ಇಂಗ್ಲೆಂಡ್ ನಲ್ಲಿ ಸ್ಟಾಗ್ ಫ್ಲೇಶನ್; ಇಂಧನ, ಆಹಾರಕ್ಕೆ ಹಾಹಾಕಾರ! (ಹಣಕ್ಲಾಸು)

ಹಣಕ್ಲಾಸು-277-ರಂಗಸ್ವಾಮಿ ಮೂಕನಹಳ್ಳಿ
ಇಂಗ್ಲೆಂಡ್ ನಲ್ಲಿ ಸ್ಟಾಗ್ ಫ್ಲೇಶನ್
ಇಂಗ್ಲೆಂಡ್ ನಲ್ಲಿ ಸ್ಟಾಗ್ ಫ್ಲೇಶನ್

ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದು ಎಂದು ಬೀಗಿದ್ದ ಬ್ರಿಟಿಷರು ಇಂದು ಇಂಧನ, ಆಹಾರ ಮತ್ತಿತರೆ ದಿನ ನಿತ್ಯ ಬಳಕೆಯ ವಸ್ತುಗಳಿಗೆ ಕೂಡ ಪರದಾಡುವ ಸ್ಥಿತಿಯನ್ನ ತಲುಪಿದ್ದಾರೆ. 

ಕೋವಿಡ್ಗೂ ಮೊದಲೇ ಬ್ರೆಕ್ಸಿಟ್ ನಿಂದ ಇಂತಹ ಒಂದು ಪರಿಸ್ಥಿತಿಯನ್ನ ಎದುರಿಸಿಬೇಕಾದ ಸಾಧ್ಯತೆಯನ್ನ ಅಲ್ಲಿನ ಅರ್ಥ ಶಾಸ್ತ್ರಜ್ಞರು ನೀಡಿದ್ದರು. ಆದರೆ ಕೋವಿಡ್ ಸಪ್ಲೈ ಚೈನ್ ಕುಸಿತಕ್ಕೆ ದಾರಿ ಮಾಡಿಕೊಟ್ಟಿದೆ. ಇವೆಲ್ಲವುಗಳ ಜೊತೆಗೆ ಕೊರೋನ ನಂತರ ಬ್ರಿಟನ್ ಎಕಾನಮಿಗೆ ಚೇತರಿಕೆ ಎನ್ನುವುದು ಮರೀಚಿಕೆಯಾಗಿದೆ. ಈ ಸಮಯವನ್ನ ವಿಂಟರ್ ಆಫ್ ಡಿಸ್ಕಂಟೆಂಟ್ ಎಂದು ಆಗಲೇ ತೀರ್ಮಾನ ಮಾಡಿದ್ದಾರೆ. 1978/79 ರ ವೇಳೆಯಲ್ಲಿ ಬ್ರಿಟಿಷ್ ಎಕಾನಮಿ ಎಷ್ಟರ ಮಟ್ಟಿಗೆ ನೆಲಕಚ್ಚಿತ್ತು ಅದೇ ಮಟ್ಟದಲ್ಲಿ ಇಂದಿನ ಬ್ರಿಟಿಷ್ ಸಮಾಜ ಕೂಡ ಕುಸಿದಿದೆ.

ನಾವೆಲ್ಲಾ ಇನ್ಫ್ಲೇಶನ್ ಮತ್ತು ಡೆಫ್ಲೇಷನ್ ಹೆಸರನ್ನ ಕೇಳಿದ್ದೇವೆ. ತಕ್ಕ ಮಟ್ಟಿಗೆ ಅವುಗಳ ಅರ್ಥ ಕೂಡ ನಮಗೆಲ್ಲಾ ತಿಳಿದಿದೆ. ಇದೀಗ ಬ್ರಿಟಿಷ್ ಎಕಾನಾಮಿಯನ್ನ ವರ್ಣಿಸಲು ಸ್ಟಾಗ್ ಫ್ಲೇಶನ್ ಎನ್ನುವ ಪದವನ್ನ ವಿತ್ತೀಯ ಜಗತ್ತಿನಲ್ಲಿ ಬಳಕೆಯನ್ನ ಮಾಡುತ್ತಿದ್ದಾರೆ.

