
ಸಿಎಆರ್ (ಕೈಮರಿಕ್ ಆಂಟಿಜೆನ್ ರಿಸೆಪ್ಟರ್) ಟಿ-ಸೆಲ್ ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ದೇಹದ ಸ್ವಂತ ರೋಗನಿರೋಧಕ ವ್ಯವಸ್ಥೆಯನ್ನು ಬಳಸುವ ಅತ್ಯಂತ ವಿಶೇಷವಾದ ಅತ್ಯಾಧುನಿಕ ಚಿಕಿತ್ಸೆಯಾಗಿದೆ.
ಟಿ-ಕೋಶಗಳು (ಟಿ-ಸೆಲ್ಸ್) ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಇವು ಒಂದು ರೀತಿಯ ಶ್ವೇತ ರಕ್ತಕಣಗಳಾಗಿದ್ದು, ದೇಹವನ್ನು ಸೋಂಕುಗಳು, ವೈರಸ್ಸುಗಳು ಮತ್ತು ಕ್ಯಾನ್ಸರ್ ಕೋಶಗಳಿಂದ ರಕ್ಷಿಸುತ್ತವೆ. ಆಂಟಿಜೆನ್ ಎಂದರೆ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುವ ವಸ್ತು - ಉದಾಹರಣೆಗೆ ವೈರಸ್, ಬ್ಯಾಕ್ಟೀರಿಯಾ, ಅಥವಾ ಕ್ಯಾನ್ಸರ್ ಕೋಶಗಳ ಮೇಲಿರುವ ಪ್ರೋಟೀನ್.
ಸಿಎಆರ್ ಟಿ-ಸೆಲ್ ಚಿಕಿತ್ಸೆ ವಿಶೇಷವಾಗಿ ಕೆಲವು ರಕ್ತದ ಕ್ಯಾನ್ಸರ್‌ಗಳಾದ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ಕೆಲವು ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ವಿಧಾನವಾಗಿ ಹೊರಹೊಮ್ಮಿದೆ. ಈ ಚಿಕಿತ್ಸೆಯಲ್ಲಿ ರೋಗ ನಿರೋಧಕ ಶಕ್ತಿಯ ಮುಖ್ಯ ಭಾಗವಾಗಿರುವ ಟಿ-ಕೋಶಗಳನ್ನು ಮಾರ್ಪಡಿಸಿ ಕ್ಯಾನ್ಸರ್ ಕೋಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗುರುತಿಸಿ ನಾಶಪಡಿಸುವಂತೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಕ್ಯಾನ್ಸರ್ ಕೋಶಗಳು ಕೀಮೋಥೆರಪಿ, ವಿಕಿರಣ ಚಿಕಿತ್ಸೆ ಅಥವಾ ಆಕರಕೋಶ ಕಸಿಗಳಂತಹ ಪ್ರಮಾಣಿತ ಚಿಕಿತ್ಸೆಗಳಿಗೆ ಪ್ರತಿಕ್ರಿಯಿಸದಿದ್ದಾಗ ಸಿಎಆರ್ ಟಿ-ಸೆಲ್ ಚಿಕಿತ್ಸೆಯನ್ನು ಬಳಸಲಾಗುತ್ತದೆ.
