
ಹೊಸತನ, ಅನ್ವೇಷಣೆ, ಮರು ಅನ್ವೇಷಣೆ…
ಯಶಸ್ಸು ಸಾಧಿಸಿದ ನಂತರ ಆಯಾ ವಿಭಾಗದಲ್ಲಿ ಆ ಹೆಗ್ಗಳಿಕೆಯ ಕಿರೀಟವನ್ನು ಉಳಿಸಿಕೊಳ್ಳುವುದಕ್ಕೆ ಪಾಲಿಸಬೇಕಾದ ಮಂತ್ರ. ಅರ್ಥಾತ್, ಯಶಸ್ಸೆಂಬುದು ಅಂತಿಮ ನಿಲ್ದಾಣವೇನಲ್ಲ. ಅದನ್ನು ಕಾಯ್ದುಕೊಳ್ಳುವಲ್ಲಿ ಶ್ರಮ ಮುಂದುವರಿಯುತ್ತದೆ. ಕೆಲವೊಮ್ಮೆ ಲಕ್ ಎಂಬುದು ಯಶಸ್ಸನ್ನು ಸುಲಭವಾಗಿಸಿದರೂ ಅದರ ನಿರಂತರತೆಗೆ ಮಾತ್ರ ಬುದ್ಧಿ-ಶ್ರಮಗಳನ್ನು ವ್ಯಯಿಸಲೇಬೇಕು.
“ಇದು ಜಗತ್ತಿನ ಮೊದಲ ಸಿ ಎನ್ ಜಿ ಮೋಟಾರ್ ಬೈಕ್” ಎಂದು ರಾಹುಲ್ ಬಜಾಜ್ ಜೂನ್ 18ರಂದು ಬೈಕ್ ವಿಭಾಗದ ಹೊಸಕತೆಗೆ ಇಡುತ್ತಿದ್ದ ಮುನ್ನುಡಿ ಈ ಮರು ಅನ್ವೇಷಣೆಯ ಮಹತ್ವವನ್ನು ಸಾರಿ ಹೇಳುವಂತಿತ್ತು. ಸಿ ಎನ್ ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಇಂಧನವಾಗಿಸಿಕೊಂಡು ಓಡಾಡುತ್ತಿರುವ ಕಾರು ಮತ್ತು ತ್ರಿಚಕ್ರ ವಾಹನಗಳೇನೂ ಹೊಸತಲ್ಲ. ಆದರೆ, ಈ ವಿಭಾಗದಲ್ಲಿ ಬಜಾಜ್ ಮೊದಲಿಗನಾಗಿ, ಬಿಡುಗಡೆ ಮಾಡಿರುವ ಫ್ರೀಡಂ 125 ಎಂಬ ಬೈಕ್ ಮಾರುಕಟ್ಟೆಯಲ್ಲಿ ಗೆಲ್ಲುವುದೋ, ಬಿಡುವುದೋ ಆದರೆ ತನ್ನ ಸ್ಥಾನದ ಮರುಗಳಿಕೆಗೆ ಉದ್ಯಮವೊಂದು ಮರುಅನ್ವೇಷಿಸಿಕೊಳ್ಳುತ್ತಿರುವ ಹೊಸಬಗೆಯ ವಿಧಾನದ ಬಗ್ಗೆ ಮಾತ್ರ ಮೆಚ್ಚುಗೆಗಳು ಸಲ್ಲಲೇಬೇಕು. ಬಜಾಜ್ ಸಮೂಹದ ಸಿ ಎನ್ ಜಿ ಬೈಕಿನ ವಿವರಗಳನ್ನು ಹಾಗೂ ಅದರ ಮಾರುಕಟ್ಟೆ ಸಾಧ್ಯತೆಗಳನ್ನು ವಿಶ್ಲೇಷಿಸುವುದಕ್ಕೆ ಮುನ್ನ, ಬಜಾಜ್ ಕಳೆದುಕೊಂಡಿದ್ದ ಕಿರೀಟ ಏನಾಗಿತ್ತೆಂಬುದನ್ನು ಮನನ ಮಾಡಿಕೊಳ್ಳೋಣ.
