ಹಣವೆಂದರೆ ಹೆಣವೂ ಬಾಯೇಕೆ ಬಿಡುತ್ತದೆ? (ಹಣಕ್ಲಾಸು)

ಹಣಕ್ಲಾಸು-367-ರಂಗಸ್ವಾಮಿ ಮೂಕನಹಳ್ಳಿ
ಹಣ (ಸಂಗ್ರಹ ಚಿತ್ರ)
ಹಣ (ಸಂಗ್ರಹ ಚಿತ್ರ)
Updated on

ಹಣ ಯಾರಿಗೆ ಬೇಡ ಹೇಳಿ? ಹಣದ ಅವಶ್ಯಕತೆಯಿಲ್ಲ ಎನ್ನುವವರ ಸಂಖ್ಯೆ ಈ ಭೂಮಿಯ ಮೇಲೆ ಎಷ್ಟಿರಬಹುದು? ಹಣವಿಲ್ಲದ ಜೀವನವನ್ನ ಇಂದಿನ ಮಟ್ಟಿಗೆ ಊಹಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಹಣ ಗಳಿಸದೆ ಇರುವವನ್ನ ಮಹಾಪರಾಧ ಮಾಡಿದವನು ಎನ್ನುವಂತೆ ನಮ್ಮ ಸಮಾಜದಲ್ಲಿ ನೋಡಲಾಗುತ್ತದೆ. ಹಣ ಮಾಡಿಲ್ಲದೆ ಇರುವುದೇ ಆತನ ದೊಡ್ಡ ತಪ್ಪು ಎನ್ನುವಂತೆ ವರ್ತಿಸುತ್ತದೆ. ಧನಿಕನ ನೂರು ತಪ್ಪುಗಳು ಕೂಡ ಸಮಾಜ ಮನ್ನಿಸುತ್ತದೆ. ಹಣದ ಈ ಪ್ರಚಂಡ ಗುಣವಿದೆಯಲ್ಲ ಅದರ ಹಿಂದೆ ಸಕಲರೂ ಓಡುತ್ತಿದ್ದಾರೆ.

ಇದನ್ನೇ ಸ್ವಲ್ಪ ಉತ್ಪ್ರೇಕ್ಷೇ ಮಾಡಿ ಜೀವವಿಲ್ಲದ ಹೆಣವೂ ಹಣ ಎಂದೊಡನೆ ಎದ್ದು ಕುಳಿತು ಬಿಡುತ್ತದೆ ಎನ್ನಲಾಗಿದೆ. ಜೀವವಿಲ್ಲದ ಹೆಣವೇ ಬಾಯಿ ಬಿಡುತ್ತದೆ ಎಂದ ಮೇಲೆ ಜೀವವಿರುವವರ ಕಥೆಯೇನು? ಹಣಕ್ಕಿರುವ ಮಹತ್ವವನ್ನ ವಿವರಿಸಲು ಇಂತಹ ಒಂದು ಉಪಮೆಯನ್ನ ಬಳಸಿಕೊಳ್ಳಲಾಗಿದೆ.

ಹಣ ಇಂದಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ. ಮುಖ್ಯವಾಗಿ ಹಣಗಳಿಕೆಯನ್ನ ಮನುಷ್ಯ ಮಾಡಲು ಎರಡು ಕಾರಣಗಳಿವೆ.

  1. ಮೂಲಭೂತ ಕಾರಣ: ಆಹಾರ, ಮನೆ, ಬಟ್ಟೆ ಮತ್ತು ಮಕ್ಕಳ ವಿದ್ಯಾಭ್ಯಾಸದಂತವು ಸೇರಿಕೊಳ್ಳುತ್ತವೆ. ಪ್ರತಿಯೊಬ್ಬ ಜೀವಿಯೂ ಕನಿಷ್ಠ ನಿತ್ಯ ಜೀವನದ ಅಂಗವಾಗಿರುವ ಈ ಕಾರಣಗಳಿಗಾಗಿ ದುಡಿಯಲೇಬೇಕು , ಹಣ ಗಳಿಸಲೇ ಬೇಕು. ಇಂದು ಸಮಾಜ ಈ ಬೇಸಿಕ್ ನೀಡ್ ನಿಂದ ಬಹಳ ಮುಂದೆ ಬಂದಿದೆ. ಹಣ ಗಳಿಕೆ ಎನ್ನುವುದು ಬೇರೆಯ ರೂಪವನ್ನ ಪಡೆದುಕೊಂಡಿದೆ. ಅದು ಮುಕ್ಕಾಲು ಪಾಲು ಮಾನಸಿಕವಾಗಿದೆ.
