ವಿಶ್ವ ಆರೋಗ್ಯ ದಿನ ಘೋಷವಾಕ್ಯ: ನನ್ನ ಆರೋಗ್ಯ, ನನ್ನ ಹಕ್ಕು (ಕುಶಲವೇ ಕ್ಷೇಮವೇ)

ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ, ನಾವು ಚೆನ್ನಾಗಿ ಬದುಕಲು ಆರೋಗ್ಯ ಬಹಳ ಮುಖ್ಯ ಎಂಬುದನ್ನು ಈ ದಿನ ನೆನಪಿಸುತ್ತದೆ.
ವಿಶ್ವ ಆರೋಗ್ಯ ದಿನ
ವಿಶ್ವ ಆರೋಗ್ಯ ದಿನ online desk

ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ, ನಾವು ಚೆನ್ನಾಗಿ ಬದುಕಲು ಆರೋಗ್ಯ ಬಹಳ ಮುಖ್ಯ ಎಂಬುದನ್ನು ಈ ದಿನ ನೆನಪಿಸುತ್ತದೆ. ಈ ವರ್ಷದ ಆರೋಗ್ಯ ದಿನಾಚರಣೆಯ ಘೋಷವಾಕ್ಯ ‘ನನ್ನ ಆರೋಗ್ಯ ನನ್ನ ಹಕ್ಕು’.

ಆರೋಗ್ಯ ಮಾನವನ ಹಕ್ಕು ಹೇಗೆ?

ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಆರೋಗ್ಯದ ಹಕ್ಕು ಹೆಚ್ಚು ಅಪಾಯದಲ್ಲಿದೆ. ರೋಗಗಳು ಮತ್ತು ವಿಪತ್ತುಗಳು ಲಕ್ಷಾಂತರ ಜನರ ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ಲಿನಂತಹ ಪಳೆಯುಳಿಕೆ ಇಂಧನಗಳ ದಹನವು ಹವಾಮಾನ ಬಿಕ್ಕಟ್ಟನ್ನು ಉಂಟುಮಾಡುತ್ತಿದೆ ಮತ್ತು ಶುದ್ಧ ಗಾಳಿಯನ್ನು ಉಸಿರಾಡುವ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದೆ, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕೌನ್ಸಿಲ್ ಆನ್ ದಿ ಎಕನಾಮಿಕ್ಸ್ ಆಫ್ ಹೆಲ್ತ್ ಫಾರ್ ಆಲ್ ಕನಿಷ್ಠ 140 ದೇಶಗಳು ತಮ್ಮ ಸಂವಿಧಾನದಲ್ಲಿ ಆರೋಗ್ಯವನ್ನು ಮಾನವ ಹಕ್ಕು ಎಂದು ಗುರುತಿಸಿವೆ. ಆದರೂ ಹಲವಾರು ದೇಶಗಳು ಜನರಿಗೆ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿಲ್ಲ. 2021ರಲ್ಲಿ ಕನಿಷ್ಠ 4.5 ಶತಕೋಟಿ ಜನರು ಅಂದರೆ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಅಗತ್ಯ ಆರೋಗ್ಯ ಸೇವೆಗಳು ಲಭಿಸುತ್ತಿಲ್ಲ ಎಂದು ಕಂಡುಬಂದಿದೆ. ಈ ರೀತಿಯ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕೆಂದು ಸಾರಲು 'ನನ್ನ ಆರೋಗ್ಯ, ನನ್ನ ಹಕ್ಕು' ಎಂಬ ಸಂದೇಶವನ್ನು ಈ ವರ್ಷದ ವಿಶ್ವ ಆರೋಗ್ಯ ಘೋಷವಾಕ್ಯವನ್ನಾಗಿ ಆರಿಸಿಕೊಳ್ಳಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ಮಾಹಿತಿ, ಜೊತೆಗೆ ಸುರಕ್ಷಿತ ಕುಡಿಯುವ ನೀರು, ಶುದ್ಧ ಗಾಳಿ, ಉತ್ತಮ ಪೋಷಣೆ, ಗುಣಮಟ್ಟದ ವಸತಿ, ಯೋಗ್ಯವಾದ ಕೆಲಸ, ತಾರತಮ್ಯರಹಿತ ಮತ್ತು ಉತ್ತಮ ಪರಿಸರ ಪರಿಸ್ಥಿತಿಗಳು ಎಲ್ಲರಿಗೂ ದೊರಕಬೇಕೆಂಬ ಆಶಯ ವಿಶ್ವ ಆರೋಗ್ಯ ಸಂಸ್ಥೆಯು ಆರಿಸಿರುವ ಈ ಘೋಷವಾಕ್ಯದಲ್ಲಿದೆ.

ವಿಶ್ವ ಆರೋಗ್ಯ ದಿನ
ಆರೋಗ್ಯಕ್ಕಾಗಿ ಸೂಪರ್ ಸೀಡ್ಸ್ & ಪೌಷ್ಟಿಕಾಂಶದ ಪ್ರಯೋಜನಗಳು (ಕುಶಲವೇ ಕ್ಷೇಮವೇ)

ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಸಾಮಾನ್ಯ ಸಂಗತಿಗಳು

ಈ ಹಿನ್ನೆಲೆಯಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ, ಅಭ್ಯಾಸಗಳು ಮತ್ತು ಜೀವನಶೈಲಿ ಬಹುದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ಸಾಮಾನ್ಯ ಸಂಗತಿಗಳು ಇಲ್ಲಿವೆ:

ಸಮತೋಲನ ಆಹಾರ: ವಿವಿಧ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳಿರುವ ಸಮತೋಲನ ಆಹಾರ ಸೇವಿಸುವುದರಿಂದ ಆರೋಗ್ಯ ಸ್ಥಿರವಾಗಿರುತ್ತದೆ. ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್, ಅತಿಯಾದ ಸಕ್ಕರೆ ಮತ್ತು ಉಪ್ಪು ಸೇವನೆಯನ್ನು ಮಿತಿಗೊಳಿಸಬೇಕು.