ಎಂಬತ್ತರ ದಶಕದಲ್ಲಿ ಅವತ್ತಿನ ಜಾಹೀರಾತುಗಳು ಬಜಾಜ್ ಸ್ಕೂಟರುಗಳನ್ನು ‘ಹಮಾರಾ ಬಜಾಜ್’ ಆಗಿಸಿಬಿಟ್ಟಿದ್ದವು. ಇವತ್ತಿಗೂ ಹಳಬರು ಆ ರಮ್ಯ ನೆನಪುಗಳಲ್ಲಿ ಸಂಭ್ರಮಿಸುವುದುಂಟು. ಅಲ್ಲದೇ, ಈಗಿನ ತಲೆಮಾರಿನವರು ಸಹ ‘ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್, ಹಮಾರಾ ಬಜಾಜ್’ ಎಂಬಂಥ ಹಳೆ ಉದ್ಘೋಷಗಳನ್ನು ಓದಿಕೊಂಡು ಅವತ್ತಿಗೆ ನಿಜಕ್ಕೂ ಬಜಾಜ್ ಸಮೂಹವು ಯಾರೂ ಮಾಡದ್ದನ್ನು ಭಾರತದಲ್ಲಿ ಮಾಡಿಬಿಟ್ಟಿತ್ತೇನೋ ಅಂದುಕೊಳ್ಳುವುದಿದೆ. ಆದರೆ, ವಾಸ್ತವ ಭಿನ್ನ. ಅವತ್ತಿನದ್ದು ಎಲ್ಲವಕ್ಕೂ ಸರ್ಕಾರದಿಂದ ಪರವಾನಗಿ ಪಡೆಯಬೇಕಿದ್ದ ಲೈಸೆನ್ಸ್-ಪರ್ಮಿಟ್ ರಾಜ್. ಹಾಗೆಂದೇ, ಲಾಗಾಯ್ತಿನಿಂದ ಕಾಂಗ್ರೆಸ್ಸಿನ ಅಗ್ರ ಕುಟುಂಬಕ್ಕೆ ಹತ್ತಿರವಿದ್ದ ರಾಹುಲ್ ಬಜಾಜ್ (ಈಗ ಉದ್ಯಮ ನಿಭಾಯಿಸುತ್ತಿರುವ ರಾಜೀವ್ ಬಜಾಜ್ ಅವರ ತಂದೆ) ಅವರಿಗೆ ‘ಲಕ್’ ಕೈಹಿಡಿಯಿತು. ಮಾರುಕಟ್ಟೆಯಲ್ಲಿ ಬೇರೆ ಯಾರಿಗೂ ಪ್ರವೇಶವೇ ಇರದಿದ್ದರೆ ಇದ್ದವರೊಬ್ಬರ ಬಗ್ಗೆ ‘ಹಮಾರಾ ಬಜಾಜ್’ ಎಂದು ಹಾಡಿಕೊಳ್ಳದೇ ವಿಧಿ ಎಲ್ಲಿ? ಹಾಗೆಂದೇ, ಅಡ್ಡ ವಾಲಿಸಿಕೊಂಡು ಕಿಕ್ ಮಾಡಿ ಸ್ಟಾರ್ಟ್ ಮಾಡಬೇಕಿದ್ದ ಸ್ಕೂಟರುಗಳನ್ನೇ ಭಾರತೀಯರು ಮಹಾಪ್ರಸಾದವೆಂಬಂತೆ ಆರೆಂಟು ತಿಂಗಳು ಕಾದು ಖರೀದಿಸಿದರು. ವರದಕ್ಷಿಣೆ ದಟ್ಟವಾಗಿದ್ದ ಆ ಕಾಲದಲ್ಲಿ ಹುಡುಗನಿಗೆ ಬಜಾಜ್ ಸ್ಕೂಟರ್ ಕೊಡಿಸೋದೇ ಮಹಾ ಪ್ರತಿಷ್ಠೆಯಾಗಿತ್ತು.