ಕ್ಯಾನ್ಸರ್ ಕೋಶಗಳು, ರೋಗನಿರೋಧಕ ವ್ಯವಸ್ಥೆಗೆ ಸಿಗದೆ ತಪ್ಪಿಸಿಕೊಳ್ಳಲು ಮರೆಮಾಚಿಕೊಳ್ಳುತ್ತವೆ. ಹೀಗಾಗಿ ಟಿ-ಕೋಶಗಳಿಗೆ ಅವು ಅಸಹಜವೆಂದು ಗುರುತಿಸುವುದು ಕಷ್ಟವಾಗುತ್ತದೆ. ಆದರೆ ಸಿಎಆರ್ ಟಿ-ಸೆಲ್ ಥೆರಪಿಯು ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಈ ಚಿಕಿತ್ಸೆಯಲ್ಲಿ, ರೋಗಿಯ ಟಿ-ಕೋಶಗಳನ್ನು ಮಾರ್ಪಡಿಸಲಾಗುತ್ತದೆ. ಇದರಿಂದ ಅವುಗಳಿಗೆ ಕೃತಕ ಗ್ರಾಹಕಗಳನ್ನು (ಸಿಎಆರ್) ಸೇರಿಸಲಾಗುತ್ತದೆ. ಈ ಗ್ರಾಹಕಗಳು ಕ್ಯಾನ್ಸರ್ ಕೋಶಗಳ ಮೇಲಿರುವ ನಿರ್ದಿಷ್ಟ ಪ್ರೋಟೀನ್‌ಗಳನ್ನು (ಆಂಟಿಜೆನ್‌ಗಳು) ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಗುರುತಿಸುವಿಕೆಯ ವ್ಯವಸ್ಥೆಯೊಂದಿಗೆ ಮಾರ್ಪಡಿಸಿದ ಟಿ-ಕೋಶಗಳು ಕ್ಯಾನ್ಸರ್ ಕೋಶಗಳನ್ನು ಹೆಚ್ಚು ನಿಖರವಾಗಿ ಮತ್ತು ಶಕ್ತಿಯುತವಾಗಿ ಗುರುತಿಸಿ ನಾಶಪಡಿಸುತ್ತವೆ.
ಈ ಚಿಕಿತ್ಸೆಯಲ್ಲಿ ಮೊದಲಿಗೆ ಲ್ಯುಕಫೆರೆಸಿಸ್ ಎಂಬ ವಿಧಾನದ ಮೂಲಕ ರೋಗಿಯ ರಕ್ತದಿಂದ ಟಿ-ಕೋಶಗಳನ್ನು ಸಂಗ್ರಹಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರೋಗಿಯ ರಕ್ತವನ್ನು ತೆಗೆದು ಒಂದು ಯಂತ್ರದ ಮೂಲಕ ಟಿ-ಕೋಶಗಳನ್ನು ಪ್ರತ್ಯೇಕಿಸಿ ಉಳಿದ ರಕ್ತವನ್ನು ಮತ್ತೆ ದೇಹಕ್ಕೆ ಸೇರಿಸಲಾಗುತ್ತದೆ. ಹೀಗೆ ಪ್ರತ್ಯೇಕಿಸಿ ಸಂಗ್ರಹಿಸಿದ ಟಿ-ಕೋಶಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ತಜ್ಞರು ಟಿ-ಕೋಶಗಳನ್ನು ಅನುವಂಶೀಯವಾಗಿ ಮಾರ್ಪಡಿಸುತ್ತಾರೆ. ವಿಜ್ಞಾನಿಗಳು ನಿಷ್ಕ್ರಿಯಗೊಳಿಸಿದ ವೈರಸ್ ಅನ್ನು ವಿತರಣಾ ಸಾಧನವಾಗಿ ಬಳಸಿ ಟಿ-ಕೋಶಗಳೊಳಗೆ ಜೀನ್‌ಅನ್ನು (ವಂಶವಾಹಿ) ಸೇರಿಸುತ್ತಾರೆ. ಈ ಜೀನ್ ಸಿಎಆರ್ ಗ್ರಾಹಕಗಳನ್ನು ತಯಾರಿಸಲು ಬೇಕಾದ ಸೂಚನೆಗಳನ್ನು ಒಳಗೊಂಡಿರುತ್ತದೆ. ಈ ಗ್ರಾಹಕಗಳು ರೋಗನಿರೋಧಕ ವ್ಯವಸ್ಥೆಗೆ ಜಿಪಿಎಸ್ ಸಾಧನದಂತೆ ಕೆಲಸ ಮಾಡಿ ಕ್ಯಾನ್ಸರ್ ಕೋಶಗಳ ಮೇಲೆ ಅಂಟಿಕೊಳ್ಳುತ್ತವೆ ಮತ್ತು ಅವುಗಳ ಮೇಲೆ ಗುರಿಯಿಡಲು ಸಹಾಯ ಮಾಡುತ್ತದೆ. ಜೀನಿನ ಮಾರ್ಪಾಡಿನ ನಂತರ ಮಾರ್ಪಡಿಸಿದ ಟಿ-ಕೋಶಗಳ ಸಂಖ್ಯೆಯನ್ನು ಪ್ರಯೋಗಾಲಯದಲ್ಲಿ ಹೆಚ್ಚಿಸಲಾಗುತ್ತದೆ (ಲಕ್ಷಾಂತರದಿಂದ ಬಿಲಿಯನ್‌ಗಟ್ಟಲೆ ಕೋಶಗಳನ್ನು ಸೃಜಿಸಲಾಗುತ್ತದೆ).
