
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳುವುದಿಲ್ಲ. ಮಾಹಿತಿ ನೀಡಿದರೂ ಅದನ್ನು ಅವರು ಗಮನಿಸುವುದಿಲ್ಲ. ಅವರ ಮನಸ್ಸಿಗೆ ಬಂದದ್ದು ಮಾತ್ರ ಅವರು ಮಾಡುತ್ತಾರೆ ಎನ್ನುವುದು ಟ್ರಂಪ್ ಸಲಹೆಗಾರರ ಮಾತು. ಟ್ರಂಪ್ ಬಳಿ ಯಾರೂ ಹೆಚ್ಚು ಕಾಲ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಡಿಫೆನ್ಸ್ ಆಡ್ವೈಸರ್ ಒಂದು ವರ್ಷದ ಮೇಲೆ ಒಂದಷ್ಟು ದಿನ ಕೆಲಸ ಮಾಡಿದ್ದಾರೆ ಮತ್ತು ಅದು ಹೆಚ್ಚು ಸಮಯ ಕೆಲಸ ಮಾಡಿದ ಲೆಕ್ಕದಲ್ಲಿ ಬರುತ್ತದೆ ಎಂದರೆ ನೀವು ಅವರ ಸ್ಟಾಫ್ ಟರ್ನ್ ಓವರ್ ಎಷ್ಟಿರಬಹುದು ಎನ್ನುವುದನ್ನು ಲೆಕ್ಕ ಹಾಕಬಹುದು.
ಟ್ರಂಪ್ ನಾರ್ತ್ ಕೊರಿಯಾದ ಕಿಮ್ ಅವರನ್ನು ಭೇಟಿ ಮಾಡಿದ ನಂತರ ' ಅವರೊಬ್ಬ ಫ್ಯಾಂಟಸಿಟಿಕ್ ಮನುಷ್ಯ ಎನ್ನುತ್ತಾರೆ. ಪುಟಿನ್ ನನ್ನ ಒಳ್ಳೆಯ ಸ್ನೇಹಿತ ಎನ್ನುತ್ತಾರೆ. ಮೋದಿ ಇಸ್ ಫ್ರೆಂಡ್ ಎನ್ನುತ್ತಾರೆ. ಚೀನಾ ಅಧ್ಯಕ್ಷ ಜಿ ಪಿಂಗ್ ನೊಂದಿಗೆ ನನ್ನ ಬಾಂಧವ್ಯ ಬಹಳ ಉತ್ತಮವಾಗಿದೆ ಎನ್ನುತ್ತಾರೆ. ಹೌದು ವೈಯಕ್ತಿಕ ಮಟ್ಟದಲ್ಲಿ ಯಾರೊಬ್ಬರೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ಅವರ ದೇಶಕ್ಕೆ ಹೋದಾಗ ಅಥವಾ ಬಂದಾಗ ಎಲ್ಲರೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಅವರವರ ದೇಶದ ಹಿತಾಸಕ್ತಿ ವಿಷಯ ಬಂದಾಗ ಅವರ ನಡೆ ಬದಲಾಗುತ್ತಿದೆ.
ಟ್ರಂಪ್ ಪುಟಿನ್ ನನ್ನ ಸ್ನೇಹಿತ ಎಂದು ನೋಡುತ್ತಾರೆ. ಆದರೆ ಪುಟಿನ್ ಟ್ರಂಪ್ ನನ್ನು ಎಂದಿಗೂ ಸ್ನೇಹಿತ ಎಂದು ನೋಡುವುದಿಲ್ಲ. ಚೀನಾದ ಜಿ ಪಿಂಗ್ ಎಂದಿಗೂ ಟ್ರಂಪ್ ನನ್ನು ಗೆಳೆಯ ಎನ್ನುವುದಿಲ್ಲ. ಇದು ಟ್ರಂಪ್ಗೆ ಅರ್ಥವಾಗುವುದಿಲ್ಲ. ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದರೆ ವ್ಯಾಪಾರ ಸುಲಭವಾಗುತ್ತದೆ ಎನ್ನುವುದು ಸಂಸ್ಥೆಗಳ ವ್ಯಾಪಾರ ಮತ್ತು ವಹಿವಾಟಿನಲ್ಲಿ ಒಪ್ಪಬಹುದು ಆದರೆ ರಾಜಕೀಯದಲ್ಲಿ, ಅದರಲ್ಲೂ ದೇಶಗಳ ಹಿತಾಸಕ್ತಿ ವಿಷಯದಲ್ಲಿ ಇದನ್ನು ಒಪ್ಪುವಂತಿಲ್ಲ ಎನ್ನುವ ಸಾಮಾನ್ಯಜ್ಞಾನ ಆತನಿಗೆ ಇಲ್ಲ ಎನ್ನುವುದು ಆತನ ಸಲಹೆಗಾರರಾಗಿ ಕೆಲಸ ಮಾಡಿದ ಹಲವಾರು ಜನರ ಅಭಿಪ್ರಾಯ.
