
ಹಿಂದೊಮ್ಮೆ ಬರೆದಿದ್ದೆ. “ಒಂದು ಕಾಲದಲ್ಲಿ ಈ ಪ್ರಪಂಚದಲ್ಲಿ ಹಾಳುಮಾಡಲಿಕ್ಕೆ ಬಹಳಷ್ಟು ವಸ್ತುಗಳಿದ್ದವು. ಆದರೆ ಮಾಡುವ ಜನ ಕಡಿಮೆಯಿದ್ದರು. ಹಾಗಾಗಿ ಆ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು. ಪ್ರಪಂಚ ಎಂದರೆ ನಂದನವನ ಎನ್ನಬೇಕು, ಹಾಗೆ” ಅಂತ. ಹೌದು. ಬಹಳ ಹಿಂದೆ ಅಂಥದೊಂದು ಕಾಲ ಇತ್ತು. ಮನುಷ್ಯ ಆಗಷ್ಟೇ ಸಮೂಹಜೀವನವನ್ನು ಕಲಿತಿದ್ದ. ಅದರ ಹಲವು ಮುಖಗಳನ್ನು ಬೆರಗಿನ ಕಣ್ಣುಗಳಿಂದ ಅನ್ವೇಷಿಸುತ್ತಿದ್ದ. ಸಂಪನ್ಮೂಲಗಳಿಗೆ ಯಾವುದೇ ಕೊರತೆಯಿರಲಿಲ್ಲ. ಹೀಗಿರುವುದರಿಂದ ಅಲ್ಲಿನ ಜನ ಒಬ್ಬರಿಗೊಬ್ಬರು ಹೆಗಲಾಗಿದ್ದರು. ಎಲ್ಲ ಸಂಪನ್ಮೂಲಗಳೂ, ಜೀವನಾವಶ್ಯಕ ವಸ್ತುಗಳೂ ಒಂದು ರೀತಿಯಲ್ಲಿ ‘ಸಮುದಾಯದ ಆಸ್ತಿಗಳಾಗಿ’ ಉಪಯೋಗಿಸಲ್ಪಡುತ್ತಿದ್ದವು. ಅದೊಂದು ಆದರ್ಶ ಸ್ಥಿತಿ. ‘ಆದರ್ಶ ರಾಜ್ಯವಲ್ಲ. ಸ್ಥಿತಿ’. ಏಕೆಂದರೆ ಆಗ ರಾಜನೂ ಇರಲಿಲ್ಲ, ರಾಜ್ಯವೂ ಇರಲಿಲ್ಲ. ‘ಇದು ನನ್ನದು’ ಎನ್ನುವ possessive ಮನೋಭಾವಕ್ಕೆ ಅಲ್ಲಿ ಆಸ್ಪದವೇ ಇರಲಿಲ್ಲವಲ್ಲ! ಅಂದಮೇಲೆ ಅಲ್ಲಿ ವೈಮನಸ್ಯ, ದ್ವೇಷಗಳೆಲ್ಲಿ ಮತ್ತವುಗಳ ನೇರ ಫಲಗಳಾದ ಹಿಂಸೆ, ವಂಚನೆಗಳೆಲ್ಲಿ?
ಎಂತ? ಇವ ಒಳ್ಳೆ ಕತೆ ಕಟ್ಟಿ ಬಿಡ್ತಾ ಇದ್ದಾನೆ ಅಂದ್ರಾ?
ಉಹುಂ. ನೀವು ಈ ಹೊತ್ತಿಗೂ ಉತ್ತರ ‘ಅಮೇರಿಕಾದ ಮೂಲನಿವಾಸಿ’ಗಳನ್ನಾಗಲೀ, ಭಾರತದ ‘ಚಿತ್ತಗಾಂಗಿನ ಬುಡಕಟ್ಟಿನವರನ್ನಾಗಲೀ’ ಗಮನಿಸಿದರೆ ತಿಳಿಯುತ್ತದೆ. ಅವರಲ್ಲಿ ಎಲ್ಲರೂ ಸೇರಿ ಉಳುಮೆ ಮಾಡುತ್ತಾರೆ. ಅದರ ಫಲವನ್ನೂ ಎಲ್ಲರೂ ಸೇರಿಯೇ ಉಣ್ಣುವುದು. ‘ಒಮಾಹಾ ಬುಡಕಟ್ಟಿ’ನವರಲ್ಲಿ “ನಿಮ್ಮಲ್ಲಿ ಈ ಭೂಮಿಯ ಖಾಸಗೀ ಒಡೆತನದ ಪರಿಕಲ್ಪನೆ ಇಲ್ಲವಾ?” ಅಂತ ಕೇಳಿದರೆ ಅವರು ಪಿಳಿಪಿಳಿ ಕಣ್ಣುಬಿಡುತ್ತ ನಿಮ್ಮತ್ತ ನೋಡುತ್ತಾರೆ. “ಅಲ್ಲ ಮರ್ರೇ, ನಿಮಗೆಂತ ಮರ್ಲಾ? ನೆಲ ಅನ್ನೂದೂ ಈ ಗಾಳಿ, ಬೆಳಕು ಮತ್ತೆ ನೀರಿನ ಹಾಗೇ ಅಲ್ಲವಾ? ಅದು ಎಲ್ಲರಿಗೂ ಸೇರ್ತದೆ!” ಎಂದುಬಿಟ್ಟು ಹೋಗುತ್ತಾರೆ!!
