
ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷದ ವಿಶ್ವ ಆರೋಗ್ಯ ದಿನದ ಘೋಷವಾಕ್ಯ “ಅರೋಗ್ಯಕರ ಆರಂಭ, ಭರವಸೆಯ ಭವಿಷ್ಯ”. ಈ ಘೋಷವಾಕ್ಯವು ವಿಶ್ವ ಆರೋಗ್ಯ ಸಂಸ್ಥೆಯ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯವನ್ನು ಕುರಿತು ಒಂದು ವರ್ಷಪೂರ್ತಿ ನಡೆಸಲಿರುವ ಅಭಿಯಾನದ ಆರಂಭವನ್ನು ಸೂಚಿಸುತ್ತದೆ.
"ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ" ಘೋಷಣೆಯು ಅಭಿವೃದ್ಧಿ ಹೊಂದುತ್ತಿರುವ ಸಮುದಾಯಗಳು ಮತ್ತು ಸಮಾಜಗಳ ನಿರ್ಮಾಣದಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯವು ವಹಿಸುವ ಮೂಲಭೂತ ಪಾತ್ರವನ್ನು ಸಾರುತ್ತದೆ. ಈ ಅಭಿಯಾನವು ಗರ್ಭಧಾರಣೆ, ಹೆರಿಗೆ ಮತ್ತು ಜೀವನದ ಆರಂಭಿಕ ಹಂತಗಳಿಗೆ ಸಂಬಂಧಿಸಿದ ತಡೆಗಟ್ಟಬಹುದಾದ ಸಾವಿನ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಜಾಗತಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಪಂಚದಲ್ಲಿ ಪ್ರತಿ ವರ್ಷ ಸುಮಾರು ಮೂರು ಲಕ್ಷ ಮಹಿಳೆಯರು ಗರ್ಭಧಾರಣೆ ಅಥವಾ ಹೆರಿಗೆಯ ತೊಡಕುಗಳಿಂದ ಸಾಯುತ್ತಾರೆ. ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಶಿಶುಗಳು ಮೊದಲ ತಿಂಗಳು ಮುಗಿಯುವುದರೊಳಗೆ ಸಾಯುತ್ತವೆ ಮತ್ತು ಇನ್ನೂ ಇಪ್ಪತ್ತು ಲಕ್ಷ ಶಿಶುಗಳು ಸತ್ತೇ ಜನಿಸುತ್ತವೆ ಎಂಬ ವಿಷಯ ನಮ್ಮಲ್ಲಿ ದಿಗ್ಭ್ರಮೆ ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಅರ್ಥಪೂರ್ಣವಾದ ಅಭಿಯಾನವನ್ನು ನಡೆಸುವ ಘೋಷಣೆ ಮಾಡಿರುವುದು ಸಾರ್ಥಕವಾಗಿದೆ.
ಮಹಿಳೆಯರು ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆ ಪೂರ್ವ ಅವಧಿಯಲ್ಲಿ ತಮ್ಮ ಆರೋಗ್ಯವನ್ನು ಹುಷಾರಾಗಿ ಕಾಪಾಡಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ನಿಯಮಿತ ಪ್ರಸವಪೂರ್ವ ತಪಾಸಣೆಗಳು ಅತ್ಯಗತ್ಯ.
