ಮಹಾರಾಷ್ಟ್ರದ ವಿಧಾನಸಭೆ ಅವಧಿ ನವೆಂಬರ್ 26ಕ್ಕೆ ಮುಕ್ತಾಯವಾಗುತ್ತದೆ. ಅಷ್ಟರೊಳಗೆ ಚುನಾವಣೆ ನಡೆಸುವುದಕ್ಕೆ ಚುನಾವಣಾ ಆಯೋಗವು ತಯಾರಿ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬಕ್ಕೆ ತೊಂದರೆಯಾಗದಂತೆ ದಿನಾಂಕ ನಿಗದಿಪಡಿಸುವ ಮಾತುಗಳನ್ನು ಚುನಾವಣಾ ಆಯುಕ್ತರು ಆಡಿದ್ದಾರೆ. ಅದಾಗಲೇ ರಾಜಕೀಯ ಪಕ್ಷಗಳೆಲ್ಲ ಚುನಾವಣೆಯ ಕದನೋತ್ಸಾಹದಲ್ಲಿಯೇ ಮಾತನಾಡುತ್ತಿವೆ. ಇಂಥ ಸಂದರ್ಭದಲ್ಲಿ ಶಿವಸೇನೆ-ಯುಬಿಟಿ ನಾಯಕ ಉದ್ಧವ ಠಾಕ್ರೆ ಬಿಜೆಪಿಯತ್ತ ತೂರಿರುವ ವಾಗ್ಬಾಣವು ಪ್ರತಿಪಕ್ಷವು ಈ ಚುನಾವಣೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡುಹೋಗಲಿದೆ ಎಂಬುದನ್ನು ಸಾರಿ ಹೇಳುತ್ತಿದೆ.
ಉದ್ಧವ ಠಾಕ್ರೆ ಸೃಷ್ಟಿಸುತ್ತಿರುವ ಐಡೆಂಟಿಟಿ ಅಜೆಂಡಾ!
ಇಷ್ಟಕ್ಕೂ ಉದ್ಧವ ಠಾಕ್ರೆ ಹೇಳಿರುವುದೇನು? “ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಬರಬೇಕಿದ್ದ ಒಂದಾದರೂ ಯೋಜನೆ ಸ್ಥಳಾಂತರವಾಗಿದ್ದನ್ನು ಕೇಳಿದ್ದೀರಾ? ನಾನದಕ್ಕೆ ಅವಕಾಶವನ್ನೇ ಮಾಡಿಕೊಟ್ಟಿರಲಿಲ್ಲ. ಆದರೆ ಶಿಂದೆ ಮುಖ್ಯಮಂತ್ರಿ ಆಗಿರುವ ಎರಡೂವರೆ ವರ್ಷಗಳಲ್ಲಿ ಇಲ್ಲಿನ ಎಷ್ಟೋ ಇಂಡಸ್ಟ್ರಿಗಳು ಗುಜರಾತಿಗೆ ಹೋಗಿವೆ. ಎಲ್ಲ ಯೋಜನೆಗಳನ್ನೂ ಗುಜರಾತಿಗೆ ಒಯ್ಯಲಾಗುತ್ತಿದೆ. ಹೀಗಾಗಿ ನಾವು ಈ ಬಾರಿ ಕೇವಲ ಅಧಿಕಾರಕ್ಕೆ ಸೆಣಸಾಡುತ್ತಿಲ್ಲ, ಬದಲಿಗೆ ಮಹಾರಾಷ್ಟ್ರದ ಲೂಟಿಯನ್ನು ತಡೆಯುವುದಕ್ಕೆ ಹೋರಾಡಲಿದ್ದೇವೆ.”