ಬಹಳ ಒಳ್ಳೆಯದು. ಪ್ರಪಂಚ ಅಂದರೆ ಹೀಗೇ ಇರಬೇಕು. ಇರಬೇಕಿತ್ತು. ಆದರೇನು ಮಾಡೋಣ? ಕಾಲಕಳೆದಂತೆ ಇದರಲ್ಲೊಂದು ಅನಿರೀಕ್ಷಿತವಾದ ಪರಿವರ್ತನೆಯುಂಟಾಯಿತು. ಮನುಷ್ಯ ಹೆಚ್ಚು ಹೆಚ್ಚು ಸುತ್ತಲನ್ನು ಶೋಧಿಸತೊಡಗಿದಂತೆ ಒಂದಷ್ಟು ಜನಕ್ಕೆ ಒಂದಷ್ಟು ಸಂಪನ್ಮೂಲಗಳು ಹೆಚ್ಚಾಗಿ ದೊರೆಯುತ್ತ ಹೋಯಿತು. ಅಂದರೆ ಅದು ಉಳಿದವರಿಂದ ದೂರವಾಗತೊಡಗಿತು. ಕೆಲವರಿಗೆ ಕೆಲವು ಕಲೆಗಳು ಒಲಿದವು. ಇನ್ನುಳಿದವರು ಬದುಕುವ, ಗಳಿಸುವ ಹಲವು ಮಾರ್ಗಗಳನ್ನು ಕಂಡುಕೊಂಡರು. ಅದರಿಂದ ‘ಇದು ನನ್ನದು’ ಎನ್ನುವ ಮಮಕಾರ ಮತ್ತದರ ಪರಿಣಾಮವೇ ‘division of labor’ ಮತ್ತು ‘concentration of wealth’ ಎಂಬಲ್ಲಿಗೆ ‘ವಸುಧೈವ ಕುಟುಂಬಕಂ’ ಎನ್ನುವ ಆದರ್ಶವೂ ಮಕಾಡೆ ಮಲಗಿತು!
ಎಲ್ಲರಿಗೂ ಎಲ್ಲದಕ್ಕೂ ಹಕ್ಕಿರುವುದು ತಪ್ಪಲ್ಲ. ವಾಸ್ತವವಾಗಿ ಅದೊಂದು ಸಮಸ್ಯೆಯೇ ಅಲ್ಲ. ಆದರೆ ಹಾಗಿದ್ದಾಗಲೂ ಕೆಲವರು ಆ ಸಂಗತಿಗಳ ಮೇಲೆ ಇತರರಿಗಿರುವ ಹಕ್ಕನ್ನು ಕಡೆಗಣಿಸಿ ಅವುಗಳು ತಮಗೇ ಮೀಸಲು ಎನ್ನುವಂತೆ ನಡೆದುಕೊಳ್ಳುವುದು ಬಹುಪಾಲು ದುರಂತಗಳಿಗೆಲ್ಲ ಮೂಲ ಕಾರಣ. ಹಾಗಂತ ಒಂದು ಸಂಕೀರ್ಣವಾದ, ಬೆಳೆದುನಿಂತು, ಬಹಳ ಮುಂದುವರಿದ ಸಮಾಜದಲ್ಲಿ ಅದು ತೀರ ಸಹಜ. ಹಾಗೆ ಆಗುವುದನ್ನು ಬಿಟ್ಟರೆ ಸಮಾಜಕ್ಕೆ ಬೇರೆ ಮಾರ್ಗವೇ ಇಲ್ಲ! ಅದು ಹಾಗೆಯೇ ಆಗಬೇಕು, ಆಗುತ್ತದೆ ಕೂಡ. ತತ್ಪರಿಣಾಮವಾಗಿ ಮನುಷ್ಯರು ಒಂದು ರೀತಿಯ ‘ನಿರಂತರವಾದ ಸಂಘರ್ಷ’ದಲ್ಲಿ ತೊಡಗಿರುತ್ತಾರೆ. ಇದನ್ನೇ ಹದಿನೇಳನೇ ಶತಮಾನದ ಪ್ರಸಿದ್ಧ ಚಿಂತಕ ‘ಥಾಮಸ್ ಹಾಬ್ಸ್’ ತನ್ನ ‘Leviathan’ ಎನ್ನುವ ಕೃತಿಯಲ್ಲಿ ‘A state of continuous war’ ಎನ್ನುವುದಾಗಿ ಕರೆಯುತ್ತಾನೆ.
