ಸುದೀರ್ಘ ಕದನಕ್ಕೊಂದು ಕಡೆಗೂ ತಾತ್ಕಾಲಿಕ ವಿರಾಮ ಬಿದ್ದಿದೆ. ಆದರೆ ಇದು ಇಲ್ಲಿಗೇ ನಿಲ್ಲುತ್ತಾ… ? ಮತ್ತೆ ಮುಂದುವರಿದೀತೆ?
ರಾಜ್ಯ ಬಿಜೆಪಿಯಲ್ಲಿ ಸುದೀರ್ಘ ಕಾಲದಿಂದ ಗುಂಪುಗಳ ಕಿತ್ತಾಟ ಬಹಿರಂಗವಾಗೇ ನಡೆದಿದ್ದರೂ ಮೌನವಾಗಿದ್ದ ಸಂಘ ಪರಿವಾರದ ಪ್ರಮುಖರು ಕಡೆಗೂ ಎಚ್ಚೆತ್ತು ಮಧ್ಯ ಪ್ರವೇಶಿಸಿ ಎರಡೂ ಬಣಗಳ ನಾಯಕರುಗಳನ್ನು ಕರೆದು ಸಂಧಾನ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಗುರುವಾರ ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ಸಂಧಾನದ ನಂತರವೂ ಬಣ ಬಡಿದಾಟ ನಿಂತಿಲ್ಲ. ಮೇಲ್ನೋಟಕ್ಕೆ ಒಮ್ಮತ ಮೂಡಿರುವಂತೆ ಕಂಡರೂ ಆಂತರಿಕವಾಗಿ ಹೊಗೆಯಾಡುತ್ತಿದೆ ಎಂಬುದು ಈ ಮಾತುಕತೆಯ ನಂತರದ ಬೆಳವಣಿಗೆಗಳನ್ನು ಕಂಡವರಿಗೆ ಗೋಚರಿಸುತ್ತದೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆ ನಂತರದ ಪರಿಸ್ಥಿತಿ ಅರಿಯಲು ಅಲ್ಲಿಗೆ ತೆರಳಿದ್ದ ಬಿಜೆಪಿ ಮುಖಂಡರು ಒಟ್ಟಾಗಿ ತೆರಳುವ ಬದಲು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ತೆರಳಿದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ತಮ್ಮ ಆಪ್ತರೊಂದಿಗೆ ಪ್ರತ್ಯೇಕವಾಗಿ ಸ್ಥಳಕ್ಕೆ ತೆರಳಿ ಘಟನೆಯ ಪರಿಸ್ಥಿತಿ ಅಧ್ಯಯನ ನಡೆಸಿದ್ದಾರೆ. ಸಂಘ ಪರಿವಾರ ಭಿನ್ನಮತಕ್ಕೆ ಏನೇ ತೇಪೆ ಹಚ್ಚಿದರೂ ಅದು ಮುಂದಿನ ದಿನಗಳಲ್ಲಿ ಕಾಯಂ ಆಗಿ ಉಳಿಯುವುದಿಲ್ಲ ಎಂಬುದು ಈ ಘಟನೆಗಳಿಂದ ಋಜುವಾತಾಗಿದೆ.
ವಿಜಯೇಂದ್ರ ಬಿ.ಜೆ.ಪಿರಾಜ್ಯಾಧ್ಯಕ್ಷರಾದ ನಂತರ ಪಕ್ಷದ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ಪ್ರತ್ಯೇಕ ಗುಂಪಿನ ಅಸ್ತಿತ್ವ ಕಾಪಾಡಿಕೊಳ್ಳುತ್ತಿದ್ದಾರೆ, ಇದರಿಂದ ಪಕ್ಷದ ಸಂಘಟನೆಗೆ ಅಡ್ಡಿಯಾಗಿದೆ ಎಂಬುದು ಅವರ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ , ಬಸವನಗೌಡ ಪಾಟೀಲ ಯತ್ನಾಳ್, ಹರಿಹರ ಶಾಸಕ ಹರೀಶ್ ಮತ್ತಿತರರ ಆರೋಪ ಇತ್ತೀಚೆಗೆ ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಎಂದರೆ ಮಾಜಿ ಸಂಸದ ಪ್ರತಾಪ ಸಿಂಹ. ಮತ್ತೊಬ್ಬ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತ್ರ ಒಮ್ಮೆ ಭಿನ್ನಮತೀಯರ ಕಡೆ ಮತ್ತೊಮ್ಮೆ ಅಧ್ಯಕ್ಷ ವಿಜಯೇಂದ್ರ ಕಡೆ ಗುರುತಿಸಿಕೊಳ್ಳುತ್ತ ದ್ವಂದ್ವದಲ್ಲಿದ್ದಾರೆ. ಒಂದು ಖಚಿತವಾದ ನಿರ್ಧಾರಕ್ಕೆ ಬರಲು ಅವರಿಗೆ ಆಗುತ್ತಿಲ್ಲ. ಅವರದ್ದು ಮುಂದಿನ ವಿಧಾನಸಭೆ ಕಡೆಗೆ ದೃಷ್ಟಿ.
ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರೋಧ ಕಟ್ಟಿಕೊಂಡರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಟಾಗಬಹುದು, ಈಗಾಗಲೇ ಒಂದು ಬಾರಿ ಯಡಿಯೂರಪ್ಪ ಕೋಪಕ್ಕೆ ತುತ್ತಾಗಿ ಚುನಾವಣೆಯಲ್ಲಿ ಸೋತಾಗಿದೆ. ಬರೀ ಪಕ್ಷದ ಸಿದ್ಧಾಂತವೊಂದನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ವಿಜಯೇಂದ್ರ ವಿರೋಧಿ ಪಾಳೇಯದಲ್ಲಿ ಗುರುತಿಸಿಕೊಂಡರೆ ಇಡೀ ಲಿಂಗಾಯಿತ ಸಮುದಾಯ ಕ್ಷೇತ್ರದಲ್ಲಿ ತನ್ನ ವಿರುದ್ಧ ತಿರುಗಿ ಬೀಳಬಹುದು. ಹಾಗೇನಾದರೂ ಆದರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗಬಹುದು. ಪುನಃ ಸೋತರೆ ಮುಖ್ಯಮಂತ್ರಿ ಆಗಬೇಕೆಂಬ ಕನಸು ಈಡೇರುವುದಿರಲಿ ರಾಜಕೀಯ ಭವಿಷ್ಯವೇ ಮಸುಕಾಗುತ್ತದೆ ಎಂಬ ಆತಂಕ ಅವರದ್ದು. ಹಾಗಾಗೇ ಒಂದು ಖಚಿತ ತೀರ್ಮಾನಕ್ಕೆ ಬರಲಾಗದೇ ಗೊಂದಲಕ್ಕೊಳಗಾಗಿದ್ದಾರೆ.
ಇನ್ನುಳಿದಂತೆ ಕಾರ್ಕಳದ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಮೊದಲಿನಿಂದಲೂ ಸಂಘಟನೆ ಮತ್ತು ಸಿದ್ಧಾಂತಗಳಿಗೆ ಅಂಟಿಕೊಂಡವರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತು ತೀವ್ರ ಅಸಮಾಧಾನಗಳಿದ್ದರೂ ಅದನ್ನು ಪಕ್ಷದ ನೀತಿ ನಿಯಮಗಳನ್ನು ಮೀರಿ ಹೊರಗೆ ಪ್ರದರ್ಶಿಸಿದವರಲ್ಲ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದರೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅವಕಾಶ ಇಲ್ಲ, ಈ ವಿಚಾರದಲ್ಲಿ ಅವರಿಗೆ ವಿಜಯೇಂದ್ರ ಕುರಿತು ಅಸಮಧಾನವಿದೆ. ಹೀಗಾಗಿ ತಮ್ಮ ಕ್ಷೇತ್ರದ ಚಟುವಟಿಕೆಗಳಿಗೆ ಅವರು ಸೀಮಿತರಾಗಿದ್ದಾರೆ. ಮೊದಲಿನಿಂದಲೂ ಯಡಿಯೂರಪ್ಪ ಜತೆ ಅಂತಹ ನಿಕಟ ಬಾಂಧವ್ಯವೇನೂ ಅವರಿಗಿಲ್ಲ. ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸುನಿಲ್ ಕುಮಾರ್ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮೆಚ್ಚುಗೆ ಇದೆಯಾದರೂ ಒಬ್ಬ ನಾಯಕನಿಗೆ ಇರಬೇಕಾದ ಆಕ್ರಮಣಶೀಲ ವ್ಯಕ್ತಿತ್ವವನ್ನು ಬಳಸಿಕೊಳ್ಳುತ್ತಿಲ್ಲ. ಎಂಬ ಟೀಕೆಗಳೂ ಇವೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇನ್ನುಳಿದವರಿಗೆ ರಾಜ್ಯವ್ಯಾಪಿ ಸುತ್ತಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಷ್ಟು ಪ್ರಭಾವ ಇಲ್ಲ. ಲಿಂಬಾವಳಿ ಸಂಘ ಪರಿವಾರದ ನಿಷ್ಠ ಸ್ವಯಂ ಸೇವಕರಾಗಿದ್ದರೂ ಆಗಾಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳುವುದು, ಪಕ್ಷದ ನಾಯಕತ್ವವೇ ಬಹಿರಂಗವಾಗಿ ಸಿಡಿದೆದ್ದಿರುವುದು ವರಿಷ್ಠರ ಅಸಮಧಾನಕ್ಕೆ ಕಾರಣವಾಗಿದೆ. ಗುರುವಾರ ನಡೆದ ಸಂಧಾನ ಸಭೆಯಲ್ಲಿ ಈ ಕುರಿತ ವಿಚಾರವೂ ಚರ್ಚೆಗೆ ಬಂತೆನ್ನಲಾಗಿದ್ದು ಸಂಘ ಪರಿವಾರದ ಹಿರಿಯರು ನೇರವಾಗಿ ಅವರನ್ನು ತರಾಟೆಗೆ ತೆಗೆದುಕೊಂಡರೆಂದೂ ಗೊತ್ತಾಗಿದೆ.
ನಮ್ಮ ಸಿದ್ಧಾಂತಳ ಕಡು ವಿರೋಧಿಯಾಗಿರುವ ಸಿದ್ದರಾಮಯ್ಯ ಅವರ ಜತೆ ನೀವು ವೇದಿಕೆ ಹಂಚಿಕೊಂಡಿದ್ದು ಅದರಿಂದ ತಪ್ಪು ಸಂದೇಶ ಹೋದಂತಾಗಲಿಲ್ಲವೆ? ಎಂಬ ಪ್ರಶ್ನೆಯೂ ಸಭೆಯಲ್ಲಿ ಮೂಡಿ ಬಂತೆನ್ನಲಾಗಿದ್ದು ಈ ಆರೋಪಕ್ಕೆ ಸ್ಪಷ್ಟನೆ ಕೊಡಲು ಲಿಂಬಾವಳಿ ಮುಂದಾದರೂ ಅದನ್ನು ಸಭೆ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷದೊಳಗೆ ಶಾಶ್ವತ ಭಿನ್ನಮತೀಯ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಯಾವುದೆ ಅಧಿಕಾರ ಇಲ್ಲದೇ ರಾಜ್ಯವ್ಯಾಪಿ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ಇಲ್ಲ. ಹೀಗಾಗಿ ಅವರು ಪಕ್ಷದ ಕೇಂದ್ರ ನಾಯಕತ್ವಕ್ಕೆ ನಿಷ್ಠರೆಂಬುದೇ ಅವರ ಬಗ್ಗೆ ವರಿಷ್ಠರು ಮೃದು ಧೋರಣೆ ತಳೆಯಲು ಕಾರಣ.
ಸುದೀರ್ಘವಾಗಿ ಮುಂಜಾನೆಯಿಂದ ಸಂಜೆಯ ವರೆಗೆ ನಡೆದ ಈ ಸಂಧಾನ ಸಭೆಯ ನಂತರ ನಾಯಕರು ಬಹಿರಂಗವಾಗಿ ಹೇಳಿಕೆ ನೀಡದಂತೆ ಒಟ್ಟಾಗಿ ಹೋಗುವಂತೆ ಸೂಚನೆ ನೀಡಿದರಾದರೂ ಅದು ಪರಿಣಾಮಕಾರಿಯಾಗಿ ಪಾಲನೆ ಆಗಿಲ್ಲ. ಪಾಲನೆ ಆಗುವ ಸೂಚನೆಗಳೂ ಇಲ್ಲ.
