ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಾಂಡಿಸ್ ಅಥವಾ ಕಾಮಾಲೆ ರೋಗ (ಕುಶಲವೇ ಕ್ಷೇಮವೇ)

ಜಾಂಡಿಸ್ ಮೂಲತ: ಯಕೃತ್ತಿಗೆ ಅಂದರೆ ಲಿವರ್ ಗೆ ನೇರವಾಗಿ ಸಂಬಂಧಿಸಿದ ಕಾಯಿಲೆಯಾಗಿದೆ. ಅಷ್ಟೊಂದು ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಸರಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಅರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟಾಗಬಹುದು.

ಜಾಂಡಿಸ್ ಅಥವಾ ಕಾಮಾಲೆ ಹಸುಗೂಸುಗಳು, ಮಕ್ಕಳನ್ನು ಮತ್ತು ವಯಸ್ಕರನ್ನು ಕಾಡುವ ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಹದಿಹರೆಯದವರು ಮತ್ತು ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಜಾಂಡಿಸ್ ಹೆಚ್ಚಾಗಿ ಕಂಡುಬರುತ್ತದೆ. ಜಾಂಡಿಸ್ ಬಂದಾಗ ಕಣ್ಣಿನ ಒಳಭಾಗ ಮತ್ತು ಚರ್ಮದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಮೂತ್ರ ಕೂಡ ಅರಿಷಿಣ ಬಣ್ಣದಲ್ಲಿ ಹೋಗುತ್ತದೆ. ಕ್ರಮೇಣ ದೇಹದ ಒಳಭಾಗದ ಅಂಗಗಳು ಕೂಡ ತೆಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದಲೇ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂಬ ಜನಜನಿತ ಗಾದೆ ಹುಟ್ಟಿದೆ.

ಜಾಂಡಿಸ್ ಎಂದರೇನು?
ಜಾಂಡಿಸ್ ಮೂಲತ: ಯಕೃತ್ತಿಗೆ ಅಂದರೆ ಲಿವರ್ ಗೆ ನೇರವಾಗಿ ಸಂಬಂಧಿಸಿದ ಕಾಯಿಲೆಯಾಗಿದೆ. ಅಷ್ಟೊಂದು ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಸರಿಯಾಗಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಅರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟಾಗಬಹುದು. ಹೀಗಾಗಿಯೇ ಜಾಂಡಿಸ್ ಆದಾಗ ಆಹಾರದ ಕಡೆ ವಿಶೇಷವಾಗಿ ಗಮನಕೊಡುವಂತೆ ವೈದ್ಯರು ಸಲಹೆ ಮಾಡುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಲಿವರ್‌ನಲ್ಲಿ ಉತ್ಪತ್ತಿಯಾಗುವ ಬಿಲುರುಬಿನ್ ಅಥವಾ ಪಿತ್ತದ ಪ್ರಮಾಣವು ರಕ್ತದಲ್ಲಿ ಹೆಚ್ಚಾದರೆ ಆ ಪರಿಸ್ಥಿತಿಯನ್ನು ಜಾಂಡೀಸ್ ಎಂದು ಕರೆಯುತ್ತಾರೆ. ಆರೋಗ್ಯವಂತ ಜನರಲ್ಲಿ ಬಿಲುರುಬಿನ್ 100 ಮಿಲಿ ಲೀಟರ್ ರಕ್ತದಲ್ಲಿ 0.2 ಮಿಲಿಗ್ರಾಂ ನಿಂದ 0.8 ಮಿಲಿಗ್ರಾಂನವರೆಗೆ ಇರುತ್ತದೆ. ಇದರ ಮಟ್ಟ 2 ಮಿಲಿಗ್ರಾಂಗಿಂತ ಜಾಸ್ತಿಯಾದಲ್ಲಿ ಮೂತ್ರ, ಕಣ್ಣು, ಚರ್ಮ, ಉಗುರು ಮುಂತಾದವುಗಳು ಹಳದಿ ಬಣ್ಣವನ್ನು ತಳೆದು ಜಾಂಡಿಸ್ ಕಾಣಿಸಿಕೊಳ್ಳುತ್ತದೆ.