ಇದು ಆಗುವುದು ಏಕೆ? ಹಾಬ್ಸ್ ನ ಪ್ರಕಾರ ಮನುಷ್ಯ ಮೂಲಭೂತವಾಗಿ Evil. ದುಷ್ಟ. ಅವನಲ್ಲಿ ಯಾವಾಗಲೂ ಸ್ವಪ್ರತಿಷ್ಠೆ, ಪರರಿಗಿಂತ ತಾನು ಮೇಲಿರಬೇಕು (ಅದು ಅವರನ್ನು ಮೆಟ್ಟುವುದರಿಂದಲೇ ಆದರೆ ಬಹಳ ಸಂತೋಷ ಅವನಿಗೆ!) ಎನ್ನುವ ಭಾವಗಳು ತೀವ್ರವಾಗಿರುತ್ತವೆ. ಪ್ರಿಮಿಟಿವ್ ಸಮಾಜಗಳಲ್ಲಿ ಅವನ ಬುಡಕ್ಕೆ ಪ್ರಶ್ನೆ ಬರದೇ ಇರುವುದರಿಂದ ಆ ಪ್ರವೃತ್ತಿ ಹೊರಬರಲಿಕ್ಕೆ ಅವಕಾಶವಾಗುವುದಿಲ್ಲ. ಅಲ್ಲಿ ಅವಲಂಬನೆ ಅನಿವಾರ್ಯ. ಅದೇ ಒಮ್ಮೆ ಅವನಿಗೆ ಜೀವನಕ್ಕೆ ಮೂಲಭೂತವಾದ ಅಂಶಗಳ ಮೇಲೆ ಸ್ವಾಮ್ಯ ದಕ್ಕಿದರೆ ಬಣ್ಣ ಬಯಲಾಗುತ್ತದೆ! ಇದನ್ನು ಬರೆಯುವಾಗ ನನಗೆ ನನ್ನ ಅಪ್ಪ ಹೇಳಿದ ಮಾತೊಂದು ನೆನಪಾಗುತ್ತದೆ. ಈ ದೇಶದಲ್ಲಿ 1991ರಲ್ಲಿ ಜಾಗತೀಕರಣ ವ್ಯವಸ್ಥೆ ಬರುವವರೆಗೆ ಹಳ್ಳಿಗಳಲ್ಲಿ ಹೇಳುವಷ್ಟೇನೂ ಅನುಕೂಲವಂತರಲ್ಲದ ಅಕ್ಕಪಕ್ಕದ ಮನೆಯವರು ವ್ಯವಸಾಯಕ್ಕೆ ಬೇಕಾದ ಕತ್ತಿ, ಹಾರೆ, ಪಿಕ್ಕಾಸು ಇವುಗಳನ್ನೆಲ್ಲ ಪರಸ್ಪರ ಅವಶ್ಯಕತೆಯಿದ್ದಾಗ ಹಂಚಿಕೊಳ್ಳುತ್ತಿದ್ದರಂತೆ. ಹೇಗೆಂದರೆ “ನಾನು ಹಾರೆ ತಂದುಕೊಳ್ಳುತ್ತೇನೆ, ನಿನಗೆ ಬೇಕಾದಾಗ ಕೊಡುತ್ತೇನೆ. ನೀನು ಟಿಲ್ಲರ್ ತಂದುಕೋ, ನನಗೆ ಬೇಕಾದಾಗ ಕೊಡು” ಅಂತ. ಆದರೆ ಜಾಗತೀಕರಣ ಬಂದ ನಂತರ ಇವರ ಮಕ್ಕಳು ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಂಡರು. ಹಣದ ಹರಿವು ಹೆಚ್ಚಾಯಿತು. ಮಾರುಕಟ್ಟೆಯಲ್ಲಿ ವಸ್ತುಗಳ ಲಭ್ಯತೆಯೂ ಹೆಚ್ಚಾಯಿತು. ಹಾಗಾಗಿ ಅವಲಂಬನೆ ಕಮ್ಮಿಯಾಯಿತು. ‘ನಾ ಯಾಕೆ ಅವನಿಗೆ ಕೊಡಬೇಕು? ಬೇಕಿದ್ದರೆ ತಂದುಕೊಳ್ಳಲಿ’ ಎನ್ನುವುದು ಇವನಲ್ಲಿಯೂ, ‘ನಾ ಯಾಕೆ ಅವನ ಬಳಿ ಬೇಡಬೇಕು, ನಾನೇ ಕೊಳ್ಳುತ್ತೇನೆ’ ಎನ್ನುವುದು ಅವನಲ್ಲಿಯೂ ಬೆಳೆಯಿತು. ಅಲ್ಲಿಗೆ ಇವರ ಬಾಂಧವ್ಯ ‘ಓಂ ಶಾಂತಿ’!
