ಶ್ರೀಮಂತರಾಗಿದ್ದೂ ಧಾರ್ಮಿಕರಾಗಿರಲು ಸಾಧ್ಯವೆ? ಹಣದ ಪ್ರಾಮುಖ್ಯತೆ ಬಗ್ಗೆ ಇರುವ ಧಾರ್ಮಿಕ ನಂಬಿಕೆಗಳೇನು? (ಹಣಕ್ಲಾಸು)

ಹಣಕ್ಲಾಸು-384-ರಂಗಸ್ವಾಮಿ ಮೂಕನಹಳ್ಳಿ
ಹಣ (ಸಂಗ್ರಹ ಚಿತ್ರ)
ಹಣ (ಸಂಗ್ರಹ ಚಿತ್ರ)
Updated on

ನಾವು ವಾಸಿಸುತ್ತಿರುವ ಈ ಭೂಮಂಡಲದಲ್ಲಿ 800 ಕೋಟಿ ಜನರಿದ್ದೇವೆ. ಇದರಲ್ಲಿ 84 ಪ್ರತಿಶತ ಜನ ತಮ್ಮನ್ನ ತಾವೇ ದೈವವನ್ನ ನಂಬುವವರು ಅಥವಾ ರಿಲಿಜಿಯಸ್ ಎಂದು ಗುರುತಿಸಿಕೊಂಡಿದ್ದಾರೆ. ಉಳಿದ 16 ಪ್ರತಿಶತ ಜನ ಯಾವುದೇ ಧರ್ಮದಲ್ಲಿ ನಂಬಿಕೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜಗತ್ತಿನ ಜನಸಂಖ್ಯೆಯ 31 ಪ್ರತಿಶತ ಜನ ಕ್ರೈಸ್ತ ಧರ್ಮವನ್ನ ಪಾಲಿಸುವುದಾಗಿಯೂ, 25 ಪ್ರತಿಶತ ಜನ ಇಸ್ಲಾಂ ಧರ್ಮವನ್ನ ನಂಬುವುದಾಗಿಯೂ ಮತ್ತು 15.6 ಪ್ರತಿಶತ ನಿರೀಶ್ವರವಾದಿಗಳಾಗಿಯೂ ಮತ್ತು 15.2 ಪ್ರತಿಶತ ಜನ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದರೆ. ಜಗತ್ತಿನಾದ್ಯಂತ ಬುದ್ಧನ ಆರಾಧಕರು 6.6 ಪ್ರತಿಶತವಿದ್ದಾರೆ.

ಗುಡ್ಡಗಾಡಿನ ಪ್ರದೇಶದಲ್ಲಿ ಇಂದಿಗೂ ವಾಸಿಸುತ್ತ, ಬೆಟ್ಟಗುಡ ಕಾಡು, ನೀರು, ಪಕ್ಷಿಗಳನ್ನ ದೈವವೆಂದು ನಂಬುವ ಆಫ್ರಿಕಾ, ಆಸ್ಟ್ರೇಲಿಯಾ, ಚೀನಾ, ಅಮೆರಿಕಾದ ಮೂಲನಿವಾಸಿಗಳು 5.6 ಪ್ರತಿಶತವಿದೆ. ಯಹೂದಿಗಳು, ಜೈನರು, ಬಹಾಯ್ಸ್, ಸಿಖ್ಖರು, ಟಾವೋಯಿಸ್ಟ್ಸ್ ಇತ್ಯಾದಿ ಧಾರ್ಮಿಕರ ಸಂಖ್ಯೆ ಜಗತ್ತಿನ ಒಟ್ಟುಜನಸಂಖ್ಯೆಯ 1 ಪ್ರತಿಶತವಾಗಿದೆ. 

