European solar mission - ಪ್ರೋಬಾ-3 ಕೈಹಿಡಿದ ಇಸ್ರೋ: ಸೂರ್ಯನ ಅಧ್ಯಯನಕ್ಕಾಗಿ ಕೃತಕ ಗ್ರಹಣ ನಿರ್ಮಾಣ!

ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೇತೃತ್ವದ ಪ್ರೋಬಾ-3 ಯೋಜನೆ ಬಾಹ್ಯಾಕಾಶ ಯೋಜನೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಖರವಾದ ಸಂರಚನಾ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ನಡೆಸಲು ಪ್ರಯತ್ನಿಸಲಿದೆ.
European solar mission - ಪ್ರೋಬಾ-3 ಕೈಹಿಡಿದ ಇಸ್ರೋ: ಸೂರ್ಯನ ಅಧ್ಯಯನಕ್ಕಾಗಿ ಕೃತಕ ಗ್ರಹಣ ನಿರ್ಮಾಣ!
Updated on

ಒಂದು ವಿಶಿಷ್ಟ ಬಾಹ್ಯಾಕಾಶ ಯೋಜನೆಯಲ್ಲಿ, ಎರಡು ಉಪಗ್ರಹಗಳು ಪರಸ್ಪರ ಅತ್ಯಂತ ಸನಿಹದಲ್ಲಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಾ, ಭೂಮಿಯ ಮೇಲೆ ಕೃತಕ ಸೂರ್ಯ ಗ್ರಹಣವನ್ನು ಸೃಷ್ಟಿಸಲಿವೆ. ಇಂತಹ ಅಭೂತಪೂರ್ವ ಬಾಹ್ಯಾಕಾಶ ಯೋಜನೆಯೊಂದಕ್ಕೆ ಸಿದ್ಧತೆಗಳು ಈಗ ಭರದಿಂದ ಸಾಗಿವೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೇತೃತ್ವದ ಪ್ರೋಬಾ-3 ಯೋಜನೆ ಬಾಹ್ಯಾಕಾಶ ಯೋಜನೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಖರವಾದ ಸಂರಚನಾ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ನಡೆಸಲು ಪ್ರಯತ್ನಿಸಲಿದೆ. ಎರಡು ಬಾಹ್ಯಾಕಾಶ ನೌಕೆಗಳು ಈ ಯೋಜನೆಯ ಭಾಗವಾಗಿದ್ದು, ಅವುಗಳು ಬಾಹ್ಯಾಕಾಶದ ಕಕ್ಷೆಯಲ್ಲಿ ತಾವಿರುವ ಸ್ಥಾನ ಒಂದು ಮಿಲಿಮೀಟರ್ (ಒಂದು ಉಗುರಿನ ತುದಿಯಷ್ಟು ಜಾಗ) ಸಹ ಆಚೀಚೆ ಆಗದಷ್ಟು ನಿಖರವಾಗಿ ಭೂಮಿಯ ಸುತ್ತ ಪರಿಭ್ರಮಣೆ ನಡೆಸುತ್ತವೆ.

ಇಷ್ಟೊಂದು ಅಸಾಧಾರಣ ಪ್ರಮಾಣದ ನಿಖರತೆಯಲ್ಲಿ ಅವುಗಳು ಚಲಿಸುವುದರಿಂದ, ಅವೆರಡೂ ಜೊತೆಯಾಗಿ, ಒಂದೇ ಉಪಕರಣದ ರೀತಿಯಲ್ಲಿ ಕಾರ್ಯಾಚರಿಸುತ್ತವೆ. ಆ ಮೂಲಕ, ಸೂರ್ಯನ ಹೊರಗಿನ ವಾತಾವರಣವನ್ನು ವಿಜ್ಞಾನಿಗಳಿಗೆ ಹಿಂದೆಂದೂ ವೀಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಗಮನಿಸಲು ಅವಕಾಶ ಕಲ್ಪಿಸುತ್ತವೆ.