ಯಾವಾಗ 90ರ ದಶಕದಲ್ಲಿ ಆರ್ಥಿಕ ಉದಾರೀಕರಣ ಶುರುವಾಗಿ ನರಸಿಂಹರಾವ್ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆಗೂ ಬಾಗಿಲು ತೆರೆದಿರಿಸಿತೋ ಆಗ ಅದನ್ನು ವಿರೋಧಿಸಿದ್ದ ಉದ್ಯಮಿಗಳ ಪೈಕಿ ಪ್ರಮುಖರು ರಾಹುಲ್ ಬಜಾಜ್. ಬೇರೆ ಉತ್ಪನ್ನಗಳು ಬಂದರೆ ತಮ್ಮ ಸ್ಕೂಟರ್ ಗುಣಮಟ್ಟದಲ್ಲಿ ಸ್ಪರ್ಧಿಸಲಾರದು ಎಂಬುದವರಿಗೆ ಸ್ಪಷ್ಟವಿತ್ತು. ಹಾಗೆಂದೇ ಶುರುಮಾಡಿದ ಆಕ್ಷೇಪಕ್ಕೆ ಮನ್ನಣೆಯೇನೂ ಸಿಗಲಿಲ್ಲ. ಸ್ಕೂಟರ್ ವಿಭಾಗದಲ್ಲಿ ಹೊಂಡಾ ಕಂಪನಿ ಬಜಾಜ್ ಸಮೂಹದ ಮಗ್ಗುಲನ್ನು ಯಾವ ಪರಿ ಮುರಿಯಿತೆಂದರೆ, 2009ರ ವೇಳೆಗೆ ಬಜಾಜ್ ಸ್ಕೂಟರ್ ಉತ್ಪಾದನೆಯಿಂದಲೇ ಹಿಂದಕ್ಕೆ ಸರಿದು ಕೇವಲ ಮೊಟಾರ್ ಬೈಕ್ ಉತ್ಪಾದನೆಗೆ ಮಾತ್ರ ಸೀಮಿತಗೊಂಡಿತು. ಅಲ್ಲಿಯೂ ಅದು ಮಾರುಕಟ್ಟೆ ನಾಯಕನೇನೂ ಆಗಲಿಲ್ಲವಾದರೂ ವಹಿವಾಟನ್ನು ಲಾಭದ ಹಳಿಯಲ್ಲಿಡಲು ಅವು ಸಹಕರಿಸಿದವು.
ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರುಗಳಿಗೆ ಪ್ರಚಾರದುತ್ತೇಜನ ಸಿಗತೊಡಗಿದಾಗ ತನ್ನ ಹಳೇ ವೈಭವದ ನೆನಪಿನಲ್ಲಿ ಚೇತಕ್ ಸ್ಕೂಟರನ್ನೇ ಇವಿ ಅವತರಣಿಕೆಯಲ್ಲಿ ಬಜಾಜ್ ಹೊರತಂದಿತಾದರೂ ಅದು ಮಾರುಕಟ್ಟೆಯಲ್ಲಿ ಅಂಥ ಸದ್ದನ್ನೇನೂ ಮಾಡಲಿಲ್ಲ.
ಆದರೆ, ಈಗ ತಂದಿರುವ ಸಿ ಎನ್ ಜಿ ಮೊಟಾರ್ ಬೈಕ್ ಒಂದು ಹೊಸ ಕೆಟಗರಿಯನ್ನು ಸೃಷ್ಟಿಸಿ ಬಜಾಜ್ ಸಮೂಹದ ಕೈ ಹಿಡಿದರೂ ಆಶ್ಚರ್ಯವೇನಿಲ್ಲ. ಹೀಗೆಂದು ಲೆಕ್ಕಾಚಾರ ಹಾಕುವುದಕ್ಕೆ ಹಲವು ಪೂರಕ ಅಂಶಗಳಿವೆ. ಅವೇನೆಂದು ನೋಡೋಣ.