ಸ್ಟಾಗ್ ಫ್ಲೇಶನ್ ಎಂದರೇನು?

ಹಣದುಬ್ಬರ ಹೆಚ್ಚಾಗಿದ್ದು , ಯಾವುದೇ ಸರುಕು ಅಥವಾ ಸೇವೆಯ ಮೇಲಿನ ಬೇಡಿಕೆ ಇನ್ನಿಲ್ಲದೆ ಕುಸಿದಿದ್ದು ,ನಿರುದ್ಯೋಗ ಹೆಚ್ಚಾಗಿರುವ ಆರ್ಥಿಕತೆಯನ್ನ ಸ್ಟಾಗ್ ಫ್ಲೇಶನ್ ಎನ್ನುತ್ತಾರೆ. ಇದನ್ನ ಸರಳವಾಗಿ ಹೇಳಬೇಕೆಂದರೆ ವಸ್ತು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿತವಾಗಿದ್ದರೂ ಕೂಡ ಅವುಗಳ ಮೇಲಿನ ಬೆಲೆಯಲ್ಲಿ ಯಾವುದೇ ಕುಸಿತವಾಗುವುದಿಲ್ಲ, ಬದಲಿಗೆ ಅವುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಇದರ ಜೊತೆಗೆ ಜನರ ಬಳಿ ಖರ್ಚಿಗೆ ಹಣ ಇರುವುದಿಲ್ಲ, ಹೀಗಾಗಿ ಸಹಜವಾಗಿ ಬೇಡಿಕೆಯಲ್ಲಿ ಕುಸಿತವಾಗುತ್ತದೆ. ಜನರ ಬಳಿ ಕೆಲಸವಿಲ್ಲದ ಕಾರಣ ಅವರ ಆದಾಯದಲ್ಲಿ ಕುಸಿತವಾಗುತ್ತದೆ. ಸಾಮಾನ್ಯವಾಗಿ ಜನರ ಬಳಿ ಹಣ ಇಲ್ಲದ ಸಮಯದಲ್ಲಿ ಬೇಡಿಕೆ ಕುಸಿತವಾಗದರೆ, ಬೆಲೆ ಕೂಡ ಕುಸಿಯಬೇಕು. ಆದರೆ ಬೆಲೆಯಲ್ಲಿ ಕುಸಿತವಾಗುವ ಬದಲು ಬೆಲೆ ಹೆಚ್ಚಳವಾಗುವ ಇಂತಹ ವಿಚಿತ್ರ ಆರ್ಥಿಕ ಘಟ್ಟವನ್ನ ಸ್ಟಾಗ್ ಫ್ಲೇಶನ್ ಎಂದು ಕರೆಯಲಾಗುತ್ತದೆ.

ಮೊದಲೇ ಹೇಳಿದಂತೆ 1978/79ರಲ್ಲಿ ಬ್ರಿಟನ್ ಸಮಾಜ ಇಂತಹ ಒಂದು ಆರ್ಥಿಕ ಘಟ್ಟವನ್ನ ಕಂಡು ಬಂದಿದೆ. ಅಂದಿನ ದಿನದಲ್ಲಿ ಸಮಾಜ ಮಂಡಿಯೂರಿ ಕುಳಿತುಕೊಳ್ಳುವ ಮಟ್ಟಕ್ಕೆ ಕುಸಿದಿತ್ತು ಎನ್ನುವುದನ್ನ ಚರಿತ್ರೆಯ ಪುಟಗಳು ಹೇಳುತ್ತವೆ.

