ಕ್ರೋಮೆಟೋಫೋಬಿಯಾ ಅಂದರೇನು? ಅದರಿಂದ ಹೊರಬರುವುದು ಹೇಗೆ...? (ಹಣಕ್ಲಾಸು)

ಹಣಕ್ಲಾಸು-396-ರಂಗಸ್ವಾಮಿ ಮೂಕನಹಳ್ಳಿ
ಕ್ರೋಮೆಟೋಫೋಬಿಯಾ
ಕ್ರೋಮೆಟೋಫೋಬಿಯಾ

ಮನುಷ್ಯನ ಮೆದುಳು ತಾನು ಪಡೆದುಕೊಂಡದ್ದನ್ನ ಕಳೆದುಕೊಳ್ಳದಂತೆ ರಕ್ಷಿಸಿಕೊಳ್ಳಲು ಸದಾ ತಯಾರಾಗಿರುತ್ತದೆ. ಅದು ಮನುಷ್ಯನ ಸಹಜ ಗುಣವಾಗಿದೆ. ಹೀಗಿದ್ದೂ ಮನುಷ್ಯನಿಗೆ ತಾನು ಗಳಿಸಿದ್ದು ಕಳೆದುಕೊಳ್ಳುವ ಭಯ ಸದಾ ಇದ್ದೆ ಇರುತ್ತದೆ. ಪ್ರೀತಿ ಪಾತ್ರರ, ಬಂಧು ಬಳಗವನ್ನ ಕಳೆದುಕೊಳ್ಳುವ ಭಯ, ಆರೋಗ್ಯ ನಾಶದ ಭಯ ಹೀಗೆ ಹಲವು ಹತ್ತು ಭಯಗಳಿವೆ. ಅವುಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ತಾನು ಗಳಿಸಿದ ಸಂಪತ್ತಿನ ನಾಶದ್ದು. ಇದೊಂದು ಗೀಳು ಪ್ರವೃತ್ತಿ. ಈ ಭಯ ಹೆಚ್ಚಾದರೆ ಅದನ್ನ ಅಸುನೇತ್ರಾ ಅತುಷ್ಟಿ ಎನ್ನಲಾಗುತ್ತದೆ. ಇಂತಹ ಭಯಕ್ಕೆ ಇಂಗ್ಲಿಷ್ನಲ್ಲಿ ‘chrometophobia' (ಕ್ರೋಮೆಟೋಫೋಬಿಯಾ) ಎನ್ನುತ್ತಾರೆ. 

ಜಗತ್ತು ಇಂದು ಹಿಂದೆಂದೂ ಕಾಣದ ಅಸ್ಥಿರತೆಯನ್ನ ಕಾಣುತ್ತಿದೆ. ಹಣವಿಲ್ಲದವರ ಗೋಳು ಒಂದೆಡೆಯಾದರೆ, ಉಳ್ಳವರ ತೊಳಲಾಟಗಳು ಕೂಡ ಹೆಚ್ಚಾಗಿವೆ. ಒಂದೇ ಸಮನೆ ಏರುತ್ತಿರುವ ಹಣದುಬ್ಬರ ಹಣವನ್ನ ಕರಗಿಸುತ್ತಿದೆ. ನಿನ್ನೆಯ ಬೆಲೆ ಇಂದಿಗಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನ ಕರಗಿ ಹೋಗದಂತೆ ಉಳಿಸಿಕೊಳ್ಳುವ ದರ್ದು, ಭಯಕ್ಕೆ ಇಂದು ಸಮಾಜ ತುತ್ತಾಗಿದೆ. ಇದು ವ್ಯಸನದ ಮಟ್ಟಕ್ಕೆ ಹೋಗಬಾರದು. ಈ ಭಯದಲ್ಲಿ ಕೂಡ ಹಲವು ವಿಧ.

