ಮುಖ್ಯಮಂತ್ರಿ ಸ್ಥಾನ: ಸಿದ್ದು–ಡಿಕೆಶಿ ನಡುವೆ ಮತ್ತೆ ಚದುರಂಗದಾಟ ಆರಂಭ (ಸುದ್ದಿ ವಿಶ್ಲೇಷಣೆ)

ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಕ್ಕಿದ್ದಂತೆ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಬರೀ ರಾಜ್ಯದಲ್ಲಷ್ಟೇ ಅಲ್ಲ, ಹೈಕಮಾಂಡ್ ನಾಯಕರೂ ಈ ಹೇಳಿಕೆಯಿಂದ ವಿಚಲಿತರಾಗಿದ್ದಾರೆ.
Siddaramaiah- DK Shivakumar
ಸಿದ್ದರಾಮಯ್ಯ, ಡಿಕೆ ಶಿವಕುಮಾರ್online desk
Updated on

ರಾಜ್ಯ ಕಾಂಗ್ರೆಸ್ ಅಧ್ಯಕ್ಷಗಿರಿ ಈಗ ಎಲ್ಲ ಪ್ರಮುಖ ನಾಯಕರ ಪಾಲಿಗೆ ಬೇಡವಾದ ಹುದ್ದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಕ್ಕಿದ್ದಂತೆ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಬರೀ ರಾಜ್ಯದಲ್ಲಷ್ಟೇ ಅಲ್ಲ, ಹೈಕಮಾಂಡ್ ನಾಯಕರೂ ಈ ಹೇಳಿಕೆಯಿಂದ ವಿಚಲಿತರಾಗಿದ್ದಾರೆ.

ಹಾಗಿದ್ದರೆ ಮುಂದೆ ಕೆಪಿಸಿಸಿ ಅಧ್ಯಕ್ಷರಾಗುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ, ಸದ್ಯಕ್ಕೆ ಅದು ಯಾರಿಗೂ ಬೇಡದ ಹುದ್ದೆ ಎಂಬುದು ಕಂಡು ಬರುತ್ತದೆ.

ಹಾಗೆ ನೋಡಿದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಈ ಹಿಂದೆ ಆಯ್ಕೆಯಾದ ಡಿ.ಕೆ.ಶಿವಕುಮಾರ್ ಅವರ ಅವಧಿ ಹಿಂದೆಯೇ ಮುಗಿದಿದ್ದು ಲೋಕಸಭೆ ಚುನಾವಣೆ ಕಾರಣಕ್ಕೆ ಮುಂದುವರಿಯುವಂತೆ ವರಿಷ್ಠರು ಸೂಚಿಸಿದ್ದರ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮುಂದಕ್ಕೆ ಹೋಗಿತ್ತು. ಈಗ ಚುನಾವಣೆ ಮುಗಿದು ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಶಿವಕುಮಾರ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಕುರಿತು ಸೂಚ್ಯವಾಗಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಈ ಹಂತದಲ್ಲಿ ಸಂಭ್ರಮ ಆಚರಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ನೀಡಿರುವ ಈ ಹೇಳಿಕೆಯ ಹಿಂದೆ ನಾನಾ ಲೆಕ್ಕಾಚಾರಗಳಷ್ಟೇ ಅಲ್ಲ ಕಾಂಗ್ರೆಸ್ ನಲ್ಲಿರುವ ಅಂತರಿಕ ಬೇಗುದಿಯೂ ಹೊರ ಬಂದಂತಾಗಿದೆ.

ಮತ್ತೊಂದು ಘಟನೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ಮಂತ್ರಿಮಂಡಲವನ್ನು ಪುನಾರಚಿಸುವ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗೇ ಸ್ಪಷ್ಟಪಡಿಸಿದ್ದಾರೆ. ಈ ಎರಡೂ ಹೇಳಿಕೆಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಇಬ್ಬರು ನಾಯಕರ ನಡುವೆ ಚುನಾವಣಾ ಫಲಿತಾಂಶದ ನಂತರ ಆಂತರಿಕ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸೂಚನೆಗಳು ಕಂಡು ಬರುತ್ತಿವೆ.