ಪ್ರೋಬಾ-3 ಬಾಹ್ಯಾಕಾಶ ನೌಕೆ ಭಾರತದ ಬಂಗಾಳ ಕೊಲ್ಲಿಯ ತೀರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಬೆನ್ನೇರಿ, ಭಾರತೀಯ ಕಾಲಮಾನದಲ್ಲಿ ಬುಧವಾರ ಸಂಜೆ 4:08ಕ್ಕೆ ಉಡಾವಣೆಗೊಳ್ಳಲಿದೆ. ನಾಲ್ಕು ತಿಂಗಳ ಕಾಲ ಪ್ರಯಾಣ ಬೆಳೆಸಿದ ಬಳಿಕ, ಪ್ರೋಬಾ-3ರ ಎರಡು ಉಪಗ್ರಹಗಳು ಒಂದು ಅತ್ಯಂತ ದೀರ್ಘವೃತ್ತಾಕಾರದ ಕಕ್ಷೆಯನ್ನು ಪ್ರವೇಶಿಸಲಿವೆ. ಈ ಕಕ್ಷೆಯ ಸನಿಹದ ಬಿಂದು ಭೂಮಿಯಿಂದ 600 ಕಿಲೋಮೀಟರ್ ದೂರದಲ್ಲಿದ್ದರೆ, ದೂರದ ಬಿಂದು 60,000 ಕಿಲೋಮೀಟರ್‌ಗೂ ಹೆಚ್ಚು ದೂರದಲ್ಲಿದೆ.

"ಈ ಯೋಜನೆ ಒಂದು ಬಾಹ್ಯಾಕಾಶ ಪ್ರಯೋಗವಾಗಿದ್ದು, ಇದು ಹೊಸದಾದ ಪರಿಕಲ್ಪನೆ ಮತ್ತು ತಂತ್ರಜ್ಞಾನವನ್ನು ಪ್ರದರ್ಶಿಸಲಿದೆ. ಎರಡೂ ಬಾಹ್ಯಾಕಾಶ ನೌಕೆಗಳ ಹಾರಾಟ ಪಥವನ್ನು ಅತ್ಯಂತ ನಿಖರವಾಗಿ ನಿಯಂತ್ರಿಸಬೇಕಾದ ಅಗತ್ಯವಿರುವುದರಿಂದ, ಇದು ನಿಜಕ್ಕೂ ಅತ್ಯಂತ ಸವಾಲಿನ ಕಾರ್ಯವಾಗಿದೆ" ಎಂದು ಇಎಸ್ಎಯ ಪ್ರೋಬಾ ಯೋಜನಾ ನಿರ್ದೇಶಕರಾದ ಡೇಮಿಯನ್ ಗಲಾನೋ ವಿವರಿಸಿದ್ದಾರೆ.

ಈ ಉಪಗ್ರಹಗಳು ಅಂದುಕೊಂಡ ರೀತಿಯಲ್ಲೇ ಕಾರ್ಯ ನಿರ್ವಹಿಸಿದರೆ, ಅವುಗಳು ಸೂರ್ಯನಿಗೆ ಅತ್ಯಂತ ಸಮರ್ಪಕವಾಗಿ ಎದುರಾಗುತ್ತವೆ. ಮೊದಲ ಉಪಗ್ರಹ ಸೂರ್ಯನ ಪ್ರಖರ ಕಿರಣಗಳನ್ನು ತಡೆಗಟ್ಟಿ, ಎರಡನೇ ಉಪಗ್ರಹದ ಮೇಲೆ ಒಂದು ನೆರಳನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ, ಎರಡನೇ ಉಪಗ್ರಹದಲ್ಲಿರುವ ವೈಜ್ಞಾನಿಕ ಉಪಕರಣಗಳಿಗೆ ಸೂರ್ಯನ ವಾತಾವರಣದ ಹೊರಗಿನ ಪದರವಾದ ಕೊರೋನಾವನ್ನು ಅತ್ಯಂತ ವಿಸ್ತೃತವಾಗಿ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ವಿಜ್ಞಾನಿಗಳು ಸೂರ್ಯ ಗ್ರಹಣದ ಸಮಯದಲ್ಲಿ ಮಾತ್ರವೇ ಸೂರ್ಯನ ವಾತಾವರಣದ ಹೊರ ಪದರವನ್ನು ಅಧ್ಯಯನ ಮಾಡುತ್ತಾರೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ, ಸೂರ್ಯನ ಪ್ರಖರ ಬೆಳಕನ್ನು ಚಂದ್ರ ತಡೆಗಟ್ಟುವ ಕಾರಣದಿಂದ, ಕೊರೋನಾ ಭೂಮಿಗೆ ಕಾಣಿಸುತ್ತದೆ. ಆದರೆ, ಈ ವಿಧಾನ ಹಲವಾರು ವಿಧದ ಸವಾಲುಗಳನ್ನೂ ಹೊಂದಿದೆ. ಸೂರ್ಯ ಗ್ರಹಣವನ್ನು ಸರಿಯಾಗಿ ಗಮನಿಸಲು ವಿಜ್ಞಾನಿಗಳು ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಅದರೊಡನೆ, ಸೂರ್ಯ ಗ್ರಹಣದ ಸಂದರ್ಭದ ವೀಕ್ಷಣೆಯೂ ಕೇವಲ ಕೆಲವು ನಿಮಿಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅತ್ಯಂತ ನಿರಾಶಾದಾಯಕ ಸಂದರ್ಭದಲ್ಲಿ, ಮೋಡ ಉಂಟಾಗಿ ಕೆಲವೊಮ್ಮೆ ಗ್ರಹಣ ಕಾಣಿಸಿಕೊಳ್ಳದಿರುತ್ತದೆ.

