
ಯಾವ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಲಿ ಎನ್ನುವುದು ಸಾಮಾನ್ಯ ಪ್ರಶ್ನೆ. ಯಾವ ಸಂಸ್ಥೆಯ ಮ್ಯೂಚುಯಲ್ ಫಂಡ್ನಲ್ಲಾದರೂ ಹೂಡಿಕೆ ಮಾಡಿ, ಹೂಡಿಕೆಗೆ ಮುಂಚೆ ಶಾರ್ಪ್ ರೇಶ್ಯು (Sharpe Ratio) ಧನಾತ್ಮಕವಾಗಿರಬೇಕು ಮತ್ತು ಎಷ್ಟು ಹೆಚ್ಚಿರುತ್ತದೆ ಅಷ್ಟು ಒಳ್ಳೆಯದು. ಅಂತಹ ಸಂಸ್ಥೆಗಳ ಮ್ಯೂಚುಯಲ್ ಫಂಡ್ ಮೇಲೆ ಹೂಡಿಕೆಯನ್ನ ಮಾಡಬಹುದು.
ಯಾವುದೇ ಹೂಡಿಕೆಯಲ್ಲಿ ನಾವು ಬಯಸುವುದು ಹೆಚ್ಚಿನ ಲಾಭ ಅಲ್ಲವೇ? ಅದು ಮನುಷ್ಯನ ಸಹಜ ಗುಣ, ಸಹಜವಾಗೇ ಯಾವ ಸ್ಟಾಕ್ಸ್ ಅಥವಾ ಪೋರ್ಟ್ಫೋಲಿಯೋ ಹೆಚ್ಚಿನ ಲಾಭ ಕೊಡುತ್ತದೆ ಅಲ್ಲಿ ನಾವು ಹೂಡಿಕೆ ಮಾಡುತ್ತೇವೆ. ಆದರೆ ನಾವೆಲ್ಲಾ ಅಷ್ಟು ಲಾಭ ಮಾಡಲು ಎಷ್ಟು ಅಪಾಯವನ್ನ ತೆಗೆದುಕೊಂಡೆವು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಈ ರೀತಿ ಅಪಾಯವನ್ನ ಸರಿದೂಗಿಸಿ ಸಿಗುವ ಲಾಭದ ಸಂಖ್ಯೆಯನ್ನ ಅಂದರೆ ರಿಸ್ಕ್ ಅಡ್ಜಸ್ಟಡ್ ರಿಟರ್ನ್ಸ್ನನ್ನ (Risk Adjusted Returns) ನ್ನು ಶಾರ್ಪ್ ರೇಶ್ಯು (Sharp Ratio) ಎನ್ನಲಾಗುತ್ತದೆ. ಈ ಅನುಪಾತ ಹೆಚ್ಚಿದಷ್ಟೂ ಒಳ್ಳೆಯದು. ಉದಾಹರಣೆ ನೋಡೋಣ.
ABC ಸಂಸ್ಥೆಯ ಲಾಭಂಶ ಅಥವಾ ಸಂಭಾವ್ಯ ಲಾಭಂಶ 14 ಎಂದುಕೊಳ್ಳಿ, ಅದೇ XYZ ಸಂಸ್ಥೆಯ ಲಾಭಂಶ ಅಥವಾ ಸಂಭಾವ್ಯ ಲಾಭಂಶ 12 ಎಂದುಕೊಳ್ಳಿ. ಸಾಮಾನ್ಯವಾಗಿ ನಾವೆಲ್ಲಾ ABC ಸಂಸ್ಥೆಯನ್ನ ಆಯ್ಕೆ ಮಾಡಿಕೊಳ್ಳುತ್ತೇವೆ.
Rp is the expected return- ಲಾಭಾಂಶ ಅಥವಾ ಸಂಭಾವ್ಯ ಲಾಭಾಂಶ.
Rf is the risk-free rate- ಇಲ್ಲಿ ಹೂಡಿಕೆ ಮಾಡದೆ, ಬ್ಯಾಂಕಿನಲ್ಲಿ ಸೇಫ್ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರೆ ಯಾವ ರೇಟ್ ಸಿಗುತ್ತಿತ್ತು ಆ ರೇಟ್.
Standard deviation- ಮಾರುಕಟ್ಟೆಯ ವೋಲ್ಟಾಲಿಟಿ, (market volatility) ಏರಿಳಿತ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಸೃಷಿಯಾದ ಸಂಖ್ಯೆ. ಈ ಸಂಖ್ಯೆ ಕಡಿಮೆ ಇದ್ದಷ್ಟೂ ಒಳ್ಳೆಯದು.