ತಾಜಾ ತರಕಾರಿಗಳು, ಹಸಿರು ಸೊಪ್ಪು, ಹಣ್ಣುಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುವ ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟಿನುಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ತಾಯಿ ಮತ್ತು ಮಗು ಆರೋಗ್ಯಕ್ಕೆ ಹಿತಕಾರಿ. ದೇಹದಲ್ಲಿ ಸಾಕಷ್ಟು ನೀರಿನಂಶವನ್ನು ಕಾಪಾಡಿಕೊಳ್ಳುವುದು, ನಡಿಗೆ ಅಥವಾ ಪ್ರಸವಪೂರ್ವ ಯೋಗದಂತಹ ಮಧ್ಯಮ ರೀತಿಯ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು (ವೈದ್ಯರ ಸಲಹೆ ಮೇರೆಗೆ) ಮತ್ತು ಮದ್ಯಪಾನ, ಧೂಮಪಾನ ತ್ಯಜಿಸುವುದು ಮತ್ತು ಅನಗತ್ಯ ಔಷಧಿಗಳನ್ನು ತೆಗೆದುಕೊಳ್ಳದೇ ಇರುವುದು ಅಪಾಯಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಈ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಹೆರಿಗೆಯ ಸಮಯದಲ್ಲಿ ವೈದ್ಯಕೀಯ ಸಲಹೆಯನ್ನು ಸರಿಯಾಗಿ ಅನುಸರಿಸುವುದು, ಶಾಂತವಾಗಿರುವುದು ಮತ್ತು ಆರೈಕೆ ಮಾಡುವವರಿಗೆ ತಮ್ಮ ಅಗತ್ಯಗಳನ್ನು ತಿಳಿಸುವುದು ಮುಖ್ಯ.
ಹೆರಿಗೆಯ ನಂತರ ತಾಯಿಯ ಆರೋಗ್ಯವೂ ಮಗುವಿನ ಆರೋಗ್ಯದಷ್ಟೇ ಮುಖ್ಯ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯುವುದು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ವಿಶೇಷವಾಗಿ ಸಿಸೇರಿಯನ್ ಅಥವಾ ಸಂಕೀರ್ಣ ಹೆರಿಗೆಯ ನಂತರ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಕೆಲವರಿಗೆ ಪ್ರಸವಾನಂತರದ ಖಿನ್ನತೆ ಕಾಣಿಸಿಕಿದರೆ ಅದನ್ನು ನಿರ್ವಹಣೆ ಮಾಡಬೇಕು ಮತ್ತು ತಕ್ಷಣ ಸಹಾಯವನ್ನು ಪಡೆಯಬೇಕು. ಈ ಸಮಯದಲ್ಲಿ ಆತ್ಮವಿಶ್ವಾಸ, ಕುಟುಂಬದ ಅಥವಾ ವೃತ್ತಿಪರರಿಂದ ಭಾವನಾತ್ಮಕ ಬೆಂಬಲವು ಅತ್ಯಗತ್ಯ.
ಇನ್ನು ನವಜಾತ ಶಿಶುವನ್ನು ನೋಡಿಕೊಳ್ಳಲು ತಾಯಿಗೆ ಸಾಕಷ್ಟು ತಾಳ್ಮೆ ಮತ್ತು ಶಾಂತ ಮನಸ್ಥಿತಿ ಬೇಕು. ಜೊತೆಗೆ ತಾಯಿ ಮತ್ತು ಮಗುವನ್ನು ನೋಡಿಕೊಳ್ಳುವವರೂ ಶಾಂತಮನಸ್ಕರಾಗಿರಬೇಕು.
ನವಜಾತ ಶಿಶುಗಳಿಗೆ ಪ್ರತಿ 2-3 ಗಂಟೆಗಳಿಗೊಮ್ಮೆ ಹಾಲುಣಿಸಬೇಕಾಗುತ್ತದೆ. ಮಗುವಿನ ಬೆಳವಣಿಗೆಗೆ ಅತ್ಯಗತ್ಯ ಪೋಷಕಾಂಶಗಳನ್ನು ಒದಗಿಸುವುದರಿಂದ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಸ್ತನ್ಯಪಾನ ಬಹುಮುಖ್ಯ.
ನವಜಾತ ಶಿಶುಗಳು ದಿನಕ್ಕೆ ಸುಮಾರು 16-18 ಗಂಟೆಗಳ ಕಾಲ ನಿದ್ರಿಸುತ್ತವೆ. ಮಗುವನ್ನು ಯಾವಾಗಲೂ ಬೆನ್ನಿನ ಮೇಲೆ ಮಲಗಿಸಿ. ಹಿತವಾಗಿರುವ ಹಾಸಿಗೆಯಲ್ಲಿ ಅವುಗಳನ್ನು ಮಲಗಿಸಬೇಕು. ಅತಿಯಾಗಿ ಹೊದಿಕೆಯಿಂದ ಮುಚ್ಚಬಾರದು.