ಮೇಲಿನ ಅಂಕಿ-ಅಂಶವನ್ನ ನೀಡಲು ಒಂದು ಸರಳವಾದ ಕಾರಣವಿದೆ. ಗಮನಿಸಿ ನೋಡಿ ಇವರೆಲ್ಲರೂ ತಮ್ಮ ತಮ್ಮ ಧಾರ್ಮಿಕ ನಂಬಿಕೆಯಂತೆ ಜೀವನವನ್ನ ನಡೆಸುತ್ತಾರೆ. ಬೇರೆ ಧರ್ಮದ ಬಗ್ಗೆ ಅಸಹನೆ ಇಲ್ಲದಿರಬಹುದು, ಆದರೆ ಅವರ ಆಚಾರ ಮತ್ತು ವಿಚಾರಗಳನ್ನ ಮಾತ್ರ ಅವರು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೇ? ಇವರೆಲ್ಲರನ್ನ ಬೆಸೆಯುವ ಸಾಮಾನ್ಯ ಅಂಶ ಯಾವುದಿರಬಹುದು? ಹೌದು ಹಣ, ಎಲ್ಲಾ ಧರ್ಮದವರನ್ನ, ಎಲ್ಲಾ ಮತ, ನಂಬಿಕೆಯವರನ್ನ ಬೆಸೆಯುವ ಸಾಧನವಾಗಿದೆ. ಮೇಲಿನ ಅಂಕಿ-ಅಂಶ ನೀಡಲೂ ಇದೆ ಕಾರಣ, ಇವರಲ್ಲಿ ಪಾಯಿಂಟ್ ಒಂದು ಪರ್ಸೆಂಟ್ ಜನ ಕೂಡ ಹಣವನ್ನ ಬಳಸುವುದಿಲ್ಲ, ಹಣದ ಮೇಲೆ ನಂಬಿಕೆಯಿಲ್ಲ ಎನ್ನುವ ಮಾತನ್ನ ಆಡುವುದಿಲ್ಲ. ಒಟ್ಟು ಜನಸಂಖ್ಯೆ, ಜಾತಿ, ಧರ್ಮ, ಲಿಂಗ, ಭಾಷೆ, ದೇಶದ ಆಧಾರದಲ್ಲಿ ವಿಂಗಡಣೆಯಾಗುತ್ತದೆ. ಆದರೆ ಇದರಲ್ಲಿ ಯಾರೊಬ್ಬರೂ ಮಾತ್ರ ಹಣದ ವಿಷಯದಲ್ಲಿ ಒಡೆದು ಹೋಗುವುದಿಲ್ಲ. ಹಣ ಎನ್ನುವುದಕ್ಕೆ ಇರುವ ಸಾರ್ವತ್ರಿಕ ಸ್ವೀಕಾರ (ಯೂನಿವರ್ಸಲ್ ಅಕ್ಸೆಪ್ಟೆನ್ಸ್) ಎಷ್ಟು ದೊಡ್ಡದು ಎನ್ನುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. 

ಇದಕ್ಕೆ ಇರುವ ಯೂನಿವರ್ಸಲ್ ಅಕ್ಸೆಪ್ಟೆನ್ಸ್ ಇಂದಿನ ಶಕ್ತಿಯನ್ನ ಹಣಕ್ಕೆ ನೀಡಿದೆ. ಹಣ ಬದುಕಿಗೆ ಬೇಕೇಬೇಕು ಅಂದ ಮಾತ್ರಕ್ಕೆ ಎಲ್ಲಾ ಧರ್ಮಗಳೂ ಬೇಕಾದ್ದು ಮಾಡಿ ಎಂದು ಎಂದಿಗೂ ತನ್ನ ಜನರಿಗೆ ಹೇಳಿಲ್ಲ. ಎಲ್ಲಾ ಧರ್ಮಗಳ ಸಾರವೊಂದೇ! ಹಣದ ಗಳಿಕೆ ಬಹಳ ಮುಖ್ಯ, ಆದರೆ ಅದು ನಮ್ಮನ್ನೇ ನಿಯಂತ್ರಿಸುವ ಮಟ್ಟಕ್ಕೆ ಎಂದಿಗೂ ಹೋಗಬಾರದು. ಹಣದ ಉದ್ದೇಶ, ಸೃಷ್ಟಿಯ ಅರ್ಥ ವಿನಿಮಯಕ್ಕಾಗಿ, ಖರ್ಚು ಮಾಡುವುದಕ್ಕಾಗ್ಗಿಯೇ ಹಣವನ್ನ ಸೃಷ್ಟಿಸಲಾಗಿದೆ. ಮನುಷ್ಯನ ನಡುವಿನ ಸಂಬಂಧಕ್ಕಿಂತ ಮಿಗಿಲಾದ ಮೌಲ್ಯ ಯಾವುದಕ್ಕೂ ಇಲ್ಲ ಎನ್ನುವುದು ಎಲ್ಲಾ ಧರ್ಮಗಳ ಸಾರ. 