ಈ ಈವಿಲ್ ಟೆಂಡೆನ್ಸಿ ಸಮಾಜಕ್ಕೆ ಮಾರಕ ಎನ್ನುವುದು ‘ಸಮಾಜಕ್ಕೇ ಗೊತ್ತಾಯಿತು’ (ನಾನು ಕಾನೂನಿನ ವಿದ್ಯಾರ್ಥಿಯಾಗಿಯೇ ಹೇಳುತ್ತೇನೆ. ಸಮಾಜ ಯಾವ ತೋಳಂಡರಾಯನ ಮಾತನ್ನೂ ಕೇಳುವುದಿಲ್ಲ. ಯಾವ ಶಾಸ್ತ್ರವಾಕ್ಯಕ್ಕೂ, ಕಾನೂನಿನ ಕಟ್ಟಳೆಗೂ ಬಗ್ಗುವುದಿಲ್ಲ. ಅದು ತನಗೆ ಇದು ಅವಶ್ಯಕ ಅಂತ ಅನ್ನಿಸಿದರೆ ಮಾತ್ರ ಯಾವುದಕ್ಕಾದರೂ ತೆರೆದುಕೊಳ್ಳುತ್ತದೆ. ಅದೂ ಸಮಾಜದ ಯಾವುದೋ ಒಂದು ಸೆಕ್ಶನ್ ಮಾತ್ರ. ಮತ್ತೊಂದು ಸೆಕ್ಶನ್ ಅದನ್ನು ವಿರೋಧಿಸಿಯೇ ತೀರುತ್ತದೆ. ಅವರನ್ನೇ ನಾವು ಕಾನೂನು ಬಾಹಿರ ಕೃತ್ಯ ಎಸಗುವವರು ಎನ್ನುವುದು. ಸಭ್ಯಸಮಾಜ ಒಪ್ಪಿದ, ಜೀವಸ್ನೇಹಿಯಾದ ಯಾವುದೋ ಪ್ರವೃತ್ತಿಗೆ ಒಂದು ಬಲವನ್ನು, ಅಧಿಕಾರವಾಣಿಯ ರೂಪವನ್ನು ನೀಡುವುದು ಮಾತ್ರ ಕಾನೂನುಗಳಿಗೂ, ಶಾಸ್ತ್ರಗಳಿಗೂ ಸಾಧ್ಯ). ಆಗ ಅದೊಂದು ನಿರ್ಧಾರಕ್ಕೆ ಬಂತು.
‘ಓಕೆ. ಈಗ ನಾವು ನಮ್ಮ ನಮ್ಮ ಹಕ್ಕುಗಳನ್ನು ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹಕ್ಕೆ ಬಿಟ್ಟುಕೊಡೋಣ. ಆ ವ್ಯಕ್ತಿ ದೈಹಿಕವಾಗಿ ಬಲಿಷ್ಠನಾಗಿರಬೇಕು. ಶಿಕ್ಷಿಸಲಿಕ್ಕೆ ಅದು ಅವಶ್ಯಕ. ತೀಕ್ಷ್ಣವಾದ ಬುದ್ಧಿಮತ್ತೆಯನ್ನು ಹೊಂದಿದವನಾಗಿರಬೇಕು ಅಂದರೆ ಸರಿ ಮತ್ತು ತಪ್ಪುಗಳನ್ನು ನಿರ್ಧರಿಸುವಂಥವನು, ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಲ್ಲವನಾಗಿರಬೇಕು. ಒಳ್ಳೆಯ ಮಾತುಗಾರನಾಗಿರಬೇಕು. ಯಾರನ್ನಾದರೂ ತನ್ನ ಮಾತಿನಿಂದ ಮರುಳು ಮಾಡುವಂಥ ಶಕ್ತಿ ಬೇಕು. ಕಲೆ ಒಲಿದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜೀವಪ್ರೇಮ ಇರಬೇಕು. ಇಂಥವನೊಬ್ಬನನ್ನ ಆಯ್ಕೆ ಮಾಡಿ ಅವನನ್ನು ‘ನಾಯಕ’, ‘ರಾಜ’ ಎನ್ನಬೇಕು. ಅವನಿಗೆ ನಾವು ನಮ್ಮ ಪರವಾಗಿ ಹಕ್ಕುಗಳನ್ನು ನೀಡಿದ್ದೇವೆ. ಅದನ್ನು ಅವನು ನಮ್ಮ ಪರವಾಗಿ ಬಳಸುತ್ತಾನೆ. ಹಾಗಾಗಿ ರಾಜ ಏನೇ ಮಾಡಿದರೂ ಅದು ಅವನು ಮಾಡಿದಂತಲ್ಲ. ನಾವೇ ಮಾಡಿದಂತೆ! ಅಕಸ್ಮಾತ್ ನಾಳೆ ಒಬ್ಬ ಅಪರಾಧ ಮಾಡಿದ ಅಂತ ರಾಜ ಅವನ ತಲೆ ಹಾರಿಸಿದರೆ ಅದು ರಾಜ ಅವನನ್ನು ಕೊಂದಂತಲ್ಲ.