Siddaramaiah- DK Shivakumar
ರಾಜ್ಯದ ಯಾವೊಬ್ಬ ನಾಯಕನೂ ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಕೆಪಿಸಿಸಿ ಅಧ್ಯಕ್ಷರಾದ ನಂತರ ಶಿವಕುಮಾರ್ ಪಕ್ಷಕ್ಕೆ ಹೊಸ ಭರವಸೆ ತುಂಬಿದ್ದಾರೆ. ಅಧ್ಯಕ್ಷರಾಗಿ ಅವರ ಕೆಲವೊಂದು ನಿರ್ಧಾರಗಳು ತೀರಾ ಅನಗತ್ಯವಾಗಿತ್ತು ಎಂದು ಅನಿಸಿದರೂ ಅದು ಸಂಘಟನೆಗೆ ಒಂದು ಗಂಭೀರತೆಯನ್ನು ತಂದಿದೆ ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಅಧ್ಯಕ್ಷರಾಗಿ ಅವರು ಸರ್ಕಾರದ ಮಟ್ಟದಲ್ಲೂ ಪ್ರಮುಖ ಅಧಿಕಾರದ ಕೇಂದ್ರ ಬಿಂದು ಆಗಿದ್ದಾರೆ. ಹಾಗೆಯೇ ಮಾಜಿ ಪ್ರಧಾನಿ ದೇವೇಗೌಡರಿಗಷ್ಟೇ ಸೀಮಿತವಾಗಿದ್ದ ಒಕ್ಕಲಿಗ ನಾಯಕತ್ವದ ಪಟ್ಟಕ್ಕೆ ಹತ್ತಿರವಾಗಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಅವರೊಬ್ಬ ಗಂಭೀರ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಹೊರಬರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಉಳಿದ ನಾಯಕರು ಫಲಿತಾಂಶದ ಕುರಿತಂತೆ ಸ್ಪಷ್ಟ ನಿಲುವು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾಗ ಕಾಂಗ್ರೆಸ್ ಪಕ್ಷ 135 ರ ಆಜೂಬಾಜಿನ ಸ್ಥಾನಗಳಲ್ಲಿ ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಹಲವು ಅಚ್ಚರಿಗೆ ಕಾರಣವಾಗಿದ್ದರು. ಫಲಿತಾಂಶ ಪ್ರಕಟವಾದಾಗ ಶಿವಕುಮಾರ್ ಲೆಕ್ಕಾಚಾರ ನಿಜವಾಗಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಪಟ್ಟು ಹಿಡಿದು ಒಂದಷ್ಟು ಮಂದಿ ತಮ್ಮ ಕಟ್ಟಾ ಬೆಂಬಲಿಗರಿಗೆ ಪಕ್ಷದ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಶಿವಕುಮಾರ್ ತಂತ್ರಕ್ಕೆ ಬಿಜೆಪಿಯ ಪ್ರಮುಖ ನಾಯಕರೆಂದೇ ಬಿಂಬಿತವಾಗಿದ್ದ ಸಿ.ಟಿ.ರವಿ ಸೇರಿದಂತೆ ಪ್ರಮುಖ ಮುಖಂಡರು ಚುನಾವಣೆಯಲ್ಲಿ ಸೋತಿದ್ದು ಈಗ ಇತಿಹಾಸ.

ಸಚಿವ ಸಂಪುಟ ರಚನೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಅವರು ತಮ್ಮದೇ ಮಾತು ನಡೆಯುವಂತೆ ನೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿ ಪ್ರಮುಖ ಪರ್ಯಾಯ ಅಧಿಕಾರದ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಅವರ ಬಗ್ಗೆ ಸಹಜವಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೆ ಕಸಿವಿಸಿ ತಂದಿದೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪಕ್ಷ ಮತ್ತು ಸರ್ಕಾರದ ಹಂತದಲ್ಲಿ ಪ್ರಶ್ನಾತೀತರಾಗಿದ್ದರು. ಆಗಿನ ಸಂದರ್ಭಗಳಲ್ಲಿ ಪಕ್ಷದ ಅಧ್ಯಕ್ಷರಾಗಿದ್ದವರು ಸಿದ್ದರಾಮಯ್ಯ ಅವರ ವರ್ಚಸ್ಸಿನ ಅಬ್ಬರದ ಮುಂದೆ ಮಂಕಾಗಿದ್ದೂ ಸುಳ್ಳೇನಲ್ಲ.

