ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ: ಭಾರತ ಇತಿಹಾಸದ ಒಂದು ಮೆಲುಕು

'ಮ್ಯಾಟ್ರಿಯಾರ್ಕ್' ಎಂದರೆ ಒಂದು ಕುಟುಂಬ, ಗುಂಪು, ಅಥವಾ ಸಂಸ್ಥೆಯ ಯಜಮಾನಿ ಎಂದಾಗಿದ್ದು, ಆಕೆಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಹೊಂದಿರುತ್ತಾರೆ.
ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ: ಭಾರತ ಇತಿಹಾಸದ ಒಂದು ಮೆಲುಕು
Updated on

ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಜೂನ್ 24, ಸೋಮವಾರದಂದು ಲೋಕಸಭೆಯ ಮೊದಲ ಅಧಿವೇಶನ ಆರಂಭವಾಯಿತು. ಆದರೆ, ಸೋಮವಾರ ಲೋಕಸಭಾ ಕಲಾಪಗಳು ಆರಂಭವಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ವಿರುದ್ಧ ಕಠಿಣ ನಿಲುವು ಪ್ರದರ್ಶಿಸಿದರು. ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಜೂನ್ 25ರಂದು ತುರ್ತು ಪರಿಸ್ಥಿತಿಯ ಘೋಷಣೆಗೆ 50 ವರ್ಷಗಳಾಗಲಿವೆ ಎಂದಿದ್ದು, ಈ ಅವಧಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದ 'ಕರಾಳ ಅಧ್ಯಾಯ' ಎಂದು ಅಭಿಪ್ರಾಯ ಪಟ್ಟರು.

ಮೋದಿಯವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು "ನೀವು 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ಕುರಿತು ಮಾತನಾಡುತ್ತೀರಿ. ಆದರೆ, ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿಯನ್ನು ನಿರ್ಲಕ್ಷಿಸುತ್ತೀರಿ. ಭಾರತದ ಜನತೆ ಈ ಬಾರಿಯ ಚುನಾವಣೆಯಲ್ಲಿ ಮೋದಿಯವರ ವಿರುದ್ಧ ಮತ ಚಲಾಯಿಸಿದ್ದಾರೆ" ಎಂದಿದ್ದಾರೆ. ಇಂಡಿ ಒಕ್ಕೂಟ ಸಂಸತ್ತಿನ ಒಳಗೆ ಮತ್ತು ಹೊರಗೆ ನಿರಂತರವಾಗಿ ಜನರ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ಮುಂದುವರಿಸಲಿದೆ ಎಂದೂ ಖರ್ಗೆ ಹೇಳಿದ್ದಾರೆ. ಭಾರತದ ಇತಿಹಾಸವನ್ನೇ ಬದಲಿಸಿದ ಆ ಎರಡು ವರ್ಷಗಳ ನೆನಪುಗಳ ಒಂದು ನೋಟ ಇಲ್ಲಿದೆ...

ತುರ್ತು ಪರಿಸ್ಥಿತಿಗೆ 50 ವರ್ಷ: ಭಾರತದ ಇತಿಹಾಸವನ್ನೇ ಬದಲಿಸಿದ ಎರಡು ವರ್ಷಗಳು

ಆರ್ಥಿಕ ಪ್ರಗತಿಯ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ, ಇಂದಿರಾ ಗಾಂಧಿಯವರಿಗೆ ಹಲವು ರಾಜಕಾರಣಿಗಳನ್ನು ಬಂಧಿಸಲು ಮತ್ತು ಮಾಧ್ಯಮಗಳನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ, ಅವರ ಮಗ ಸಂಜಯ್ ಗಾಂಧಿ ದೆಹಲಿಯಲ್ಲಿ ಬಲವಂತದ ಸಂತಾನ ಹರಣ ಕಾರ್ಯಕ್ರಮ ಮತ್ತು ಕೊಳಗೇರಿ ನಿರ್ಮೂಲನ ಯೋಜನೆಗಳನ್ನು ಕೈಗೊಂಡರು.

"ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಹಾಗೆಂದು ನಾಗರಿಕರು ಆತಂಕ ಪಡುವ ಅವಶ್ಯಕತೆಯಿಲ್ಲ. ನಾನು ಭಾರತದ ಸಾಮಾನ್ಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಹೊಸ ಬದಲಾವಣೆಗಳನ್ನು ಪರಿಚಯಿಸಿದ ಬಳಿಕ ತಲೆದೋರಿರುವ ಪಿತೂರಿಗಳನ್ನು ನೀವು ಕೇಳಿರುತ್ತೀರಿ" ಎಂಬ ಪ್ರಧಾನಿ ಇಂದಿರಾ ಗಾಂಧಿಯವರ ಮಾತುಗಳು ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರಗೊಂಡವು.