ಉದ್ಧವ ಠಾಕ್ರೆಯ ಇದೊಂದು ಹೇಳಿಕೆಯಲ್ಲಿಯೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಪ್ರತಿಪಕ್ಷ ಈ ಬಾರಿ ಹೇಗೆ ಎದುರಿಸಲಿಕ್ಕಿದೆ ಎಂಬುದರ ಗಟ್ಟಿ ಸುಳಿವು ದೊರೆತಿದೆ. ಮೋದಿಯವರ ಬಿಜೆಪಿ ವಿರುದ್ಧ ರಾಷ್ಟ್ರೀಯತೆ ಆಧಾರದಲ್ಲಿ ಸಣೆಸಾಡಿದರೆ ಎದುರಾಳಿಗೇ ಲಾಭವಾದೀತೆಂಬುದನ್ನು ಅರ್ಥ ಮಾಡಿಕೊಂಡಿರುವ ಉದ್ಧವರ ಶಿವಸೇನಾ ಬಣವು ಈ ಚುನಾವಣೆಯನ್ನು ಪ್ರಾದೇಶಿಕ ಐಡೆಂಟಿಟಿ ಮೇಲೆ ಸೆಣೆಸಲಿಕ್ಕಿದೆ ಎಂಬುದು ಸ್ಪಷ್ಟ. ಅದರಲ್ಲೂ ಪರೋಕ್ಷವಾಗಿ ವಿಲನ್ ಸ್ಥಾನದಲ್ಲಿ ನಿಲ್ಲಿಸಿರುವ ಸಂಗತಿ ಗಮನಿಸಿ. ಅದುವೇ ಗುಜರಾತ್. ನಾಳೆ ಚುನಾವಣೆ ಘೋಷಣೆ ಆಗುತ್ತಲೇ ಮಹಾರಾಷ್ಟ್ರಕ್ಕೆ ಬಂದು ಸಾಲು ಸಾಲು ಸಮಾವೇಶಗಳನ್ನು ಮಾಡಲಿಕ್ಕಿರುವವರು ನರೇಂದ್ರ ಮೋದಿ ಮತ್ತು ಅಮಿತ್ ಶಾ. ಇಬ್ಬರೂ ಗುಜರಾತಿಗರೇ. ಈ ಹಿನ್ನೆಲೆಯಲ್ಲಿ ಉದ್ಧವ ಠಾಕ್ರೆ ಹೂಡಿರುವ ಬಾಣ ಪ್ರಖರವಾಗಿಯೇ ಇದೆ. ಮಹಾರಾಷ್ಟ್ರಕ್ಕೆ ಬರುವುದೆಂದು ನಿರೀಕ್ಷಿಸಿದ್ದ 1.54 ಲಕ್ಷ ಕೋಟಿ ರುಪಾಯಿಗಳ ವೇದಾಂತ-ಫಾಕ್ಸಕಾನ್ ಸೆಮಿಕಂಡಕ್ಟರ್ ಘಟಕವು ಸೆಪ್ಟೆಂಬರ್ 2022ರಲ್ಲಿ ಗುಜರಾತಿಗೆ ಹೋಗಿದ್ದನ್ನು ನೆನಪಿಸಿ ಮಾತನಾಡಿದ್ದಾರೆ ಉದ್ಧವ ಠಾಕ್ರೆ.
ಬಿಜೆಪಿಗೇಕೆ ಕಷ್ಟವಾಗಲಿದೆ?
ಮಹಾರಾಷ್ಟ್ರದಲ್ಲಿ ಬಿಜೆಪಿಯ ಕಿಚಡಿ ಸರ್ಕಾರವಿದ್ದರೂ ಈಗಾಗಲೇ ಅಲ್ಲಿ ಅದು ಬಲಹೀನವಾಗಿದೆ. ಏಕೆಂದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ವಂತಬಲದಲ್ಲಿ ನಿರೀಕ್ಷಿತ ಸ್ಥಾನಗಳು ಬರದೇ ಇದ್ದಿರುವುದಕ್ಕೆ ಕಾರಣ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಅದರ ಕಳಪೆ ಪ್ರದರ್ಶನವೇ ಪ್ರಮುಖವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಮುಂಚೂಣಿ ನಾಯಕ ದೇವೇಂದ್ರ ಫಡ್ನವೀಸರನ್ನೇ ಮುನ್ನೆಲೆಯಲ್ಲಿರಿಸಿಕೊಂಡಿದ್ದರೆ ಸ್ಥಳೀಯ ಕಾರ್ಯಕರ್ತರಲ್ಲಿ ಸೋತಾಗಲೂ ಕುಗ್ಗದ ಉತ್ಸಾಹವಿರುತ್ತಿತ್ತೋ ಏನೋ. ಆದರೆ ಅವರನ್ನು ಬಿಜೆಪಿ ಹೈಕಮಾಂಡ್ ಬಲಹೀನವಾಗಿಸಿದ್ದಲ್ಲದೇ, ಖುದ್ದು ಫಡ್ನವೀಸ್ ಬೇಡ ಎಂದರೂ ಒಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಅವರನ್ನು ಶಿಂಧೆಯವರಿಗೆ ಡೆಪ್ಯುಟಿ ಆಗುವಂತೆ ಬಲವಂತ ಮಾಡಿ ಅವಮಾನಿಸಿತು. “ಕೆಲವೊಮ್ಮೆ ರಾಜಕೀಯ ಹೊಂದಾಣಿಕೆಗೆ ಹೀಗೆಲ್ಲ ಮಾಡಬೇಕಾಗುತ್ತದೆ” ಎಂದು ಸಮಾಧಾನಿಸುವಷ್ಟರಮಟ್ಟಿಗಿನ ನೈತಿಕತೆಯನ್ನೂ ಬಿಜೆಪಿ ಒಟ್ಟಾರೆ ಮಹಾರಾಷ್ಟ್ರ ವಿದ್ಯಮಾನದಲ್ಲಿ ಇರಿಸಿಕೊಳ್ಳಲಿಲ್ಲ.