ಇಂಗ್ಲೆಂಡ್ ಇರಬಹುದು ಅಥವಾ ಅಮೆರಿಕಾ, ದೇಶ ಯಾವುದೇ ಇರಲಿ ಮುಂದಿನ ಹತ್ತು ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳಿಗೆ ಸಿದ್ಧತೆಯನ್ನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಇವತ್ತಿನ ಪರಿಸ್ಥಿತಯಲ್ಲಿ ಆ ಮಟ್ಟದ ಸಿದ್ದತೆಯನ್ನ ಮಾಡಿಕೊಳ್ಳುವುದು ಕಷ್ಟಸಾಧ್ಯ. ಆದರೆ ಬಂದ ಬದಲಾವಣೆಗಳಿಗೆ ಶೀಘ್ರದಲ್ಲಿ ಒಗ್ಗಿಕೊಳ್ಳುವುದು, ಮತ್ತು ಅದರಲ್ಲಿ ಉನ್ನತಿಯನ್ನ ಕಾಣಲು ಬೇಕಾದ ಬದಲಾವಣೆಗಳನ್ನ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಇಂಗ್ಲೆಂಡ್ ಇವೆರೆಡರಲ್ಲೂ ಸೋತಿದೆ. ಆಹಾರ ಪದಾರ್ಥಗಳಿಂದ ಹಿಡಿದು ತೈಲದ ವರೆಗೆ ಎಲ್ಲೆಡೆ ನೋ ಸ್ಟಾಕ್ ಬೋರ್ಡ್ ರಾರಾಜಿಸುತ್ತಿದೆ. ಅರ್ಧಕ್ಕೂ ಹೆಚ್ಚು ದೇಶದ ಪೆಟ್ರೋಲ್ ಬಂಕ್ ಗಳು ತೈಲವಿಲ್ಲ ಎನ್ನುವ ಬೋರ್ಡ್ ಹಾಕಿಕೊಂಡು ಕುಳಿತಿವೆ. ಜನರು ಕೂಡ ಪ್ಯಾನಿಕ್ ಗೆ ಒಳಗಾಗಿ ಅವಶ್ಯಕತೆಗಿಂತ ಹೆಚ್ಚಿನ ಖರೀದಿ ಮಾಡಿ ತಮ್ಮ ಉಗ್ರಾಣಗಳನ್ನ ತುಂಬಿಸಿಕೊಳ್ಳುತ್ತಿದ್ದರೆ. ಸಣ್ಣ ಪುಟ್ಟ ಸೂಪರ್ ಮಾರ್ಕೆಟ್ ಗಳಿಂದ , ದೊಡ್ಡ ಮತ್ತು ಅತಿ ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಿ ಭಣಗುಡುವ ಖಾಲಿ ಚರಣಿಗೆ ಹೇಳುವ ಕಥೆಗಳು ಮಾತ್ರ ಸೇಮ್!

ಮಹಾನ್ ಬ್ರಿಟಿಷ್ ಸಾಮ್ರಾಜ್ಯ 21 ನೇ ಶತಮಾನದಲ್ಲಿ ಇಂತಹ ಒಂದು ದೈನೇಸಿ ಸ್ಥಿತಿಗೆ ತಲುಪಲು ಅನೇಕ ಕಾರಣಗಳನ್ನ ಪಟ್ಟಿ ಮಾಡಬಹುದು, ಅವುಗಳಲ್ಲಿ ಪ್ರಮುಖವಾದವುಗಳನ್ನ ಇಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

