ಹೂಡಿಕೆ ಮಾಡಬೇಕಾದ ಅವಶ್ಯಕತೆ ಏಕೆ ಬಂತು? (ಹಣಕ್ಲಾಸು)

ಹಣಕ್ಲಾಸು-344ರಂಗಸ್ವಾಮಿ ಮೂನಕನಹಳ್ಳಿ
ಹೂಡಿಕೆ (ಸಂಗ್ರಹ ಚಿತ್ರ)
ಹೂಡಿಕೆ (ಸಂಗ್ರಹ ಚಿತ್ರ)

ಗಮನಿಸಿ ನೋಡಿ ಹಿಂದೆ ಅಂದರೆ 1950ಕ್ಕೂ ಮುಂಚೆ ವಿತ್ತ ಜಗತ್ತು ಇಂದಿನ ರೀತಿ ಇರಲಿಲ್ಲ. ಆಗೆಲ್ಲಾ ವಸ್ತುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗುತ್ತಿರಲಿಲ್ಲ. 

ಎರಡು ಮಹಾಯುದ್ಧದ ನಂತರ ವಿತ್ತ ಜಗತ್ತು ಪೂರ್ಣವಾಗಿ ಬದಲಾಗಿ ಹೋಯ್ತು. ಸರಕು ಮತ್ತು ಸೇವೆಯ ಬೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಹೋಯ್ತು. ಹಣದ ಮೇಲೆ ಮುದ್ರಿಸಿದ್ದ ಬೆಲೆಯನ್ನ ನಿತ್ಯ ಬದಲಿಸಲು ಆಗದು, ಈ ರೀತಿ ಮುಖಬೆಲೆಯನ್ನ ನಾಮಿನಲ್ ಮನಿ ಎನ್ನಲಾಗುತ್ತದೆ. ಅಂದರೆ ಗಮನಿಸಿ 10 ರೂಪಾಯಿ ರೂಪಾಯಿ ಮುಖ ಬೆಲೆಯ ನೋಟು ಭಾರತದ ಉದ್ದಗಲಕ್ಕೂ ಹತ್ತು ರೂಪಾಯಿ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಆದರೆ ಹತ್ತು ರುಪಾಯಿಗೆ ಪುಟಾಣಿ ಹಳ್ಳಿಯಲ್ಲಿ ಒಂದು ಎಳನೀರು ಕೊಳ್ಳಬಹುದು, ಅದೇ ನಗರ ಪ್ರದೇಶದಲ್ಲಿ ಅದಕ್ಕೆ 30 ರೂಪಾಯಿ ನೀಡಬೇಕಾಗುತ್ತದೆ. ಇದಕ್ಕೆ ರಿಯಲ್ ವ್ಯಾಲ್ಯೂ ಆಫ್ ಮನಿ ಎನ್ನುತ್ತಾರೆ. ಇದರರ್ಥ ಸ್ಥಳದಿಂದ ಸ್ಥಳಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಹಣದ ಮೌಲ್ಯ ಬದಲಾಗುತ್ತದೆ. ಇದರ ಜೊತೆಗೆ ಸಮಯವೂ ಸೇರಿಕೊಂಡಾಗ ಹೆಚ್ಚಾಗುವ ಬೆಲೆಗೆ ಹಣದುಬ್ಬರ ಎನ್ನಲಾಗುತ್ತದೆ. ಹಣದ ಮುಖಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ ಅದರ ಕೊಳ್ಳುವ ಶಕ್ತಿ ಕುಸಿತವಾದರೆ ಅದು ಹಣದುಬ್ಬರ. ಸಮಯದ ಜೊತೆಗೆ ಹಣ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ ಎನ್ನುವುದು