ಆರೋಗ್ಯಕ್ಕಾಗಿ ಎಳನೀರು; ಪ್ರಯೋಜನಗಳು... (ಕುಶಲವೇ ಕ್ಷೇಮವೇ)

ಎಳನೀರು ನೈಸರ್ಗಿಕವಾಗಿದ್ದು ಮಾನವ ರಕ್ತದಂತೆಯೇ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಹೊಂದಿದೆ. ಇದು ದೇಹವನ್ನು ಪುನರ್ಜಲೀಕರಣಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
Tender Coconut
ಎಳನೀರುonline desk
Updated on

ಹಸಿರು ತೆಂಗಿನಕಾಯಿಯೊಳಗೆ ಕಂಡುಬರುವ ಪಾರದರ್ಶಕ ಮತ್ತು ಸಿಹಿ ದ್ರವವಾದ ಎಳನೀರನ್ನು ಸಾಮಾನ್ಯವಾಗಿ "ಪ್ರಕೃತಿಯ ಶಕ್ತಿ ಪಾನೀಯ" ಎಂದು ಕರೆಯಲಾಗುತ್ತದೆ. ಇದು ಅತ್ಯಂತ ತಾಜಾ ಕಡಿಮೆ ಕ್ಯಾಲೋರಿಗಳಿರುವ ಪಾನೀಯವಾಗಿದ್ದು ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಉಷ್ಣವಲಯದ ದೇಶಗಳಲ್ಲಿ ಜನಪ್ರಿಯ ಆರೋಗ್ಯ ಪಾನೀಯವಾಗಿದೆ. ಎಲೆಕ್ಟ್ರೋಲೈಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳ ವಿಶಿಷ್ಟ ಮಿಶ್ರಣದೊಂದಿಗೆ ಎಳನೀರು ಎಲ್ಲಾ ವಯಸ್ಸಿನ ಜನರಿಗೆ ಆರೋಗ್ಯಕಾರಿಯಾಗಿದೆ.

ಎಳನೀರಿನಲ್ಲಿ ಸಮತೋಲಿತ ಎಲೆಕ್ಟ್ರೋಲೈಟುಗಳು

ಎಳನೀರು ನೈಸರ್ಗಿಕವಾಗಿದ್ದು ಮಾನವ ರಕ್ತದಂತೆಯೇ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಹೊಂದಿದೆ. ಇದು ದೇಹವನ್ನು ಪುನರ್ಜಲೀಕರಣಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ವ್ಯಾಯಾಮ, ಅತಿಯಾದ ಬೆವರುವಿಕೆ ಅಥವಾ ಅತಿಸಾರ ಮತ್ತು ಜ್ವರವಿದ್ದಾಗ ಎಳನೀರನ್ನು ಕುಡಿಯುವುದು ಹಿತಕರ. ಇದರಲ್ಲಿರುವ ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ದೇಹದಲ್ಲಿ ದ್ರವ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ಸಕ್ಕರೆ ಇರುವ ಪಾನೀಯಗಳಿಗಿಂತ ಭಿನ್ನವಾಗಿ ಇದು ಯಾವುದೇ ಕೃತಕ ವಸ್ತುಗಳಿಲ್ಲದೇ ದೇಹಕ್ಕೆ ತಕ್ಷಣ ಬೇಕಾದ ನೀರಿನ ಪ್ರಮಾಣವನ್ನು ಒದಗಿಸುತ್ತದೆ.

ಎಳನೀರಿನಲ್ಲಿ ಪೊಟ್ಯಾಸಿಯಮ್ ಅಂಶ

ಒಂದು ಲೋಟ ಎಳನೀರು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ಅನ್ನು ಒದಗಿಸುತ್ತದೆ. ಇದು ಹೃದಯದ ಆರೋಗ್ಯ, ಸ್ನಾಯುಗಳ ಕಾರ್ಯ ಮತ್ತು ದ್ರವ ನಿಯಂತ್ರಣಕ್ಕೆ ಅಗತ್ಯವಾದ ಖನಿಜ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ ಮತ್ತು ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ನಂತಹ ಜೀವಸತ್ವಗಳನ್ನು ಸಹ ಎಳನೀರು ಹೊಂದಿರುತ್ತದೆ. ಈ ಪೋಷಕಾಂಶಗಳು ದೈಹಿಕ ಕಾರ್ಯಗಳನ್ನು ನಿರ್ವಹಿಸಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚಯಾಪಚಯ ಚಟುವಟಿಕೆಗಳನ್ನು ಬೆಂಬಲಿಸಲು ಸಹಾಯ ಮಾಡುತ್ತವೆ.

ಪೊಟ್ಯಾಸಿಯಮ್ ಅಂಶವು ದೇಹದಲ್ಲಿ ಸೋಡಿಯಂನ ಪರಿಣಾಮಗಳನ್ನು ಸಮತೋಲನಗೊಳಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಿವೆ. ಇದು ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಹೃದಯ ಸಂಬAಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Tender Coconut
ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)

ಎಳನೀರು ಮೂತ್ರವರ್ಧಕ

ಎಳನೀರು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಮೂತ್ರ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ವಿಷವನ್ನು ಹೊರಹಾಕಲು ಮತ್ತು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಮತ್ತು ಅವುಗಳ ಮತ್ತೆ ರೂಪುಗೊಳ್ಳುವುದನ್ನು ತಡೆಯುತ್ತದೆ ಮತ್ತು ಒಡೆಯಲು ಸಹಾಯ ಮಾಡುತ್ತದೆ. ಇದು ಮೂತ್ರನಾಳವನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಎಳನೀರು ಸಹಾಯ

ಎಳನೀರಿನಲ್ಲಿ ಕ್ಯಾಟಲೇಸ್, ಪೆರಾಕ್ಸಿಡೇಸ್ ಮತ್ತು ಡಿಹೈಡ್ರೋಜಿನೇಸ್‌ನಂತಹ ಜೈವಿಕ ಸಕ್ರಿಯ ಕಿಣ್ವಗಳಿವೆ. ಈ ಕಿಣ್ವಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ, ಅನಿಲ ಅಥವಾ ಉಬ್ಬುವಿಕೆಯಿಂದ ಬಳಲುತ್ತಿರುವ ಜನರಿಗೆ ಎಳನೀರು ಉತ್ತಮ ಪರಿಹಾರ.

