
ಸಾಮಾನ್ಯವಾಗಿ ಜನರು ಲಕ್ವಾ ಎಂದು ಕರೆಯುವ ರೋಗದ ವೈಜ್ಞಾನಿಕ ಹೆಸರು ಪಾರ್ಶ್ವವಾಯು (ಪೆರಾಲಿಸಿಸ್). ಮೆದುಳು, ಬೆನ್ನುಹುರಿ ಅಥವಾ ನರಗಳೂ ಸೇರಿದಂತೆ ನರಮಂಡಲಕ್ಕೆ ಉಂಟಾಗುವ ಹಾನಿಯಿಂದಾಗಿ ಮೆದುಳು ಮತ್ತು ಸ್ನಾಯುಗಳ ನಡುವಿನ ಸಂವಹನದಲ್ಲಿ ಸಮಸ್ಯೆ ಇದ್ದಾಗ ಪಾರ್ಶ್ವವಾಯು ಬರುತ್ತದೆ.
ಈ ರೋಗ ತಾತ್ಕಾಲಿಕ ಅಥವಾ ಶಾಶ್ವತವಾಗಬಹುದು ಮತ್ತು ದೇಹದ ಒಂದು ಅಥವಾ ಎರಡೂ ಬದಿಗಳ ಮೇಲೆ ಪರಿಣಾಮ ಬೀರಬಹುದು.
ಪೆರಾಲಿಸಿಸ್ ಎಂದರೇನು?
ನಮ್ಮ ದೇಶದಲ್ಲಿ ಸಾಕಷ್ಟು ಜನರು ಸಾಯಲು ಪಾರ್ಶ್ವವಾಯು ಕೂಡಾ ಕಾರಣವಾಗಿದೆ. ಇದಲ್ಲದೇ ಅಂಗವೈಕಲ್ಯಕ್ಕೂ ಇದು ಪ್ರಮುಖ ಕಾರಣವಾಗಿದೆ. ಪ್ರತಿವರ್ಷ 1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ ಎಂಬುದು ಇಂದು ಸಾರ್ವಜನಿಕ ಕಾಳಜಿ ವಿಷಯವಾಗಿದೆ. ನಮ್ಮಲ್ಲಿ ವಿಶೇಷವಾಗಿ ವಯಸ್ಸಾದವರಲ್ಲಿ ಪಾರ್ಶ್ವವಾಯು ಬರುವ ಸಂಭವವು ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ವಿಶ್ವದಾದ್ಯಂತ 15 ಮಿಲಿಯನ್ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದೆ.
ಪಾರ್ಶ್ವವಾಯು ಬರಲು ಮುಖ್ಯ ಕಾರಣ ಮೆದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಿರುವುದು. ಮೆದುಳಿಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವದಿಂದಾಗಿ ರಕ್ತ ಪೂರೈಕೆಯನ್ನು ಅಡ್ಡಿಪಡಿಸುವ ಸ್ಥಿತಿ ಇದಾಗಿದೆ. ಇದರಿಂದ ಮೆದುಳಿಗೆ ಮೆದುಳಿನ ಹಾನಿ ಉಂಟಾಗುತ್ತದೆ. ಈ ಸಮಸ್ಯೆಯ ಆರಂಭಿಕ ಲಕ್ಷಣಗಳನ್ನು ಮೊದಲೇ ಪತ್ತೆಹಚ್ಚುವುದು ಉತ್ತಮ. ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ.
ಈ ರೋಗದಲ್ಲಿ ನಾಲ್ಕು ವಿಧಗಳಿವೆ. ಅವುಗಳೆಂದರೆ:
ಸಂಪೂರ್ಣ ಪಾರ್ಶ್ವವಾಯು: ಈ ಪರಿಸ್ಥಿತಿಯಲ್ಲಿ ದೇಹವನ್ನು ಚಲಿಸಲು ಸಾಧ್ಯವಾಗುವುದಿಲ್ಲ.
ಅಪೂರ್ಣ ಪಾರ್ಶ್ವವಾಯು: ರೋಗಪೀಡಿತ ಭಾಗಗಳ ಸ್ವಲ್ಪ ನಿಯಂತ್ರಣ ಸಾಧ್ಯ.
ನಿರ್ದಿಷ್ಟ ಭಾಗದ ಪಾರ್ಶ್ವವಾಯು: ಇದರಲ್ಲಿ ಕೈಗಳು ಅಥವಾ ಕಾಲುಗಳಂತಹ ಒಂದು ನಿರ್ದಿಷ್ಟ ದೇಹದ ಭಾಗವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.