ಇವತ್ತಿನ ಕಾಮನ್ ಎರಾಗೆ (ಸಾಮಾನ್ಯ ಶಕ) 1,300 ವರ್ಷ ಹಿಂದೆಯೇ ಬರೆಯಲ್ಪಟ್ಟಿರುವ ಋಗ್ವೇದ ಮತ್ತು ಯಹೂದಿಗಳ ತನಕ್ ನಲ್ಲಿ ಹಣದ ಉಲ್ಲೇಖವಿದೆ. ಇದರರ್ಥ ಹಣಕ್ಕೆ ಕಡಿಮೆಯೆಂದರೂ 5 ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಆ ನಂತರ ಬಂದ ಎಲ್ಲಾ ಧರ್ಮಗಳು ಮತ್ತು ಧರ್ಮ ಗ್ರಂಥಗಳಲ್ಲಿ ಕೂಡ ಹಣದ ಬಗ್ಗೆ ಉಲ್ಲೇಖಗಳು ಹೇರಳವಾಗಿ ಸಿಗುತ್ತವೆ. 

ಬೈಬಲ್, ಭಾಗವದ್ಗೀತೆ, ಕುರಾನ್, ಧಮ್ಮಪದ, ತನಕ್, ಗ್ರಂಥ ಸಾಹೇಬ, ಹೀಗೆ ಯಾವುದೇ ಧರ್ಮಗ್ರಂಥವಿರಲಿ ಅವುಗಳೆಲ್ಲವುದರಲ್ಲೂ ಹೆಚ್ಚು ಹಣ ಸಂಗ್ರಹಣೆ ತಪ್ಪು, ಅಪರಾಧ ಎನ್ನುವ ಮಾತುಗಳನ್ನ ಹೇಳಿದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಇವೆಲ್ಲಾ ಧರ್ಮಗಳೂ ದಾನವನ್ನ ಮಾಡುವುದರ ಬಗ್ಗೆ ಹೆಚ್ಚಿನ ಒತ್ತು ನೀಡುತ್ತವೆ. ಧನವೂ ದಾನ ಮಾಡಿದಂತೆ ವೃದ್ಧಿಸುತ್ತದೆ ಎನ್ನುವುದು ಎಲ್ಲಾ ಧರ್ಮಗಳ ನಂಬಿಕೆ ಕೂಡ. ಆದರೆ ಇಂದಿನ ದಿನದ ವಿಪರ್ಯಾಸ ನೋಡಿ! ನಮ್ಮಲ್ಲಿ ಕೋಟ್ಯಂತರ ಹಣವುಳ್ಳ ಕ್ರೈಸ್ತರು, ಹಿಂದೂಗಳು, ಮುಸ್ಲಿಮರು, ಸಿಖ್ಖರು, ಯಹೂದಿಗಳು ಇದ್ದಾರೆ. ಮತ್ತು ಇವರೆಲ್ಲರ ನಡುವೆ ತಮ್ಮ ಧರ್ಮಗಳ ಕುರಿತು ಕಚ್ಚಾಟವಿದೆ, ಆದರೆ ಯಾರೊಬ್ಬರೂ ತಮ್ಮ ಧರ್ಮವನ್ನ ಸರಿಯಾಗಿ ಪಾಲಿಸುತ್ತಿಲ್ಲ!!

