ಬಿಜೆಪಿ –ಜೆಡಿಎಸ್ ಮೈತ್ರಿಯ ಹಾದಿ ನಿರ್ಧರಿಸಲಿರುವ ರಾಜ್ಯಸಭೆ ಚುನಾವಣೆ ಫಲಿತಾಂಶ (ಸುದ್ದಿ ವಿಶ್ಲೇಷಣೆ)

ಕಣದಲ್ಲಿರುವ ಐವರಲ್ಲಿ ಗೆಲ್ಲುವ ನಾಲ್ವರು ಯಾರು?
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(ಸಂಗ್ರಹ ಚಿತ್ರ)online desk

ರಾಜ್ಯ ವಿಧಾನ ಸಭೆಯಿಂದ ಸಂಸತ್ತಿನ ಹಿರಿಯರ ಸದನ ರಾಜ್ಯ ಸಭೆಗೆ ಇದೇ 27 ರಂದು ನಡೆಯಲಿರುವ ಚುನಾವಣೆ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ರಾಜ್ಯದಿಂದ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿರುವುದು ಇದಕ್ಕೆ ಕಾರಣ.

136 ಶಾಸಕರನ್ನು ವಿಧಾನಸಭೆಯಲ್ಲಿ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇದು ಪ್ರಶ್ನೆ. ಫಲಿತಾಂಶ ಕೊಂಚ ಏರುಪೇರಾದರೂ ಸರ್ಕಾರದ ಅಸ್ತಿತ್ವಕ್ಕೇ ಧಕ್ಕೆ ಬರುವ ಅಪಾಯಗಳಿರುವುದರಿಂದ ಚುನಾವಣೆ ಈ ಮೂವರೂ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಮೂರೂ ಸ್ಥಾನಗಳನ್ನು ಗೆಲ್ಲುವ ಅವಕಾಶ ಮುಕ್ತವಾಗಿದ್ದರೂ ಪಕ್ಷದ ಯಾವುದೇ ಶಾಸಕರು ಅಡ್ಡ ಮತದಾನ ನಡೆಸದಂತೆ ಎಚ್ಚರ ವಹಿಸಿದ್ದಾರೆ.

ಮತ್ತೊಂದು ಕಡೆ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಅಷ್ಟೇ ಅಲ್ಲ, ಮೈತ್ರಿ ಪಕ್ಷ ಜೆ.ಡಿ.ಎಸ್. ನಿಂದ ಐದನೇ ಅಭ್ಯರ್ಥಿಯಾಗಿ ಕಣದಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ,ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರೆ. ಈಗಾಗಲೇ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿಯಾಗಿದ್ದು ಮುಂಬರುವ ಲೋಕಸಭಾ ಚುನಾವಣೆಗೂ ಈ ಹೊಂದಾಣಿಕೆ ಮುಂದುವರಿಯಬೇಕಿದೆ.

ಆ ಹಿನ್ನಲೆಯಲ್ಲೇ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಇದಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಮೈತ್ರಿಯನ್ನು ಗಟ್ಟಿಗೊಳಿಸುವ ಮಾತುಗಳನ್ನಾಡಿದ್ದು ಯಾರೂ ಈ ವಿಚಾರದಲ್ಲಿ ಅಪಸ್ವರ ಎತ್ತಬಾರದೆಂದು ತಾಕೀತು ಮಾಡಿ ಹೋಗಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರಿಗೆ ಇಷ್ಟವಿಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಖಾಸಗಿಯಾಗಿ ಆ ಪಕ್ಷದ ಶಾಸಕರು ಒಪ್ಪಿಕೊಳ್ಳುತ್ತಾರೆ.

ಪಕ್ಷದ ಅಧ್ಯಕ್ಷರಾದ ನಂತರ ರಾಜ್ಯದಾದ್ಯಂತ ಕ್ರಿಯಾಶೀಲವಾಗಿ ಓಡಾಡುತ್ತಿರುವ ವಿಜಯೇಂದ್ರಗೂ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಜತೆಗೇ ಜೆಡಿಎಸ್ ಅಭ್ಯರ್ಥಿಗೆ ತಮ್ಮ ಪಕ್ಷದ ಹೆಚ್ಚುವರಿ ಮತಗಳನ್ನು ಕೊಡಿಸುವ ಮೂಲಕ ಗೆಲುವಿಗೆ ಸಹಕರಿಸಬೇಕಾದ ಅನಿವಾರ್ಯತೆ ಇದೆ. ಇನ್ನು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಕ್ಷೀಣಿಸುತ್ತಿರುವ ತಮ್ಮ ಪಕ್ಷದ ಅಸ್ತಿತ್ವವನ್ನು ಈ ಚುನಾವಣೆ ಮೂಲಕ ಉಳಿಸಿಕೊಳ್ಳಬೇಕಾದ ಸಂಕಷ್ಟದ ಸ್ಥಿತಿ.ಇದೇ ಕಾರಣಕ್ಕೆ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿದ್ದಾರೆ. ಈ ನಿರ್ಧಾರದ ಹಿಂದೆ ರಾಜಕೀಯವನ್ನೂ ಮೀರಿದ ಅನೇಕ ಲಾಭ- ನಷ್ಟಗಳ ಲೆಕ್ಕಾಚಾರವೂ ಇದೆ.

ಬಹು ಮುಖ್ಯವಾಗಿ 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪ್ರಥಮ ಅಭ್ಯರ್ಥಿಯಾಗಿ ದಿಲ್ಲಿ ಮೂಲದ ಕಾಂಗ್ರೆಸ್ಸಿಗ ಅಜಯ್ ಮಾಕನ್ ಅವರನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಹಾಲಿ ನಿವೃತ್ತರಾಗುತ್ತಿರುವ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಮತ್ತು ಸಯದ್ ನಾಸಿರ್ ಹುಸೇನ್ ರನ್ನು ಮತ್ತೆ ಕಣಕ್ಕಿಳಿಸಿದೆ. ಅಜಯ್ ಮಾಕನ್ ರಾಹುಲ್ ಗಾಂಧಿಯವರಿಗೆ ಆಪ್ತರು. ಆದರೆ ಈ ಬಾರಿಒಯ ಚುನಾವಣೆಯಲ್ಲಿ ಸಜ್ಜನಿಕೆಯ ವ್ಯಕ್ತಿ ಎಂದೇ ಕಾಂಗ್ರೆಸ್ ನಲ್ಲಿ ಹೆಸರಾಗಿದ್ದ ಹಾಲಿ ಸದಸ್ಯ ಡಾ. ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂಬುದೇ ಆಶ್ಚರ್ಯ.66 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತನ್ನ ಅಧಿಕೃತ ಅಭ್ಯರ್ಥಿ ನಾರಾಯಣ ಭಾಂಡಗೆ ಅವರನ್ನು ಗೆಲ್ಲಿಸಿಕೊಳ್ಳುವುದು ಕಷ್ಟವೇನಲ್ಲ. ಪ್ರತಿ ಅಭ್ಯರ್ಥಿಗೆ ಗೆಲ್ಲಲು ಕನಿಷ್ಟ 45 ಮತಗಳು ಬೇಕಾಗಿರುವುದರಿಂದ ಆ ಪಕ್ಷಕ್ಕೆ ಸಮಸ್ಯೆ ಏನಿಲ್ಲ.

ಹೆಚ್ಚುವರಿಯಾಗಿ ಉಳಿಯುವ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುವ ಮಾತುಕತೆಯಾಗಿ ಒಪ್ಪಂದಕ್ಕೆ ಬರಲಾಗಿದೆ. ಆದರೆ ಲೆಕ್ಕಾಚಾರದಂತೆ ಬಿಜೆಪಿಯ 66 ಶಾಸಕರ ಪೈಕಿ ಮೂವರು ಪಕ್ಷದಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ. ಶಾಸಕ ಎಸ್.ಟಿ.ಸೋಮಶೇಖರ್ ನೇರವಾಗೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಬೆಂಬಲಿಸಿದ್ದಲ್ಲದೇ ಅವರ ಪರ ಪ್ರಚಾರಕ್ಕಿಳಿದಿದ್ದಾರೆ. ಇನ್ನುಳಿದಂತೆ ಶಿವರಾಂ ಹೆಬ್ಬಾರ್ ಬಿಜೆಪಿಯಲ್ಲಿ ಉಳಿಯುವ ಸಾಧ್ಯತೆಗಳಿಲ್ಲ

