social_icon

ಸೆಬೇಷಿಯಸ್ ಸಿಸ್ಟ್ ಅಥವಾ ಗಡ್ಡೆ (ಕುಶಲವೇ ಕ್ಷೇಮವೇ)

ಕೆಲವೊಮ್ಮೆ ನಮ್ಮ ಚರ್ಮದ ಕೆಳಭಾಗದಲ್ಲಿ ಗಡ್ಡೆಯಂತಹ ರಚನೆ ಬೆಳೆಯುತ್ತದೆ. ಇದನ್ನು ಸೆಬೇಷಿಯಸ್ ಸಿಸ್ಟ್ ಎಂದು ಕರೆಯುತ್ತಾರೆ. ಇದು ನಿಧಾನವಾಗಿ ಬೆಳೆಯುತ್ತದೆ.

Published: 24th March 2023 11:46 PM  |   Last Updated: 25th March 2023 02:14 PM   |  A+A-


Sebaceous Cysts

ಸಂಗ್ರಹ ಚಿತ್ರ

Posted By : Srinivasamurthy VN
Source :

ಕೆಲವೊಮ್ಮೆ ನಮ್ಮ ಚರ್ಮದ ಕೆಳಭಾಗದಲ್ಲಿ ಗಡ್ಡೆಯಂತಹ ರಚನೆ ಬೆಳೆಯುತ್ತದೆ. ಇದನ್ನು ಸೆಬೇಷಿಯಸ್ ಸಿಸ್ಟ್ ಎಂದು ಕರೆಯುತ್ತಾರೆ. ಇದು ನಿಧಾನವಾಗಿ ಬೆಳೆಯುತ್ತದೆ. ಸಮಯ ಕಳೆದಂತೆ ಹೆಚ್ಚು ಹೆಚ್ಚು ಚರ್ಮದ ಕೋಶಗಳು ಅಥವಾ ಬ್ಯಾಕ್ಟೀರಿಯಾಗಳು ಸಿಕ್ಕಿಹಾಕಿಕೊಳ್ಳಲು ಪ್ರಾರಂಭಿಸಿದಾಗ ಸೆಬೇಷಿಯಸ್ ಸಿಸ್ಟುಗಳು ದೊಡ್ಡದಾಗುತ್ತಾ ಹೋಗುತ್ತವೆ. ದೇಹದಲ್ಲಿ ಹಸ್ತಗಳು ಮತ್ತು ಪಾದಗಳ ಅಡಿಭಾಗವನ್ನು ಬಿಟ್ಟು ಬೇರೆಲ್ಲಾ ಕಡೆ ಸೇಬೇಷಿಯಸ್ ಸಿಸ್ಟುಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ಹಿಚುಕಿದರೆ ಸೀಬಮ್ ಎನ್ನುವ ದ್ರವ ಹೊರಬರುತ್ತದೆ. ಇದು ಕೀವಿನಂತೆ ಇರುತ್ತದೆ. ಮಕ್ಕಳಿಗಿಂತ ಇವು ದೊಡ್ಡವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. 

ಸಾಮಾನ್ಯವಾಗಿ ಸೇಬೇಷಿಯಸ್ ಸಿಸ್ಟುಗಳು ಅಪಾಯಕಾರಿಯಲ್ಲ. ಇವುಗಳಿಂದ ನೋವು ಉಂಟಾಗುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಇವು ಹರಡುವುದಿಲ್ಲ. ಆದರೆ ಯಾವುದಾದರೂ ಸೋಂಕಿಗೆ ಒಳಗಾದರೆ ಅವು ಮೃದುವಾಗಿ ಕೆಂಪಾಗಿ ಊದಿಕೊಳ್ಳುತ್ತವೆ. ಆಗ ಇವುಗಳಿಂದ ದುರ್ವಾಸನೆ ಹೊರಬರುತ್ತದೆ. ಹೀಗಾದರೆ ತಡಮಾಡದೇ ವೈದ್ಯರನ್ನು ಕಾಣಬೇಕು. ಕೆಲವು ಕುಟುಂಬಗಳಲ್ಲಿ ಕ್ಯಾನ್ಸರ್ ಅನುವಂಶೀಯವಾಗಿ ಬರುತ್ತದೆ. ಅಂತಹವರಿಗೆ ಸಿಸ್ಟುಗಳು ಬಂದರೆ ಜಾಗ್ರತೆಯಿಂದಿರಬೇಕು.