ಸಾಕಷ್ಟು ನೀರು ಸೇವನೆ: ನಮ್ಮ ದೇಹದ ಬಹುಪಾಲು ಭಾಗ ನೀರಿನಿಂದಾಗಿದೆ. ಆದ್ದರಿಂದ ದೇಹವನ್ನು ತೇವಾಂಶದಿಂದ ಇಡಲು ದಿನವಿಡೀ ಸಾಕಷ್ಟು ನೀರು ಅಂದರೆ ಕನಿಷ್ಠ ಮೂರು ಲೀಟರ್ ಕುಡಿಯಬೇಕು. ಸಕ್ಕರೆ ಪಾನೀಯಗಳು ಮತ್ತು ಅತಿಯಾದ ಕಾಫಿ/ಟೀ ಸೇವನೆಯನ್ನು ಮಿತಿಗೊಳಿಸಬೇಕು.

ನಿಯಮಿತ ವ್ಯಾಯಾಮ: ಪ್ರತಿದಿನ ಕನಿಷ್ಠ 45 ನಿಮಿಷಗಳ ಮಧ್ಯಮ ವ್ಯಾಯಾಮ ಅಥವಾ ಬಿರುಸು ನಡಿಗೆ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸು ಎರಡೂ ದೃಢವಾಗಿರುತ್ತವೆ.

ಸಾಕಷ್ಟು ನಿದ್ರೆ: ಪ್ರತಿ ರಾತ್ರಿ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿದ್ರೆಯಲ್ಲಿ ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ದೊರಕುತ್ತದೆ.

ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ಬೇಡ: ಮದ್ಯಪಾನ ಮತ್ತು ಧೂಮಪಾನವನ್ನು ತಪ್ಪಿಸಿ. ಹಾಗೆಯೇ ಧೂಮಪಾನಕ್ಕೆ ನಿಮ್ಮನ್ನು ಒಡ್ಡಿಕೊಳ್ಳುವುದನ್ನು ತಪ್ಪಿಸಿ (ಪ್ಯಾಸಿವ್ ಸ್ಮೋಮಿಂಗ್). ಏಕೆಂದರೆ ಇದು ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಉತ್ತಮ ಸಾಮಾಜಿಕ ಸಂಪರ್ಕ: ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬAಧಗಳನ್ನು ಕಾಪಾಡಿಕೊಳ್ಳಿ. ಸಾಮಾಜಿಕ ಬೆಂಬಲವು ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಉತ್ತಮ ನೈರ್ಮಲ್ಯದ ಅಭ್ಯಾಸ: ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ, ವಿಶೇಷವಾಗಿ ಆಹಾರವನ್ನು ಸೇವಿಸುವ ಮೊದಲು ಮತ್ತು ಶೌಚಾಲಯವನ್ನು ಬಳಸಿದ ನಂತರ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಹಾಗೆಯೇ ನಿಯಮಿತವಾಗಿ ಹಲ್ಲುಜ್ಜುವ ಮತ್ತು ಫ್ಲಾಸ್ ಮಾಡುವ ಮೂಲಕ ಬಾಯಿಯ ಉತ್ತಮ ನೈರ್ಮಲ್ಯವನ್ನು ಪಾಲಿಸಿ.

ನಿಯಮಿತ ಆರೋಗ್ಯ ತಪಾಸಣೆ: ಪ್ರತಿ ವರ್ಷಕ್ಕೊಮ್ಮೆಯಾದರೂ ನಿಯಮಿತವಾಗಿ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಯಾವುದೇ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಬಹುದು ಮತ್ತು ತ್ವರಿತ ಚಿಕಿತ್ಸೆಗೆ ಅವಕಾಶ ದೊರಕುತ್ತದೆ.

ಆರೋಗ್ಯ ಮಾಹಿತಿ: ಮುಂದುವರೆದ ಇಂದಿನ ಯುಗದಲ್ಲಿ ನಾವು ಎಲ್ಲ ಕಡೆಗಳಿಂದಲೂ ಮಾಹಿತಿ ಸ್ಫೋಟವನ್ನು ಕಾಣುತ್ತಿದ್ದೇವೆ. ಆದ್ದರಿಂದ ವಿಶ್ವಾಸಾರ್ಹ ಮೂಲಗಳಿಂದ ಆರೋಗ್ಯ ಮಾಹಿತಿಯನ್ನು ಪಡೆದು ಉತ್ತಮವಾಗಿದ್ದನ್ನು ಪಾಲಿಸಬೇಕು.

ಒಟ್ಟಾರೆ ಹೇಳುವುದಾದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿರಂತರ ಪ್ರಕ್ರಿಯೆ. ಇದಕ್ಕೆ ಬದ್ಧತೆ ಮತ್ತು ಪ್ರಯತ್ನದ ಅಗತ್ಯವಿರುತ್ತದೆ ಎಂಬುದನ್ನು ನೆನಪಿಡಿ. ಆರೋಗ್ಯಕರ ಆಯ್ಕೆಗಳನ್ನು ಮಾಡುವ ಮೂಲಕ ಮತ್ತು ಸಕಾರಾತ್ಮಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ವಿಶ್ವ ಆರೋಗ್ಯ ದಿನ
ಶಾಲಾಪೂರ್ವ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)

Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com