ಸದ್ಯದ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ ಒಟ್ಟು ಮೂವರು ಶಾಸಕರು ಕಾಂಗ್ರೆಸ್ ಗೆ ಹತ್ತಿರವಾಗಿದ್ದಾರೆ. ಇನ್ನು ತಮ್ಮ ಪಕ್ಷದಿಂದ ಹಣವಂತ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿರುವ ಕುಮಾರ ಸ್ವಾಮಿ ಕಾಂಗ್ರೆಸ್ ನಿಂದ ಒಂಭತ್ತು ಮತಗಳು ತಮ್ಮ ಅಭ್ಯರ್ಥಿಗೆ ಬರಲಿದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾದರೆ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಸೋಲಿಸಬಹುದು ಎಂಬುದು ಅವರ ತಂತ್ರ. ಆದರೆ ಅದು ಫಲ ಕೊಡುತ್ತದೆಯೆ? ಎಂಬುದು ಖಚಿತವಾಗಿಲ್ಲ. ಹೆಚ್ಚುವರಿಯಾಗಿ ಬೇಕಾದ ಶಾಸಕರ ಮತಗಳನ್ನು ಗಳಿಸಿಕೊಳ್ಳಲು ಹಲವು `ಭರವಸೆ’ಗಳನ್ನು ಕುಮಾರಸ್ವಾಮಿ ಮತ್ತು ಕುಪೇಂದ್ರ ರೆಡ್ಡಿ ಕಾಂಗ್ರೆಸ್ ನ ಕೆಲವು ಶಾಸಕರಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಬಿಜೆಪಿಯಂತೆ ಜೆಡಿಎಸ್ ನಲ್ಲೂ ಬಂಡಾಯದ ಸದ್ದು ಕೇಳಿ ಬರುತ್ತಿದೆ. ಸುಮಾರು ಐದಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕುಮಾರಸ್ವಾಮಿಯವರೇನೋ ತಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂಬ ಪ್ರಚಂಡ ಆತ್ಮ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್ ಮತ ಹಂಚಿಕೆ ಅನುಪಾತ

ಸದ್ಯದ ಸಂದರ್ಭ ಸನ್ನಿವೇಶಗಳ ಆಳಕ್ಕಿಳಿದು ನೋಡಿದರೆ ಅಂತಹ ವಾತಾವರಣ ಇಲ್ಲದಿರುವುದು ಕಂಡು ಬರುತ್ತದೆ. ಜನಾರ್ದನ ರೆಡ್ಡಿ ಹೊರತುಪಡಿಸಿ ಉಳಿದ ಪಕ್ಷೇತರ ಶಾಸಕರ ಮತಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಶಾಸಕರೊಂದಿಗೆ ಮಾತುಕತೆ ಮುಗಿಸಿದ್ದಾರೆ. ಈಗಿನ ವಿದ್ಯಮಾನಗಳ ಪ್ರಕಾರ ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳಿಗೆ 50 : 45: 43 ರ ಅನುಪಾತದಲ್ಲಿ ಮತಗಳನ್ನು ಹಂಚುವ ಆಲೋಚನೆ ಹೊಂದಿದೆ. ಮೊದಲ ಎರಡು ಅಭ್ಯರ್ಥಿಗಳಿಗೆ ಶಾಸಕರು ಕಾಂಗ್ರೆಸ್ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದ ನಂತದ ತಮ್ಮಎರಡನೇ ಪ್ರಾಶಸ್ತ್ಯದ ಮತಗಳನ್ನು ಪಕ್ಷದ ಮೂರನೇ ಅಭ್ಯರ್ಥಿಗೆ ನೀಡುವಂತೆ ಲೆಕ್ಕಾಚಾರ ರೂಪಿಸಿದೆ ಎಂದೂ ಹೇಳಲಾಗುತ್ತಿದೆ.