ಎರಡು ದಶಕಗಳ ಹಿಂದೆ ಬಜಾಜ್ ಸಿ ಎನ್ ಜಿ ಆಟೊರಿಕ್ಷಾಗಳನ್ನು ಮಾರುಕಟ್ಟೆಗೆ ತಂದಿತ್ತು. ಗ್ಯಾಸ್ ತುಂಬಿಸುವ ಸ್ಟೇಷನ್ ಗಳು ಅಗತ್ಯ ಸಂಖ್ಯೆಯಲ್ಲಿಲ್ಲದ ಕಾರಣ ದೆಹಲಿಯಲ್ಲಿ ಗ್ಯಾಸ್ ಸ್ಟೇಷನ್ ಮುಂದೆ ಆಟೊಗಳು ಸಾಲುಗಟ್ಟಿ ಪ್ರಾರಂಭದಲ್ಲಿ ಗಲಭೆಗಳೂ ಆಗಿದ್ದವು. ಆದರೇನಂತೆ, ಸಿ ಎನ್ ಜಿ ಸ್ಟೇಷನ್ ಹೆಚ್ಚುತ್ತಿದ್ದಂತೆ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿ ಎನ್ ಜಿ ಆಟೊರಿಕ್ಷಾ ಜನಪ್ರಿಯವಾಯಿತು. ಇವತ್ತಿಗೆ ಸಿ ಎನ್ ಜಿ ಆಟೊರಿಕ್ಷಾ ಮಾರಾಟದ ಶೇಕಡ 65 ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಬಜಾಜ್ ಉದ್ದಿಮೆಯೇ ಪಡೆದು ಆ ವಿಭಾಗದಲ್ಲಿ ಮಾರುಕಟ್ಟೆ ನಾಯಕನೆನಿಸಿದೆ. ಕಾರು ಉತ್ಪಾದನೆ ವಿಭಾಗದಲ್ಲಿ ಬಜಾಜ್ ಇಲ್ಲವಾದ್ದರಿಂದ ಅಲ್ಲಿನ ಸಿ ಎನ್ ಜಿ ಮಾರುಕಟ್ಟೆಯ ಶೇ.80ರಷ್ಟು ಪಾಲನ್ನು ಮಾರುತಿ ಸುಜುಕಿ ಪಡೆದುಕೊಂಡಿತು.
ಅಷ್ಟಾಗಿ, ಸಿ ಎನ್ ಜಿ ಮೊಟಾರ್ ಬೈಕ್ ಬಗ್ಗೆ ಯಾರೂ ಯೋಚಿಸಿರಲಿಲ್ಲ. ಏಕೆಂದರೆ, ರಿಕ್ಷಾ ಮತ್ತು ಕಾರುಗಳಲ್ಲಿ ಎದುರಾಗದ ಜಾಗದ ಸಮಸ್ಯೆ ಇಲ್ಲಿತ್ತು. ಇದೀಗ ಬಜಾಜ್ ಕಂಪನಿ ಸೀಟಿನ ಅಡಿಯಲ್ಲೇ ಸಿಲಿಂಡರ್ ಇರಿಸಿ, ಮುಂದಕ್ಕೆ ಎರಡು ಲೀಟರಿನ ಪೆಟ್ರೋಲ್ ಟ್ಯಾಂಕ್ ಸಹ ಇರಿಸಿದೆ. ಇದಕ್ಕೆ ಪೂರಕ ಸುರಕ್ಷತಾ ಪರೀಕ್ಷೆಗಳನ್ನೂ ನಡೆಸಲಾಗಿದೆ. ಪೂರ್ತಿ ತುಂಬಿಸಿರುವ ಸಿಲಿಂಡರ್ 200 ಕಿ.