INS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್‌ಮರೀನ್ ಪಡೆಗೆ ಆನೆಬಲ ಹೇಗೆ?

ಭಾರತದ ಮೊದಲ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮರೀನ್ (ಎಸ್ಎಸ್‌ಬಿಎನ್) ಆಗಿರುವ ಐಎನ್ಎಸ್ ಅರಿಹಂತ್ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿತ್ತು.
INS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್‌ಮರೀನ್ ಪಡೆಗೆ ಆನೆಬಲ ಹೇಗೆ?
Updated on

ನವೆಂಬರ್ 27, ಬುಧವಾರದಂದು ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಒಯ್ಯುವ ಸಾಮರ್ಥ್ಯವಿರುವ ಕಲಾಂ-4 ಅಥವಾ ಕೆ-4 ಸಬ್‌ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಮಿಸೈಲ್ (ಸಬ್‌ಮರೀನ್‌ನಿಂದ ಉಡಾವಣೆಗೊಳಿಸುವ ಬ್ಯಾಲಿಸ್ಟಿಕ್ ಕ್ಷಿಪಣಿ - ಎಸ್ಎಲ್‌ಬಿಎಂ) ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಈ ಕ್ಷಿಪಣಿ 3,500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಈ ಕ್ಷಿಪಣಿಯನ್ನು ನೂತನವಾಗಿ ನಿಯೋಜಿಸಲಾದ ಭಾರತದ ಪರಮಾಣು ಸಬ್‌ಮರೀನ್ ಆದ ಐಎನ್ಎಸ್ ಅರಿಘಾತ್ ಮೂಲಕ ಪರೀಕ್ಷಿಸಲಾಯಿತು. ಪರೀಕ್ಷೆ ಯಶಸ್ವಿಯಾಗಿರುವ ಮಾಹಿತಿಯನ್ನು ರಕ್ಷಣಾ ವಲಯದ ಮೂಲಗಳು ನವೆಂಬರ್ 28ರಂದು ಹಂಚಿಕೊಂಡವು.

ಈ ಪರೀಕ್ಷೆಯ ಫಲಿತಾಂಶಗಳನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದೆ. ಐಎನ್ಎಸ್ ಅರಿಘಾತ್ ಸಬ್‌ಮರೀನ್ ಅನ್ನು ಭಾರತದ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ಎಫ್‌ಸಿ) ನಿರ್ವಹಿಸುತ್ತಿದೆ. ಐಎನ್ಎಸ್ ಅರಿಘಾತ್ ಸಬ್‌ಮರೀನ್ ಆಗಸ್ಟ್ ತಿಂಗಳಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಸಮಾರಂಭದಲ್ಲಿ, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ನೌಕಾಪಡೆಗೆ ನಿಯೋಜನೆಗೊಂಡಿತು.

ಭಾರತದ ಮೊದಲ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮರೀನ್ (ಎಸ್ಎಸ್‌ಬಿಎನ್) ಆಗಿರುವ ಐಎನ್ಎಸ್ ಅರಿಹಂತ್ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿತ್ತು. ಇದರ ನಿರ್ಮಾಣ ಜುಲೈ 2009ರಲ್ಲಿ ಆರಂಭಗೊಂಡು, ಅದು 2016ರಲ್ಲಿ ಅಧಿಕೃತವಾಗಿ ನಿಯೋಜನೆಗೊಂಡಿತು. 2018ರ ವೇಳೆಗೆ ಸಬ್‌ಮರೀನ್ ಸಂಪೂರ್ಣ ಕಾರ್ಯಾಚರಣಾ ಸನ್ನದ್ಧವಾಯಿತು.

ರಕ್ಷಣಾ ಸಚಿವಾಲಯದ (ಎಂಒಡಿ) ಪ್ರಕಾರ, ಐಎನ್ಎಸ್ ಅರಿಘಾತ್ ಸಬ್‌ಮರೀನ್ ಐಎನ್ಎಸ್ ಅರಿಹಂತ್‌ಗೆ ಹೋಲಿಸಿದರೆ ಹೆಚ್ಚು ಆಧುನಿಕವಾಗಿದ್ದು, ದೇಶೀಯವಾಗಿ ನಿರ್ಮಾಣಗೊಂಡಿರುವ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ ಎರಡೂ 6,000 ಟನ್ ತೂಕ ಹೊಂದಿದ್ದು, 83 ಮೆಗಾವ್ಯಾಟ್ ಒತ್ತಡ ಸಹಿತ ಲೈಟ್ ವಾಟರ್ ಪರಮಾಣು ರಿಯಾಕ್ಟರ್‌ಗಳಿಂದ ಶಕ್ತಿ ಪಡೆಯುತ್ತವೆ. ಈ ತಂತ್ರಜ್ಞಾನದ ಪರಿಣಾಮವಾಗಿ, ಸಬ್‌ಮರೀನ್‌ಗಳು ಸುದೀರ್ಘ ಅವಧಿಗೆ ನೀರಿನ ಆಳದಲ್ಲಿ ಉಳಿದುಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಇದಕ್ಕೆ ಹೋಲಿಸಿದರೆ, ಸಾಂಪ್ರದಾಯಿಕ ಡೀಸೆಲ್‌ ಇಲೆಕ್ಟ್ರಿಕ್ ಸಬ್‌ಮರೀನ್‌ಗಳು ತಮ್ಮ ಬ್ಯಾಟರಿಗಳನ್ನು ಮರಳಿ ಚಾರ್ಜ್ ಮಾಡಲು ಕಡಿಮೆ ಸಮಯದಲ್ಲಿ ನೀರಿನ ಮೇಲ್ಮೈಗೆ ಬರಬೇಕಾಗುತ್ತದೆ.