ಸಲಹೆಗಾರರನ್ನು ಹೆಸರಿಗೆ ಮಾತ್ರ ಇಟ್ಟುಕೊಳ್ಳುವ ಟ್ರಂಪ್ ಅವರು ನೀಡಿದ ಸೂಚನೆಗಳನ್ನು ಎಂದಿಗೂ ಪಾಲಿಸುವುದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಆ ಕ್ಷಣದಲ್ಲಿ ಮನಸ್ಸಿಗೆ ಏನು ಬರುತ್ತದೆ ಅದನ್ನು ಹೇಳುವುದು ಆತನ ಹವ್ಯಾಸ. ಹೀಗಾಗಿ ಅವರ ದೇಶದ ದ್ವಂದ್ವ ನೀತಿಯನ್ನು ಪತ್ರಕರ್ತರು ಪ್ರಶ್ನಿಸಿದಾಗ ಅದರ ಬಗ್ಗೆ ಗೊತ್ತಿಲ್ಲ ಎನ್ನುವ ಉತ್ತರವನ್ನು ಆತ ಮುಜುಗರವಿಲ್ಲದೆ ನೀಡುತ್ತಾರೆ. ಜಗತ್ತಿಗೆ ಗೊತ್ತಿರುವ ಸತ್ಯ ಟ್ರಂಪ್ ಗೆ ಗೊತ್ತಿಲ್ಲ ಎನ್ನುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಆತನಿಗೆ ಆಗದ ಮುಜುಗರ ವೈಟ್ ಹೌಸ್ ಅನುಭವಿಸಬೇಕಾಗುತ್ತದೆ. ಟ್ರಂಪ್ ಒಬ್ಬ ವ್ಯಾಪಾರಿ. ಆತನಿಗೆ ತನ್ನ ಲಾಭಕ್ಕೆ ಇತರರನ್ನು ಮಣಿಸಿಕೊಳ್ಳುವುದು ಗೊತ್ತಿದೆ. ಆದರೆ ದೇಶಗಳ ನಡುವಿನ ವ್ಯಾಪಾರ ಕೇವಲ ವ್ಯಾಪಾರವಾಗಿ ಉಳಿದುಕೊಳ್ಳೋವುದಿಲ್ಲ. ಅಲ್ಲಿ ದೇಶದ ಹಿರಿಮೆ ಮತ್ತು ಗರಿಮೆ ಕೂಡ ಮಾನ್ಯತೆ ಪಡೆದುಕೊಳ್ಳುತ್ತದೆ. ಟ್ರಂಪ್ ರಾಜಕಾರಿಣಿಯಲ್ಲ ಕೇವಲ ವ್ಯಾಪಾರಿ ಎನ್ನುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯ್ತು.