200 ಮಿಲಿಯನ್ ಯೂರೋ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರೋಬಾ-3 ಯೋಜನೆ, ವಿಜ್ಞಾನಿಗಳು ಸೂರ್ಯನ ಕೊರೋನಾದ ಅಧ್ಯಯನ ನಡೆಸುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಗುರಿ ಹೊಂದಿದೆ. ಪ್ರೋಬಾ-3 ಪ್ರತಿ ವರ್ಷವೂ 50 ಕೃತಕ ಸೂರ್ಯ ಗ್ರಹಣಗಳನ್ನು ಉಂಟುಮಾಡಲಿದ್ದು, ಪ್ರತಿಯೊಂದು ಗ್ರಹಣವೂ ಗರಿಷ್ಠ ಆರು ಗಂಟೆಗಳ ಕಾಲ ಇರಲಿದೆ. ಇದು ನೈಸರ್ಗಿಕ ಗ್ರಹಣಗಳಿಗೆ ಹೋಲಿಸಿದರೆ, ಸೂರ್ಯನನ್ನು ಗಮನಿಸಲು ಬಹಳಷ್ಟು ಹೆಚ್ಚಿನ ಸಮಯ ಒದಗಿಸುತ್ತದೆ.

ಎರಡರ ಪೈಕಿ ಮೊದಲ ಉಪಗ್ರಹವನ್ನು ಒಕಲ್ಟರ್ ಬಾಹ್ಯಾಕಾಶ ನೌಕೆ ಎನ್ನಲಾಗಿದ್ದು, ಇದು ಸೂರ್ಯನ ಪ್ರಖರ ಬೆಳಕನ್ನು ತಡೆಯುವ ಸಲುವಾಗಿ ವಿನ್ಯಾಸಗೊಂಡಿರುವ 1.4 ಮೀಟರ್ ಅಗಲವಿರುವ ಬಿಲ್ಲೆಯೊಂದನ್ನು ಹೊಂದಿದೆ. ಇದು ಬೆಳಕನ್ನು ತಡೆಯುವುದರಿಂದ, ಎರಡನೇ ಉಪಗ್ರಹವಾದ ಕೊರೋನಾಗ್ರಾಫ್‌ಗೆ ಸೂರ್ಯನ ಹೊರ ವಾತಾವರಣವನ್ನು ಗಮನಿಸಲು ಸಾಧ್ಯವಾಗುತ್ತದೆ. ಇವೆರಡೂ ಉಪಗ್ರಹಗಳು ಜೊತೆಯಾಗಿ, ಒಂದೇ 150 ಮೀಟರ್ ಉದ್ದನೆಯ, ಸೂರ್ಯನನ್ನು ವೀಕ್ಷಿಸುವ, ಸೂರ್ಯನ ಅಧ್ಯಯನಕ್ಕಾಗಿಯೇ ನಿರ್ಮಿಸಿರುವ ಬಾಹ್ಯಾಕಾಶ ನೌಕೆಯಂತೆ ಕಾರ್ಯಾಚರಿಸುತ್ತವೆ.