  2. ಮಾನಸಿಕ ಕಾರಣಗಳು: ಮೇಲೆ ಹೇಳಿದ ಬೇಸಿಕ್ ನೀಡ್ ಗಳನ್ನ ಹೊರತು ಪಡಿಸಿ ಗಳಿಸುವ ಹಣವೆಲ್ಲವೂ ಮಾನಸಿಕ ಕಾರಣದ ಅಡಿಯಲ್ಲಿ ಬರುತ್ತದೆ. ಹೀಗೆ ನಿತ್ಯ ಜೀವನಕ್ಕೆ ಬೇಕಾದಷ್ಟನ್ನ ಹೊರತು ಪಡಿಸಿ ದುಡಿಯುವ ಹಣವೆಲ್ಲವೂ ಮನೋ ನೆಮ್ಮದಿ, ಮನಸ್ಸಿನ ಭಾವನೆಗಳ ಮೂರ್ತರೂಪವಷ್ಟೇ, ಕೆಲವೊಮ್ಮೆ ಬದುಕಿನಲ್ಲಿ ಗಳಿಸಿದ ಅಷ್ಟೂ ಹಣವನ್ನ ಗಳಿಸಿದವರು ಉಪಯೋಗಿಸುವುದೂ ಇಲ್ಲ. ಜೀವಿತಾವಧಿಯಲ್ಲಿ ಗಳಿಸಿದ 10 ಪ್ರತಿಶತ ಹಣವೂ ಅವರಿಗೆ ಬೇಕಾಗುವುದಿಲ್ಲ. ಆದರೆ ಹಣಗಳಿಕೆ ಮತ್ತು ಸಂಗ್ರಹಣೆ ಎನ್ನುವುದು ಯಾವಾಗ ಸೈಕಲಾಜಿಕಲ್ ಸ್ಯಾಟಿಸ್ಫ್ಯಾಕ್ಷನ್ ಎನ್ನುವ ಹಂತಕ್ಕೆ ತಲುಪಿತು ಆಗ ನಿಜವಾಗಿ ಮಾನಸಿಕ ನೆಮ್ಮದಿ ಕೂಡ ಕದಡಲು ಶುರುವಾಯ್ತು . ಹಣ ಹೀಗೆ ಮನಸಿಕವಾಗಲು ಕಾರಣಗಳು ಹಲವು, ಅವುಗಳಲ್ಲಿ ಕೆಲವನ್ನ ನೋಡೋಣ .