ಈ ಮೂಲಕ ಅವರು 1975ರಲ್ಲಿ ಐತಿಹಾಸಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಈಗ ಹಿಂತಿರುಗಿ ನೋಡಿದಾಗ, ತುರ್ತು ಪರಿಸ್ಥಿತಿಯನ್ನು ಸ್ವಾತಂತ್ರ್ಯಾನಂತರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅವಧಿ ಎನ್ನಲಾಗುತ್ತದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಾಜಕೀಯ ಬೆಳವಣಿಗೆಯಲ್ಲೂ ತುರ್ತು ಪರಿಸ್ಥಿತಿ ಪ್ರಮುಖ ವಿದ್ಯಮಾನವಾಗಿತ್ತು.

ಇತಿಹಾಸಕಾರ ರಾಮಚಂದ್ರ ಗುಹಾ ಅವರು ಇಂದಿರಾ ಗಾಂಧಿಯವರನ್ನು 'ದ ಮ್ಯಾಟ್ರಿಯಾರ್ಕ್' (ಮಾತೃಪ್ರಧಾನ, ಯಜಮಾನಿ) ಎಂದು ಕರೆದಿದ್ದಾರೆ. ಇಂದಿರಾ ಗಾಂಧಿಯವರು ಪ್ರಜಾಪ್ರಭುತ್ವದೊಡನೆ ಸಂಕೀರ್ಣ ಸಂಬಂಧ ಹೊಂದಿದ್ದರು. ಇದು ನಮೂದಾಗಿರುವ ಅವರ ಪತ್ರಿಕಾ ಮಾತುಕತೆಗಳಲ್ಲೂ ಕಂಡುಬಂದಿವೆ.

'ಮ್ಯಾಟ್ರಿಯಾರ್ಕ್' ಎಂದರೆ ಒಂದು ಕುಟುಂಬ, ಗುಂಪು, ಅಥವಾ ಸಂಸ್ಥೆಯ ಯಜಮಾನಿ ಎಂದಾಗಿದ್ದು, ಆಕೆಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಹೊಂದಿರುತ್ತಾರೆ.

'ಇಂಡಿಯಾ ಆಫ್ಟರ್ ಗಾಂಧಿ' ಎಂಬ ತನ್ನ ಕೃತಿಯಲ್ಲಿ, ರಾಮಚಂದ್ರ ಗುಹಾ ಅವರು 1963ರಲ್ಲಿ ಇಂದಿರಾ ಗಾಂಧಿ ಮತ್ತು ಅವರ ಗೆಳೆಯರ ಜೊತೆಗಿನ ಮಾತುಕತೆಯನ್ನು ದಾಖಲಿಸಿದ್ದಾರೆ. ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಪ್ರಜಾಪ್ರಭುತ್ವ ಸಾಧಾರಣ ವ್ಯಕ್ತಿಗಳಿಗೆ ಉತ್ತೇಜನ ನೀಡಿ, ದೊಡ್ಡದಾದ ಧ್ವನಿಗೆ ಪ್ರಾಧಾನ್ಯತೆ ನೀಡುತ್ತದೆ. ಆದರೆ ಅವರ ಜ್ಞಾನ ಮತ್ತು ಅರ್ಥೈಸಿಕೊಳ್ಳುವಿಕೆಗೆ ಪ್ರಜಾಪ್ರಭುತ್ವ ಬೆಲೆ ನೀಡುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.

ಕಾಂಗ್ರೆಸ್ ಅಧ್ಯಕ್ಷೆಯಾಗಿ, ಬಳಿಕ ಭಾರತದ ಪ್ರಧಾನಿಯಾದ ಇಂದಿರಾ ಗಾಂಧಿಯವರು ಸರ್ಕಾರ ಮತ್ತು ತನ್ನ ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಬಹಳಷ್ಟು ಶ್ರಮ ವಹಿಸಿದ್ದರು.

ಅವರ ನಿರಂಕುಶ ಆಡಳಿತ ವಿಧಾನಕ್ಕೆ ಮಧ್ಯಮವರ್ಗ ಮತ್ತು ಬಡ ಜನರ ನಡುವೆ ಇದ್ದ ಇಂದಿರಾಗಾಂಧಿಯವ ಪ್ರಭಾವವೂ ಕಾರಣವಾಗಿತ್ತು. ಜನಸಾಮಾನ್ಯರು ತಮ್ಮ ಆರ್ಥಿಕ ಸಮಸ್ಯೆಗಳನ್ನು ಇಂದಿರಾ ಗಾಂಧಿಯವರು ಮಾತ್ರವೇ ಪರಿಹರಿಸಲು ಸಾಧ್ಯ ಎಂದು ಭಾವಿಸಿದ್ದರು.