ನಂತರ ಹೊಸದಾಗಿ ತಯಾರಾದ ಈ ಸಿಎಆರ್ ಟಿ-ಕೋಶಗಳನ್ನು ರಕ್ತ ವರ್ಗಾವಣೆಯ ರೀತಿಯಲ್ಲಿಯೇ ರೋಗಿಯ ರಕ್ತನಾಳಕ್ಕೆ ಮರಳಿ ತುಂಬಿಸಲಾಗುತ್ತದೆ. ರಕ್ತದೊಳಗೆ ಸೇರಿದ ನಂತರ ಈ ಕೋಶಗಳು ಕ್ಯಾನ್ಸರ್ ಕೋಶಗಳನ್ನು ಹುಡುಕಿ ಅವುಗಳಿಗೆ ಅಂಟಿಕೊಂಡು ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ಅವುಗಳನ್ನು ನಾಶಪಡಿಸುತ್ತವೆ. ಈ ಕೋಶಗಳು ದೇಹದೊಳಗೆಯೇ ಗಮನಾರ್ಹವಾಗಿ ದ್ವಿಗುಣಗೊಂಡು ಕ್ಯಾನ್ಸರ್ ಮರುಕಳಿಸದಂತೆ ದೀರ್ಘಕಾಲದ ರಕ್ಷಣೆಯನ್ನು ಒದಗಿಸುತ್ತವೆ.
ಸಿಎಆರ್ ಟಿ-ಸೆಲ್ ಥೆರಪಿಯು ಉತ್ತಮ ಫಲಿತಾಂಶಗಳನ್ನು ನೀಡಿದರೂ ಕೆಲವು ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಅವುಗಳೆಂದರೆ -
ಸೈಟೋಕೈನ್ ಬಿಡುಗಡೆ ಸಿಂಡ್ರೋಮ್ (ರಕ್ತದಿಂದ ಟಿ-ಕೋಶಗಳನ್ನು ಯಂತ್ರದ ಮೂಲಕ ಬೇರ್ಪಡಿಸುವ ಪ್ರಕ್ರಿಯೆ): ಇದು ಅತ್ಯಂತ ಸಾಮಾನ್ಯ ಮತ್ತು ಅಪಾಯಕಾರಿ ಅಡ್ಡಪರಿಣಾಮ. ಟಿ-ಕೋಶಗಳ ವೇಗದ ಸಕ್ರಿಯತೆಯಿಂದ ಉಂಟಾಗುವ ತೀವ್ರ ರೋಗನಿರೋಧಕ ಪ್ರತಿಕ್ರಿಯೆ ಇದು. ಅಧಿಕ ಜ್ವರ, ರಕ್ತದೊತ್ತಡದಲ್ಲಿ ಇಳಿಕೆ ಮತ್ತು ಉಸಿರಾಟದ ತೊಂದರೆಗಳು ಇದರ ಲಕ್ಷಣಗಳು.
