Business ಮತ್ತು ಬದುಕಿನ ನಡುವೆ ಒತ್ತಡ ನಿರ್ವಹಣೆಗೆ 5 ಸೂತ್ರಗಳು... (ಹಣಕ್ಲಾಸು)

ಇಂದಿನ ಸಮಾಜದಲ್ಲಿ ಒತ್ತಡ ಎನ್ನುವುದು ಅತಿ ಸಾಮಾನ್ಯ ಎನ್ನುವಂತಾಗಿದೆ ಮತ್ತು ಇದನ್ನು ವಿಭಾಗಿಸಿ ಅದು ನನ್ನದಲ್ಲ ಎಂದು ಬದುಕುವುದು ಕೂಡ ಅಸಾಧ್ಯ. (ಹಣಕ್ಲಾಸು-428)
file pic
ಸಾಂಕೇತಿಕ ಚಿತ್ರonline desk
Updated on

ನಮ್ಮ ಸುತ್ತಮುತ್ತ ತಿರುಗಿ ನೋಡಿ ಬಹಳಷ್ಟು ಜನ ತಮ್ಮ ಕೆಲಸ ಕಾರ್ಯದಲ್ಲಿ ಉನ್ನತಿಯನ್ನು ಸಾಧಿಸುತ್ತ ಅದನ್ನು ಜಗತ್ತಿಗೆ ಹೇಳಿಕೊಳ್ಳುತ್ತಾ ಸಾಗುತ್ತಿದ್ದಾರೆ. ಹೀಗೆ ಸಾಧನೆ ಮಾಡಿದವರು ನಮ್ಮ ವಯೋಮಾನದವರು ಆಗಿದ್ದರೆ ಆಗ ನಮ್ಮಲ್ಲಿ ಬೇಡವೆಂದರೂ ಅವರೊಂದಿಗೆ ತುಲನೆ ಮಾಡಿಕೊಳ್ಳಲು ಪ್ರಾರಂಬಿಸಿಬಿಡುತ್ತೇವೆ. ನಮ್ಮ ಪರಿಧಿಯಲ್ಲಿ, ನಮ್ಮ ಟೈಮ್ ಲೈನ್ನಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದರೂ ಕೂಡ ಹೆಚ್ಚು ಪ್ರಸಿದ್ಧರ, ಸಾಧಕರ ಕಂಡಾಗ ಹೀಗಾಗುವುದು ಸಹಜ. ಇದು ವ್ಯಕ್ತಿಯಲ್ಲಿ ಅಸ್ಥಿರತೆಯನ್ನು ಉಂಟುಮಾಡುತ್ತದೆ. ಬೇಡವಾದ ಒತ್ತಡವನ್ನು ಸೃಷ್ಟಿ ಮಾಡುತ್ತದೆ.

ಬೇರೆಯವರ ಜೊತೆಗೆ ಹೋಲಿಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ, ವ್ಯಕ್ತಿ ಸಾಕಷ್ಟು ತನ್ನ ಕಾರ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿಯಾಗಿರುತ್ತದೆ. ಆದರೂ ಆರೋಗ್ಯ ಕೈಕೊಡುತ್ತದೆ. ಕೆಲಸದಲ್ಲಿ ಅದೆಷ್ಟು ಮಗ್ನರಾಗಿರುತ್ತಾರೆ ಎಂದರೆ ಅದನ್ನು ಇನ್ನಷ್ಟು ವಿಸ್ತರಿಸುವ ಭರದಲ್ಲಿ ಆರೋಗ್ಯದ ಕಡೆ ಗಮನ ಕಡಿಮೆಯಾಗುತ್ತದೆ. ತೀರಾ ಇತ್ತೀಚಿಗೆ ಜಿರೋಧ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಆರೋಗ್ಯದಲ್ಲಿನ ಏರುಪೇರು ಇದಕ್ಕೊಂದು ದೊಡ್ಡ ಉದಾಹರೆಣೆ. ಕೆಲಸದ ಒತ್ತಡದಲ್ಲಿ ನಿದ್ರೆ ಮಾಡುವುದರಲ್ಲಿ ಚೌಕಾಸಿ ಮಾಡಿಕೊಳ್ಳುತ್ತಾರೆ. ಇಂದಿನ ಪ್ರಪಂಚದಲ್ಲಿ ಆರೋಗ್ಯ ಸಮಸ್ಯೆಗೆ ಅತಿ ದೊಡ್ಡ ಕಾರಣ ನಿದ್ರಾಹೀನತೆ ಎನ್ನುವುದು ಗಮನಿಸಬೇಕಾದ ಅಂಶ.