ಈ ಯೋಜನೆ, ಸೂರ್ಯನ ಕುರಿತಾದ ಅತ್ಯಂತ ಹಳೆಯ ಕೌತುಕವೊಂದನ್ನು ಪರಿಹರಿಸಲು ನೆರವಾಗುವ ಗುರಿ ಹೊಂದಿದೆ. ಅದೇನೆಂದರೆ: ಸೂರ್ಯನ ವಾತಾವರಣದ ಅತ್ಯಂತ ಹೊರ ಪದರವಾದ ಕೊರೋನಾ ಯಾಕೆ ಸೂರ್ಯನ ಮೇಲ್ಮೈಗಿಂತಲೂ ಹೆಚ್ಚು ಬಿಸಿಯಾಗಿದೆ ಎನ್ನುವುದಾಗಿದೆ. ಸೂರ್ಯನ ಮೇಲ್ಮೈ (ಫೋಟೋಸ್ಫಿಯರ್) ಅಂದಾಜು 5,500 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದ್ದು, ಕೊರೋನಾ 1 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಬಿಸಿಯಾಗಿರುತ್ತದೆ. ಈ ಯೋಜನೆಯಿಂದ ಲಭಿಸುವ ಮಾಹಿತಿಗಳು ಹಲವಾರು ಮಹತ್ವದ ಉತ್ತರಗಳನ್ನು ಒದಗಿಸಬಲ್ಲವು.

ಕೊರೋನಾವನ್ನು ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡುವ ಮೂಲಕ, ವಿಜ್ಞಾನಿಗಳು ಕೊರೋನಲ್ ಮಾಸ್ ಇಜೆಕ್ಷನ್‌ಗಳಂತಹ ಪ್ರಕ್ರಿಯೆಗಳನ್ನು ಒಳಗೊಂಡ ಸೌರ ವಾತಾವರಣವನ್ನು ನಿಖರವಾಗಿ ಊಹಿಸುವ ಗುರಿ ಹೊಂದಿದ್ದಾರೆ. ಈ ಪ್ರಕ್ರಿಯೆಗಳು ಶಕ್ತಿಶಾಲಿ ಪ್ಲಾಸ್ಮಾ ಸಿಡಿತ ಮತ್ತು ಸೂರ್ಯನಿಂದ ಬಾಹ್ಯಾಕಾಶಕ್ಕೆ ಕಾಂತೀಯ ಶಕ್ತಿಗಳ ಬಿಡುಗಡೆಯಾಗಿದೆ. ಇಂತಹ ಪ್ರಕ್ರಿಯೆಗಳು ಉಪಗ್ರಹಗಳಿಗೆ ಹಾನಿ ಉಂಟುಮಾಡುವ, ಪವರ್ ಗ್ರಿಡ್‌ಗಳನ್ನು ಹಾಳುಮಾಡುವ, ಮತ್ತು ಭೂಮಿಯಲ್ಲಿ ಸಂವಹನ ವೈಫಲ್ಯ ಉಂಟುಮಾಡುವ ಸೌರ ಮಾರುತಗಳನ್ನು ಸೃಷ್ಟಿಸಬಲ್ಲವು. ಇಂತಹ ಚಟುವಟಿಕೆಗಳನ್ನು ಅರ್ಥ ಮಾಡಿಕೊಂಡರೆ, ಆಗ ನಮ್ಮ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.

ಪ್ರೋಬಾ-3 ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸಲು 19.7 ಗಂಟೆ ತೆಗೆದುಕೊಳ್ಳುತ್ತದೆ. ಇದು ನಿರಂತರವಾಗಿ ಎರಡು ವರ್ಷಗಳ ಕಾಲ ಕಾರ್ಯಾಚರಿಸಲಿದೆ.