ಆತನ ಹುಚ್ಚಾಟಗಳು ಒಂದಲ್ಲ ಎರಡಲ್ಲ. ಅವರ ತೆರಿಗೆ ಯುದ್ಧ ಅಥವಾ ತೆರಿಗೆ ನೀತಿ ಅದಕ್ಕೆ ಹೊಸ ಸೇರ್ಪಡೆ. ಭಾರತದ ಮೇಲೆ ಅವರು 25 ಪ್ರತಿಶತ ತೆರಿಗೆ ಹಾಕಿದ್ದರು. ಒಂದರೆಡು ದಿನಗಳಲ್ಲಿ ಅದನ್ನು ಇನ್ನೊಂದು ೨೫ ಪ್ರತಿಶತ ಹೆಚ್ಚಿಸಿ, ಈಗ 50 ಪ್ರತಿಶತ ತೆರಿಗೆಯನ್ನು ಹಾಕಿದ್ದಾರೆ. ಗಮನಿಸಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಪದಾರ್ಥಗಳ ಮೇಲೆ ಈ ರೀತಿಯ ತೆರಿಗೆಯನ್ನು ಹಾಕಲಾಗಿದೆ. ಅಂದರೆ ಭಾರತದಿಂದ ಒಂದು ವಸ್ತು 100 ರೂಪಾಯಿ ಮೌಲ್ಯದ್ದು ಹೊರಟರೆ 50 ರೂಪಾಯಿ ಸುಂಕ ಕಟ್ಟಿ ಅಲ್ಲಿನ ವರ್ತಕರು ಅದನ್ನು ಬಿಡಿಸಿ ಕೊಳ್ಳಬೇಕು. ವಸ್ತುವಿನ ಮೌಲ್ಯ ಈಗ 150 ರೂಪಾಯಿ ಆಯ್ತು. ವರ್ತಕ ಅದನ್ನು ತನ್ನ ಜೇಬಿನಿಂದ ಕೊಡಲು ಸಾಧ್ಯವಿಲ್ಲ. ಹೀಗಾಗಿ ಅವನು ಅದನ್ನು ಗ್ರಾಹಕರ ಮೇಲೆ ಹಾಕುತ್ತಾನೆ. ಗ್ರಾಹಕರಿಗೆ 50 ರೂಪಾಯಿ ಹೆಚ್ಚಿನ ಹೊರೆ ಆಯ್ತು. ಇದರಿಂದ ಎರಡು ಸಾಧ್ಯತೆಗಳನ್ನು ನಾವು ಗಮನಿಸಬೇಕಾಗುತ್ತದೆ. ಒಂದು ಗ್ರಾಹಕ ಹೆಚ್ಚು ಬೆಲೆಯುಳ್ಳ ಈ ಪದಾರ್ಥಗಳನ್ನು ಕೊಳ್ಳುವುದನ್ನು ಬಿಡುತ್ತಾನೆ. ಎರಡು , ಹತ್ತು ಕೊಳ್ಳುವ ಜಾಗದಲ್ಲಿ 5 ಅಥವಾ 6ಪದಾರ್ಥವನ್ನು ಕೊಳ್ಳುತ್ತಾನೆ. ಅಂದರೆ ಗಮನಿಸಿ ಭಾರತದ ಪದಾರ್ಥಗಳ ಬೇಡಿಕೆ ಕುಸಿತವಾಗುತ್ತದೆ. ಹೀಗೆ ಬೇಡಿಕೆ ಕುಸಿತವಾದಾಗ ನಿಧಾನವಾಗಿ ಭಾರತದಲ್ಲಿ ಈ ಪದಾರ್ಥಗಳನ್ನು ತಯಾರಿಸುವ ಸಂಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ವರ್ಷದಲ್ಲಿ 100 ಸಂಖ್ಯೆಯಲ್ಲಿ ತಯಾರಾಗುತ್ತಿದ್ದ ಪದಾರ್ಥ ಈಗ ಬೇಡಿಕೆ ಕುಸಿತದ ಕಾರಣ 50 ತಯಾರಾಗುತ್ತದೆ ಎಂದುಕೊಳ್ಳೋಣ. ಆಗ ಲಾಭಂಶ ಕೂಡ ಕುಸಿಯುತ್ತದೆ. ಮಾರಾಟದ ಅರ್ಧ ಕುಸಿದಾಗ ತನ್ನ ಇಂದಿನ ಸಾಮರ್ಥ್ಯದಲ್ಲಿ ಉತ್ಪಾದನೆ ಸಾಧ್ಯವಿಲ್ಲದ ಕಾರಣ ಸಂಸ್ಥೆ ಕೆಲಸಗಾರರನ್ನು ಕಡಿಮೆ ಮಾಡಿಕೊಳ್ಳುತ್ತದೆ. ತಾನು ಕೊಳ್ಳುವ ಕಚ್ಚಾ ಪದಾರ್ಥಗಳಲ್ಲಿ ಕಡಿತ ಮಾಡುತ್ತದೆ. ಹೀಗೆ ಇದೊಂದು ಚೈನ್ ರಿಯಾಕ್ಷನ್ ಗೆ ದಾರಿ ಮಾಡಿಕೊಡುತ್ತದೆ. ಪರೋಕ್ಷವಾಗಿ ಕಾಣುವ ಕುಸಿತದ ಜೊತೆಗೆ ಅಪರೋಕ್ಷವಾಗಿ ಕೂಡ ಬಹಳಷ್ಟು ಕುಸಿತಕ್ಕೆ ಇದು ನಾಂದಿ ಹಾಡುತ್ತದೆ.