  1. ವಿವೇಚನೆಯಿಲ್ಲದೆ ಮಾಡಿಕೊಂಡ ಬ್ರೆಕ್ಸಿಟ್: ಯೂರೋಪಿಯನ್ ಒಕ್ಕೂಟದಲ್ಲಿ ಸದಸ್ಯ ದೇಶವಾಗಿದ್ದ ಬ್ರಿಟನ್ ಎಂದಿಗೂ ಪೂರ್ಣ ಪ್ರಮಾಣದಲ್ಲಿ ಒಕ್ಕೂಟದೊಂದಿಗೆ ಗುರುತಿಸಿಕೊಳ್ಳಲಿಲ್ಲ. ಎಲ್ಲಾ ಸದಸ್ಯ ದೇಶಗಳು ತಮ್ಮ ಹಳೆಯ ಹಣವನ್ನ ಬಿಟ್ಟು ಹೊಸ ಹಣ ಯುರೋವನ್ನ ಒಪ್ಪಿಕೊಂಡವು ಆದರೆ, ಬ್ರಿಟನ್ ಮಾತ್ರ ತನ್ನ ಹಣವನ್ನ ಬಿಟ್ಟು ಕೊಡಲಿಲ್ಲ. ಇಂದೊಂದು ಸಣ್ಣ ಉದಾಹರೆಣೆ. ಬ್ರೆಕ್ಸಿಟ್ ಮಾಡಿಕೊಂಡಾಗ ಕೂಡ ಅದನ್ನ ಆತುರದಲ್ಲಿ ಹೇಗಾದರೂ ಮಾಡಿ ಒಕ್ಕೂಟದಿಂದ ಹೊರಬರಬೇಕು ಎನ್ನುವಂತೆ ಮಾಡಿಕೊಳ್ಳಲಾಯಿತು. ಹೀಗೆ ಹೊರ ಬಂದರೆ ಬ್ರಿಟನ್ ನಲ್ಲಿರುವ ಸಕಲ ಸಮಸ್ಯೆಗಳು ಪರಿಹಾರವಾಗುತ್ತದೆ ಎನ್ನುವಂತೆ ಬಿಂಬಿಸಲಾಗಿತ್ತು. ಗೂಡ್ಸ್ ಮತ್ತು ಎನರ್ಜಿ ವಿಷಯದಲ್ಲಿ ಬ್ರೆಕ್ಸಿಟ್ ವೇಳೆಯಲ್ಲಿ ಮಾಡಿಕೊಳ್ಳಬೇಕಾದ ಒಪ್ಪಂದವನ್ನ ಕಡೆಗಣಿಸಿದ್ದು, ಅತ್ಯಂತ ಕಠಿಣ ವಲಸೆ ನೀತಿಗಳನ್ನ ಮಾಡಿಕೊಂಡಿದ್ದು ಬ್ರಿಟನ್ ಇಂದಿನ ಮಟ್ಟಕ್ಕೆ ಕುಸಿಯಲು ಕಾರಣ.
  2. ಕೆಲಸಗಾರರ ಕೊರತೆ: ಬ್ರೆಕ್ಸಿಟ್ ಸಮಯದಲ್ಲಿ ಯೂರೋಪಿಯನ್ ಒಕ್ಕೂಟದ ಕೆಲಸಗಾರರಿಗೆ ಬ್ರಿಟನ್ಗೆ ಬರುವುದಕ್ಕೆ ಅತ್ಯಂತ ಕಾರಿನ ನಿಯಮಗಳನ್ನ ವಿಧಿಸಲಾಗಿತ್ತು. ಬ್ರಿಟನ್ ಸಂಪತ್ಭರಿತ ದೇಶ, ಇತರ ದೇಶದ ಬಡ ವಲಸಿಗರು ಇಲ್ಲಿಗೆ ಬಂದು ನಮ್ಮ ಎಕಾನಾಮಿಯನ್ನ ಹಾಳುಗೆಡುವುತ್ತಾರೆ ಎನ್ನುವ ಧೋರಣೆ ಬ್ರಿಟಿಷರದ್ದಾಗಿತ್ತು. ಆದರೆ ಅದು ಅವರಿಗೆ ಈಗ ಉಲ್ಟಾ ಹೊಡೆದಿದೆ. ಇವತ್ತು ಇಂಗ್ಲೆಂಡ್ ನಲ್ಲಿರುವ ಇಂಧನ ಕೊರತೆಗೆ ಪ್ರಮುಖ ಕಾರಣ ಸಪ್ಲೈ ಚೈನ್ ಕುಸಿತ ಕಾರಣ. ಬ್ರಿಟನ್ ಲಾರಿ ಡ್ರೈವರ್ ಗಳ ಕೊರತೆಯನ್ನ ಎದುರಿಸುತ್ತಿದೆ. ಬ್ರಿಟಿಷ್ ಚೇಂಬರ್ ಆಫ್ ಕಾಮರ್ಸ್ ಹೆಚ್ಚು ಹೆಚ್ಚು ವೀಸಾ ಗಳನ್ನ ವಿತರಿಸಲು ಮನವಿಯನ್ನ ಮಾಡಿದೆ. ಮೊನ್ನೆಯಷ್ಟೇ 10,500 ಟ್ರಕ್ ಡ್ರೈವರ್ ತಾತ್ಕಾಲಿಕ ವೀಸಾವನ್ನ ಸರಕಾರ ನೀಡಿದೆ. ಆದರೆ ಇದು ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ಎನ್ನುವ ಸ್ಥಿತಿಯಾಗಿದೆ. ಸೂಪರ್ ಮಾರ್ಕೆಟ್ ಒಕ್ಕೂಟ ಮತ್ತು ಅದರ ಮಾಲೀಕರು ನಮ್ಮ ಬಳಿ ಕ್ರಿಸ್ಮಸ್ ಹಬ್ಬವನ್ನ ಉಳಿಸಲು ಕೇವಲ ಹತ್ತು ದಿನ ಮಾತ್ರ ಬಾಕಿಯಿದೆ ಎನ್ನುವ ಆತಂಕದ ಮಾತುಗಳನ್ನ ಆಡಿದ್ದಾರೆ. ಹೀಗಾಗಿ ಸರಕಾರ ತನ್ನ ಮಿಲಿಟರಿಯನ್ನ ಸ್ಟಾಂಡ್ ಬೈ ಆಗಿ ಸಿದ್ಧವಿರಿಸಿದೆ. ಹೆಚ್ಚು ಹೆಚ್ಚು ವೀಸಾ ಗಳನ್ನ ನೀಡಿತ್ತಿದೆ. ಹೀಗಿದ್ದೂ ಅಂದುಕೊಂಡ ಮಾತ್ರದಲ್ಲಿ ಕೆಲಸಗಾರರು ಸಿಗದಿದ್ದರೆ ಮಿಲಿಟರಿಯನ್ನ ಬಳಸಿಕೊಂಡು ಕ್ರಿಸ್ಮಸ್ ಹಬ್ಬವನ್ನ ಜನರಿಗೆ ತೊಂದರೆಯಾಗದಂತೆ ಆಚರಿಸಲು ಸಜ್ಜಾಗುತ್ತಿದೆ. ಉಗುರಿನಲ್ಲಿ ತೆಗೆಯಬಹುದಾಗಿದ್ದ ಸಣ್ಣ ಸಿಬುರಿಗೆ ಕೊಡಲಿಯ ಪೆಟ್ಟು ನೀಡುವ ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡದ್ದು ರಾಜತಾಂತ್ರಿಕ ನಡವಳಿಕೆಯಲ್ಲಿ ಆದ ದೋಷ ಎನ್ನಬಹುದು. ಸರಕಾರದ ಇಂದಿನ ಎಲ್ಲಾ ಕಸರತ್ತುಗಳ ನಡುವೆ ಇಂಗ್ಲೆಂಡ್ ಇವತ್ತು ನೋಡುತ್ತಿರುವ ಕೊರತೆಗಳು ಏನೇನೂ ಅಲ್ಲ, ಡಿಸೆಂಬರ್ ವೇಳೆಗೆ ಎಂದೂ ಕಂಡಿರದ ಆಹಾರದ ಕೊರತೆಯನ್ನ ಎದುರಿಸಲಿದೆ ಎನ್ನುವ ಮಾತುಗಳನ್ನ ಇದೆ ವಲಯದಲ್ಲಿ ಬಹಳ ವರ್ಷ ಕೆಲಸ ಮಾಡುತ್ತಿರುವ ಹಲವು ಸಂಸ್ಥೆಗಳು ಊಹೆ ಮಾಡುತ್ತಿವೆ.