ಪ್ರತಿಯೊಂದು ಪರಿಭ್ರಮಣೆಯಲ್ಲೂ ಆರು ಗಂಟೆಗಳ ಕಾಲ ಈ ಉಪಗ್ರಹಗಳು ಸಂರಚಿತ ಹಾರಾಟ ನಡೆಸುತ್ತವೆ. ಅವುಗಳು ಆಪ್ಟಿಕಲ್ ಸೆನ್ಸರ್‌ಗಳು ಮತ್ತು ಎಲ್ಇಡಿ ಬೆಳಕನ್ನು ಬಳಸಿ, ಪರಸ್ಪರ ಸ್ಥಾನವನ್ನು ಗುರುತಿಸಲು ನೆರವಾಗುತ್ತವೆ. ಅವುಗಳ ನಡುವಿನ ಅಂತರ ಮತ್ತು ಅವುಗಳ ಸ್ಥಾನವನ್ನು ಸ್ವಯಂಚಾಲಿತವಾಗಿ ಸರಿಪಡಿಸುವ ಸಲುವಾಗಿ, ಲೇಸರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪ್ರೋಬಾ-3 ತನ್ನ ಮೊದಲ ಛಾಯಾಚಿತ್ರಗಳನ್ನು ಮಾರ್ಚ್ 2025ರ ವೇಳೆ ಸೆರೆಹಿಡಿಯುವ ನಿರೀಕ್ಷೆಗಳಿವೆ.

ಮೂಲ ಗುರಿಗಳ ಜೊತೆಗೆ, ಇಎಸ್ಎ ವಿಜ್ಞಾನಿಗಳು ಯೋಜನಾ ಅವಧಿಯ ಕೆಲ ಸಮಯವನ್ನು ಉಪಗ್ರಹಗಳ ವಿಶೇಷ ಚಲನೆಗಳನ್ನು ಪರೀಕ್ಷಿಸಲು ಬಳಸಲಿದ್ದಾರೆ. ಈ ಚಲನೆಗಳು ಭವಿಷ್ಯದಲ್ಲಿ ಹಾಳಾದ ಉಪಗ್ರಹಗಳ ದುರಸ್ತಿ ನಡೆಸಲು, ಅಥವಾ ಅನವಶ್ಯಕ ಬಿಡಿಭಾಗಗಳು ಮತ್ತು ಬಾಹ್ಯಾಕಾಶ ತ್ಯಾಜ್ಯಗಳನ್ನು ಕಕ್ಷೆಯಿಂದ ತೆಗೆಯಲು ನೆರವಾಗಲಿವೆ.

ಫಾರ್ಮೇಶನ್ ಫ್ಲೈಯಿಂಗ್ ಎನ್ನುವುದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಒಂದು ಹೊಸ ಪರಿಕಲ್ಪನೆಯಾಗಿದ್ದು, ಇದರಲ್ಲಿ ಹಲವು ಬಾಹ್ಯಾಕಾಶ ನೌಕೆಗಳು ಜಾಗರೂಕವಾಗಿ ಆಯೋಜಿಸಿದ ಪಥದಲ್ಲಿ, ಒಂದಕ್ಕೊಂದು ಸನಿಹದಲ್ಲಿ ಸಾಗುತ್ತವೆ. ಈ ವಿಧಾನ ನಾವು ಬಾಹ್ಯಾಕಾಶ ಅನ್ವೇಷಣೆ ನಡೆಸುವ, ನೌಕೆಗಳನ್ನು ನಿರ್ಮಿಸುವ ವಿಧಾನವನ್ನೇ ಬದಲಾಯಿಸಬಹುದು. ಎಲ್ಲ ಉಪಕರಣಗಳನ್ನು ಒಂದೇ ಬಾಹ್ಯಾಕಾಶ ನೌಕೆಯಲ್ಲಿ ತುರುಕುವ ಬದಲು, ಹಲವು ಸಣ್ಣ ಬಾಹ್ಯಾಕಾಶ ನೌಕೆಗಳು ಒಂದು ತಂಡವಾಗಿ, ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಇದರ ಪರಿಣಾಮವಾಗಿ, ಬಾಹ್ಯಾಕಾಶ ಅನ್ವೇಷಣೆ ಕಡಿಮೆ ವೆಚ್ಚದಾಯಕವೂ, ಆಧುನಿಕವೂ ಆಗಲಿದೆ.