ಉದಾಹರಣೆಗೆ ಹಿಂದೂ ಧರ್ಮವನ್ನೇ ತೆಗೆದುಕೊಳ್ಳೋಣ. ಪ್ರತಿಯೊಬ್ಬ ಹಿಂದೂವಿನ ಜೀವನ ಚಕ್ರದಲ್ಲಿ ನಾಲ್ಕು ಪ್ರಮುಖ ಭಾಗಗಳಿವೆ, ಅವುಗಳನ್ನ ನಾವು ಪುರುಷಾರ್ಥ ಎನ್ನುತ್ತೇವೆ. ಎಲ್ಲವುದಕ್ಕಿಂತ ದೊಡ್ಡದು ಮೋಕ್ಷ. ಇದನ್ನ ನಾವು ಪರಮಪುರುಷಾರ್ಥ ಎನ್ನುತ್ತೇವೆ. ಹುಟ್ಟು-ಸಾವುಗಳ ಜೀವನಚಕ್ರದಿಂದ ಹೊರಬಂದು ಆತ್ಮ ಸಾಕ್ಷತ್ಕಾರವನ್ನ ಪಡೆಯುವುದಕ್ಕೆ ಮೋಕ್ಷ ಎನ್ನಲಾಗುತ್ತದೆ. ಈ ಮೋಕ್ಷ ಸಿದ್ಧಿಗೆ ಉಳಿದ ಮೂರು ಪುರುಷಾರ್ಥಗಳನ್ನ ನಾವು ಗೆಲ್ಲಬೇಕಾಗುತ್ತದೆ. ಅವೆಂದರೆ ಕಾಮ, ಧರ್ಮ ಮತ್ತು ಅರ್ಥ. ಯಹೂದಿಗಳನ್ನ ಬಿಟ್ಟರೆ ಹಣದ ಬಗ್ಗೆ ಮತ್ತು ಹಣ ಸಂಗ್ರಹಣೆ ತಪ್ಪಲ್ಲ, ಹಣವಂತರೆಲ್ಲಾ ಕೆಟ್ಟವರಲ್ಲ ಎನ್ನುವ ಭಾವನೆಯನ್ನ ಅಭಿವ್ಯಕ್ತಪಡಿಸುವುದು ಹಿಂದೂ ಧರ್ಮ. ಹೇಗೆ ವಂಶವೃದ್ಧಿಗೆ ಕಾಮ ಮುಖ್ಯವೋ, ಅಷ್ಟೇ ಮುಖ್ಯ ಅದರ ನಿಗ್ರಹ, ನಿಗ್ರಹದಿಂದ ಮಾತ್ರ ಮೋಕ್ಷದೆಡೆಗೆ ದಾರಿ ಎನ್ನುತ್ತಾರೆ. ಹಾಗೆ ಧರ್ಮ, ಉತ್ತುಂಗದಲ್ಲಿದ್ದೂ ಎಲ್ಲಾ ಧರ್ಮವನ್ನ ಸಮನ್ವಯ ಭಾವದಿಂದ ನೋಡುವುದು, ಎಲ್ಲವನ್ನೂ ತೊರೆದು ಎಲ್ಲವೂ ಒಂದೇ ಎನ್ನುವ ಭಾವನೆ ಹೊಂದುವುದು ಮೋಕ್ಷಕ್ಕೆ ರಹದಾರಿ. ಅಂತೆಯೇ ಅರ್ಥ. ಗಳಿಸಿದ ಹಣವನ್ನ ನಾವು ಉತ್ತಮ ಕಾರ್ಯಕ್ಕೆ ವ್ಯಯಿಸಬೇಕು. ಹಣದ ಗಳಿಕೆ ಮತ್ತು ಸಂಗ್ರಹವನ್ನ ವ್ಯಾಮೋಹ ಬಿಟ್ಟುಮಾಡಬೇಕು. ನನ್ನದು ಆದರೂ ನನ್ನದಲ್ಲ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು , ಅರ್ಹರಿಗೆ, ಇಲ್ಲದವರಿಗೆದಾನ ಮಾಡಬೇಕು ಎನ್ನುತ್ತದೆ. 

ದಾರಿದ್ರ್ಯನಾಶನಮ್ ದಾನಂ ಶೀಲಂ ದುರ್ಗತಿನಾಶನಮ್|
ಅಜ್ಞಾನನಾಶಿನೀ ಪ್ರಜ್ಞಾ ಭಾವನಾ ಭಯನಾಶಿನೀ||

ದಾನವು ಬಡತನವನ್ನೂ, ನಡತೆಯು ದುರವಸ್ಥೆಯನ್ನು, ಬುದ್ಧಿಯು ಅಜ್ಞಾನವನ್ನೂ, ಮತ್ತು ಭಕ್ತಿ ಭಾವವು ಭಯವನ್ನ ನಾಶಪಡಿಸುತ್ತದೆ. ಹೀಗಾಗಿ ಬಡತನವನ್ನ ಹೊಡೆದೋಡಿಸಲು ಹೆಚ್ಚು ಸಂಪಾದಿಸಿದವರು ದಾನವನ್ನ ಮಾಡಬೇಕು ಎನ್ನುತ್ತದೆ. ಇತರರಿಗೆ ದಾನ ಮಾಡಲು ಮತ್ತು ಜೀವನವನ್ನ ಪೂರ್ಣಪ್ರಮಾಣವಾಗಿ ಆಸ್ವಾದಿಸಲು ಹಣವನ್ನ ಗಳಿಸುವುದು ತಪ್ಪಲ್ಲ. ಆದರೆ ಮೋಕ್ಷ ಸಿದ್ಧಿಗೆ ಇದನ್ನ ಮೀರಿ ಬೆಳೆಯಬೇಕಾಗುತ್ತದೆ. ಸಾಂಸಾರಿಕ ಜೀವನನವನ್ನ ನಡೆಸುತ್ತಾ ಮೋಕ್ಷವನ್ನೂಗಳಿಸುತ್ತೇನೆ ಎನ್ನುವುದು ಸಾಧ್ಯವಿಲ್ಲದ ಮಾತು ಎನ್ನುತ್ತದೆ ಹಿಂದೂ ಧರ್ಮ. 

