ಉದ್ದಿಮೆ ಶುರು ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ಮೂಲಭೂತ ಮಾಹಿತಿಗಳು (ಹಣಕ್ಲಾಸು)

ಹಣಕ್ಲಾಸು-382-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಈ ವಿಶಾಲವಾದ ಜಗತ್ತಿನಲ್ಲಿ ಇಂದಿಗೆ ನಾವು ಹತ್ತಿರತ್ತಿರ 800 ಕೋಟಿ ಜನರ ಕುಟುಂಬವಾಗಿದ್ದೇವೆ. ಅನ್ಯ ಗ್ರಹಗಳಲ್ಲಿ ಬೇರೆ ಜೀವಿಗಳಿವೆಯೇ ಎನ್ನುವ ಉತ್ಸಾಹ ಅದಕ್ಕಾಗಿ ಹುಡುಕಾಟ ನಡೆಸುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮನೆಯಲ್ಲಿನ 800 ಕೋಟಿ ಜನರ ಜೀವನದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. 

ಕೋಟ್ಯಂತರ ಜನರಿಗೆ ಮೂಲಭೂತ ಸೌಲಭಗಳಿಲ್ಲ. ಇನ್ನೂ ನೀರು, ಕರೆಂಟು ಇಲ್ಲದ ಹಳ್ಳಿಗಳು ಭೂಮಿಯ ಮೇಲೆ ಅಸಂಖ್ಯ. ಹೀಗೆ ಮೂಲಭೂತ ಸೌಲಭ್ಯವೇ ಇಲ್ಲದ ಜನರಿರುವಾಗ, ಕೆಲಸವಿಲ್ಲದೆ ಇರುವ ಜನರ ಸಂಖ್ಯೆ ಎಷ್ಟಿರಬಹುದು? ಗಮನಿಸಿ ನೋಡಿ, ಜಗತ್ತಿನ ಯಾವುದೇ ದೇಶದ ಸರಕಾರಗಳು ಎಷ್ಟು ಕೆಲಸವನ್ನು ಸೃಷ್ಟಿಸಲು ಸಾಧ್ಯ? ಸರಕಾರಿ ಕೆಲಸ ಬದಿಗಿಟ್ಟರೂ, ದೊಡ್ಡ ಕಾರ್ಪೊರೇಟ್ ಹೌಸ್ಗಳು ಕೂಡ ಅದೆಷ್ಟು ಜನರಿಗೆ ಕೆಲಸ ಕೊಡಲು ಸಾಧ್ಯ? ಹೀಗಾಗಿ ಜನ ತಮ್ಮ ಬದುಕನ್ನು ಕಂಡುಕೊಳ್ಳಲು ಸಣ್ಣ ಪುಟ್ಟ ಉದ್ಯಮಕ್ಕೆ ಕೈ ಹಾಕದೆ ಬೇರೆ ದಾರಿಯಿಲ್ಲ! ತಮ್ಮ ಕೆಲಸ, ಸಮಾಜದಲ್ಲಿ ತಮ್ಮ ಜಾಗವನ್ನು ಅವರೇ ಸೃಷ್ಟಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಇಂತಹ ಸಣ್ಣ ಪುಟ್ಟ ವ್ಯಾಪಾರ ಮಾಡುವ ಜನರನ್ನು ಕಾಣಬಹುದು.