  • ಎಲ್ಲಕ್ಕಿಂತ ಪ್ರಮುಖವಾಗಿ, ಗಮನಿಸಿ ನೋಡಿ, ಯಾವೊಬ್ಬ ವ್ಯಕ್ತಿಯ ಪ್ರಯತ್ನ, ಪ್ರಯತ್ನದಿಂದ ಗಳಿಸಿದ ಉತ್ತಮ ಫಲಿತಾಂಶವನ್ನ ನಾವು ಅಳೆಯುವುದು ಹೇಗೆ? ಒಂದು ವ್ಯಾಪಾರ ಅತ್ಯುತ್ತಮ ಹಂತ ತಲುಪಿದೆ ಎಂದರೆ ಅದನ್ನ ನಾವು ಜಗತ್ತಿಗೆ ತಿಳಿಸುವುದು ಹೇಗೆ? ಒಬ್ಬ ವೈದ್ಯ, ಒಬ್ಬ ಇಂಜಿನಿಯರ್, ಒಬ್ಬ ಕಮ್ಮಾರ, ಚಮ್ಮಾರ, ಎಲೆಕ್ಟ್ರಿಷಿಯನ್ ಹೀಗೆ ಯಾವುದೇ ವೃತ್ತಿಯಿರಲಿ, ಅವರು ಶ್ರೇಷ್ಠರು, ಅವರ ವೃತ್ತಿಯಲ್ಲಿ ಅವರೇ ಬೆಸ್ಟ್ ಎಂದು ಹೇಳುವ ಬೇರೆ ಮಾಧ್ಯಮವಿಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಹಣಗಳಿಸಿದವನು ಹೆಚ್ಚು ಸಮರ್ಥನೂ, ಹೆಚ್ಚು ಬುದ್ದಿಶಾಲಿಯೂ, ಹೆಚ್ಚು ಸಾಮಾನ್ಯ ಜ್ಞಾನವುಳ್ಳವನಾಗಿಯೂ ಕಾಣಿಸುತ್ತಾನೆ. ಅದು ಸರಿಯಿರಬೇಕು ಎನ್ನುವಂತಿಲ್ಲ. ಆದರೆ ಸಮಾಜದ ಮನಸ್ಥಿತಿ ಈ ಹಂತವನ್ನ ತಲುಪಿದೆ. ಈ ಕಾರಣದಿಂದ ಯಶಸ್ಸು ಎಂದರೆ ಹಣ ಮಾಡಿರಬೇಕು. ಅಥವಾ ಹಣವಂತನೇ ಯಶಸ್ವಿ ವ್ಯಕ್ತಿ ಎನ್ನುವಂತಾಗಿದೆ. ಯಶಸ್ಸು ಎನ್ನುವುದು ಹಣ ಎನ್ನುವಂತಾಗಿದೆ. ಹಣವಂತನಲ್ಲದವನನ್ನ ಸೋತವನು, ಅಪ್ರಯೋಜಕ, ನಾಲಾಯಕ್, ಯಾವುದೇ ಕೆಲಸಕ್ಕೆ ಬಾರದವನು ಎನ್ನುವ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ವ್ಯಕ್ತಿಯ ಪ್ರಯತ್ನಗಳು ಇಲ್ಲಿ ಯಾವುದೇ ಪ್ರಮುಖಯತೆಯನ್ನ ಪಡೆಯುವುದಿಲ್ಲ. ಕೇವಲ ಮತ್ತು ಕೇವಲ ಪಲಿತಾಂಶಗಳನ್ನ ಮಾತ್ರ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜನರ, ಸಮಾಜದ ಮಾನಸಿಕತೆ ಬದಲಾಗದ ಹೊರತು, ಹಣಕ್ಕಿರುವ ಇಂದಿನ ಕಿಮ್ಮತ್ತು ಇಂಚೂ ಕದಲುವುದಿಲ್ಲ.