ಆದರೆ ಇವೆಲ್ಲ ಸಂಗತಿಗಳೂ ಶಿವಕುಮಾರ್ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಆದ ನಂತರ ಸುಳ್ಳಾಗಿರುವುದು ಗುಟ್ಟೇನಲ್ಲ. ಪರ್ಯಾಯ ಅಧಿಕಾರದ ಕೇಂದ್ರವಾಗಿ ಅವರು ರೂಪುಗೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಬೆಂಬಲಿಗರ ಪಾಲಿಗೆ ಅವರು ಗಂಟಲಲ್ಲಿನ ಬಿಸಿ ತುಪ್ಪ.

ಈಗ ಇದ್ದಕ್ಕಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆಯುವ ಕುರಿತು ಅಸ್ಪಷ್ಟದ ಮಾತು ಆಡಿರುವ ಶಿವಕುಮಾರ್ ಆ ಮೂಲಕ ಹೈಕಮಾಂಡ್ ಗೆ ಹಾಗೂ ತಮ್ಮನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ ಮತ್ತು ಬೆಂಬಲಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸರ್ಕಾರ ರಚನೆ ಹಂತದಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಕುರಿತಂತೆ ಹೈಕಮಾಂಡ್ ಮಟ್ಟದಲ್ಲಿ ಆಗಿತ್ತು ಎಂದು ಹೇಳಲಾಗುತ್ತಿರುವ ಆಂತರಿಕ ಒಪ್ಪಂದವನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಬೆಂಬಲಿಗ ಸಚಿವರು ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪದೇ ಪದೇ ಹೇಳುತ್ತಿರುವುದು, ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲೂ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಡಾ. ಯತೀಂದ್ರ ಕೂಡಾ ಇದೇ ವಿಚಾರವನ್ನು ಪ್ರಸ್ತಾಪಿಸಿರುವುದು ಶಿವಕುಮಾರ್ ಕೆರಳಲು ಕಾರಣವಾಗಿದೆ.

Siddaramaiah- DK Shivakumar
ವಿಲೀನವೊ… ವಿಚ್ಛೇದನವೋ..? ಕುಮಾರಸ್ವಾಮಿ ತೊಳಲಾಟ! (ಸುದ್ದಿ ವಿಶ್ಲೇಷಣೆ)

ಈಗ ಇದೇ ಸಂಗತಿಯನ್ನು ನೆಪವಾಗಿಟ್ಟುಕೊಂಡು ಪಕ್ಷದ ಅಧ್ಯಕ್ಷ ಹುಸದ್ದೆ ತ್ಯಜಿಸುವ ಮಾತಾಡುವ ಮೂಲಕ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹಾಗೆ ನೋಡಿದರೆ ಪಕ್ಷಕ್ಕೆ ಅಗತ್ಯ ಸಂಪನ್ಮೂಲ ಕ್ರೂಢೀಕರಿಸುವ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ತಾನು ಆಪಾಯಗಳನ್ನು ಎದುರಿಸಿ ಪಕ್ಷವನ್ನು ಅಪಾಯದಿಂದ ಪಾರು ಮಾಡಿದ ಪ್ರಶಂಸೆಗೂ ಶಿವಕುಮಾರ್ ಪಾತ್ರರಾಗಿದ್ದಾರೆ ಎಂಬುದು ನಿಜವಾದರೂ ಹೈಕಮಾಂಡ್ ತಮ್ಮ ನೆರವಿಗೆ ಬರುತ್ತಿಲ್ಲ ಎಂಬ ಅಸಹನೆ ಅವರಿಗಿದೆ. ಆ ಕಾರಣಕ್ಕಾಗೇ ಅಧ್ಯಕ್ಷಗಿರಿ ತ್ಯಜಿಸುವ ಮಾತಾಡಿದ್ದಾರೆ ಎಂಬುದು ಅವರ ಆಪ್ತ ಮೂಲಗಳ ವಿವರಣೆ. ಮತ್ತೊಂದು ರೀತಿಯಿಂದ ನೋಡಿದರೆ ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಪ್ರಮುಖ ಚುನಾವಣೆಗಳು ಇಲ್ಲ. ಪಂಚಾಯ್ತಿ ಸಂಸ್ಥೆಗಳು ಹಾಗೂ ಬೃಹತ್ ಬೆಂಗಳೂರು ಮಹಾ ನಗರ ಪಾಲಿಎಕ ಚುನಾವಣೆಗಳ ಕುರಿತು ಸರ್ಕಾರ – ಚುನಾವಣಾ ಆಯೋಗದ ನಡುವೆ ಕಾನೂನು ಸಂಘರ್ಷ ಮುಂದುವರಿದಿದ್ದು ಅನಿಶ್ಚಯತೆ ಇದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಅಧಿಕಾರ ಇರುವ ಸಂದರ್ಭದಲ್ಲಿ ಮುಖ್ಯಮಂತ್ರಿಯೇ ಪ್ರಧಾನ ಆಕರ್ಷಣೆಯ ಕೇಂದ್ರವಾಗುತ್ತಾರೆ. ಅಲ್ಲಿ ಪಕ್ಷದ ಅಧ್ಯಕ್ಷರಿಗೆ ಅಂತಹ ಮಹತ್ವ ಇರುವುದಿಲ್ಲ. ಇದು ಶಿವಕುಮಾರ್ ಗೂ ಗೊತ್ತು. ಆ ಕಾರಣಕ್ಕಾಗೇ ಹೆಚ್ಚು ದಿನ ಕಾಯಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆ ವಿಚಾರ ಕುರಿತು ಕೂಡಲೇ ತೀರ್ಮಾನ ಮಾಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆ ತಂತ್ರದ ಮುಂದುವರಿದ ಭಾಗವೇ ಅಧ್ಯಕ್ಷ ಸ್ಥಾನ ತ್ಯಜಿಸುವ ಹೇಳಿಕೆ ಎಂಬುದು ಕಾಂಗ್ರೆಸ್ ನ ವಿದ್ಯಮಾನಗಳನ್ನು ಗಮನಿಸಿದರೆ ಕಾಣುವ ಅಂಶ.