2024-25 ರಲ್ಲಿ ಭಾರತ ಮತ್ತು ಅಮೇರಿಕಾ ನಡುವೆ ಒಟ್ಟಾರೆ 132 ಬಿಲಿಯನ್ ಡಾಲರ್ ವಹಿವಾಟು ನಡೆದಿದೆ. ಇದರಲ್ಲಿ ಭಾರತದಿಂದ ಅಮೆರಿಕಕ್ಕೆ ಕಳುಹಿಸಿದ ಮೌಲ್ಯ 87 ಬಿಲಿಯನ್ ಮತ್ತು ಅಲ್ಲಿಂದ ಇಲ್ಲಿಗೆ ಬಂದದ್ದು ೪೫ ಬಿಲಿಯನ್ ಡಾಲರ್. ಇದರರ್ಥ ಭಾರತ ಅಮೆರಿಕಾದ ಜೊತೆಗಿನ ವ್ಯಾಪಾರದಲ್ಲಿ ಸರ್ಪ್ಲಸ್ ನಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ನಾವು ಕಳಿಸುವ ಮೌಲ್ಯ ತರಿಸಿಕೊಳ್ಳುವ ಮೌಲ್ಯಕ್ಕಿಂತ ಹೆಚ್ಚಿದ್ದಾಗ ಅದನ್ನು ಟ್ರೇಡ್ ಸರ್ಪ್ಲಸ್ ಎನ್ನಲಾಗುತ್ತದೆ. ನಾವು ಕಳುಹಿಸಿದ ಮೌಲ್ಯ ಮತ್ತು ತರಿಸಿಕೊಂಡ ಮೌಲ್ಯ ಒಂದೇ ಆಗಿದ್ದಾಗ ಅದನ್ನು ಟ್ರೇಡ್ ಈಕ್ವಲ್ ಎನ್ನಲಾಗುತ್ತದೆ. ನಾವು ಕಳುಹಿಸಿದ ಮೌಲ್ಯ ತರಿಸಿಕೊಂಡ ಮೌಲ್ಯಕ್ಕಿಂತ ಕಡಿಮೆ ಇದ್ದಾಗ ಅದನ್ನು ಟ್ರೇಡ್ ಡೆಫಿಸಿಟ್ ಎನ್ನಲಾಗುತ್ತದೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ ಭಾರತ ಟ್ರೇಡ್ ಸರ್ಪ್ಲಸ್ ನಲ್ಲಿದೆ. ಅಮೇರಿಕಾ ಟ್ರೇಡ್ ಡೆಫಿಸಿಟ್ ನಲ್ಲಿದೆ. ಈ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಒಂದು ದೇಶದ ಮೇಲೆ ಹೆಚ್ಚಿನ ಅವಲಂಬನೆಯನ್ನು ಕಡಿತಗೊಳಿಸಲು ಸಹ ಈ ರೀತಿಯ ತೆರಿಗೆಯನ್ನು ಹಾಕಲಾಗುತ್ತದೆ.
ಭಾರತ ಸೇವೆಯನ್ನು ಅಂದರೆ ಸರ್ವಿಸ್ ಕೂಡ ನೀಡುತ್ತಿದೆ. ಸರ್ವಿಸ್ ಮೇಲೆ ಈ ತೆರಿಗೆ ಇಲ್ಲದ ಕಾರಣ ಸದ್ಯದ ಮಟ್ಟಿಗೆ ಐಟಿ ವಲಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಟ್ರಂಪ್ ಯಾವ ಕ್ಷಣದಲ್ಲೂ ಇವರಿಂದ ಸೇವೆ ಪಡೆಯುವುದು ಬೇಡ ಎನ್ನಬಹುದು. ಉಳಿದಂತೆ ಟೆಲಿಕಾಂ, ಮತ್ತು ಬೆಲೆಬಾಳುವ ಕಲ್ಲುಗಳ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ಜವಳಿ ಉದ್ದಿಮೆ ಮತ್ತು ಲೆದರ್ ಉದ್ದಿಮೆ, ಮೆಟಲ್ ಟ್ರೇಡಿಂಗ್ ,ಆಟೋಮೊಬೈಲ್ , ಕೆಮಿಕಲ್ ಹೀಗೆ ಅನೇಕ ಉದ್ದಿಮೆಗಳಿಗೆ ಸಂಕಷ್ಟ ಎದುರಾಗುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಒಂದಷ್ಟು ತಲ್ಲಣಗಳನ್ನು ಇದು ಸೃಷ್ಟಿಸಲಿದೆ.