  • ಹಣವೆಂದರೆ ಶಕ್ತಿ: ಗಮನಿಸಿ ನೋಡಿ, ಹಣದ ಸಹಾಯದಿಂದ ಬಹಳಷ್ಟು ಕೆಲಸಗಳನ್ನ ಮನೆಯಲ್ಲಿ ಕುಳಿತು ಮಾಡಿಸಿಕೊಳ್ಳಬಹುದು. ನಾವೆಷ್ಟೇ ಹಣವನ್ನ ದೂಷಿಸಿದರೂ ಬದುಕಿಗೆ ಅದರಲ್ಲೂ ಉತ್ತಮ ಗುಣಮಟ್ಟದ ಜೀವನ ನಡೆಸಲು ಹಣ ಬೇಕೇಬೇಕು. ಹಣವಂತನನ್ನ ಜಗತ್ತು ಅತ್ಯಂತ ಗೌರವಿಸುತ್ತದೆ. ಜಗತ್ತಿನ ಅತಿ ದೊಡ್ಡ ಹೋಟೆಲ್ಗಳಲ್ಲಿ, ಕಸಿನೋಗಳಲ್ಲಿ ಡ್ರೆಸ್ ಕೋಡ್ ಇರುತ್ತದೆ, ಅಂತಹ ಬಟ್ಟೆ ಧರಿಸದವರನ್ನ ಒಳಗೆ ಬಿಡುವುದಿಲ್ಲ. ಜಗತ್ತಿನ ಪ್ರಸಿದ್ದರೂ, ಹಣವಂತರೂ ಕಟ್ಟಿ ಕೊಂಡಿರುವ ಎಲೈಟ್ ಕ್ಲಬ್ಗಳಿಗೆ ಸದಸ್ಯರಾಗುವುದು ಕನಸಿನ ಮಾತು. ಹಣವಿದ್ದ ಕಡೆಗೆ ಅಧಿಕಾರ, ವ್ಯಾಪಾರ ಎಲ್ಲವೂ ಬರುತ್ತದೆ. ಹಣವಿಲ್ಲದವನೂ ನಿಷ್ಪ್ರಯೋಜಕ ಎನ್ನುವ ಪಟ್ಟವನ್ನ ಪಡೆದುಕೊಳ್ಳುತ್ತಾನೆ. ಪಂಚಾಯತಿ ಎಲೆಕ್ಷನ್ ನಿಂದ ಹಿಡಿದು ಅಮೇರಿಕಾ ಅಧ್ಯಕ್ಷ ಸ್ಥಾನದವರೆಗೆ ಹಣ ಬೇಕು. ಹಣದ ಬೆಂಬಲವಿಲ್ಲದೆ ಸಣ್ಣ ಸೊಸೈಟಿಗೆ ಕೂಡ ಅಧ್ಯಕ್ಷನಾಗುವುದು ಕಷ್ಟ. ಮಕ್ಕಳನ್ನ ಉತ್ತಮ ಶಾಲೆಗೂ ಸೇರಿಸಲಾಗುವುದಿಲ್ಲ. ಹಣದ ಮಹಿಮೆ, ಶಕ್ತಿ ಅಂತಹುದ್ದು.
  • ಹಣ ಮಾಡುವುದು ಆಟ: ಜಗತ್ತಿನ ಅತಿ ಶ್ರೀಮಂತರನ್ನ ನೋಡಿ, ಅವರ ಹತ್ತಾರು ತಲೆಮಾರು ಕುಳಿತು ತಿಂದರೂ ಕಡಿಮೆಯಾಗದಷ್ಟು ಹಣವನ್ನ ಸಂಪಾದಿಸಿರುತ್ತಾರೆ. ಆದರೂ ಅವರು ಹೊಸ ಹೊಸ ಉದ್ದಿಮೆಗಳನ್ನ ಸ್ಥಾಪಿಸುತ್ತಲೇ ಹೋಗುತ್ತಾರೆ. ಹೊಸ ಅಪಾಯಗಳಿಗೆ ತೆರೆದುಕೊಳ್ಳುತ್ತಾರೆ, ಆ ಮೂಲಕ ಇನ್ನಷ್ಟು ಹಣವನ್ನ ಸಂಗ್ರಹಿಸುತ್ತಾರೆ. ಹೀಗೇಕೆ? ಇದು ಕೂಡ ಮಾನಸಿಕತೆ. ಬಹಳಷ್ಟು ಜನರಿಗೆ ಹಣ ಕಿಕ್ ಕೊಡುವುದಿಲ್ಲ, ಅದು ಮೋಟಿವೇಶನಲ್ ಫ್ಯಾಕ್ಟರ್ ಕೂಡ ಆಗಿರುವುದಿಲ್ಲ. ಹಣವನ್ನ ಗಳಿಸುವ ಪ್ರಕ್ರಿಯೆ ಹಣಕ್ಕಿಂತ ಹೆಚ್ಚಿನ ಸಮಾಧಾನವನ್ನ ಅವರಿಗೆ ನೀಡುತ್ತದೆ. ಹಣಗಳಿಸುವುದು, ಅದರ ಮೂಲಕ ಸಿಗುವ ಹೊಗಳಿಕೆ, ಜನಮನ್ನಣೆ ಅವರಿಗೆ ಹಣಕ್ಕಿಂತ ಹೆಚ್ಚಿನ ಸಂತೃಪ್ತಿ ನೀಡುತ್ತದೆ. ಈ ಕಾರಣಕ್ಕಾಗಿ ಹಣದ ಹಿಂದೆ ಅವರು ಓಡುತ್ತಿರುತ್ತಾರೆ.