ಬೌದ್ಧ ಧರ್ಮದಲ್ಲಿ ಮೂಲಭೂತವಾಗಿ  ಹಣವನ್ನ ಎಲ್ಲೂ ಕೆಡುಕು ಎಂದಿಲ್ಲ. ಹಣ ಗಳಿಸುವಿಕೆಯ ಮಾರ್ಗಗಳಲ್ಲಿ ಕೆಡುಕುಂಟು, ಹಣಗಳಿಸಿದವರ ನಡತೆಯಲ್ಲಿ ಕೆಡುಕುಂಟು ಎನ್ನುತ್ತದೆ. ಹಣದ ಗಳಿಕೆ ಕೆಸರಿನ ಮೇಲಿರುವ ಕಮಲದಂತಿರಬೇಕು ಎನ್ನುತ್ತದೆ. ಡಿಟ್ಯಾಚ್ಮೆಂಟ್ ಎಲ್ಲಕ್ಕಿಂತ ಪ್ರಮುಖವಾಗುತ್ತದೆ. ಕುಟುಂಬ, ಬಂಧು, ಬಳಗ, ಸ್ನೇಹ, ಹಣ ಎಲ್ಲವುಗಳ ವ್ಯಾಮೋಹದಿಂದ ಮುಕ್ತರಾಗದ ಹೊರತು ಸಂಸಾರದಿಂದ ಮುಕ್ತಿ ದೊರೆಯುವುದಿಲ್ಲ ಎನ್ನುತ್ತದೆ. ಸಂಸಾರ ಎನ್ನುವುದು ಇಲ್ಲಿ ಹುಟ್ಟು-ಸಾವುಗಳ ಚಕ್ರ ಎನ್ನುವುದನ್ನ ಸೂಚಿಸುತ್ತದೆ. ಧರ್ಮಪಾಲನೆಗೆ ಅರ್ಥ ಮುಖ್ಯ ಎನ್ನುತ್ತದೆ ಹಿಂದುತ್ವ, ಹಾಗೆಯೇ ಬೌದ್ಧರು ಕೂಡ ಹಣಗಳಿಕೆಯ ಉದ್ದೇಶ ಸರಿಯಾಗಿದ್ದರೆ ಹಣಗಳಿಕೆ ತಪ್ಪಲ್ಲ ಎನ್ನುತ್ತದೆ. 

ಯಹೂದಿಗಳಲ್ಲಿ ಹಣದ ಬಗ್ಗೆ ಹಣವಂತರ ಬಗ್ಗೆ ಬೇರೆ ರೀತಿಯ ಭಾವನೆಗಳಿವೆ. ಹಣ, ಸಿರಿವಂತಿಕೆ ದೇವರು ನೀಡುವ ಆಶೀರ್ವಾದ, ಕೃಪೆ ಎನ್ನುವುದು ಇವರ ಭಾವನೆ. ಗಮನಿಸಿನೋಡಿ ಕ್ರೈಸ್ತರಲ್ಲಿ ಮತ್ತು ಮುಸ್ಲಿಮರಲ್ಲಿ ಹಣವನ್ನ ದಾನ ನೀಡಬಹುದು ಆದರೆ ಅದನ್ನ ಸಾಲದ ರೂಪದಲ್ಲಿ ಕೊಡುವುದು ಮತ್ತು ಅದರಿಂದ ಬಡ್ಡಿ ಪಡೆಯುವುದು ಮಾಡುವಂತಿಲ್ಲ. ಎರಡೂ ಧರ್ಮಗಳು ಈ ರೀತಿ ಹಣ ನೀಡಿ ಬಡ್ಡಿ ಪಡೆಯುವುದು ಮಹಾಪಾಪ ಎನ್ನುತ್ತವೆ. 