ನಾವು ಶಾರ್ಪ್ ರೇಶ್ಯು ಬಳಸಿ ನೋಡಿದಾಗ, ಅಪಾಯವನ್ನ ಕೂಡ ಲೆಕ್ಕ ಹಾಕಿರುವ ಕಾರಣ ಉತ್ತರ ಏನಾಗಬಹುದು ನೋಡೋಣ.
ABC ಸಂಸ್ಥೆಯ Rp =14 ಪ್ರತಿಶತ. Rf =3 ಮತ್ತು Standard deviation 8
XYZ ಸಂಸ್ಥೆಯ Rp =12 ಪ್ರತಿಶತ. Rf =3 ಮತ್ತು Standard deviation 4
ಈಗ ಶಾರ್ಪ್ ರೇಶ್ಯು ಫಾರ್ಮುಲಾ ಬಳಸಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ;
ABC ಶಾರ್ಪ್ ರೇಶ್ಯು= (14-3= 11)/8= 1.375.
XYZ ಶಾರ್ಪ್ ರೇಶ್ಯು= (12-3= 9)/4 = 2.25.
ಗಮನಿಸಿ ಮೊದಲ ನೋಟದಲ್ಲಿ ABC ಸಂಸ್ಥೆಯ ಮೇಲಿನ ಹೂಡಿಕೆ ಉತ್ತಮ ಎನ್ನಿಸಿತ್ತು, ಆದರೆ ಯಾವಾಗ ನಾವು ಲಾಭದಲ್ಲಿನ ಅಪಾಯವನ್ನ ಕೂಡ ಗಣೆನೆಗೆ ತೆಗೆದುಕೊಂಡೆವು ಆಗ XYZ ಉತ್ತಮ ಎನ್ನಿಸಿತು. ಸರಳವಾಗಿ ಹೇಳಬೇಕೆಂದರೆ ಕೇವಲ ಲಾಭ ಮಾತ್ರವಲ್ಲ, ಲಾಭದ ಜೊತೆಗಿನ ಅಪಾಯವನ್ನ ಕೂಡ ನಾವು ಮನಗಾಣಬೇಕು.
ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಅಥವಾ ಕಂಪನಿಸ್ ಅಥವಾ ಮ್ಯೂಚುಯಲ್ ಫಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ಸ್ ಗಳು ವ್ಯಕ್ತಿಯ, ಸಂಸ್ಥೆಯ, ಹೂಡಿಕೆದಾರರ ಅಥವಾ ಹೂಡಿಕೆದಾರ ಸಂಸ್ಥೆಗಳ ಹಾಗೂ ಇನ್ನಿತರ ಅಸೆಟ್ ಮ್ಯಾನೇಜ್ಮೆಂಟ್ (Asset Management) ಸಂಸ್ಥೆಗಳ ಹಣವನ್ನ ಫೈನಾನ್ಸಿಯಲ್ ಇನ್ವೆಸ್ಟ್ಮೆಂಟ್ (Finincial Investment), ಅಪರೇಷನಲ್ ಇನ್ವೆಸ್ಟ್ಮೆಂಟ್ (Operational Investment), ಇನ್ನಿತರೇ ಅಸೆಟ್ ಇನ್ವೆಸ್ಟ್ಮೆಂಟ್ ಮೂಲಕ ಹೆಚ್ಚಿನ ರಿಟರ್ನ್ಸ್ ಪಡೆಯಲು ಹೂಡಿಕೆಯನ್ನ ಮಾಡುತ್ತದೆ.
ಹೀಗೆ ಗಳಿಸಿದ ನಿಜವಾದ ಲಾಭ ಹೂಡಿಕೆದಾರನಿಗೆ ಹೋಗುತ್ತದೆ. AMC ಗಳು ಒಂದಷ್ಟು ಪ್ರತಿಶತವನ್ನ ತಾವು ನೀಡುವ ಸೇವೆಗೆ ಶುಲ್ಕದ ರೂಪದಲ್ಲಿ ಪಡೆದುಕೊಳ್ಳುತ್ತವೆ. ಇವುಗಳನ್ನ ಫಂಡ್ ಹೌಸ್ (Fund house) ಫಂಡ್ ಮ್ಯಾನೇಜರ್ಸ್ (Fund managers) ಮನಿ ಮ್ಯಾನೇಜ್ಮೆಂಟ್ ಫರ್ಮ್ಸ್ (Money Management Firms) ಎಂತಲೂ ಇವುಗಳನ್ನ ಕರೆಯಲಾಗುತ್ತದೆ.