ದಿಲ್ಲಿಯಲ್ಲಿರುವ ಕರ್ನಾಟಕದ ಕೆಲವು ನಾಯಕರು ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದ ಮುಂದುವರಿದ ಭಾಗವೇ ಈ ಸಭೆ ಎಂಬುದು ಈ ಬೆಳವಣಿಗೆಗಳ ಒಳ ಹೊಕ್ಕು ನೋಡಿದರೆ ತಿಳಿಯುವ ಅಂಶ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಏಕ ಸ್ವಾಮಿತ್ವಕ್ಕೆ ಕಡಿವಾಣ ಹಾಕುವ ಉದ್ದೇಶ ಈ ಸಂಧಾನ ಸಭೆಯ ಹಿಂದೆ ಇದೆಯಾದರೂ ಅವರನ್ನು ಬಿಟ್ಟರೆ ಪಕ್ಷಕ್ಕೆ ವರ್ಚಸ್ಸು ತುಂಬ ಬಲ್ಲ ಪ್ರಭಾವೀ ನಾಯಕರು ಇಲ್ಲದಿರುವುದು ಬಿಜೆಪಿಗೆ ದೊಡ್ಡ ಸಮಸ್ಯೆ.
ಸಂಘಟನಾತ್ಮಕವಾಗಿ ಏನೇ ಶಕ್ತಿ ತುಂಬುವ ಮಾತನಾಡಿದರೂ ಚುನಾವಣೆಯ ಸಂದರ್ಭದಲ್ಲಿ ಜಾತಿ, ವ್ಯಕ್ತಿಗತ ಪ್ರಭಾವವೇ ಗಣನೆಗೆ ಬರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಿಸುವ ಸಾಹಸಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗುವ ಸಾಧ್ಯತೆಗಳು ತುಂಬಾ ದೂರ. ಹಾಗೇನಾದರೂ ಆದರೆ ಪಕ್ಷದ ಬೆನ್ನಿಗೆ ನಿಂತಿರುವ ಪ್ರಬಲ ಲಿಂಗಾಯಿತ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾದ ಸನ್ನಿವೇಶವೂ ಬರಬಹುದು ಅಂತಹ ಪರಿಸ್ಥಿತಿ ತಂದುಕೊಳ್ಳುವುದಕ್ಕಿಂತ ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ರನ್ನೇ ಮುಂದುವರಿಸಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಲಗಾಮು ತಮ್ಮ ಕೈಲಿ ಇರುವಂತೆ ನೋಡಿಕೊಳ್ಳುವುದು ಈ ಸಂಧಾನ ಸಭೆಯ ನಿಗೂಢ ಉದ್ದೇಶ. ಸಭೆಯ ನಂತರ ಸಂಘ ಪರಿವಾರದ ಪ್ರಮುಖರು ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ಸಮಾಲೋಚನೆ ನಡೆಸಿದ ವಿಜಯೇಂದ್ರ ತಮ್ಮ ಹಾಗೂ ಕುಟುಂಬದ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದರೂ ವರಿಷ್ಟರು ಯಾವುದೇ ಕ್ರಮ ಕೈಗೊಳ್ಳದೇ ಇದ್ದುದು ಅವರಿಗೆ ದಿಲ್ಲಿ ನಾಯಕರ ಆಶೀರ್ವಾದ,ಪ್ರಚೋದನೆ ಇದೆ ಎಂಬ ಭಾವನೆ ಸಾರ್ವತ್ರಿಕವಾಗಿ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಷ್ಟ ಎಂದೂ ಅತೃಪ್ತಿ ತೋಡಿಕೊಂಡರು. ಆಗಲೂ ವರಿಷ್ಠರಿಂದ ಬಂದ ಉತ್ತರ ಎಂದರೆ `ಎಲ್ಲವನ್ನೂ ನಾವು ಸರಿ ಮಾಡುತ್ತೇವೆ. ನೀವೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಿರಿ” ಎಂಬುದು.
ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡರೂ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ಇದ್ದೇ ಇದೆ. ಏತನ್ಮಧ್ಯೆ ನಾಗಮಂಗಲ ಘಟನೆಯನ್ನು ರಾಜ್ಯವ್ಯಾಪಿ ವಿಷಯವಾಗಿ ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುವಂತೆ ವರಿಷ್ಟರು ಸೂಚನೆ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ ಭ್ರಷ್ಟಾಚಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಲೂ ಬಿಜೆಪಿ ನಿರ್ಧರಿಸಿದೆ.
ಮೈಸೂರಿನ ಮುಡ ನಿವೇಶನ ಹಂಚಿಕೆ ಹಗರಣದ ತನಿಖೆ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿರುವ ಅರ್ಜಿ ಹೈಕೋರ್ಟ ನಲ್ಲಿ ವಿಚಾರಣೆ ಮುಗಿದು ತೀರ್ಪಿಗೆ ಕಾದಿರಿಸಲಾಗಿದೆ. ಹೈಕೋರ್ಟ್ ತೀರ್ಪು ಹೊರ ಬಿದ್ದ ನಂತರ ಕಾಂಗ್ರೆಸ್ ನಲ್ಲಿ ನಡೆಯಬಹುದಾದ ಬೆಳವಣಿಗೆಗಳ ಮೇಲೆ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವರೂ ಆದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ. ಸಂದರ್ಭ ಒದಗಿ ಸರ್ಕಾರ ಉರುಳಿದರೆ ಕಾಂಗ್ರೆಸ್ ಭಿನ್ನಮತೀಯರ ಬೆಂಬಲ ಪಡೆದು ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ರಚಿಸುವ ತಯಾರಿಯಲ್ಲಿ ಅವರಿದ್ದಾರೆ.
ಆದರೆ ಕಾಂಗ್ರೆಸ್ ನಿಂದ 40 ಶಾಸಕರು ಸಿಡಿದು ಬರುತ್ತಾರಾ ಎಂಬುದು ಸದ್ಯದ ಪ್ರಶ್ನೆ. ಬಿಜೆಪಿ ಕೇಂದ್ರ ಸಮಿತಿ ಸಂದರ್ಭದ ಲಾಭ ಪಡೆದು ಮಧ್ಯಂತರ ಚುನಾವಣೆ ಎದುರಿಸುವ ಚಿಂತನೆಯಲ್ಲೇನೋ ಇದೆ. ಆದರೆ ಕಾಂಗ್ರೆಸ್ ನ 136 ಶಾಸಕರ ಪೈಕಿ ಹೆಚ್ಚಿನ ಮಂದಿಗೆ ಮಧ್ಯಂತರ ಚುನಾವಣೆ ಎದುರಿಸುವ ಆಸಕ್ತಿ ಇಲ್ಲ. ಹೀಗಾಗಿ ಪರಿಸ್ಥಿತಿ ಆಧರಿಸಿ ಬಂಡಾಯದ ಬದಲು ಹೊಂದಾಣಿಕೆ ಮತ್ತು ವೈಯಕ್ತಿಕ ಭದ್ರತೆ ಮಾರ್ಗವನ್ನು ಹೆಚ್ಚು ಶಾಸಕರು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಅಮೆರಿಕಕ್ಕೆ ಕುಟುಂಬದ ಸದಸ್ಯರ ಜತೆ ಖಾಸಗಿ ಪ್ರವಾಸ ಕೈಗೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಷ್ಂಗ್ಟನ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮಖ್ಯಮಂತ್ರಿ ಸಿದ್ದರಾಮಯ್ಯ ಪರ ತಾನು ಬಂಡೆಯಂತೆ ನಿಂತಿರುವುದಾಗಿ ಹೇಳುತ್ತಲೇ ಅವರು ನಡೆಸಿರುವ ನಿಗೂಢ ರಾಜಕೀಯ ಚಟುವಟಿಕೆಯತ್ತಲೇ ಈಗ ಎಲ್ಲರ ಕುತೂಹಲ ನೆಟ್ಟಿದೆ. ಮುಂದಿನದು ಕಾದು ನೋಡಬೇಕು
Advertisement