ಆದರೆ ಯಹೂದಿಗಳು ಮಾತ್ರ ಸಾಲ ನೀಡುವುದು ಅಥವಾ ಮನಿ ಲೆಂಡಿಂಗ್ ತಪ್ಪಲ್ಲ ಎನ್ನುವ ಮನೋಭಾವ ಹೊಂದಿದ್ದಾರೆ. ಅವರ ಈ ಭಾವನೆ ಇಂದಿನ ದಿನದಲ್ಲಿ ಕೂಡ ಜಾಗತಿಕ ಮಟ್ಟದಲ್ಲಿ ಹಣದ ಮೇಲಿನ ಅವರ ಹಿಡಿತವನ್ನ ತೋರಿಸುತ್ತದೆ. ಇಂದಿನ ಜಗತ್ತಿನ ಬಹುತೇಕ ಹಣಕಾಸು ವ್ಯವಹಾರಗಳನ್ನ ನಿಯಂತ್ರಿಸುವುದು ಯಹೂದಿಗಳು. ಇವರಲ್ಲಿ ಕೂಡ ಒಂದಷ್ಟು ಹಣವನ್ನ ಜಗತ್ತಿನ ಒಳಿತಿನ ದೃಷ್ಟಿಯಿಂದ ದಾನ ಮಾಡುವುದು ಉತ್ತಮ ಎನ್ನಲಾಗುತ್ತದೆ. 

ಕ್ರೈಸ್ತರಲ್ಲಿ ಕೂಡ 'ನೀವು ಹಣ ಮತ್ತು ದೇವರು ಎರಡನ್ನೂ ಒಟ್ಟಿಗೆ ಆರಾಧಿಸಲು ಸಾಧ್ಯವಿಲ್ಲ' ಎಂದು ಹೇಳಲಾಗಿದೆ. ಹಣದ ಮೇಲಿನ ವ್ಯಾಮೋಹ ಬಿಡದ ಹೊರತು ಸಾಲ್ವೇಶನ್, ಮೋಕ್ಷ ಸಿಗುವುದಿಲ್ಲ ಎನ್ನುವುದು ಅವರ ಭಾವನೆ ಕೂಡ. ವಿಗ್ರಹಾರಾಧನೆ ಮಾಡುವವರನ್ನ ಮರಣದಂಡನೆಗೆ ಗುರಿಪಡಿಸುವ ಕಾಲವದಾಗಿತ್ತು, ಹಣದ ಮೇಲಿನ ಅತಿ ವ್ಯಾಮೋಹ, ಹೆಚ್ಚು ಸಂಗ್ರಹಣೆ ವಿಗ್ರಹಾರಾಧನೆಗೆ ಸಮ ಎನ್ನಲಾಗುತ್ತಿತ್ತು. ಈಪಾಪಕ್ಕೆ ಮರಣದಂಡನೆಯನ್ನ ಕೂಡ ವಿಧಿಸಬಹುದಾಗಿತ್ತು. ಇಂದಿಗೆ ಇಂತಹ ಧರ್ಮವನ್ನ ಬೋಧಿಸುವ ವ್ಯಾಟಿಕನ್ ಅತಿಹೆಚ್ಚು ಶ್ರೀಮಂತ ದೇವಸ್ಥಾನವಾಗಿದೆ. 

ಜುಡೈಯ್ಸಮ್ ಹಣವಂತರಾಗುವುದು ತಪ್ಪಲ್ಲ, ಹಣ ಬಂದನಂತರ ಕೆಟ್ಟವರಾಗಿ ಬದಲಾಗುವುದು ತಪ್ಪು ಎನ್ನುತ್ತದೆ. ಹಣ ಹರಾಮ್ ಅಲ್ಲ ಆದರೆ ಅದನ್ನ ಕೆಟ್ಟ ಕಾರ್ಯಗಳಿಗೆ ಖರ್ಚುಮಾಡಿದರೆ ಅದು ಹರಾಮ್ ಎನ್ನುತ್ತದೆ ಇಸ್ಲಾಂ. ಮಕ್ಕಳು ಮತ್ತು ಸಿರಿವಂತಿಕೆ ಎರಡೂ ಬದುಕಿಗೆ ಅಲಂಕಾರಗಳಿದ್ದಂತೆ, ಅಲಂಕಾರಗಳು ಪೂಜ್ಯ ಅಲ್ಲಾಹುವಿನ ಸ್ಮರಣೆಯಿಂದ ವಿಮುಕ್ತರನ್ನಾಗಿಸಬಾರದು ಅಷ್ಟೇ ಎನ್ನುವುದು ಇಸ್ಲಾಂಮಿನ ಅಂಬೋಣ. 