ಯಾವ ಫಂಡ್ ಹೌಸ್ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎನ್ನುವ ಹುಡುಕಾಟದಲ್ಲಿ ಸಾಮಾನ್ಯವಾಗಿ ಬಹಳ ಹೆಸರುವಾಸಿ ಫಂಡ್ ಹೌಸ್ ಹೆಚ್ಚಿನ ಲಾಭ ತಂದುಕೊಡುತ್ತದೆ ಎನ್ನುವ ಪರಿಪಾಠವಿದೆ, ಆದರೆ ಗಮನಿಸಿ ಎಲ್ಲಾ ಸಮಯದಲ್ಲೂ ಪ್ರಸಿದ್ಧ ಫಂಡ್ ಹೌಸ್ ಗಳು ನಾವು ಎಣಿಸಿದಂತೆ ಲಾಭತಂದು ಕೊಡುತ್ತವೆ ಎನ್ನುವಂತಿಲ್ಲ. ಹೀಗಾಗಿ ಪ್ರಸಿದ್ಧ ಎನ್ನುವುದ್ಕಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಹೀಗಿವೆ.
ಫಂಡ್ ಹೌಸ್ ನ ಗಾತ್ರ (ಸೈಜ್ ಆಫ್ ದಿ ಫಂಡ್ ಹೌಸ್)
ಫಂಡ್ ಮ್ಯಾನೇಜರ್ ಗಳ ವೃತ್ತಿಪರತೆ ಮತ್ತು ತಜ್ಞ ಜ್ಞಾನ.
ನೆಟ್ ಅಸೆಟ್ ವ್ಯಾಲ್ಯೂ (Net asset value)
ಕಳೆದ 8/10 ವರ್ಷಗಳ ಕೆಲಸ, ಸಾಧನೆ ಟ್ರ್ಯಾಕ್ ರೆಕಾರ್ಡ್
ಹೆಚ್ಚು ಯಶಸ್ಸು ಗಳಿಸಿದ ಸ್ಟಾರ್ ಫಂಡ್ ಗಳ ಸಂಖ್ಯೆ.
ಕೆಳಗಿನ ಮ್ಯೂಚುಯಲ್ ಫಂಡ್ ಹೌಸ್ಗಳಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವ ಮುನ್ನ ಪ್ರತಿಯೊಬ್ಬ ಹೂಡಿಕೆದಾರನ ಅವಶ್ಯಕತೆ ಗಮನಿಸಿ ಯಾವುದು ಸರಿ ಎಂದು ಗಮನಿಸಿ ಹೂಡಿಕೆ ಮಾಡಬೇಕಾಗುತ್ತದೆ. ಅಲ್ಲದೆ ಇವುಗಳನ್ನು ಸದಾ ಗಮನಿಸುತ್ತಾ ಇರಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಇಲ್ಲದೆ ಅಲ್ಪ-ಸ್ವಲ್ಪ ಜ್ಞಾನ ಪಡೆದು ಹೂಡಿಕೆ ಮಾಡುವುದು ಅಪಾಯಕಾರಿ.
SBI mutual fund /ಎಸ್ಬಿಐ ಮ್ಯೂಚುಯಲ್ ಫಂಡ್: ಕಳೆದ ಮೂರು ದಶಕಗಳಿಂದ ಗ್ರಾಹಕರಿಗೆ ಮ್ಯೂಚುಯಲ್ ಫಂಡ್ ಸೇವೆಯನ್ನ ನೀಡುತ್ತಾ ಬಂದಿದೆ. ಇದು ಭಾರತೀಯ ಸ್ಟೇಟ್ ಬ್ಯಾಂಕ್ ಫ್ರಾನ್ಸ್ ಮೂಲದ AMUNDI ಎನ್ನುವ ಜಗತ್ತಿನ ಲೀಡಿಂಗ್ ಇನ್ವೆಸ್ಟ್ಮೆಂಟ್ ಸಂಸ್ಥೆಯ ಸಹಯೋಗದೊಂದಿಗೆ ಈ ಸೇವೆಯನ್ನ ನೀಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಇದನ್ನ ಅಗ್ರಮಾನ್ಯ ಫಂಡ್ ಹೌಸ್ ಎಂದು ಹೇಳಬಹುದು. 2022ರ ಮಾರ್ಚ್ ಅಂತ್ಯದ ವೇಳೆಗೆ ಈ ಫಂಡ್ ಹೌಸ್ 146ಕ್ಕೂ ಹೆಚ್ಚಿನ ರೀತಿಯ ಫಂಡ್ ಗಳ ಮೇಲಿನ ಹೂಡಿಕೆಯನ್ನ ಆಯ್ಕೆಯಾಗಿ ನೀಡುತ್ತಿದೆ. ಮೇಲಿನ ಎಲ್ಲಾ ಅಂಶಗಳನ್ನ ಪರಿಗಣಿಸಿದಾಗ ಎಸ್ಬಿಐ ಮೊದಲ ಸ್ಥಾನದಲ್ಲಿದೆ. ಗಮನಿಸಿ - ಹೂಡಿಕೆದಾರರು ತಮ್ಮ ಗುರಿ, ಉದ್ದೇಶವನ್ನ ನಿಖರವಾಗಿ ತಿಳಿದುಕೊಂಡು ಹೂಡಿಕೆ ಮಾಡಬೇಕು, ಇಲ್ಲಿ ಹೇಳಿದ ಮಾತ್ರಕ್ಕೆ ಇದರಲ್ಲೇ ಹೂಡಿಕೆ ಮಾಡುವಂತಿಲ್ಲ, ಅದು ಒಳ್ಳೆಯದೂ ಅಲ್ಲ.
ICICI Prudential Mutual Fund/ ಐಸಿಐಸಿಐ ಮ್ಯೂಚುಯಲ್ ಫಂಡ್: ಇದು ಭಾರತದ ಎರಡನೇ ಅತಿ ದೊಡ್ಡ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿದೆ. ಎರಡನೇ ಅತಿ ದೊಡ್ಡ ಎನ್ನುವ ಹೆಗ್ಗಳಿಕೆ ಜೊತೆಗೆ ಅತ್ಯುತ್ತಮ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಎನ್ನುವ ಹೆಸರನ್ನ ಕೂಡ ಇದು ಗಳಿಸಿಕೊಂಡಿದೆ. ಇಲ್ಲಿ ಹತ್ತಿರತ್ತಿರ 142 ಫಂಡ್ ಗಳು ಹೂಡಿಕೆಗೆ ಸಿಗುತ್ತವೆ. ಇವುಗಳಲ್ಲಿ ಬಹುತೇಕ ಮ್ಯೂಚುಯಲ್ ಫಂಡ್ಗಳು ಟ್ರಿಪ್ಪೆಲ್ A ರೇಟಿಂಗ್ ಹೊಂದಿವೆ. ಅಂದರೆ ಇವುಗಳು ಹೂಡಿಕೆಗೆ ಬಹಳ ಸುರಕ್ಷಿತವಾಗಿವೆ ಎಂದರ್ಥ. ಹೂಡಿಕೆದಾರರು ಈ ಸಂಸ್ಥೆಯನ್ನ ಹೂಡಿಕೆಗೆ ಆಯ್ಕೆ ಮಾಡಿಕೊಂಡರೆ ಹೂಡಿಕೆ ಮಾಡುವ ಫಂಡ್ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಂಡು ಮುಂದುವರೆಯಬೇಕಾಗುತ್ತದೆ.
HDFC mutual fund: ಹೆಚ್ಡಿಎಫ್ಸಿ ಮ್ಯೂಚುಯಲ್ ಫಂಡ್: ಈ ಸಂಸ್ಥೆ ಭಾರತದ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಹೆಚ್ಚಿನ ಲಾಭ ಮಾಡುತ್ತಿರುವ ಸಂಸ್ಥೆ ಎನ್ನುವ ಹೆಸರನ್ನ ಗಳಿಸಿಕೊಂಡಿದೆ. ಮಾರ್ಚ್ 2022ರ ಮಾಹಿತಿಯ ಪ್ರಕಾರ ಈ ಸಂಸ್ಥೆ ಸರಿ ಸುಮಾರು 85 ಫಂಡ್ ಗಳ ಮೇಲಿನ ಹೂಡಿಕೆಯ ಆಯ್ಕೆಯನ್ನ ಹೂಡಿಕೆದಾರರಿಗೆ ನೀಡುತ್ತಿದೆ.