ಫಡ್ನವೀಸ್ ಜಾಗದಲ್ಲಿ ಕುಳಿತ ಏಕನಾಥ ಶಿಂಧೆಗೆ ವೈಯಕ್ತಿಕ ವರ್ಚಸ್ಸು ಸಾಧ್ಯವಾಗಿಲ್ಲ. ಹೀಗಾಗಿಯೇ, ಉದ್ಧವ ಠಾಕ್ರೆ ಇವತ್ತು, ಗುಜರಾತಿಗೆ ಇಂಡಸ್ಟ್ರಿಗಳು ಸ್ಥಳಾಂತರವಾಗುವುದನ್ನು ನೋಡಿಕೊಂಡು ಶಿಂಧೆ ಸುಮ್ಮನಿದ್ದಾರೆ ಎಂದು ಹೇಳಿದರೆ ಹೆಚ್ಚಿನ ಜನಕ್ಕೆ ಹೌದೆನಿಸಬಹುದು. ಫಡ್ನವೀಸರನ್ನು ಬಿಜೆಪಿಯಲ್ಲಿ ಮೂಲೆಗೆ ತಳ್ಳುವಲ್ಲಿ ಮೋದಿಯವರ ನಂತರ ಸ್ಥಾನದಲ್ಲಿ ಬಿಂಬಿಸಿಕೊಂಡಿರುವ ಗುಜರಾತ್ ರಾಜಕಾರಣಿಯ ಪ್ರಭಾವವಿದೆ ಎಂಬ ಮಾತನ್ನು - ಅದು ಸುಳ್ಳೋ, ಸತ್ಯವೋ - ನಂಬುವವರ ಸಂಖ್ಯೆಯೂ ದೊಡ್ಡದಿದೆ. ಯಾರನ್ನು ಪರಮಭ್ರಷ್ಟ ಎಂದು ಮಹಾರಾಷ್ಚ್ರದಲ್ಲಿ ತನ್ನ ಅಸ್ತಿತ್ವದುದ್ದಕ್ಕೂ ಬಿಜೆಪಿ ವಿರೋಧಿಸಿಕೊಂಡುಬಂತೋ ಅಂಥ ಅಜಿತ್ ಪವಾರ್ ಅವರನ್ನು ಅಪ್ಪಿಕೊಂಡಿದ್ದು, ಕಾರ್ಗಿಲ್ ಹುತಾತ್ಮಯೋಧರಿಗೆ ಸೇರಬೇಕಿದ್ದ ವಸತಿನಿಲಯದಲ್ಲೂ ಭ್ರಷ್ಟಾಚಾರ ನಡೆಸಿದರು ಅಂತ ತಾನೇ ನಖಶಿಖಾಂತ ವಿರೋಧಿಸಿದ್ದ ಅಶೋಕ ಚವ್ಹಾಣರನ್ನು ತನ್ನದೇ ಟಿಕೆಟ್ಟಿನಲ್ಲಿ ರಾಜ್ಯಸಭೆಗೆ ಕಳುಹಿಸಿದ್ದು ಇಂಥವೆಲ್ಲ ಖುದ್ದು ಬಿಜೆಪಿ ಬೆಂಬಲಿಗರಲ್ಲೇ ಭ್ರಮನಿರಸನ ಮೂಡಿಸಿವೆ.
ಹೀಗೆ ಮಹಾರಾಷ್ಟ್ರದಲ್ಲಿ ಸ್ಥಳೀಯ ಬಿಜೆಪಿ ಎಂಬುದೇ ಅಸ್ಮಿತೆ ಕಳೆದುಕೊಂಡಿರುವಾಗ, ಇಂಥವನ್ನೆಲ್ಲ ಶಿವಾಜಿ ಹೆಸರಲ್ಲಿ ಮರೆಸುವುದಕ್ಕೆ ಪ್ರಯತ್ನವೆಂಬಂತೆ ಸಿಂಧುದುರ್ಗದಲ್ಲಿ ನಿರ್ಮಿಸಿದ್ದ ಛತ್ರಪತಿ ಪ್ರತಿಮೆ ಆರೇ ತಿಂಗಳಲ್ಲಿ ಕುಸಿದುಬಿದ್ದಿರುವ ಸಂದರ್ಭದಲ್ಲಿ, ಉದ್ಧವ ಠಾಕ್ರೆ ಹೂಡುತ್ತಿರುವ ಪ್ರಾದೇಶಿಕ ಐಡೆಂಟಿಟಿಯ ಸಮರವನ್ನು ಎದುರಿಸುವುದು ಬಿಜೆಪಿಗೆ ಈ ಬಾರಿ ಸುಲಭದಲ್ಲಿಲ್ಲ.
- ಚೈತನ್ಯ ಹೆಗಡೆ
cchegde@gmail.com
Advertisement