ಸರಳವಾಗಿ ಹೇಳಬೇಕೆಂದರೆ ಬಿಸಿನೆಸ್ ಕಟ್ಟುವ ಭರದಲ್ಲಿ ಆರೋಗ್ಯವನ್ನು ನಾವು ಕಡೆಗಣಿಸುತ್ತಿದ್ದೇವೆ. ವರ್ಕ್ ಲೈಫ್ ಬ್ಯಾಲೆನ್ಸ್ ಇಲ್ಲ ಎನ್ನುವ ಹಪಹಪಿಕೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ಆದರೆ ಒಂದು ವಿಷಯವನ್ನು ನಾವೆಲ್ಲಾ ಗಮನಿಸಬೇಕು. ಕೆಲಸ ಬೇರೆಯಲ್ಲ, ಬದುಕು ಬೇರೆಯಲ್ಲ. ಬಹುತೇಕರು ಕೆಲಸದ ವಿಷಯವನ್ನು ಅಲ್ಲಿಗೆ ಬಿಟ್ಟು ಬರಬೇಕು. ಕೆಲಸವನ್ನು ಬದುಕನ್ನು ಬೇರೆ ಬೇರೆಯಾಗಿ ನೋಡಬೇಕು ಇತ್ಯಾದಿ ಮಾತುಗಳನ್ನು ಹೇಳುತ್ತಾರೆ. ಆದರೆ ಅವೆಲ್ಲವೂ ಸುಳ್ಳು. ಮನುಷ್ಯನ ಮನಸ್ಸಿಗೆ ಆ ರೀತಿಯ ನಿಖರವಾದ ಗೆರೆಯನ್ನು ಎಳೆಯಲು ಬರುವುದಿಲ್ಲ. ಕೆಲಸದಲ್ಲಿ ಒತ್ತಡವಿದ್ದರೆ ಅದನ್ನು ಮರೆತು ನಾನು ಬೇರೊಬ್ಬ ವ್ಯಕ್ತಿ, ಇದೀಗ ನನ್ನ ವೈಯಕ್ತಿಕ ಬದುಕಿನ ವೇಳೆ ಶುರುವಾಗಿದೆ ಎಂದು ಬೇರೆ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ. ಇಂದಿನ ಸಮಾಜದಲ್ಲಿ ಒತ್ತಡ ಎನ್ನುವುದು ಅತಿ ಸಾಮಾನ್ಯ ಎನ್ನುವಂತಾಗಿದೆ ಮತ್ತು ಇದನ್ನು ವಿಭಾಗಿಸಿ ಅದು ನನ್ನದಲ್ಲ ಎಂದು ಬದುಕುವುದು ಕೂಡ ಅಸಾಧ್ಯ. ಹೀಗಾಗಿ ಇದಕ್ಕಿರುವ ಅತಿ ಸರಳ ಮದ್ದು , ಕೆಲಸದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಒಂದಷ್ಟು ಅಂಶಗಳನ್ನು ಪಾಲಿಸಬೇಕಾಗುತ್ತದೆ.