ಅಪರಾಧಿಯೇ ತನ್ನನ್ನು ತಾನು ಕೊಂದುಕೊಂಡಂತೆ! ಏಕೆಂದರೆ “ಒಪ್ಪಂದ ಮಾಡಿಕೊಂಡೇ ನೀವು ನಿಮ್ಮ ಹಕ್ಕುಗಳನ್ನು ಅವನಿಗೆ ನೀಡಿದ್ದೀರಿ. ಈಗ ಅವನ ಮಾತು ನಿಮ್ಮದೇ ಮಾತು. ಅವನ ನಿರ್ಧಾರ ನಿಮ್ಮದೇ ನಿರ್ಧಾರ. ನಿಮ್ಮ ಪರವಾಗಿ ನಿಮ್ಮ ಅದನ್ನು ಅವನು ಬಳಸುತ್ತಿದ್ದಾನೆ” ಎಂದಮೇಲೆ ‘You are the author of your own punishment’! ಇದೇ ಜಗತ್ಪ್ರಸಿದ್ಧ ಥಾಮಸ್ ಹಾಬ್ಸ್ ಪ್ರಣೀತ ‘SOCIAL CONTRACT THEORY’. ಈ ಹೆಸರೇ ಏಕೆಂದರೆ ಇಲ್ಲಿ ಕರಾರು ಇರುವುದು ರಾಜ ಮತ್ತು ಪ್ರಜೆಗಳ ನಡುವೆ ಅಲ್ಲ. ಪ್ರಜೆಗಳ ಮಧ್ಯ ಮಾತ್ರ. ರಾಜನಿಗೆ ಇವರ ಒಪ್ಪಂದದ ಸೋಂಕಿಲ್ಲ! ‘ರಾಜ ಎಡವಲಾರ’ (The king can do no wrong) ಎನ್ನುವ ಸಿದ್ಧಾಂತಕ್ಕೆ ಮೂಲ ಇಲ್ಲಿ ಅಡಗಿದೆ….!
(ಇವನ ಯೋಚನೆಗಳಿಗಿಂತಲೂ ಭಿನ್ನವಾದ ರೀತಿಯಲ್ಲಿ ಇದೇ ಸಿದ್ಧಾಂತವನ್ನು ಜಾನ್ ಲಾಕ್ ಮತ್ತು ರೂಸೋ ಕೂಡ ಪ್ರತಿಪಾದಿಸಿದ್ದಾರೆ. ಅದಿಲ್ಲಿ ಬೇಡ. ಮತ್ತೆ ಯಾವಾಗಲಾದರೂ ಬರೆಯುತ್ತೇನೆ)
ಪಾಶ್ಚಾತ್ಯರ ಇಂಥದೊಂದು ಚಿಂತನೆಯನ್ನು ಕಂಡಾಗ ನಮ್ಮಲ್ಲಿ ಇದು ಇರಲಿಲ್ಲವೇ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. “ಈ ವೇದದಲ್ಲಿ ‘ಬಾಹೂ ರಾಜನ್ಯಃ ಕೃತಃ’ ಅಂತೆಲ್ಲ ಹೇಳಿದಾರಲ್ಲ! ಅಂದರೆ ರಾಜ ಕ್ರಿಶ್ಚಿಯನ್ನರು ಹೇಳುವಂತೆ ದೇವರಿಂದಲೇ ನೇರವಾಗಿ ಇಳಿದುಬಂದವ ಅನ್ನುವ ಕಲ್ಪನೆಯೇ ನಮ್ಮಲ್ಲಿಯೂ ಇತ್ತಾ?” ಎನ್ನುವ ಪ್ರಶ್ನೆ ಬರಬಹುದು. ಆದರೆ ಹಾಗಿಲ್ಲ. ಪುರುಷಸೂಕ್ತ ಈಗಾಗಲೇ ಅಸ್ತಿತ್ವದಲ್ಲಿರುವ ಒಂದು ಸ್ಥಿತಿಯನ್ನು ಹೇಳುತ್ತಿದೆ. ಅದು ಬಹಳ ಮುಂದಿನ ಮಾತು. ಆದರೆ ಈ ರಾಜ, ರಾಜ್ಯ, ರಾಜ್ಯಾಂಗಗಳು ಇವುಗಳ ಹುಟ್ಟು ಹೇಗೆ ಎನ್ನುವುದನ್ನು ಬಹಳ ಸ್ಪಷ್ಟವಾದ ಬಗೆಯಲ್ಲಿ ಕಾಣಬೇಕಿದ್ದರೆ ನಾವು ಮಹಾಭಾರತವನ್ನು ಆಶ್ರಯಿಸಬೇಕು.