  1. ಕಳ್ಳಕಾಕರ ಭಯ: ಶತ ಶತಮಾನದಿಂದ ಇರುವ ಭಯ ಮತ್ತು ಸಮಸ್ಯೆಯಿದು. ಶ್ರೀಮಂತರಲ್ಲಿ ಇರುವ ಅತಿ ಸಾಮಾನ್ಯ ಭಯವಿದು. ಹಿಂದೆಲ್ಲ ಈ ಕಾರಣಕ್ಕಾಗಿಯೇ ನೆಲವನ್ನ ಅಗಿದು ಹುದುಗಿಸಿಡುತ್ತಿದ್ದರು. ದೇವಸ್ಥಾನದ ಕೆಳಭಾಗದಲ್ಲಿ, ಧವಸ ಧಾನ್ಯದ ಮಧ್ಯೆ, ಹೀಗೆ ಹಲವೆಡೆ ಸಂಪತ್ತನ್ನ ಮುಚ್ಚಿಡುವುದು ಸಾಮಾನ್ಯವಾಗಿತ್ತು. ಇಂದು ಕಾಲಕ್ಕೆ ತಕ್ಕಂತೆ ಮನೆಗೆ ನುಗ್ಗದೇ, ಕುಳಿತಲ್ಲಿಂದ ಸದ್ದಿಲ್ಲದೇ ಹಣವನ್ನ ಲಪಟಾಯಿಸುತ್ತಾರೆ. ಬಡವ, ಸಾಹುಕಾರ ಯಾವುದೂ ಬೇಕಿಲ್ಲ, ನಿಮ್ಮ ಖಾತೆಯಲ್ಲಿ ಒಂದಷ್ಟು ಹಣ ಕಂಡರೆ ಅಷ್ಟು ಸಾಕು.
  2. ಬಂಧು ಮಿತ್ರರು ಮೋಸ ಮಾಡುವ ಭಯ: ಹಣವಿದೆ ಎಂದರೆ ಸಾಕು ಬಂಧು ಮಿತ್ರರು ಹಣ ನೀಡುವಂತೆ ಕೇಳುವುದು ಅತಿ ಸಾಮಾನ್ಯ. ಕೊಟ್ಟ ಹಣವೂ ಮರಳಿ ಬರುವುದಿಲ್ಲ, ಕೊನೆಗೆ ಉತ್ತಮ ಸಂಬಂಧವೂ ಉಳಿಯುವುದಿಲ್ಲ. ಹೀಗಾಗಿ ಶ್ರೀಮಂತನಿಗೆ ಸದಾ ಅವರಿವರು ಎಲ್ಲಿ ಹಣವನ್ನ ನೀಡುವಂತೆ ಕೇಳುತ್ತಾರೆ, ಗಳಿಸಿದ ಹಣ ಹೇಗೆ ಕರಗಿಹೋಗುತ್ತದೆ ಎನ್ನುವ ಭಯವು ಕೂಡ ಸಾಮಾನ್ಯವಾಗಿರುತ್ತದೆ.
  3. FOMO - ಫಿಯರ್ ಆಫ್ ಮಿಸ್ಸಿಂಗ್ ಔಟ್: ಸಮಕಾಲೀನ ಶ್ರೀಮಂತರು ಉತ್ತಮ ಹೂಡಿಕೆ ಮಾಡಿ ಸಂಪತ್ತನ್ನ ವೃದ್ಧಿಸಿಕೊಂಡು ಮತ್ತಷ್ಟು ಶ್ರೀಮಂತರಾಗುತ್ತಾ ಮುಂದೆ ಹೋದರೇನು ಗತಿ? ನಾನು ಹಾಗೆ ಉಳಿದುಬಿಟ್ಟರೇನು ಗತಿ? ಎನ್ನುವ ಭಯಕ್ಕೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ಎನ್ನಲಾಗುತ್ತದೆ. ಇದೊಂದು ಮಾನಸಿಕ ವ್ಯಸನ ಎಂದು ಹೇಳಬಹುದು. ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳಲ್ಲೂ ರಿಯಲ್ ಎಸ್ಟೇಟ್ ಬೆಲೆ ಇಂದಿನ ಮಟ್ಟಕ್ಕೆ ಏರಿ ಕುಳಿತಿರುವುದಕ್ಕೆ ಕಾರಣ ಈ ಫಿಯರ್ ಆಫ್ ಮಿಸ್ಸಿಂಗ್ ಔಟ್. ಇದೆ ಮಾತನ್ನ ಷೇರು ಮಾರುಕಟ್ಟೆಯ ಹೂಡಿಕೆಗೂ ಅನ್ವಯಿಸಬಹುದು. ನಮ್ಮ ಸಮಾಜದಲ್ಲಿ ಇರುವ ಎಲ್ಲಾ ತರಹದ ಹೂಡಿಕೆಗಳಲ್ಲೂ ಇದನ್ನ ನಾವು ಕಾಣಬಹುದು. ಒಂದು ಎತ್ತರಕ್ಕೆ ಏರುವುದು ಬಹಳ ಸುಲಭವಲ್ಲದಿದ್ದರೂ ಏರಿದ ಮೇಲೆ ಆ ಸ್ಥಾನದಲ್ಲಿ ಬಹಳ ವೇಳೆ ಇರುವುದು ಬಹಳ ಕಷ್ಟ. ಹಣವಂತರ ಬೇನೆಗಳಲ್ಲಿ ಸರಿಯಾಗಿ ಹೂಡಿಕೆ ಮಾಡದಿದ್ದರೆ ಮುಂದಿನ ಹತ್ತು ವರ್ಷದಲ್ಲಿ ನನ್ನ ಇಂದಿನ ಸ್ಥಿತಿ ಕಾಯ್ದು ಕೊಳ್ಳಲು ಸಾಧ್ಯವೇ ಎನ್ನುವ ಭಯ ಕೂಡ ಒಂದು. ನಾನೆಲ್ಲಿ ಉಳಿದವರಿಗಿಂತ, ಸಮಾಜಕ್ಕಿಂತ, ಸಮಕಾಲೀನರಿಗಿಂತ, ಬಂಧು-ಮಿತ್ರರಿಗಿಂತ ಹಿಂದೆ ಉಳಿದುಬಿಡುತ್ತೇನೆ ಎನ್ನುವ ಭಯವೇ ಫೋಮ (FOMO )
  4. FOLM- ಫಿಯರ್ ಆಫ್ ಲೂಸಿಂಗ್ ಮನಿ: ಮೊದಲಿಗೆ ಸಂಪತ್ತನ್ನ ಸರಿಯಾಗಿ ಹೂಡಿಕೆ ಮಾಡದಿದ್ದರೆ ಗತಿಯೇನು ಎನ್ನುವ ಭಯವಿರುತ್ತದೆ. ಹೂಡಿಕೆಯ ನಂತರ ಶುರುವಾಗುವುದು ಫಿಯರ್ ಆಫ್ ಲೂಸಿಂಗ್ ಮನಿ. ಅಂದರೆ ಹೂಡಿಕೆ ಮಾಡಿದ ಹಣ ಮುಳುಗಿ ಹೋದರೆ ಏನು ಮಾಡುವುದು ಎನ್ನುವ ಭಯ. ಮೊದಲೇ ಹೇಳಿದಂತೆ ಇದು ಕೂಡ ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಹೂಡಿಕೆಗಳಲ್ಲಿ ಕೂಡ ಸಾಮಾನ್ಯವಾಗಿ ಸೃಷ್ಟಿಯಾಗುವ ಭಯ.

ಜೀವನದಲ್ಲಿ ಒಂದಷ್ಟು ಪ್ರತಿಶತ ಭಯ ಒಳ್ಳೆಯದು ಏಕೆಂದರೆ ಅದು ಹೂಡಿಕೆದಾರರನ್ನ, ಶ್ರೀಮಂತನನ್ನ ಎಚ್ಚರದ ಸ್ಥಿತಿಯಲ್ಲಿಡುತ್ತದೆ. ವಿವೇಚನೆಯಿಲ್ಲದೆ, ಭಯವಿಲ್ಲದೆ ಕಂಡಕಂಡಲೆಲ್ಲ ಹೂಡಿಕೆ ಮಾಡುವುದರಿಂದ ಅಪಾಯ ಹೆಚ್ಚಾಗುತ್ತದೆ. ಆದರೆ ಯಾವುದೂ ಅತಿಯಾಗಬಾರದು. ಅತಿಯಾದ ಭಯ ಜೀವನದಲ್ಲಿನ ಸುಖವನ್ನ ಕಸಿದು ಬಿಡುತ್ತದೆ. ಇವತ್ತಿನ ದಿನದಲ್ಲಿ ಈ ಎಲ್ಲಾ ಭಯಗಳು ಕೇವಲ ಶ್ರೀಮಂತರು ಅಥವಾ ಅತಿ ಶ್ರೀಮಂತರಿಗೆ ಮಾತ್ರ ಅನ್ವಯವಾಗುವುದಿಲ್ಲ. ಅದು ಮಧ್ಯಮ ಮತ್ತು ಮೇಲ್ಮಧ್ಯಮವರ್ಗಕ್ಕೂ ಲಾಗೂ ಹಾಗುತ್ತದೆ. ಮೇಲಿನ ಭಯಗಳ ಜೊತೆಗೆ ಅವರ ಪಾಲಿಗೆ ಇನ್ನೊಂದಷ್ಟು ಹೊಸ ಭಯಗಳು ಕೂಡ ಸೇರ್ಪಡೆಯಾಗಿದೆ.

