
ಜನವರಿ 22, 2024 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಕ್ಷಣಗಣನೆ ಆಗಲೇ ಶುರುವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ದೇಶ ವಿದೇಶದಿಂದ ಹತ್ತು ಸಾವಿರ ಗಣ್ಯರು ಆಗಮಿಸಲಿದ್ದಾರೆ. ಜನವರಿ 22 ರಂದು ಆಗುತ್ತಿರುವುದು ಪೂರ್ಣ ಮಂದಿರದ ಉದ್ಘಾಟನೆಯಲ್ಲ.
ಅಂದು ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ರಾಮನ ಭವ್ಯ ಮಂದಿರವು ಮೂರು ಹಂತದಲ್ಲಿ ಜನತೆಗೆ ತೆರೆದುಕೊಳ್ಳಲಿದೆ. ಪೂರ್ಣವಾಗಿ ಜನವರಿ 2025ರ ವೇಳೆಗೆ ಲೋಕಾರ್ಪಣೆಯಾಗಲಿದೆ.
ಜಗತ್ತು ನಿಬ್ಬೆರಗಾಗಿ ನಿಂತು ನೋಡುವಂತಹ ಭವ್ಯ ಮಂದಿರ ಕಟ್ಟಲು ಆದ ವೆಚ್ಚವೆಷ್ಟು?
ಫೆಬ್ರವರಿ 2020 ರಿಂದ ಮಾರ್ಚ್ 31, 2023 ರ ವರೆಗೆ 900 ಕೋಟಿ ರೂಪಾಯಿಗಳು ಖರ್ಚಾಗಿದೆ. ಇದೆ ಸಮಯದಲ್ಲಿ ಟ್ರಸ್ಟಿನ ಹೆಸರಿನಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಹಣ ಇರುವುದಾಗಿ ಟ್ರಸ್ಟ್ ಪತ್ರಿಕಾ ಹೇಳಿಕೆಯನ್ನು ನೀಡಿತ್ತು. ಸರಯೂ ನದಿಯ ತಟದಲ್ಲಿ ಕಟ್ಟಲಿರುವ ರಾಮನ ಕಥೆ ಹೇಳುವ ಮ್ಯೂಸಿಯಂನಲ್ಲಿ 500ಕ್ಕೂ ಹೆಚ್ಚು ವರ್ಷಗಳ ಕಥೆಯನ್ನು ಮತ್ತು ಕಳೆದ 50 ವರ್ಷದಲ್ಲಿ ಆದ ಕಾನೂನು ಹೋರಾಟದ ಪ್ರತಿಗಳನ್ನು ಕೂಡ ಇರಿಸಲಾಗುವುದು ಎಂದು ಹೇಳಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಇಷ್ಟು ದೊಡ್ಡ ಮಟ್ಟದ ಹಣ ಎಲ್ಲಿಂದ ಬಂದಿತು? ಇದನ್ನು ಯಾರು ಕೊಡುತ್ತಿದ್ದಾರೆ ಎನ್ನುವುದು ಕೂಡ ಸ್ವಾರಸ್ಯಕರ. ಈ ಹಣವನ್ನು ದೇಶದ ನಾಗರೀಕರು ಮತ್ತು ಹಲವಾರು ಸಂಘ ಸಂಸ್ಥೆಗಳು ದೇಣಿಗೆಯ ರೂಪದಲ್ಲಿ ನೀಡುವುದರ ಮೂಲಕ ಟ್ರಸ್ಟ್ ಖಾತೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಜಮಾವಣೆಯಾಗಿದೆ. ಅನಿವಾಸಿ ಭಾರತೀಯರ ಕಾಣಿಕೆಯನ್ನು ಕೂಡ ನಾವು ಮರೆಯುವಂತಿಲ್ಲ. 500ಕ್ಕೂ ಹೆಚ್ಚು ವರ್ಷದ ಹಿಂದೂ ಭಾವನೆಗೆ ಬೆಲೆ ಸಿಗುವ ಕಾಲ ಸನ್ನಿಹಿತವಾಗಿದೆ. ಮಂದಿರ ಪೂರ್ಣವಾಗಿ ಜನತೆಗೆ ತೆರೆದುಕೊಳ್ಳುವ ವೇಳೆಗೆ ಖರ್ಚು 1,100 ಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.