ಈ ಲೆಕ್ಕಾಚಾರದಂತೆ 43 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಮೂರನೇ ಅಭ್ಯರ್ಥಿ ಹೆಚ್ಚುವರಿಯಾಗಿ 85 ಎರಡನೇ ಪ್ರಾಶಸ್ತ್ಯದ ಮತಗಳನ್ನೂ ಪಡೆಯುವುದರಿಂದ ಗೆಲುವು ಸುಲಭ ಎಂಬುದು ಸದ್ಯದ ಲೆಕ್ಕಾಚಾರ. ಈ ಆಧಾರದ ಮೇಲೆಯೇ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಅಡ್ಡಿ ಇಲ್ಲ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ.

ತಮ್ಮ ಅಭ್ಯರ್ಥಿಯ ಗೆಲುವಿನ ಕುರಿತು ಆತ್ಮ ವಿಶ್ವಾಸದಲ್ಲಿರುವ ಕುಮಾರಸ್ವಾಮಿ ಬಿಜೆಪಿಯ ಹೆಚ್ಚುವರಿ ಮತಗಳು, ತಮ್ಮ ಪಕ್ಷದ 19 ಮತಗಳ ಜತೆಗೇ ಕಾಂಗ್ರೆಸ್ ನಿಂದ 9 ಮತಗಳು ತಮ್ಮ ಅಭ್ಯರ್ಥಿಗೆ ಸಿಗುವುದು ಖಚಿತ ಎಂಬ ಪ್ರಚಂಡ ಆತ್ಮ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಕೆಲವು ಕಾಂಗ್ರೆಸ್ ಶಾಸಕರನ್ನು ಕುಪೇಂದ್ರ ರೆಡ್ಡಿಯವರ ಜತೆ ನೇರವಾಗಿ ಸಂಪರ್ಕಿಸಿ` ಮಾತುಕತೆ’ ನಡೆಸಿಯೂ ಆಗಿದೆ ಎಂಬುದನ್ನು ಜೆಡಿಎಸ್ ಮೂಲಗಳೇ ಹೇಳುತ್ತವೆ. ಆದರೆ ಈ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

27 ರಂದು ಚುನಾವಣೆ ನಡೆಯಲಿದೆ. ಆ ವೇಳೆಗೆ ರಾಜಕೀಯ ಪಕ್ಷಗಳಲ್ಲಿ ಇನ್ನೂಅನೇಕ ಬದಲಾವಣೆ, ಬೆಳವಣಿಗೆಗಳು ನಡೆದರೂ ಆಶ್ಚರ್ಯವೇನಿಲ್ಲ.

ರೆಸಾರ್ಟ್ ಗೆ ಜೆಡಿಎಸ್ ಶಾಸಕರು?:

ತಮ್ಮ ಪಕ್ಷದ ಶಾಸಕರು ಕಾಂಗ್ರೆಸ್ ಪಾಲಾಗುವುದನ್ನು ತಪ್ಪಿಸಲು ಕುಮಾರಸ್ವಾಮಿ ಅವರೆಲ್ಲರನ್ನು ನಗರಕ್ಕೆ ಸಮೀಪದ ರೆಸಾರ್ಟ್ ಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದ್ದಾರೆ. ಆದರೆ ಬಿಜೆಪಿ ಜತೆಗಿನ ಮೈತ್ರಿಯ ಕುರಿತಂತೆ ಜೆಡಿಎಸ್ ನಲ್ಲೇ ಮೂರಕ್ಕೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರೆಲ್ಲ ಚುನಾವಣೆಯ ದಿನ ಕೈಗೊಳ್ಳುವ ತೀರ್ಮಾನದ ಮೇಲೆ ಜೆಡಿಎಸ್ ಭವಿಷ್ಯ ನಿರ್ಧಾರವಾಗಲಿದೆ.