ನಿಜವಾಗಿ ಹೇಳಬೇಕೆಂದರೆ ಇವರು ಆಯಾ ದೇಶದ ಆರ್ಥಿಕತೆಯ ಬೆನ್ನೆಲುಬು. ಇಂದಿನ ಸಮಾಜದಲ್ಲಿ ರೈತ, ಯೋಧರಿಗೆ ಅದೆಷ್ಟು ಗೌರವವಿದೆ, ಅಷ್ಟೇ ಗೌರವ ಅಥವಾ ಅದಕ್ಕಿಂತ ಒಂದಂಶ ಹೆಚ್ಚು ಗೌರವ ಇವರಿಗೂ ಸಿಗಬೇಕು. ಆದರೆ ಅದು ಸಿಗುತ್ತಿಲ್ಲ. ಜಗತ್ತಿನಲ್ಲಿರುವ ನೂರಾರು ಅನಿಶ್ಚಿತತೆಗಳನ್ನು ಎದುರಿಸಿ ಇವರು ತಮಗೆ ಕೆಲಸ ಸೃಷ್ಟಿಸಿಕೊಳ್ಳುವುದರ ಜೊತೆಗೆ, ನಾಲ್ಕಾರು ಮಂದಿಗೆ ಉದ್ಯೋಗ ಕೂಡ ಸೃಷ್ಟಿಸುತ್ತಾರೆ. ಇಂದಿನ ಲೇಖನದಲ್ಲಿ ಇಂತಹ ಸ್ವ-ಉದ್ಯೋಗ, ವ್ಯಾಪಾರ ಶುರು ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳನ್ನು ತಿಳಿದುಕೊಳ್ಳೋಣ. ಅವುಗಳನ್ನು ಮಾಡದಿರಲು ಪ್ರಯತ್ನಿಸಿದರೆ ಅಲ್ಲಿಗೆ ವ್ಯಾಪಾರದಲ್ಲಿ ಅರ್ಧ ಗೆದ್ದಂತೆ.

  1. ಕ್ಯಾಶ್ ಫ್ಲೋ ಎನ್ನುವುದು ಕೇವಲ ಲೆಕ್ಕಾಚಾರ: ವ್ಯಾಪಾರ ಶುರು ಮಾಡುವಾಗ, ಈ ವ್ಯಾಪಾರದಿಂದ ಮಾಸಿಕ ಇಷ್ಟು ಹಣಗಳಿಸಬಹುದು ಎನ್ನುವ ಲೆಕ್ಕಾಚಾರ ಮಾಡುತ್ತೇವೆ. ಹೀಗೆ ಗಳಿಸಬಹುದಾದ ಹಣದ ಲೆಕ್ಕಾಚಾರ ಸಂಭಾವ್ಯತೆಯ ಮೇಲೆ ಕೆಲಸ ಮಾಡುತ್ತದೆ. ಅಂದರೆ ನಾವು ನಮ್ಮ ಪದಾರ್ಥ ತಿಂಗಳಲ್ಲಿ ಇಷ್ಟು ಖರ್ಚಾಗುತ್ತದೆ, ಅದರಿಂದ ಇಷ್ಟು ಉತ್ಪತ್ತಿ ಬರುತ್ತದೆ ಎನ್ನುವ ಊಹೆಯನ್ನು ಮಾಡಿಕೊಳ್ಳುತ್ತೇವೆ. ನೈಜವಾಗಿ ಅದೆಷ್ಟು ಬಿಸಿನೆಸ್ ಆಯ್ತು ಎನ್ನುವುದು ತಿಂಗಳ ನಂತರ ಮಾತ್ರ ಗೊತ್ತಾಗುತ್ತದೆ. ಹೀಗಾಗಿ ನಮ್ಮ ಲೆಕ್ಕಾಚಾರ ಕಂಪ್ಯೂಟರ್ ಪರದೆಯ ಮೇಲಿರುವಂತೆ ಆಗಬೇಕು ಎನ್ನುವಂತಿಲ್ಲ. ಹೀಗಾಗಿ ಇಷ್ಟು ವ್ಯಾಪಾರ ಆಗುತ್ತದೆ ಎನ್ನುವ ಅತಿಯಾದ ವಿಶ್ವಾಸ ಬೇಡ. ಮೊದಲ ಮೂರ್ನಾಲ್ಕು ತಿಂಗಳ ಖರ್ಚಿಗೆ ಎಂದು ಒಂದಷ್ಟು ಹಣವನ್ನು ಬಂಡವಾಳ ಎನ್ನುವಂತೆ ತೆಗೆದಿರಸಬೇಕು.