ಶಾಂತಿಪರ್ವದ ಭೀಷ್ಮನ ಮಾತಿಗೆ ಭೂಮಿಕೆಯನ್ನೊದಗಿಸಲಿಕ್ಕೆ ಬೇಕಾಗಿ ಯುಧಿಷ್ಠಿರ ಕೇಳುತ್ತಾನೆ, “ಅಜ್ಜಾ, ಈ ರಾಜ ಎನ್ನುವ ಪರಿಕಲ್ಪನೆ ಹುಟ್ಟಿದ ಬಗೆಯೇನು? ಅವನೂ ಮನುಷ್ಯನೇ. ಅವನಿಗೂ ನಮ್ಮಂತೆಯೇ ಮಾಂಸ-ಮಜ್ಜೆಯೇ ಇರುವುದು. ನಮ್ಮಂತೆಯೇ ಬುದ್ಧಿಯೂ ಇರುವುದು. ರಾಜನಾದ ಮಾತ್ರಕ್ಕೆ ಸದಾ ಆತ ಸುಖಿಯೇ ಆಗಿರುತ್ತಾನೆ ಎಂದೇನೂ ಇಲ್ಲ. ಅವನಿಗೂ ದುಃಖವುಂಟಾಗುತ್ತದೆ. ಅವನೂ ಇಂದ್ರಿಯಗಳಿಗೆ ದಾಸನಾಗಿ ತಪ್ಪೆಸಗುತ್ತಾನೆ. ಹೀಗಿರುವಾಗ ಅವನಿಗೇಕೆ ಎಲ್ಲರೂ ವಿಧೇಯರಾಗಿರುತ್ತಾರೆ?”
ಕೃಷ್ಣನಿಗೂ, ಧರ್ಮಕ್ಕೂ, ವೇದಗಳಿಗೂ ಮತ್ತು ವೇದವಿದರಿಗೂ ನಮಸ್ಕರಿಸಿ ಭೀಷ್ಮ ನುಡಿದ,
“ನೈವ ರಾಜ್ಯಂ ನ ರಾಜಾಸೀತ್ ನ ದಂಡ್ಯೋ ನ ಚ ದಾಂಡಿಕಃ।
ಧರ್ಮೇಣ ಹಿ ಪ್ರಜಾಃ ಸರ್ವಾಃ ರಕ್ಷಂತಿ ಸ್ಮ ಪರಸ್ಪರಮ್॥”
ಅರ್ಥಾತ್, ಹಿಂದೆ ಒಂದು ಕಾಲವಿತ್ತು. ಅಲ್ಲಿ ರಾಜನಿರಲಿಲ್ಲ. ರಾಜ್ಯವೂ ಇರಲಿಲ್ಲ. ಇವರಿಬ್ಬರೂ ಬೇಕಾಗುವುದು ಯಾಕೆ? ದಾರಿತಪ್ಪಿದವನಿಗೆ ಹದಹಾಕಲಿಕ್ಕೆ. ಆದರೆ ತಪ್ಪು ಮಾಡುವವರೇ ಇರಲಿಲ್ಲವಲ್ಲ! ‘ನ ದಂಡ್ಯಃ’ ದಂಡಕ್ಕೆ ಒಳಗಾಗಬೇಕಾದವನೇ ಇರಲಿಲ್ಲ! ಅಂದರೆ ಅರ್ಥ, ಜನರೆಲ್ಲ ತಮ್ಮ sense of moralityಯನ್ನು ಯೋಗ್ಯವಾಗಿ ದುಡಿಸಿಕೊಳ್ಳುತ್ತ ಒಬ್ಬರಿಗೊಬ್ಬರು ಬೆನ್ನಾಗಿ ಬದುಕುತ್ತಿದ್ದರು ಅಂತ. (ತಾವು ದಯಮಾಡಿ ಗಮನಿಸಿ. ಇಲ್ಲಿ ಧರ್ಮ ಎನ್ನುವ ಪದದ ‘ಧಾರಣಾತ್ ಧರ್ಮ ಇತ್ಯಾಹುಃ, ಧರ್ಮೋ ಧಾರಯತಿ ಪ್ರಜಾಃ’ ‘ಯಾವುದು ಪೋಷಿಸುತ್ತದೆಯೋ ಅದು ಧರ್ಮ’ ಎನ್ನುವ ನಿಜವಾದ ಅರ್ಥ ಬಹಳ ಸ್ಪಷ್ಟವಾಗಿ ಸಂದರ್ಭಸಹಿತವಾಗಿ ಕಾಣುತ್ತಿದೆ)