ಸೆಬೇಷಿಯಸ್ ಸಿಸ್ಟ್ ಬೆಳೆಯುವ ಲಕ್ಷಣಗಳು

ಸೇಬೇಷಿಯಸ್ ಗ್ರಂಥಿಗಳು ಅಥವಾ ಅವುಗಳ ನಾಳಗಳಿಗೆ ಹಾನಿಯಾದಾಗ ಅಥವಾ ಅಡ್ಡಿಯುಂಟಾದಾಗ ಸೇಬೇಷಿಯಸ್ ಸಿಸ್ಟುಗಳು ಬೆಳೆಯುತ್ತವೆ. ಚರ್ಮದ ಕೆಳಗೆ ನೋವಿಲ್ಲದ ಸಣ್ಣ ಗಂಟಿನಂತಹ ರಚನೆ ಕಂಡುಬರುವುದೇ ಇದರ ಮೊದಲ ಲಕ್ಷಣ. ಕೆಲವೊಮ್ಮೆ ಇದು ಊದಿಕೊಂಡು ಮೃದುವಾಗುತ್ತದೆ. ಕೆಂಪಾಗಿ ಕಾಣುತ್ತದೆ. ಪದೇ ಪದೇ ಇವುಗಳನ್ನು ಮುಟ್ಟಿಕೊಂಡರೆ ಕಿರಿಕಿರಿಯುಂಟಾಗುತ್ತದೆ. ಆದ್ದರಿಂದ ಇವುಗಳನ್ನು ಮುಟ್ಟಬಾರದು. ನಾವು ಸೇವಿಸುವ ಆಹಾರಗಳಾಗಲೀ ಪಾನೀಯಗಳಾಗಲೀ ಇವುಗಳ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. 

ಸೆಬೇಷಿಯಸ್ ಸಿಸ್ಟ್ ವಾಸಿಯಾಗುವುದೇ?

ಕೆಲವು ಸೇಬೇಷಿಯಸ್ ಸಿಸ್ಟುಗಳು ಸ್ವಲ್ಪ ದಿನಗಳಲ್ಲೇ ತಾವಾಗಿಯೇ ವಾಸಿಯಾಗುತ್ತವೆ. ಕೆಲವೊಮ್ಮೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ತೀರಾ ಅಪರೂಪಕ್ಕೆ ಈ ಸಿಸ್ಟುಗಳು ಹಾನಿಕಾರಕವಾಗಿ ಕ್ಯಾನರಿಗೆ ಕಾರಣವಾಗಬಹುದು. ಈ ಬಗ್ಗೆ ಹುಷಾರಾಗಿರಬೇಕು. ಸಣ್ಣ ಸಿಸ್ಟುಗಳು ಸಾಮಾನ್ಯವಾಗಿ ನೋವು ಕೊಡುವುದಿಲ್ಲ. ಆದರೆ ದೊಡ್ಡ ಸಿಸ್ಟುಗಳು ಮುಖ ಮತ್ತು ಕತ್ತಿನ ಮೇಲೆ ಒತ್ತಡ ಮತ್ತು ನೋವನ್ನು ಉಂಟುಮಾಡಬಹುದು. ಇವುಗಳು ಸಾಮಾನ್ಯವಾಗಿ ನೆತ್ತಿ, ಮುಖ ಮತ್ತು ಕುತ್ತಿಗೆ ಹಿಂದೆ ಕಾಣಿಸಿಕೊಳ್ಳಬಹುದು. ಈ ಸಿಸ್ಟುಗಳು ಐದು ಸೆಂಟಿಮೀಟರ್‌ಗಳಿಗಿಂತ ದೊಡ್ಡದಾದ ವ್ಯಾಸವಿದ್ದರೆ, ತೆಗೆದುಹಾಕಿದ ನಂತರ ವೇಗವಾಗಿ ಮತ್ತೆ ಕಾಣಿಸಿಕೊಂಡರೆ ಗಂಭೀರ ಸ್ಥಿತಿ ಉಂಟಾಗಬಹುದು. 

ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ: ಭಯ ಬೇಡ, ಜಾಗ್ರತೆ ಇರಲಿ

ವೈದ್ಯರಲ್ಲಿಗೆ ಹೋದಾಗ ಮೊದಲು ಅವರು ಸೇಬೇಷಿಯಸ್ ಸಿಸ್ಟುಗಳ ಹೊರಪರೀಕ್ಷೆ ಮಾಡುತ್ತಾರೆ. ಹಾನಿಕಾರಕವಾಗಿ ಕಂಡುಬಂದರೆ ಅಲ್ಟ್ರಾಸೌಂಡ್/ಸಿಟಿ ಸ್ಕ್ಯಾನ್ ಪರೀಕ್ಷೆಯ ಮೂಲಕ ಅದರೊಳಗೆ ಏನಿದೆ ಎಂದು ತಿಳಿದುಕೊಂಡು ಚಿಕಿತ್ಸೆ ಮಾಡುತ್ತಾರೆ. ಹಾನಿಕಾರಕವಾಗಿದ್ದರೆ ಅವುಗಳನ್ನು ಸೂಜಿ ಚುಚ್ಚಿ ತೆಗೆದುಹಾಕುತ್ತಾರೆ.  ಸೇಬೇಷಿಯಸ್ ಸಿಸ್ಟುಗಳು ಚಿಕ್ಕದಾಗಿದ್ದರೆ, ಹೆಚ್ಚು ಬೆಳೆಯದಿದ್ದರೆ ಮತ್ತು ತೊಂದರೆಯಾಗದಿದ್ದರೆ ಇವುಗಳನ್ನು ನಿರ್ಲಕ್ಷಿಸಬಹುದು, ಏಕೆಂದರೆ ಇವು ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ ಇವುಗಳಿಂದ ಉರಿ ಉಂಟಾಗುತ್ತಿದ್ದರೆ ಊತವನ್ನು ಕಡಿಮೆ ಮಾಡಲು ಅದಕ್ಕೆ ಔಷಧವನ್ನು ಚುಚ್ಚಬಹುದು. ನೆತ್ತಿಯ ಮೇಲೆ ಸೇಬೇಷಿಯಸ್ ಸಿಸ್ಟುಗಳು ಕೂದಲಿನ ಬೆಳವಣಿಗೆಗೆ ಅಡ್ಡಿಪಡಿಸಿದರೆ ಅಥವಾ ಬಟ್ಟೆ ಹಾಕಿಕೊಳ್ಳಲು ತೊಂದರೆಯಾಗುತ್ತಿದ್ದರೆ ಇವುಗಳನ್ನು ತೆಗೆದುಹಾಕಬೇಕಾಗುತ್ತದೆ. 

ಸೇಬೇಷಿಯಸ್ ಸಿಸ್ಟ್ ಬರದಂತೆ ತಡೆಯುವುದು ಹೇಗೆ?

ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಸೇಬೇಷಿಯಸ್ ಸಿಸ್ಟುಗಳ ಬರದಂತೆ ತಡೆಯಬಹುದು. ಇವು ಕಾಣಿಸಿಕೊಂಡರೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಶುದ್ಧವಾದ ಬಟ್ಟೆ, ಹತ್ತಿ ಉಣ್ಣೆ ಅಥವಾ ವೈದ್ಯಕೀಯ ಡ್ರೆಸ್ಸಿಂಗ್ ವಸ್ತುಗಳಿಂದ ತೊಳೆಯುವ ಮೂಲಕ ಸೇಬೇಷಿಯಸ್ ಸಿಸ್ಟುಗಳ ಮತ್ತು ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬಹುದು. ಶುದ್ಧವಾದ, ಬೆಚ್ಚಗಿನ ನೀರಿನಿಂದ ನಿಧಾನವಾಗಿ ಇವುಗಳನ್ನು ತೊಳೆದು ಒಣಗಿಸಿಕೊಳ್ಳಬಹುದು.  ಬೇಸಿಗೆ ಕಾಲದಲ್ಲಿ ಇಂತಹ ಚರ್ಮದ ಸಮಸ್ಯೆಗಳು ಕಾಡಬಹುದು. ಆದ್ದರಿಂದ ಈ ಕಾಲದಲ್ಲಿ ಚರ್ಮದ ಕಾಳಜಿ ಮಾಡಬೇಕು. ಪ್ರತಿದಿನವೂ ತಪ್ಪದೇ ಸ್ನಾನ ಮಾಡಬೇಕು. ಹೆಚ್ಚು ಬೆವರಿದರೆ ಎರಡು ಸಲ ಸ್ನಾನ ಮಾಡಿದರೂ ತಪ್ಪಿಲ್ಲ. ಚರ್ಮದ ಶುಚಿತ್ವಕ್ಕೆ ಮೊದಲು ಗಮನ ಕೊಡಬೇಕು. 

ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರುಗುಳ್ಳೆ ಸಮಸ್ಯೆ

ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಶತಶತಮಾನಗಳಿಂದಲೂ ಶ್ರೀಗಂಧವನ್ನು ಬಳಸಲಾಗುತ್ತಿದೆ. ಎರಡು ಚಮಚ ಶುದ್ಧ ಶ್ರೀಗಂಧದ ಪುಡಿಯನ್ನು ಮತ್ತು ಅರಿಷಿನವನ್ನು ಬೆರೆಸಿ ಸಸ್ಟುಗಳಿರುವ ಭಾಗಕ್ಕೆ ಹಚ್ಚಬೇಕು. ಇದಲ್ಲದೇ ಪ್ರತಿದಿನ ಸ್ನಾನದ ನಂತರ ಕೇವಲ ಮುಖಕ್ಕೆ ಮಾತ್ರವಲ್ಲ ದೇಹಕ್ಕೂ ಕೂಡ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಬೇಸಿಗೆಯ ಝಳದಿಂದ ತಪ್ಪಿಸಿಕೊಳ್ಳಲು ಸೂಕ್ತವಾದ ಟಾಲ್ಕಂ ಪೌಡರನ್ನು ನಿಯಮಿತವಾಗಿ ಉಪಯೋಗಿಸುವುದು ಒಳ್ಳೆಯದು. 

ಒಟ್ಟಾರೆ ಹೇಳುವುದಾರೆ ಸೆಬಾಸಿಯಸ್ ಸಿಸ್ಟುಗಳು ಚರ್ಮದ ಮೇಲೆ ಬೆಳೆಯುವ ದ್ರವ ತುಂಬಿದ ಗಡ್ಡೆಗಳಂತಹ ರಚನೆಗಳಾಗಿವೆ. ಸಾಮಾನ್ಯವಾಗಿ ಇವು ನಿರುಪದ್ರವವಾಗಿರುತ್ತವೆ. ಇವುಗಳಿಂದ ನೋವು ಅಥವಾ ಕಿರಿಕಿರಿ ಉಂಟಾದಾಗ ವೈದ್ಯರನ್ನು ಕಂಡು ಇವುಗಳನ್ನು ತೆಗೆಸಿಹಾಕಿಕೊಳ್ಳಬೇಕು.


ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com


Stay up to date on all the latest ಅಂಕಣಗಳು news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp