INS ಅರಿಘಾತ್ ಮತ್ತು ಅಗ್ನಿ-4 ಸೇರ್ಪಡೆ: ಭಾರತದ ಪರಮಾಣು ಭದ್ರತೆಯ ನವಯುಗಕ್ಕೆ ನಾಂದಿ
ಭಾರತ ಬಳಿ ವಿಶಾಲ ವ್ಯಾಪ್ತಿಯ ಅಗ್ನಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಗ್ರಹವೇ ಇದೆ. ಅಗ್ನಿ-1 ಕ್ಷಿಪಣಿ ಅಂದಾಜು 700 ಕಿಲೋಮೀಟರ್ (435 ಮೈಲಿ) ವ್ಯಾಪ್ತಿ ಹೊಂದಿದ್ದರೆ, ಅಗ್ನಿ-2 ಕ್ಷಿಪಣಿ 2,000 ಕಿಲೋಮೀಟರ್ ತನಕ ವ್ಯಾಪ್ತಿ ಹೊಂದಿದೆ. ಅಗ್ನಿ-3 ಮತ್ತು ಅಗ್ನಿ-4 ಕ್ಷಿಪಣಿಗಳು 2,500ರಿಂದ 3,500 ಕಿಲೋಮೀಟರ್ ತನಕದ ವ್ಯಾಪ್ತಿ ಹೊಂದಿವೆ. ಅತ್ಯಂತ ಆಧುನಿಕವಾದ ಅಗ್ನಿ-5 ಕ್ಷಿಪಣಿ 5,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.
ಅಗ್ನಿ-4 ಕ್ಷಿಪಣಿ ಪರೀಕ್ಷೆ
ಸೆಪ್ಟೆಂಬರ್ 6, 2024ರಂದು, ಭಾರತದ ರಕ್ಷಣಾ ಸಚಿವಾಲಯ ಅಗ್ನಿ-4 ಇಂಟರ್ ಮೀಡಿಯೆಟ್ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒಡಿಶಾದ ಚಂಡೀಪುರದ ಇಂಟಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಘೋಷಿಸಿತು. ಈ ಉಡಾವಣೆಯ ಮೂಲಕ ಕ್ಷಿಪಣಿ ಎಲ್ಲ ಕಾರ್ಯಾಚರಣಾ ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಿತು. ಈ ಸಾಧನೆಯ ಬೆನ್ನಲ್ಲೇ ಭಾರತ ಸಬ್‌ಮರೀನ್‌ಗಳಿಂದ ಉಡಾವಣೆಗೊಳಿಸಬಲ್ಲ ಹೊಸ ಮಾದರಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸುತ್ತಿದೆ.
ಈ ಹಿಂದೆ ಅಗ್ನಿ-2 ಪ್ರೈಮ್ ಎಂದು ಪರಿಚಿತವಾಗಿದ್ದ ಅಗ್ನಿ-4 ಕ್ಷಿಪಣಿ ಅಂದಾಜು 20 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವಿದ್ದು, ಅಂದಾಜು 17,000 ಕೆಜಿಯಷ್ಟು ಉಡಾವಣಾ ತೂಕ ಹೊಂದಿದೆ. ಇದು ಭಾರತದ ಕ್ಷಿಪಣಿಗಳ ಬತ್ತಳಿಕೆಗೆ ಸೇರ್ಪಡೆಗೊಂಡ ಇನ್ನೊಂದು ಬಲಶಾಲಿ ಆಯುಧವಾಗಿದ್ದು, ದೇಶದ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಹೆಚ್ಚಿಸಿದೆ.
ಭೂಮಿಯಿಂದ ಭೂಮಿಗೆ ಉಡಾವಣೆಗೊಳಿಸುವ ಕ್ಷಿಪಣಿಯಾದ ಅಗ್ನಿ-4 ಒಂದು ಮೊಬೈಲ್, ಎರಡು ಹಂತಗಳ ಘನ ಇಂಧನ ವ್ಯವಸ್ಥೆಯನ್ನು ಹೊಂದಿದೆ. ಈ ಕ್ಷಿಪಣಿ ಗರಿಷ್ಠ 1,000 ಕೆಜಿಯಷ್ಟು ತೂಕದ ಪೇಲೋಡ್ ಒಯ್ಯಬಲ್ಲದಾಗಿದ್ದು, ರೋಡ್ - ಮೊಬೈಲ್ ವೇದಿಕೆಯಿಂದ ಉಡಾವಣೆಗೊಳಿಸಬಹುದಾಗಿದೆ. ಇದರ ಸುಲಭ ಸಂಚಾರ ಮತ್ತು ಘನ ಇಂಧನ ವ್ಯವಸ್ಥೆ ಕ್ಷಿಪಣಿಯ ಬಹುಮುಖತೆ ಮತ್ತು ಸಿದ್ಧತೆಯನ್ನು ಹೆಚ್ಚಿಸಿದೆ.
ಕಾರ್ಯತಂತ್ರದ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-4 ಕ್ಷಿಪಣಿ ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಿದೆ. ಈಶಾನ್ಯ ಭಾರತದಿಂದ ಉಡಾವಣೆಗೊಳಿಸಿದರೆ, ಅಗ್ನಿ-4 ಕ್ಷಿಪಣಿ ಚೀನಾದ ಬಹುತೇಕ ಪ್ರದೇಶಗಳನ್ನು ತಲುಪಬಲ್ಲ ವ್ಯಾಪ್ತಿ ಹೊಂದಿದ್ದು, ಆ ಮೂಲಕ ಭಾರತದ ರಕ್ಷಣಾ ಕಾರ್ಯತಂತ್ರಕ್ಕೆ ಅತ್ಯಂತ ಮುಖ್ಯವಾಗಿದೆ.
2012ರಲ್ಲಿ, ಅಗ್ನಿ-4 ಕ್ಷಿಪಣಿ ಕೇವಲ 20 ನಿಮಿಷಗಳ ಅವಧಿಯಲ್ಲಿ 3,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿಯನ್ನು ಸಂಚರಿಸಿತ್ತು.
ಐಎನ್ಎಸ್ ಅರಿಘಾತ್ ಸೇರ್ಪಡೆ
ಆಗಸ್ಟ್ 29ರಂದು ಭಾರತ ತನ್ನ ಎರಡನೇ, 6,000 ಟನ್ ತೂಕದ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮರೀನ್ (ಎಸ್ಎಸ್‌ಬಿಎನ್) ಆದ ಐಎನ್ಎಸ್ ಅರಿಘಾತ್ ಅನ್ನು ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್‌ಗೆ (ಎಸ್ಎಫ್‌ಸಿ) ಸೇರ್ಪಡೆಗೊಳಿಸಿತು. ಇದರ ಹಿಂದಿನ ಸಬ್‌ಮರೀನ್ ಆದ ಐಎನ್ಎಸ್ ಅರಿಹಂತ್ 750 ಕಿಲೋಮೀಟರ್ ವ್ಯಾಪ್ತಿಯ ಕೆ-15 ಕ್ಷಿಪಣಿಗಳನ್ನು ಹೊಂದಿದ್ದರೆ, ಐಎನ್ಎಸ್ ಅರಿಘಾತ್ 3,000 ಕಿಲೋಮೀಟರ್ ದೂರ ಸಾಗಬಲ್ಲ ಕೆ-4 ಕ್ಷಿಪಣಿಗಳನ್ನು ಹೊಂದಿದೆ.
ಭಾರತದ ಮೂರನೇ ಎಸ್ಎಸ್‌ಬಿಎನ್ ಆಗಿರುವ ಐಎನ್ಎಸ್ ಅರಿದಮನ್ ಮುಂದಿನ ವರ್ಷದ ಆರಂಭದಲ್ಲಿ ನೌಕಾಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಗಳಿವೆ. ಈ ಸಬ್‌ಮರೀನ್ ಅಂದಾಜು 7,000 ಟನ್ ತೂಕ ಹೊಂದಿದ್ದು, ಹಿಂದಿನ ಎರಡು ಸಬ್‌ಮರೀನ್‌ಗಳಿಗಿಂತ ದೊಡ್ಡದಾಗಿದ್ದು, ಹೆಚ್ಚು ದೀರ್ಘ ವ್ಯಾಪ್ತಿಯ ಪರಮಾಣು ಕ್ಷಿಪಣಿಗಳನ್ನು ಒಯ್ಯಬಲ್ಲದು.
ಅಗ್ನಿ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ನಿರ್ಮಿಸಿ, ಅಭಿವೃದ್ಧಿ ಪಡಿಸಿದೆ. ಡಿಆರ್‌ಡಿಓ ಈಗ ಅಗ್ನಿ-6 ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ನೂತನ ಕ್ಷಿಪಣಿ ಗರಿಷ್ಠ 10,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಸಬ್‌ಮರೀನ್‌ಗಳಿಂದಲೂ ಉಡಾವಣೆಗೊಳಿಸಬಹುದಾದ ಕ್ಷಿಪಣಿಯಾಗಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