ಆದರೇನಾಯಿತು? ಎಲ್ಲವೂ ಬದಲಾಯಿತು. ಸಮಾಜ ಸಂಕೀರ್ಣವಾಗುತ್ತ ಜನರಲ್ಲಿ ಕಾಮ, ಕ್ರೋಧ, ಮೋಹಗಳು ಆವರಿಸಿದವು. ಪರಿಣಾಮವಾಗಿ ಧರ್ಮ ಲೋಪವಾಯಿತು. ಆಗ ಅವರಿಗೆ ಒಬ್ಬ ಧಾರ್ಮಿಕನಾದ ನಾಯಕನ, ಆಡಳಿತ ಸಂಸ್ಥೆಯ ಅವಶ್ಯಕತೆ ತೋರಿಬಂತು. ಅದರ ಪರಿಣಾಮವೇ ‘ವೇನನ ದೇಹದ ಮಥನ ಮತ್ತು ಪೃಥುರಾಜನ ಉತ್ಪತ್ತಿ’. ಈ ಪೃಥು ಹುಟ್ಟಿದಾಕ್ಷಣ ‘ನಾನೀಗ ಏನು ಮಾಡಬೇಕು?’ ಅಂತ ಕೇಳಿದ. ಋಷಿಗಳೆಂದರು, ‘ನಿಯತಂ ಯತ್ರ ಧರ್ಮೋ ವೈ ತಮಶಂಕಃ ಸಮಾಚರ’ ‘ಯಾವುದರಲ್ಲಿ ಧರ್ಮವಿದೆಯೋ ಅದನ್ನು ನಿಶ್ಶಂಕೆಯಿಂದ ಆಚರಿಸು’. ಅಂದರೆ? ‘ನೀನು ‘ಜನರ ಧರ್ಮದ’ ಮೂರ್ತಿ. ಅವರ ಪ್ರತಿನಿಧಿ. ಅದನ್ನು ಬಿಟ್ಟ ಬೇರೆ ಅಸ್ತಿತ್ವ ನಿನಗಿಲ್ಲ. ನೀನು ಧರ್ಮಿಷ್ಠನಾಗಿದ್ದರೆ ಮಾತ್ರ ಅವರು ಧರ್ಮಿಷ್ಠರಾಗಿರುವುದು ಸಾಧ್ಯ’ ಈ ಧರ್ಮದಲ್ಲಿಯೇ ಪ್ರಜೆಗಳ ಪರವಾಗಿ ತಪ್ಪಿತಸ್ಥರನ್ನು ಶಿಕ್ಷಿಸುವುದು, ಸಂಪತ್ತಿನ ವಿನಿಯೋಗ (ರಾಜನ ಯಜ್ಞವು ಇದೇ ಸಂಪತ್ತಿನ ಮರುಹಂಚಿಕೆಯ (Wealth Redistribution) ಒಂದು ವಿಧಾನ), ನಾಡಿನ ರಕ್ಷಣೆ, ಮತ್ತು ಜನರು ನಂಬಿರುವ ಧರ್ಮದ ರಕ್ಷಣೆ ಇವೆಲ್ಲ ಸೇರಿವೆ.
ಅಂದರೆ ಥಾಬ್ಸ್ನ ಸಿದ್ಧಾಂತದಲ್ಲಿರುವಂತೆ ನಮ್ಮಲ್ಲಿ ರಾಜ ತಪ್ಪೆಸಗಲಾರ ಎನ್ನುವುದಿಲ್ಲ. ಪ್ರಜೆಗಳಿಗೆ ಅವನು ಉತ್ತರದಾಯಿಯಾಗಬೇಕಾದ ಅವಶ್ಯಕತೆಯಿಲ್ಲ ಎಂಬುದಿಲ್ಲ. ಏಕೆಂದರೆ ಧರ್ಮಶಾಸ್ತ್ರ ಹೇಳುತ್ತದೆ, “ಪುಣ್ಯಾತ್ತದ್ಭಾಗಮಾಧತ್ತೇ ನ್ಯಾಯ್ಯೇನ ಪರಿಪಾಲಯನ್” ಅಂದರೆ ಪ್ರಜೆಗಳನ್ನು ನ್ಯಾಯವಾಗಿ ಪರಿಪಾಲಿಸುವವನಿಗೆ ಅವರ ಪುಣ್ಯದಲ್ಲಿಯೂ ಭಾಗ ಬರುತ್ತದೆ. ಹಾಗೆ ರಕ್ಷಿಸದಿದ್ದರೆ ಅವರ ಪಾಪದಲ್ಲಿ ಅರ್ಧ ಇವನನ್ನು ಸೇರಿಬಿಡುತ್ತದೆ! ಅಂದರೆ ಇಲ್ಲಿ ‘ಸೋಶಿಯಲ್ ಕಾಂಟ್ರಾಕ್ಟ್’ ಬೇರೆ ರೂಪವನ್ನು ತಾಳಿದೆ. ಪ್ರಜೆಗಳ ಜೊತೆ ರಾಜನೂ ಒಪ್ಪಂದದಲ್ಲಿ ಭಾಗೀದಾರನಾಗಿದ್ದಾನೆ!