ಇದರಿಂದ ತಿಳಿಯುತ್ತದೆ. ಹಾಗಾದರೆ ಸಮಯದ ಜೊತೆಗೆ ಹಣದ ಮೌಲ್ಯವನ್ನ ಹಾಗೆ ಉಳಿಸಿಕೊಳ್ಳುವುದಕ್ಕೆ ಅಥವಾ ಹಣದ ಮೌಲ್ಯವನ್ನ ಹೆಚ್ಚು ಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು? ಎನ್ನುವ ಪ್ರಶ್ನೆ ಜನರ ಮುಂದೆ ಎದುರಾಯ್ತು. ಅದಕ್ಕೆ ಉತ್ತರವಾಗಿ ಹೂಡಿಕೆ ಸೃಷ್ಟಿಯಾಯ್ತು. ಇದು ಅವಶ್ಯಕತೆಯಾಗಿ ಬದಲಾಗಿ ಹೋಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಷೇರು ಮಾರುಕಟ್ಟೆಯಿರಲಿ ಅಥವಾ ಬೇರಾವುದೇ ಹೂಡಿಕೆ, ಸಮಾಜದಲ್ಲಿ ಹೂಡಿಕೆ ಸಮಯದಲ್ಲಿ ಹಣದುಬ್ಬರ ಎಷ್ಟಿದೆ ಅದಕ್ಕಿಂತ ಹೆಚ್ಚಿನ ಲಾಭವನ್ನ ತಂದುಕೊಂಡುವ ಹೂಡಿಕೆಯನ್ನ ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಹೂಡಿಕೆದಾರನಿಗೂ ಇಂದಿನ ಹಣದುಬ್ಬರ ಎಷ್ಟು ಎನ್ನುವುದು ತಿಳಿದರಬೇಕಾಗುತ್ತದೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಹಣದುಬ್ಬರ 6.5 ಎಂದುಕೊಂಡರೆ, ನಮ್ಮ ಹೂಡಿಕೆಯಿಂದ ಬರುವ ಆದಾಯ 6.5 ಪ್ರತಿಶತಕ್ಕಿಂತ ಹೆಚ್ಚಾಗಿರಬೇಕು. ಅದಕ್ಕಿಂತ ಕಡಿಮೆ ಇದ್ದರೆ ಅದನ್ನ ನೆಗಟಿವ್ ಗ್ರೋಥ್ ಅಥವಾ ನೆಗಟಿವ್ ಇಂಟರೆಸ್ಟ್ ರೇಟ್ ಎನ್ನುತ್ತಾರೆ. ಉದಾಹರಣೆ ನೋಡೋಣ. ನಮ್ಮ ಹೂಡಿಕೆ 6 ಪ್ರತಿಶತ ಆದಾಯವನ್ನ ತಂದುಕೊಟ್ಟರೆ, ನಮ್ಮ ಆದಾಯ ನೆಗಟಿವ್ ಅಂದರೆ 0.5 ಪ್ರತಿಶತ ಕುಸಿತ ಕಂಡಿದೆ ಎಂದರ್ಥ.

ಇದನ್ನ ಸೂತ್ರ 1 ಎನ್ನೋಣ. ಇದರ ಪ್ರಕಾರ ಹೂಡಿಕೆಯಿಂದ ಬಂದ ಆದಾಯದ ಪ್ರತಿಶತವನ್ನ ಸದ್ಯದ ಹಣದುಬ್ಬರದ ಪ್ರತಿಶತದೊಂದಿಗೆ ಕಳೆದಾಗ ಉಳಿಯುವ ಪ್ರತಿಶತ ಧನಾತ್ಮಕವಾಗಿರಬೇಕು, ಅದು ಋಣಾತ್ಮಕವಾಗಿದ್ದರೆ ಮೂಲಧನದ ಮೌಲ್ಯದಲ್ಲಿ ಕುಸಿತವಾಗಿದೆ ಎಂದರ್ಥ. ಹೂಡಿಕೆ ಮಾಡುವ ಮುನ್ನ ಈ ಸೂತ್ರವನ್ನ ಎಂದಿಗೂ ಮರೆಯಬಾರದು.