ಮೀವರೆಗೆ ಬರುತ್ತದೆ. ಅಷ್ಟರಲ್ಲಿ ಸಿ ಎನ್ ಜಿ ಸ್ಟೇಷನ್ ಸಿಗದಿದ್ದರೆ ಆತಂಕ ಬೇಡವೆಂದು ಪೆಟ್ರೋಲ್ ಟ್ಯಾಂಕ್ ಸಹ ಇರಿಸಿ ಇವೆರಡು ಇಂಧನ ಮಾದರಿಗಳಿಗೆ ಹೊರಳಿಕೊಳ್ಳುವ ಕಾರ್ಯವು ಒಂದು ಸ್ವಿಚ್ಚಿನಲ್ಲಿ ಆಗುವಂತೆ ಸರಳಗೊಳಿಸಲಾಗಿದೆ. ಸದ್ಯಕ್ಕೆ ಬಜಾಜ್ ಕಂಪನಿಯ ಫ್ರೀಡಂ 125, ಮಹಾರಾಷ್ಟ್ರ ಮತ್ತು ಗುಜರಾತಿನ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದ್ದು, ಮಾರುಕಟ್ಟೆ ಪ್ರತಿಕ್ರಿಯೆ ನೋಡಿಕೊಂಡು ಹಂತಹಂತವಾಗಿ ವಿಸ್ತರಿಸುವ ನಿರೀಕ್ಷೆ ಇದೆ.
ಸಿ ಎನ್ ಜಿ ವಿಭಾಗದ ಬೇರೆ ವಾಹನಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಪ್ರಗತಿಯೂ ಬಜಾಜಿನ ಮೊಟಾರ್ ಬೈಕ್ ಕನಸಿಗೆ ಪೂರಕವಾಗಿದೆ. 2020ರಲ್ಲಿ ಕೇವಲ ಶೇ.8ರಷ್ಟು ತ್ರಿಚಕ್ರವಾಹನಗಳು ಮಾತ್ರವೇ ಸಿ ಎನ್ ಜಿ ಬಳಸುತ್ತಿದ್ದವು. 2023ರಲ್ಲಿ ಈ ಪ್ರಮಾಣ ಶೇ. 65ಕ್ಕೆ ಏರಿದೆ! ಪ್ರಯಾಣಿಕರ ವಾಹನದಲ್ಲಿ ಸಹ ಸಿ ಎನ್ ಜಿ ಬಳಕೆ 2020ರಲ್ಲಿ ಶೇ. 8.80ರಷ್ಟಿದ್ದದ್ದು 2023ರಲ್ಲಿ ಶೇ. 11ಕ್ಕೆ ಏರಿದೆ.
ಒಂದು ಲೀಟರ್ ಪೆಟ್ರೋಲ್ ಬೆಲೆ 100 ರುಪಾಯಿ ಮತ್ತದರ ಆಚೆಗೆ ಇದೆ. ಒಂದು ಕೆಜಿ ಸಿ ಎನ್ ಜಿಗೆ 80 ರುಪಾಯಿಯ ಆಚೀಚೆಗಿನ ದರ. ಮೊಟಾರ್ ಬೈಕಿನಲ್ಲಿ ಒಂದು ಲೀಟರ್ ಪೆಟ್ರೋಲ್ 60 ಕಿಲೊಮೀಟರಿನ ಆಚೀಚೆ ಮೈಲೇಜ್ ಕೊಟ್ಟರೆ, ಒಂದು ಕಿಲೊ ಸಿ ಎನ್ ಜಿ 100 ಕಿ.ಮೀ ಕೊಡುತ್ತದೆ. ಇದು ಗ್ರಾಹಕರನ್ನು ಸೆಳೆಯಬಲ್ಲ ಮುಖ್ಯ ಅಂಶ.