ಸಾಮಾನ್ಯ ಪಾರ್ಶ್ವವಾಯು: ಈ ಪರಿಸ್ಥಿತಿಯಲ್ಲಿ ದೇಹದಾದ್ಯಂತ ಪಾರ್ಶ್ವವಾಯು ವ್ಯಾಪಕವಾಗಿ ಹರಡುತ್ತದೆ.
ಪಾರ್ಶ್ವವಾಯು ಸಾಮಾನ್ಯವಾಗಿ ಮೆದುಳು ಅಥವಾ ಬೆನ್ನುಹುರಿಯ ಯಾವ ಭಾಗದಲ್ಲಿ ಗಾಯಗೊಂಡಿದೆ ಎಂಬುದನ್ನು ಅವಲಂಬಿಸಿ ಅದು ಯಾವ ರೀತಿಯದ್ದು ಎಂದು ನಿರ್ಧರಿಸಲಾಗುವುದು.
ಪಾರ್ಶ್ವವಾಯುವಿನ ಲಕ್ಷಣಗಳು
ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳೆಂದರೆ ಮುಖ ಒಂದು ಕಡೆ ಇಳಿ ಬೀಳುವಂತೆ ಅನಿಸುವುದು; ಒಂದು ಕಡೆ ಸಂಪೂರ್ಣ ಜೋಮು ಹಿಡಿಯುವುದು; ನಗಲು ಆಗದಿರುವುದು; ತೋಳುಗಳ ಮರಗಟ್ಟುವಿಕೆ; ಮಾತಾಡುವಾಗ ತೊದಲುವುದು; ದೇಹದ ಸಮತೋಲನ ತಪ್ಪುವುದು; ಇದ್ದಕ್ಕಿದ್ದಂತೆ ತಲೆನೋವು ಬರುವುದು (ಇದು ರಕ್ತಸ್ರಾವದ ಲಕ್ಷಣ); ತಕ್ಷಣಕ್ಕೆ ನೆನಪು ನಷ್ಟವಾಗುವುದು; ದೃಷ್ಟಿ ದುರ್ಬಲತೆ ಕಾಣಿಸಿಕೊಳ್ಳಬಹುದು. ಹಠಾತ್ ಕಣ್ಣುಗಳಿಗೆ ಕತ್ತಲೆ ಎನಿಸುವುದು, ದೃಷ್ಟಿ ಸಮಸ್ಯೆ ಮತ್ತು ಯಾವುದೇ ಕಾರಣವಿಲ್ಲದೆ ತಕ್ಷಣ ತಲೆ ತಿರುಗಿ ಸಮತೋಲನ ತಪ್ಪಿಬಿಡಬಹುದು.
ಪಾರ್ಶ್ವವಾಯುವಿಗೆ ಕಾರಣಗಳು
ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ ಮತ್ತು ಕೊಬ್ಬಿನಂಶಗಳು ಪಾರ್ಶ್ವವಾಯುವಿಗೆ ಪ್ರಮುಖ ಕಾರಣಗಳಾಗಿವೆ. ಧೂಮ್ರಪಾನ, ಮದ್ಯವ್ಯಸನ, ಡ್ರಗ್ಸ್, ಒತ್ತಡಯುಕ್ತ ಜೀವನಶೈಲಿ ಹಾಗೂ ಕೊಬ್ಬಿನ ಆಹಾರ ಸೇವನೆ ಕೂಡ ರೋಗಕ್ಕೆ ದಾರಿಮಾಡಿಕೊಡುತ್ತವೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಹೆಚ್ಚಾಗಿರುವವರು ರೋಗಲಕ್ಷಣಗಳು ಕಂಡುಬAದರೆ ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಬಾರದು. ತಪ್ಪದೇ ಚಿಕಿತ್ಸೆ ಪಡೆಯಬೇಕು.
ಪಾರ್ಶ್ವವಾಯುವಿಗೆ ಚಿಕಿತ್ಸೆ
ಪ್ರಸ್ತುತ ಪಾರ್ಶ್ವವಾಯುವಿಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ರೋಗಿಗಳ ಜೀವನವನ್ನು ಭಾಗಶಃ ಸುಧಾರಿಸಲು ವ್ಯಾಪಕವಾದ ಆರೈಕೆ ಮತ್ತು ಚಲನಶೀಲತೆಯ ವಿಷಯದಲ್ಲಿ ಅನೇಕ ಆಯ್ಕೆಗಳು ಲಭ್ಯವಿದೆ.