ಅವುಗಳಲ್ಲಿ ಪ್ರಮುಖವಾಗಿ:

  • ಕೆಲಸವನ್ನ ಕಳೆದು ಕೊಳ್ಳುವ ಭಯ  ತನ್ಮೂಲಕ ಆದಾಯಕ್ಕೆ ಕುತ್ತು ಬರುವ ಭಯ.
  • ತಮ್ಮ ವ್ಯಾಪಾರ ಮುಚ್ಚಿ ಹೋಗುವ ಭಯ, ವೃದ್ಧಿ ಕಾಣದೆ ನಶಿಸುವ ಭಯ.
  • ಹೆಚ್ಚಿನ ವೇತನಕ್ಕೆ ಬೇಡಿಕೆಯಿಟ್ಟರೆ ಕೆಲಸ ಹೋಗುವುದು ಎನ್ನುವ ಭಯ
  • ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಯಿಂದ ಸಮಾಜದಲ್ಲಿ ಇರುವಿಕೆಯನ್ನೇ ಕಳೆದುಕೊಳ್ಳುವ ಭಯ.
  • ಇನ್ನೊಬ್ಬರ ಮೇಲೆ ಅವಲಂಬಿತರಾಗುವ ಭಯ.
  • ಕಷ್ಟ ಕಾಲಕ್ಕೆ ಎಂದು ತೆಗೆದಿರಿಸಿದ್ದ ಹಣವನ್ನ ಖರ್ಚು ಮಾಡುವಾಗ ಮುಂದೇನು? ಎನ್ನುವ ಭಯ
  • ಮುಂದೆ ನನ್ನ ಬಳಿ ಹಣ ಸಂಗ್ರಹವಾಗದೆ ಹೋದರೇನು ಗತಿ ಎನ್ನುವ ಭಯ.
  • ಸಾಲದಿಂದ ವಿಮುಕ್ತರಾಗದಿದ್ದರೇನು ಗತಿ ಎನ್ನುವ ಭಯ.
  • ಹಣದ ಬಗ್ಗೆ ಮಾತನಾಡಲೂ ಭಯ.
  • ಕೊನೆಗೊಂದು ದಿನ ಭಯಗಳು ಹೆಚ್ಚಾಗಿ ಸೆಲ್ಫ್ ಡೌಟ್ ಶುರುವಾಗುತ್ತದೆ. ನಾನು ಸಮರ್ಥನಿದ್ದೇನೆಯೇ ? ಯೋಗ್ಯನಿದ್ದೆಯೇ? ಈ ಪ್ರಶ್ನೆಗಳು ಉದ್ಭವಾಗುತ್ತದೆ.

ಕೊನೆಯ ಹಂತದ ಸೆಲ್ಫ್ ಡೌಟ್ ಭಯ ಅಥವಾ ಸಂದೇಹ ಸೃಷ್ಟಿಯಾಗುವವರೆಗೆ ಸಮಸ್ಯೆಯನ್ನ ಬೆಳೆಯಲು ಎಂದಿಗೂ ಬಿಡಬಾರದು. ಒಬ್ಬ ವ್ಯಕ್ತಿ ಈ ಹಂತವನ್ನ ತಲುಪುವುದಕ್ಕೆ ಮುಂಚೆ ಹಲವು ಹಲವು ಗುಣಲಕ್ಷಣಗಳು ಅವನಲ್ಲಿ ಕಾಣ ಸಿಗುತ್ತವೆ. ವ್ಯಕ್ತಿ ತನ್ನಲಾದ ಬದಲಾವಣೆಯನ್ನ ಆತನೇ ಗಮನಿಸಿಕೊಂಡು ಬದಲಾಯಿಸಿಕೊಳ್ಳಬಹುದು, ಅಥವಾ ಆತನ ಸಮೀಪವರ್ತಿಗಳು ಇದನ್ನ ಗುರುತಿಸಿ ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡಬಹುದು. ಅಂತಹ ಒಂದಷ್ಟು ಗುಣಲಕ್ಷಣಗಳನ್ನ ಪಟ್ಟಿ ಮಾಡುವ ಪ್ರಯತ್ನ ಕೆಳಗಿನ ಸಾಲುಗಳಲ್ಲಿವೆ.