  • ಸೋಶಿಯಲ್ ಸ್ಟೇಟಸ್: ಸಮಾಜದಲ್ಲಿ ಯಾರು ದೊಡ್ಡ ಶ್ರೀಮಂತ, ಅವನ ಬದುಕಿನ ರೀತಿಯಾವುದು? ಅವರು ಯಾವ ಬಟ್ಟೆ ತೊಟ್ಟರು, ಯಾವ ವಾಚ್ ಧರಿಸಿದ್ದರು, ಯಾವ ಕಾರು? ಏನು ತಿಂದರು? ಯಾವ ರೆಸ್ಟುರೆಂಟ್? ಹೀಗೆ ಶ್ರೀಮಂತರ ಬದುಕನ್ನ ತಿಳಿಯಲು ಜನ ಸಾಮಾನ್ಯನಲ್ಲಿ ಅತೀವ ಕುತೂಹಲವಿದೆ. ಅದನ್ನ ನೋಡುವ ಅವನು ಜೀವನದ ನೆಮ್ಮದಿಯನ್ನ ಕಳೆದುಕೊಳ್ಳುತ್ತಾನೆ. ಹೇಗಾದರೂ ಸರಿಯೇ ನನ್ನ ಜೀವನವೂ ಅವರಂತೆಯೇ ಆಗಬೇಕು ಎನ್ನುವ ಹಠಕ್ಕೆ ಬೀಳುತ್ತಾನೆ. ಜೀವನ ಮಟ್ಟವನ್ನ ವೃದ್ಧಿಸಿಕೊಳ್ಳುವ ಅಭಿಲಾಷೆ ಇಟ್ಟು ಕೊಳ್ಳುವುದು ಖಂಡಿತ ತಪ್ಪಲ್ಲ, ಆದರೆ ಅದಕ್ಕಾಗಿ ನಿತ್ಯ ಜೀವನವನ್ನ ನರಕ ಮಾಡಿಕೊಳ್ಳುವುದು, ಅನ್ಯ ಮಾರ್ಗಗಳನ್ನ ತುಳಿಯುವುದು ತಪ್ಪು.
  • ನಾವೆಲ್ಲರೂ ಒಬ್ಬರಂತೆ ಒಬ್ಬರಿಲ್ಲ: ಈ ಜಗತ್ತಿನ ಪ್ರತಿ ಜೀವಿಯೂ ತನ್ನದೇ ಆದ ವ್ಯಕ್ತಿತ್ವವನ್ನ ಹೊಂದಿದ್ದಾನೆ. ಒಬ್ಬರಂತೆ ಒಬ್ಬರಿಲ್ಲ. ಒಂದಷ್ಟು ಜನರಿಗೆ ಹಣ ಕೇವಲ ಭದ್ರತೆಯ ದೃಷ್ಟಿಯಿಂದ ಬೇಕಾಗುತ್ತದೆ. ಆದರೆ ಹಣವಿದ್ದೂ ಅತ್ಯಂತ ಸರಳ ಜೀವನವನ್ನ ನಡೆಸುತ್ತಾರೆ. ಆದರೂ ಅವರಿಗೂ ಹಣಗಳಿಕೆ ಮುಖ್ಯವಾಗಿರುತ್ತದೆ. ಹಣ ನೀಡುವ ಮಾನಸಿಕ ಭದ್ರತೆ ಇದೆಯಲ್ಲ ಅದಕ್ಕೆ ಹಣಕ್ಕಿಂತ ಹೆಚ್ಚಿನ ಬೆಲೆಯುಂಟು .