‘ಯಥಾ ರಾಜಾ ತಥಾ ಪ್ರಜಾ’ ಎನ್ನುವ ಮಾತು ಇರುವುದು ಇದರ ಮರೆಯಲ್ಲಿ!
ಶಾಂತಿಪರ್ವದ ಈ ಸಂಭಾಷಣೆ ಸೋಶಿಯಲ್ ಕಾಂಟ್ರಾಕ್ಟ್ ಥಿಯರಿಯ ಪಕ್ಕಾ ಭಾರತೀಯ ನರೇಟಿವ್. Will Durantನ Story of Civilization ಮತ್ತು ಹಾಬ್ಸನ Leviathanಗಳು ವಿಸ್ತರಿಸುವ ಈ anthropological development ನ್ನೇ ಮಹಾಭಾರತ ಶಾಂತಿಪರ್ವದ ಮೂಲಕವಾಗಿ ವ್ಯಾಸರು ಕಟ್ಟಿಕೊಟ್ಟಿದ್ದಾರೆ ಎನ್ನುವುದನ್ನು ಕಾಣುವಾಗ ನಿಜಕ್ಕೂ ನಮ್ಮವರ ತರ್ಕಶುದ್ಧವಾದ ದೃಷ್ಟಿಯ ಕುರಿತಾಗಿ ಹೆಮ್ಮೆಯಾಗದಿರದು. ಮುಂದುವರಿದು ನಮ್ಮವರು ರಾಜನನ್ನು ಅವನು ಧರ್ಮದಲ್ಲಿ ನಡೆದರೆ ಮಾತ್ರ ‘ಪ್ರತ್ಯಕ್ಷ ದೇವತಾ’ ಎಂದರೇ ಹೊರತು ಅವನು ಬಂದದ್ದೇ ದೇವರಿಂದ ಹಾಗಾಗಿ ಆತ ಏನು ಮಾಡಿದರೂ ಸರಿ ಎನ್ನುವ ಧೋರಣೆಯನ್ನು ಹೊಂದಿರಲಿಲ್ಲ ಎನ್ನುವುದು ಹಾಬ್ಸನ ಸಿದ್ಧಾಂತಕ್ಕಿಂತ ನಮ್ಮವರು ಒಂದು ಹೆಜ್ಜೆ ಮುಂದೆ ಇದ್ದರು ಎನ್ನಲಿಕ್ಕೂ ಅಡ್ಡಿಯಿಲ್ಲ!
ಇವತ್ತಿಗೆ ಇಷ್ಟು ಸಾಕು. ಮುಂದಿನ ಬಾರಿ ಜಾನ್ ಲಾಕ್ನಲ್ಲಿ ಯಾರಾದರೂ ಶಾಸ್ತ್ರಕಾರ ಅಡಗಿದ್ದಾನೆಯೇ ಅಂತ ಹುಡುಕಿಕೊಂಡು ಬರುತ್ತೇನೆ. ಮತ್ತೆ ಸಿಗೋಣ!
(ಪೃಥು ವೇನನ ತೊಡೆಯಿಂದ ಹುಟ್ಟಿದ ಸರಿ. ಆದರೆ ಅವನಿಗಿಂತ ಮುಂಚೆ ವೇನನ ಬಲಗೈಯನ್ನು ಕಡೆದದ್ದರಿಂದ ನಿಷಾದ ಹುಟ್ಟಿದ. ಅವನು ಮ್ಲೇಚ್ಛರಿಗೆ ರಾಜ. ಅಂದರೆ ‘virtue and vice’, ‘ಧರ್ಮಪಾಲಕ ಮತ್ತು ಧರ್ಮಭಂಜಕ’ ಇಬ್ಬರು ಒಂದೇ ಮೂಲದಲ್ಲಿದ್ದಾರೆ ಎನ್ನುವ ಕಟುವಾಸ್ತವಕ್ಕೆ ಭಾರತೀಯರು ಕುರುಡಾಗಿಲ್ಲ. ಇದು ನಾನು ಮೇಲೆ ತಿಳಿಸಿದ ಸಮಾಜದ ಮೂಲಭೂತ ಗುಣಕ್ಕೆ ಮತ್ತಷ್ಟು ಇಂಬುಗೊಡುತ್ತದೆ)
- ನಚಿಕೇತ್ ಹೆಗಡೆ
nachikethegde266@gmail.com
Advertisement