  3. ಎನರ್ಜಿ ಕ್ರೈಸಿಸ್: ನ್ಯಾಚುರಲ್ ಗ್ಯಾಸ್ ಮತ್ತು ಎಲೆಕ್ಟ್ರಿಕಲ್ ಬೆಲೆ ಬಹಳಷ್ಟು ಹೆಚ್ಚಳ ಕಂಡಿದೆ. ಯೂರೋಪು ಅಮೇರಿಕಾ ಸೇರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ರೀತಿಯ ಹೆಚ್ಚಳವನ್ನ ನಾವು ಕಾಣಬಹುದಾಗಿದೆ. ಯೂರೋಪಿನ ಎಲ್ಲಾ ದೇಶಗಳಲ್ಲೂ ಇದೊಂದು ಸಮಸ್ಯೆಯಾಗಿದೆ. ಆದರೆ ಇಂಗ್ಲಂಡ್ ಇವೆಲ್ಲವುಗಳನ್ನ ಮೀರಿ ಕೊರತೆಯನ್ನ ಎದುರಿಸುತ್ತಿದೆ. ಅವಧಿಗೆ ಮುಂಚೆ ಶುರುವಾಗಿರುವ ಚಳಿಗಾಲ ಹೆಚ್ಚಿನ ಎನೆರ್ಜಿಯನ್ನ ಬೇಡುತ್ತಿದೆ. ಚೀನಾ ದೇಶದಲ್ಲಿ ಹಣದ ಹರಿವು ಹೆಚ್ಚಾಗಿರುವುದರಿಂದ ಅಲ್ಲಿನ ಜನ ಹೆಚ್ಚಿನ ಎನೆರ್ಜಿಯನ್ನ ಬಳಸಲು ಶುರು ಮಾಡಿದ್ದಾರೆ. ಹೀಗಾಗಿ ಅವರು ರಷ್ಯಾ ದೇಶದಿಂದ ಹೆಚ್ಚಿನ ಇಂಧನ ಮತ್ತು ನೈಸರ್ಗಿಕ ಅನಿಲವನ್ನ ಕೊಂಡುಕೊಳ್ಳುತ್ತಿದ್ದಾರೆ. ಪ್ರತಿ ದಿನ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಅನಿಲ ಬೆಲೆಯನ್ನ ಇಂಗ್ಲೆಂಡ್ ಜನರು ಕೊಳ್ಳುವ ಮಟ್ಟದಲ್ಲಿ ಇಲ್ಲ. ಈಗಾಗಲೆ ಆಹಾರ ಪದಾರ್ಥ ಮತ್ತಿತರ ಸರಕುಗಳ ಮೇಲಿನ ಬೆಲೆ ಹೆಚ್ಚಳದಿಂದ ಹೈರಾಣಾಗಿರುವ ಅವರಿಗೆ ಇದು ಇನ್ನೊಂದು ಶಾಕ್. ಚೀನಾದಲ್ಲಿ ಹೆಚ್ಚಾಗಿರುವ ಎನರ್ಜಿ ಬಳಕೆ ಮತ್ತು ರಷ್ಯಾ ದೇಶದಿಂದ ಬರುವ ಎನರ್ಜಿ ಯಲ್ಲಿ ಕಡಿತವಾಗಿರುವುದು ಸಹಜವಾಗೇ ಬೆಲೆಯ ಹೆಚ್ಚಳಕ್ಕೆ ನಾಂದಿಯಾಡಿದೆ.