ವಿಧಾನ ಪರಿಷತ್ ಮತ್ತು ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯ ನಂತರವೂ ತಮ್ಮ ಅಭ್ಯರ್ಥಿಗಳು ಗೆಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಗೂ ,ಮೈತ್ರಿ ಮುಂದುವರಿಯುತ್ತದೆಯಾ ಕಾದು ನೋಡಬೇಕಿದೆ. ಬಿಜೆಪಿ ಜತೆಗಿನ ಮೈತ್ರಿಯ ವಿಚಾರದಲ್ಲಿ ಕುಮಾರಸ್ವಾಮಿ ಬಿರುಸಿನ ಹೆಜ್ಜೆ ಇಟ್ಟು ಉತ್ಸಾಹದಲ್ಲಿದ್ದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ವಿಚಾರದಲ್ಲಿ ಅತ್ಯಂತ ನಾಜೂಕಿನ ನಡೆ ಅನುಸರಿಸುತ್ತಿದ್ದಾರೆ.

ಜೆಡಿಎಸ್ ನ ಹಿರಿಯ ಮುಖಂಡ ಶಾಸಕ ಜಿ.ಟಿ.ದೇವೇಗೌಡ ಇತ್ತಿಚೆಗೆ ಹೇಳಿಕೆ ನೀಡಿ ಬಿಜೆಪಿ ಜತೆ ತಮ್ಮ ಪಕ್ಷದ್ದು ಚುನಾವಣಾ ಮೈತ್ರಿಯೇ ಹೊರತೂ ಆ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಲ್ಲ ಎಂದೂ ಹೇಳಿರುವುದರ ಹಿಂದೆ ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.ವಾಸ್ತವವಾಗಿ ಹಿರಿಯ ನಾಯಕರಾದ ದೇವೇಗೌಡರ ಮಾತುಗಳನ್ನೇ ಜಿ.ಟಿ.ದೇವೇಗೌಡು ಆಡುವ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ್ದಾರೆ.

ರಾಜ್ಯ ಸಭಾ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಜಾತಿಯೂ ಸೇರಿದಂತೆ ನಾನಾ ರಾಜಕೀಯ ತಂತ್ರಗಳನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಹೆಣೆಯುತ್ತಿವೆ. ಲೋಕಸಭೆ ಚುನಾವನೆಗೆ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಕಡ್ಡಿ ಮುರಿದಂತೆ ಹೇಳಿರುವುದಷ್ಟೇ ಅಲ್ಲ ಮಮಡ್ಯ ಸೇರಿದಂತೆ ಒಕ್ಕಲಿಗರೇ ಅಧಿಕವಾಗಿರುವ ಜಿಲ್ಲೆಗಳಲ್ಲಿನ ತಮ್ಮ ಪಕ್ಷದ ಮುಖಂಡರ ಸಭೆ ಕರೆದು ಲೋಕಸಭಾ ಚುನಾವಣೆಯ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಪುಟ್ಟರಾಜುಗೆ ಸೂಚನೆ

ಈಗಾಗಲೇ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಲಿ ಸಂಸದೆ ಸುಮಲತಾ ತಯಾರಿ ಆರಂಭಿಸಿರುವ ಹೊತ್ತಲ್ಲೇ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಅವರನ್ನು ಸಂಪರ್ಕಿಸಿ ಮಾತನಾಡಿರುವ ದೇವೇಗೌಡರು ಲೋಕಸಭೆಗೆ ಸ್ಪರ್ಧಿಸಲು ಸಿದ್ಧವಾಗಿರುವಂತೆ ಸೂಚಿಸಿದ್ದಾರೆ. ಸನ್ನಿವೇಶ ಒದಗಿ ಬಂದರೆ ಸ್ವತಂತ್ರ ಸ್ಪರ್ಧೆಗೂ ಸಿದ್ಧವಾಗಿರುವಂತೆ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಸಂಭವನೀಯ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆಂಬ ಸುದ್ದಿಗಳೂ ಜೆಡಿಎಸ್ ಪಾಳೇಯದಿಂದ ಬಂದಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವನೆ ಫಲಿತಾಂಶದ ನಂತರ ದೇವೇಗೌಡರು ಈ ವಿಚಾರದಲ್ಲಿ ಮೌನ ಮುರಿಯಲಿದ್ದಾರೆ.

100%

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com