  2. ಖರ್ಚುಗಳು ಮಾತ್ರ ಮೊದಲ ದಿನದಿಂದ ಶುರು: ನಾವು ಪ್ರಾರಂಭ ಮಾಡುವ ಉದ್ಯಮದಲ್ಲಿ ಹಣಗಳಿಸುವುದಕ್ಕೆ ಸಮಯ ಹಿಡಿಯುತ್ತದೆ. ಆದರೆ ಖರ್ಚು ಮಾತ್ರ ಮೊದಲ ದಿನದಿಂದ ಇನ್ನೂ ಕೆಲವೊಮ್ಮೆ ವ್ಯಾಪಾರ ಶುರುವಾಗುವುದಕ್ಕೆ ಹಲವು ತಿಂಗಳು ಮುಂಚಿನಿಂದ ಶುರುವಾಗುತ್ತದೆ. ಹೀಗಾಗಿ ಖರ್ಚಿನ ಮೇಲೆ ಹಿಡಿತವಿರಬೇಕು. ಸಾಧ್ಯವಾದರೆ ಖರ್ಚಿಲ್ಲದ, ಅಥವಾ ಅತಿ ಕಡಿಮೆ ಖರ್ಚಿರುವ ರೀತಿಯಲ್ಲಿ ವ್ಯಾಪಾರ ಶುರು ಮಾಡಬೇಕು. ಏಕೆಂದರೆ ಮೊದಲೇ ಹೇಳಿದಂತೆ ಆದಾಯದ ನಿಖರತೆ ಇರುವುದಿಲ್ಲ ಆದರೆ ಖರ್ಚು ಮಾತ್ರ ಗ್ಯಾರಂಟಿ. ಹೀಗಾಗಿ ಕಡಿಮೆ ಖರ್ಚು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಸಾಮಾನ್ಯವಾಗಿ ಜನ ಇಲ್ಲಿ ಎಡವುತ್ತಾರೆ. ಮಾಸಿಕ ನಿಖರ ಖರ್ಚುಗಳನ್ನು ತಮ್ಮ ಮೇಲೆ ಹೇರಿಕೊಂಡು ಬಿಡುತ್ತಾರೆ. ಆದಾಯದ ನಿಖರತೆ ಇಲ್ಲದೆ ಈ ರೀತಿಯ ಖರ್ಚು ತಪ್ಪು. ಉದಾಹರಣೆಗೆ ದೊಡ್ಡ ಅಂಗಡಿ ತೆರೆಯುವುದು, ಹತ್ತಾರು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಇತ್ಯಾದಿ. ಹಂತ ಹಂತವಾಗಿ ಆದಾಯಕ್ಕೆ ತಕ್ಕಂತೆ ವ್ಯಾಪಾರ ಮತ್ತು ಖರ್ಚನ್ನು ವೃದ್ಧಿಸಿಕೊಳ್ಳಬೇಕು. ನಿಖರತೆಯಿಲ್ಲದೆ ವೃಥಾ ಖರ್ಚು ಹೆಚ್ಚಿಸಿಕೊಳ್ಳುವ ವ್ಯಾಪಾರಕ್ಕೆ ಬಾಯಿ ಹಾಕಬಾರದು.