ಜಾಂಡಿಸ್ ಕಾಯಿಲಯ ಲಕ್ಷಣಗಳೇನು?
ಬಿಲುರುಬಿನ್ ಆಹಾರದ ಜೀರ್ಣಕ್ರಿಯೆಗೆ ಬಹಳ ಅವಶ್ಯಕ. ಈ ಅಂಶವು ಲಿವರ್‌ನ ಸೋಂಕು ಅಥವಾ ಇತರೆ ಕಾರಣಗಳಿಂದಾಗಿ ಕರುಳಿಗೆ ಸೇರದೆ ರಕ್ತದಲ್ಲೇ ಉಳಿಯುತ್ತದೆ. ಇದರಿಂದ ಜೀರ್ಣಶಕ್ತಿ ತುಂಬಾ ಕಡಿಮೆಯಾಗಿ ದೇಹದ ಬಲ ಕುಂದುತ್ತದೆ. ಸುಲಭವಾಗಿ ಜೀರ್ಣವಾಗದ ಆಹಾರವನ್ನು ಸೇವಿಸಿದಾಗ ಅಜೀರ್ಣವಾಗಿ ಹೊಟ್ಟೆನೋವು ಬಂದು ಸಾಕಷ್ಟು ತೊಂದರೆಯಾಗುತ್ತದೆ. ಜೊತೆಗೆ ವಾಂತಿ, ವಿಪರೀತ ಜ್ವರ, ಸುಸ್ತು ಮತ್ತು ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ನಾಲಿಗೆ ಬಣ್ಣ ಕೂಡ ಹಳದಿಯಾಗುತ್ತದೆ. ಹಸಿವೆಯಾಗದೇ ಇರುವುದು ಜಾಂಡಿಸ್ ರೋಗದ ಒಂದು ಲಕ್ಷಣವಾಗಿದೆ.

ಈ ರೋಗದ ಪತ್ತೆಗೆ ಮೂತ್ರದ ಪರೀಕ್ಷೆ ಮಾಡಿ ಮೂತ್ರದಲ್ಲಿನ ಬಿಲುರುಬಿನ್ ಪ್ರಮಾಣವನ್ನು ಕಂಡುಹಿಡಿಯುತ್ತಾರೆ. ಸಂಪೂರ್ಣ ರಕ್ತ ಪರೀಕ್ಷೆ ಕೂಡ ಮಾಡುತ್ತಾರೆ. ಹೆಚ್ಚಿನ ಪರೀಕ್ಷೆ ಅಗತ್ಯವಿದ್ದಲ್ಲಿ ಹೊಟ್ಟೆಯ ಭಾಗದ ಅಲ್ಟ್ರಾ ಸೌಂಡ್, ಸಿಟಿ ಸ್ಕ್ಯಾನ್ ಮತ್ತು ಲಿವರ್ ಬಯಾಪ್ಸಿ ಕೂಡಾ ಮಾಡಲಾಗುತ್ತದೆ.

ಜಾಂಡಿಸ್ ರೋಗಿಗೆ ಪಥ್ಯದ ಆಹಾರ ಏಕೆ ಮುಖ್ಯ?
ಜಾಂಡಿಸ್ ಬಂದಾಗ ಲಿವರಿನ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಆಹಾರವನ್ನು ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ಲಘು ಆಹಾರಗಳ ಸೇವನೆಯನ್ನು ಮಾಡಬೇಕು. ಕೊಬ್ಬುರಹಿತ ಕಡಿಮೆ ಖಾರವುಳ್ಳ ಮತ್ತು ಸುಲಭಜೀರ್ಣ ಆಹಾರದ ಸೇವನೆ ಅತ್ಯಗತ್ಯ. ನೀರು, ಎಳನೀರು, ಹಣ್ಣಿನ ರಸ ಮತ್ತು ಗ್ಲುಕೋಸ್ ಸೇವನೆ ಮಾಡುವುದು ಮುಖ್ಯ. ಜೀರ್ಣಕ್ರಿಯೆಯು ಇದರಿಂದ ಕ್ರಮೇಣ ಸುಧಾರಿಸುತ್ತದೆ.

ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ದೇಹದಿಂದ ತ್ಯಾಜ್ಯ ಪದಾರ್ಥ/ವಿಷವನ್ನು ಹೊರಹಾಕುವ ಮೂಲಕ ಯಕೃತ್ತಿನ ಕೆಲಸವನ್ನು ಸುಲಭಗೊಳಿಸುತ್ತದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಜಾಂಡಿಸ್ ರೋಗಿಗಳು ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯಬೇಕು. ಕ್ರಮೇಣ ಕಬ್ಬಿನ ಹಾಲು, ತೆಳು ಮಜ್ಜಿಗೆ ಹಾಗೆಯೇ ಕೆಲವು ದಿನಗಳ ನಂತರ ಅಕ್ಕಿ ಅಥವಾ ರಾಗಿ ಗಂಜಿ ಮಾಡಿ ಸೇವನೆ ಮಾಡುವುದು ಒಳ್ಳೆಯದು. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ ಊಟವಾದ ನಂತರ ಸೇವಿಸುವ ಮೂಲಕ ಕಾಮಾಲೆ ರೋಗ ಶೀಘ್ರವೇ ಗುಣವಾಗುತ್ತದೆ. ತಾಜಾ ತರಕಾರಿಗಳನ್ನು ಮೃದುವಾಗಿ ಬೇಯಿಸಿ ಅನ್ನದ ಜೊತೆಗೆ ಸೇವಿಸಬೇಕು. ಮೂಲಂಗಿಯನ್ನು ಬೇಯಿಸಿ ಅದರ ರಸ ಮತ್ತು ಸೊಪ್ಪನ್ನು ಬಳಸುವುದು ಉತ್ತಮ. ತರಕಾರಿಗಳ ಮೃದುವಾಗಿ ಹಿಸುಕಿ ಸೂಪನ್ನು ತಯಾರಿಸಿ ಸೇವಿಸಿದರೂ ಲಿವರಿನ ಕಾರ್ಯಕ್ಷಮತೆ ನಿಧಾನವಾಗಿ ಸುಧಾರಿಸುತ್ತದೆ. ಟೊಮ್ಯಾಟೋ, ಬೆಳ್ಳುಳ್ಳಿ ಮತ್ತು ನೆಲ್ಲಿಕಾಯಿಗಳ ಸೇವನೆ ಹಿತಕಾರಿ. ಅಂತೆಯೇ ಲಿವರಿನ ಆರೋಗ್ಯ ಸರಿಪಡಿಸಿಕೊಳ್ಳಲು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚ ನೆಲನೆಲ್ಲಿ ಸೊಪ್ಪಿನ ರಸ ಮತ್ತು ಭೃಂಗರಾಜ/ದರುಗದ ಸೊಪ್ಪಿನ ರಸ ಬೆರೆಸಿ ಸೇವಿಸಬೇಕು.

ಈ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಜೀರಿಗೆ ನೀರು ಮತ್ತು ಬಾರ್ಲಿ ಗಂಜಿಯ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಸಾಕಷ್ಟು ಉಳಿಯಲು ನಿಂಬೆಹಣ್ಣು ಮತ್ತು ಮೂಸಂಬಿ ರಸವನ್ನು ಸೇವಿಸಬೇಕು. ನಿಧಾನವಾಗಿ ಪೊಂಗಲ್, ಕಿಚಡಿ, ಅನ್ನದೊಂದಿಗೆ ಹೆಸರುಬೇಳೆ ಕಟ್ಟು, ಹುರುಳಿ ಕಟ್ಟು, ಬೇಯಿಸಿದ ಸೋರೆಕಾಯಿ, ಪಡುವಲ ಕಾಯಿ, ಸೌತೆಕಾಯಿ ಸೇವಿಸಬೇಕು. ಅಲ್ಲದೆ ಕೆಂಪು ಅಕ್ಕಿ, ಗೋಧಿ, ಹೆಸರುಕಾಳು, ಕಬ್ಬಿನಹಾಲು, ಮತ್ತು ದ್ರಾಕ್ಷಿರಸದ ಸೇವನೆ ಉತ್ತಮ ಪಥ್ಯ. ಅತಿಯಾದ ಖಾರ, ಕರಿದ ಪದಾರ್ಥ, ಮಸಾಲೆ ಪದಾರ್ಥ, ಮಾಂಸಾಹಾರ, ಉದ್ದಿನಪದಾರ್ಥ, ಜಂಕ್‌ಫುಡ್, ಮದ್ಯಪಾನ, ಧೂಮಪಾನ, ಮೊಸರು, ಚಹಾ, ಕಾಫಿಯ ಮತ್ತು ಸಾಸಿವೆ ಎಣ್ಣೆಯ ಸೇವನೆ ನಿಲ್ಲಿಸಬೇಕು. ಮಾನಸಿಕ ಒತ್ತಡದಿಂದ ದೂರವಿರಬೇಕು. ಅನವಶ್ಯಕವಾಗಿ ವ್ಯಾಯಾಮಗಳನ್ನು ಮಾಡಬಾರದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ನಿಲ್ಲಿಸಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Related Stories

No stories found.

Advertisement

X
Kannada Prabha
www.kannadaprabha.com