ಇಷ್ಟೊಂದು ದೊಡ್ಡ ಮೊತ್ತವನ್ನು ಮಂದಿರ ಕಟ್ಟಲು ಬಳಸಿದ್ದು ಸರಿಯೇ ಎನ್ನುವ ಪ್ರಶ್ನೆಯನ್ನು ಸಮಾಜದ ಹಲವು ವರ್ಗದ ಜನ ಎತ್ತಿದ್ದಾರೆ. ಗಮನಿಸಿ ನೋಡಿ ಇದಕ್ಕಿಂತ ಹೆಚ್ಚಿನ ಹಣವನ್ನು ಮಂದಿರ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದರೂ ಕೂಡ ಇದು ಲಾಭದಾಯಕ. ಗುಜರಾತಿನ ವಡೋದರಾ ಸಮೀಪ ಏಕತಾ ಮೂರ್ತಿಯನ್ನು ನಿರ್ಮಿಸಿದಾಗ ಕೂಡ ಇದೆ ರೀತಿಯ ಮಾತುಗಳು ಕೇಳಿ ಬಂದಿದ್ದವು. ಅಲ್ಲಿಗೆ ಮಾಡಿದ ಹೂಡಿಕೆ ವಾಪಸ್ಸು ಪಡೆದದ್ದು ಅಲ್ಲದೆ ಅಲ್ಲಿನ ಸರಕಾರ ಇದರಿಂದ ಆದಾಯವನ್ನು ಪಡೆದುಕೊಳ್ಳುತ್ತಿದೆ. ಕೇವಲ ಸರಕಾರ ಮಾತ್ರವಲ್ಲ ಅಲ್ಲಿ ಸಾಮಾನ್ಯ ಪ್ರಜೆಯ ಜೀವನ ಮಟ್ಟವೂ ಬಹಳ ಸುಧಾರಣೆ ಕಂಡಿದೆ. ಅಲ್ಲಿ ಹೆಚ್ಚಾಗಿರುವ ಟೂರಿಸಂ ಇದಕ್ಕೆ ಸಾಕ್ಷಿಯಾಗಿದೆ. ವ್ಯಾಟಿಕನ್ ಸಿಟಿಯಲ್ಲಿರುವುದು ಕೇವಲ ಒಂದು ಚರ್ಚು, ಅದು ಜಗತ್ತಿನ ಪುಟಾಣಿ ದೇಶ ಎಂದು ಗುರುತಿಸಿಕೊಂಡಿದೆ. ಜಗತ್ತಿನ ಅತ್ಯಂತ ಸಂಪದ್ಭರಿತ ಧಾರ್ಮಿಕ ಕ್ಷೇತ್ರ ಎನ್ನುವ ಹೆಗ್ಗಳಿಕೆ ಅದಕ್ಕಿದೆ. ಇನ್ನು ಮೆಕ್ಕಾ ಮತ್ತು ಮದೀನಾ ಗಳಿಗೆ ಜಗತ್ತಿನ ಎಲ್ಲೆಡೆಯಿಂದ ಮುಸ್ಲಿಂ ಜನಾಂಗ ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಅದು ಕೂಡ ಸಂಪದ್ಭರಿತವಾಗಿದೆ. ನಮ್ಮಲ್ಲಿ ಎಲ್ಲಾ ಇತಿಹಾಸವನ್ನೂ ಇಟ್ಟುಕೊಂಡು ಹಿಂದೂ ಧಾರ್ಮಿಕ ಭಾವನೆಯನ್ನು ಪೋಷಿಸುವ ಮಂದಿರ ನಿರ್ಮಾಣ ಮಾಡುವುದರಲ್ಲಿ ಲೆಕ್ಕದ ಮಾತು ಬರಲೇಬಾರದು. ಆದರೂ ಲೆಕ್ಕಾಚಾರದಲ್ಲೂ ಇದು ಸೋಲುವುದಿಲ್ಲ ಎನ್ನುವುದನ್ನು ಅಂಕಿ ಅಂಶಗಳು ಸಾಬೀತು ಪಡಿಸುತ್ತಿವೆ.