ಒಟ್ಟಾರೆ ಹೇಳಬೇಕೆಂದರೆ ಅಮೇರಿಕಾ ತೆರಿಗೆ ಯುದ್ಧ ಭಾರತದ ಜಿಡಿಪಿಯ ಎರಡು ಪ್ರತಿಶತ ಕುಸಿತಕ್ಕೆ ಕಾರಣವಾಗಬಹುದು. ಅಂದರೆ ನಾವು ಬೇರೆ ಯಾವುದೇ ಹೆಜ್ಜೆಗಳನ್ನು ಇಡದೆ ಸುಮ್ಮನೆ ಕುಳಿತರೆ ಆಗ ಆಗುವ ಒಟ್ಟು ನಷ್ಟ ಎರಡು ಪ್ರತಿಶತ. ಅಂದರೆ ಗಮನಿಸಿ ಭಾರತದ ಒಟ್ಟು ವ್ಯಾಪಾರ ವಹಿವಾಟು ೧೦೦ ರೂಪಾಯಿ ಇದ್ದದ್ದು 98 ಕ್ಕೆ ಇಳಿಯುತ್ತದೆ. ಆದರೆ ಭಾರತ ಇದನ್ನು ಮನಗಂಡು ಅಮೇರಿಕಾ ದೇಶದಿಂದ ಆದ ವ್ಯಾಪಾರ ಕುಸಿತವನ್ನು ಬೇರೆ ದೇಶಗಳೊಂದಿಗೆ ಹೆಚ್ಚಿನ ವ್ಯಾಪಾರ ಮಾಡುವುದರ ಮೂಲಕ ಸರಿದೂಗಿಸಿ ಕೊಳ್ಳುವ ಪ್ರಯತ್ನದ್ದಲ್ಲಿದೆ. ಒಂದೆರೆಡು ವಾರಗಳ ಹಿಂದೆ ಇಂಗ್ಲೆಂಡ್ ದೇಶದೊಂದಿಗೆ ಮಾಡಿಕೊಂಡ ಟ್ರೇಡ್ ಒಪ್ಪಂದ ಅದಕೊಂದು ಉತ್ತಮ ಉದಾಹರಣೆ. ಇದರ ಜೊತೆಗೆ ಆಫ್ರಿಕನ್ ದೇಶಗಳಿಗೆ , ರಷ್ಯಾ ಮತ್ತು ಬ್ರೆಜಿಲ್ ದೇಶದೊಂದಿಗೆ ಸಹ ವ್ಯಾಪಾರ ವೃದ್ಧಿಸಿಕೊಳ್ಳುವ ದಾರಿಯಲ್ಲಿದ್ದೇವೆ. ಹೀಗಾಗಿ ತೆರಿಗೆಯುದ್ದದಲ್ಲಿ ಆಡ್ವಾಂಟೇಜ್ ಭಾರತ ಎನ್ನಲು ಅಡ್ಡಿಯಿಲ್ಲ. ಹೀಗಾಗಿ ಭಾರತ ಸರಕಾರ ಅಮೆರಿಕಾದ ಒತ್ತಡಕ್ಕೆ ಮಣಿಯದೆ ಸೆಟೆದು ನಿಂತಿದೆ.