file pic
Emergency Fund: ಅಸ್ಥಿರ ಸಮಯಕ್ಕಾಗಿ ಹಣ ಕೂಡಿಡುವುದು ಹೇಗೆ? ನೀವು ತಿಳಿಯಬೇಕಾದ 5 ಸೂತ್ರಗಳು (ಹಣಕ್ಲಾಸು)
  • ದೇಹಾರೋಗ್ಯ ಕಾಪಾಡಿಕೊಳ್ಳುವುದು: ಮನಸ್ಸು ಮತ್ತು ದೇಹ ಎರಡೂ ಒಂದಕ್ಕೊಂದು ಬೆಸೆದುಕೊಂಡಿವೆ. ದೇಹಾರೋಗ್ಯ ಕುಸಿದರೆ ಮಾನಸಿಕವಾಗಿ ಕುಗ್ಗುವುದು ಸಹಜ. ಹಾಗೆ ಮಾನಸಿಕವಾಗಿ ಕುಗ್ಗಿ ಹೋದರೆ ದೇಹದಲ್ಲಿ ಆಲಸ್ಯ ಗೊತ್ತಿಲ್ಲದೇ ಶುರುವಾಗಿರುತ್ತದೆ. ಹೀಗಾಗಿ ಪ್ರತಿ ದಿನ ವ್ಯಾಯಾಮ , ನಡಿಗೆಯಂತಹ ರೊಟಿನ್ ತಪ್ಪದೆ ಪಾಲಿಸಬೇಕು. ಅದರಲ್ಲೂ ಮಾನಸಿಕವಾಗಿ ಒತ್ತಡ ಹೆಚ್ಚಾಗುತ್ತಿದೆ ಎನ್ನಿಸಿದಾಗ ಲಾಂಗ್ ವಾಕ್ ಮಾಡುವುದು , ಬೆವರುವ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಮಾಡಬೇಕು. ಬಹುತೇಕ ಬಾರಿ ಮನಸ್ಸು ಬದಲಾವಣೆ ಬಯಸುತ್ತಿರುತ್ತದೆ. ಬಯಸಿದ ಬದಲಾವಣೆ ಸಿಕ್ಕರೆ ಒತ್ತಡ ಕಡಿಮೆಯಾಗುತ್ತದೆ.

  • ನಮ್ಮ ಲಿಮಿಟ್ ನಾವೇ ಹಾಕಿಕೊಳ್ಳಬೇಕಿದೆ: ನಿಮಗೊಂದು ಉದಾಹರಣೆ ಕೊಡುತ್ತೇನೆ. ಒಂದು ಮೊಪೆಡ್ ತನ್ನೆಲ್ಲಾ ಶಕ್ತಿಯನ್ನು ವ್ಯಯಿಸಿದರೂ ೪೦ ಕಿಲೋಮೀಟರ್ ಪ್ರತಿ ಗಂಟೆಯ ವೇಗವನ್ನು ಮೀರಲಾಗದು. ಅದೇ ಒಂದು ಸೂಪರ್ ಬೈಕ್ ಆ ವೇಗವನ್ನು ನಿರಾಯಾಸವಾಗಿ ಪಡೆದುಕೊಂಡು ಬಿಡುತ್ತದೆ. ಮನುಷ್ಯನ ಕೆಪಾಸಿಟಿ ಕೂಡ ಹೀಗೆ , ಒಬ್ಬರಿಗಿಂತ ಇನ್ನೊಬ್ಬರಲ್ಲಿ ಹೆಚ್ಚು ಅಥವಾ ಕಡಿಮೆ ಇರುತ್ತದೆ. ಒಬ್ಬರು ಯಶಸ್ಸಿನ ಮೆಟ್ಟಿಲುಗಳನ್ನು ಸರಾಗವಾಗಿ ಏರಿ ಬಿಡುತ್ತಾರೆ. ಕೆಲವರಿಗೆ ಅದಕ್ಕೆ ಬಹಳ ಪರಿಶ್ರಮ ಹಾಕಬೇಕಾದ ಅವಶ್ಯಕತೆ ಇರುತ್ತದೆ. ಹೀಗಾಗಿ ನಮ್ಮ ಶಕ್ತಿಯೇನು ? ಎಲ್ಲಿಯತನಕ ನಮ್ಮ ಶಕ್ತಿಯನ್ನು ಲಂಬಿಸಬಲ್ಲೆವು ಎನ್ನವುದಕ್ಕೆ ಒಂದು ಅಪ್ಪರ್ ಲಿಮಿಟ್ ನಾವೇ ವಿಧಿಸಿಕೊಳ್ಳಬೇಕು. ಇದನ್ನು ಮೀರಿದ ಸಾಹಸ , ವ್ಯಾಪಾರ ನನಗೆ ಬೇಕಿಲ್ಲ ಎನ್ನುವ ಸ್ಪಷ್ಟತೆ ಅಗತ್ಯವಿದೆ.