  • ಭವಿಷ್ಯಕ್ಕಾಗಿ ಹಣ ಸಂಪಾದನೆ: ನಾಳೆ ಎನ್ನುವುದು ಯಾರಿಗೂ ತಿಳಿಯದ ನಿಗೂಢ ಪ್ರಶ್ನೆಯಾಗಿದೆ. ಮನುಷ್ಯನ ಸೈಕಾಲಜಿ ಹೇಗೆಂದರೆ, ಗೊತ್ತಿಲ್ಲದ, ಕಂಡು ಕೇಳಿರದ ಪರಿಸ್ಥಿತಿಗೆ ಸಿದ್ಧವಾಗುವುದು, ಅದಕ್ಕಾಗಿ ಕೂಡಿಡುವುದು ಅವನ ಗುಣ. ಇರುವೆಯಂತಹ ಸಣ್ಣ ಜೀವಿ ಕೂಡ ಮಳೆಗಾಲಕ್ಕೆ ಎಂದು ಸಂಗ್ರಹಿಸಿಡುತ್ತದೆ. ನಾವು ಹೇಳಿಕೇಳಿ ಮನುಷ್ಯ ಜೀವಿಗಳು, ಸಂಗ್ರಹಣೆ ನಮ್ಮ ಹಕ್ಕು! ಇಲ್ಲಿ ಇನ್ನೊಂದು ಅಂಶ ಕೂಡ ಕೆಲಸ ಮಾಡುತ್ತದೆ. ನಾಳೆ ಎನ್ನುವುದು ಕೆಟ್ಟದಾಗಿರಬೇಕಿಲ್ಲ, ಆದರೆ ನಮ್ಮಲ್ಲಿನ ಗಳಿಕೆಯ ಶಕ್ತಿ ಕುಂದುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಹೀಗಾಗಿ ಶಕ್ತವಾಗಿದ್ದಾಗ ಹೆಚ್ಚಿನ ಹಣ ಗಳಿಕೆ ಮನುಷ್ಯನ ಸ್ವಭಾವಾಗಿ ಬದಲಾಗಿದೆ.
  • ನಲವತ್ತು ಹೊಸ ಅರವತ್ತು: ಬದಲಾದ ಸನ್ನಿವೇಶದಲ್ಲಿ ,ಬೇಗ ಅಂದರೆ ನಲವತ್ತರ ಆಸುಪಾಸಿನಲ್ಲಿ ನಿವೃತ್ತಿ ಹೊಂದುವವರ ಸಂಖ್ಯೆ ಬಹಳವಾಗುತ್ತಿದೆ. ವೇಗವಾಗಿ ಹಣವನ್ನ ಗಳಿಸಿ, ಬೇಗ ನಿವೃತ್ತಿ ಹೊಂದುವುದು ಉತ್ತಮ ಗುಣಮಟ್ಟದ ಜೀವನ ನಡೆಸಲು ಇರುವ ಮಾರ್ಗ ಎನ್ನುವುದು ಬಹುತೇಕರ ನಂಬಿಕೆಯಾಗಿದೆ. ಹೀಗಾಗಿ ಕೂಡ ಬಹಳಷ್ಟು ಜನ ವೃತ್ತಿ ಜೀವನದ ಆರಂಭದಲ್ಲಿ ಹಣದ ಹಿಂದೆ ಬೀಳುತ್ತಾರೆ. ಅದರ ಗಳಿಕೆ , ವೃದ್ಧಿ ಮತ್ತು ಸಂಗ್ರಹವೊಂದೇ ಅವರ ಪ್ರಮುಖ ಗುರಿಯಾಗಿರುತ್ತದೆ. ಇವತ್ತು ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಇಚ್ಛೆ ಪಟ್ಟು ನಿವೃತ್ತಿಯನ್ನ ಪಡೆದುಕೊಳ್ಳುತ್ತಿದ್ದಾರೆ, ಇನ್ನು ಕೆಲವರಿಗೆ ಹತ್ತಾರು ವರ್ಷದಿಂದ ಕೆಲಸ ಮಾಡುತ್ತಿದ್ದ ಅವರ ಸಂಸ್ಥೆಯೇ ಗೇಟ್ ಪಾಸ್ ನೀಡಿದೆ. ಅಂದರೆ ಫೊರ್ಸ್ಡ್ ಅರ್ಲಿ ರಿಟೈರ್ಮೆಂಟ್ ತೆಗೆದುಕೊಳ್ಳದೆ ವಿಧಿಯಿಲ್ಲ ಎನ್ನುವಂತಾಗಿದೆ. ಎರಡನೇ ವರ್ಗದ ಜನ ತಮ್ಮ ಮುಂದಿನ ಜೀವನದ ರೂಪುರೇಷೆಗಳನ್ನ ಮರು ಪರಿಶೀಲಿಸಬೇಕಾದ ಅವಶ್ಯಕತೆ ಇರುತ್ತದೆ. ಅಲ್ಲಿನ ಒಂದಷ್ಟು ನಿಯಮಾವಳಿಗಳನ್ನ ಪೂರ್ಣಗಳಿಸುವ ತಾಕತ್ತು ಉಳ್ಳವರು ಬೇಗ ನಿವೃತ್ತಿಯನ್ನ ಪಡೆಯಬಹುದು. ಬೇಗ ಎಂದರೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯವಾಗಿ ನಿವೃತ್ತಿ ಎಂದರೆ 60 ರಿಂದ 65 ವಯಸ್ಸು ಎಂದು ನಾವು ಪರಿಗಣಿಸಬಹದು. ಸಾಮಾನ್ಯವಾಗಿ ಒಪ್ಪಕೊಂಡ ಈ ವಯಸ್ಸಿಗಿಂತ ಮುಂಚೆ ನಿವೃತ್ತಿ ಹೊಂದುವುದನ್ನ ಅರ್ಲಿ ರಿಟೈರ್ಮೆಂಟ್ ಎಂದು ಕರೆಯಬಹದು. ಕೆಲವರು 40ಕ್ಕೆ ನಿವೃತ್ತಿ ಬಯಸಿದರೆ, ಕೆಲವರು 45, 50, 55 ಹೀಗೆ ತಮ್ಮ ಇಂದಿನ ಜೀವನ ಶೈಲಿ, ಮುಂದಿನ ಜೀವನ ಶೈಲಿ ಎರಡನ್ನೂ ಅಳೆದು ತೂಗಿ ನಿರ್ಧಾರಗಳನ್ನ ಮಾಡುತ್ತಾರೆ.

ಒಟ್ಟಿನಲ್ಲಿ ಸರಳವಾಗಿ ಹೇಳುವುದಾದರೆ ಹಣಕ್ಕಿರುವ ಬೆಲೆ, ಗೌರವ, ಅದಕ್ಕಿರುವ ಶಕ್ತಿ ಹೆಣವೂ ಏಳುವಂತೆ ಮಾಡುತ್ತದೆ. ಜೀವವಿಲ್ಲದವರಿಗೂ ಹಣದ ಮೇಲಿನ ವ್ಯಾಮೋಹ ತಗ್ಗುವುದಿಲ್ಲ ಎನ್ನುವಂತಾಗಿದೆ. ಅದೇನೇ ಇರಲಿ ಬದುಕಿಗೆ ಹಣ ಬೇಕು ಆದರೆ ಕೇವಲ ಹಣಗಳಿಕೆಗೆ ನಮ್ಮನ್ನ ಸೀಮಿತಗೊಳಿಸಿಕೊಳ್ಳಬಾರದು. ನಮಗಿಷ್ಟವೆಂದೂ ಅಥವಾ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ನಾವು ಒಂದೇ ರೀತಿಯ ಊಟವನ್ನ ಮಾಡುತ್ತೇವೆಯೇ? ಮಾಡಿದರೂ ಕೂಡ ಒಂದಷ್ಟು ಸಮಯದ ನಂತರ ಬದುಕು ಬೇಸರ ತರಿಸುತ್ತದೆ. ಹಣವೂ ಅದಕ್ಕೆ ಅಪವಾದವಲ್ಲ . ಹೀಗಾಗಿ ಬದುಕಿನಲ್ಲಿ ಮೂರು ಅಂಶಗಳು ಅತ್ಯಂತ ಅವಶ್ಯಕವಾಗಿ ಇರಲೇಬೇಕು .