ಇಂದಿರಾ ಗಾಂಧಿಯವರಿಗೆ ಎಲ್ಲ ಪ್ರಜಾಪ್ರಭುತ್ವವಾದಿ ಧ್ವನಿಗಳನ್ನು ಮೌನವಾಗಿಸಲು ಮತ್ತು ತನ್ನ ನಿರಂಕುಶ ನಿಯಂತ್ರಣವನ್ನು ಇನ್ನಷ್ಟು ಭದ್ರಪಡಿಸಲು ತುರ್ತು ಪರಿಸ್ಥಿತಿ ಉತ್ತಮ ಅವಕಾಶವಾಗಿತ್ತು.

ರಾಜ್ ನಾರಾಯಣ್ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ಇಂದಿರಾ ಗಾಂಧಿಯವರ ಮೇಲೆ ಚುನಾವಣಾ ನಿರ್ಬಂಧ ಹೇರಿದ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಇದು ಇಂದಿರಾ ಗಾಂಧಿಯವರ ರಾಜಕೀಯ ಎದುರಾಳಿಗಳು ಮತ್ತು ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆರವಾಯಿತು.

1971ರ ಲೋಕಸಭಾ ಚುನಾವಣೆ

ಭಾರತದ ಐದನೇ ಲೋಕಸಭೆಗೆ 1971ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಇಂದಿರಾ ಗಾಂಧಿಯವರು ತನಗಾಗಿ ಮತ್ತು ತನ್ನ ಕಾಂಗ್ರೆಸ್ ಪಕ್ಷಕ್ಕಾಗಿ ಅವಿರತ ಚುನಾವಣಾ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಪಕ್ಷ 518 ಸ್ಥಾನಗಳ ಪೈಕಿ 352 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ರಾಜ್ ನಾರಾಯಣ್ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಇಂದಿರಾ ಗಾಂಧಿಯವರ ವಿರುದ್ಧ ರಾಮ್ ಮನೋಹರ ಲೋಹಿಯಾ ಅವರ ಎಸ್ಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆರಂಭದಲ್ಲಿ ಅವರು ಗೆಲ್ಲುವ ವಿಶ್ವಾಸ ಹೊಂದಿದ್ದರೂ, ಅಂತಿಮವಾಗಿ ಭಾರೀ ಅಂತರದಿಂದ ಸೋಲನುಭವಿಸಿದರು.

ಕಾನೂನು ಸವಾಲುಗಳು

ಆದರೆ ರಾಜ್ ನಾರಾಯಣ್ ಅಷ್ಟು ಸುಲಭವಾಗಿ ಸೋಲೊಪ್ಪಲು ಸಿದ್ಧರಿರಲಿಲ್ಲ. ಅವರು ಎಪ್ರಿಲ್ 24, 1971ರಂದು ಅಲಹಾಬಾದ್ ನ್ಯಾಯಾಲಯದಲ್ಲಿ ಇಂದಿರಾ ಗಾಂಧಿ ವಿರುದ್ಧ ಭ್ರಷ್ಟಾಚಾರದ ವಿಧಾನ ಅನುಸರಿಸಿದ ಆರೋಪ ದಾಖಲಿಸಿದರು. ಇಂದಿರಾ ಗಾಂಧಿ ಸರ್ಕಾರಿ ಅಧಿಕಾರಿಗಳು, ವಾಹನಗಳು ಮತ್ತು ಸಂಪನ್ಮೂಲಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ, ಮತದಾರರ ಮೇಲೆ ಪ್ರಭಾವ ಬೀರಲು ಮದ್ಯ ಮತ್ತು ಕಂಬಳಿಗಳನ್ನು ಹಂಚಿದ್ದಾರೆ, ಚುನಾವಣಾ ಪ್ರಚಾರದ ಖರ್ಚಿನ ಮಿತಿಯಾದ 35,000 ರೂಪಾಯಿಗಳನ್ನು ಮೀರಿ ವೆಚ್ಚ ಮಾಡಿದ್ದಾರೆ ಎಂದು ರಾಜ್ ನಾರಾಯಣ್ ಆರೋಪಿಸಿದ್ದರು.