  • ಹಣ ಖರ್ಚಾಗುವ ಕಾರ್ಯಗಳಿಂದ ದೊರಾಗುವುದು: ಖರ್ಚು ಮಾಡಿದರೆ ಹಣವು ಕಡಿಮೆಯಾಗುತ್ತದೆ ಎನ್ನುವ ಭಯ , ಹಣ ಖರ್ಚಾಗುವ ಕಾರ್ಯಗಳಿಂದ ವ್ಯಕ್ತಿಯನ್ನ ವಿಮುಖವನ್ನಾಗಿಸುತ್ತದೆ. ಪ್ರಾರಂಭಿಕ ಹಂತದಲ್ಲಿ ಇದು ಗೊತ್ತಾಗುವುದೇ ಇಲ್ಲ. ಕೊನೆಯ ಹಂತದ ವೇಳೆಗೆ ವ್ಯಕ್ತಿ ಅವಶ್ಯಕತೆಗಳಿಗೆ ಖರ್ಚು ಮಾಡಲು ಕೂಡ ಹಿಂಜರಿಯಲು ಶುರು ಮಾಡುತ್ತಾನೆ.
  • ಆದಾಯ ವ್ಯಯದ ಪಟ್ಟಿ ತಯಾರಿಸಲು ಸಿದ್ಧರಿಲ್ಲದೆ ಇರುವುದು: ಒಟ್ಟು ಆದಾಯವೆಷ್ಟು? ಖರ್ಚೆಷ್ಟು? ಮುಂದಿನ ದಿನಗಳ ಹಣದುಬ್ಬರ ಎಷ್ಟಿರಬಹುದು? ಎನ್ನುವ ಪಟ್ಟಿ ಸಿದ್ಧಪಡಿಸಿಕೊಂಡರೆ ಸಾಕು, ಸಾಕಷ್ಟು ಭಯಕ್ಕೆ ಮದ್ದು ಸಿಗುತ್ತದೆ. ಆದರೆ ಹಣ ಕಳೆದುಕೊಳ್ಳುವ ಭಯ ಇರುವ ವ್ಯಕ್ತಿ ಇಂತಹ ಪಟ್ಟಿ ತಯಾರಿಸಲು ಕೂಡ ಹಿಂಜರಿಯುತ್ತಾನೆ.
  • ಹಣ ಎಣಿಸುವ ಗುಂಗು: ಪದೇಪದೇ ಇರುವ ಹಣವನ್ನ ಎಣಿಸುವುದು, ಪ್ರತಿ ಖರ್ಚಿನ ನಂತರ ಇನ್ನೆಷ್ಟು ಉಳಿದಿದೆ, ಎಷ್ಟು ಹಣವಿತ್ತು ಎಂದು ಲೆಕ್ಕ ಹಾಕುವುದು, ಸಾಧ್ಯವಾದಷ್ಟೂ ಕಡಿಮೆ ಖರ್ಚು ಮಾಡುವಂತೆ ತನ್ನವರಿಗೆ ತಾಕೀತು ಮಾಡುವುದು ಈ ಭಯದ ಇನ್ನೊಂದು ಮುಖ. ಸಾಮಾನ್ಯ ದಿನಗಳಲ್ಲಿ ಇದು ಅಸಹಜ ಎನ್ನಿಸಿದಿದ್ದರೂ ಇದು ಅವ್ಯಕ್ತ ಭಯದ ಮೂರ್ತರೂಪ.
