ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ನಮ್ಮನ್ನು ಕಾಡುವ ನೋವುಗಳಲ್ಲಿ ಸಾಮಾನ್ಯವಾದುದು ಹಿಮ್ಮಡಿ ನೋವು. ನಮ್ಮ ಪಾದದ ಹಿಂಭಾಗದ ದುಂಡಗಿನ ಭಾಗವೇ ಹಿಮ್ಮಡಿ. ಈ ಜಾಗದಲ್ಲಿ ನೋವಿನ ಸಂವೇದನೆ ಇದ್ದರೆ ಚಿಕಿತ್ಸೆ ಪಡೆಯಬೇಕು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ನೋವು ಕ್ರಮೇಣ ತೀವ್ರವಾಗಿರುತ್ತದೆ. 
ಹಿಮ್ಮಡಿ ನೋವು (ಸಾಂದರ್ಭಿಕ ಚಿತ್ರ)
ಹಿಮ್ಮಡಿ ನೋವು (ಸಾಂದರ್ಭಿಕ ಚಿತ್ರ)

ನಮ್ಮನ್ನು ಕಾಡುವ ನೋವುಗಳಲ್ಲಿ ಸಾಮಾನ್ಯವಾದುದು ಹಿಮ್ಮಡಿ ನೋವು. ನಮ್ಮ ಪಾದದ ಹಿಂಭಾಗದ ದುಂಡಗಿನ ಭಾಗವೇ ಹಿಮ್ಮಡಿ.

ಈ ಜಾಗದಲ್ಲಿ ನೋವಿನ ಸಂವೇದನೆ ಇದ್ದರೆ ಚಿಕಿತ್ಸೆ ಪಡೆಯಬೇಕು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ನೋವು ಕ್ರಮೇಣ ತೀವ್ರವಾಗಿರುತ್ತದೆ. ಗಂಭೀರ ಸಮಸ್ಯೆ ಇಲ್ಲದಿದ್ದಲ್ಲಿ ಹಿಮ್ಮಡಿ ನೋವು ಬಹುಬೇಗ ಗುಣವಾಗುತ್ತದೆ. ಕೆಲವೊಮ್ಮೆ ಯಾವುದೇ ಚಿಕಿತ್ಸೆ ಇಲ್ಲದೇ ತಾನಾಗಿಯೇ ಹೋಗುತ್ತದೆ ಕೂಡ. ಬಹುತೇಕ ಸಂದರ್ಭಗಳಲ್ಲಿ, ಹಿಮ್ಮಡಿ ನೋವು ತೀವ್ರ ಮತ್ತು ಅಸಹನೀಯ. ಇದರಿಂದ ಆರೋಗ್ಯಕ್ಕೆ ಏನೂ ಅಪಾಯವಿಲ್ಲ. ಆದರೆ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯನ್ನು ಉಂಟುಮಾಡುತ್ತದೆ. 

ನೀವು ಹಿಮ್ಮಡಿಯ ನೋವನ್ನು ಅನುಭವಿಸುತ್ತಿದ್ದರೆ ಎಲ್ಲಕ್ಕಿಂತ ಮೊದಲು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು. ಹಿಮ್ಮಡಿಯ ಮೇಲೆ ಒತ್ತಡ ಉಂಟಾಗುವುದನ್ನು ತಪ್ಪಿಸಬೇಕು. ಇದರಿಂದ ನೋವು ಶಮನವಾಗಲು ಸಹಾಯವಾಗುತ್ತದೆ. ಎರಡು ದಿನವಾದರೂ ನೋವು ಹೋಗದಿದ್ದರೆ ಅಥವಾ ಕ್ರಮೇಣ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಕಾಣಬೇಕು. 

ಹಿಮ್ಮಡಿ ನೋವಿನ ಲಕ್ಷಣಗಳು
ಹಿಮ್ಮಡಿ ನೋವಿನ ಲಕ್ಷಣಗಳೆಂದರೆ ವಿಪರೀತ ನೋವಿನ ಅನುಭವ, ಯಾವುದೇ ಕಾರಣ ಇಲ್ಲದೇ ನೋವು ಕಾಣಿಸಿಕೊಂಡು ಕ್ರಮೇಣ ಹೆಚ್ಚಾಗುತ್ತಾ ಹೋಗುವುದು, ಹಿಮ್ಮಡಿ ಊದಿಕೊಂಡು ಕೆಂಪಾಗುವುದು ಮತ್ತು ನಡೆಯಲು ಆಗದೇ ಇರುವುದು. 

ಹಿಮ್ಮಡಿ ನೋವು ವಯಸ್ಕ ಪುರುಷರು, ಮಹಿಳೆಯರು (30 ರಿಂದ 50 ವರ್ಷದೊಳಗಿನವರಲ್ಲಿ) ಮತ್ತು ಕೆಲವೊಮ್ಮೆ ಮಕ್ಕಳಿಗೂ ಬರಬಹುದು. ವೃದ್ಧರು ಈ ಬಗ್ಗೆ ಎಚ್ಚರದಿಂದಿರಬೇಕು. ಎತ್ತರದ ಹಿಮ್ಮಡಿಯ ಚಪ್ಪಲಿಗಳನ್ನು (ಹೈ ಹೀಲ್ಸ್) ಧರಿಸುವುದರಿಂದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಹಿಮ್ಮಡಿ ನೋವು ಸ್ವಲ್ಪ ಹೆಚ್ಚು ಕಾಣಿಸಿಕೊಳ್ಳಬಹುದು.