  3. ಹಾಕಿದ ಬಂಡವಾಳ ಎಷ್ಟು ತಿಂಗಳಲ್ಲಿ ಮರಳಿ ಪಡೆಯಬಹುದು?: ಏನಾದರೂ ಮಾಡಬೇಕು ಎನ್ನುವ ಜೋಶ್ನಲ್ಲಿ ಬಹಳಷ್ಟು ಜನ ಹಾಕಿದ ಬಂಡವಾಳವನ್ನು ಮರಳಿ ಪಡೆಯಲು ಎಷ್ಟುದಿನ ಬೇಕು ಎನ್ನುವುದರ ಲೆಕ್ಕಾಚಾರ ಮಾಡುವುದಿಲ್ಲ. ಇದು ಬಹಳ ಮುಖ್ಯ. ಅಂದರೆ ನೀವು ವ್ಯಾಪಾರಕ್ಕೆ ಇಂದು 10 ಲಕ್ಷ ರೂಪಾಯಿ ಹಣವನ್ನು ಹಾಕಿದರೆ ಮತ್ತು ವಾರ್ಷಿಕ ಲಾಭ ಐದು ಲಕ್ಷವಿದ್ದರೆ ಆಗ ನಿಮ್ಮ ಬಂಡವಾಳ ಎರಡು ವರ್ಷದಲ್ಲಿ ಮರಳಿ ಬಂತು ಎನ್ನುವ ಹಾಗಿಲ್ಲ. ಏಕೆಂದರೆ ಇದೆ ಹಣವನ್ನು ನೀವು ಬೇರೆಡೆ ಹೂಡಿಕೆ ಮಾಡಿದ್ದರೆ ಅದು ಕೊಡುತ್ತಿದ್ದ ಸಂಭಾವ್ಯ ರಿಟರ್ನ್ ಏನಿದೆ ಅದನ್ನು ಅಪರ್ಚುನಿಟಿ ಕಾಸ್ಟ್ ಎನ್ನುತ್ತೇವೆ, ಇದನ್ನು ಗಣನೆಗೆ ತೆಗೆದುಕೊಳ್ಳಬೇಕು. ಜೊತೆಗೆ ನಮ್ಮ ಸಮಯಕ್ಕೆ ಒಂದಷ್ಟು ಹಣವನ್ನು ವೇತನ ಎನ್ನುವಂತೆ ಲೆಕ್ಕ ಹಾಕಿ ಅದನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು. ಬಹಪಾಲು ಜನ ಇವೆರೆಡನ್ನು ಮರೆತು ಬಿಡುತ್ತಾರೆ. ಆಗ ಬಂಡವಾಳ ಮರಳಿ ಪಡೆಯಲು ನಾಲ್ಕು ವರ್ಷ ಬೇಕಾಗುತ್ತದೆ. ಹಾಕಿದ ಬಂಡವಾಳ ಮರಳಿ ಪಡೆಯಲು ನಾಲ್ಕು ವರ್ಷ ಉತ್ತಮ ಚಾಯ್ಸ್ ಅಲ್ಲ. 20 ರಿಂದ 24 ತಿಂಗಳಲ್ಲಿ ಹಾಕಿದ ಬಂಡವಾಳ ಮರಳಿ ಪಡೆಯುವ ವ್ಯಾಪಾರಗಳು ನಮ್ಮ ಆಯ್ಕೆಯಾಗಬೇಕು.
  4. ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಎಷ್ಟು: ಮೇಲಿನ ಅಂಶಕ್ಕೆ ಪೂರಕವಾಗಿ ಹಾಕಿದ ಬಂಡವಾಳಕ್ಕೆ ಎಷ್ಟು ಹಣವನ್ನು ನಾವು ಪ್ರತಿಯಾಗಿ ಗಳಿಸಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಗಮನಿಸಬೇಕು. ಏನೂ ಮಾಡದೆ ಬ್ಯಾಂಕಿನಲ್ಲಿ ಇಟ್ಟಿದ್ದರೂ ಆ ಹಣ ಒಂದಷ್ಟು ಹಣವನ್ನು ದುಡಿದು ಕೊಡುತ್ತಿತ್ತು ಅದನ್ನು ಗಣನೆಗೆ ತೆಗೆದುಕೊಂಡು ನೋಡಬೇಕು. ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ 16 ರಿಂದ 18 ಪ್ರತಿಶತ ಇಲ್ಲದಿದ್ದರೆ ವ್ಯಾಪಾರ ಮಾಡಿ ಪ್ರಯೋಣವೇನು ಇಲ್ಲ.
  5. ಶುರು ಮಾಡಲಿರುವ ವ್ಯಾಪಾರಕ್ಕೆ ಭವಿಷ್ಯವಿದೆಯೇ?: ನಾವು ಶುರು ಮಾಡಲಿರುವ ವ್ಯಾಪಾರ ಇನ್ನೆಷ್ಟು ದಿನ ಚಾಲ್ತಿಯಲ್ಲಿರುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಹೋಟೆಲ್ ಇತ್ಯಾದಿ ಸರ್ವಿಸ್ ನೀಡುವ ವ್ಯಾಪಾರಗಳು ಸದಾ ನಡೆಯುತ್ತವೆ. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಕ್ಷಣದಲ್ಲಿ ಬದಲಾಗಿ ಬಿಡುತ್ತದೆ. ಇದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಯಾರೂ ನಿಖರವಾಗಿ ಹೇಳಲಾರರು ನಿಜ, ಆದರೂ ಚಾಲನೆ ಮಾಡಲಿರುವ ವಲಯಕ್ಕೆ ಡಿಮ್ಯಾಂಡ್ ಇದೆಯೇ, ಮುಂದೆಯೂ ಇರಲಿದೆಯೇ ಎನ್ನುವ ಸಣ್ಣ ಲೆಕ್ಕಾಚಾರವಿಲ್ಲದೆ ಧುಮುಕಬಾರದು.
