ಇತ್ತೀಚೆಗೆ ನಾವು ಪ್ಲಾಸ್ಮಾ ಥೆರಪಿ ಎಂಬ ಹೆಸರನ್ನು ಕೇಳುತ್ತಲೇ ಇರುತ್ತೇವೆ. ಪ್ಲಾಸ್ಮಾ ಥೆರಪಿಯನ್ನು ಸಾಮಾನ್ಯವಾಗಿ ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಇದು ವಿವಿಧ ಸ್ನಾಯು-ಮೂಳೆಗಳ ಸಮಸ್ಯೆಗಳಿಗೆ ಅದರಲ್ಲಿಯೂ ವಿಶೇಷವಾಗಿ ಮೊಣಕಾಲು ನೋವಿನ ಪರಿಹಾರಕ್ಕೆ ನೀಡುವ ನವೀನ ವೈದ್ಯಕೀಯ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಲ್ಲಿ ರೋಗಿಯ ರಕ್ತದ ಅಂಶಗಳನ್ನೇ ಸಮಸ್ಯೆಯ ಗುಣಪಡಿಸುವಿಕೆಯನ್ನು ಉತ್ತೇಜಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ಬಳಸಲಾಗುತ್ತಿದೆ.
ಪ್ಲಾಸ್ಮಾ ಥೆರಪಿ ಚಿಕಿತ್ಸೆಯಲ್ಲಿ ಮೊದಲಿಗೆ ರೋಗಿಯ ರಕ್ತವನ್ನು ಸ್ವಲ್ಪ ಪ್ರಮಾಣದಲ್ಲಿ ಹೊರತೆಗೆಯಲಾಗುತ್ತದೆ. ನಂತರ ಅದನ್ನು ಸಂಸ್ಕರಿಸಿ ಪ್ಲಾಸ್ಮಾವನ್ನು ತೆಗೆದುಕೊಳ್ಳಲಾಗುತ್ತದೆ. ಪ್ಲಾಸ್ಮಾ ಒಣಹುಲ್ಲಿನ-ಬಣ್ಣದ, ಪಾರದರ್ಶಕ ದ್ರವವಾಗಿದ್ದು ರಕ್ತದ ಪರಿಮಾಣದ ಸುಮಾರು ಶೇಕಡಾ 55ರಷ್ಟು ಭಾಗವನ್ನು ರೂಪಿಸುತ್ತದೆ. ಪ್ಲೇಟ್ಲೆಟ್-ಸಮೃದ್ಧ ಪ್ಲಾಸ್ಮಾವನ್ನು ನಂತರ ಸ್ನಾಯುರಜ್ಜು ಅಥವಾ ಮೃದ್ವಸ್ಥಿಯ ಹಾನಿಗೊಳಗಾದ ಭಾಗಕ್ಕೆ ಚುಚ್ಚಲಾಗುತ್ತದೆ.
ಲವಣಗಳು, ನೀರು, ಪ್ರೋಟೀನುಗಳು, ಲಿಪಿಡ್ ಮತ್ತು ಗ್ಲೂಕೋಸಿನಿಂದ ಮಾಡಲ್ಪಟ್ಟಿರುವ ಪ್ಲಾಸ್ಮಾ ಸೋಂಕನ್ನು ತಡೆಯುತ್ತದೆ; ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ; ಪೋಷಕಾಂಶಗಳನ್ನು ಸೂಕ್ತರೀತಿಯಲ್ಲಿ ಬೇಕಾದ ಭಾಗಗಳಿಗೆ ವಿತರಿಸುತ್ತದೆ ಮತ್ತು ದೇಹವು ಗಾಯದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ಲಾಸ್ಮಾವನ್ನು ನೋವು ಪೀಡಿತ ಮೊಣಕಾಲಿನ ಕೀಲಿಗೆ ಚುಚ್ಚಲಾಗುತ್ತದೆ. ಅಲ್ಲಿ ಇದು ಅಂಗಾಂಶ ದುರಸ್ತಿಯನ್ನು ಉತ್ತೇಜಿಸುತ್ತದೆ, ಚೇತರಿಕೆ ವರ್ಧಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೀಗೆ ಪ್ಲಾಸ್ಮಾ ಚಿಕಿತ್ಸೆ ಮೊಣಕಾಲು ನೋವಿಗೆ ಪರಿಹಾರ ನೀಡುತ್ತದೆ.