ಹಿಮ್ಮಡಿ ನೋವಿಗೆ ಕಾರಣಗಳು
ಈ ಸಮಸ್ಯೆಗೆ ಮುಖ್ಯ ಕಾರಣ ಹಿಮ್ಮಡಿಯ ಮೇಲೆ ಹೆಚ್ಚು ಒತ್ತಡ ಉಂಟಾಗುವುದು. ಇಡೀ ದೇಹದ ತೂಕವನ್ನು ಪಾದ ಹೊತ್ತುಕೊಂಡಿದೆ. ಹಿಮ್ಮಡಿಯ ರಚನೆಯು ದೇಹದ ತೂಕವನ್ನು ಸುಲಭವಾಗಿ ಎತ್ತುವಂತೆ ಮಾಡುತ್ತದೆ. ಹಿಮ್ಮಡಿಗೆ ಹೆಚ್ಚು ಒತ್ತಡ ಉಂಟಾದಾಗ ಸಾಮಾನ್ಯವಾಗಿ ನೋವು ಉಂಟಾಗುತ್ತದೆ. ಹೆಚ್ಚು ಕಾಲ ನಿಂತೇ ಕೆಲಸ ಮಾಡುವುದು (ಕಟ್ಟಡ ನಿರ್ಮಾಣ, ಟೈಲರಿಂಗ್, ಮನೆಯಲ್ಲೇ ನಿಂತೇ ಎಲ್ಲಾ ಕೆಲಸ ಮಾಡುವುದು ಇತ್ಯಾದಿ), ಪಾದಗಳಿಗೆ ಗಾಯವಾಗಿ ಅವು ಮಾಯಲು ಹೆಚ್ಚು ಸಮಯ ತೆಗೆದುಕೊಂಡಾಗ, ಡಯಾಬಿಟೀಸಿನಿಂದಾಗ ದೇಹದಲ್ಲಿ ರಕ್ತದ ಹರಿವು ದುರ್ಬಲವಾದಾಗ ಮತ್ತು ದೇಹದ ತೂಕ ಹೆಚ್ಚಾದಾಗ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಇದಲ್ಲದೇ ಅಸ್ಥಿಸಂಧಿವಾತ, ಸಂಧಿವಾತ, ಗೌಟ್ ಮತ್ತು ಕೆಲವು ಆನುವಂಶಿಕ ಅಸ್ವಸ್ಥತೆಗಳು ಹಿಮ್ಮಡಿ ನೋವಿನ ಅಪಾಯವನ್ನು ಹೆಚ್ಚಿಸಬಹುದು. ಹಿಮ್ಮಡಿ ನೋವಿನ ಜೊತೆಗೆ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಇದ್ದಾಗ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ. 

ಹಿಮ್ಮಡಿ ನೋವಿಗೆ ತ್ವರಿತ ಉಪಶಮನ ಹೇಗೆ?
ನೋವು ಇದ್ದಾಗ ಎಚ್ಚರವಹಿಸುವುದು ಬಹಳ ಮುಖ್ಯ. ಹಿಮ್ಮಡಿಗೆ ಸಾಕಷ್ಟು ವಿಶ್ರಾಂತಿ ನೀಡಿ. ಆರಾಮದಾಯಕವಾದ ಪಾದರಕ್ಷೆಗಳನ್ನು ಧರಿಸಿ, ಹೆಚ್ಚು ಹೊತ್ತು ನಿಲ್ಲಬೇಡಿ. ಗಟ್ಟಿಯಾದ ನೆಲದ ಮೇಲೆ ಬರಿಗಾಲಿನಲ್ಲಿ ನಡೆಯಬೇಡಿ. ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕಿಕೊಳ್ಳಬಾರದು. ನೆಲದಿಂದ ಸ್ವಲ್ಪ ಎತ್ತರದಲ್ಲಿ ಕುಳಿತು ಪಾದಗಳನ್ನು ಚೆಂಡಿನ ಮೇಲೆ ಇರಿಸಿ ಕಾಲನ್ನು ಅದರ ಮೇಲೆ ಇಟ್ಟು ಹೊರಳಿಸಿ. ಇದು ನೋವು ಪರಿಹಾರಕ್ಕೆ ಸಹಾಯಕ. ರಾತ್ರಿ ಮಲಗುವಾಗ ಕಾಲಿನ ಕೆಳಗೆ ಮೃದುವಾಗಿರುವ ಒಂದು ತೆಳುವಾದ ದಿಂಬನ್ನು ಇಟ್ಟುಕೊಂಡು ಮಲಗಬೇಕು. ಜೊತೆಗೆ ಬಿಸಿಯಾಗಿರುವ ನೀರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಸ್ವಲ್ಪ ಹೊತ್ತು ಪಾದವನ್ನು ಇಳಿಬಿಟ್ಟುಕೊಳ್ಳುವುದರಿಂದಲೂ ಉಪಶಮನ ಸಾಧ್ಯ. 

ನೋವು ಕಾಣಿಸಿಕೊಂಡಿರುವ ಜಾಗಕ್ಕೆ ಆಲಿವ್, ತೆಂಗಿನಕಾಯಿ, ಎಳ್ಳು ಅಥವಾ ಸಾಸಿವೆ ಎಣ್ಣೆಯಿಂದ/ಗಿಡಮೂಲಿಕೆಗಳಿಂದ ತಯಾರಿಸಿದ ಔಷಧೀಯ ತೈಲಗಳಿಂದ ಹಗುರವಾಗಿ ಮಸಾಜ್ ಮಾಡುವುದರಿಂದ ಪರಿಹಾರ ಸಿಗುತ್ತದೆ. ಹಿಮ್ಮಡಿ ನೋವಿರುವ ಜಾಗಕ್ಕೆ ಐಸ್ ಪ್ಯಾಕ್ ಅಪ್ಲೈ ಮಾಡಿಕೊಂಡರೆ ತಕ್ಷಣದ ಪರಿಹಾರ ಸಾಧ್ಯ. ಹಿಮ್ಮಡಿಯ ಮೇಲೆ ಒತ್ತಡವನ್ನು ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿರುವುದು ಉತ್ತಮ. ಪಾದಕ್ಕೆ ಸರಿಯಾಗಿ ಹೊಂದುವ ಪಾದರಕ್ಷೆಗಳನ್ನು ಹಾಕಿಕೊಳ್ಳಬೇಕು. ವೈದ್ಯರ ಸಲಹೆ ಮೇರೆಗೆ ಮೃದುವಾಗಿರುವ ಹೀಲ್ ಪ್ಯಾಡ್‌ಗಳು ಮತ್ತು ಸೋಲ್ಸ್ ಬಳಸಬೇಕು. ಬೆಳಿಗ್ಗೆ ಸೌಮ್ಯ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು. ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಕಾಲಿನ ಸ್ನಾಯುಗಳನ್ನು ಬಲಪಡಿಸುವುದು ಒಳ್ಳೆಯ ವಿಧಾನ. ನೋವು ತೀವ್ರವಾಗಿದ್ದಲ್ಲಿ ವೈದ್ಯರು ಕೊಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. 

ಹಿಮ್ಮಡಿ ನೋವು ಬರದಂತೆ ತಡೆಯುವುದು ಹೇಗೆ?
ಹಿಮ್ಮಡಿ ನೋವು ಕಾಣಿಸಿಕೊಳ್ಳಬಾರದು ಎಂದರೆ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದಿನನಿತ್ಯ ನಡೆಯುವಾಗ ಮತ್ತು ಜಾಗಿಂಗ್ ಮಾಡುವಾಗ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮೊದಲು ಚೆನ್ನಾಗಿ ವಾರ್ಮ್ ಅಪ್ ಆಗಬೇಕು. ದೀರ್ಘಕಾಲ ನಿಂತಿರುವ ಅಥವಾ ಪಾದದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಚಟುವಟಿಕೆಯಲ್ಲಿ ತೊಡಗಿಕೊಂಡ ನಂತರ ಪಾದದ ಅಡಿಭಾಗಕ್ಕೆ ಮಸಾಜ್ ಮಾಡುವುದು ಉತ್ತಮ. ಆಗಾಗ್ಗೆ ವಿಶ್ರಾಂತಿ ನೀಡಿ ಕೆಲಸ ಮುಂದುವರೆಸಬೇಕು. ಆಟದ ಸಮಯದಲ್ಲಿ ಉತ್ತಮ ಗುಣಮಟ್ಟದ ಬೂಟುಗಳನ್ನು ಧರಿಸಲು ಕಾಳಜಿ ವಹಿಸಿ. ನಾವು ಧರಿಸುವ ಚಪ್ಪಲಿ, ಶೂ/ಬೂಟುಗಳು ಪಾದಗಳಿಗೆ ಹೊಂದಿಕೊಳ್ಳಬೇಕು ಮತ್ತು ಆರಾಮದಾಯಕವಾದ ಅಡಿಭಾಗವನ್ನು ಹೊಂದಿರಬೇಕು. ಇತ್ತೀಚೆಗೆ ಹಿಮ್ಮಡಿ ನೋವು ಬರದಂತೆ ತಡೆಗಟ್ಟುವ ವಿಶೇಷ ಚಪ್ಪಲಿಗಳೂ ಬಂದಿವೆ. ಅವುಗಳನ್ನು ಧರಿಸಬಹುದು. ನಿಯಮಿತ ವಾಕಿಂಗ್ ಮತ್ತು ಜಾಗಿಂಗ್ ಜೊತೆಗೆ ದೈಹಿಕವಾಗಿ ಚಟುವಟಿಕೆಯಿಂದ ಇರುವುದೂ ಬಹಳ ಮುಖ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com