  6. ಹಣಕಾಸು ಬೆರೆಸುವುದು ಎಂದಿಗೂ ಮಾಡಬೇಡಿ: ಮುಕ್ಕಾಲು ಪಾಲು ಸಣ್ಣ ವ್ಯಾಪಾರಸ್ಥರು ತಮ್ಮ ಹಣ ಮತ್ತು ವ್ಯಾಪಾರದ ಹಣ ಎಂದು ವಿಭಜನೆ ಮಾಡುವುದಿಲ್ಲ. ಎಲ್ಲವೂ ನನ್ನದೇ ಅಲ್ಲವೇ ಎನ್ನುವ ಧೋರಣೆಯನ್ನು ಹೊಂದಿರುತ್ತಾರೆ. ಇದು ತಪ್ಪು. ವ್ಯಾಪಾರ ಬೇರೆ ಮತ್ತು ನಾನು ಬೇರೆ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ವ್ಯಾಪಾರಕ್ಕೆ ಹಾಕಿದ ಪ್ರತಿ ರೂಪಾಯಿ ಮತ್ತು ಅಲ್ಲಿಂದ ಹೊರತೆಗೆದ ಪ್ರತಿ ರೂಪಾಯಿಗೂ ಲೆಕ್ಕ ಇಡಬೇಕು. ಇಲ್ಲವಾದಲ್ಲಿ ವ್ಯಾಪಾರ ಎನ್ನುವುದು ನಿಂತಲ್ಲೇ ಓಟದ ಫಲಿತಾಂಶ ನೀಡುತ್ತದೆ. ವರ್ಷ ಪೂರ್ತಿ ಓಡಿದ್ದೀರಿ ಆದರೇನು ಎಲ್ಲೂ ತಲುಪದೇ ಇದ್ದ ಜಾಗದಲ್ಲೇ ಇರುತ್ತೀರಿ. ಹೀಗಾಗಿ ನಿಖರ ಲೆಕ್ಕ ಬೇಕೆಂದರೆ ಹಣವನ್ನು ಬೆರೆಸಬಾರದು. ಲೆಕ್ಕಾಚಾರ ಸರಿಯಾಗಿರಬೇಕು.
  7. ವಿಶ್ವಾಸದ ಜೊತೆಗೆ ಜಾಗ್ರತೆ ಕೂಡ ಇರಲಿ: ಉದ್ಯಮ ಪರವಾಗಿಲ್ಲ ಒಂದು ಹಂತದಲ್ಲಿ ನಡೆದುಕೊಂಡು ಹೋಗುತ್ತಿದೆ ಎನ್ನುವ ಕಾಲದಲ್ಲಿ ಈ ಮಾತು ನೆನಪಿನಲ್ಲಿರಲಿ. ಮುಕ್ಕಾಲು ಪಾಲು ಜನ ಸಿಕ್ಕ ಸಣ್ಣಪುಟ್ಟ ಜಯದಿಂದ ಅತಿಯಾದ ವಿಶ್ವಾಸದಿಂದ ಇನ್ನಷ್ಟು ಸಾಲ ಮಾಡಿ ದೊಡ್ಡ ಮಟ್ಟದಲ್ಲಿ ವ್ಯಾಪಾರವನ್ನು ವಿಸ್ತರಿಸಲು ನೋಡುತ್ತಾರೆ. ದೊಡ್ಡದಾಗಿ ಬೆಳೆಯಬೇಕು ಎನ್ನುವ ಕನಸು, ವಿಶ್ವಾಸ ತಪ್ಪಲ್ಲ. ಆದರೆ ಇಡುವ ಹೆಜ್ಜೆಯಲ್ಲಿ ಒಂದಷ್ಟು ಜಾಗ್ರತೆಯಿರಲಿ. ವ್ಯಾಪಾರ, ವಹಿವಾಟು ನಮ್ಮ ಕೈಮೀರಿ ಬೆಳೆಯುತ್ತ ಹೋದಂತೆ ಅಲ್ಲಿಗೆ ಬೇರೆ ವೃತ್ತಿಪರರ ಅವಶ್ಯಕತೆ ಹೆಚ್ಚಾಗುತ್ತದೆ. ನಮ್ಮ ವಿಷನ್ ಬದಲಾಗುವ, ಒಂದಷ್ಟು ಹೊಂದಾವಣಿಕೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಸೃಷ್ಟಿಯಾಗುತ್ತದೆ. ಅದಕ್ಕೆ ಮೊದಲು ಮಾನಸಿಕ ಸಿದ್ದತೆಯ ಅವಶ್ಯಕತೆಯಿರುತ್ತದೆ. ಹೀಗಾಗಿ ಸ್ವಲ್ಪ ನಿಧಾನಿಸಿ ಹೆಜ್ಜೆ ಇಡಬೇಕು. ಸುಸ್ಥಿರ ಬೆಳವಣಿಗೆ ಎಂದಿಗೂ ಒಳ್ಳೆಯದು. ಸಾಲ ಮಾಡಿ ಅವಶ್ಯಕತೆಗಿಂತ ಹೆಚ್ಚಿನ ಮಟ್ಟಕ್ಕೆ ಕೈ ಹಾಕುವುದಕ್ಕಿಂತ ಹಂತ ಹಂತವಾಗಿ ಮೇಲೇರುವುದು ಸುರಕ್ಷಿತ ಮತ್ತು ಸುಸ್ಥಿರ.

ಕೊನೆಮಾತು: ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲಾ ನಾಗರೀಕರಿಗೂ ಒಂದು ಕೆಲಸ ಒದಗಿಸುವುದು ಸಾಧ್ಯವಿಲ್ಲದ ಮಾತು. ನಮ್ಮ ದೇಶದ ಜಿಡಿಪಿಯ 40 ಪ್ರತಿಶತ ಇಂತಹ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಂದ ಬರುತ್ತಿದೆ ಎಂದರೆ ಈ ಉದ್ದಿಮೆಗಳ ಮಹತ್ವ ಗೊತ್ತಾಗುತ್ತದೆ. ಈ ವಲಯದ ಉದ್ದಿಮೆದಾರರಿಗೆ ಕೊಡಬೇಕಾದ ಗೌರವ ಸಮಾಜ ಕೊಡುತ್ತಿಲ್ಲ ಎನ್ನುವುದು ನಿಜಕ್ಕೂ ಖೇದಕರ. ಸರಕಾರ ಕೂಡ ಇವುಗಳ ಅಭಿವೃದ್ಧಿಗೆ ನೀಡುತ್ತಿರುವ ಸವಲತ್ತು, ಗಮನ ಕೂಡ ಸಾಲದು. ಈ ವಲಯದ ಜನರಿಗೆ ಸಮಾಜವಾಗಿ ನಾವು ಧೈರ್ಯ ಮತ್ತು ಬೆಂಬಲ ನೀಡಬೇಕು. ಸರಕಾರ ಇನ್ನಷ್ಟು ಸರಳ ಮತ್ತು ಸುಸ್ಥಿರ ನಿಯಮಗಳನ್ನು ತರಬೇಕು. ತೆರಿಗೆಯಲ್ಲಿ ಒಂದಷ್ಟು ವಿನಾಯ್ತಿ ಕೂಡ ನೀಡಬೇಕು. ಈ ವಲಯ ಬೆಳೆದಷ್ಟು ದೇಶದ ಆರ್ಥಿಕತೆಯೂ ಗಟ್ಟಿಯಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com