ಇದರಿಂದ ಒಂದು ವಿಷಯವಂತೂ ಸರಳವಾಗಿ ತಿಳುವಳಿಕೆಗೆ ಬಂದಾಯ್ತು ಅಲ್ಲವೇ? ಉಳಿಸಿದ ಹಣ ಸಮಯ ಕಳೆದಂತೆ ಮೌಲ್ಯ ಕಳೆದುಕೊಳ್ಳುತ್ತದೆ ಹೀಗಾಗಿ ಅದನ್ನ ಉತ್ತಮವಾಗಿ ಹೂಡಿಕೆ ಮಾಡಬೇಕಾಗುತ್ತದೆ. ನಮ್ಮ ಮುಂದೆ ಹೂಡಿಕೆಯ ಹಲವು ಆಯ್ಕೆಗಳಿವೆ. ಅವುಗಳಲ್ಲಿ ಪ್ರಮುಖವಾಗಿ:

  1. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ .
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್
  3. ನ್ಯಾಷನಲ್ ಪೆನ್ಷನ್ ಸ್ಕೀಮ್
  4. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್
  5. ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮುಗಳು
  6. ಇನ್ಶೂರೆನ್ಸ್ ಸ್ಕೀಮುಗಳು-ಎಂಡೋವೇಮೆಂಟ್, ಮನಿ ಬ್ಯಾಕ್ ಇತ್ಯಾದಿ
  7. ಆರ್ಬಿಐ ಅಥವಾ ಗವರ್ನಮೆಂಟ್ ಆಫ್ ಇಂಡಿಯಾ ಬಾಂಡ್ಗಳು.
  8. ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳು
  9. ಗೋಲ್ಡ್ ಮತ್ತು ಸಿಲ್ವರ್, ಮತ್ತಿರರ ಲೋಹಗಳು.
  10. ಮ್ಯೂಚುಯಲ್ ಫಂಡ್ಸ್
  11. ಷೇರುಗಳು
  12. ಬಾಂಡ್ ಮತ್ತು ಡಿಬೆಂಚರ್ಗಳು
  13. ಪೆನ್ಷನ್ ಮತ್ತು ಆನ್ಯೂಟಿ ಸ್ಕೀಮ್ಗಳು
  14. ಯುಲಿಪ್ಗಳು
  15. ತೆರಿಗೆ ಉಳಿತಾಯದ ದಾರಿಗಳು
  16. ಕಮೊಡಿಟಿಸ್
  17. ರಿಯಲ್ ಎಸ್ಟೇಟ್ .
  18. ಇನ್ನಿತರೆ ಹೂಡಿಕೆ ಮಾರ್ಗಗಳು.

ಇವುಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದಕ್ಕೆ ಹೂಡಿಕೆದಾರನ ಪೂರ್ಣ ವಿತ್ತ ವಿವರಗಳು ಬೇಕಾಗುತ್ತದೆ. ದಾರಿಯಲ್ಲಿ ಸಿಕ್ಕಾಗ ನಾನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕೆಂದಿದ್ದೇನೆ ಇದು ಸರಿಯೇ? ಎನ್ನುವ ಪ್ರಶ್ನೆಗೆ ಸರಿ ಅಥವಾ ತಪ್ಪು ಎಂದು ಉತ್ತರಿಸಲು ಸಾಧ್ಯವಿಲ್ಲ. ಹಾಗೆಯೇ ಡೆಟ್ ಅಥವಾ ಈಕ್ವಿಟಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಕೂಡ. ಸಂಪೂರ್ಣ ವಿವರವಿಲ್ಲದೆ ಇಲ್ಲಿ ಹೂಡಿಕೆ ಮಾಡಿ ಎನ್ನುವುದು ತಪ್ಪು. ಆದರೆ ನಿಮ್ಮ ಹೂಡಿಕೆ ಸ್ಮಾರ್ಟ್ ಆಗಿರಬೇಕು .