"ಒಂದು ವೇಳೆ ನಾವು ಹಲವು ಉಪಗ್ರಹಗಳನ್ನು ಒಂದಕ್ಕೊಂದು ಬಹಳಷ್ಟು ಹತ್ತಿರದಲ್ಲಿ, ಅತ್ಯಂತ ಕರಾರುವಾಕ್ಕಾಗಿ ಅಳವಡಿಸಲು ಸಾಧ್ಯವಾದರೆ, ಆಗ ಹಲವು ಸಣ್ಣ ಉಪಗ್ರಹಗಳಿಂದ ನಿರ್ಮಿತವಾದ ಒಂದು ಬೃಹತ್ ಉಪಕರಣವನ್ನು ಸೃಷ್ಟಿಸಲು ಸಾಧ್ಯ" ಎಂದು ಇಎಸ್ಎಯ ತಂತ್ರಜ್ಞಾನ ನಿರ್ದೇಶಕರಾದ ಡೀಟ್ಮರ್ ಪಿಲ್ಜ್ ಹೇಳಿದ್ದಾರೆ. ಈ ವಿಧಾನ ವಿಜ್ಞಾನಿಗಳಿಗೆ ಬಾಹ್ಯಾಕಾಶದಲ್ಲಿ ಕಡಿಮೆ ಸಾಮರ್ಥ್ಯದ ಹಲವು ಸಣ್ಣ ಉಪಗ್ರಹಗಳನ್ನು ಜೊತೆಯಾಗಿಸಿ, ಆಧುನಿಕ ಉಪಕರಣಗಳನ್ನು ನಿರ್ಮಿಸಲು ನೆರವಾಗಬಹುದು.

ಇಂತಹ ಹಲವು ಉಪಗ್ರಹಗಳನ್ನು ಒಳಗೊಂಡ ಜಂಟಿ ವ್ಯವಸ್ಥೆಯನ್ನು ನಿರ್ಮಿಸುವುದರಿಂದ, ಹವಾಮಾನ ಬದಲಾವಣೆ, ನಮ್ಮ ಸೌರಮಂಡಲದಲ್ಲಿರುವ ಕಾಯಗಳು, ಹಾಗೂ ಭೂಮಿಯಿಂದ ಬಹು ದೂರದಲ್ಲಿ ನಕ್ಷತ್ರಗಳಿಗೆ ಪರಿಭ್ರಮಣೆ ನಡೆಸುವ ಗ್ರಹಗಳನ್ನು ಪರಿಶೋಧಿಸುವಂತಹ ವಿವಿಧ ಸಂಕೀರ್ಣ ಯೋಜನೆಗಳನ್ನು ಕೈಗೊಳ್ಳಬಹುದು. ಪರಸ್ಪರ ಜೊತೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಈ ಉಪಗ್ರಹಗಳು ಕೇವಲ ಒಂದು ಉಪಗ್ರಹವನ್ನು ಬಳಸಿ ಪಡೆಯುವುದಕ್ಕಿಂತ ಹೆಚ್ಚು ವಿಸ್ತಾರವಾದ, ಹೆಚ್ಚು ಸ್ಪಷ್ಟವಾದ ಮಾಹಿತಿಗಳನ್ನು ಒದಗಿಸಬಲ್ಲವು.

"ಆಧುನಿಕ ರಾಕೆಟ್‌ಗಳು ಹೆಚ್ಚು ಹೆಚ್ಚು ಶಕ್ತಿಶಾಲಿಗಳಾಗುತ್ತಿದ್ದು, ಹೆಚ್ಚು ಭಾರದ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಒಯ್ಯುವ ಸಾಮರ್ಥ್ಯ ಗಳಿಸಿವೆ. ಆದರೆ, ಅವು ಎಷ್ಟೇ ಪ್ರಗತಿ ಸಾಧಿಸಿದರೂ, ಅವುಗಳು ಮೇಲಕ್ಕೆ ಒಯ್ಯಬಲ್ಲ ಭಾರಕ್ಕೆ ಇತಿಮಿತಿಗಳು ಖಂಡಿತವಾಗಿಯೂ ಇದ್ದೇ ಇರುತ್ತವೆ" ಎಂದು ಪಿಲ್ಜ್ ಅಭಿಪ್ರಾಯಪಡುತ್ತಾರೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com