ಪ್ಲಾಸ್ಮಾ ಚಿಕಿತ್ಸೆಯನ್ನು ಸಾಮಾನ್ಯವಾಗಿ ಅಸ್ಥಿಸಂಧಿವಾತದಂತಹ (ಆಸ್ಟಿಯೋಪೋರೋಸಿಸ್) ಕ್ಷೀಣಿಸುವ ಕಾಯಿಲೆಗಳನ್ನು ಅನುಭವಿಸುತ್ತಿರುವ ರೋಗಿಗಳಿಗೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಅವರಿಗೆ ಪ್ಲಾಸ್ಮಾ ಮೃದ್ವಸ್ಥಿ/ಅಸ್ಥಿರಜ್ಜನ್ನು ಪುನರುತ್ಪಾದಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಸ್ನಾಯುರಜ್ಜು ಗಾಯಗಳನ್ನು ಗುಣಪಡಿಸುವಿಕೆಯನ್ನು ಪ್ಲಾಸ್ಮಾ ಉತ್ತೇಜಿಸುತ್ತದೆ. ಆರ್ತ್ರೋಸ್ಕೊಪಿ ಅಥವಾ ಅಸ್ಥಿರಜ್ಜು ದುರಸ್ತಿಯಂತಹ ಮೊಣಕಾಲಿನ ಶಸ್ತ್ರಚಿಕಿತ್ಸೆಗಳಿಂದ ಚೇತರಿಸಿಕೊಳ್ಳಲು ಪ್ಲಾಸ್ಮಾ ಚಿಕಿತ್ಸೆಯನ್ನು ಮಾಡುತ್ತಾರೆ.
ದೀರ್ಘಕಾಲದ ಮೊಣಕಾಲು ನೋವು ಇದ್ದವರಿಗೆ ಔಷಧಿಗಳು ಅಥವಾ ಭೌತಚಿಕಿತ್ಸೆಯಂತಹ ಸಾಂಪ್ರದಾಯಿಕ ಚಿಕಿತ್ಸೆಗಳಿಂದ ಪರಿಹಾರವನ್ನು ಕಂಡುಕೊಳ್ಳದವರಿಗೆ ಪ್ಲಾಸ್ಮಾ ಚಿಕಿತ್ಸೆಯು ಸಂಭಾವ್ಯ ಪರ್ಯಾಯ ಚಿಕಿತ್ಸಾ ಅವಕಾಶವನ್ನು ನೀಡಿದೆ. ಆಯುರ್ವೇದದ ಜಾನು ಬಸ್ತಿಯೂ ಈ ದಿಸೆಯಲ್ಲಿ ಸಹಾಯಕಾರಿಯಾಗಿದೆ.
ಪ್ಲಾಸ್ಮಾ ಚಿಕಿತ್ಸೆ ಪಡೆಯಲು ರೋಗಿಗಳು ಅರ್ಹರಿದ್ದಾರೆ ಎಂದು ವೈದ್ಯರು ಮೊದಲು ಗುರುತಿಸಬೇಕು. ಮೂಳೆ ತಜ್ಞರನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ ರಕ್ತದ ಕೆಲವು ಸಮಸ್ಯೆಗಳು ಅಥವಾ ಸೋಂಕುಗಳಿರುವ ರೋಗಿಗಳಿಗೆ ಈ ಕಾರ್ಯವಿಧಾನ ಹೊಂದುವುದಿಲ್ಲ.
ಪ್ಲಾಸ್ಮಾ ಥೆರಪಿ ಶಸ್ಟ್ರಚಿಕಿತ್ಸೆಯಲ್ಲದ ಚಿಕಿತ್ಸಾ ಆಯ್ಕೆಯಾಗಿದೆ. ಈ ಚಿಕಿತ್ಸೆಯಲ್ಲಿ ರೋಗಿಯ ಸ್ವಂತ ರಕ್ತವನ್ನು ಬಳಸುವುದರಿಂದ ಅಲರ್ಜಿ ಅಥವಾ ಇತರ ಅಪಾಯ ಆಗುವುದು ಕಡಿಮೆಯಾಗಿದೆ. ಅನೇಕ ರೋಗಿಗಳು ಪ್ಲಾಸ್ಮಾ ಥೆರಪಿ ಚುಚ್ಚುಮದ್ದನ್ನು ತೆಗೆದುಕೊಂಡ ನಂತರ ನೋವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ನೋವು ನಿವಾರಣೆಯ ಜೊತೆಗೆ ಈ ಚಿಕಿತ್ಸೆಯು ಮೊಣಕಾಲಿನ ಕಾರ್ಯವನ್ನು ಸುಧಾರಿಸುತ್ತದೆ. ಇದರ ಪರಿಣಾಮವಾಗಿ ಚಲನಶೀಲತೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಾಗುತ್ತದೆ.