ನೀವು ಇತಿಹಾಸವನ್ನು ಗಮನಿಸಕೊಂಡು ಬನ್ನಿ, ನಮ್ಮ ಆರ್ಥಿಕತೆಯ ಮೂಲ ದೇವಸ್ಥಾನಗಳಾಗಿದ್ದವು ಎನ್ನುವುದು ನಿಮಗೆ ತಿಳಿಯುತ್ತದೆ. ನಮ್ಮದು ಇಂದಿಗೂ ದೈವದಲ್ಲಿ ಹೆಚ್ಚು ನಂಬಿಕೆಯಿಡುವ ಸಮಾಜ. ಈ ಕಾರಣದಿಂದ ಮಂದಿರ ಕಟ್ಟಿರುವುದನ್ನು ನಾವು ಯಾವುದೇ ಕಾರಣಕ್ಕೂ ಏಕೆ ಎಂದು ಪ್ರಶ್ನಿಸಬಾರದು. ಭಾರತ ಮತ್ತೊಮ್ಮೆ ಜಾಗತಿಕವಾಗಿ ಶಕ್ತಿ ಕೇಂದ್ರವಾಗಿ ಬೆಳೆಯುವ ಎಲ್ಲಾ ಅಂಶಗಳು ಕಾಣುತ್ತಿವೆ. ಈ ಸಮಯದಲಿ ಅಪಸ್ವರ ಸಾಧುವಲ್ಲ.
ಉತ್ತರ ಪ್ರದೇಶದ ಆರ್ಥಿಕತೆ ಭಾರತದ ಆರ್ಥಿಕತೆಯ 9.2 ಪ್ರತಿಶತವಿದೆ. ಭಾರತದ ಆರ್ಥಿಕತೆ 4 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂದರೆ 360 ಬಿಲಿಯನ್. 2027ರ ವೇಳೆಗೆ ಕೇವಲ ಉತ್ತರ ಪ್ರದೇಶದ ಜಿಡಿಪಿ 1 ಟ್ರಿಲಿಯನ್ ಡಾಲರ್ ಆಗಲಿದೆ. ಅಯೋಧ್ಯಾ ಬಳಿ ಟೌನ್ ಶಿಪ್ ತಲೆಯೆತ್ತಲಿದೆ. ಬಂಡವಾಳಶಾಹಿಗಳಿಂದ ಹಿಡಿದು ಸಾಮಾನ್ಯ ರಿಕ್ಷಾ ಡ್ರೈವರ್ ವರೆಗೆ ಎಲ್ಲರೂ ಹೊಸ ಆರ್ಥಿಕತೆಯ ಫಲಾನುಭವಿಗಳಾಗಲಿದ್ದಾರೆ.
ಕೊನೆಮಾತು: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಳಿ ಇಷ್ಟೆಲ್ಲಾ ವೆಚ್ಚ ಮಾಡಿ ಕೂಡ ಮೂರು ಸಾವಿರ ಕೋಟಿ ರೂಪಾಯಿ ಹಣವಿರುತ್ತದೆ. ಮುಂಬರುವ ದಿನಗಳಲ್ಲಿ ಅದನ್ನು ಲೋಕಕಲ್ಯಾಣಕ್ಕೆ ಉಪಯೋಗಿಸಲಾಗುತ್ತದೆ. ಅಯೋಧ್ಯೆಗೆ ಈಗಾಗಲೇ ಕಣ್ಮನ ಸೆಳೆಯುವ ರೈಲ್ವೆ ನಿಲ್ದಾಣ, ಏರ್ಪೋರ್ಟ್ ಲಭ್ಯವಾಗಿದೆ. ಮುಂಬರುವ ವರ್ಷಗಳಲ್ಲಿ ಇಂದು ಜಗತ್ತಿನಲ್ಲಿ ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಸ್ಥಳವಾಗಿ ಮಾರ್ಪಾಡಾಗುವ ಎಲ್ಲಾ ಸಾಧ್ಯತೆಗಳು ಇವೆ. ಭಾವನೆಯಲ್ಲಿ ಬಂಡವಾಳದ ಮಾತು ಬರಲೇಬಾರದು, ಹಾಗೊಮ್ಮೆ ಲೆಕ್ಕಾಚಾರ ಹಾಕಿದರೂ ರಾಮ ಮಂದಿರ ನಿರ್ಮಾಣ ಮಾಡಿರುವುದು ಸೂಕ್ತವಾಗಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement