ಅನಂತ್ ಕುಮಾರ್ ಹೆಗಡೆ 'ಕರಾಟೆ ಕೌಶಲ್ಯ'ಕ್ಕೆ ನಲುಗಿದ ಬಿಜೆಪಿ! (ಸುದ್ದಿ ವಿಶ್ಲೇಷಣೆ)

ಯಗಟಿ ಮೋಹನ್ಮಾಜಿ ಕೇಂದ್ರ ಸಚಿವ, ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಸುದೀರ್ಘ ಅಜ್ಞಾತವಾಸದಿಂದ ಇದ್ದಕ್ಕಿದ್ದಂತೆ ಧಿಗ್ಗನೆ ಎದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ.  
ಅನಂತ್ ಹೆಗಡೆ
ಅನಂತ್ ಹೆಗಡೆ

ಒಂದು ಕಲ್ಲು….. ಮೂರು ಹಕ್ಕಿ. ಮಾಜಿ ಕೇಂದ್ರ ಸಚಿವ, ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಸುದೀರ್ಘ ಅಜ್ಞಾತವಾಸದಿಂದ ಇದ್ದಕ್ಕಿದ್ದಂತೆ ಧಿಗ್ಗನೆ ಎದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ.  

ಬರೀ ಪ್ರವಾಸ ಕೈಗೊಂಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಲೋಕಸಭೆ ಚುನಾವಣೆಗೆ ದಿನ ಗಣನೆ ಆರಂಭವಾಗಿರುವ ಈ ಹಂತದಲ್ಲಿ ಅನಗತ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ವಿವಾದಕ್ಕೂ ಕಾರಣರಾಗಿದ್ದಾರೆ. ಮೇಲ್ನೋಟಕ್ಕೆ ಇದು ವಿವಾದ ಎನಿಸಿದರೂ ಇದರ ಹಿಂದೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯುವ ತಂತ್ರ ಅಡಗಿದೆ. ಸ್ಥಳೀಯವಾಗಿ ಇರುವ ಪುರಾತನ ಮಸೀದಿಗಳನ್ನು ಒಡೆದು ಮಂದಿರ ನಿರ್ಮಿಸುವುದಾಗಿ ನೀಡಿದ ಪ್ರಚೋದನಕಾರಿ ಹೇಳಿಕೆ ಈಗ ವಿವಾದಗಳನ್ನು ಎಬ್ಬಿಸಿದ್ದು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯ ನಾಯಕರ ಪೈಕಿ ಉಗ್ರ ಹಿಂದುತ್ವ ವಾದಿ ಎಂದೇ ಬಿಂಬಿತವಾದ ಅನಂತಕುಮಾರ್ ಹೆಗಡೆ ಭಟ್ಕಳದಲ್ಲಿ ದಶಕಗಳ ಹಿಂದೆ ನಡೆದ ಗಲಭೆಯ ಸಂದರ್ಭವನ್ನು ಬಳಸಿಕೊಂಡು ಹಿಂದೂ ನಾಯಕರಾಗಿ ಬೆಳೆದವರು. ಹಾಗೆಯೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಪ್ರಸಿದ್ಧರು. ಸ್ವತಹಾ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಅವರ ಕರಾಟೆ ಕಲೆ ಒಂದೆರಡು ಬಾರಿ ಸ್ಥಳೀಯ ಸರ್ಕಾರಿ ಅಧಿಕಾರಿಗಳ ಮೇಲೂ ಪ್ರಯೋಗ ಆದದ್ದಿದೆ. 

ಸುಮಾರು ಮೂರು ದಶಕಗಳ ಹಿಂದೆ ಈಗಿನ ಮಾಜಿ ಮಂತ್ರಿ ಶಾಸಕ ಶಿವರಾಮ ಹೆಬ್ಬಾರ್ ಅವರ ಮೇಲೂ ತಮ್ಮ ಕರಾಟೆ ಕಲೆಯನ್ನೂ ಅವರು ಪ್ರದರ್ಶಿಸಿದ್ದರು. ಲೋಕಸಭೆಗೆ ಬಿಜೆಪಿಯಿಂದ ಸತತವಾಗಿ ಆರು ಬಾರಿ ಆಯ್ಕೆಯಾಗುತ್ತಾ ಬಂದಿದ್ದಾರಾದರೂ ಕೆನರಾ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ.. ಒಮ್ಮೆ ಬಿಜೆಪಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ದಿ ಖಾತೆಯ ಕೇಂದ್ರ ಮಂತ್ರಿಯೂ ಆಗಿದ್ದರು. ಸಚಿವ ಪದವಿ ಖಾತೆ ಸಿಕ್ಕ ಮರುಕ್ಷಣವೇ ಇದೊಂದು ಕೆಲಸವೇ ಇಲ್ಲದ ಖಾತೆ ಎಂದು ಸ್ವತಹಾ ಜರಿದಿದ್ದೂ ಉಂಟು. ಅಲ್ಲೂ ಮಹತ್ವದ ಸಾಧನೆಯನ್ನೇನೂ ಮಾಡಲಿಲ್ಲ. ಕಡೆಗೆ ಮಂತ್ರಿಗಿರಿಯೂ ಕೈ ತಪ್ಪಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರದ ಜನರು ಅವರನ್ನು ನೋಡಿಯೇ ಇಲ್ಲ ಎನ್ನುತ್ತಾರೆ. ಇದೀಗ ಲೋಕಸಭೆಗೆ ಚುನಾವಣೆ ಘೋಷಣೆಯಾಗುವ ಹೊತ್ತಿನಲ್ಲಿ ದಿಢೀರನೆ ಅಜ್ಞಾತವಾಸದಿಂದ ಹೊರ ಬಂದು ಕ್ಷೇತ್ರದಾದ್ಯಂತ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಆ ಸಭೆಗಳಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಹಿಂದುತ್ವದ ಉಗ್ರ ಭಾಷಣ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. 

ರಾಜಕಾರಣದಿಂದ ನಾಲ್ಕೂವರೆ ವರ್ಷ ದೂರವೇ ಇದ್ದು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವುದಾಗಿ ಆತ್ಮೀಯರ ಬಳಿ ಹೇಳಿಕೊಂಡಿದ್ದ ಅವರು ಈಗ ಇದ್ದಕ್ಕಿದ್ದಂತೆ ಎದ್ದು ಕ್ರಿಯಾಶೀಲರಾಗಿರುವುದರ ಹಿಂದೆ ಮತ್ತೆ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗುವ ಉದ್ದೇಶ ಇದೆ. ಆದರೆ ಈ ಅವಧಿಯಲ್ಲಿ ಪಕ್ಷದೊಳಗೇ ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಜತೆಗೇ ಪಕ್ಷದ ದಿಲ್ಲಿ ವರಿಷ್ಠರ ಅವ ಕೃಪೆಗೂ ಪಾತ್ರರಾಗಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀರಾ ಕೆಳ ಮಟ್ಟದ ಪದಗಳನ್ನು ಬಳಸಿ ನಿಂದಿಸಿರುವುದಲ್ಲದೇ ತಮ್ಮ ನಡೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಹಿಂದೆ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನೂ ಏಕ ವಚನದಲ್ಲಿ ನಿಂದಿಸಿದ್ದರು. ಹೀಗಿರುವಾಗ ಅದನ್ನು ಸರಿ ಎನ್ನುವುದಾದರೆ ತಾನು ಮಾತನಾಡಿದ್ದೂ ಸರಿ ಎಂಬ ವಾದದ ಮೂಲಕ ತಮ್ಮ ಸಮರ್ಥನೆಯನ್ನು ಮುಂದಿಟ್ಟಿದ್ದಷ್ಟೇ ಅಲ್ಲ ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಅವರಿಗೆ ಸವಾಲು ಒಡ್ಡಿದ್ದಾರೆ. 

ಅನಂತ್ ಕುಮಾರ್ ಹೆಗಡೆಯವರ ಹೇಳಿಕೆಯನ್ನು ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಮರ್ಥಿಸಿಕೊಂಡಿರುವುದು ಬಿಟ್ಟರೆ ಉಳಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಹುತೇಕ ಮುಖಂಡರು ಇದು ಪಕ್ಷದ ನಿಲುವಲ್ಲ ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ. 

ಒಂದಂತೂ ಸ್ಪಷ್ಟ, ಬಹಿರಂಗ ಚರ್ಚೆಗೆ ಬರುವಂತೆ ಅನಂತ್ ಕುಮಾರ್ ಹೆಗಡೆ ಒಡ್ಡಿರುವ ಸವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿಯೂ ಇಲ್ಲ ನಿರಾಕರಿಸಿಯೂ ಇಲ್ಲ. ಆದರೆ ಅವರ ಸಚಿವ ಸಹೋದ್ಯೋಗಿಗಳ ಪೈಕಿ ಕೆಲವರು ಪೈಪೋಟಿಗೆ ಬಿದ್ದವರಂತೆ ಅವರ ಹೇಳಿಕೆ ವಿರುದ್ಧ ಪ್ರತಿ ಹೇಳಿಕೆಗಳ ಸಮರಕ್ಕೆ ಇಳಿದಿದ್ದಾರೆ. 

ರಾಜಕಾರಣದಲ್ಲಿ ಆಡಳಿತ, ವಿರೋಧ ಪಕ್ಷಗಳ ನಡುವೆ ಟೀಕೆಗಳು ಸಾಮಾನ್ಯ. ಅದೇನೂ ಹೊಸತಲ್ಲ. ಆದರೆ ಟೀಕೆಗಳು ಇತ್ತೀಚಿನ ವರ್ಷಗಳಲ್ಲಿ ಕಾರ್ಯಕ್ರಮ, ಸಿದ್ದಾಂತಗಳ ಬದಲಾಗಿ ವ್ಯಕ್ತಿಗತ ನಿಂದನೆ ಅವಹೇಳನಕ್ಕೆ ಸೀಮಿತವಾಗುತ್ತಿವೆ. ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರಷ್ಟೇ ಹಿರಿಯರಾದ  ಕೆ.ಎಸ್. ಈಶ್ವರಪ್ಪ ಬಿಜೆಪಿಯಲ್ಲಿ ಹಿಂದುತ್ವದ ಉಗ್ರ ಪ್ರತಿಪಾದಕ ಎಂದೇ ಹೆಸರಾದವರು. ಇತ್ತೀಚಿನ ದಿನಗಳಲ್ಲಂತೂ ಅವರ ಹೇಳಿಕೆಗಳ ಲಹರಿ ದಿಕ್ಕು ತಪ್ಪಿದ್ದೇ ಜಾಸ್ತಿ. ತಮ್ಮ ವಿರುದ್ಧ ಈಶ್ವರಪ್ಪ ಟೀಕೆಗಳ ಸುರಿಮಳೆ ಕರೆದಾಗಲೆಲ್ಲ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ಸಂದರ್ಭದಲ್ಲೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಏಕ ವಚನ ಪ್ರಯೋಗಿಸುವ ಮೂಲಕ ದಡ್ಡ, ಪೆದ್ದ ಎಂಬೆಲ್ಲ ಪದಗಳನ್ನು ಸಾರ್ವಜನಿಕವಾಗೇ ಬಳಸಿದ್ದಾರೆ.  

ಶಿಷ್ಟಾಚಾರ ಮರೆತ ಸಿದ್ದರಾಮಯ್ಯ!

ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಕುಳಿತ ನಾಯಕ ಬಳಸುವ ಭಾಷೆಗೆ ಆಡುವ ಮಾತಿಗೆ ತುಂಬಾ ಮಹತ್ವ ಇರುತ್ತದೆ. ಟೀಕೆಗಳೂ ಸಭ್ಯತೆಯ ಎಲ್ಲೆಯನ್ನು ಮೀರಬಾರದು ಎಂಬ ಸಾರ್ವಜನಿಕ ಶಿಷ್ಟಾಚಾರವನ್ನು ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ, ಪ್ರೊ. ನಂಜುಂಡ ಸ್ವಾಮಿ, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್. ಪಟೇಲರಂತಹ ದಿಗ್ಗಜರ ಗರಡಿಗಳಲ್ಲಿ ತಮ್ಮ ರಾಜಕೀಯ ಬದುಕು ಕಟ್ಟಿಕಟ್ಟಿಕೊಂಡ ಮುಖ್ಯಮಂತ್ರಿ ಪ್ರತಿಪಕ್ಷದ ನಾಯಕ ಸ್ಥಾನಗಳಂತಹ ಮಹತ್ವದ ಹುದ್ದೆಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಸಿದ್ದರಾಮಯ್ಯ ಕೂಡಾ ಮರೆಯುತ್ತಿದ್ದಾರೆಯೆ? ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಅವರ ಹೇಳಿಕೆಗಳು, ವರ್ತನೆಗಳನ್ನು ಗಮನಿಸಿದರೆ ಮೂಡುತ್ತದೆ. ತಮಗಿಂತ ಕಿರಿಯರನ್ನು ಖಾಸಗಿಯಾಗಿ ಏಕ ವಚನದಲ್ಲಿ ಮಾತನಾಡಿಸುವುದಕ್ಕೂ ಸಾರ್ವಜನಿಕವಾಗಿ ಅದೇ ಭಾಷೆಯಲ್ಲಿ ಮಾತನಾಡಿಸುವುದಕ್ಕೂ ಇರುವ ವ್ಯತ್ಯಾಸವನ್ನು ಸಿದ್ದರಾಮಯ್ಯರಂತಹ ಅನುಭವಿ ನಾಯಕ ಮರೆಯುತ್ತಿರುವುದರ ಬಗ್ಗೆ ಸ್ವಪಕ್ಷೀಯ ಮುಖಂಡರೇ ಖಾಸಗಿಯಾಗಿ ಬೇಸರ ಪಟ್ಟುಕೊಳ್ಳುತ್ತಾರೆ. 

ಹೀಗಾಗಿ ಪ್ರಧಾನಿ ಹುದ್ದೆಯಂತಹ ಮಹತ್ವದ ಸ್ಥಾನದಲ್ಲಿ ಕುಳಿತ ವ್ಯಕ್ತಿಯನ್ನು ಏಕ ವಚನದಲ್ಲಿ ನಿಂದಿಸುವ ಹಂತಕ್ಕೆ ಸಿದ್ದರಾಮಯ್ಯ ಇಳಿಯಬಾರದಿತ್ತು ಎಂಬ ಟೀಕೆಗಳೂ ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಇನ್ನು ಬಿಜೆಪಿ ಅನಂತ ಕುಮಾರ್ ಹೆಗಡೆಯವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವುದರ ಹಿಂದೆ ಕೆನರಾ ಲೋಕಸಭಾ ಕ್ಷೇತ್ರದ ರಾಜಕಾರಣದ ಜತೆಗೇ ಸಿದ್ದರಾಮಯ್ಯ ನವರಿಗಿರುವ ಅಹಿಂದ ಇಮೇಜ್ ಕೂಡಾ ಕಾರಣವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನಂತ್ ಕುಮಾರ್ ಹೆಗಡೆಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಇದಕ್ಕೆ ಕಾರಣ ಅವರು ನಾಲ್ಕೂವರೆ ವರ್ಷ ನಿಷ್ಕ್ರಿಯರಾಗಿದ್ದಷ್ಟೇ ಅಲ್ಲದೇ ದಿಲ್ಲಿ ಮಟ್ಟದಲ್ಲೂ ಅವರಿಗೆ ನಾಯಕತ್ವದ ಬೆಂಬಲ ಇಲ್ಲ ಎಂಬುದನ್ನು ಬಿಜೆಪಿ ಮೂಲಗಳೇ ದೃಢ ಪಡಿಸುತ್ತವೆ.

ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಾಗ ನೆರೆಯ ಕ್ಷೇತ್ರದ ಸಂಸದರಾಗಿದ್ದೂ ಅನಂತ್ ಕುಮಾರ್ ಹೆಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಪಕ್ಷದ ಯಾವುದೇ ಸಭೆಗಳಲ್ಲಿ ಕಾಣಿಸಿಕೊಳ್ಳದ ಅವರು ಕೆನರಾ ಲೋಕಸಭಾ ಕ್ಷೇತ್ರದ ಅನೇಕ ಜ್ವಲಂತ ಸಮಸ್ಯೆಗಳ ಕುರಿತಾಗಿ ಒಬ್ಬ ಜನಪ್ರತಿನಿಧಿಯಾಗಿಯೂ ಸ್ಪಂದಿಸುವ ಕೆಲಸ ಮಾಡಿಲ್ಲ. ಇದೀಗ ಮೋದಿ ಜನಪ್ರಿಯತೆ ಅಲೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಲು ಹೊರಟಿರುವ ಅವರಿಗೆ ಬಿಜೆಪಿಯಲ್ಲೇ ಎದುರಾಳಿಗಳ ಸಂಖ್ಯೆ ದೊಡ್ಡದಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಪ್ರಮುಖರ ಹೆಸರು ಈ ಬಾರಿ ಕೆನರಾ ಕ್ಷೇತ್ರದಿಂದ ಅಭ್ಯರ್ಥಿಗಳಾಗಬಲ್ಲವರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. 

ಇವರೆಲ್ಲರೂ ನಾನಾ ಕಾರಣಗಳಿಗಾಗಿ ಅನಂತಕುಮಾರ್ ಹೆಗಡೆಯವರಿಗೆ ಪಕ್ಷದಲ್ಲೇ ವಿರೋಧಿಗಳಾಗಿದ್ದಾರೆ. ಚುನಾವಣೆ ಉದ್ದೇಶವನ್ನಿಟ್ಟುಕೊಂಡೇ ಇತ್ತಿಚೆಗೆ ಸುದ್ದಿಗೆ ಬಂದಿರುವ ಅವರನ್ನು ಇತ್ತೀಚೆಗೆ ಕೆಲವು ಬೆಂಬಲಿಗರು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಕೆನರಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವಂತೆ ಅವರ ಮನೆಗೇ ತೆರಳಿ ಒತ್ತಾಯಿಸಿದ ಪ್ರಸಂಗವೂ ನಡೆದಿದೆ. ಅಷ್ಟೇ ಜಾಣತನದಿಂದ ಇದನ್ನು ರಾಜ್ಯ ಮತ್ತು ದಿಲ್ಲಿ ಬಿಜೆಪಿ ನಾಯಕರ ಗಮನಕ್ಕೆ ತರುವಂತೆ ನೋಡಿಕೊಂಡ ಅನಂತ್ ಆ ಮೂಲಕ ಮತ್ತೆ ಸ್ಪರ್ಧಿಸುವ ಬಯಕೆಯನ್ನು ನಾಯಕರುಗಳ ಮುಂದೆ ಇಟ್ಟಿದ್ದಾರೆ. 

ಸಿಕ್ಕದ ಭರವಸೆ

ಇತ್ತೀಚೆಗೆ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದೂ ಉಂಟು. ಆದರೆ ಯಾವುದೇ ಸ್ಪಷ್ಟ ಭರವಸೆ ನಾಯಕತ್ವದಿಂದ ಸಿಕ್ಕದಾಗ ಹಿಂದುತ್ವ, ಮೋದಿ ನಾಯಕತ್ವದ ಹೆಸರಲ್ಲಿ ವಿವಾದ ಎಬ್ಬಿಸಿದ್ದಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇದಿಗ ಇಡೀ ರಾಜ್ಯದ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಅವರ ಹೇಳಿಕೆಗಳ ಪರ – ವಿರೋಧ ಚರ್ಚೆಗಳು ನಡೆಯುತ್ತಿರುವುದು ಒಂದು ಕಡೆಯಾದರೆ ಬಹುತೇಕ ಅವರನ್ನು ಮರೆತೇ ಹೋಗಿದ್ದ ಕೆನರಾ ಕ್ಷೇತ್ರದ ಕಾರ್ಯಕರ್ತರು, ಮತದಾರರು ಈಗ ಅವರತ್ತ ತಿರುಗಿ ನೋಡುವಂತಾಗಿದೆ. 

ಅನಂತ್ ಕಲ್ಲೆಸೆದ್ದು ಯಾರಿಗೆ?

ಅಲ್ಲಿಗೆ ಅನಂತ್ ಕುಮಾರ್ ಹೆಗಡೆ ಉದ್ದೇಶ ಈಡೇರಿದೆ. ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕೆಂಬ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಧಿಗ್ಗನೆ ಎದ್ದು ಅವರು ವಿವಾದ ಸೃಷ್ಟಿಸಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಖಂಡಿತಾ ಇವೆ. ಇದರಿಂದ ಅಭ್ಯರ್ಥಿ ಆಗುವ ಆಕಾಂಕ್ಷೆ ಹೊತ್ತ ಮುಖಂಡರು ಕಂಗಾಲಾಗಿದ್ದಾರೆ. ಇಂಥದೊಂದು ವರ್ತನೆಯನ್ನು ನಿರ್ಲಕ್ಷಿಸಬಹುದಾಗಿದ್ದ ಕಾಂಗ್ರೆಸ್ ನ ಕೆಲವು ನಾಯಕರು ಅವರ ಲೆಕ್ಕಾಚಾರ ಅರಿಯದೇ ಅಷ್ಟೇ ತೀಕ್ಷ್ಣವಾಗಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಮುಂದುವರಿಸಿದ್ದಾರೆ.  

ಈ ಬೆಳವಣಿಗೆಗಳ ಮೂಲಕ ಅನಂತ್ ಕುಮಾರ್ ಹೆಗಡೆ ಒಂದೇ ಕಲ್ಲಿನಲ್ಲಿ ಪಕ್ಷದಲ್ಲಿನ ತಮ್ಮ ವಿರೋಧಿಗಳು, ಕಾಂಗ್ರೆಸ್ ನ ಎದುರಾಳಿಗಳನ್ನು ಹೊಡೆದು ಉರುಳಿಸುವ ತಂತ್ರ ಅನುಸರಿಸಿದ್ದಾರೆ. ಮತ್ತು ಆ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದಾರೆ. ಅವರು ಎಸೆದ ಕಲ್ಲು ಪಕ್ಷದೊಳಗಿನ ಎದುರಾಳಿಗಳಿಗೆ ಬಿದ್ದಿದೆ. ಅದರಿಂದ ಅವರು ಸುಧಾರಿಸಿಕೊಳ್ಳಲು ಇನ್ನಷ್ಟು ಕಾಲ ಬೇಕು.

-ಯಗಟಿ ಮೋಹನ್
yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com