ಈ ಸುಂಕ ಸಮರದಲ್ಲಿ ಹೆಚ್ಚಿನ ಪೆಟ್ಟು ತಿನ್ನುತ್ತಿರುವವರು ಸಾಮಾನ್ಯ ಮತ್ತು ಅತಿ ಸಾಮಾನ್ಯ ಅಮೆರಿಕನ್ನರು. ಅಮೆರಿಕಾದ ಹನ್ನೊಂದು ರಾಜ್ಯದಲ್ಲಿ ವಾಲ್ ಮಾರ್ಟ್ ತನ್ನ ಶಾಖೆಗಳನ್ನು ಮುಚ್ಚುತ್ತಿದೆ. ವಾಲ್ ಮಾರ್ಟಿಗೆ ಬರುವ ಪದಾರ್ಥಗಳಲ್ಲಿ ಹೆಚ್ಚು ಬರುವುದು ಚೀನಾದಿಂದ ಸುಂಕ ಹೆಚ್ಚಾಗಿರುವ ಕಾರಣ ಪದಾರ್ಥಗಳ ಬೆಲೆ ಕೂಡ ಹೆಚ್ಚಾಗಿದೆ. ಹೀಗಾಗಿ ವಾರಕ್ಕೆ 200/300 ಡಾಲರಿನ ವಹಿವಾಟು ನಡೆಸುತ್ತಿದ್ದ ಸಾಮಾನ್ಯ ಗ್ರಾಹಕ ಅದನ್ನು 40/50 ಡಾಲರಿಗೆ ಇಳಿಸಿಕೊಂಡಿದ್ದಾನೆ. ಬೆಲೆ ಹೆಚ್ಚಳದ ಜೊತೆಗೆ ನಾಳಿನ ಬಗ್ಗೆ ಎದ್ದಿರುವ ಅಪನಂಬಿಕೆ ಅವನನ್ನು ಖರ್ಚು ಮಾಡದೆ ಇರಲು ಪ್ರೇರೇಪಿಸಿವೆ. ಹೀಗಾಗಿ ಎಲ್ಲೆಲ್ಲಿ ಬಡವ ಅಥವಾ ಕೆಲ ಮಧ್ಯಮವರ್ಗದ ಜನರಿದ್ದಾರೆ ಅಲ್ಲಿ ವಾಲ್ ಮಾರ್ಟ್ ತನ್ನ ಅಂಗಡಿಗಳನ್ನು ಮುಚ್ಚುತ್ತಿದೆ. ಅವರಿಗೆ ಅಂಗಡಿ ತೆಗೆಯಲು ಬೇಕಾಗುವ ಹಣ ಕೂಡ ಹುಟ್ಟುತ್ತಿಲ್ಲ ಎನ್ನುವುದು ವಾಸ್ತವಕ್ಕೆ ಹಿಡಿದ ಕನ್ನಡಿ.
ಕೊನೆಮಾತು: ಭಾರತದ ವ್ಯಾಪಾರದ ಲೆಕ್ಕಾಚಾರದಲ್ಲಿ ನೋಡಿದರೆ ನಮಗೆ ನಷ್ಟವಾಗುತ್ತದೆ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ನಷ್ಟವನ್ನು ಅಮೇರಿಕಾ ಅನುಭವಿಸುತ್ತದೆ ಎನ್ನುವುದು ಕೂಡ ಸರಳ ಸತ್ಯ. ಇತಿಹಾಸದ ಉದ್ದಗಲಕ್ಕೂ ನೋಡುತ್ತಾ ಬಂದರೆ ಶತ್ರುವಿನ ಎರಡು ಕಣ್ಣು ತೆಗೆಯಲು ನನ್ನ ಒಂದು ಕಣ್ಣು ಹೋದರು ಪರವಾಗಿಲ್ಲ ಎನ್ನುವ ಸಾಹಸಿ ನಾಯಕರನ್ನು ಕಾಣಬಹುದು. ಆದರೆ ಪ್ರಥಮ ಬಾರಿಗೆ ನನ್ನ ಎರಡೂ ಕಣ್ಣು ಹೋದರೂ ಪರವಾಗಿಲ್ಲ ಶತ್ರುವಿನ ಒಂದು ಕಣ್ಣು ಹೋದರೆ ಸಾಕು ಎನ್ನುವ ನಾಯಕನನ್ನು ನಾವು ಟ್ರಂಪ್ನಲ್ಲಿ ಕಾಣಬಹುದು. ಈತನ ಹುಚ್ಚಾಟಗಳಿಗೆ ಫೆಡರಲ್ ಕೋರ್ಟ್ ಮತ್ತು ಆತನ ಪಕ್ಷದ ಮತ್ತು ವಿರೋಧ ಪಕ್ಷದ ಜನರೇ ಬ್ರೇಕ್ ಹಾಕಬೇಕು. ಹಾಕುತ್ತಾರೆ. ಅಲ್ಲಿಯವರೆಗೆ ಜಗತ್ತಿನ ಕೋಟ್ಯಂತರ ಸಾಮಾನ್ಯ ಪ್ರಜೆಯ ಜೀವನದಲ್ಲಿ ಏರುಪೇರುಗಳನ್ನು ತಪ್ಪಿಸಲು ಸಾಧ್ಯವಿಲ್ಲ.
Advertisement