ಕಾನೂನು ಹೋರಾಟ ಮತ್ತು ತುರ್ತು ಪರಿಸ್ಥಿತಿಯ ಘೋಷಣೆ

ಇಂದಿರಾ ಗಾಂಧಿಯವರು ಚುನಾವಣೆಯಲ್ಲಿ ಗೆಲ್ಲಲು ಭ್ರಷ್ಟಾಚಾರದ ಮಾರ್ಗ ಅನುಸರಿಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಅವರ ಗೆಲುವನ್ನು ರದ್ದುಪಡಿಸಿತು. ಸರ್ವೋಚ್ಚ ನ್ಯಾಯಾಲಯ ರಜೆ ಹೊಂದಿದ್ದ ಸಂದರ್ಭದಲ್ಲಿ, ಇಂದಿರಾ ಗಾಂಧಿಯವರ ವಿರುದ್ಧದ ತೀರ್ಪಿಗೆ ನಿಯಮಬದ್ಧ ನಿಲುಗಡೆ ಲಭಿಸಿತ್ತು. ಆ ಬಳಿಕ, ಆಂತರಿಕ ಕ್ಷೋಭೆಯ ಕಾರಣ ನೀಡಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಆಗ ಇಂದಿರಾ ಗಾಂಧಿ ಸಂವಿಧಾನದ 39ನೇ ತಿದ್ದುಪಡಿ ನಡೆಸಿ, 392ಎ ವಿಧಿಯನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಿದರು.

392ಎ ವಿಧಿ ಭಾರತದ ಪ್ರಧಾನಿ ಮತ್ತು ಲೋಕಸಭಾ ಅಧ್ಯಕ್ಷರ ಚುನಾವಣಾ ಸಿಂಧುತ್ವವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ನ್ಯಾಯಾಲಯದ ಬದಲಿಗೆ, ಅವರ ಚುನಾವಣಾ ಸಿಂಧುತ್ವವನ್ನು ಸಂಸತ್ತು ರಚಿಸುವ ಸಮಿತಿಗೆ ಮಾತ್ರವೇ ಪರಿಶೀಲಿಸಲು ಅವಕಾಶವಿತ್ತು. ಇದರಿಂದಾಗಿ ಇಂದಿರಾ ಗಾಂಧಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಿರಲಿಲ್ಲ.

1975ರ ತುರ್ತು ಪರಿಸ್ಥಿತಿಯ ಕಾರಣಗಳು ಮತ್ತು ಪರಿಣಾಮಗಳು

ಪಾಕಿಸ್ತಾನದ ಜೊತೆಗೆ ಆಗಷ್ಟೇ ನೆರವೇರಿದ್ದ ಯುದ್ಧ, 1973ರ ತೈಲ ಬಿಕ್ಕಟ್ಟು ಮತ್ತು ದೇಶದಲ್ಲಿ ತಲೆದೋರಿದ್ದ ಕ್ಷಾಮದ ಪರಿಸ್ಥಿತಿಗಳು ಜೊತೆಯಾಗಿ, ತುರ್ತು ಪರಿಸ್ಥಿತಿ ಘೋಷಿಸಲು ಇಂದಿರಾ ಗಾಂಧಿಯವರಿಗೆ ಪೂರಕ ವಾತಾವರಣ ಸೃಷ್ಟಿಸಿದ್ದವು. ಕ್ಷಿಪ್ರ ಆರ್ಥಿಕ ಸುಧಾರಣೆಯ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಇಂದಿರಾ ಗಾಂಧಿಯವರಿಗೆ ಹಲವು ರಾಜಕಾರಣಿಗಳನ್ನು ಬಂಧಿಸಿ, ಮಾಧ್ಯಮಗಳು ಮತ್ತು ಪ್ರಕಟಣೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ನೆರವಾಯಿತು.

ಇದೇ ಸಮಯದಲ್ಲಿ, ಇಂದಿರಾ ಗಾಂಧಿಯ ಮಗ ಸಂಜಯ್ ಗಾಂಧಿ ದೆಹಲಿಯಲ್ಲಿ ಬಲವಂತದ ಸಂತಾನ ಹರಣ ಕಾರ್ಯಕ್ರಮ ಮತ್ತು ಕೊಳಗೇರಿ ನಿರ್ಮೂಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ತುರ್ತು ಪರಿಸ್ಥಿತಿ ವಿರೋಧಿ ಪ್ರತಿಭಟನೆಗಳು ಮತ್ತು ಟೀಕೆಗಳು

ತುರ್ತು ಪರಿಸ್ಥಿತಿಯ ವೇಳೆ, ಸರ್ಕಾರ ಕೈಗೊಂಡ ನಿರಂಕುಶ ಕ್ರಮಗಳನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆದವು.