ಕಾಲುಗಳಲ್ಲಿ ಭಾಗಶಃ ಪಾರ್ಶ್ವವಾಯು ಹೊಂದಿರುವ ರೋಗಿಗಳು, ಆದರೆ ಉತ್ತಮ ಮೇಲ್ಭಾಗದ ದೇಹದ ಶಕ್ತಿ, ಕಡಿಮೆ ದೂರದವರೆಗೆ ಕೈಯಿಂದ ಮಾಡಿದ ಗಾಲಿಕುರ್ಚಿಗಳನ್ನು ಬಳಸಬಹುದು. ಕಡಿಮೆ ದೇಹದ ಬಲವನ್ನು ಹೊಂದಿರುವ ಜನರು ವಿದ್ಯುತ್ ಗಾಲಿಕುರ್ಚಿಗಳನ್ನು ಬಳಸಬಹುದು.
ವ್ಯಾಯಾಮ ಮತ್ತು ನಿಯಮಿತ ಫಿಸಿಯೋಥೆರಪಿ ಕೈಗಳು ಅಥವಾ ಕಾಲುಗಳಲ್ಲಿ ಭಾಗಶಃ ಅಥವಾ ಸಂಪೂರ್ಣ ಪಾರ್ಶ್ವವಾಯುದಿಂದ ಬಳಲುತ್ತಿರುವ ರೋಗಿಗಳ ಪರಿಸ್ಥಿತಿ ಉತ್ತಮಗೊಳ್ಳಲು ಕಾರಣವಾಗಿದೆ. ಕೆಲವು ಸಂದರ್ಭಗಳಲ್ಲಿ, ವ್ಯಾಯಾಮವು ರೋಗಿಗಳಿಗೆ ಪೀಡಿತ ಅಂಗಗಳಲ್ಲಿ ಸಂವೇದನೆ ಮತ್ತು ಚಲನೆಯ ಕಾರ್ಯಗಳನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಔಷಧೋಪಚಾರವು ರೋಗದ ಪರಿಸ್ಥಿತಿಯ ಸ್ವರೂಪವನ್ನು ಅವಲಂಬಿಸಿ, ಮೆದುಳು ಮತ್ತು ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳು ಊತದ ಗಾತ್ರವನ್ನು ಕಡಿಮೆ ಮಾಡುವ ಮೂಲಕ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ.
ಪಾರ್ಶ್ವವಾಯುವನ್ನು ತಡೆಯುವುದು ಹೇಗೆ?
ಪಾರ್ಶ್ವವಾಯುವನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕು. ಸರಿಯಾದ ತೂಕ, ಸಮತೋಲನ ಆಹಾರ ಮತ್ತು ವಿಹಾರ ಉತ್ತಮ. ವಾಕಿಂಗ್, ಜಾಗಿಂಗ್, ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಗಳು ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ ಹಾಗೂ ಹೃದಯ ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತವೆ. 18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಪ್ರತಿದಿನ ಅರ್ಧಗಂಟೆಯಾದರೂ ದೈಹಿಕ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕು.
ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ದೂರವಿರಬೇಕು. ಬರ್ಗರ್, ಚೀಸ್ ಮತ್ತು ಐಸ್ ಕ್ರೀಮ್ನಂತಹ ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬಾರದು. ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಸಿಹಿ ತಿನಿಸುಗಳನ್ನು ತಿನ್ನಬಾರದು ಪ್ರತಿದಿನ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
ಆಯುರ್ವೇದದಲ್ಲಿ ಪಾರ್ಶ್ವವಾಯುವಿಗೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಪಂಚಕರ್ಮ ಚಿಕಿತ್ಸೆಯೂ ಸಹಕಾರಿ. ಅಭ್ಯಂಗ, ಸ್ವೇದನ, ಶಿರೋಧಾರಾ, ಶಿರೋಪಿಚು ಮತ್ತು ನಸ್ಯ ಇವೆಲ್ಲವೂ ಕೂಡ ಪಾರ್ಶ್ವವಾಯು ರೋಗಿಗಳಿಗೆ ಪರಿಹಾರ ಒದಗಿಸಬಲ್ಲವು. ಒಳರೋಗಿಗಳಾಗಿಯೂ ಮತ್ತು ಹೊರರೋಗಿಗಳಾಗಿಯೂ ಅವರು ಚಿಕತ್ಸೆ ಪಡೆಯಬಹುದು.
Advertisement