ಸರ್ಕಾರದ ಮಟ್ಟದಲ್ಲಿ ಸಿ ಎನ್ ಜಿಗೆ ಹೀಗೆ ಪ್ರಾಮುಖ್ಯ ಸಿಗುತ್ತಿರುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಕಚ್ಚಾತೈಲಕ್ಕಾಗಿ ಭಾರತವು ಸಂಪೂರ್ಣವಾಗಿ ವಿದೇಶಿ ಮೂಲದ ಪೂರೈಕೆಯನ್ನು ಅವಲಂಬಿಸಿದೆ. ಆದರೆ ಈ ನೈಸರ್ಗಿಕ ಅನಿಲದ ವಿಚಾರಕ್ಕೆ ಬಂದರೆ, ದೇಶದ ಬೇಡಿಕೆಯ ಶೇಕಡ 40ರಷ್ಟನ್ನು ಆಂತರಿಕವಾಗಿಯೇ ಉತ್ಪಾದಿಸಲಾಗುತ್ತಿದೆ.
ಎರಡನೆಯದಾಗಿ, ಜಗತ್ತೇ ಇವತ್ತು ಮಾಲಿನ್ಯ ತಗ್ಗಿಸುವಿಕೆ ಹಾಗೂ ಇಂಗಾಲ ವಿಸರ್ಜನೆಯ ಹತೋಟಿ ಬಗ್ಗೆ ಮಾತನಾಡುತ್ತಿರುವಾಗ ಸಿ ಎನ್ ಜಿ ಬಳಕೆ ಇದಕ್ಕೆ ಪೂರಕವಾಗಿದೆ. ಇದು ಪೆಟ್ರೋಲಿಗಿಂತ ಶೇ. 26ರಷ್ಟು ಕಡಿಮೆ ಇಂಗಾಲದ ವಿಸರ್ಜನೆ ಮಾಡುತ್ತದೆ. ಮಿಥೇನೇತರ ಹೈಡ್ರೊಕಾರ್ಬನ್ ವಿಸರ್ಜನೆ ಶೇ. 85ರಷ್ಟು ಕಡಿಮೆ ಹಾಗೂ ನೈಟ್ರೊಜನ್ ಆಕ್ಸೈಡ್ ವಿಸರ್ಜನೆ ಪೆಟ್ರೋಲಿಗೆ ಹೋಲಿಸಿದರೆ ಶೇ. 43ರಷ್ಟು ಕಡಿಮೆ.
ಮೊಟಾರ್ ಸೈಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹೊಂಡಾ ಮತ್ತು ಹೀರೊ ಕಂಪನಿಗಳನ್ನು ಈಗ ಸಿ ಎನ್ ಜಿಯಲ್ಲಿ ಪ್ರತ್ಯೇಕ ವಿಭಾಗಸೃಷ್ಟಿಸುವ ಮೂಲಕ ಹಣಿಯುವುದಕ್ಕೆ ಬಜಾಜ್ ಕಂಪನಿಗೆ ಸಾಧ್ಯವಾದೀತಾ? ಎಲ್ಲ ಪ್ರಚಾರಗಳ ಹೊರತಾಗಿಯೂ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿ ತುಂಬ ವ್ಯಾಪಕವಾಗಿ ಹರಡುವುದಕ್ಕೆ ವಿಫಲವಾಗುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ಗ್ಯಾಸ್ ಮೊಟಾರ್ ಬೈಕ್ ಮನಗೆದ್ದೀತಾ? ಯಶಸ್ಸು-ವೈಫಲ್ಯಗಳ ಪ್ರಶ್ನೆ ಹಾಗಿರಲಿ. ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನಂತೂ ಬಜಾಜ್ ಕಂಪನಿಯ ಈ ಸಾಹಸವು ಹುಟ್ಟುಹಾಕಿದೆ.
-ಚೈತನ್ಯ ಹೆಗಡೆ
cchegde@gmail.com
Advertisement