ಜಯಪ್ರಕಾಶ್ ನಾರಾಯಣ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಪ್ರತಿಭಟನೆಗಳನ್ನು ಆಯೋಜಿಸಿದ್ದರು. ದ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ದ ಸ್ಟೇಟ್ಸ್‌ಮ್ಯಾನ್ ರೀತಿಯ ಪತ್ರಿಕೆಗಳು ದೇಶದಲ್ಲಿ ತಲೆದೋರಿದ್ದ ಪ್ರಜಾಪ್ರಭುತ್ವ ವಿರೋಧಿ ಪರಿಸ್ಥಿತಿಯನ್ನು ವಿರೋಧಿಸಿ, ಧ್ವನಿ ಎತ್ತಿದ್ದವು.

ಎರಡು ವರ್ಷಗಳ ಕೊನೆಯ ವೇಳೆಗೆ, ಇಂದಿರಾ ಗಾಂಧಿಯವರು ದೇಶದ ಒಳಗೆ ಮತ್ತು ಜಾಗತಿಕ ನಾಯಕರಿಂದ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ, 1977ರ ಮಾರ್ಚ್ ತಿಂಗಳ ವೇಳೆಗೆ ತುರ್ತು ಪರಿಸ್ಥಿತಿ ಕೊನೆಗೊಂಡು, ಭಾರತ ಅದರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿತು.

1975ರ ತುರ್ತು ಪರಿಸ್ಥಿತಿಯ ಪ್ರಮುಖ ಘಟನಾವಳಿಗಳು

ಜನವರಿ 1966: ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿ ಚುನಾಯಿತರಾದರು.

ನವೆಂಬರ್ 1969: ಇಂದಿರಾ ಗಾಂಧಿಯವರು ಪಕ್ಷದ ನಿಯಮ ಮುರಿದಿದ್ದಾರೆ ಎಂಬ ಅರೋಪದಡಿ ಕಾಂಗ್ರೆಸ್ ಪಕ್ಷವೇ ವಿಭಜನೆಗೊಂಡಿತು.

1971: ಇಂದಿರಾ ಗಾಂಧಿಯವರ ರಾಜಕೀಯ ಎದುರಾಳಿ ರಾಜ್ ನಾರಾಯಣ್ ಅವರು ಇಂದಿರಾ ಗಾಂಧಿಯವರ ವಿರುದ್ಧ ಚುನಾವಣಾ ಅಕ್ರಮ ನಡೆಸಿದ್ದಾರೆಂದು ದೂರು ದಾಖಲಿಸಿದರು.

1973-75: ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ವಿರುದ್ಧ ರಾಜಕೀಯ ಉದ್ವಿಗ್ನತೆ ಮತ್ತು ಪ್ರತಿಭಟನೆಗಳು ಹೆಚ್ಚಾಗತೊಡಗಿದವು.

ಜೂನ್ 12, 1975: ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರು ಚುನಾವಣಾ ಪ್ರಚಾರದಲ್ಲಿ ಅಕ್ರಮ ನಡೆಸಿದ ಆರೋಪದಡಿ ದೋಷಿ ಎಂದು ಘೋಷಿಸಿತು.

ಜೂನ್ 24, 1975: ಇಂದಿರಾ ಗಾಂಧಿಯವರು ತನ್ನ ಸಂಸದ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ ಮತ್ತು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಆದರೆ, ಇಂದಿರಾ ಗಾಂಧಿಯವರಿಗೆ ಪ್ರಧಾನ ಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿತು.

ಜೂನ್ 25, 1975: ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ, ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸಂವಿಧಾನದ 352ನೇ ವಿಧಿಯ ಅನುಸಾರವಾಗಿ ತುರ್ತು ಪರಿಸ್ಥಿತಿ ಘೋಷಿಸಿದರು.

ಜೂನ್ 25, 1975: ಇಂದಿರಾ ಗಾಂಧಿ ಆಲ್ ಇಂಡಿಯಾ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸೆಪ್ಟೆಂಬರ್ 1976: ಸಂಜಯ್ ಗಾಂಧಿ ದೆಹಲಿಯಲ್ಲಿ ಬೃಹತ್ ಪ್ರಮಾಣದ, ಬಲವಂತದ ಸಂತಾನ ಹರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನವರಿ 18, 1977: ಇಂದಿರಾ ಗಾಂಧಿಯವರು ಭಾರತದಲ್ಲಿ ಮುಂದಿನ ಚುನಾವಣೆಯನ್ನು ಘೋಷಿಸಿ, ಎಲ್ಲ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿದರು.

ಮಾರ್ಚ್ 23, 1977: ತುರ್ತು ಪರಿಸ್ಥಿತಿ ಅಧಿಕೃತವಾಗಿ ಕೊನೆಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com