ಹೌದು SMART , S = ಸ್ಪೆಸಿಫಿಕ್ , M = ಮೆಸ್ಸುರಬಲ್ , A = ಅಚೀವಬೆಲ್ , R = ರಿಯಲಿಸ್ಟಿಕ್  ಮತ್ತು T = ಟೈಮ್ಲಿ . ಇದನ್ನ ಸ್ವಲ್ಪ ವಿಸ್ತಾರವಾಗಿ ನೋಡೋಣ . ಸ್ಪೆಸಿಫಿಕ್ ಎಂದರೆ ನಿಮ್ಮ ಹೂಡಿಕೆ ದೀರ್ಘಾವಧಿಯದ್ದೇ , ಅಲ್ಪಾವಧಿಯದ್ದೇ ಅಥವಾ ಇವರೆಡರ ಮಧ್ಯದ ಹೂಡಿಕೆಯ ಎನ್ನುವ ನಿಖರತೆ ಇರಲಿ. ಮೇಶರಬಲ್ ಎಂದರೆ ಯಾವುದೇ ಹಿಡನ್ ಅಜೆಂಡಾ ಇಲ್ಲದೆ ಸರಿಯಾದ ಮೌಲ್ಯ ತಿಳಿಯುವಂತಿರಬೇಕು. ನಮ್ಮ ಟಾರ್ಗೆಟ್ ಲಾಭಂಶ ಸಾಧಿಸುವಂತಹ ಸಂಖ್ಯೆ ಹೊಂದಿರಬೇಕು ಮತ್ತು ಇಂತಹ ಸಂಖ್ಯೆ ಆಕಾಶಕ್ಕೆ ಏಣಿ ಹಾಕುವಂತೆ ಇರದೇ ವಾಸ್ತವಿಕವಾಗಿರಬೇಕು, ಮತ್ತು ಇಂತಹ ಹೂಡಿಕೆಗಳ ಸಮಯ ಸರಿಯಾಗಿರಬೇಕು. ಗಮನಿಸಿ ಟೈಮ್ ಎನ್ನುವುದು ಷೇರು ಮಾರುಕಟ್ಟೆಯಲ್ಲಿ ಬಹಳ ಮುಖ್ಯ , ಇದು ಮಿತ್ರನೂ ಹೌದು ಅದೇ ಸಮಯದಲ್ಲಿ ಅತ್ಯಂತ ಘಾತಕ ಶತ್ರುವೂ ಹೌದು. ಹೀಗಾಗಿ ಹೂಡಿಕೆಗೆ ಮುನ್ನ ಕೆಳಗಿನ ಕೆಲವು ಅಂಶಗಳನ್ನ ಮನನ ಮಾಡಿಕೊಳ್ಳಬೇಕು .

  • ಹೂಡಿಕೆಯ ಜಗತ್ತಿನಲ್ಲಿ, ಮಾರುಕಟ್ಟೆಯಲ್ಲಿ ನಾನೆಲ್ಲಿದ್ದೇನೆ? ಎನ್ನುವ ಅವಲೋಕನ ಬಹಳ ಮುಖ್ಯ: ನಿಮಗೆ ಈಗಾಗಲೇ ಷೇರು ಮಾರುಕಟ್ಟೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಪರಿಜ್ಞಾನ ಇರುತ್ತದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ನನ್ನ ಸ್ಥಾನವೇನು? ಎಲ್ಲಿದ್ದೇನೆ? ಮತ್ತು ತಲುಪಬೇಕಾದ ಗಮ್ಯ ಯಾವುದು? ಎನ್ನುವ ರೂಪುರೇಷೆ ಸಿದ್ಧವಿರಬೇಕು. ಇವತ್ತಿನ ನನ್ನ ಆರ್ಥಿಕ ಪರಿಸ್ಥಿತಿ ಏನು ಎನ್ನುವುದು ನಿಮಗಿಂತ ಚನ್ನಾಗಿ ಯಾರಿಗೆ ಗೊತ್ತಿರಲು ಸಾಧ್ಯ? ಇವತ್ತಿನ ನನ್ನ ಆಸ್ತಿ ಮತ್ತು ಲಿಯಬಿಲಿಟಿ ಎಷ್ಟು? ನನ್ನ ಕ್ಯಾಶ್ ಫ್ಲೋ ಸ್ಥಿತಿಯೇನು? ಎಷ್ಟು ತೆರಿಗೆ ಕಟ್ಟುತ್ತಿದ್ದೇನೆ? ಯಾವ ಸ್ಲಾಬ್ ತೆರಿಗೆಯಲ್ಲಿ ಆದಾಯವಿದೆ? ಕುಟುಂಬದ ಎಷ್ಟು ಜನ ಸದಸ್ಯರು ಅವಲಂಬಿತರು? ತಕ್ಷಣದ ಭವಿಷ್ಯದಲ್ಲಿ ಹಣದ ಅವಶ್ಯಕತೆ ಬಿಳಲಿದೆಯೇ? ಹೀಗೆ ಪ್ರಶ್ನೆಗಳನ್ನ ಹಾಕಿಕೊಂಡು ಅವಕ್ಕೆ ಸಮರ್ಪಕ ಉತ್ತರವನ್ನ ಕಂಡುಕೊಳ್ಳಬೇಕು. ಈ ಎಲ್ಲಾ ಉತ್ತರಗಳೂ ನೇರವಾಗಿ ಮತ್ತು ಪ್ರಾಮಾಣಿಕವಾಗಿ ಇರಬೇಕು .