ಈ ಶಿಶುಗಳಿಗೆ ದೈನಂದಿನ ಸ್ನಾನದ ಅಗತ್ಯವಿಲ್ಲ - ವಾರಕ್ಕೆ ಮೂರು-ನಾಲ್ಕು ಸ್ನಾನ ಮಾಡಿಸಿದರೆ ಸಾಕು. ಉಗುರು ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಸೋಪ್ ಬಳಸಿ. ಹೊಕ್ಕುಳಬಳ್ಳಿಯ ಗುರುತು ನೈಸರ್ಗಿಕವಾಗಿ ಉದುರಿಹೋಗುವವರೆಗೆ ಅದನ್ನು ಒಣಗಿಸಿ ಮತ್ತು ಸ್ವಚ್ಛವಾಗಿಡಬೇಕು.
ಶಿಶುಗಳಲ್ಲಿ ದದ್ದುಗಳನ್ನು ತಡೆಗಟ್ಟಲು ಆಗಾಗ್ಗೆ ಬಟ್ಟೆ/ಡೈಪರ್ಗಳನ್ನು ಬದಲಾಯಿಸಿ. ಮಗುವಿನ ಕೆಳಭಾಗವನ್ನು ಮೃದುವಾದ ಒರೆಸುವ ಬಟ್ಟೆಗಳು ಅಥವಾ ಹತ್ತಿ ಮತ್ತು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಬೇಕು. ಹಸಿವು, ಒದ್ದೆಯಾದ ಡೈಪರ್ಗಳು ಅಥವಾ ತಾಪಮಾನ ಮುಂತಾದ ಹಲವು ಕಾರಣಗಳಿಗಾಗಿ ಶಿಶುಗಳು ಅಳುತ್ತವೆ. ಆಗ ಅವುಗಳನ್ನು ನಿಧಾನವಾಗಿ ಮುದ್ದಾಡಿ ಸಾಂತ್ವನಗೊಳಿಸಬೇಕು.
ಸೋಂಕುಗಳನ್ನು ತಡೆಗಟ್ಟಲು ಮಗುವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಿರಿ. ಮಗುವನ್ನು ಅನಾರೋಗ್ಯ ಪೀಡಿತರಿಂದ ದೂರವಿಡಿ. ಸುಭದ್ರ ಭಾವನಾತ್ಮಕ ಬಂಧವನ್ನು ನಿರ್ಮಿಸಲು ನಿಮ್ಮ ಮಗುವಿನೊಂದಿಗೆ ಮಾತನಾಡಿ, ಹಾಡಿ ಮತ್ತು ಮುದ್ದಾಡಿ. ತಾಯಿಯಿಂದ ಮಗುವಿಗೆ ಉಂಟಾಗುವ ಚರ್ಮದಿಂದ ಚರ್ಮಕ್ಕೆ ಸಂಪರ್ಕವು ಮಕ್ಕಳಲ್ಲಿ ಸುರಕ್ಷತೆಯ ಭಾವನೆಯನ್ನು ಹೆಚ್ಚಿಸುತ್ತದೆ.
ನವಜಾತ ಶಿಶುವನ್ನು ನೋಡಿಕೊಳ್ಳುವುದು ಸವಾಲಿನ ಆದರೆ ಸಾರ್ಥಕ ಕೆಲಸ. ಪ್ರೀತಿ ಮತ್ತು ತಾಳ್ಮೆಯಿಂದ ನವಜಾತ ಶಿಶುಗಳಿಗೆ ಉತ್ತಮ ಆರೋಗ್ಯದ ಭವಿಷ್ಯದ ಭರವಸೆಯನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ.
Advertisement