ಕೆಲವು ಅಧ್ಯಯನಗಳು ಈ ಚಿಕಿತ್ಸೆಯ ಪ್ರಯೋಜನಗಳು ತಿಂಗಳುಗಳು ಅಥವಾ ವರ್ಷಗಳವರೆಗೆ ಉಳಿಯಬಹುದು ಎಂದು ಸೂಚಿಸಿವೆ. ಈ ಚಿಕಿತ್ಸೆಯ ನಂತರ ಉಂಟಾಗುವ ಅಡ್ಡ ಪರಿಣಾಮಗಳು ಕಡಿಮೆ ಇರುವುದರಿಂದ ಹಲವಾರು ಜನರು ಈ ಚಿಕಿತ್ಸೆಯ ಬಗ್ಗೆ ಇಂದು ಒಲವು ತೋರಿಸುತ್ತಿದ್ದಾರೆ. ಮೊಣಕಾಲು ನೋವನ್ನು ಹೋಗಲಾಡಿಸುವ ಜೊತೆಗೆ ಈ ಚಿಕಿತ್ಸೆಯನ್ನು ಭುಜ, ಮೊಣಕೈ ಮತ್ತು ಕೂದಲಿನ ಸಮಸ್ಯೆಗಳಿಗೂ ಪರಿಹಾರ ನೀಡಲು ಸಹ ಬಳಸಲಾಗುತ್ತದೆ.
ಈ ಚಿಕಿತ್ಸೆಯ ಮುಖ್ಯ ಗುರಿ ನೋವನ್ನು ಪರಿಹರಿಸುವುದು. ಚಿಕಿತ್ಸೆ ಪಡೆದ ನಂತರ ಕೆಲವು ವಾರಗಳಲ್ಲಿ ಆರಂಭಿಕ ಸುಧಾರಣೆಯನ್ನು ಕಾಣಬಹುದು, ಸುಧಾರಣೆ ಕ್ರಮೇಣ ಹೆಚ್ಚಾಗುತ್ತದೆ. ಸಂಶೋಧನಾ ಅಧ್ಯಯನಗಳು ಮತ್ತು ಕ್ಲಿನಿಕಲ್ ಅಭ್ಯಾಸವು ಈ ಚಿಕಿತ್ಸೆಯು ನೋವನ್ನು ನಿವಾರಿಸಲು ಮತ್ತು ರೋಗಿಗಳು ತಮ್ಮ ಸಾಮಾನ್ಯ ಜೀವನವನ್ನು ಮೊದಲಿನಂತೆ ನಡೆಸಬಹುದು ಮತ್ತು ಈ ದಿಸೆಯಲ್ಲಿ ಇದು ಬಹಳ ಪರಿಣಾಮಕಾರಿ ಎಂದು ತೋರಿಸಿದೆ. ಅಲ್ಟಾಸೌಂಡ್ ಮತ್ತು ಎಂ.ಆರ್.ಐ. ಚಿತ್ರಗಳು ಈ ಚಿಕಿತ್ಸೆಯ ನಂತರ ಅಂಗಾಂಶ ದುರಸ್ತಿ ಆಗಿರುವುದನ್ನು ತೋರಿಸಿ ನೋವನ್ನು ಗುಣಪಡಿಸುವ ಪ್ರಕ್ರಿಯೆಯನ್ನು ದೃಢೀಕರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಮೊಣಕಾಲು ನೋವಿಗೆ ಪ್ಲಾಸ್ಮಾ ಚಿಕಿತ್ಸೆಯು ಒಂದು ಆಶಾಕಿರಣವಾಗಿದೆ. ಆದರೆ ಇತರ ಯಾವುದೇ ವೈದ್ಯಕೀಯ ಚಿಕಿತ್ಸೆಯಂತೆ ವೈಯಕ್ತಿಕ ಅಗತ್ಯಗಳನ್ನು ನಿರ್ಣಯಿಸಲು ಮತ್ತು ನಿರ್ದಿಷ್ಟ ಪರಿಸ್ಥಿತಿಗಳಿಗೆ ಅನುಗುಣವಾಗಿ ಉತ್ತಮವಾದ ಚಿಕಿತ್ಸಾ ಕ್ರಮವನ್ನು ನಿರ್ಧರಿಸಲು ತಜ್ಞ ವೈದ್ಯರೊಂದಿಗೆ ರೋಗಿಗಳು ಮತ್ತು ಅವರ ಕುಟುಂಬದವರು ಸೂಕ್ತವಾಗಿ ಸಮಾಲೋಚಿಸುವುದು ಮುಖ್ಯವಾಗಿದೆ. ಇದೆಲ್ಲ ಆದ ನಂತರ ಅವರು ಈ ಚಿಕಿತ್ಸೆಯ ಆಯ್ಕೆ ಮಾಡಿಕೊಳ್ಳಬಹುದು.
Advertisement