  • ಹಣಕಾಸು ಗುರಿಗಳು ಸ್ಥಿರವಿರಬೇಕು: ಹೂಡಿಕೆ ಜಗತ್ತಿನಲ್ಲಿ ನಿತ್ಯವೂ ಬದಲಾವಣೆ ಸಾಧ್ಯವಿಲ್ಲದ ಮಾತು. ಹೀಗಾಗಿ ಹೂಡಿಕೆಗೆ ಮುನ್ನ ಹಣಕಾಸು ಗುರಿಗಳು ನಿಖರವಾಗಿರಬೇಕು. ಉದಾಹರಣೆಗೆ ಮುಂದಿನ ಐದು  ವರ್ಷದಲ್ಲಿ ಮಗ /ಮಗಳ ಉನ್ನತ ವಿದ್ಯಾಭ್ಯಾಸಕ್ಕೆ ಇಂದಿನ ದಿನದ ಅಂದರೆ ಕರೆಂಟ್ ಕಾಸ್ಟ್ 20 ಲಕ್ಷ ಎಂದುಕೊಂಡರೆ ಐದು ವರ್ಷದ ನಂತರ ಅದು 25/30 ಲಕ್ಷವಾಗಿರುತ್ತದೆ. ಇದನ್ನ ಫ್ಯೂಚರ್ ಕಾಸ್ಟ್ ಎನ್ನುತ್ತೇವೆ. ಹಣದುಬ್ಬರವನ್ನ ಲೆಕ್ಕ ಮಾಡಿ ಫ್ಯೂಚರ್ ಕಾಸ್ಟ್ ಇಷ್ಟು ಎಂದು ಅಂದಾಜಿಸಬಹುದು. ಹೀಗಾಗಿ ಗುರಿ ಸ್ಪಷ್ಟವಿರಬೇಕು. ಯಾವ ಕಾರಣಕ್ಕೆ ಯಾವ ಹೂಡಿಕೆ ಎನ್ನುವುದನ್ನ ಹೆಸರಿಸಬೇಕು, ಆಗ ಹೂಡಿಕೆಯಲ್ಲಿ ಒಂದು ಗಂಭೀರತೆ ತಾನಾಗೇ ಬರುತ್ತದೆ.
  • ಅಸೆಟ್ ಆಲೋಕೇಷನ್ ಮತ್ತು ಅಪಾಯದ ಮೌಲ್ಯಮಾಪನ ಮಾಡಿಕೊಳ್ಳಬೇಕು: ಈಕ್ವಿಟಿ , ಡೆಟ್, ರಿಯಲ್ ಎಸ್ಟೇಟ್ ,ಕಮಾಡಿಟಿಸ್ ಮತ್ತು ಕ್ಯಾಶ್ ಇವುಗಳನ್ನ ಸ್ಥೂಲವಾಗಿ ಅಸೆಟ್ ಎಂದು ವರ್ಗಿಕರಿಸಬಹುದು. ಒಂದು ಅಥವಾ ಹೆಚ್ಚಿನ ಈ ವರ್ಗದ ಮೇಲಿನ ಹೂಡಿಕೆಯನ್ನ ಅಸೆಟ್ ಅಲೋಕೇಷನ್ ಎನ್ನಲಾಗುತ್ತದೆ. ಪ್ರತಿಯೊಂದು ತನ್ನದೇ ಆದ ಅಪಾಯ ಮತ್ತು ಅವಕಾಶದೊಂದಿಗೆ ಬರುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ವರ್ಗಿಕರಣದ ಅವಶ್ಯಕತೆ ಇರುತ್ತದೆ.