NIPPON India mutual fund /ನಿಪ್ಪೋನ್ ಇಂಡಿಯಾ ಮ್ಯೂಚುಯಲ್ ಫಂಡ್: ದೇಶದ ಅಗ್ರಮಾನ್ಯ ಮ್ಯೂಚುಯಲ್ ಫಂಡ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಇದೂ ಕೂಡ ಪ್ರಮುಖವಾದದ್ದು. ಇಲ್ಲಿ ಮ್ಯೂಚುಯಲ್ ಫಂಡ್, ಪೆನ್ಷನ್ ಫಂಡ್ , ಪರ್ಯಾಯ ಹೂಡಿಕೆ (ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ) ಗಳಲ್ಲಿ ಆಯ್ಕೆಯನ್ನ ನೀಡುತ್ತದೆ. ಜೊತೆಗೆ ಆಫ್ ಶೋರ್ ಫಂಡ್ ಅಂದರೆ ಅಂತಾರಾಷ್ಟ್ರೀಯ ಮ್ಯೂಚುಯಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡುವ ಆಯ್ಕೆಯನ್ನ ಕೂಡ ನೀಡುತ್ತದೆ, ಹೀಗೆ ಒಟ್ಟು 131 ವಿವಿಧ ರೀತಿಯ ಫಂಡ್ ಹೂಡಿಕೆ ಆಯ್ಕೆ ಹೂಡಿಕೆದಾರರಿಗೆ ಲಭ್ಯವಿದೆ.
AXIS Mutual fund/ಆಕ್ಸಿಸ್ ಮ್ಯೂಚುಯಲ್ ಫಂಡ್: ಆಕ್ಸಿಸ್ ಮ್ಯೂಚುಯಲ್ ಫಂಡ್ ಮ್ಯಾನೇಜ್ಮೆಂಟ್ ಸಂಸ್ಥೆ ಕೂಡ ಮಾರುಕಟ್ಟೆಯಲ್ಲಿ ಬಹಳ ವರ್ಷದಿಂದ ಈ ಸೇವೆಯನ್ನ ನೀಡುತ್ತಾ ಬಂದಿದೆ. ಡೆಟ್, ಈಕ್ವಿಟಿ ಜೊತೆಗೆ ಇತರೆ ಹೈಬ್ರಿಡ್ ಹೂಡಿಕೆಗಳನ್ನ ಕೂಡ ಆಯ್ಕೆಯಾಗಿ ನೀಡುತ್ತಾ ಬಂದಿದೆ. ಒಟ್ಟು 76 ಇಂತಹ ಹೂಡಿಕೆ ಆಯ್ಕೆಗಳು ಹೂಡಿಕೆದಾರರಿಗೆ ನೀಡಿದೆ. ಡೆಟ್ ಫಂಡ್ ಗಳಂತೂ ನೂರಕ್ಕೂ ಹೆಚ್ಚಿವೆ.
ಕೊನೆಮಾತು: ಮ್ಯೂಚುಯಲ್ ಫಂಡ್ ನ ಅತ್ಯಂತ ದೊಡ್ಡ ನೂನ್ಯತೆ ಖರ್ಚುಗಳು. ಪ್ರತಿಯೊಂದು ಮ್ಯೂಚುಯಲ್ ಫಂಡ್ ಹೌಸ್ಗಳು ಕೂಡ ಫಂಡ್ ಮ್ಯಾನೇಜರ್ ಸಹಿತ ಬಹಳಷ್ಟು ಖರ್ಚುಗಳನ್ನ ಹೂಡಿಕೆದಾರನ ಮೇಲೆ ಹಾಕುತ್ತವೆ, ಜೊತೆಗೆ ಕಮಿಷನ್ ಬೇರೆ ಇರುತ್ತದೆ. ಜಿಎಸ್ಟಿ ಮ್ಯೂಚುಯಲ್ ಫಂಡ್ ನ ಕಾಸ್ಟ್ ಸ್ವಲ್ಪ ಮಟ್ಟಿಗೆ ಏರಿಸಿರುವುದು ಕೂಡ ಸುಳ್ಳಲ್ಲ. ಹೀಗೆ ಲಾಭ ಬಹಳಷ್ಟು ಬಂದರೂ ಖರ್ಚುಗಳನ್ನ ಕಳೆದು ನಮ್ಮ ಕೈಗೆ ಬಂದದ್ದು ಮಾತ್ರ ನಮ್ಮದು ಅದರ ಮೇಲೂ ತೆರಿಗೆ ಇರುತ್ತದೆ. ಹೀಗಾಗಿ ಎಲ್ಲಾ ಕಳೆದು ನಮಗೆ ಏನು ಉಳಿಯುತ್ತದೆ ಎನ್ನುವ ಲೆಕ್ಕಾಚಾರ ಮಾಡದೆ ಹೂಡಿಕೆ ಮಾಡಬಾರದು.
Advertisement