ಐಎನ್ಎಸ್ ಅರಿಹಂತ್ ರೀತಿಯಲ್ಲೇ, ಐಎನ್ಎಸ್ ಅರಿಘಾತ್ ಸಹ ತನ್ನ ರಚನೆಯಲ್ಲಿ ನಾಲ್ಕು ಉಡಾವಣಾ ಟ್ಯೂಬ್‌ಗಳನ್ನು ಹೊಂದಿದೆ. ಈ ಟ್ಯೂಬ್‌ಗಳು ಗರಿಷ್ಠ 12ರಷ್ಟು 750 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೆ-15 ಸಾಗರಿಕಾ ಕ್ಷಿಪಣಿಗಳನ್ನು ಅಥವಾ 3,500 ಕಿಲೋಮೀಟರ್ ಸಾಗುವ ಸಾಮರ್ಥ್ಯ ಹೊಂದಿರುವ ನಾಲ್ಕು ಕೆ-4 ಕ್ಷಿಪಣಿಗಳನ್ನು ಒಯ್ಯಬಲ್ಲವು.

ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ ಬಳಿಕ, ಇದೇ ವರ್ಗಕ್ಕೆ ಸೇರಿದ ಐಎನ್ಎಸ್ ಅರಿದಮನ್ (ಶತ್ರುಗಳ ವಿಧ್ವಂಸಕ) ಸಬ್‌ಮರೀನ್ ಸಹ 2025ರ ಆರಂಭದಲ್ಲಿ ಸೇವೆಗೆ ನಿಯೋಜನೆಗೊಳ್ಳುವ ನಿರೀಕ್ಷೆಗಳಿವೆ. ಅರಿದಮನ್ ಸಬ್‌ಮರೀನ್ ಕೆ-4 ಸಬ್‌ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿರಲಿದೆ.

ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ, ಭಾರತ ತಾನು ಮೊದಲಾಗಿ ಶತ್ರುಗಳ ಮೇಲೆ ಅವುಗಳನ್ನು ಪ್ರಯೋಗಿಸುವುದಿಲ್ಲ ಎಂಬ ನೀತಿಯನ್ನು ಅನುಸರಿಸುತ್ತದೆ. ಅಂದರೆ, ಯಾರಾದರೂ ಭಾರತದ ಮೇಲೆ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಿಸಿದರೆ, ಭಾರತವೂ ಅವರ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿ ಪ್ರತಿದಾಳಿ ನಡೆಸಲಿದೆ. ಭಾರತ ಈಗ ನೀರಿನಾಳದಿಂದ ಪರಮಾಣು ಕ್ಷಿಪಣಿಗಳನ್ನು ಉಡಾವಣೆಗೊಳಿಸಬಲ್ಲ ಸಬ್‌ಮರೀನ್‌ಗಳನ್ನು ಹೊಂದಿರುವುದರಿಂದ, ಒಂದು ವೇಳೆ ತನ್ನ ಮೇಲೆ ದಾಳಿ ನಡೆದರೆ, ಭಾರತಕ್ಕೆ ನಂಬಿಕಾರ್ಹ ದ್ವಿತೀಯ ದಾಳಿ ಸಾಮರ್ಥ್ಯ ಲಭಿಸಿದೆ.

ಕೆ-15 ಕ್ಷಿಪಣಿ ಪಾಕಿಸ್ತಾನದ ನಿರ್ದಿಷ್ಟ ಪ್ರದೇಶಗಳ ಮೇಲೆ ಮಾತ್ರವೇ ದಾಳಿ ನಡೆಸುವಷ್ಟು ವ್ಯಾಪ್ತಿ ಹೊಂದಿತ್ತು. ಆದರೆ, ನೂತನ ಕೆ-4 ಕ್ಷಿಪಣಿ ಸಂಪೂರ್ಣ ಪಾಕಿಸ್ತಾನ ಮತ್ತು ಚೀನಾದ ಬಹುತೇಕ ಭಾಗಗಳ ಮೇಲೆ ದಾಳಿ ನಡೆಸುವಷ್ಟು ದೀರ್ಘ ವ್ಯಾಪ್ತಿಯನ್ನು ಹೊಂದಿದೆ.

ಭಾರತ ಪ್ರಸ್ತುತ ಕೆ-5 ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದು ಅಂದಾಜು 5,000 ಕಿಲೋಮೀಟರ್‌ಗಳಷ್ಟು ಸುದೀರ್ಘ ವ್ಯಾಪ್ತಿ ಹೊಂದಿರಲಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com