ಸೈಟೋಕೈನ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಸಣ್ಣ ಪ್ರೋಟೀನ್ ಅಣುಗಳು. ಇವು ಕೋಶಗಳ ನಡುವೆ ಸಂಕೇತಗಳನ್ನು) ಕಳುಹಿಸುವ ಸಂದೇಶವಾಹಕಗಳಾಗಿ ಕೆಲಸ ಮಾಡುತ್ತವೆ.
ನರಗಳ ಮೇಲೆ ದುಷ್ಪರಿಣಾಮ: ಇದು ಗೊಂದಲ, ಮಾತಿನ ತೊಂದರೆಗಳು ಅಥವಾ ಸೆಳೆತಗಳನ್ನು ಉಂಟುಮಾಡಬಹುದು.
ಇತರ ಅಪಾಯಗಳು: ಈ ಚಿಕಿತ್ಸೆಯಿಂದ ರಕ್ತಕಣಗಳ ಸಂಖ್ಯೆ ಕಡಿಮೆ ಆಗಬಹುದು ಮತ್ತು ಸೋಂಕುಗಳ ಅಪಾಯ ಹೆಚ್ಚಾಗಬಹುದು. ಈ ಕಾರಣಕ್ಕಾಗಿಯೇ ಈ ಚಿಕಿತ್ಸೆಯನ್ನು ಅನುಭವಿ ತಂಡ ಮತ್ತು ತೀವ್ರ ನಿಗಾ ಸೌಲಭ್ಯಗಳನ್ನು ಹೊಂದಿರುವ ವಿಶೇಷ ವೈದ್ಯಕೀಯ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತದೆ.
ಸಿಎಆರ್ ಟಿ-ಸೆಲ್ ಥೆರಪಿ ಯಾರಿಗೆ ಅಗತ್ಯ?
ಸಿಎಆರ್ ಟಿ-ಸೆಲ್ ಥೆರಪಿಯು ಇತರ ಚಿಕಿತ್ಸೆಗಳಿಗೆ ಸ್ಪಂದಿಸದ ರೋಗಿಗಳಿಗೆ ದೀರ್ಘಕಾಲಿಕವಾಗಿ ಉತ್ತಮ ಪರಿಣಾಮವನ್ನು ನೀಡುತ್ತದೆ. ಇದು ಪ್ರಸ್ತುತ ರಕ್ತದ ಕ್ಯಾನ್ಸರ್‌ಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ ಘನ ಗಡ್ಡೆಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುವ ವಿಧಾನದ ಕುರಿತು ಸಂಶೋಧನೆ ಇನ್ನೂ ನಡೆಯುತ್ತಿದೆ.
ಸಿಎಆರ್ ಟಿ-ಸೆಲ್ ಚಿಕಿತ್ಸೆಯು ಒಂದು ಅತ್ಯಂತ ದುಬಾರಿ ಮತ್ತು ಸಂಕೀರ್ಣವಾದ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ತಯಾರಿಕೆಗೆ ವಾರಗಟ್ಟಲೆ ಸಮಯ ಬೇಕಾಗಬಹುದು, ಹೀಗಾಗಿ ರೋಗಿಗಳಲ್ಲಿ ಅತಿ ವೇಗವಾಗಿ ಬೆಳೆಯುವ ಕ್ಯಾನ್ಸರ್ ಪ್ರಕರಣಗಳಲ್ಲಿ ಇದನ್ನು ಬಳಸುವುದು ಒಂದು ಸವಾಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಿಎಆರ್ ಟಿ-ಸೆಲ್ ಚಿಕಿತ್ಸೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಪುನಃ ರೂಪಿಸಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅಪಾಯಗಳು ಮತ್ತು ಮಿತಿಗಳಿದ್ದರೂ ಇದು ಅಸಾಧ್ಯವೆನಿಸಿದ ಕೆಲವು ಕ್ಯಾನ್ಸರ್‌ಗಳಿಗೆ ದೀರ್ಘಕಾಲದ ಪರಿಹಾರ ನೀಡುವ ಭರವಸೆಯನ್ನು ಮೂಡಿಸಿದೆ.
Advertisement