ಸಂಪುಟ ಪುನಾರಚನೆ:

ಚುನಾವಣೆಗೆ ಸಚಿವರ ಮಕ್ಕಳು, ಕುಟುಂಬದ ಸದಸ್ಯರನ್ನು ಕಡ್ಡಾಯವಾಗಿ ಸ್ಪರ್ಧೆಗಿಳಿಸುವ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲದಿದ್ದರೆ ಸಚಿವರುಗಳು ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಹಿಂದೆ ಕೆಪಿಸಿಸಿ ವತಿಯಿಂದ ನೀಡಲಾಗಿತ್ತು. ಈಗ ಕಾಂಗ್ರೆಸ್ ರಾಜ್ಯದಲ್ಲಿ 12 ರಿಂದ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆಯಾದರೂ ಸೋತ ಕ್ಷೇತ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ಕೊಡುವುದು ಅನಿವಾರ್ಯವಾಗುತ್ತದೆ. ಒಂದು ವೇಳೆ ಇದೇ ಅಂತಿಮವಾದರೆ ಮುಖ್ಯಮಂತ್ರಿ ಹಾಗೂ ಅವರ ಆಪ್ತ ಸಚಿವರ ಕೊರಳಿಗೂ ಫಲಿತಾಂಶದ ವೈಫಲ್ಯ ಸುತ್ತಿಕೊಳ್ಳುವ ಸಾಧ್ಯತೆಗಳೂ ಇವೆ. ಈ ಅಪಾಯವನ್ನು ಮುಂದಾಗೇ ಊಹಿಸಿರುವ ಸಿದ್ದರಾಮಯ್ಯ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ಪುನಾರಚನೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದು ನೇರವಾಗಿ ಕೆಪಿಸಿಸಿ ಅಧ್ಯಕ್ಷರನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಿದ ಹೇಳಿಕೆಯೇ ಆಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕ ಸಮರ್ಥರ ಹುಡುಕಾಟದಲ್ಲಿ ಕಾಂಗ್ರೆಸ್ ವರಿಷ್ಠರು ಇದ್ದಾರಾದರೂ ಸದ್ಯಕ್ಕೆ ಪಕ್ಷಕ್ಕೆ ವರ್ಚಸ್ಸು ತುಂಬ ಬಲ್ಲವರು ಕಾಣುತ್ತಿಲ್ಲ. ಮತ್ತೊಂದು ಕಡೆ ಒಂದುವೇಳೆ ಒಬ್ಬರಿಗೆ ಒಂದೇ ಹುದ್ದೆ ಅನ್ನು ಸಿದ್ಧಾಂತ ಕಡ್ಡಾಯವಾಗಿ ಜಾರಿಗೊಂಡು ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕಾತಿ ಸಂದರ್ಭ ಒದಗಿ ಬಂದರೆ ತಮ್ಮ ಬೆಂಬಲಿಗರೊಬ್ಬರನ್ನು ಆ ಹುದ್ದೆಯಲ್ಲಿ ಕೂರಿಸಿ ಪಕ್ಷದ ಮೇಲೂ ಹಿಡಿತ ಸಾಧಿಸುವ ಆಲೋಚನೆ ಸಿದ್ದರಾಮಯ್ಯ ಅವರದ್ದು. ತನ್ನ ಆಣತಿಗೆ ನಡೆಯುವ ಹಾಗೂ ವಿರೋಧಿಸುವ ಶಕ್ತಿ ಇಲ್ಲದವರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದರೆ ಪಕ್ಷ ಹಾಗೂ ಸರ್ಕಾರ ಎರಡರಲ್ಲೂ ತಮ್ಮ ಮಾತೇ ಅಂತಿಮವಾಗುತ್ತದೆ ಅಷ್ಟೇ ಅಲ್ಲ, ಶಿವಕುಮಾರ್ ಪಕ್ಷದ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಆಗಿ ಪರ್ಯಾಯ ಮತ್ತು ಸಮಾನಾಂತರ ಅಧಿಕಾರದ ಕೇಂದ್ರವಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು.