  • ಎಲ್ಲಿದ್ದೇನೆ-ಎಲ್ಲಿಗೆ ತಲುಪಬೇಕು ಎನ್ನುವ ಕಂದಕ ತುಂಬುತ್ತಿರಬೇಕು: ನಮ್ಮ ಅಸೆಟ್ ಅಲೊಕೇಶನ್ ಎಷ್ಟಿದೆ? ಎಷ್ಟು ಹಣವನ್ನ ನೀಡುತ್ತಿದೆ ಎನ್ನುವ ಆಧಾರದ ಮೇಲೆ ವಾರ್ಷಿಕ ಆದಾಯದಲ್ಲಿ ಯಾವುದರ ಮೇಲೆ ಎಷ್ಟು ಮರು ಹೂಡಿಕೆ ಮಾಡಬೇಕು ಎನ್ನುವುದನ್ನ ಕಂಡುಕೊಳ್ಳಬೇಕು. ನಾವು ಕಲ್ಪಿಸಕೊಂಡಿರುವ ಬಿಗ್ ಪಿಚ್ಚರ್ ತಲುಪಲು ಬೇಕಾದ ಬದಲಾವಣೆಗಳನ್ನ ಸದಾ ಮಾಡಿಕೊಳ್ಳುತ್ತಿರಬೇಕು. ನಾವಿರುವ ಸ್ಥಿತಿಯಿಂದ ತಲುಪಬೇಕಾದ ಸ್ಥಿತಿಯ ನಡುವೆ ಅಂತರ ಬಹಳವಿದ್ದರೆ ಏನು ಮಾಡಬೇಕು ಎನ್ನುವುದರ ಕೆಡೆಗೆ ಕೂಡ ಗಮನ ನೀಡಬೇಕಾಗುತ್ತದೆ.

ಕೊನೆಮಾತು: ಹೂಡಿಕೆಯ ಜೊತೆಗೆ ಒಂದು ಗುರಿಯನ್ನ ಬೆಸೆದುಕೊಂಡಾಗ ಹೂಡಿಕೆಗೆ ಸರಾಗವಾಗುತ್ತದೆ. ಅಂದರೆ ಈ ಹೂಡಿಕೆ ಏಕೆ ಮಾಡುತ್ತಿದ್ದೇನೆ? ಎನ್ನುವ ಅರಿವಿರಬೇಕು. ಉದಾಹರಣೆಗೆ ಮಗ/ಮಗಳ ಉನ್ನತ ವಿದ್ಯಾಭ್ಯಾಸಕ್ಕೆ, ರಿಟೈರ್ಮೆಂಟ್ಗಾಗಿ, ವಿದೇಶಿ ಪ್ರಯಾಣ ಮಾಡಲು ಹೀಗೆ ಏನಾದರೊಂದು ಕಾರಣ, ಗುರಿಯ ಜೊತೆಗಿನ ಹೂಡಿಕೆ ಹೆಚ್ಚಿನ ನಿಖರತೆ ನೀಡುತ್ತದೆ. ಕಾರಣವಿಲ್ಲದ ಹೂಡಿಕೆಗಿಂತ ಪ್ರತಿಯೊಂದು ಹೂಡಿಕೆಯನ್ನೂ ಒಂದು ಕಾರಣದೊಂದಿಗೆ ಅಥವಾ ಗುರಿಯೊಂದಿಗೆ ಜೋಡಿಸುವುದು ಉತ್ತಮ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com