  1. ಹಣಗಳಿಕೆ-ಹಣಗಳಿಕೆ ಅತ್ಯಂತ ಮುಖ್ಯ: ಹಣ ಹಲವಾರು ಸಮಸ್ಯೆಗಳನ್ನ ಚಿಟಿಕೆ ಹೊಡೆಯುವುದರಲ್ಲಿ ಪರಿಹರಿಸುತ್ತದೆ. ಇನ್ನೆಷ್ಟೋ ಸಮಸ್ಯೆಗಳು ಸೃಷ್ಟಿಯಾಗುವುದೇ ಇಲ್ಲ. ಹೀಗಾಗಿ ಹಣಗಳಿಸುವ ಚಾಕಚಕ್ಯತೆ, ಕ್ಷಮತೆ, ಉತ್ಸಾಹ ಬದುಕಿನಲ್ಲಿರಬೇಕಾದ ಪ್ರಮುಖ ಅಂಶವಾಗಿದೆ.
  2. ಗಳಿಸಿದ ಹಣವನ್ನ ಅನುಭವಿಸುವ ಮನಸ್ಥಿತಿ, ಆರೋಗ್ಯ: ಹಣಗಳಿಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದನ್ನ ಬಳಸುವುದು, ಅನುಭವಿಸುವುದು. ಗಳಿಸಿದ್ದನ್ನ ಅನುಭವಿಸಲು ಬೇಕಾದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನ ನಾವು ಕಾಪಾಡಿಕೊಳ್ಳುವುದು ಕೂಡ ಪ್ರಮುಖವಾಗಿದೆ.
  3. ಕ್ರಿಯೇಟಿವಿಟಿ, ಹವ್ಯಾಸ, ಆಟೋಟಗಳು: ನಾವೇನೇ ಆಗಿರಲಿ ಒಂದಷ್ಟು ಹೊಸತನಕ್ಕೆ ತುಡಿಯುವುದು, ಹವ್ಯಾಸಗಳನ್ನ ಬೆಳಸಿಕೊಳ್ಳುವುದು, ನಿತ್ಯವೂ ಒಂದಲ್ಲ ಒಂದು ನಮಗೆ ಒಗ್ಗುವ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಕೂಡ ಮಾನಸಿಕ ಆರೋಗ್ಯವನ್ನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೆನಪಿರಲಿ: ಹಣಕ್ಕಿಂತ ಕೆಟ್ಟದ್ದು ಬೇರಾವುದೂ ಈ ಜಗತ್ತಿನಲ್ಲಿ ಇಲ್ಲ ಎನ್ನುವ ಮಾತಿದೆ. ಮನುಷ್ಯನ ಸೃಷ್ಟಿಯಲ್ಲಿನ ಅತ್ಯಂತ ಕೆಟ್ಟದ್ದು ಹಣ ಎನ್ನುತ್ತಾರೆ. ಜಗತ್ತಿನ ಎಲ್ಲಾ ಕೆಡುಕುಗಳಿಗೆ ಹಣವೇ ಕಾರಣ ಎನ್ನುತ್ತೇವೆ. ಆದರೂ ನಾವೆಲ್ಲರೂ ಹಣದ ಹಿಂದೆ ಓಡುತ್ತೇವೆ. ಎಷ್ಟರ ಮಟ್ಟಿಗೆ ಎಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವಷ್ಟು! ಹೀಗೇಕೆ? ಇದರರ್ಥ, ಹಣದಿಂದ ಕೆಡುಕೆಷ್ಟಿದೆಯೋ ಅದಕ್ಕಿಂತ ಒಂದಷ್ಟು ಪಾಲು ಒಳಿತಿದೆ. ಹಣ ನೀರಿನಂತೆ ಯಾವ ಪಾತ್ರೆಗೆ ಹಾಕಿದರೆ ಆ ಆಕಾರವನ್ನ ಪಡೆದುಕೊಳ್ಳುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com