Siddaramaiah- DK Shivakumar
ಪ್ರಜ್ವಲ್ ಪ್ರಕರಣ: ಕಾಂಗ್ರೆಸ್ ಗೆ ದಿಗ್ವಿಜಯದ ಉನ್ಮಾದ, ಜೆಡಿಎಸ್ ಗೆ ಅಸ್ತಿತ್ವದ್ದೇ ಚಿಂತೆ (ಸುದ್ದಿ ವಿಶ್ಲೇಷಣೆ)

ಆದರೆ ಸದ್ಯದ ಸನ್ನಿವೇಶದಲ್ಲಿ ಸಚಿವ ಸ್ಥಾನ ತ್ಯಜಿಸಿ ಪಕ್ಷದ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳಲು ಯಾರೂ ತಯಾರಿಲ್ಲ. ಕಾಂಗ್ರೆಸ್ ಹೈಕಮಾಂಡಿಗೂ ಶಿವಕುಮಾರ್ ಸ್ಥಾನ ತ್ಯಜಿಸುವುದು ಬೇಕಿಲ್ಲ. ಮುಖ್ಯಮಂತ್ರಿ ಮೊನ್ನೆ ನಡೆದ ಮಾಧ್ಯಮ ಸಂವಾದದಲ್ಲಿ ಸಂಪುಟ ಪುನಾರಚನೆ ಇಲ್ಲ ಎಂದು ಹೇಳಿರುವುದರ ಅರ್ಥವೂ ಇದೇ ಆಗಿದೆ. ಒಂದು ವೇಳೆ ಪುನಾರಚನೆ ಹೆಸರಲ್ಲಿ ಕೆಲವರನ್ನು ಕೈಬಿಡುವುದೇ ಅಂತಿಮವಾದರೆ ಆಗ ಅದನ್ನು ಪಕ್ಷದ ಅಧ್ಯಕ್ಷರು, ಹೈಕಮಾಂಡ್ ಮೇಲೆ ಹಾಕಿ ಸುಮ್ಮನಾಗುವುದು ಸಿದ್ದರಾಮಯ್ಯ ತಂತ್ರ ಬೆಂಬಲಿಗರ ನಂಬಿಕೆ ಉಳಿಸಿಕೊಂಡಂತೆಯೂ ಆಗಬೇಕು ಅಧಿಕಾರವೂ ಕೈತಪ್ಪಿ ಹೋಗಬಾರದು, ವಿರೋಧಿಗಳ ತಂತ್ರವೂ ಫಲಿಸಬಾರದು ಇದು ಅವರು ಆರಂಭಿಸಿರುವ ರಕ್ಷಣಾತ್ಮಕ ಆಟ. ಜೂನ್ ನಾಲ್ಕರ ನಂತರ ನಡೆಯುವ ಬೆಳವಣಿಗೆಗಳು ಕಾಂಗ್ರೆಸ್ ಅಷ್ಟೇ ಅಲ್ಲ ಬಿಜೆಪಿಯಲ್ಲೂ ಕೆಲವು ತಲ್ಲಣಗಳಿಗೆ ಕಾರಣವಾಗಲಿದೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com