ಮೇಲಿನ ಎಲ್ಲವನ್ನೂ ನೀವು ಇನ್ನೊಮ್ಮೆ ವಿಶದವಾಗಿ ಮತ್ತೊಮ್ಮೆ ಓದಿನೋಡಿ, ಎಲ್ಲಾ ಧರ್ಮಗಳೂ ಹಣವನ್ನ ಬೇಡ ಎನ್ನುವುದಿಲ್ಲ, ಅಷ್ಟರ ಮಟ್ಟಿಗೆ ಹಣಕ್ಕೆ ಧರ್ಮದ ಹಂಗಿಲ್ಲ ಎನ್ನಬಹುದು. ಆದರೆ ಗಮನಿಸಿ ನೋಡಿ, ಎಲ್ಲಾ ಧರ್ಮಗಳೂ ಹಣವನ್ನ ಒಂದು ಹಂತದವರೆಗೆ ಮಾತ್ರ ಒಪ್ಪಿಕೊಳ್ಳುತ್ತವೆ. ಅತಿಯಾದ ಸಂಗ್ರಹಣೆ, ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಹೆಚ್ಚು ಹಣ ಸಂಗ್ರಹಣೆಯಾಗುವುದು, ಹಣವನ್ನ ಸಿರಿವಂತರು ತಮ್ಮ ಒಳಿತಿಗಾಗಿ, ಸ್ವಯೋಭಿವೃದ್ಧಿಗಾಗಿ ಬಳಸುವುದು, ಹಣದ ಮದದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು, ಇತ್ಯಾದಿಗಳನ್ನ ಯಾವ ಧರ್ಮವೂ ಒಪ್ಪುವುದಿಲ್ಲ. 

ಸಂತೋಶಸ್ತ್ರಿಷು ಕರ್ತವ್ಯ: ಸ್ವಧಾರೇ ಭೋಜನೇ ಧನೇ, ತ್ರಿಷು ಚೈವ ನ ಕರ್ತವ್ಯೋಧ್ಯಯನೇ ಜಪದಾನಯೋ: ಅಂದರೆ ಸ್ತ್ರೀ, ಊಟ ಮತ್ತು ಹಣದ ಬಗ್ಗೆ ಸಾಕು ಎನ್ನುವ ತೃಪ್ತಿಯನ್ನ ಮನುಷ್ಯ ಹೊಂದಿರಬೇಕು, ಅಧ್ಯಯನ, ಜಪ ಹಾಗೂ ದಾನ ಇವುಗಳನ್ನ ಸಾಕೆನ್ನದೆ ಮಾಡುತ್ತಿರಬೇಕು ಎನ್ನುವುದು ಶ್ಲೋಕದ ಭಾವಾರ್ಥ. ಗಮನಿಸಿ ನೋಡಿ ಎಲ್ಲಾ ಧರ್ಮದ ಸಾರವೂ ಅದೇ ಆಗಿದೆ. 

ನೆನಪಿರಲಿ: ಹಣಕ್ಕೆ ಧರ್ಮದ ಹಂಗಿಲ್ಲ, ಎಲ್ಲಾ ಧರ್ಮದವರೂ ಬದುಕಿಗೆ ವ್ಯವಹಾರವನ್ನ, ಕಾರ್ಯವನ್ನ ಮಾಡಲೇಬೇಕು. ಹೀಗಾಗಿ ಹಣ ಬೇಕೇಬೇಕು. ಯಾರೊಬ್ಬರೂ ಹಣವನ್ನ ನಿರಾಕರಿಸುವುದಿಲ್ಲ. ಮೋಕ್ಷಕ್ಕೆ, ಧರ್ಮದ ಉಳಿವಿಗೆ ಹಣ ಬೇಕು. ಆದರೆ ಮೋಕ್ಷ ಸಾಧನೆಗೆ ಹಣದ ಮೇಲಿನ ವ್ಯಾಮೋಹ ಅಡ್ಡಿ ಮಾಡುತ್ತದೆ ಎನ್ನುವುದು ಎಲ್ಲಾ ಧರ್ಮದ ಸಾರ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com