತಿದೆ ಎಂದು ಹೇಳಿದ ಒಂದು ವಾರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರು ಕಾಂಗ್ರೆಸ್ ಪಕ್ಷದಿಂದ ಸುಮಾರು 20 ಮಂದಿ ಶಾಸಕರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ ಎಂದಿದ್ದಾರೆ.

ಇದು ರಾಜಕೀಯ ಹೇಳಿಕೆ ವಿನಾ ಈಗಲೇ ಇದಕ್ಕೆ ಹೆಚ್ಚು ಅರ್ಥ ಕಲ್ಪಿಸಬೇಕಿಲ್ಲ. ಈ ರೀತಿಯ ಯಾವುದೇ ಬೆಳವಣಿಗೆಗಳು ಇದ್ದರೂ ಅದು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ತಿರುವುಗಳನ್ನು ಪಡೆಯಲಿದೆ. ಇದೇ ವೇಳೆ ಕಾಂಗ್ರೆಸ್ ನಾಯಕರು ಬಿಜೆಪಿಯ ಕೆಲವು ಶಾಸಕರನ್ನು ಸಂಪರ್ಕಿಸಿದ್ದಾರೆ ಎಂಬ ಯಡಿಯೂರಪ್ಪ ಅವರ ಮಾತನ್ನೂ ಇಲ್ಲಿ ಉಲ್ಲೇಖಿಸಬಹುದು.

ಜೆಡಿಎಸ್‌ನಿಂದ ಕೆಲವು ಶಾಸಕರು ತಮ್ಮ ಕ್ಷೇತ್ರದ ಸ್ಥಳೀಯ ರಾಜಕೀಯ ಲೆಕ್ಕಾಚಾರಗಳನ್ನು ನೋಡಿಕೊಂಡು ಕಾಂಗ್ರೆಸ್ ಅಥವಾ ಬಿಜೆಪಿ ಕಡೆ ಹೆಜ್ಜೆ ಹಾಕುವ ತಯಾರಿಯನ್ನು ಜೋರಾಗಿಯೇ ನಡೆಸಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ರಾಜ್ಯ ರಾಜಕಾರಣದಲ್ಲಿ ಶಾಸಕರ ಪಕ್ಷಾಂತರ ಪರ್ವ ಚುನಾವಣಾ ವೇಳೆ ಸಮೀಪಿಸುತ್ತಿದ್ದಂತೆ ಅನಾವರಣಗೊಳ್ಳುವುದು ಖಚಿತ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com