  • ಬದುಕೆಂದರೆ ಹಾವು ಏಣಿ ಆಟವಿದ್ದಂತೆ ಇಲ್ಲಿ ಹೋಲಿಕೆ ಸಲ್ಲದು: ಇಂದಿನ ಬದುಕಿನಲ್ಲಿ ಒತ್ತಡ ಹೆಚ್ಚಾಗುವುದಕ್ಕೆ ಮೂಲ ಕಾರಣ ಹೋಲಿಕೆ. ನಾವು ಒಬ್ಬರಂತೆ ಒಬ್ಬರಿಲ್ಲ , ನಮ್ಮ ದಾರಿ ನಮ್ಮದು. ಇಲ್ಲಿ ನಾವೇಲ್ಲರೂ ನಮ್ಮ ನಮ್ಮ ಬದುಕನ್ನು ಕೇಳಿಕೊಂಡು ಬಂದಿರುತ್ತವೆ ಎನ್ನುವ ಸಣ್ಣ ತತ್ವಜ್ಞಾನ ಬದುಕನ್ನು ಬಂಗಾರಗೊಳಿಸುತ್ತದೆ. ಅವರಾರೋ ಏನೂ ಮಾಡಿಬಿಟ್ಟರು ಎಂದು ನಾವು ಒತ್ತಡಕ್ಕೆ ಬಿದ್ದರೆ ನಮಗೆ ಯಾವುದೊ ಸುಲಭವಾಗಿ ಸಾಧ್ಯವೋ ಅದನ್ನು ಕೂಡ ನಾವು ಮಾಡಲಾರೆವು. ಹೀಗಾಗಿ ಹೋಲಿಕೆ ಎನ್ನುವ ಶತ್ರುವನ್ನು ಮೊದಲು ಹೊಡೆದೋಡಿಸಿ.

  • ದೊಡ್ಡ ಬಿಸಿನೆಸ್ ಕಟ್ಟಬೇಕು ಎನ್ನುವುದೇ ಹುಚ್ಚುತನ: ಯಾವುದೇ ಬಿಸಿನೆಸ್ ನಮ್ಮ ನಿಯಂತ್ರಣವನ್ನು ಮೀರಿ ಬೆಳೆದರೆ ಆಗ ಸ್ಟ್ರೆಸ್ ಎನ್ನುವುದು ಕೇಳದೆ ಬಳುವಳಿಯಾಗಿ ಬಂದುಬಿಡುತ್ತದೆ. ಅತಿ ದೊಡ್ಡ ಬಿಸಿನೆಸ್ ಕಟ್ಟಿದ ಮೇಲೆ ಅದನ್ನು ಉಳಿಸಿಕೊಳ್ಳಲು ಜಿದ್ದಿಗೆ ಬೀಳುತ್ತೇವೆ. ಡಿಮ್ಯಾಂಡ್ ಅಂಡ್ ಸಪ್ಪ್ಲೈ ಸುತ್ತುವಿಕೆಯಲ್ಲಿ ನೈತಿಕತೆ ಮರೆತು ಹೋಗುತ್ತದೆ. ನಮಗೆ ಅರಿವಿಲ್ಲದೆ ಒತ್ತಡ ಶುರುವಾಗಿರುತ್ತದೆ. ಸಮಾಜದ ಕಣ್ಣಿಗೆ ದೊಡ್ಡ ಮತ್ತು ಯಶಸ್ವಿ ಉದ್ಯಮಿಯಾಗಿ ಕಾಣುತ್ತೇವೆ. ಆದರೆ ಆ ಹಣ ನಮ್ಮ ಬದುಕನ್ನು , ಬದುಕಲ್ಲಿರುವ ಖುಷಿಯನ್ನು ಕಸಿದು ಕೊಂಡು ಬಿಟ್ಟರೆ ಪ್ರಯೋಜನವೇನು ?