  4. ಜನರ ಆದಾಯದಲ್ಲಿ ಕುಸಿತ: ಬ್ರೆಕ್ಸಿಟ್ ನಂತರ ಬಹಳಷ್ಟು ಜನರಿಗೆ ಕೆಲಸ ಇಲ್ಲವಾಗಿದೆ. ಗಮನಿಸಿ ಈ ಹಿಂದೆ ಬ್ರಿಟಿಷ್ ಜನರು ಬಹಳ ಸುಲಭವಾಗಿ ಇತರೆ ಯೂರೋಪಿಯನ್ ದೇಶಗಳಿಗೆ ವಲಸೆ ಹೋಗಬಹುದಿತ್ತು. ಇದೀಗ ವಲಸೆ ನೀತಿಗಳು ಬದಲಾಗಿದೆ. ಬೇರೆ ದೇಶದಲ್ಲಿ ಮಾಡುತ್ತಿದ್ದ ಕೆಲಸದ ಕೌಶಲ್ಯ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ. ಹೊಸದಾಗಿ ಬದುಕು ಕಟ್ಟಿಕೊಳ್ಳುವ ಧಾವಂತ ಬಹಳಷ್ಟು ಜನರ ಮೇಲಿದೆ. ಇವುಗಳ ಜೊತೆಗೆ ಒಂದರ ಮೇಲೆ ಒಂದು ಹೊಸ ಆಘಾತಗಳು ಬ್ರಿಟನ್ ಸಮಾಜವನ್ನ ಮತ್ತೆ ಮೊಣಕಾಲ ಮಂಡಿಯ ಮೇಲೆ ಕೂರುವಂತೆ ಮಾಡಿದೆ. ಸಮಾಜದಲ್ಲಿ ಹೊಸ ನಿರುದ್ಯೋಗ ಸಮಸ್ಯೆ ಕೂಡ ತಾಂಡವಾಡುತ್ತಿದೆ. ಕರೋನ ನಂತರ ಎರಡೂವರೆ ಪ್ರತಿಶತ ಮಾರುಕಟ್ಟೆ ಕುಸಿತ ಕಂಡಿದೆ.
  5. ಪ್ಯಾನಿಕ್ ಕೊಳ್ಳುವಿಕೆಯಲ್ಲಿ ನಿರತರಾಗಿರುವ ಜನತೆ: ನಾವೆಷ್ಟು ಸಭ್ಯ ಸಮಾಜ ಎನ್ನುವುದು ಎಲ್ಲವೂ ಸರಿಯಿದ್ದಾಗ ಗೊತ್ತಗುವುದಿಲ್ಲ. ಅದು ಗೊತ್ತಾಗುವುದು ಕೊರತೆಯ ಸಮಯದಲ್ಲಿ. ಜಗತ್ತಿಗೆ ಅತ್ಯಂತ ಸಭ್ಯರು ಎಂದು ತೋರಿಸಿಕೊಂಡು ಮುಖವಾಡ ಹಾಕಿ ಕೊಂಡಿದ್ದ ಬ್ರಿಟಿಷರ ಮುಖವಾಡ ಕಳಚಿದೆ. ಜನರು ಪ್ಯಾನಿಕ್ ಬೈಯಿಂಗ್ ಮಾಡುತ್ತಿದ್ದಾರೆ. ಅಂದರೆ ಅವರಿಗೆ ಎರಡು ಅಥವಾ ಅದಕ್ಕೂ ಹೆಚ್ಚು ತಿಂಗಳಿಗೆ ಬೇಕಾಗುವ ವಸ್ತುಗಳನ್ನ ಇಂದೇ ಕೊಂಡು ಅದನ್ನ ಅವರು ಶೇಖರಿಸಿ ಇಡುತ್ತಿದ್ದಾರೆ. ಕ್ರಿಸ್ಮಸ್ ವೇಳೆಗೆ ವಸ್ತುಗಳ ಕೊರತೆ ಇನ್ನಷ್ಟು ಮೇಲ್ಮಟ್ಟಕ್ಕೆ ಹೋಗುತ್ತದೆ ಎನ್ನುವ ಊಹಾಪೋಹ ಜನರನ್ನ ಇನ್ನಷ್ಟು ಇಂತಹ ಖರೀದಿಗೆ ಮುಂದಾಗುವಂತೆ ಪ್ರೇರೇಪಿಸುತ್ತದೆ. ಇದು ಸಮಸ್ಯೆಯನ್ನ ಇನ್ನಷ್ಟು ಜಟಿಲ ಮಾಡುತ್ತದೆ.