ಎಳನೀರು ಚರ್ಮದ ರಚನೆ ಮತ್ತು ಹೊಳಪನ್ನು ಸುಧಾರಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಇದು ಮೊಡವೆ, ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬು ರಹಿತವಾಗಿರುವುದರಿಂದ ಎಳನೀರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಪಾನೀಯವಾಗಿದೆ. ಎಳನೀರನ್ನು ಕುಡಿದ ನಂತರ ಹೊಟ್ಟೆ ತುಂಬಿದ ಅನುಭವ ಆಗುತ್ತದೆ.

ಮಧುಮೇಹ ಹೊಂದಿರುವವರು ಎಳನೀರು ಸೇವನೆ ಬಗ್ಗೆ ಎಚ್ಚರವಿರಲಿ

ಸಾಮಾನ್ಯವಾಗಿ 200 ಮಿಲಿಲೀಟರ್ ಎಳನೀರಿನಲ್ಲಿ ಸುಮಾರು 6–7 ಗ್ರಾಂ ನೈಸರ್ಗಿಕ ಸಕ್ಕರೆ ಇರುತ್ತದೆ ಇದು ಹಣ್ಣಿನ ರಸಗಳು ಅಥವಾ ತಂಪು ಪಾನೀಯಗಳಲ್ಲಿ ಕಂಡುಬರುವುದಕ್ಕಿಂತ ಕಡಿಮೆ. ಆದರೂ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧ ಹೊಂದಿರುವ ಜನರು ಎಳನೀರನ್ನು ಸೇವಿಸಿದಾಗ ನೈಸರ್ಗಿಕ ಸಕ್ಕರೆಯು ಅವರ ರಕ್ತದಲ್ಲಿನ ಸಕ್ಕರೆಯಲ್ಲಿ ಏರಿಕೆಗೆ ಕಾರಣವಾಗಬಹುದು ಎಂಬುದನ್ನು ಗಮನದಲ್ಲಿಡಬೇಕು.

ಎಳನೀರಿನ ತೆಂಗಿನಕಾಯಿ

ತೆಂಗಿನಕಾಯಿ ಸೇವನೆಯಿಂದ ಅಲರ್ಜಿ ಉಂಟಾಗುವುದು ಅಪರೂಪ. ಆದರೂ ಕೆಲವು ಜನರು ಎಳನೀರನ್ನು/ತೆಂಗಿನ ಉತ್ಪನ್ನಗಳನ್ನು ಸೇವಿಸಿದಾಗ ತುರಿಕೆ, ಊತ ಮತ್ತು ಚರ್ಮ ಕೆಂಪಾಗುವುವಂತಹ ಲಕ್ಷಣಗಳು ಕಾಣಬಹುದು. ಅಂತಹ ಜನರು ಸ್ವಲ್ಪ ಎಚ್ಚರದಿಂದಿರಬೇಕು. ಹಾಗೆಯೇ ಮೂತ್ರಕೋಶದ ಸಮಸ್ಯೆಯಿದ್ದವರೂ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಸಿಯಂ ಮೂತ್ರಕೋಶದಲ್ಲಿ ರಕ್ತದ ಹರಿವು ಹೆಚ್ಚಿಸಿ ಹಾನಿ ಉಂಟುಮಾಡಬಹುದು. ನೆಗಡಿ, ಕೆಮ್ಮು ಮತ್ತು ಫ್ಲೂ ಇದ್ದಾಗ ಎಳನೀರನ್ನು ಸೇವಿಸಬಾರದು. ರಕ್ತದೊತ್ತಡ ಇರುವವರು ಮತ್ತು ಎಲೆಕ್ಟ್ರೋಲೈಟುಗಳಿಗೆ ಸಂವೇದನಾಶೀಲತೆ ಇರುವವರು ಎಳನೀರಿನ ಸೇವನೆ ಬಗ್ಗೆ ಹುಷಾರಾಗಿರಬೇಕು.

ಈ ವಿಷಯಗಳನ್ನು ಬಿಟ್ಟು ಒಟ್ಟಾರೆಯಾಗಿ ಹೇಳುವುದಾದರೆ ಎಳನೀರು ಕೇವಲ ಬೇಸಿಗೆ ಕಾಲದ ಉಲ್ಲಾಸಕರ ಪಾನೀಯವಲ್ಲ. ಇದು ದೇಹದಲ್ಲಿ ದ್ರವ ಸಮತೋಲನ ಹೆಚ್ಚಿಸುವ ಜೊತೆಗೆ ಆರೊಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಹೃದಯ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಚರ್ಮದ ಹೊಳಪನ್ನು ಹೆಚ್ಚಿಸಲು ನೆರವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ನಿಯಮಿತವಾಗಿ ಎಳನೀರನ್ನು ಸೇವಿಸಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com