  • ಲೆಟ್ ಗೋ ಎನ್ನದಿದ್ದರೆ ಒತ್ತಡ ಕಡಿಮೆಯಾಗುವುದಿಲ್ಲ: ಕೆಲವೊಂದು ಅಂಶಗಳನ್ನು ಬದುಕು ನೀಡಿದಹಾಗೆ ಸ್ವೀಕರಿಸಬೇಕು. ಹೀಗೆ ಆಗಬೇಕು ಎನ್ನುವ ಸ್ವಭಾವ ಒತ್ತಡವನ್ನು ಹೆಚ್ಚು ಮಾಡುತ್ತದೆ. ಆದರೆ ಗಮನಿಸಿ ಒಬ್ಬ ವ್ಯಕ್ತಿ ಯಶಸ್ವಿಯಾಗಬೇಕಾದರೆ ಈ ರೀತಿಯ ಜಿಡ್ಡು ಸ್ವಭಾವ ಬೇಕೇಬೇಕು. ಎಲ್ಲವನ್ನೂ ಹೋಗಲಿ ಬಿಡು ಎನ್ನುವಂತಾದರೆ ಯಾವುದೋ ಕೈ ಹತ್ತುವುದಿಲ್ಲ. ಆದರೆ ಎಲ್ಲವನ್ನೂ ಹಿಡಿತ ಮಾಡಿದರೆ ಸ್ಟ್ರೆಸ್ ಎನ್ನುವ ಜ್ವಾಲಾಮುಖಿಯನ್ನು ನಾವೇ ಸಾಕಿದಂತಾಗುತ್ತದೆ. ಹೀಗಾಗಿ ಇವೆರೆಡರ ಮಧ್ಯದ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕಿದೆ.

file pic
Dubai Real Estate ಹೂಡಿಕೆ ಲಾಭದಾಯಕವೆ? (ಹಣಕ್ಲಾಸು)

ಹೋಗುವ ಮುನ್ನ: ಒತ್ತಡ ಎನ್ನುವುದು ಟೈಮ್ ಬಾಂಬ್ ಇದ್ದಂತೆ. ಸಾಮಾನ್ಯವಾಗಿ ಎಲ್ಲರಂತೆ ಕಾಣುವ ವ್ಯಕ್ತಿ ಅಚಾನಕ್ಕಾಗಿ ಕುಸಿದಾಗ ಕಥೆ ಹೊರಬರುತ್ತದೆ. ಇಂದಿನ ಅವಸರದ ಯುಗದಲ್ಲಿ ಗೆಲುವು ಬಿಟ್ಟು ಬೇರೇನೂ ಮುಖ್ಯವಲ್ಲ ಎನ್ನುವ ಮಟ್ಟಿಗೆ ಬದುಕನ್ನು ನಾವು ಬದಲಾಯಿಸಿಕೊಂಡಿದ್ದೇವೆ.

ಆದರೆ ನಾವು ಒಂದಂಶವನ್ನು ಮರೆತು ಬಿಟ್ಟಿದ್ದೇವೆ. ನಾವೇ ಇಲ್ಲದ ಮೇಲೆ ನಾವು ಕಟ್ಟಿರುವ ಸಾಮ್ರಾಜ್ಯ , ಯಶಸ್ಸು ಯಾರಿಗೆ? ಹಣ, ಸಂಪಾದನೆ, ಯಶಸ್ಸು ಬೇಕು. ಆದರೆ ಅವುಗಳನ್ನು ಅನುಭವಿಸಲು ಮೊದಲು ನಾವು ಚನ್ನಾಗಿರಬೇಕು ಎನ್ನುವ ಸರಳ ಸತ್ಯವನ್ನು ನಾವು ಅರಿಯಬೇಕಾಗಿದೆ. ಆಗ ಒತ್ತಡ ತಾನಾಗೆ ಕಡಿಮೆಯಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com