ಕೊನೆ ಮಾತು: ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಕುಸಿತಗಳು ಉಂಟಾದಾಗ ಅದನ್ನ ದೊಡ್ಡದು ಮಾಡಿ ಭಾರತಕ್ಕೆ ಭವಿಷ್ಯವಿಲ್ಲ ಎನ್ನುವಂತೆ ಬಿತ್ತರಿಸುವ ಮತ್ತು ಬರೆಯುವ ಎಲ್ಲರೂ ಒಂದು ವಿಷಯವನ್ನ ಗಮನದಲ್ಲಿರಿಸಿಕೊಳ್ಳಬೇಕು. ದೇಶ ಯಾವುದೇ ಇರಲಿ , ಸಮಸ್ಯೆಗಳು ಇದ್ದೆ ಇರುತ್ತವೆ. ಬ್ರೆಕ್ಸಿಟ್ ಗೆ ಮುಂಚೆಯೇ ಬ್ರಿಟಿಷ್ ಆಡಳಿತಗಾರರಿಗೆ ತಮ್ಮ ಬಳಿ ಹೆಚ್ಚು ಪದಾರ್ಥಗಳನ್ನ ಸಂಗ್ರಹಿಸಿಡಲು ಬೇಕಾಗುವ ಯಾವ ಸೌಲಭ್ಯಗಳು ಇಲ್ಲ ಎನ್ನುವುದು ಗೊತ್ತಿತ್ತು. ಆತುರವಾಗಿ ಯೂರೋಪಿಯನ್ ಒಕ್ಕೂಟದಿಂದ ಹೇಗಾದರೂ ಹೊರ ಬಂದರೆ ಸಾಕು ಎನ್ನುವ ಏಕೈಕ ಅಜೆಂಡ ಇಟ್ಟು ಕೊಂಡು ಒಕ್ಕೂಟದಿಂದ ಹೊರಬಂದರು. ಹೊರ ಬರುವ ಸಮಯದಲ್ಲಿ ವಲಸೆ, ಎನರ್ಜಿ ಒಳಗೊಂಡು ಅನೇಕ ವಲಯಗಳಲ್ಲಿ ಸರಿಯಾದ ಒಪ್ಪಂದಗಳನ್ನ ಮಾಡಿಕೊಳ್ಳಲಿಲ್ಲ. ಇದರಿಂದ ಲಾಭವಾಗುತ್ತದೆ ಎಂದು ನಂಬಿದ್ದು ತಿರುಗುಬಾಣವಾಗಿದೆ. ಹೀಗಾಗಿ ಇಂದು ಎಸ್ಸೆನ್ಶಿಯಲ್ ವಸ್ತುಗಳ ಸರಬರಾಜಿಗೆ ಮಿಲಿಟರಿಯನ್ನ ಬಳಸಬೇಕಾದ ಸನ್ನಿವೇಶವನ್ನ ಸೃಷ್ಟಿಸಿಕೊಂಡಿದೆ. ತನ್ನ ಎಕಾನಾಮಿಯನ್ನ ಸ್ಟಾಗ್ ಫ್ಲೇಶನ್ ಗೆ ತಳ್ಳಿದೆ. ಒಂದು ಅಂದಾಜಿನ ಪ್ರಕಾರ ಇಂಗ್ಲೆಂಡ್ ಎಕಾನಮಿ ಮರಳಿ ಹಳಿಗೆ ಬರಲು ಕನಿಷ್ಠ ಎರಡು ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುವುದು ಬಿಟ್ಟು ಹೊಸ ಸಾಹಸ ಮಾಡುವ ಹುಮ್ಮಸ್ಸು, ತಾಕತ್ತು ಎರಡೂ ಸದ್ಯದ ಮಟ್ಟಿಗೆ ಕಾಣುತ್ತಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com