  • ದಿನದಲ್ಲಿ ಒಂದೆರೆಡು ಬಾರಿ ಬ್ಯಾಂಕ್ ಅಕೌಂಟ್ ಪರಿಶೀಲಿಸುವುದು, ಹಣ ಸುರಕ್ಷಿತವಾಗಿದ್ದೀಯೆ ಎಂದು ಪರಿಶೀಲಿಸುವುದು, ಮಾರುಕಟ್ಟೆಯ ಮೇಲಿನ ಹೂಡಿಕೆಯನ್ನ ಗಳಿಗೆ ಗಳಿಗೆಗೂ ನೋಡುವುದು, ನೆಟ್ ವರ್ತ್ ಅವಲೋಕಿಸುತ್ತಿರುವುದು ಕೂಡ ಕಾಣದ ಭಯದ ಕಾಣುವ ಮುಖಗಳು.
  • ಐಷಾರಾಮಿ ವಸ್ತುಗಳನ್ನ ಖರೀದಿಸುವ ಶಕ್ತಿಯಿದ್ದರೂ ಅದನ್ನ ಖರೀದಿಸದೆ ಇರುವುದು ಕೂಡ ಈ ಭಯದ ಇನ್ನೊಂದು ಮುಖ. ಕೆಲವೊಂದು ಸಮಯದಲ್ಲಿ ಇದಕ್ಕೆ ಅಪವಾದಗಳು ಇರುತ್ತವೆ. ಆದರೆ ಸಾಮಾನ್ಯ ಪರಿಸ್ಥಿತಯಲ್ಲಿ ಈ ಮಾತು ಸತ್ಯ. ಇದು ಕೇವಲ ಕಾರು ಅಥವಾ ಮನೆಗೆ ಸೀಮಿತವಾಗಬೇಕಿಲ್ಲ. ಪ್ರವಾಸ, ಉತ್ತಮ ಊಟ, ಉಡುಗೆ ಎಲ್ಲಕ್ಕೂ ಅನ್ವಯಿಸುತ್ತದೆ.
  • ಹೆಚ್ಚು ಜನರ ಜೊತೆ ಬೆರೆಯದಿರುವುದು, ಕಡಿಮೆ ಸೋಶಿಯಲ್ ಲೈಫ್ ಇಟ್ಟುಕೊಳ್ಳುವುದು, ಗುಂಪಿನಲ್ಲಿ ಬೆರೆತು ಇತರರಿಗೆ ಖರ್ಚು ಮಾಡದೆ ಇರುವುದು.
  • ಹಣವನ್ನ ಜೋಬಿನಲ್ಲಿ ಅಥವಾ ತನ್ನ ಬಳಿ ಇರಿಸಿಕೊಳ್ಳದೆ ಇರುವುದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನ ಹೊರಗೆ ಹೋಗುವಾಗ ಮನೆಯಲ್ಲಿ ಬಿಟ್ಟು ಹೋಗುವುದು. ಗ್ರೋಪ್ ಸ್ಪೆನ್ಡಿಂಗ್ ವೇಳೆಯಲ್ಲಿ ಅಯ್ಯೋ ನಾನು ಮರೆತು ಬಂದೆ ಎನ್ನುವ ಕಾರಣ ಹೇಳುವುದು. ತನ್ನ ಪಾಲಿನ ಖರ್ಚನ್ನ ಕೂಡ ಶೇರ್ ಮಾಡದೆ ಇರುವುದು ಕೂಡ ಹಣದ ಬಗೆಗಿನ ಮನುಷ್ಯನ ಭಯವನ್ನ ತೋರಿಸುತ್ತದೆ.
  • ಅತಿ ಬೆಲೆಬಾಳುವ ವಸ್ತುಗಳನ್ನ ಮಾರುವ ಅಂಗಡಿಯ ಒಳಗೆ ಹೋಗಲು ಕೂಡ ನಿರಾಕರಿಸುವುದು, ಅಂತಹ ಬೆಲೆ ಬಾಳುವ ವಸ್ತುಗಳನ್ನ ಮುಟ್ಟಲು ಕೂಡ ಹಿಂಜರಿಯುವುದು.
  • ಹಣ ಮನುಷ್ಯನನ್ನ ಕೆಡಸಿಬಿಡುತ್ತದೆ, ಹಣದಿಂದ ಸಮಾಜ ಹಾಳಾಗಿದೆ, ಇತ್ಯಾದಿ ಹಣವನ್ನ ಕುರಿತು ಇಲ್ಲ ಸಲ್ಲದ ಊಹಾಪೋಹ ಮಾತುಗಳನ್ನ ಆಡುವುದು.
  • ಇಡೀ ಜಗತ್ತು ಹಣಕಾಸು ವೈಫಲ್ಯಕ್ಕೆ  ಒಳಗಾಗಿದೆ, ಹೀಗಾಗಿ ಬಹಳಷ್ಟು ಎಚ್ಚರದಿಂದ ಇರಬೇಕು ಎನ್ನುವ ಮಾತುಗಳನ್ನ ಆಡುತ್ತಿರುವುದು.

ಮೇಲಿನ ಅಂಶಗಳನ್ನ ಗಮನಿಸಿ ನೋಡಿ ಸಾಮಾನ್ಯ ಸಮಯದಲ್ಲಿ, ಇದ್ಯಾವುದೂ ಅಸಹಜ ಎನ್ನಿಸುವುದಿಲ್ಲ. ಆದರೆ ಇದು ಗೀಳು ಪ್ರವೃತ್ತಿಯಾಗಿ ಸದಾ ಅದನ್ನೇ ಧ್ಯಾನಿಸಲು ಶುರು ಮಾಡಿದರೆ ಆಗ ಖಂಡಿತ ಇದರಲ್ಲಿ ಅಸಹಜತೆಯಿದೆ ಎನ್ನುವುದನ್ನ ನಾವು ಮನಗಾಣಬೇಕು. ಎಷ್ಟೇ ಹಣವಿದ್ದರೂ ಕೂಡ ಇಂತಹ ಮನಸ್ಥಿತಿಯಲ್ಲಿ ಅದನ್ನ ಆಸ್ವಾದಿಸಲು ಆಗುವುದಿಲ್ಲ.

ಜಗತ್ವಿಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರು ಈ ಜಗತ್ತಿನಲ್ಲಿ ಯಾವುದರ ಬಗ್ಗೆಯೂ ಭಯ ಪಡಬೇಕಾದ ಅವಶ್ಯಕೆತೆಯಿಲ್ಲ. ನಾವು ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ /ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಅಷ್ಟೇ, ಹೀಗೆ ವಿಷಯ ಜ್ಞಾನ ಹೆಚ್ಚಿಸಿಕೊಳ್ಳಲು ಇದು ಸರಿಯಾದ ಸಮಯ' ಎನ್ನುತ್ತಾರೆ. ಭಯ ಎನ್ನುವುದು ವಸ್ತು ಅಥವಾ ವಿಷಯದ ಬಗೆಗಿನ ಇರುವ ಮಾಹಿತಿ ಕೊರತೆ ಎನ್ನುವುದು ಬಹಳ ಸತ್ಯವಾದ ಮಾತು. ನಾವು ಯಾವಾಗ ಹೆಚ್ಚು ತಿಳಿದುಕೊಳ್ಳುತ್ತ ಹೋಗುತ್ತೇವೆ, ಕಲಿಯುತ್ತಾ ಹೋಗುತ್ತೇವೆ ಆಗ ಭಯ ಕಡಿಮೆಯಾಗುತ್ತಾ ಹೋಗುತ್ತದೆ.

ನೆನಪಿರಲಿ: ಭಯದಲ್ಲಿ ಹಲವು ವಿಧ, ಅವುಗಳಲ್ಲಿ ಹಣ/ಸಂಪತ್ತು ಕಳೆದುಕೊಳ್ಳುವ ಭಯವೂ ಪ್ರಮುಖವಾದದ್ದು. ಹಣ ಕೆಳೆದು ಹೋದರೆ? ಅಥವಾ ಗಳಿಸಿದ ಸಂಪತ್ತು ನಾಶವಾದರೆ ಹೇಗೆ ಎನ್ನುವ ಒಂದು ಸಣ್ಣ ಮಟ್ಟದ ಎಚ್ಚರಿಕೆ ಅತ್ಯಗತ್ಯ, ಅದು ತಪ್ಪಲ್ಲ. ಆದರೆ ಅದು ಭಯವಾಗಬಾರದು, ಗೀಳಾಗಬಾರದು. ಗಳಿಸಿದ ಸಂಪತ್ತನ್ನ ಅನುಭವಿಸಲು ಅಡ್ಡಿಯಾಗಬಾರದು. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com